ಕಲ್ಲಿದ್ದಲು ಸಚಿವಾಲಯ
azadi ka amrit mahotsav

ಕಲ್ಲಿದ್ದಲು ಸಂಪನ್ಮೂಲಗಳ ಮೌಲ್ಯಮಾಪನ ಸುಧಾರಣೆಗಾಗಿ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಹೊಸ ತಂತ್ರಾಂಶ ಪ್ರಾರಂಭಿಸಿದೆ

Posted On: 04 SEP 2021 5:03PM by PIB Bengaluru

ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ʻಕೋಲ್ ಇಂಡಿಯಾ ಲಿಮಿಟೆಡ್ʼ (ಸಿಐಎಲ್) ಸಂಸ್ಥೆಯು "ಸ್ಪೆಕ್ಟ್ರಲ್ ಎನ್‌ಹ್ಯಾನ್ಸ್‌ಮೆಂಟ್‌" (ಎಸ್‌ಪಿಇ) ಎಂಬ ಹೊಸ ತಂತ್ರಾಂಶವನ್ನು ಬಿಡುಗಡೆ ಮಾಡಿದೆ. ಕಲ್ಲಿದ್ದಲು ಶೋಧ ಪ್ರಕ್ರಿಯೆಯಲ್ಲಿ ಭೂಮಿಯ ಹೊರ ತೊಗಟೆಯ ಅಡಿಯಲ್ಲಿ ತೆಳುವಾದ ಕಲ್ಲಿದ್ದಲಿನ ಪದರಗಳನ್ನು ಗುರುತಿಸಲು ಮತ್ತು ಭೂಕಂಪನದ ಸಮೀಕ್ಷೆಗಳನ್ನು ಬಳಸಿಕೊಂಡು ಕಲ್ಲಿದ್ದಲು ಸಂಪನ್ಮೂಲಗಳ ಮೌಲ್ಯಮಾಪನವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕಲ್ಲಿದ್ದಲು ಸಂಪನ್ಮೂಲ ಶೋಧ ಕಾರ್ಯದಲ್ಲಿ ಪ್ರಸ್ತುತ ಭೂಕಂಪ ಸಮೀಕ್ಷೆಯ ತಂತ್ರಗಳು ಭೂಮಿಯ ಅಡಿಯಲ್ಲಿರುವ ತೆಳುವಾದ ಕಲ್ಲಿದ್ದಲು ಪದರಗಳನ್ನು ಗುರುತಿಸುವಲ್ಲಿ ಮಿತಿಗಳನ್ನು ಹೊಂದಿವೆ. ಹೀಗಾಗಿ ʻಎಸ್‌ಪಿಇʼ ತಂತ್ರಾಂಶದ ಬಿಡುಗಡೆಯು ಮಹತ್ವ ಪಡೆದಿದೆ. ಈ ಹೊಸ ತಂತ್ರಾಂಶವು ಭೂಕಂಪನ ಸಂಕೇತಗಳ ಸ್ಪಷ್ಟತೆಯನ್ನು ಹೆಚ್ಚಿಸುವ ಮೂಲಕ ತೆಳುವಾದ ಕಲ್ಲಿದ್ದಲಿನ ಪದರಗಳ ಚಿತ್ರಣವನ್ನು ಪಡೆಯಲು ಸಹಾಯ ಮಾಡುತ್ತದೆ.

ʻಸಿಐಎಲ್ʼನ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಅಂಗವಾದ ʻಕೇಂದ್ರ ಗಣಿ ಯೋಜನೆ ಮತ್ತು ವಿನ್ಯಾಸ ಸಂಸ್ಥೆʼಯು(ಸಿಎಂಪಿಡಿಐ) ʻಗುಜರಾತ್‌ ಎನರ್ಜಿ ರಿಸರ್ಚ್ ಅಂಡ್ ಮ್ಯಾನೇಜ್ ಮೆಂಟ್ ಇನ್ಸ್‌ಟಿಟ್ಯೂಟ್ʼ(ಜರ್ಮಿ) ಸಹಯೋಗದೊಂದಿಗೆ ಈ ರೀತಿಯ ವಿನೂತನ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು,  ತನ್ನ ಕೃತಿಸ್ವಾಮ್ಯ ರಕ್ಷಣೆಗಾಗಿ ಕಂಪನಿಯು ಅರ್ಜಿ ಸಲ್ಲಿಸಲಿದೆ.

ಈ 'ಮೇಡ್ ಇನ್ ಇಂಡಿಯಾ'  ತಂತ್ರಾಂಶವು ಕಲ್ಲಿದ್ದಲು ಶೋಧದ ಸಮಯ ಮತ್ತು ವೆಚ್ಚದ ಉಳಿತಾಯಕ್ಕೆ ಸಹಾಯ ಮಾಡುತ್ತದೆ ಮತ್ತು ಕಲ್ಲಿದ್ದಲು ಉತ್ಪಾದನೆಯಲ್ಲಿ ʻಆತ್ಮನಿರ್ಭರ್ ಭಾರತ್ʼ ಧ್ಯೇಯದ ಸಾಕಾರಕ್ಕೆ ನೆರವಾಗುತ್ತದೆ.

ʻಸಿಐಎಲ್ʼ ಸಿಎಂಡಿ ಶ್ರೀ ಪ್ರಮೋದ್‌ ಅಗರವಾಲ್ ಅವರು ʻಸಿಐಎಲ್‌ʼನ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿʼಯ ಭಾಗವಾಗಿರುವ ಹಿರಿಯ ನಿರ್ದೇಶಕರು ಮತ್ತು ಹೆಸರಾಂತ ಸಂಸ್ಥೆಗಳ ತಜ್ಞ ಸದಸ್ಯರ ಸಮ್ಮುಖದಲ್ಲಿ ತಂತ್ರಾಂಶ ಬಿಡುಗಡೆಗೊಳಿಸಿದರು.

ಭಾರತದ ಕಲ್ಲಿದ್ದಲು ಉತ್ಪಾದನೆಯಲ್ಲಿ ಸಿಐಎಲ್ ಶೇಕಡಾ 80ರಷ್ಟು ಪಾಲು ಹೊಂದಿದೆ.

***


(Release ID: 1752072) Visitor Counter : 322


Read this release in: English , Urdu , Hindi , Punjabi