ನೀತಿ ಆಯೋಗ

ನೀತಿ ಆಯೋಗ ಮತ್ತು ಜಾಗತಿಕ ಸಂಪನ್ಮೂಲಗಳ ಸಂಸ್ಥೆ ಜಂಟಿಯಾಗಿ ಭಾರತದಲ್ಲಿ ಹೊಗೆರಹಿತ ಸಾರಿಗೆ ವೇದಿಕೆಯ ಆರಂಭ

Posted On: 24 AUG 2021 2:32PM by PIB Bengaluru

ನೀತಿ ಆಯೋಗ ಹಾಗೂ ಜಾಗತಿಕ ಸಂಪನ್ಮೂಲ ಸಂಸ್ಥೆ ಜಂಟಿಯಾಗಿ ಹೊಗೆರಹಿತ ಸಾರಿಗೆ ವೇದಿಕೆಯನ್ನು ಆರಂಭಿಸಿದೆ. ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಹಾಗೂ ಏಷ್ಯಾ ಸಾರಿಗೆ ಉಪಕ್ರಮ ((NDC-TIA) ಯೋಜನೆಯ ಅಡಿಯಲ್ಲಿ ಈ ನೂತನ ಯೋಜನೆಯನ್ನು ಆ.23ರಂದು ಕೈಗೆತ್ತಿಕೊಂಡಿದೆ. 

ವರ್ಚುವಲ್‌ ವೇದಿಕೆಯಲ್ಲಿ ನೀತಿ ಆಯೋಗದ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್‌ ಕಾಂತ್‌ ಈ ಯೋಜನೆಗೆ ವಿಧ್ಯುಕ್ತ ಚಾಲನೆ ನೀಡಿದರು. NDC-TIA ಯೋಜನೆಯ ಸಹಭಾಗಿತ್ವದಲ್ಲಿರುವ ಸಚಿವಾಲಯದ ಗಣ್ಯರು ಉಪಸ್ಥಿತರಿದ್ದರು. ಸಂಚಾರ ಹಾಗೂ ಇಂಧನ ಕ್ಷೇತ್ರದ ಪಾಲುಗಾರರೂ ಹಾಜರಿದ್ದರು. ಸಾರಿಗೆ ವಿಭಾಗದಲ್ಲಿ ಜಿಎಚ್‌ಜಿ ಮಾಲಿನ್ಯವನ್ನು ನಿಯಂತ್ರಣಕ್ಕೆ ತರುವ ಮತ್ತು ಆ ಪ್ರಮಾಣವನ್ನು ತಗ್ಗಿಸುವುದೇ ಈ ಯೋಜನೆಯ ಉದ್ದೇಶವಾಗಿದೆ. 2–2ಡಿಗ್ರಿಯಷ್ಟು ತಗ್ಗಿಸುವ ಗುರಿ ಹೊಂದಿದೆ. ಏಷ್ಯಾದ ರಾಷ್ಟ್ರಗಳಲ್ಲಿ ವಾಯುಮಾಲಿನ್ಯ ಸಮಸ್ಯೆಗೆ ಕಾರಣವಾಗಿರುವ ಈ ಪ್ರಮಾಣದಲ್ಲಿ ಕಡಿತ ತರುವುದು ಉದ್ದೇಶವಾಗಿದೆ.

ಭಾರತ ವೈವಿಧ್ಯಮಯ ಸಂಚಾರ ಸಾರಿಗೆಯ ಕ್ಷೇತ್ರ ಹೊಂದಿದೆ. ಅತಿಹೆಚ್ಚು ಇಂಗಾಲವನ್ನುಗುಳುವ ಮೂರನೆಯ ದೊಡ್ಡ ದೇಶವಾಗಿದೆ ಎಂದು ಐಎಫ್‌ಎ 2020 ಪರಿಸರ, ಅರಣ್ಯ ಹಾಗೂ ಹವಾಮಾನ ವೈಪರೀತ್ಯ ಸಚಿವಾಲಯದ ಮಾಹಿತಿ ದೃಢಪಡಿಸಿದೆ. ಇಡೀ ಸಂಚಾರ ವ್ಯವಸ್ಥೆಯಲ್ಲಿ ಶೇ 90ರಷ್ಟು ರಸ್ತೆ ಸಾರಿಗೆಯ ಮೂಲಕವೇ ಇಂಗಾಲ ಉತ್ಪನ್ನವಾಗುತ್ತದೆ ಎಂದೂ ಸ್ಪಷ್ಟ ಪಡಿಸಿದೆ. 

ಇತರ ಯೋಜನೆಗಳು ಹಾಗೂ ನೀತಿನಿಯಮಗಳಿಂದಲೂ ಭಾರತದಲ್ಲಿ ಇಂಗಾಲದ ಉಗುಳುವಿಕೆ ಕಡಿತಗೊಳಿಸಲು ಪ್ರಯತ್ನಿಸುತ್ತಲೇ ಇದೆ. ಹೊಗೆರಹಿತ ಸಂಚಾರಕ್ಕಾಗಿ ವಿದ್ಯುತ್‌ ಚಾಲಿತ ವಾಹನಗಳ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚುಹೆಚ್ಚು ಉತ್ತೇಜನ ನೀಡುತ್ತಿದೆ. ನೀತಿ ಆಯೋಗವು ವಿದ್ಯುತ್‌ಚಾಲಿತ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸುವತ್ತ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ತಕ್ಕಂತೆ ಪರಿವರ್ತಕ ಚಲನಶೀಲ ಬ್ಯಾಟರಿ ಸಂಗ್ರಹ ರಾಷ್ಟೀಯ ಅಭಿಯಾನವನ್ನೂ ಹಮ್ಮಿಕೊಂಡಿದೆ. (National Mission on Transformative Mobility and Battery Storage) 

ವಿದ್ಯುತ್‌ ಚಾಲಿತ ವಾಹನಗಳ ಬಳಕೆಯಲ್ಲಿ ಹೆಚ್ಚಳ ಉಂಟು ಮಾಡಲು ವಿವಿಧ ಬಳಕೆದಾರರ ಮೂಲಕ ಅಗತ್ಯವಿರುವ ಮೂಲ ಸೌಕರ್ಯಗಳ ವ್ಯವಸ್ಥೆಯೊಂದನ್ನು ಸೃಷ್ಟಿಸಬೇಕಿದೆ. ಈ ಪಾಲುದಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಏಜೆನ್ಸಿಗಳು, ಹಣಕಾಸು ಸಂಸ್ಥೆಗಳು, ವ್ಯಾಪಾರ, ವಾಣಿಜ್ಯ ಸಂಸ್ಥೆಗಳು, ಸಂಶೋಧನಾ ಮತ್ತು ತಾಂತ್ರಿಕ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಇದರಲ್ಲಿ ಒಳಗೊಂಡಿರುತ್ತದೆ. ಈ ಎಲ್ಲರ ನಡುವಿನ ಸಹಕಾರ, ಸಂಶೋಧನೆ ಹಾಗೂ ಅನುಷ್ಠಾನ ಪ್ರಕ್ರಿಯೆಯಿಂದ ಈ ರಂಗದಲ್ಲಿ ಸರಾಗವಾದ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಂತಾಗುವುದು. 

ಭಾರತ NDC-TIA ಸಂಸ್ಥೆಯು ಹೊಗೆರಹಿತ ಸಂಚಾರಕ್ಕಾಗಿ ಒಂದು ಅಭಿವೃದ್ಧಿಪರ ಕಾರ್ಯಸೂಚಿ ತಂತ್ರಗಾರಿಕೆಯನ್ನು ಬಳಸಿ, ಬಹುಪಾಲುದಾರರಿಗಾಗಿ ವೇದಿಕೆ ನಿರ್ಮಿಸಲು ಅವಕಾಶ ಮಾಡಿಕೊಡುತ್ತದೆ. ಈ ವೇದಿಕೆಯ ಅಡಿ ಜಾಗತಿಕ ಸಂಪನ್ಮೂಲಗಳ ತಂಡ ನೀತಿ ಆಯೋಗ ಹಾಗೂ ಇತರ ಯೋಜನಾ ಪಾಲುಗಾರರೊಂದಿಗೆ ಕಾರ್ಯಾನುಷ್ಠಾನಕ್ಕೆ ಶ್ರಮಿಸುತ್ತದೆ. ಇವೆಲ್ಲವೂ ಒಗ್ಗೂಡಿ ಒಂದು ಪರಿಣಾಮಕಾರಿಯಾದ ಕಾರ್ಯಸೂಚಿಯನ್ನು ಅಭಿವೃದ್ಧಿ ಪಡಿಸುತ್ತವೆ. ದೇಶದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಹೆಚ್ಚಾಗಲು ಪ್ರೋತ್ಸಾಹದಾಯಕವಾದ ಕ್ರಮಗಳನ್ನು ಅಭಿವೃದ್ಧಿಪಡಿಸುತ್ತದೆ. ಅಷ್ಟೇ ಅಲ್ಲ, ಎಲ್ಲೆಡೆಯೂ ಒಂದೇ ತೆರನಾದ ನೀತಿನಿಯಮಗಳನ್ನು ನಿರೂಪಿಸಿ, ಮಾಲಿನ್ಯ ತಗ್ಗಿಸಲು ಶ್ರಮಿಸುತ್ತವೆ. ಸಾರಿಗೆ ಕ್ಷೇತ್ರದಿಂದ ಮಾಲಿನ್ಯ ತಗ್ಗಿಸುವುದೇ ಇವುಗಳ ಮೂಲ ಕಾರ್ಯ ಉದ್ದೇಶವಾಗಿರುತ್ತದೆ.

ಉದ್ಘಾಟನಾ ಭಾಷಣದಲ್ಲಿ ನೀತಿ ಆಯೋಗದ ಕಾರ್ಯನಿರ್ವಹಣಾಧಿಕಾರಿ ಮಾತನಾಡುತ್ತ, ‘ ಹೊಗೆರಹಿತ ಸಾರಿಗೆಯ ವೇದಿಕೆಯು ನಮ್ಮ ದೇಶದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆಯ ಪರ್ವದಲ್ಲಿ ಹೊಸತೊಂದು ಮೈಲಿಗಲ್ಲನ್ನು ಸೃಷ್ಟಿಸುತ್ತದೆ. ಸಂಶೋಧಕರು, ಇತರ ಕ್ಷೇತ್ರಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಶೈಕ್ಷಣಿಕ ಕ್ಷೇತ್ರ ಬಹುಮುಖಿ ಏಜೆನ್ಸಿಗಳನ್ನು, ಹಣಕಾಸು ಸಂಸ್ಥೆಗಳನ್ನು, ಕೇಂದ್ರ, ಹಾಗೂ ರಾಜ್ಯ ಸರ್ಕಾರಗಳು ಒಗ್ಗೂಡಿ ಕಾರ್ಯನಿರ್ವಹಿಸುವ ಅವಕಾಶವನ್ನು ಕಲ್ಪಿಸುತ್ತದೆ. ಇದರಿಂದ ನೂತನ ಬಗೆಯ ವಹಿವಾಟು ಹೆಚ್ಚುವಲ್ಲಿ ಅಭಿವೃದ್ಧಿಪಡಿಸುವಲ್ಲಿ ಸಹಾಯವಾಗುತ್ತದೆ, ಅಷ್ಟೇ ಅಲ್ಲ ಸಮಗ್ರ ಅಭಿವೃದ್ಧಿಗೆ, ಪರಿಣಾಮಕಾರಿಯಾದ ಕಾರ್ಯಾನುಷ್ಠಾನ, ಸಹಯೋಗ, ಸಹಕಾರಗಳಿಗೆ ಕಾರಣವಾಗುತ್ತದೆ. ನಾವೆಲ್ಲರೂ ಹೊಗೆರಹಿತ, ನೈರ್ಮಲ್ಯಯುಕ್ತ ಸಂಚಾರ ಸಾರಿಗೆ ವ್ಯವಸ್ಥೆಗಾಗಿ ಒಗ್ಗೂಡಿ ಶ್ರಮಿಸಬೇಕಾಗುತ್ತದೆ’ ಎಂದು ಹೇಳಿದರು.   

ಜಾಗತಿಕ ಸಂಪನ್ಮೂಲ ಸಂಸ್ಥೆ ಭಾರತದ ಕಾರ್ಯನಿರ್ವಹಣಾಧಿಕಾರಿ ಡಾ. ಓ.ಪಿ. ಅಗರವಾಲ್‌ ಅವರು ‘ನಗರ ಸಂಚಾರ ವ್ಯವಸ್ಥೆಯನ್ನು ಹೊಗೆರಹಿತಗೊಳಿಸುವಲ್ಲಿ ಭಾರತದಲ್ಲಿ ಬೃಹತ್‌ ಅವಕಾಶಗಳಿವೆ. ನಡಿಗೆ, ಸೈಕ್ಲಿಂಗ್‌ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಲು ಪ್ರೋತ್ಸಾಹಿಸುವುದರಿಂದ ದ್ವಿಚಕ್ರವಾಹನಗಳನ್ನು ವಿದ್ಯುದೀಕರಣ ಗೊಳಿಸುವುದು ನಮ್ಮ ದೇಶಕ್ಕೆ ಸೂಕ್ತವಾದ ಕಾರ್ಯತಂತ್ರವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಜಾಗತಿಕ ಸಂಪನ್ಮೂಲಗಳ ಸಂಸ್ಥೆ ಭಾರತೀಯ ಸಮಗ್ರ ಸಂಚಾರ ವ್ಯವಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅಮಿತ್‌ ಭಟ್‌ ಅವರು ‘ಇಂಗಾಲ ರಹಿತ ಹಾಗೂ ಹೊಗೆರಹಿತ ಸಂಚಾರಕ್ಕಾಗಿ ಮಾಲಿನ್ಯ ಕಡಿತಗೊಳಿಸಲು, ಹಲವಾರು ಹಂತಗಳಲ್ಲಿ ಕಾರ್ಯಾನುಷ್ಠಾನಗೊಳಿಸಬೇಕಾಗುತ್ತದೆ. ಈ ಕಾರ್ಯಾಚರಣೆಗಳನ್ನು ಸರಾಗವಾಗಿ ಕೈಗೊಳ್ಳಲು ಹೊಗೆರಹಿತ ಸಂಚಾರದ ವೇದಿಕೆಯು ಸಮರ್ಪಕವಾಗಿ ನೀತಿನಿಯಮಗಳನ್ನು ಜಾರಿಗೊಳಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ. ವಿಭಿನ್ನ ಧ್ವನಿ ಹಾಗೂ ವಿಭಿನ್ನ ಕ್ಷೇತ್ರಗಳ ಅಗತ್ಯಗಳನ್ನು ಮನಗಂಡು, ಸಮಗ್ರ ಕಾರ್ಯಸೂಚಿ ನಿರೂಪಿಸಿ, ನಿರ್ವಹಿಸಿ, ಹಸಿರು ಸಂಚಾರ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯಕವಾಗುತ್ತದೆ’ ಎಂದರು. 

ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಹಾಗೂ ಏಷ್ಯಾ ಸಂಚಾರ ಉಪಕ್ರಮವು ಏಳು ಸಂಸ್ಥೆಗಳನ್ನು ಒಳಗೊಂಡಿರುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಚೀನಾ, ಭಾರತ ಹಾಗೂ ವಿಯತ್ನಾಮ್‌ ದೇಶಗಳಲ್ಲಿ ಹೊಗೆರಹಿತ ಸಂಚಾರವನ್ನು ಉತ್ತೇಜಿಸಲು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಇದು ಅಂತರರಾಷ್ಟ್ರೀಯ ಹವಾಮಾನ ಉಪಕ್ರಮ, ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪರಿಸರ, ಪ್ರಕೃತಿ ರಕ್ಷಣೆ ಹಾಗೂ ಪರಮಾಣು ಸುರಕ್ಷೆ ಸಚಿವಾಲಯ ಹಾಗೂ ಜರ್ಮನ್‌ ಸಂಸತ್ತಿನ ನಿರ್ಧಾರಗಳನ್ನು ಆಧರಿಸಿ, ಈ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತದೆ. ಈ ಯೋಜನೆಗೆ ಸಂಬಂಧಿಸಿದಂತೆ ಭಾರತದಲ್ಲಿ ನೀತಿ ಆಯೋಗವು ಕಾರ್ಯಾನುಷ್ಠಾನ ಪಾಲುದಾರನ ಪಾತ್ರ ನಿರ್ವಹಿಸುತ್ತಿದೆ.

***



(Release ID: 1748619) Visitor Counter : 333