ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಬೆಂಗಳೂರು ಮೆಟ್ರೊ ಎರಡನೇ ಹಂತದ ಪಶ್ಚಿಮ ವಿಸ್ತರಿತ ಮಾರ್ಗ ಉದ್ಘಾಟಿಸಿದ ಶ್ರೀ ಹರ್ದೀಪ್ ಸಿಂಗ್ ಪುರಿ
ಪ್ರಧಾನಿ ಅವರ ದೂರದೃಷ್ಟಿಯ ನಾಯಕತ್ವದಡಿ ಕಳೆದ 7 ವರ್ಷಗಳಲ್ಲಿ ನಗರೀಕರಣದ ನಮ್ಮ ಮನೋಭಾವದಲ್ಲಿ ಅಮೂಲಾಗ್ರ ಬದಲಾವಣೆ: ಕೇಂದ್ರ ಸಚಿವರು
Posted On:
29 AUG 2021 3:39PM by PIB Bengaluru
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ಸಮಕ್ಷಮದಲ್ಲಿ ಇಂದು ಮೈಸೂರು ರಸ್ತೆಯಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ 7.5ಕಿಲೋಮೀಟರ್ ಉದ್ದದ ಬೆಂಗಳೂರಿನ ನಮ್ಮ ಮೆಟ್ರೊದ ಎರಡನೇ ಹಂತದ ಪಶ್ಚಿಮ ವಿಸ್ತರಿತ ಮೆಟ್ರೊ ಮಾರ್ಗವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವರು, “ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಅನ್ವಯಿಕ ವಿಜ್ಞಾನ ಸಂಶೋಧನೆಯಲ್ಲಿ ಪ್ರಬಲವಾಗಿರುವ ಬೆಂಗಳೂರು ಇಡೀ ದೇಶದಲ್ಲಿ ಒಂದು ಪ್ರಮುಖ ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿದೆ. ದೇಶದ ಒಟ್ಟಾರೆ ಐಟಿ ರಫ್ತು ಪ್ರಮಾಣದಲ್ಲಿ ನಗರದ ಪಾಲು ಸುಮಾರು ಶೇ.38ರಷ್ಟಿದೆ. ಇಂದು ವಿಸ್ತರಿತ ಪಶ್ಚಿಮ ಮೆಟ್ರೊ ಮಾರ್ಗ ಉದ್ಘಾಟನೆ, ನಗರದಲ್ಲಿ ತ್ವರಿತ ಸಂಚಾರ ಮತ್ತು ಸ್ಮಾರ್ಟ್ ಸಾರಿಗೆ ಆಯ್ಕೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ’’ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದಷ್ಠಿಯ ನಾಯಕತ್ವದಲ್ಲಿ ನಗರೀಕರಣ ಕುರಿತ ನಮ್ಮ ಮನೋಭಾವದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ ಮತ್ತು ಸರ್ಕಾರ ತನ್ನ ನಾಗರಿಕರಿಗೆ ವಿಶ್ವದರ್ಜೆಯ ಸೌಲಭ್ಯ ಒದಗಿಸಲು ದೃಢ ನಿಶ್ಚಯ ಮಾಡಿದೆ ಎಂದು ಹೇಳಿದರು.
ದೇಶದಲ್ಲಿ ಮೆಟ್ರೊ ರೈಲು ಯೋಜನೆಗಳ ಪ್ರಗತಿಯನ್ನು ವಿವರಿಸಿದ ಶ್ರೀ ಪುರಿ ಅವರು ಬೆಂಗಳೂರು ಮೆಟ್ರೊ ಕಾರ್ಯಾಚರಣೆ ಸಮಯಪಾಲನೆ ಶೇ.99.8ರಷ್ಟು ಇದ್ದು, ಇದು ಇಡೀ ದೇಶದ ಎಲ್ಲ ಮೆಟ್ರೊ ಜಾಲದಲ್ಲಿಯೇ ಅತ್ಯುತ್ತಮವಾಗಿದೆ. ದೆಹಲಿಯಲ್ಲಿ 2002ರಲ್ಲಿ ಮೊದಲ ಮೆಟ್ರೊ ಉದ್ಘಾಟನೆಯ ನಂತರ ಇಂದು 18 ವಿವಿಧ ನಗರಗಳಲ್ಲಿ 730 ಕಿ.ಮೀ. ಮೆಟ್ರೊ ಮಾರ್ಗ ಕಾರ್ಯಾರಂಭ ಮಾಡಿದೆ. ನಾನಾ ನಗರಗಳಲ್ಲಿ ಸುಮಾರು 1,049 ಕಿ.ಮೀ. ಉದ್ದದ ಮೆಟ್ರೊ ರೈಲು/ಆರ್ ಆರ್ ಟಿಎಸ್ ಯೋಜನೆಗಳು ನಿರ್ಮಾಣ ಹಂತದಲ್ಲಿವೆ” ಎಂದು ಹೇಳಿದರು.
ಎಲ್ಲ ಸಹಕಾರಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ ಕರ್ನಾಟಕದ ಮುಖ್ಯಮಂತ್ರಿ “ಕೇಂದ್ರ ಸರ್ಕಾರದ ಬೆಂಬಲ ಮತ್ತು ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರ ನಂಬಿಕೆ ಇರಿಸಿರುವುದರಿಂದ ಹೊಸ ನಗರ ಕೇಂದ್ರಗಳ ನಿರ್ಮಾಣದಲ್ಲಿ ಎದುರಾಗುವ ಸವಾಲುಗಳನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಲಿದೆ. 'ನವಭಾರತಕ್ಕಾಗಿ ನವ ಕರ್ನಾಟಕ', ನವಭಾರತ ನಿರ್ಮಾಣದ ಕನಸು ಸಾಕಾರಕ್ಕೆ ನೆರವಾಗಲಿದೆ” ಎಂದು ಹೇಳಿದ್ದಾರೆ.
ಉದ್ಗಾಟನೆಗೊಂಡ ಮೆಟ್ರೊ ಮಾರ್ಗದ ವಿವರ
- ಪಶ್ಚಿಮ ದಿಕ್ಕಿನಲ್ಲಿ 7.53 ಕಿ.ಮೀ. ಉದ್ದದ ಎತ್ತರಿಸಿದ ಮೆಟ್ರೊ ವಿಸ್ತರಣೆಯಿಂದಾಗಿ ಒಟ್ಟಾರೆ ನೇರಳೆ ಮಾರ್ಗ(ಪೂರ್ವದಿಂದ ಪಶ್ಚಿಮ)ದಲ್ಲಿ ಸದ್ಯ 18.1 ಕಿ.ಮೀ. ಕಾರ್ಯಾರಂಭ ಮಾಡಿದಂತಾಗಿದೆ. ಪಶ್ಚಿಮಕ್ಕೆ ವಿಸ್ತರಿಸಿದ ಈ ಮಾರ್ಗದಲ್ಲಿ ಮೈಸೂರು ರಸ್ತೆ ಮೆಟ್ರೊ ನಿಲ್ದಾಣದಿಂದ ಆರು ಹೊಸ ನಿಲ್ದಾಣಗಳು ಕಾರ್ಯಾರಂಭ ಮಾಡಿವೆ. ಅವುಗಳೆಂದರೆ ನಾಯಂಡನಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ಟರ್ಮಿನಲ್ ಮತ್ತು ಕೆಂಗೇರಿ ಮೆಟ್ರೊ ನಿಲ್ದಾಣ.
- ಮೈಸೂರು ರಸ್ತೆ ಮೆಟ್ರೊ ನಿಲ್ದಾಣದಿಂದ ಮುಂದೆ ವಿಸ್ತರಿಸಲಾದ ಮಾರ್ಗದಲ್ಲಿ ಮೆಟ್ರೊ ನಿಲ್ದಾಣಗಳು ಸದ್ಯ ಕಾರ್ಯಾಚರಣೆಯಲ್ಲಿವೆ. ಈ ನೇರಳೆ ಮಾರ್ಗದ (ಪೂರ್ವ-ಪಶ್ಚಿಮ) ಮೆಟ್ರೊ ಕಾರಿಡಾರ್ ಒಟ್ಟು 25.63 ಕಿ.ಮೀ. ಉದ್ದವಿದ್ದು, 23 ನಿಲ್ದಾಣಗಳನ್ನು ಹೊಂದಿದೆ. ಈ ಹೊಸ ಮಾರ್ಗ ನಿರ್ಮಾಣ ಕಾಮಗಾರಿ 2016ರ ಫೆಬ್ರವರಿಯಲ್ಲಿ ಆರಂಭವಾಗಿತ್ತು. ನಾಯಂಡನಹಳ್ಳಿ, ರಾಜರಾಜೇಶ್ವರಿ ನಗರ ಮತ್ತು ಜ್ಞಾನಭಾರತಿಯಲ್ಲಿ ವಾಹನ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ ಮತ್ತು ಕೆಂಗೇರಿ ಬಸ್ ಟರ್ಮಿನಲ್ ಮೆಟ್ರೊ ನಿಲ್ದಾಣದಲ್ಲಿ ಎರಡು ಹಂತದ ವಾಹನ ನಿಲುಗಡೆ ಸೌಕರ್ಯವಿದೆ.
- ಈ ವಿಸ್ತರಿತ ಮಾರ್ಗದಲ್ಲಿ 2021ರಲ್ಲಿ ಪ್ರಯಾಣಿಕರ ಸಂಚಾರ ಸುಮಾರು 75,000 ಆಗಲಿದೆ ಎಂದು ಅಂದಾಜಿಸಲಾಗಿದೆ. ಪ್ರತಿಯೊಂದು ನಿಲ್ದಾಣಕ್ಕೂ ಎಲ್ಇಡಿ ದೀಪದ ವ್ಯವಸ್ಥೆ 8 ಎಸ್ಕಲೇಟರ್ ಗಳು ಮತ್ತು 4 ಎಲಿವೇಟರ್ ಗಳನ್ನು ಒದಗಿಸಲಾಗಿದೆ. ಮೇಲ್ಛಾವಣಿ ಸೌರ ಘಟಕಗಳನ್ನು 2022ರ ಮಾರ್ಚ್ ವೇಳೆಗೆ ಅಳವಡಿಸಲಾಗುವುದು.
- ಎಲ್ಲಾ ಆರು ನಿಲ್ದಾಣಗಳಲ್ಲೂ ಪರಿಣಾಮಕಾರಿ ಇಂಧನ ಎಲ್ಇಡಿ ದೀಪದ ವ್ಯವಸ್ಥೆ ಮಾಡಲಾಗಿದೆ. ಹೊಸದಾಗಿ ಸೇವಾ ರಸ್ತೆಯನ್ನು ಒದಗಿಸುವ ಜತೆಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಎಲ್ಲಾ ನಿಲ್ದಾಣಗಳಲ್ಲಿ ಒದಗಿಸಲಾಗಿದೆ. ಸೇವಾ ರಸ್ತೆಯಲ್ಲಿ ಬಸ್ ನಿಲುಗಡೆ, ಟ್ಯಾಕ್ಸಿ ಮತ್ತು ಆಟೊಗಳ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಮತ್ತು ಇಳಿಸುವ ಪ್ರದೇಶಗಳನ್ನು ಗುರುತಿಸಲಾಗಿದೆ. ಸಾರ್ವಜನಿಕರು ಈ ನಿಲ್ದಾಣಗಳನ್ನು ಪಾವತಿ ಮಾಡಲಾಗದ ಪ್ರದೇಶದ ಮೂಲಕ ರಸ್ತೆಯನ್ನು ದಾಟಲು ಬಳಸಬಹುದಾಗಿದೆ.
- ಬೈಯಪ್ಪನಹಳ್ಳಿಯಿಂದ ಕೆಂಗೇರಿವರೆಗಿನ ಪ್ರಯಾಣಕ್ಕೆ 56 ರೂ. ದರ ನಿಗದಿಪಡಿಸಲಾಗಿದೆ ಮತ್ತು ಕೆಂಗೇರಿಯಿಂದ ಸಿಲ್ಕ್ ಇನ್ಸ್ ಟ್ಯೂಟ್ ವರೆಗೆ ಅತಿ ಉದ್ದನೆಯ ಮಾರ್ಗಕ್ಕೆ 60 ರೂ. ನಿಗದಿಪಡಿಸಲಾಗಿದೆ. ಬೈಯಪ್ಪನಹಳ್ಳಿಯಿಂದ ಕೆಂಗೇರಿವರೆಗಿನ ಪ್ರಯಾಣದ ಅವಧಿ ಕೇವಲ 52 ನಿಮಿಷಗಳು. ಕೆಂಗೇರಿಯಿಂದ ಚಲ್ಲಘಟ್ಟವರೆಗೆ(2 ಕಿ.ಮೀ.) ವಿಸ್ತರಿಸಿದ ಮಾರ್ಗದ ಕಾಮಗಾರಿ ಮಾರ್ಚ್ 2022ರೊಳಗೆ ಪೂರ್ಣಗೊಳಿಸಲು ಸಮಯ ನಿಗದಿಪಡಿಸಲಾಗಿದೆ.
****
(Release ID: 1750203)
Visitor Counter : 339