ಪ್ರಧಾನ ಮಂತ್ರಿಯವರ ಕಛೇರಿ
ಟೋಕಿಯೊ 2020 ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕಾಗಿ ಭಾರತೀಯ ಪ್ಯಾರಾ-ಅಥ್ಲೀಟ್ ತಂಡದೊಂದಿಗಿನ ಸಂವಾದದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
Posted On:
17 AUG 2021 2:10PM by PIB Bengaluru
ನಮಸ್ಕಾರ!
ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ನಮ್ಮ ಕ್ರೀಡಾ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಜಿ, ಎಲ್ಲಾ ಆಟಗಾರರು, ಎಲ್ಲಾ ತರಬೇತುದಾರರು ಮತ್ತು ವಿಶೇಷವಾಗಿ ಪೋಷಕರು ನನ್ನೊಂದಿಗೆ ಇದ್ದಾರೆ. ನಿಮ್ಮೆಲ್ಲರೊಂದಿಗೆ ಮಾತನಾಡುತ್ತಾ ಈ ಬಾರಿ ಭಾರತವು ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲಿದೆ ಎನ್ನುವ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಎಲ್ಲಾ ಆಟಗಾರರಿಗೆ ಮತ್ತು ಎಲ್ಲಾ ತರಬೇತುದಾರರಿಗೆ ನಿಮ್ಮ ಯಶಸ್ಸಿಗೆ, ದೇಶದ ವಿಜಯಕ್ಕಾಗಿ ಶುಭ ಹಾರೈಸುತ್ತೇನೆ.
ಸ್ನೇಹಿತರೆ,
ನಾನು ನಿಮ್ಮಲ್ಲಿ ಅನಂತ ಆತ್ಮವಿಶ್ವಾಸ ಮತ್ತು ಏನನ್ನಾದರೂ ಸಾಧಿಸುವ ಶಕ್ತಿಯನ್ನು ಕಾಣಬಲ್ಲೆ. ನಿಮ್ಮ ಕಠಿಣ ಪರಿಶ್ರಮದ ಫಲವೇ ಇಂದು ಅತಿ ಹೆಚ್ಚು ಭಾರತೀಯ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್ಗೆ ಹೋಗುತ್ತಿದ್ದಾರೆ. ನೀವು ಹೇಳುತ್ತಿದ್ದಂತೆ, ಕರೋನಾ ಸಾಂಕ್ರಾಮಿಕವು ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಿತು, ಆದರೆ ನೀವು ಅದನ್ನು ನಿಮ್ಮ ಸಿದ್ಧತೆಯ ಮೇಲೆ ಪರಿಣಾಮ ಬೀರಲು ಬಿಡಲಿಲ್ಲ ಮತ್ತು ಅದನ್ನು ಜಯಿಸಲು ಏನೆಲ್ಲ ಮಾಡಿದ್ದೀರ. ನೀವು ನಿಮ್ಮ ಮನೋಬಲವನ್ನು ಬಿಡಲಿಲ್ಲ ಮತ್ತು ನಿಮ್ಮ ಅಭ್ಯಾಸವನ್ನು ನಿಲ್ಲಿಸಲಿಲ್ಲ. ಮತ್ತು ನಿಜವಾದ 'ಸ್ಪೋರ್ಟ್ಸ ಮನ್ ಸ್ಪಿರಿಟ್' ಪ್ರತಿಯೊಂದು ಸನ್ನಿವೇಶದಲ್ಲೂ ನಮಗೆ ಕಲಿಸುವುದು ಇದನ್ನೇ - ‘ಹೌದು, ನಾವು ಅದನ್ನು ಮಾಡುತ್ತೇವೆ! ನಾವು ಅದನ್ನು ಮಾಡಬಹುದು’ ಎಂದು ಮತ್ತು ನೀವೆಲ್ಲರೂ ಅದನ್ನು ಮಾಡಿದ್ದೀರಿ.
ಸ್ನೇಹಿತರೆ,
ನೀವು ನಿಜವಾದ ಚಾಂಪಿಯನ್ ಆಗಿದ್ದೀರಿ ಅದಕ್ಕಾಗಿಯೇ ನೀವು ಈ ಹಂತವನ್ನು ತಲುಪಿದ್ದೀರಿ. ಜೀವನದ ಆಟದಲ್ಲಿ ನೀವು ಪ್ರತಿಕೂಲತೆಯನ್ನು ಜಯಿಸಿದ್ದೀರಿ. ನೀವು ಜೀವನದ ಆಟವನ್ನು ಗೆದ್ದಿದ್ದೀರಿ, ನೀವು ಚಾಂಪಿಯನ್ ಗಳು. ನಿಮ್ಮ ಗೆಲುವು, ನಿಮ್ಮ ಪದಕವು ಆಟಗಾರನಾಗಿ ನಿಮಗೆ ಬಹಳ ಮುಖ್ಯವಾಗಿದೆ, ಆದರೆ ಇಂದಿನ ಹೊಸ ಭಾರತವು ತನ್ನ ಕ್ರೀಡಾಪಟುಗಳ ಮೇಲೆ ಪದಕಗಳಿಗಾಗಿ ಒತ್ತಡ ಹೇರುವುದಿಲ್ಲ ಎಂದು ನಾನು ಮತ್ತೆ ಮತ್ತೆ ಹೇಳುತ್ತೇನೆ. ಯಾವುದೇ ಮಾನಸಿಕ ಒತ್ತಡವಿಲ್ಲದೆ ಮತ್ತು ಆಟಗಾರನು ನಿಮ್ಮ ಮುಂದೆ ಎಷ್ಟು ಬಲಿಷ್ಠನಾಗಿದ್ದಾನೆ ಎಂದು ಚಿಂತಿಸದೆ ನಿಮ್ಮ 100 ಪ್ರತಿಶತವನ್ನು ನೀವು ಸಂಪೂರ್ಣ ಸಮರ್ಪಣೆಯೊಂದಿಗೆ ನೀಡಬೇಕು. ಕ್ರೀಡೆಗಳ ಕ್ಷೇತ್ರದಲ್ಲಿ ಈ ನಂಬಿಕೆಯೊಂದಿಗೆ ನೀವು ಪ್ರದರ್ಶನ ನೀಡಬೇಕೆನ್ನುವುದನ್ನು ಯಾವಾಗಲೂ ನೆನಪಿಡಿ. ನಾನು ಪ್ರಧಾನಿಯಾದಾಗ, ನಾನು ವಿಶ್ವದ ನಾಯಕರನ್ನು ಭೇಟಿ ಮಾಡುತ್ತಿದ್ದೆ. ಅವರು ಎತ್ತರದಲ್ಲಿ ನಮಗಿಂತಲೂ ಎತ್ತರವಾಗಿದ್ದಾರೆ. ಆ ದೇಶಗಳ ಸ್ಥಿತಿಯೂ ಭವ್ಯವಾಗಿದೆ. ಮೋದಿಯವರಿಗೆ ಪ್ರಪಂಚದ ಕಲ್ಪನೆಯಿಲ್ಲ ಎಂದು ನಿಮ್ಮ ಮತ್ತು ದೇಶದ ಜನರು ಅನುಮಾನಿಸುತ್ತಿದ್ದಂತೆ ನಾನು ಕೂಡ ಇದೇ ರೀತಿಯ ಹಿನ್ನೆಲೆಯನ್ನು ಹೊಂದಿದ್ದೆ, ಅವರು ಪ್ರಧಾನಿಯಾದರೆ ಅವರು ಏನು ಮಾಡುತ್ತಾರೆ? ಆದರೆ ನಾನು ವಿಶ್ವ ನಾಯಕರೊಂದಿಗೆ ಕೈಕುಲುಕುತ್ತಿದ್ದಾಗ, ನರೇಂದ್ರ ಮೋದಿ ಅವರು ಕೈಕುಲುಕುತ್ತಿದ್ದಾರೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. 100 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವು ಕೈ ಕುಲುಕುತ್ತಿದೆ ಎಂದು ನಾನು ಯಾವಾಗಲೂ ಭಾವಿಸಿದ್ದೆ. 100 ಕೋಟಿಗೂ ಹೆಚ್ಚು ದೇಶವಾಸಿಗಳು ನನ್ನ ಬೆನ್ನಿಗೆ ನಿಂತಿದ್ದಾರೆ. ನಾನು ಈ ಭಾವನೆಯನ್ನು ಹೊಂದಿದ್ದೆ ಮತ್ತು ಆದ್ದರಿಂದ, ನನ್ನ ಆತ್ಮವಿಶ್ವಾಸದಲ್ಲಿ ನಾನು ಎಂದಿಗೂ ಯಾವುದೇ ಸಮಸ್ಯೆಗಳನ್ನು ಎದುರಿಸಲಿಲ್ಲ. ನಿಮ್ಮ ಜೀವನದಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ನೀವು ಹೊಂದಿದ್ದೀರಿ ಮತ್ತು ಆಟವನ್ನು ಗೆಲ್ಲುವುದು ನಿಮಗೆ ಬಹಳ ಚಿಕ್ಕ ಸಮಸ್ಯೆಯಷ್ಟೆ. ನಿಮ್ಮ ಕಠಿಣ ಪರಿಶ್ರಮವು ಪದಕಗಳನ್ನು ಖಚಿತಪಡಿಸುತ್ತದೆ. ನಮ್ಮ ಕೆಲವು ಆಟಗಾರರು ಒಲಿಂಪಿಕ್ಸ್ನಲ್ಲಿ ಗೆದ್ದಿದ್ದಾರೆ, ಇನ್ನು ಕೆಲವರಿಗೆ ಗೆಲುವು ತಪ್ಪಿ ಹೋಗಿದೆ ಎನ್ನುವುದನ್ನು ನೀವು ಈಗಾಗಲೇ ನೋಡಿದ್ದೀರಿ. ಆದರೆ ದೇಶವು ಎಲ್ಲರೊಂದಿಗೆ ದೃಢವಾಗಿ ನಿಂತಿತು ಮತ್ತು ಎಲ್ಲರನ್ನು ಹುರಿದುಂಬಿಸುತ್ತಿತ್ತು.
ಸ್ನೇಹಿತರೆ,
ಒಬ್ಬ ಆಟಗಾರನಾಗಿ, ಕ್ಷೇತ್ರದಲ್ಲಿ ದೈಹಿಕ ಶಕ್ತಿಯ ಜೊತೆಗೆ ಮಾನಸಿಕ ಶಕ್ತಿಯೂ ಮುಖ್ಯ ಎಂದು ನಿಮಗೆ ಚೆನ್ನಾಗಿ ತಿಳಿದಿದೆ. ಸವಾಲಿನ ಸನ್ನಿವೇಶಗಳ ಹೊರತಾಗಿಯೂ ನಿಮ್ಮ ಮಾನಸಿಕ ಶಕ್ತಿಯೇ ಮುಂದೆ ಸಾಗಲು ಸಹಾಯ ಮಾಡಿತು. ಆದ್ದರಿಂದ, ದೇಶವು ತನ್ನ ಆಟಗಾರರಿಗಾಗಿ ಈ ಎಲ್ಲ ಸಮಸ್ಯೆಗಳನ್ನು ನೋಡಿಕೊಳ್ಳುತ್ತಿದೆ. ಆಟಗಾರರಿಗಾಗಿ 'ಕ್ರೀಡಾ ಮನೋವಿಜ್ಞಾನ' ಕುರಿತು ಕಾರ್ಯಾಗಾರಗಳು ಮತ್ತು ವಿಚಾರಗೋಷ್ಠಿಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ನಮ್ಮ ಹೆಚ್ಚಿನ ಆಟಗಾರರು ಸಣ್ಣ ಪಟ್ಟಣಗಳು, ನಗರಗಳು ಮತ್ತು ಗ್ರಾಮಗಳಿಂದ ಬಂದವರು. ಆದ್ದರಿಂದ, ಹೊಸ ವಿಷಯದ ಕೊರತೆಯು ಅವರಿಗೆ ದೊಡ್ಡ ಸವಾಲಾಗಿದೆ. ಕೆಲವೊಮ್ಮೆ, ಹೊಸ ಸ್ಥಳಗಳು, ಹೊಸ ಜನರು ಮತ್ತು ಅಂತರರಾಷ್ಟ್ರೀಯ ಪರಿಸ್ಥಿತಿಗಳಂತಹ ಸವಾಲುಗಳು ನಮ್ಮ ಮನೋಬಲವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ನಮ್ಮ ಆಟಗಾರರು ಈ ದಿಕ್ಕಿನಲ್ಲಿಯೂ ತರಬೇತಿ ಪಡೆಯಬೇಕು ಎಂದು ನಿರ್ಧರಿಸಲಾಯಿತು. ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ನೀವು ಭಾಗವಹಿಸಿದ ಮೂರು ಸೆಷನ್ಗಳು ನಿಮಗೆ ಸಾಕಷ್ಟು ಸಹಾಯ ಮಾಡಿವೆ ಎಂದು ನಾನು ಭಾವಿಸುತ್ತೇನೆ.
ಸ್ನೇಹಿತರೆ,
ನಿಮ್ಮನ್ನು ನೋಡುವಾಗ, ನಮ್ಮ ಹಳ್ಳಿಗಳು ಮತ್ತು ದೂರದ ಪ್ರದೇಶಗಳು ಪ್ರತಿಭೆ ಮತ್ತು ಆತ್ಮವಿಶ್ವಾಸದಿಂದ ತುಂಬಿವೆ ಎಂದು ನಾನು ಹೇಳಬಲ್ಲೆ. ನೀವೇ ಅದಕ್ಕೆ ಉತ್ತಮ ಉದಾಹರಣೆ. ಸಂಪನ್ಮೂಲಗಳಿಗೆ ಸಂಬಂಧಿಸಿದ ಸೌಲಭ್ಯಗಳನ್ನು ನೀವು ಪಡೆಯದಿದ್ದರೆ ನಿಮ್ಮ ಕನಸುಗಳಿಗೆ ಏನಾಗಬಹುದು ಎಂದು ನೀವು ಅನೇಕ ಬಾರಿ ಯೋಚಿಸುತ್ತಿರುತ್ತೀರಿ. ದೇಶದ ಲಕ್ಷಾಂತರ ಯುವಕರಿಗೆ ಅದೇ ಕಾಳಜಿಯ ಬಗ್ಗೆ ನಾವು ಕೂಡ ಚಿಂತಿಸಬೇಕಾಗಿದೆ. ಹಲವು ಪದಕಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿರುವ ಅನೇಕ ಯುವಕರು ಇದ್ದಾರೆ. ಇಂದು ದೇಶವೇ ಅವರನ್ನು ತಲುಪಲು ಪ್ರಯತ್ನಿಸುತ್ತಿದೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ. ಇಂದು ದೇಶದ 250 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 360 'ಖೇಲೋ ಇಂಡಿಯಾ ಕೇಂದ್ರಗಳನ್ನು' ಸ್ಥಾಪಿಸಲಾಗಿದ್ದು, ಸ್ಥಳೀಯ ಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸಲು ಅವಕಾಶಗಳನ್ನು ಪಡೆಯಬಹುದಾಗಿದೆ. ಮುಂಬರುವ ದಿನಗಳಲ್ಲಿ, ಈ ಕೇಂದ್ರಗಳ ಸಂಖ್ಯೆಯನ್ನು 1,000 ಕ್ಕೆ ಹೆಚ್ಚಿಸಲಾಗುವುದು. ಅದೇ ರೀತಿ, ಸಂಪನ್ಮೂಲಗಳು ನಮ್ಮ ಆಟಗಾರರ ಮುಂದೆ ಮತ್ತೊಂದು ಸವಾಲಾಗಿತ್ತು. ಮೊದಲು, ಉತ್ತಮ ಮೈದಾನಗಳು ಮತ್ತು ಗುಣಮಟ್ಟದ ಉಪಕರಣಗಳು ಇರಲಿಲ್ಲ. ಇದು ಆಟಗಾರನ ಮನೋಬಲದ ಮೇಲೂ ಪರಿಣಾಮ ಬೀರಿತು. ಅವನು ತನ್ನನ್ನು ಇತರ ದೇಶಗಳ ಆಟಗಾರರಿಗಿಂತ ಕೀಳು ಎಂದು ಭಾವಿಸುತ್ತಿದ್ದ. ಆದರೆ ಇಂದು ದೇಶದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ವಿಸ್ತರಿಸಲಾಗುತ್ತಿದೆ. ದೇಶವು ಪ್ರತಿಯೊಬ್ಬ ಆಟಗಾರರಿಗೂ ಮುಕ್ತ ಮನಸ್ಸಿನಿಂದ ಸಹಾಯ ಮಾಡುತ್ತಿದೆ. ದೇಶವು 'ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್' ಮೂಲಕ ಆಟಗಾರರಿಗೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಿದೆ, ಗುರಿಗಳನ್ನು ನಿಗದಿಪಡಿಸಿದೆ ಮತ್ತು ಅದರ ಫಲಿತಾಂಶವು ಇಂದು ನಮ್ಮ ಮುಂದಿದೆ.
ಸ್ನೇಹಿತರೆ,
ದೇಶವು ಕ್ರೀಡೆಯಲ್ಲಿ ಅಗ್ರಸ್ಥಾನವನ್ನು ತಲುಪಬೇಕಾದರೆ, ಹಳೆಯ ತಲೆಮಾರಿನ ಮನಸ್ಸಿನಲ್ಲಿ ಬೇರೂರಿರುವ ಆ ಹಳೆಯ ಭಯವನ್ನು ನಾವು ತೆಗೆದುಹಾಕಬೇಕು. ಒಂದು ವೇಳೆ ಮಗುವಿಗೆ ಆಟದಲ್ಲಿ ಹೆಚ್ಚು ಆಸಕ್ತಿ ಇದ್ದರೆ, ನಂತರ ಆತ ಏನು ಮಾಡುತ್ತಾನೆ ಎಂದು ಕುಟುಂಬದ ಸದಸ್ಯರು ಚಿಂತಿಸುತ್ತಿದ್ದರು ಏಕೆಂದರೆ ಒಂದು ಅಥವಾ ಎರಡು ಆಟಗಳನ್ನು ಹೊರತುಪಡಿಸಿ, ಕ್ರೀಡೆಗಳು ನಮಗೆ ಯಶಸ್ಸು ಅಥವಾ ವೃತ್ತಿಜೀವನದ ಅಂಶವಾಗಿರಲಿಲ್ಲ. ಈ ಮನಸ್ಥಿತಿ ಹಾಗು ಅಭದ್ರತೆಯ ಭಾವನೆಯಿಂದ ಹೊರಬರುವುದು ಬಹಳ ಮುಖ್ಯ.
ಸ್ನೇಹಿತರೆ,
ನೀವು ಯಾವುದೇ ಕ್ರೀಡೆಗಳೊಂದಿಗೆ ಸಂಬಂಧ ಹೊಂದಿದ್ದರೂ, ನೀವು ಏಕ ಭಾರತ- ಶ್ರೇಷ್ಠ ಭಾರತ (ಒನ್ ಇಂಡಿಯಾ, ಸುಪ್ರೀಂ ಇಂಡಿಯಾ) ಸ್ಫೂರ್ತಿಯನ್ನು ಬಲಪಡಿಸುತ್ತೀರಿ. ನೀವು ಯಾವ ರಾಜ್ಯಕ್ಕೆ ಸೇರಿದವರು, ಯಾವ ಪ್ರದೇಶಕ್ಕೆ ಸೇರಿದವರು, ಯಾವ ಭಾಷೆಯಲ್ಲಿ ಮಾತನಾಡುವವರು ಎಂಬುದು ಮುಖ್ಯವಲ್ಲ, ನೀವು ಇಂದು 'ಟೀಮ್ ಇಂಡಿಯಾ' ಆಗಿದ್ದೀರಿ. ಈ ಮನೋಭಾವವು ನಮ್ಮ ಸಮಾಜದ ಪ್ರತಿಯೊಂದು ಭಾಗದಲ್ಲೂ ಪ್ರತಿ ಹಂತದಲ್ಲೂ ಗೋಚರಿಸಬೇಕು. ಸಾಮಾಜಿಕ ಸಮಾನತೆ ಮತ್ತು ಆತ್ಮನಿರ್ಭರ ಭಾರತ ಅಭಿಯಾನದಲ್ಲಿ, ನನ್ನ ದಿವ್ಯಾಂಗ ಸಹೋದರ ಸಹೋದರಿಯರು ದೇಶಕ್ಕೆ ಬಹಳ ಮುಖ್ಯವಾದ ಪಾಲುದಾರರಾಗಿದ್ದಾರೆ. ದೈಹಿಕ ಕಷ್ಟದಿಂದ ಜೀವನ ಸ್ಥಗಿತಗೊಳ್ಳುವುದಿಲ್ಲ ಎಂಬುದನ್ನು ನೀವು ಸಾಬೀತುಪಡಿಸಿದ್ದೀರಿ. ಆದ್ದರಿಂದ, ನೀವು ದೇಶವಾಸಿಗಳಿಗೆ, ವಿಶೇಷವಾಗಿ ಹೊಸ ಪೀಳಿಗೆಗೆ ಉತ್ತಮ ಸ್ಫೂರ್ತಿಯಾಗಿದ್ದೀರಿ.
ಸ್ನೇಹಿತರೆ,
ಮೊದಲು, ದಿವ್ಯಾಂಗ ಜನರಿಗೆ ಸೌಲಭ್ಯಗಳನ್ನು ಒದಗಿಸುವುದು ಕಲ್ಯಾಣವೆಂದು ಪರಿಗಣಿಸಲಾಗಿತ್ತು. ಆದರೆ ಇಂದು ದೇಶವು ತನ್ನ ಜವಾಬ್ದಾರಿ ಎಂದು ಅರಿತುಕೊಂಡಿದೆ. ಆದ್ದರಿಂದ, ದೇಶದ ಸಂಸತ್ತು ಒಂದು ಕಾನೂನನ್ನು ಜಾರಿಗೆ ತಂದಿತು - 'ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯ್ದೆ' - ವಿಕಲಾಂಗ ವ್ಯಕ್ತಿಗಳ ಹಕ್ಕುಗಳಿಗೆ ಕಾನೂನು ರಕ್ಷಣೆ ನೀಡುತ್ತದೆ. ಸುಗಮ್ಯ ಭಾರತ ಅಭಿಯಾನಗಳು ಇದಕ್ಕೆ ಇನ್ನೊಂದು ಉತ್ತಮ ಉದಾಹರಣೆಯಾಗಿದೆ. ಇಂದು ನೂರಾರು ಸರ್ಕಾರಿ ಕಟ್ಟಡಗಳು ಮತ್ತು ರೈಲ್ವೇ ನಿಲ್ದಾಣಗಳು, ಸಾವಿರಾರು ರೈಲು ಬೋಗಿಗಳು ಮತ್ತು ಹತ್ತಾರು ದೇಶೀಯ ವಿಮಾನ ನಿಲ್ದಾಣಗಳನ್ನು ದಿವ್ಯಾಂಗ ಸ್ನೇಹಿಯಾಗಿ ಮಾಡಲಾಗಿದೆ. ಭಾರತೀಯ ಸಂಕೇತ ಭಾಷೆಯ ಪ್ರಮಾಣಿತ ನಿಘಂಟನ್ನು ಮಾಡುವ ಯೋಜನೆಯೂ ಪ್ರಗತಿಯಲ್ಲಿದೆ. ಎನ್ಸಿಇಆರ್ಟಿ ಪುಸ್ತಕಗಳನ್ನು ಸಹ ಸಂಕೇತ ಭಾಷೆಗೆ ಅನುವಾದಿಸಲಾಗುತ್ತಿದೆ. ಇಂತಹ ಪ್ರಯತ್ನಗಳು ಅನೇಕ ಜನರ ಜೀವನವನ್ನು ಬದಲಿಸುತ್ತಿವೆ ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡಲು ಅನೇಕ ಪ್ರತಿಭೆಗಳಿಗೆ ಆತ್ಮವಿಶ್ವಾಸವನ್ನು ನೀಡುತ್ತಿವೆ.
ಸ್ನೇಹಿತರೆ,
ದೇಶವು ಪ್ರಯತ್ನ ಪಟ್ಟಾಗ ನಾವು ಅದರ ಸುವರ್ಣ ಫಲಿತಾಂಶಗಳನ್ನು ವೇಗವಾಗಿ ಪಡೆಯುತ್ತೇವೆ, ಆಗ ನಾವು ದೊಡ್ಡದಾಗಿ ಯೋಚಿಸಲು ಮತ್ತು ಹೊಸತನವನ್ನು ಮಾಡಲು ಸ್ಫೂರ್ತಿ ಪಡೆಯುತ್ತೇವೆ. ನಮ್ಮ ಒಂದು ಯಶಸ್ಸು ನಮ್ಮ ಹಲವು ಹೊಸ ಗುರಿಗಳಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ, ನೀವು ಟೋಕಿಯೊದಲ್ಲಿ ತ್ರಿವರ್ಣವನ್ನು ಹೊತ್ತುಕೊಂಡು ನಿಮ್ಮ ಕೈಲಾದಷ್ಟು ಮಾಡಿದಾಗ, ನೀವು ಕೇವಲ ಪದಕಗಳನ್ನು ಗೆಲ್ಲುವುದಲ್ಲದೆ, ಭಾರತದ ಸಂಕಲ್ಪಗಳನ್ನು ಬಹಳ ದೂರಕ್ಕೆ ಕೊಂಡೊಯ್ಯಲಿದ್ದೀರಿ, ನೀವು ಅದಕ್ಕೆ ಹೊಸ ಶಕ್ತಿಯನ್ನು ನೀಡಲಿದ್ದೀರಿ, ನೀವು ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗಲಿದ್ದೀರಿ . ನಿಮ್ಮ ಧೈರ್ಯ, ನಿಮ್ಮ ಉತ್ಸಾಹ ಟೋಕಿಯೊದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಈ ನಂಬಿಕೆಯೊಂದಿಗೆ, ಮತ್ತೊಮ್ಮೆ ನಿಮ್ಮೆಲ್ಲರಿಗೂ ಅನೇಕ ಶುಭಾಶಯಗಳು. ಬಹಳ ಧನ್ಯವಾದಗಳು!
ಸೂಚನೆ: ಇದು ಪ್ರಧಾನಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.
***
(Release ID: 1748148)
Visitor Counter : 272
Read this release in:
Assamese
,
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam