ಕಲ್ಲಿದ್ದಲು ಸಚಿವಾಲಯ

ಕಲ್ಲಿದ್ದಲು ಸಚಿವಾಲಯದ `ನಾರ್ದರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್’(ಎನ್‌ಸಿಎಲ್) ಸಂಸ್ಥೆಯು ಆಜಾ಼ದಿ ಕಾ ಅಮೃತ್ ಮಹೋತ್ಸವ ಆಚರಣೆಯ ಭಾಗವಾಗಿ ಸಿಂಗ್ರೌಲಿ ಜಿಲ್ಲೆಯಲ್ಲಿ ಸಾವಿರಾರು ಗ್ರಾಮಸ್ಥರ ಪ್ರಯೋಜನಕ್ಕಾಗಿ 2.25 ಕೋಟಿ ರೂ.ಗಳ ʻಸಿಎಸ್ಆರ್ʼ ಉಪಕ್ರಮಗಳಿಗೆ ಚಾಲನೆ ನೀಡಿದೆ

Posted On: 05 SEP 2021 1:40PM by PIB Bengaluru

ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಅಂಗಸಂಸ್ಥೆ  ʻನಾರ್ದರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ʼ (ಎನ್‌ಸಿಎಲ್) ವಿವಿಧ ʻಸಿಎಸ್ಆರ್ʼ ಉಪಕ್ರಮಗಳು ಮತ್ತು ಯೋಜನೆಗಳನ್ನು ಆರಂಭಿಸಿದೆ. ಸಿಂಗ್ರೌಲಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಗ್ರಾಮದಲ್ಲಿ ಮೂಲಸೌಕರ್ಯ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಮಹಿಳಾ ಸಬಲೀಕರಣ, ಉದ್ಯೋಗ ಸೃಷ್ಟಿ, ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರಿನ ಪೂರೈಕೆ ಉಪಕ್ರಮಗಳಿಗೆ ಒಟ್ಟು 2.25 ಕೋಟಿ ರೂ.ಗಳ ವೆಚ್ಚದ ಉಪಕ್ರಮಗಳಲ್ಲಿ ಗಮನ ಕೇಂದ್ರೀಕರಿಸಲಾಗಿದೆ. ಆಜಾ಼ದಿ ಕಾ ಅಮೃತ್ ಮಹೋತ್ಸವ (AKAM) ಆಚರಣೆಯ ಭಾಗವಾಗಿ ಜನಪರ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸತ್ ಸದಸ್ಯೆ ಶ್ರೀ ರಿತಿ ಪಾಠಕ್ ಅವರು ಸಿಂಗ್ರೌಲಿ ಜಿಲ್ಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಜೀವನೋಪಾಯ ಸೃಷ್ಟಿ ಮತ್ತು ಒಟ್ಟಾರೆ ಸಮುದಾಯ ಅಭಿವೃದ್ಧಿಗೆ `ಎನ್‌ಸಿಎಲ್ʼ ಪ್ರಯತ್ನಗಳನ್ನು ಶ್ಲಾಘಿಸಿದರು. ಆಜಾ಼ದಿ ಕಾ ಅಮೃತ ಮಹೋತ್ಸವ ಆಚರಣೆ ಭಾಗವಾಗಿ ʻಎನ್‌ಸಿಎಲ್-ಸಿಎಸ್ಆರ್ ಅಡಿಯಲ್ಲಿ ಸೆಮುಯಾರ್ ಪಂಚಾಯನ್‌ನಲ್ಲಿ 1.6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಹೊಸ ರಸ್ತೆಯನ್ನು ಉದ್ಘಾಟಿಸಲಾಯಿತು. ಪಾಲಿ, ಸೆಮುರ್ ಮತ್ತು ಹತ್ತಿರದ ಸ್ಥಳಗಳಲ್ಲಿ ವಾಸಿಸುವ ಸುಮಾರು ಹತ್ತು ಸಾವಿರ ಗ್ರಾಮಸ್ಥರಿಗೆ ಇದರಿಂದ ಅನುಕೂಲವಾಗಲಿದೆ.

ಸ್ಥಳೀಯ ಮಹಿಳೆಯರು/ಬಾಲಕಿಯರನ್ನು ಮತ್ತಷ್ಟು ಸಬಲಗೊಳಿಸಲು ಹಾಗು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು, 27 ಮಹಿಳೆಯರು/ ಬಾಲಕಿಯರಿಗೆ ಹೊಲಿಗೆ ಯಂತ್ರಗಳು ಮತ್ತು ಕೌಶಲ್ಯ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಜೊತೆಗೆ ʻಎನ್‌ಸಿಎಲ್ʼ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಅವರಿಗೆ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲಾಯಿತು.

ಕುಗ್ರಾಮಗಳಲ್ಲಿ ಆಧುನಿಕ ಶಿಕ್ಷಣ ಸೌಕರ್ಯಗಳನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಹತ್ತಿರದ ಸರಕಾರಿ ಶಾಲೆಗಳಿಗೆ ಎಂಟು ಸೆಟ್ ಸ್ಮಾರ್ಟ್ ಟಿವಿ ಮತ್ತು ಕಂಪ್ಯೂಟರ್‌ಗಳನ್ನು ವಿತರಿಸಲಾಯಿತು. ನಾಲ್ಕು ಸರಕಾರಿ ಶಾಲೆಗಳಿಗೆ ಸುಧಾರಿತ ಪ್ರಯೋಗಾಲಯ ಉಪಕರಣಗಳನ್ನು ಸಹ ವಿತರಿಸಲಾಯಿತು. ಇದರಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಪ್ರಾಯೋಗಿಕ ಜ್ಞಾನವನ್ನು ಪಡೆಯಲು ಸಹಾಯವಾಗಿದೆಇದಲ್ಲದೆ, ಸುತ್ತಮುತ್ತಲಿನ ಪ್ರದೇಶಗಳ 1000ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಸುರಕ್ಷಿತ ಕುಡಿಯುವ ನೀರನ್ನು ಒದಗಿಸಲು ʻಆರ್‌ಓʼ ಯಂತ್ರಗಳೊಂದಿಗೆ ನಾಲ್ಕು ವಾಟರ್ ಕೂಲರ್‌ಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದ ಸಮಯದಲ್ಲಿ, ಸಿಂಗ್ರೌಲಿ ಜಿಲ್ಲೆಯ ಹತ್ತು ಪಂಚಾಯಿತಿಗಳಲ್ಲಿ ಇರುವ 43 ಅಂಗನವಾಡಿಗಳ ಮಕ್ಕಳಿಗಾಗಿ ನೆಲಹಾಸುಗಳು, ಪ್ಲೇ ಸ್ಕೂಲ್ ಸ್ಲೈಡ್‌ಗಳು, ಪಾತ್ರೆಗಳನ್ನು ಸಹ ಹಸ್ತಾಂತರಿಸಲಾಯಿತು.

ಸ್ವಚ್ಛ ಭಾರತ ಅಭಿಯಾನಕ್ಕೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಕಸ ಸಂಗ್ರಹಿಸುವ ವಾಹನಕ್ಕೂ ಹಸಿರು ನಿಶಾನೆ ತೋರಿಸಿ ನೌಧಿಯಾ ಪಂಚಾಯತ್ ಪ್ರತಿನಿಧಿಗೆ ಹಸ್ತಾಂತರಿಸಲಾಯಿತು. ವಾಹನವು ಮನೆಮನೆ ತ್ಯಾಜ್ಯ ಸಂಗ್ರಹದ ಮೂಲಕ ಐದು ಸಾವಿರಕ್ಕೂ ಹೆಚ್ಚು ಸ್ಥಳೀಯ ಜನರಿಗೆ ಆರೋಗ್ಯಕರ ಜೀವನ ವಾತಾವರಣ ಖಾತರಿಪಡಿಸುತ್ತದೆ.

ಸಿಂಗ್ರೌಲಿ ಜಿಲ್ಲೆಯ ಭೌದಾರ್ ಗ್ರಾಮದಲ್ಲಿ ʻಎನ್‌ಸಿಎಲ್-ಸಿಎಸ್ಆರ್ʼ ಅಡಿಯಲ್ಲಿ ನಿರ್ಮಿಸಲಾದ ಶಾಲೆಯ ಕಾಂಪೌಂಡ್‌ ಉದ್ಘಾಟನೆ ಮತ್ತು ʻಎನ್‌ಸಿಎಲ್ʼ ಸ್ಥಾಪಿಸಿದ ಖಾದಿ ಮತ್ತು ಕೈಮಗ್ಗ ಕೇಂದ್ರಕ್ಕೆ ಭೇಟಿ, ಅಲ್ಲಿ ಸುಮಾರು  30 ಮಹಿಳೆಯರಿಗೆ ತರಬೇತಿ ಇವು ಕಾರ್ಯಕ್ರಮದ ಇತರ ಮುಖ್ಯಾಂಶಗಳಾಗಿವೆ.

ಸಿಂಗ್ರೌಲಿ ಮೂಲದ ʻಎನ್‌ಸಿಎಲ್ʼ, ಕಲ್ಲಿದ್ದಲು ಸಚಿವಾಲಯದ ಅಡಿಯ ಮಿನಿರತ್ನ ಕಂಪನಿಯಾಗಿದ್ದು, 10 ಯಾಂತ್ರೀಕೃತ ಓಪನ್‌ ಕ್ಯಾಸ್ಟ್‌ ಕಲ್ಲಿದ್ದಲು ಗಣಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ದೇಶದ ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇಕಡಾ 15ರಷ್ಟು ಪಾಲು ಹೊಂದಿದೆ. ಕಂಪನಿಯು ಕಳೆದ ಆರ್ಥಿಕ ವರ್ಷದಲ್ಲಿ ದೇಶಕ್ಕೆ 115 ದಶಲಕ್ಷ ಟನ್ ಕಲ್ಲಿದ್ದಲನ್ನು ಕೊಡುಗೆಯಾಗಿ ನೀಡಿದೆ.

***



(Release ID: 1752316) Visitor Counter : 301