ಗಣಿ ಸಚಿವಾಲಯ
ಜಿಲ್ಲಾ ಖನಿಜ ಪ್ರತಿಷ್ಠಾನಗಳಿಗೆ(ಡಿಎಂಎಫ್) ಆದಾಯ ತೆರಿಗೆಯಿಂದ ವಿನಾಯಿತಿ
165 ಡಿಎಂಎಫ್‌ಗಳಿಗೆ ವಿನಾಯಿತಿ ಕಲ್ಪಿಸಿದ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ ಸಚಿವ ಶ್ರೀ ಪ್ರಲ್ಹಾದ ಜೋಶಿ; ಅಧಿಸೂಚನೆ ಹೊರಡಿಸಿದ ಹಣಕಾಸು ಸಚಿವಾಲಯ
Posted On:
11 SEP 2021 4:48PM by PIB Bengaluru
165 `ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್’ಗಳಿಗೆ (ಡಿಎಂಎಫ್) ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಧನ್ಯವಾದ ಅರ್ಪಿಸಿದ್ದಾರೆ. ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) (ಎಂಎಂಡಿಆರ್) ಕಾಯ್ದೆಯ ತಿದ್ದುಪಡಿ ಮೂಲಕ 2015ರಲ್ಲಿ ಭಾರತ ಸರಕಾರ ಗಣಿಗಾರಿಕೆಯಿಂದ ಬಾಧಿತವಾದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಸ್ಥಾಪನೆಗೆ ಅವಕಾಶ ಕಲ್ಪಿಸಿತು. ಗಣಿಗಾರಿಕೆಗೆ ಸಂಬಂಧಿಸಿದ ಕಾರ್ಯಾಚರಣೆಗಳಿಂದ ಬಾಧಿತರಾದ ವ್ಯಕ್ತಿಗಳು ಮತ್ತು ತೊಂದರೆಗೊಳಗಾದ ಪ್ರದೇಶಗಳ ಪ್ರಯೋಜನ ಹಾಗೂ ಹಿತಾಸಕ್ತಿಗಾಗಿ ರಾಜ್ಯ ಸರಕಾರ ಸೂಚಿಸಬಹುದಾದ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಜಿಲ್ಲಾ ಖನಿಜ ಪ್ರತಿಷ್ಠಾನದ ಮೂಲ ಉದ್ದೇಶವಾಗಿದೆ. ಇದುವರೆಗೆ ದೇಶದ 22 ರಾಜ್ಯಗಳ 600 ಜಿಲ್ಲೆಗಳಲ್ಲಿ ʻಡಿಎಂಎಫ್ʼ ಗಳನ್ನು ಸ್ಥಾಪಿಸಲಾಗಿದ್ದು, ಅವು ಡಿಎಂಎಫ್ ನಿಯಮಗಳನ್ನು ರೂಪಿಸಿವೆ.
ಶ್ರೀ ಜೋಶಿ ಅವರು ಕೇಂದ್ರ ಹಣಕಾಸು ಸಚಿವ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೂ ಧನ್ಯವಾದ ಅರ್ಪಿಸಿದ್ದಾರೆ. ಹಣಕಾಸು ಸಚಿವಾಲಯ (ಕಂದಾಯ ಇಲಾಖೆ) (ನೇರ ತೆರಿಗೆಗಳ ಕೇಂದ್ರೀಯ ಮಂಡಳಿ) 10.9.2021ರಂದು ಬಗ್ಗೆ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಆದಾಯ ತೆರಿಗೆ ಕಾಯ್ದೆ-1961ರ ಸೆಕ್ಷೆನ್ 10(46) ಅಡಿಯಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನಗಳಿಗೆ ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ಕಲ್ಪಿಸಲು ಅಧಿಸೂಚನೆ ಹೊರಡಿಸುವ ಸಂಬಂಧ ಗಣಿ ಸಚಿವಾಲಯವು ಹಣಕಾಸು ಸಚಿವಾಲಯದೊಂದಿಗೆ ಚರ್ಚೆ ನಡೆಸಿತ್ತು.
ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯವು ʻಡಿಎಂಎಫ್ ಟ್ರಸ್ಟ್ʼಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲು ಕ್ರಮ ಕೈಗೊಂಡಿದೆ. ಕಾಯ್ದೆಯ ಸೆಕ್ಷನ್ 10(46) ಅನ್ನು `ಹಣಕಾಸು ಕಾಯ್ದೆ 2018ʼರ ಮೂಲಕ ತಿದ್ದುಪಡಿ ಮಾಡಲಾಗಿದ್ದು, ಇದರಂತೆ ಎಲ್ಲಾ ʻಡಿಎಂಎಫ್ ಟ್ರಸ್ಟ್ʼಗಳನ್ನು 'ಪ್ರಾಧಿಕಾರ ವರ್ಗ' ಎಂದು ಸೂಚಿಸಬಹುದು. ಈ ಹಿನ್ನೆಲೆಯಲ್ಲಿ, ಹಣಕಾಸು ಸಚಿವಾಲಯ, ಕಂದಾಯ ಇಲಾಖೆ 10.9.2020ರಂದು 151 'ಜಿಲ್ಲಾ ಖನಿಜ ಫೌಂಡೇಶನ್ ಟ್ರಸ್ಟ್'ಗಳು ಮತ್ತು 10.9.2021 ರಂದು 165 ʻಡಿಎಂಎಫ್ʼ ಗಳನ್ನು ಅವುಗಳು ಗಳಿಸುವ ಆದಾಯಕ್ಕೆ ಸಂಬಂಧಿಸಿದಂತೆ 'ಪ್ರಾಧಿಕಾರ ವರ್ಗ' ಎಂದು ಸೂಚಿಸಿ ಅಧಿಸೂಚನೆ ಹೊರಡಿಸಿದೆ. ಆದ್ದರಿಂದ ʻಎಂಎಂಡಿಆರ್ʼ ಕಾಯ್ದೆಯ ಪ್ರಕಾರ ಡಿಎಂಎಫ್‌ಗೆ ಗುತ್ತಿಗೆದಾರರು ನೀಡಿದ ಕೊಡುಗೆಗಳು, ಗಣಿಗಾರರು ಡಿಎಂಎಫ್ ವಂತಿಗೆಯನ್ನು ತಡವಾಗಿ ಪಾವತಿಸುವುದರ ಮೇಲೆ ವಿಧಿಸುವ ಬಡ್ಡಿ ಮತ್ತು ಇತರ ನಿರ್ದಿಷ್ಟ ಸಂಗ್ರಹಗಳ ಮೂಲಕ ಡಿಎಂಎಫ್‌ಗೆ ಬರುವ ಆದಾಯಕ್ಕೆ ಸಂಬಂಧಿಸಿದಂತೆ ಒಟ್ಟು 316 ಜಿಲ್ಲಾ ಖನಿಜ ಫೌಂಡೇಶನ್ ಟ್ರಸ್ಟ್ಗಳು 'ಪ್ರಾಧಿಕಾರದ ವರ್ಗ' ಎಂದು ಪರಿಗಣಿತವಾಗಿವೆ.
***
(Release ID: 1754160)