ಸಂಸ್ಕೃತಿ ಸಚಿವಾಲಯ
ಶ್ರೀಲ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರ 125 ನೇ ಜಯಂತಿಯ ಅಂಗವಾಗಿ ವಿಶೇಷ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದ ಪ್ರಧಾನಿ
ಶ್ರೀಲ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರು ಭಾರತದ ಮಹಾನ್ ಭಕ್ತರಾಗಿದ್ದರು: ಪ್ರಧಾನಿ
ಜಗತ್ತು ನಮ್ಮ ಯೋಗ ಮತ್ತು ಆಯುರ್ವೇದದ ಜ್ಞಾನದಿಂದ ಪ್ರಯೋಜನ ಪಡೆಯಬೇಕೆಂಬುದು ನಮ್ಮ ಸಂಕಲ್ಪವಾಗಿದೆ: ಪ್ರಧಾನಿ
ಭಕ್ತಿ ಯುಗದ ಸಾಮಾಜಿಕ ಕ್ರಾಂತಿಯನ್ನು ಬಿಟ್ಟು ಭಾರತದ ಸ್ಥಿತಿ ಮತ್ತು ರೂಪವನ್ನು ಕಲ್ಪಿಸಿಕೊಳ್ಳುವುದೂ ಕಷ್ಟ: ಪ್ರಧಾನಿ
ಶ್ರೀಲ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರು ಭಕ್ತಿ ವೇದಾಂತವನ್ನು ಜಾಗತಿಕ ಪ್ರಜ್ಞೆಯೊಂದಿಗೆ ಬೆಸೆದರು: ಪ್ರಧಾನಿ
Posted On:
01 SEP 2021 6:52PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀಲ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರ 125 ನೇ ಜಯಂತಿಯ ಅಂಗವಾಗಿ ವಿಶೇಷ ಸ್ಮರಣಾರ್ಥ ನಾಣ್ಯವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದರು. ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿಯವರು, ಶ್ರೀಲ ಪ್ರಭುಪಾದ ಅವರ 125 ನೇ ಜಯಂತಿ ಮತ್ತು ನಿನ್ನೆಯ ಜನ್ಮಾಷ್ಟಮಿ ಸಂತೋಷ ತರುವ ಕಾಕತಾಳೀಯವಾಗಿದೆ, 'ಇದು ಸಂತೋಷ ಮತ್ತು ಸಂತೃಪ್ತಿಯನ್ನು ಒಟ್ಟಿಗೇ ಸಾಧಿಸಿದಂತೆ ಎಂದರು. ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಈ ಆಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು. ಪ್ರಪಂಚದಾದ್ಯಂತ ಇರುವ ಶ್ರೀಲ ಪ್ರಭುಪಾದ ಸ್ವಾಮಿಯವರ ಲಕ್ಷಾಂತರ ಅನುಯಾಯಿಗಳು ಮತ್ತು ಲಕ್ಷಾಂತರ ಕೃಷ್ಣ ಭಕ್ತರು ಇಂದು ಈ ಅನುಭವ ಪಡೆಯುತ್ತಿದ್ದಾರೆ ' ಎಂದು ಪ್ರಧಾನಿ ಹೇಳಿದರು.
ಶ್ರೀಕೃಷ್ಣನ ಮೇಲೆ ಪ್ರಭುಪಾದ ಸ್ವಾಮಿಯವರಿಗಿದ್ದ ಅಲೌಕಿಕ ಭಕ್ತಿಯ ಬಗ್ಗೆ ಪ್ರಧಾನಿಯವರು ಗಮನ ಸೆಳೆದರು ಮತ್ತು ಅವರು ಭಾರತದ ಮಹಾನ್ ಭಕ್ತರಾಗಿದ್ದರು ಎಂದು ಹೇಳಿದರು. ಅವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅಸಹಕಾರ ಚಳುವಳಿಗೆ ಬೆಂಬಲ ನೀಡಲು ಅವರು ಸ್ಕಾಟಿಷ್ ಕಾಲೇಜಿನಿಂದ ಡಿಪ್ಲೊಮಾ ಪದವಿ ಪಡೆಯಲು ನಿರಾಕರಿಸಿದರು ಎಂದು ಪ್ರಧಾನಿ ಹೇಳಿದರು.
ಯೋಗದ ಬಗೆಗಿನ ನಮ್ಮ ಜ್ಞಾನವು ಪ್ರಪಂಚದಾದ್ಯಂತ ಪಸರಿಸಿದೆ ಮತ್ತು ಭಾರತದ ಸುಸ್ಥಿರ ಜೀವನಶೈಲಿ, ಆಯುರ್ವೇದದಂತಹ ವಿಜ್ಞಾನವು ಪ್ರಪಂಚದಾದ್ಯಂತ ಹರಡಿದೆ ಎಂದು ಪ್ರಧಾನಮಂತ್ರಿ ಹೇಳಿದರು.ಇದರಿಂದ ಇಡೀ ಜಗತ್ತು ಪ್ರಯೋಜನ ಪಡೆಯಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ ಎಂದು ಶ್ರೀ ಮೋದಿ ಹೇಳಿದರು. ನಾವು ಬೇರೆ ಯಾವುದೇ ದೇಶಕ್ಕೆ ಹೋದರೂ ಅಲ್ಲಿ ಜನರು 'ಹರೇ ಕೃಷ್ಣ' ಎಂದು ಹೇಳಿದಾಗ ನಾವೆಲ್ಲ ಒಂದು ಎಂಬ ಹೆಮ್ಮೆಯ ಭಾವನೆ ಬರುತ್ತದೆ ಎಂದು ಪ್ರಧಾನಿ ಹೇಳಿದರು. ಮೇಕ್ ಇನ್ ಇಂಡಿಯಾ ಉತ್ಪನ್ನಗಳಿಗೆ ಅದೇ ಪ್ರೀತಿ ಪಡೆದಾಗಲೂ ಅದೇ ಭಾವನೆ ಇರುತ್ತದೆ. ಈ ನಿಟ್ಟಿನಲ್ಲಿ ನಾವು ಇಸ್ಕಾನ್ ನಿಂದ ಸಾಕಷ್ಟು ಕಲಿಯಬಹುದು ಎಂದು ಪ್ರಧಾನಿ ಹೇಳಿದರು.
ಗುಲಾಮಗಿರಿಯ ಕಾಲದಲ್ಲಿ ಭಕ್ತಿ ಪಂಥವು ಭಾರತದ ಚೈತನ್ಯವನ್ನು ಜೀವಂತವಾಗಿರಿಸಿತು ಎಂದು ಪ್ರಧಾನಿ ಹೇಳಿದರು. ಭಕ್ತಿ ಯುಗದ ಸಾಮಾಜಿಕ ಕ್ರಾಂತಿ ಇಲ್ಲದಿದ್ದರೆ ಭಾರತದ ಸ್ಥಿತಿ ಮತ್ತು ರೂಪವನ್ನು ಕಲ್ಪಿಸಿಕೊಳ್ಳುವುದೂ ಕಷ್ಟವಾಗುತ್ತಿತ್ತು ಎಂದು ಇಂದು ವಿದ್ವಾಂಸರು ಹೇಳುತ್ತಾರೆ ಎಂದು ಅವರು ಹೇಳಿದರು. ಭಕ್ತಿಯು ನಂಬಿಕೆಯ ತಾರತಮ್ಯ, ಸಾಮಾಜಿಕ ಮೇಲು ಕೀಳುಗಳನ್ನು ತೆಗೆದುಹಾಕುವ ಮೂಲಕ ಮನುಷ್ಯನನ್ನು ದೇವರೊಂದಿಗೆ ಸಂಪರ್ಕಿಸಿತು. ಆ ಕಷ್ಟದ ಸಮಯದಲ್ಲೂ, ಚೈತನ್ಯ ಮಹಾಪ್ರಭುಗಳಂತಹ ಸಂತರು, ಸಮಾಜವನ್ನು ಭಕ್ತಿಯ ಮನೋಭಾವದಿಂದ ಕಟ್ಟಿಕೊಟ್ಟು 'ನಂಬಿಕೆಯಿಂದ ವಿಶ್ವಾಸ' ಎಂಬ ಮಂತ್ರವನ್ನು ನೀಡಿದರು ಎಮದು ಪ್ರಧಾನಿ ಹೇಳಿದರು.
ಒಂದು ಕಾಲದಲ್ಲಿ ಸ್ವಾಮಿ ವಿವೇಕಾನಂದರಂತಹ ಸಂತರು ವೇದಾಂತವನ್ನು ಪಶ್ಚಿಮಕ್ಕೆ ತಲುಪಿಸಿದರು, ಶ್ರೀಲ ಪ್ರಭುಪಾದರು ಮತ್ತು ಇಸ್ಕಾನ್ ಭಕ್ತಿ ಯೋಗವನ್ನು ಜಗತ್ತಿನಾದ್ಯಂತ ತಲುಪಿಸುವ ಮಹತ್ಕಾರ್ಯವನ್ನು ಕೈಗೊಂಡರು. ಪ್ರಭುಪಾದರು ಜಾಗತಿಕ ಪ್ರಜ್ಞೆಯೊಂದಿಗೆ ಭಕ್ತಿ ವೇದಾಂತವನ್ನು ಬೆಸೆದರು ಎಂದು ಪ್ರಧಾನಿ ಹೇಳಿದರು.
ಇಂದು ವಿಶ್ವದ ವಿವಿಧ ದೇಶಗಳಲ್ಲಿ ನೂರಾರು ಇಸ್ಕಾನ್ ದೇವಾಲಯಗಳಿವೆ ಮತ್ತು ಅನೇಕ ಗುರುಕುಲಗಳು ಭಾರತೀಯ ಸಂಸ್ಕೃತಿಯನ್ನು ಜೀವಂತವಾಗಿರಿಸಿವೆ ಎಂದು ಪ್ರಧಾನಿ ಹೇಳಿದರು. ಭಾರತಕ್ಕೆ ನಂಬಿಕೆ ಎಂದರೆ ಹುರುಪು, ಉತ್ಸಾಹ, ಮತ್ತು ಮಾನವೀಯತೆಯಲ್ಲಿ ನಂಬಿಕೆ ಎಂದು ಇಸ್ಕಾನ್ ಜಗತ್ತಿಗೆ ತಿಳಿಸಿತು ಎಂದರು. ಕಚ್ ಭೂಕಂಪ, ಉತ್ತರಾಖಂಡ ದುರಂತ, ಒಡಿಶಾ ಮತ್ತು ಬಂಗಾಳದಲ್ಲಿ ಚಂಡಮಾರುತದ ಸಮಯದಲ್ಲಿ ಇಸ್ಕಾನ್ ಸಲ್ಲಿಸಿದ ಸೇವಾ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಿಯವರು, ಸಾಂಕ್ರಾಮಿಕ ಸಮಯದಲ್ಲಿ ಇಸ್ಕಾನ್‌ನ ಕೈಗೊಂಡ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
***
(Release ID: 1751196)
Visitor Counter : 212