ಉಪರಾಷ್ಟ್ರಪತಿಗಳ ಕಾರ್ಯಾಲಯ

ಸಂಸತ್ತು ಮತ್ತು ರಾಜ್ಯ ಶಾಸಕಾಂಗ ಅಧಿವೇಶನಗಳಲ್ಲಿ  ಅಡೆತಡೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು


ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಅನುಚಿತ ಘಟನೆಗಳಿಂದ ನೋವಾಗಿದೆ: ಉಪರಾಷ್ಟ್ರಪತಿ

ಸಾರ್ವಜನಿಕ ಪ್ರತಿನಿಧಿಗಳು "ಅನುಕರಣೀಯ ವ್ಯಕ್ತಿ" ಗಳಾಗಿ ಕಾರ್ಯನಿರ್ವಹಿಸಬೇಕು ಮತ್ತು ಸಾರ್ವಜನಿಕ ಜೀವನದಲ್ಲಿ ಗುಣಮಟ್ಟವನ್ನು ಹೆಚ್ಚಿಸಬೇಕು: ಉಪರಾಷ್ಟ್ರಪತಿ

ರಾಷ್ಟ್ರದ ಪ್ರಗತಿಯನ್ನು ವೇಗಗೊಳಿಸಲು ಆವಿಷ್ಕಾರಗಳನ್ನು ಮಾಡುವಂತೆ ಯುವ ಪೀಳಿಗೆಗೆ ಉಪರಾಷ್ಟ್ರಪತಿ ಕರೆ

ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ವಿನೂತನ ಮಾರ್ಗಗಳಿಗೆ ಉಪರಾಷ್ಟ್ರಪತಿ ಕರೆ

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ ‘ಸರ್. ಎಂ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಉಪರಾಷ್ಟ್ರಪತಿ

ಆಧುನಿಕ ಭಾರತದ ಪ್ರಖ್ಯಾತ ನಿರ್ಮಾತೃ-ಎಂಜಿನಿಯರ್ ಶ್ರೀ ವಿಶ್ವೇಶ್ವರಯ್ಯ ಅವರಿಗೆ ಗೌರವ ನಮನ ಸಲ್ಲಿಸಿದ ಉಪರಾಷ್ಟ್ರಪತಿ

Posted On: 18 AUG 2021 3:43PM by PIB Bengaluru

ಸಂಸತ್ತು ಮತ್ತು ರಾಜ್ಯ ಶಾಸಕಾಂಗ ಅಧಿವೇಶನಗಳಲ್ಲಿ  ಆಗುತ್ತಿರುವ ಅಡಚಣೆಗಳ ಬಗ್ಗೆ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಇಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮತ್ತು ಯುವ ಪೀಳಿಗೆಗೆ ಮಾದರಿಯಾಗುವಂತೆ ಜನಪ್ರತಿನಿಧಿಗಳು "ಅನುಕರಣೀಯ ವ್ಯಕ್ತಿ" ಗಳಾಗಿ ಕಾರ್ಯನಿರ್ವಹಿಸುವಂತೆ ಅವರು ಕರೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಎಂ.ಎಸ್. ರಾಮಯ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಎಂ. ಆರ್. ಜಯರಾಮ್ ಅವರಿಗೆ "ಸರ್ ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿಯನ್ನು" ಪ್ರದಾನ ಮಾಡಿ ಮಾತನಾಡಿದ ರಾಜ್ಯ ಸಭೆಯ ಸಭಾಪತಿಗಳೂ ಆಗಿರುವ ಉಪರಾಷ್ಟ್ರಪತಿಯವರು, ಇತ್ತೀಚೆಗೆ ಸಂಸತ್ತಿನಲ್ಲಿ ಹಾಗೂ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಕೆಲವು ಶಾಸಕಾಂಗ ಸಭೆಗಳ ಅಧಿವೇಶನಗಳಲ್ಲಿ ನಡೆದ ಅನುಚಿತ ಘಟನೆಗಳಿಂದ  ತಮಗೆ ತೀವ್ರ ಬೇಸರವಾಗಿದೆ ಎಂದು ಹೇಳಿದರು. ಸಂಸತ್ತಿನಲ್ಲಿ ಇತ್ತೀಚೆಗೆ ನಡೆದ ದುರದೃಷ್ಟಕರ ಘಟನೆಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ ಶ್ರೀ ನಾಯ್ಡು, ಕೆಲವು ಸದಸ್ಯರ ಅನುಚಿತ ನಡವಳಿಕೆಯಿಂದಾಗಿ ತಮಗೆ ದುಃಖವಾಗಿದೆ ಎಂದು ಹೇಳಿದರು.

ಕೆಲವು ಸಂಸದರ ಕಲಾಪಕ್ಕೆ ಅಡ್ಡಿಪಡಿಸುವ ನಡವಳಿಕೆಯನ್ನು ಒಪ್ಪದ ಶ್ರೀ ನಾಯ್ಡು, ರಾಜ್ಯ ವಿಧಾನಸಭೆಗಳು ಮತ್ತು ಸಂಸತ್ತುಗಳಿರುವುದು ಚರ್ಚಿಸಲು, ಪರ್ಯಾಲೋಚಿಸಲು ಮತ್ತು ನಿರ್ಧಾರ ಕೈಗೊಳ್ಳಲು ಇರುವುದೇ ಹೊರತು, ಅಡ್ಡಿಪಡಿಸಲು ಅಲ್ಲ ಎಂದು ಹೇಳಿದರು. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವಾಗ ಜನರ ತೀರ್ಪನ್ನು ಗೌರವಿಸಬೇಕು ಎಂದು ಅವರು ಹೇಳಿದರು. "ನೀವು ಯಾರನ್ನೂ ಒತ್ತಾಯಿಸುವುದು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ಜನ ಪ್ರತಿನಿಧಿಗಳು ವಿವಿಧ ಹಂತಗಳಲ್ಲಿ, ವಿವಿಧ ಸ್ಥಾನಗಳಲ್ಲಿ ಚರ್ಚೆ ಮತ್ತು ಚರ್ಚೆಯ ಗುಣಮಟ್ಟವನ್ನು ಸುಧಾರಿಸಬೇಕು ಎಂದ ಉಪರಾಷ್ಟ್ರಪತಿಯವರು, ಭವಿಷ್ಯದಲ್ಲಿ ಇದು ಸುಧಾರಿಸುವ ಭರವಸೆಯನ್ನು ವ್ಯಕ್ತಪಡಿಸಿದರು.

ಸರ್. ಎಂ. ವಿಶ್ವೇಶ್ವರಯ್ಯ ಅವರಂತಹ ಮಹಾನ್ ವ್ಯಕ್ತಿಗಳಿಂದ ಸ್ಫೂರ್ತಿ ಪಡೆಯುವ ಮೂಲಕ, ರಾಷ್ಟ್ರದ ಪ್ರಗತಿಯನ್ನು ವೇಗಗೊಳಿಸಲು ಯುವ ಪೀಳಿಗೆ ಹೊಸ ಆವಿಷ್ಕಾರಗಳು ಮತ್ತು ವಿನೂತನ ಆಲೋಚನೆಗಳನ್ನು ಮಾಡಬೇಕು ಎಂದು ಉಪರಾಷ್ಟ್ರಪತಿಯು ಕರೆ ಕೊಟ್ಟರು. ಬಡತನವನ್ನು ನಿವಾರಿಸಲು, ಪ್ರಾದೇಶಿಕ ಅಸಮಾನತೆಗಳನ್ನು ಹೋಗಲಾಡಿಸಲು ಮತ್ತು ತಮ್ಮ ಆಯ್ಕೆಯ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಯುವಕರು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಶ್ರೀ ವಿಶ್ವೇಶ್ವರಯ್ಯನವರಿಗೆ ಗೌರವ ನಮನಗಳನ್ನು ಸಲ್ಲಿಸಿದ ಅವರು, ಅವರನ್ನು 'ಆಧುನಿಕ ಭಾರತದ ಪ್ರಖ್ಯಾತ ನಿರ್ಮಾತೃ-ಎಂಜಿನಿಯರ್' ಎಂದು ಶ್ಲಾಘಿಸಿದರು. ಮೈಸೂರಿನ ಕೃಷ್ಣರಾಜ ಸಾಗರ ಅಣೆಕಟ್ಟು ಮತ್ತು ಹೈದರಾಬಾದ್‌ನ ಪ್ರವಾಹ ಸಂರಕ್ಷಣಾ ವ್ಯವಸ್ಥೆಯಂತಹ ಅಪ್ರತಿಮ ಯೋಜನೆಗಳನ್ನು ವಿನ್ಯಾಸಗೊಳಿಸುವಲ್ಲಿ ವಿಶ್ವೇಶ್ವರಯ್ಯನವರ ಕೊಡುಗೆಯನ್ನು ಸ್ಮರಿಸಿದ ಉಪರಾಷ್ಟ್ರಪತಿಯವರು, ಪ್ರತಿ ವರ್ಷ ನಾವು ಅವರ ಜನ್ಮ ದಿನಾಚರಣೆಯನ್ನುಎಂಜಿನಿಯರ್ಸ್ ಡೇಆಗಿ ಆಚರಿಸುತ್ತಿರುವುದು ಅವರ ಇಂಜಿನಿಯರಿಂಗ್ ಪ್ರತಿಭೆಗೆ ಸಲ್ಲಿಸುತ್ತಿರುವ ಗೌರವವಾಗಿದೆ ಎಂದರು.

ಮೈಸೂರಿನ ದಿವಾನರಾಗಿ ಶ್ರೀ ವಿಶ್ವೇಶ್ವರಯ್ಯನವರು ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಸೋಪ್ ಫ್ಯಾಕ್ಟರಿ ಮತ್ತು ಮೈಸೂರು ಚೇಂಬರ್ ಆಫ್ ಕಾಮರ್ಸ್‌ನಂತಹ ಅನೇಕ ಮಹತ್ವದ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ತೋರಿದ ದೂರದೃಷ್ಟಿಯನ್ನು ಉಪರಾಷ್ಟ್ರಪತಿಯವರು ಸ್ಮರಿಸಿದರು. ಸ್ವಾತಂತ್ರ್ಯಕ್ಕೂ ಮುಂಚೆಯೇ, ಭಾರತದಲ್ಲಿ ನಮ್ಮ ಕೈಗಾರಿಕೀಕರಣದ ಚಳುವಳಿಯನ್ನು ಶ್ರೀ ವಿಶ್ವೇಶ್ವರಯ್ಯನವರು ಮುನ್ನಡೆಸಿದರು ಎಂದು ಅವರು ಹೇಳಿದರು.

ಅವರ ಬಹುಮುಖ ವ್ಯಕ್ತಿತ್ವದ ಬಗ್ಗೆ ಮಾತನಾಡಿದ ಉಪರಾಷ್ಟ್ರಪತಿಯವರು,"ಶ್ರೀ ಎಂ.. ವಿಶ್ವೇಶ್ವರಯ್ಯನವರು ಆಧುನಿಕ ಭಾರತದ ಸಾಮರ್ಥ್ಯ, ಆಕಾಂಕ್ಷೆ ಮತ್ತು ಪ್ರತಿಭೆಯ ಸಾಕಾರರೂಪವಾಗಿದ್ದರು. " ಎಂದು ಹೇಳಿದರು.

ಎಂ.ಎಸ್. ರಾಮಯ್ಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಅಧ್ಯಕ್ಷ ಡಾ.ಎಂ..ಆರ್..ಜಯರಾಮ್ ಅವರಿಗೆಸರ್ ಎಂ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿಯನ್ನು ಪ್ರದಾನ ಮಾಡಿದ ಶ್ರೀ ನಾಯ್ಡು ಅವರು ಎಂ.ಎಸ್. ರಾಮಯ್ಯ ಸಮೂಹ ಸಂಸ್ಥೆಗಳನ್ನು ರೋಮಾಂಚಕ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸುವಲ್ಲಿ ಅವರ ಸಮರ್ಪಣೆ ಮತ್ತು ಶ್ರಮವನ್ನು ಶ್ಲಾಘಿಸಿದರು. ರಾಜ್ಯದಲ್ಲಿ ನಾವೀನ್ಯತೆ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡುತ್ತಿರುವ ಎಫ್‌ಕೆಸಿಸಿಐ ಅನ್ನು ಅವರು ಶ್ಲಾಘಿಸಿದರು.

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕರ್ನಾಟಕ ರಾಜ್ಯಪಾಲರಾದ ಶ್ರೀ ತಾವರ್‌ಚಂದ್ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಲೋಕಸಭಾ ಸದಸ್ಯ ಶ್ರೀ ಪಿ ಸಿ ಮೋಹನ್, ಎಫ್‌ಕೆಸಿಸಿಐ ಅಧ್ಯಕ್ಷ ಶ್ರೀ ಪೆರಿಕಲ್ ಎಂ. ಸುಂದರ್ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಎಫ್‌ಕೆಸಿಸಿಐನ ಶ್ರೀ ಎಂ ವಿ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ ಗೌರವಾನ್ವಿತ ಉಪ ರಾಷ್ಟ್ರಪತಿಯವರ ಭಾಷಣ:

ಆತ್ಮೀಯ ಸೋದರಿಯರೇ ಮತ್ತು ಸೋದರರೇ,

ಭಾರತದ ಹೆಮ್ಮೆಯ ಪುತ್ರರಲ್ಲಿ ಒಬ್ಬರಾದ ಶ್ರೀ ಎಂ.ವಿಶ್ವೇಶ್ವರಯ್ಯನವರ ಸ್ಮರಣಾರ್ಥ ಇರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತನಿರುವುದು ನನಗೆ ಬಹು ದೊಡ್ಡ ಗೌರವವಾಗಿದೆ.

ಭಾರತ ರತ್ನ, ‘ಆಧುನಿಕ ಮೈಸೂರಿನ ಪಿತಾಮಹಮತ್ತು ಪ್ರಖ್ಯಾತ ಸಿವಿಲ್ ಎಂಜಿನಿಯರ್, ಬಹುಮುಖಿ ವ್ಯಕ್ತಿತ್ವದ  ಶ್ರೀ ಎಂ.ವಿಶ್ವೇಶ್ವರಯ್ಯನವರು ಆಧುನಿಕ ಭಾರತದ ಸಾಮರ್ಥ್ಯ, ಆಕಾಂಕ್ಷೆ ಮತ್ತು ಪ್ರತಿಭೆಯ ಸಾಕಾರರೂಪವಾಗಿದ್ದವರು. ಸಂದರ್ಭದಲ್ಲಿ  ನಮ್ಮ ರಾಷ್ಟ್ರದ ಅಗ್ರಗಣ್ಯ ನಿರ್ಮಾಪಕರಲ್ಲಿ ಒಬ್ಬರಾಗಿ ಅವರು ಸಲ್ಲಿಸಿದ ಶ್ರೇಷ್ಠ ಸೇವೆಯನ್ನು ನಾನು ವಿನಮ್ರನಾಗಿ ಸ್ಮರಿಸುತ್ತಿದ್ದೇನೆ ಮತ್ತು  ಅವರಿಗೆ ನನ್ನ ಗೌರವವನ್ನು ಸಲ್ಲಿಸುತ್ತಿದ್ದೇನೆ.

ಶ್ರೀ ಎಂ.ವಿಶ್ವೇಶ್ವರಯ್ಯನವರು ಒಬ್ಬ ಪ್ರಖ್ಯಾತ ಎಂಜಿನಿಯರ್ ಆಗಿ, ಮೈಸೂರಿನಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು, ಹೈದರಾಬಾದ್‌ನಲ್ಲಿ ಪ್ರವಾಹ ಸಂರಕ್ಷಣಾ ವ್ಯವಸ್ಥೆಯ ವಿನ್ಯಾಸ ಮತ್ತು ವಿಶಾಖಪಟ್ಟಣಂ ಬಂದರಿನಲ್ಲಿ ಸವಕಳಿ ರಕ್ಷಣೆಯಂತಹ ಅನೇಕ ಪ್ರಮುಖ ಸಾಧನೆಗಳ ನಡುವೆ ಹಲವಾರು ಮಹತ್ವದ ಯೋಜನೆಗಳ ಯೋಜನೆ ಮತ್ತು ಅನುಷ್ಠಾನಗಳ ಶ್ರೇಯ ಪಡೆದಿದ್ದಾರೆ. ತಮ್ಮ ತೊಂಬತ್ತನೇ ವಯಸ್ಸಿನಲ್ಲಿಯೂ ಅವರು ಭಾರತ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಲು ವಿನ್ಯಾಸಗೊಳಿಸುವುದು ಮತ್ತು ಬಗ್ಗೆ ಸರ್ಕಾರಗಳಿಗೆ ತಾಕೀತು ಮಾಡುತ್ತಿದ್ದದ್ದು ಅದ್ಭುತವಾದುದು. ಪ್ರತಿ ವರ್ಷ ನಾವು ಅವರ ಜನ್ಮ ದಿನವನ್ನು 'ಇಂಜಿನಿಯರ್ಸ್ ಡೇ' ಎಂದು ಆಚರಿಸುವುದು ಅವರ ಎಂಜಿನಿಯರಿಂಗ್ ಪ್ರತಿಭೆಗೆ ಸಂದ ಗೌರವವಾಗಿದೆ.

ಮೈಸೂರಿನ ಮುಖ್ಯ ಎಂಜಿನಿಯರ್ ಆಗಿ ಮತ್ತು ನಂತರ ಮೈಸೂರಿನ ದಿವಾನರಾಗಿ, ಶ್ರೀ ಎಂ.ವಿಶ್ವೇಶ್ವರಯ್ಯನವರು ಒಬ್ಬ ಮಹಾನ್ ದಾರ್ಶನಿಕ ಮತ್ತು ರಾಷ್ಟ್ರನಾಯಕರಾಗಿದ್ದರು. ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಮೈಸೂರು ಸಾಬೂನು ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರುನಂತಹ ಹಲವಾರು ಮಹತ್ವದ ಸಂಸ್ಥೆಗಳನ್ನು ಅವರು ಸ್ಥಾಪಿಸಿದರು. ಅವರು ಮೈಸೂರು ಚೇಂಬರ್ ಆಫ್ ಕಾಮರ್ಸ್ ಅನ್ನು ಸ್ಥಾಪಿಸಿದರು, ನಂತರ ಅದೀಗ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗಳ ಒಕ್ಕೂಟ ಎಂದು ಹೆಸರಾಗಿರುವ ಸಂಸ್ಥೆಯಾಗಿ ವಿಕಸನಗೊಂಡಿದೆ,

ಶ್ರೀ ಎಂ.ವಿಶ್ವೇಶ್ವರಯ್ಯನವರ ಆರಂಭದ ದಿನಗಳಿಂದಲೇ, ಅವರಲ್ಲಿದ್ದ ನಾವೀನ್ಯತೆ ಬಗೆಗಿನ ಒಲವು ಮತ್ತು ಭಾರತವನ್ನು ಆಧುನೀಕರಿಸುವ ಮಹಾನ್ ದೇಶಭಕ್ತಿಯ ಉತ್ಸಾಹವನ್ನು ನಾವು ನೋಡುತ್ತೇವೆ. ಅವರು ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಬಲ ಪ್ರತಿಪಾದಕರಾಗಿದ್ದರು ಮತ್ತು ನಮ್ಮ ಸ್ವಾತಂತ್ರ್ಯಕ್ಕೆ ಮುಂಚೆಯೇ ಭಾರತದಲ್ಲಿ ಕೈಗಾರಿಕೀಕರಣಕ್ಕಾಗಿ ಚಳುವಳಿಯನ್ನು ಕೈಗೊಂಡರು. "ಕೈಗಾರಿಕೀಕರಣ ಮಾಡಿ ಅಥವಾ ನಾಶವಾಗಿ!" ಎಂಬುದು ಕೈಗಾರಿಕೀಕರಣವನ್ನು ಸಮರ್ಥಿಸುವ ಅವರ ಪ್ರಸಿದ್ಧ ಹೇಳಿಕೆಯಾಗಿದೆ.

ಸ್ನೇಹಿತರೇ,

ಶ್ರೀ ಎಂ.ವಿಶ್ವೇಶ್ವರಯ್ಯನವರು ಅಸಾಧಾರಣ ಸಾಮರ್ಥ್ಯದ ಪ್ರತಿಭೆ. ಇದು ಅವರ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ವ್ಯವಸ್ಥೆಗಳ ದಕ್ಷತೆಯನ್ನು ಸುಧಾರಿಸುವ ಅವರ ಸ್ಪಷ್ಟ ಪ್ರಯತ್ನಗಳಲ್ಲಿ ಪ್ರತಿಫಲಿಸುತ್ತದೆ. ಅವರು ಅದ್ಭುತವಾದ ಯಶಸ್ಸನ್ನು ವಿನ್ಯಾಸಗೊಳಿಸಿದರು, ನವೀಕರಿಸಿದರು ಮತ್ತು ಎಲ್ಲೆಡೆ ಪುನರಾವರ್ತಿಸಿದರು. ಶ್ರೀ ಎಂ.ವಿಶ್ವೇಶ್ವರಯ್ಯನವರ ನಿರಂತರ ಆವಿಷ್ಕಾರದ ಮನೋಭಾವವನ್ನು ನಾನು ಒತ್ತಿ ಹೇಳಲು ಬಯಸುತ್ತೇನೆ, ಅದು ಅವರನ್ನು ಅವರದೇ ಆದ ಒಂದು ಲೀಗ್‌ನಲ್ಲಿ ಇರಿಸಿದೆ ಮತ್ತು ಆಧುನಿಕ ಭಾರತದ ಪ್ರಖ್ಯಾತ ನಿರ್ಮಾತೃ-ಎಂಜಿನಿಯರ್ ಆಗಿ ಮಾಡಿದೆ.

ಅವರ ಕುತೂಹಲ ಪ್ರವೃತ್ತಿ ಮತ್ತು ಹೊಸತನಕ್ಕೆ ತುಡಿಯುವ ಮನಸ್ಸಿಗೆ ಒಂದು ನಿದರ್ಶನ ಭಾರತದಲ್ಲಿ ನೀರಿನ ನಿರ್ವಹಣೆಯ ಕುರಿತಾದ ಅವರ ಹೆಸರಾಂತ ಕೆಲಸದಲ್ಲಿ ಕಂಡುಬರುತ್ತದೆ. ನೀರಿನ ಸಂರಕ್ಷಣೆಯ ಬಗ್ಗೆ ಅಪಾರ ಕಾಳಜಿಯಿದ್ದ ಶ್ರೀ ಎಂ.ವಿಶ್ವೇಶ್ವರಯ್ಯನವರು 1903 ರಲ್ಲಿ ಪುಣೆ ಸಮೀಪದ ಖಡಕ್ವಾಸ್ಲಾ ಜಲಾಶಯದಲ್ಲಿ ಸ್ವಯಂಚಾಲಿತ ಅಣೆಕಟ್ಟೆ ತೂಬುಗಳ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದರು ಮತ್ತು ಪೇಟೆಂಟ್ ಪಡೆದರು. ಗೇಟ್‌ಗಳು ಅಣೆಕಟ್ಟಿಗೆ ಹಾನಿಯಾಗದಂತೆ ಜಲಾಶಯದ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಿವೆ. ಅವರ ಯಶಸ್ಸು ಬೇರೆ ಕಡೆಗಳಲ್ಲಿಯೂ ಪುನರಾವರ್ತನೆಯಾಯಿತು. ಗ್ವಾಲಿಯರ್ ಬಳಿಯ ತಿಗ್ರಾ ಅಣೆಕಟ್ಟು ಮತ್ತು ಮೈಸೂರು ಸಮೀಪದ ಕೃಷ್ಣ ರಾಜ ಸಾಗರ ಅಣೆಕಟ್ಟಿನಲ್ಲೂ ಇದನ್ನು ಅಳವಡಿಸಲಾಯಿತು. ಅವರು ಏಡೆನ್ (ಯೆಮೆನ್), ಕೊಲ್ಹಾಪುರ, ಇಂದೋರ್, ಗ್ವಾಲಿಯರ್, ಭೋಪಾಲ್, ನಾಗ್ಪುರ, ಗೋವಾ, ರಾಜಕೋಟ್, ಭಾವನಗರ, ಬರೋಡಾ, ಸಾಂಗ್ಲಿ ಮತ್ತು ಬಿಹಾರ ಮತ್ತು ಒಡಿಶಾದಾದ್ಯಂತ ನೀರು ಸರಬರಾಜು ವ್ಯವಸ್ಥೆಗಳ ಕುರಿತು ತಮ್ಮ ವೃತ್ತಿಪರ ಸಲಹೆಯನ್ನು ವಿನ್ಯಾಸಗೊಳಿಸಿದರು ಮತ್ತು ನೀಡಿದರು. ಅವರ ಕೊಡುಗೆಗಳು ನೀರಿನಂತಹ ವಿರಳ ನೈಸರ್ಗಿಕ ಸಂಪನ್ಮೂಲವನ್ನು ಸಂರಕ್ಷಿಸಿವೆ ಮತ್ತು ನೀರಾವರಿ ಮತ್ತು ವಿದ್ಯುತ್ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ನಮಗೆ ಸಹಾಯ ಮಾಡಿವೆ. ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ತಿರುಮಲ ದೇಗುಲಕ್ಕೆ ಮೊದಲ ಘಾಟ್ ರಸ್ತೆಯ ನಿರ್ಮಾಣದ ಸಮಯದಲ್ಲಿ ತಮ್ಮ ಪರಿಣತಿಯನ್ನು ನೀಡಿದ್ದರು ಎಂದು ಹೇಳಲಾಗಿದೆ. ಒಬ್ಬ ವ್ಯಕ್ತಿಯ ಜಾಣ್ಮೆ ನಿಜಕ್ಕೂ ರಾಷ್ಟ್ರದ ಭವಿಷ್ಯವನ್ನು ಬದಲಾಯಿಸಬಹುದು ಎಂಬುದನ್ನು ಶ್ರೀ ವಿಶ್ವೇಶ್ವರಯ್ಯನವರು ತಮ್ಮ ದೂರದೃಷ್ಟಿಯಿಂದ ಸ್ಪಷ್ಟವಾಗಿ ಸಾಬೀತುಪಡಿಸಿದರು.

ಸ್ನೇಹಿತರೇ,

'ನವ ಭಾರತ'ವನ್ನು ನಿರ್ಮಿಸಲು ಹೊರಟಿರುವ ನಮಗೀಗ ಬೇಕಿರುವುದು ರೀತಿಯ ಉದ್ಯಮಶೀಲತೆ ಮತ್ತು ನಾವೀನ್ಯ ಮನೋಭಾವ.  ‘ಸುಧಾರಣೆ, ಆಚರಣೆ ಮತ್ತು ಬದಲಾವಣೆ' ಎಂಬ ಮಂತ್ರವನ್ನು ಕಾರ್ಯರೂಪಕ್ಕೆ ತರಲು ಮತ್ತು ಜನರ ಜೀವನವನ್ನು ಮತ್ತು ಆರ್ಥಿಕತೆಯನ್ನು ಸುಧಾರಿಸಲು ನಾವು ಪ್ರಯತ್ನಿಸುತ್ತಿರುವಾಗ ಇದರವಶ್ಯಕತೆ ಇದೆ. ಇದಕ್ಕಾಗಿ, ನಾವು ಚಿಕ್ಕ ವಯಸ್ಸಿನಿಂದಲೇ ನಮ್ಮ ಯುವಕರಲ್ಲಿ ನಾವೀನ್ಯತೆ ಮತ್ತು ಸೃಜನಶೀಲತೆಯ ಸಂಸ್ಕೃತಿಯನ್ನು ಬೆಳೆಸಬೇಕಾಗಿದೆ. ಶಾಲಾ ಶಿಕ್ಷಣವು ಮಕ್ಕಳನ್ನು ಅನ್ವೇಷಣೆಯ ಪಯಣಕ್ಕೆ ಕರೆದೊಯ್ಯಬೇಕು. ಬೋಧನೆ-ಕಲಿಕೆಯ ಪ್ರಕ್ರಿಯೆಯು ಅಟಲ್ ಟಿಂಕರಿಂಗ್ ಲ್ಯಾಬ್‌ಗಳ ರೀತಿಯಲ್ಲಿ ಪ್ರಯೋಗಗಳ ಮೂಲಕ ಅವರಲ್ಲಿ ಕುತೂಹಲವನ್ನು ಜಾಗೃತಗೊಳಿಸಬೇಕು ಮತ್ತು ಬೆಳೆಸಬೇಕು. ಕಾಲೇಜುಗಳು ನಾವೀನ್ಯತೆ ಕೇಂದ್ರಗಳನ್ನು ಹೊಂದಿರಬೇಕು, ಅಲ್ಲಿ ವಿದ್ಯಾರ್ಥಿಗಳು ಮೂಲಮಾದರಿಗಳನ್ನು ನಿರ್ಮಿಸುವ ಮೂಲಕ ತಮ್ಮ ಆಲೋಚನೆಗಳನ್ನು ಪರೀಕ್ಷಿಸಬಹುದು. ಅಂತೆಯೇ, ಕಂಪನಿಗಳು ಕೂಡ ಸಂಶೋಧನೆ ಮತ್ತು ಅಭಿವೃದ್ದಿ (ಆರ್ & ಡಿ) ಯಲ್ಲಿ ಹೆಚ್ಚು ಹೂಡಿಕೆ ಮಾಡಬೇಕು ಮತ್ತು ತಮ್ಮ ಉದ್ಯೋಗಿಗಳಲ್ಲಿ ಹೊಸತನವನ್ನು ಪ್ರೋತ್ಸಾಹಿಸಬೇಕು.

ಆತ್ಮೀಯ ಸಹೋದರಿಯರೇ ಮತ್ತು ಸಹೋದರರೇ,

ಜಾಗತಿಕ ಸಹಕಾರ ಹೆಚ್ಚಿಸುವ ಮತ್ತು ಹವಾಮಾನ ಬದಲಾವಣೆಯನ್ನು ತಗ್ಗಿಸುವ ಕ್ರಮಗಳ ದೃಷ್ಟಿಯಿಂದ ಮುಂದಿನ ಕೆಲವು ವರ್ಷಗಳು ಬಹಳ ನಿರ್ಣಾಯಕವಾಗಲಿವೆ. ಸನ್ನಿವೇಶದಲ್ಲಿ, ನಮ್ಮ ಆರ್ಥಿಕತೆ ಮತ್ತು ಜೀವನಶೈಲಿಯನ್ನು ಹೆಚ್ಚು ಸುಸ್ಥಿರಗೊಳಿಸುವ ಮಾರ್ಗಗಳ ಕುರಿತು ನಾವು ಯೋಚಿಸಬೇಕಾಗಿದೆ. ಸೀಮಿತ ಸಂಪನ್ಮೂಲಗಳೊಂದಿಗೆ ಹೆಚ್ಚಿನದನ್ನು ಮಾಡುವುದು ಮತ್ತು 'ಮರುಬಳಕೆಯ ಆರ್ಥಿಕತೆ' ಕಡೆಗೆ ಹೋಗುವುದು ಮುಂದಿನ ಮಾರ್ಗವಾಗಿದೆ. ಹವಾಮಾನ ಬದಲಾವಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ, 'ಸುಸ್ಥಿರತೆಯು ನಾವೀನ್ಯತೆಯನ್ನು ಬಯಸುತ್ತದೆ'.

ನಮ್ಮ ಇಂಗಾಲದ ಹೊರಸೂಸುವಿಕೆಯನ್ನು  ಕಡಿಮೆ ಮಾಡಲು ಮತ್ತು ನಮ್ಮ ಸಂಪನ್ಮೂಲಗಳನ್ನು ಮರುಬಳಕೆ ಮಾಡಲು ನಾವು ಹೊಸತನದ ಮಾರ್ಗಗಳನ್ನು ಕಂಡುಕೊಳ್ಳಬೇಕು. ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್, ನೀತಿ ಆಯೋಗ ಮತ್ತು ಅಟಲ್ ಇನ್ನೋವೇಶನ್ ಮಿಷನ್ ಮತ್ತು ಸ್ಟಾರ್ಟ್ ಅಪ್ ಇಂಡಿಯಾದಂತಹ ಸಂಸ್ಥೆಗಳು ಭಾರತದಲ್ಲಿ ನಾವೀನ್ಯ ಸಂಸ್ಕೃತಿಯನ್ನು ಸುಧಾರಿಸಲು ಕೆಲಸ ಮಾಡುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಜಾಗತಿಕ ವೇದಿಕೆಯಲ್ಲಿ ನಮ್ಮ ಬಹು ದೊಡ್ಡ ಶಕ್ತಿಯಾದ ನಮ್ಮ ಮಾನವ ಸಾಮರ್ಥ್ಯದಲ್ಲಿ ಹೂಡಿಕೆ ಮಾಡಬೇಕಾಗಿದೆ.

ನಮ್ಮ ಯುವಜನರನ್ನು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಪರಿಣತರನ್ನಾಗಿ ಮಾಡಲು ಅವರ ಕೌಶಲ್ಯದ ಉನ್ನತೀಕರಣವು ಇಂದಿನ ಅಗತ್ಯವಾಗಿದೆ. ಕೌಶಲ್ಯ ಅಭಿವೃದ್ಧಿಯಲ್ಲಿ ಸರ್ಕಾರದ ಪ್ರಯತ್ನಗಳು ಉದ್ಯಮದ ಖಾಸಗಿ ಉಪಕ್ರಮಗಳಿಗೆ ಪೂರಕವಾಗಿರಬೇಕು.

ಅಂತಿಮವಾಗಿ, ತಳಮಟ್ಟದಿಂದ ಹೊಸತನಗಳನ್ನು ಗುರುತಿಸುವ, ಪ್ರೋತ್ಸಾಹಿಸುವ, ಪೋಷಿಸುವ ಮತ್ತು ಹೆಚ್ಚಿಸುವ ಮೂಲಕ ನಾವೀನ್ಯತೆಯನ್ನು ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾಗುವಂತೆ ಮಾಡುವ ಮೂಲಕ ರಾಷ್ಟ್ರೀಯ ಧ್ಯೇಯದೊಂದಿಗೆ ಕೈ ಜೋಡಿಸುವಂತೆ ನಮ್ಮ ಖಾಸಗಿ ವಲಯ ಮತ್ತು ಎಫ್‌ಕೆಸಿಸಿಐನಂತಹ ಉದ್ಯಮ ಸಂಸ್ಥೆಗಳಿಗೆ ನಾನು ಕರೆ ನೀಡುತ್ತೇನೆ. ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 'ಆತ್ಮನಿರ್ಭರ ಭಾರತ್' ದೃಷ್ಟಿಕೋನವನ್ನು ಸಾಧಿಸುವಲ್ಲಿ ಮಹತ್ವದ್ದಾಗಿದೆ.

ನಾವೀನ್ಯತೆಯನ್ನು ಪ್ರೋತ್ಸಾಹಿಸುವ ಇಂತಹ ಪ್ರಯತ್ನಗಳ ಫಲವಾಗಿ, ಜನವರಿ 2021 ರಲ್ಲಿ ನೀತಿ ಆಯೋಗವು ಬಿಡುಗಡೆ ಮಾಡಿದ ಭಾರತ ನಾವೀನ್ಯತಾ ಸೂಚ್ಯಂಕ 2020 ರಲ್ಲಿ 'ಪ್ರಮುಖ ರಾಜ್ಯಗಳು' ವಿಭಾಗದಲ್ಲಿ ಕರ್ನಾಟಕವು ದೇಶದ ಅತ್ಯಂತ ನವೀನ ರಾಜ್ಯವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿರುವುದಕ್ಕೆ ಸಂತೋಷವಾಗಿದೆ. ನಿಟ್ಟಿನಲ್ಲಿ, ನಾನು ರಾಜ್ಯ ಸರ್ಕಾರ, ಉದ್ಯಮದ ನಾಯಕರು ಮತ್ತು ಎಲ್ಲ ಪಾಲುದಾರರನ್ನು ಅಭಿನಂದಿಸುತ್ತೇನೆ.

ಅಂತೆಯೇ, ಭಾರತದಲ್ಲಿ ನಾವೀನ್ಯತೆ ಪರಿಸರ ವ್ಯವಸ್ಥೆಯು ಸುಧಾರಣೆಯಾಗುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (ಡಬ್ಲ್ಯುಐಪಿಒ) ವಾರ್ಷಿಕವಾಗಿ ಪ್ರಕಟಿಸುವ ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ (ಜಿಐಐ), ಭಾರತವು 2020 ರಲ್ಲಿ ವಿಶ್ವದ 48 ನೇ ಅತ್ಯಂತ ನವೀನ ರಾಷ್ಟ್ರವಾಗಿ ಸ್ಥಾನ ಪಡೆದಿದೆ, ಮೊದಲ ಬಾರಿಗೆ ಅಗ್ರ 50 ರಾಷ್ಟ್ರಗಳನ್ನು ಪ್ರವೇಶಿಸಿದೆ. ಮುಂದಿನ ದಿನಗಳಲ್ಲಿ ನಾವೀನ್ಯತೆಗಾಗಿ ಅಗ್ರ ಹತ್ತು ಜಾಗತಿಕ ತಾಣಗಳಲ್ಲಿ ಒಂದಾಗುವ ಗುರಿಯನ್ನು ನಾವು ಹೊಂದಬೇಕು.

ಸೋದರಿಯರೇ, ಸೋದರರೇ,

ಶ್ರೀ ವಿಶ್ವೇಶ್ವರಯ್ಯನವರ ಜೀವನದಿಂದ ಕಲಿಯಲು ಮತ್ತು ಅನುಕರಿಸಲು ನಮಗೆ ಬಹಳಷ್ಟು ಇದೆ. ಅವರ ಆಲೋಚನೆಗಳು ಮತ್ತು ಉದ್ಯಮಶೀಲತಾ ಮನೋಭಾವವು ಅವರ ಕಾಲದಲ್ಲಿ ಮಾತ್ರ ಕ್ರಾಂತಿಕಾರಿಯಾಗಿರಲಿಲ್ಲ, ಈಗಿನ ಸಂದರ್ಭದಲ್ಲೂ ಭಾರತಕ್ಕೆ ಬಹಳ ಪ್ರಸ್ತುತವಾಗಿದೆ. ಡಿಆರ್‌ಡಿಒ, ಇಸ್ರೋ ಮತ್ತು ಫಾರ್ಮಾ ಉದ್ಯಮದಂತಹ ಸಂಸ್ಥೆಗಳಲ್ಲಿನ ನಮ್ಮ ವಿಜ್ಞಾನಿಗಳಿಗೆ ತಮ್ಮ ಅತ್ಯುತ್ತಮ ಕೊಡುಗೆ ನೀಡಲು ಮತ್ತು ಬಾಹ್ಯಾಕಾಶ ಅಥವಾ ಲಸಿಕೆ ಅಭಿವೃದ್ಧಿಯಂತಹ ಮುಂದುವರಿದ ಕ್ಷೇತ್ರಗಳಲ್ಲಿ ಹೊಸ ಗಡಿಗಳನ್ನು ಅನ್ವೇಷಿಸಲು ಇದೇ ಪ್ರೇರಣೆಯಾಗಿದೆ. ಒಂದು ರಾಷ್ಟ್ರವಾಗಿ, ನಾವು ನೀತಿ ಮತ್ತು ನೈತಿಕ ಬೆಂಬಲದ ಮೂಲಕ ಅವರ ಪರವಾಗಿ ನಿಲ್ಲಬೇಕು.

ಶ್ರೀ.ಎಂ.ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗಳ ಒಕ್ಕೂಟ (ಎಫ್‌ಕೆಸಿಸಿಐ) ಹೊಸತನವನ್ನು ಪ್ರೋತ್ಸಾಹಿಸುತ್ತಿದೆ ಮತ್ತು ರಾಜ್ಯದಲ್ಲಿ 105 ವರ್ಷಗಳಿಂದ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡುತ್ತಿದೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ವ್ಯಾಪಾರ ಮತ್ತು ಉದ್ಯಮವನ್ನು ಉತ್ತೇಜಿಸುವುದರಲ್ಲಿ ಮಾತ್ರವಲ್ಲ, ವಿದ್ಯಾರ್ಥಿ ಸಮುದಾಯದಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸಲು 'ಮಂಥನ್' ನಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಸಾಮಾಜಿಕ ಕಾರಣಗಳಿಗಾಗಿ ಎಫ್‌ಕೆಸಿಸಿಐ ಅನ್ನು ನಾನು ಅಭಿನಂದಿಸುತ್ತೇನೆ.

ಸಂದರ್ಭದಲ್ಲಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ಸಾಮಾಜಿಕ ಮತ್ತು ಜನೋಪಯೋಗಿ ಚಟುವಟಿಕೆಗಳಲ್ಲಿನ ಕೊಡುಗೆಗಾಗಿ ಶ್ರೀ ಎಂ ವಿಶ್ವೇಶ್ವರಯ್ಯನವರ ಸ್ಮರಣಾರ್ಥ ಪ್ರಶಸ್ತಿಯನ್ನು ಎಂ.ಎಸ್ ರಾಮಯ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಆರ್. ಜಯರಾಮ್ ಅವರಿಗೆ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ. ಅವರು ತಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ, ಎಂಜಿನಿಯರಿಂಗ್, ವೈದ್ಯಕೀಯ, ನರ್ಸಿಂಗ್, ಡೆಂಟಲ್, ಕಾನೂನು ಮತ್ತು ನಿರ್ವಹಣೆ ಸೇರಿದಂತೆ ವಿವಿಧ ಸಂಸ್ಥೆಗಳ ಎಂ.ಎಸ್. ರಾಮಯ್ಯ ಸಮೂಹ ಸಂಸ್ಥೆಗಳನ್ನು ರೋಮಾಂಚಕ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸಿದ್ದಾರೆ.

ಡಾ ಎಂ ಆರ್ ಜಯರಾಮ್ ಅವರ ತಂದೆ, ದಿವಂಗತ ಶ್ರೀ ರಾಮಯ್ಯನವರು ಅದ್ಭುತವಾದ ಪ್ರಚಂಡ ಸ್ಫೂರ್ತಿಯ ಚಿಲುಮೆ. ಕಷ್ಟಕರ ಸನ್ನಿವೇಶಗಳಿಂದಾಗಿ ತಮ್ಮ ಶಿಕ್ಷಣವನ್ನು ತ್ಯಜಿಸಬೇಕಾದ ಅವರು, ಪ್ರತಿಕೂಲತೆಯನ್ನು ಅವಕಾಶವಾಗಿ ಪರಿವರ್ತಿಸಿ ಯಶಸ್ವಿ ಉದ್ಯಮಿಯಾದವರು. ಒಬ್ಬ ವ್ಯಕ್ತಿಯ ಜೀವನವನ್ನು ರೂಪಿಸುವಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ತೀವ್ರವಾಗಿ ಅರಿತುಕೊಂಡ ಅವರು, 1962 ರಲ್ಲಿ ಎಂ ಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಸ್ಥಾಪಿಸಿದರು. ನಂತರ, ಅವರು ವಿವಿಧ ವಿಷಯಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಶಿಕ್ಷಣ ಸಂಸ್ಥೆಗಳ ಸರಣಿಯನ್ನು ಸ್ಥಾಪಿಸಿದರು.

ಮತ್ತೊಮ್ಮೆ, ಇಂದು ಎಫ್‌ಕೆಸಿಸಿಐನ ಶ್ರೀ ಎಂ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಮ್ಮೆಲ್ಲರೊಂದಿಗೆ ಇರುವುದಕ್ಕೆ ನನಗೆ ಸಂತೋಷವಾಗಿದೆ.

ಕರ್ನಾಟಕವನ್ನು ವ್ಯಾಪಾರ ಮತ್ತು ಉದ್ಯಮದಲ್ಲಿ ದೇಶದಲ್ಲೇ ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯವನ್ನಾಗಿಸಲು ಮತ್ತು ರಾಜ್ಯವನ್ನು ಹೂಡಿಕೆಗೆ ಅನುಕೂಲಕರ ತಾಣವನ್ನಾಗಿ ಮಾಡಲು ರಾಜ್ಯ ಸರ್ಕಾರ ಮತ್ತು ಎಫ್‌ಕೆಸಿಸಿಐ ಮಾಡುತ್ತಿರುವ ಪ್ರಯತ್ನಗಳಿಗೆ ನನ್ನ ಶುಭಾಶಯಗಳು. ಎಫ್‌ಕೆಸಿಸಿಐನ ಎಲ್ಲಾ ಪದಾಧಿಕಾರಿಗಳು ಮತ್ತು ಸಿಬ್ಬಂದಿಗೆ ನನ್ನ ಶುಭಕಾಮನೆಗಳು.

ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು.

ಜೈ ಹಿಂದ್!

***



(Release ID: 1746977) Visitor Counter : 285