ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಟೋಕಿಯೊ 2020 ಪ್ಯಾರಾಲಿಂಪಿಕ್ ಕ್ರೀಡಾಕೂಟದ 54 ಸದಸ್ಯರ ಅತಿದೊಡ್ಡ ಭಾರತ ತಂಡಕ್ಕೆ ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರಿಂದ ಔಪಚಾರಿಕ ವರ್ಚುವಲ್ ಬೀಳ್ಕೊಡುಗೆ

Posted On: 12 AUG 2021 6:55PM by PIB Bengaluru

ಪ್ರಮುಖ ಅಂಶಗಳು:

  • ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ 54 ಸದಸ್ಯರ ಭಾರತೀಯ ತಂಡಕ್ಕೆ ಇಂದು ಔಪಚಾರಿಕ ಬೀಳ್ಕೊಡುಗೆ
  • ಇದು ಯಾವುದೇ ಪ್ಯಾರಾಲಿಂಪಿಕ್‌ಗೆ ಭಾರತ ಕಳುಹಿಸುತ್ತಿರುವ ಅತಿ ದೊಡ್ಡ ತಂಡವಾಗಿದೆ

ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ 54 ಸದಸ್ಯರ ಅತಿದೊಡ್ಡ ಭಾರತೀಯ ತಂಡಕ್ಕೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಇಂದು ಔಪಚಾರಿಕ ವರ್ಚುವಲ್ ಬೀಳ್ಕೊಡುಗೆ ನೀಡಿದರು. ಶ್ರೀ ಅನುರಾಗ್ ಠಾಕೂರ್ ಅವರು ವಿಡಿಯೋ ಸಂದೇಶದ ಮೂಲಕ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಪ್ರವಾಸೋದ್ಯಮ ಸಚಿವ ಶ್ರೀ ಜಿ ಕೆ ರೆಡ್ಡಿ ಮತ್ತು ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ ಅವರು ಕೂಡ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದರು.

ಬೀಳ್ಕೊಡುಗೆ ಸಮಾರಂಭದಲ್ಲಿ, ಶ್ರೀ ಅನುರಾಗ್ ಠಾಕೂರ್  ಮಾತನಾಡಿ,  "ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಭಾರತವು ತನ್ನ ಅತಿದೊಡ್ಡ ತಂಡವನ್ನು ಕಳುಹಿಸುತ್ತಿದೆ. 9 ಕ್ರೀಡಾ ವಿಭಾಗಗಳಲ್ಲಿ 54 ಪ್ಯಾರಾ-ಕ್ರೀಡಾಪಟುಗಳು ಇದರಲ್ಲಿದ್ದಾರೆ. ನಮ್ಮ ಪ್ಯಾರಾ-ಕ್ರೀಡಾಪಟುಗಳ ಉತ್ಸಾಹ ಅವರ ಅದ್ಭುತ ಮಾನವ ಚೈತನ್ಯವನ್ನು ತೋರಿಸುತ್ತದೆ. ನೀವು ಭಾರತಕ್ಕಾಗಿ ಆಡುವಾಗ 130 ಕೋಟಿ ಭಾರತೀಯರು ನಿಮ್ಮನ್ನು ಹುರಿದುಂಬಿಸುತ್ತಾರೆ ಎಂಬುದನ್ನು ನೆನಪಿಡಿ! ನಮ್ಮ ಪ್ಯಾರಾ-ಕ್ರೀಡಾಪಟುಗಳು ಅತ್ಯುತ್ತಮವಾದ ಪ್ರದರ್ಶನ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ! ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಿಯೋ 2016 ಪ್ಯಾರಾಲಿಂಪಿಕ್ ಕ್ರೀಡಾಪಟುಗಳನ್ನು ಭೇಟಿ ಮಾಡಿದ್ದರು ಮತ್ತು ನಮ್ಮ ಕ್ರೀಡಾಪಟುಗಳ ಕಲ್ಯಾಣಕ್ಕಾಗಿ ಯಾವಾಗಲೂ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ದೇಶಾದ್ಯಂತ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಪ್ರತಿಭೆಯನ್ನು ಪೋಷಿಸುವ ಬಗ್ಗೆ ಸರ್ಕಾರದ ವಿಧಾನದ ಬಗ್ಗೆ ಗಮನ ಕೇಂದ್ರೀಕರಿಸಿದ್ದಾರೆ. ನಮ್ಮ ಕ್ರಿಡಾಪಟುಗಳಿಗೆ ಶುಭ ಹಾರೈಸುತ್ತೇನೆ! " ಎಂದು ಹೇಳಿದರು.

ಪ್ರವಾಸೋದ್ಯಮ ಸಚಿವ, ಜಿ ಕೆ ರೆಡ್ಡಿ ಮಾತನಾಡಿ, "ಇಡೀ ರಾಷ್ಟ್ರದ ಹಾರೈಕೆ ಕ್ರೀಡಾಪಟುಗಳಿಗೆ ಇದೆ ಮತ್ತು ಟೋಕಿಯೊದಲ್ಲಿ ರಾಷ್ಟ್ರಧ್ವಜ ಮತ್ತೆ ಹಾರಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರಿ, ತನ್ನ ದೇಶಕ್ಕೆ ಹೆಮ್ಮೆ ತರುವುದು ಪ್ರತಿಯೊಬ್ಬ ಆಟಗಾರನ ಕನಸಾಗಿದೆ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಪಟುಗಳು ಕನಸನ್ನು ಈಡೇರಿಸುವ ನಂಬಿಕೆ ತಮಗಿದೆಎಂದರು. ಸರ್ಕಾರವು ಯಾವಾಗಲೂ ಕ್ರೀಡಾಪಟುಗಳನ್ನು ಬೆಂಬಲಿಸುತ್ತದೆ ಎಂದ ಸಚಿವರು 2014 ರಲ್ಲಿ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಿಒಪಿಎಸ್) ಪರಿಕಲ್ಪನೆ ರೂಪಿಸಿದ ಪ್ರಧಾನಿಯವರ ದೂರದೃಷ್ಟಿಯನ್ನು ಪ್ರಶಂಸಿಸಬೇಕಾಗಿದೆ ಎಂದರು.

ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿ, "ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಎಲ್ಲಾ ದಿವ್ಯಾಂಗ ಸಹೋದರರು, ಸಹೋದರಿಯರು ಮತ್ತು ಮಕ್ಕಳು ಒಂದು ಭಾರತದ ಭಾಗವಾಗಿದ್ದಾರೆ ಮತ್ತು ನಾವೆಲ್ಲರೂ ಒಟ್ಟಿಗೆ ಇದ್ದೇವೆ. ಭಾರತವು ವಿಶ್ವಾಸದಿಂದ 75 ನೇ ವರ್ಷದ ಸ್ವಾತಂತ್ರ್ಯದತ್ತ ಸಾಗುತ್ತಿರುವಾಗ, ಪ್ಯಾರಾಲಿಂಪಿಕ್ ಕ್ರೀಡಾಪಟುಗಳು ಸಹ ಅದೇ ವಿಶ್ವಾಸದಿಂದ ಮುನ್ನಡೆಯುತ್ತಿದ್ದಾರೆಎಂದರು. ಕ್ರೀಡಾಪಟುಗಳ ಜೊತೆಯಲ್ಲಿ ವಿಜಯದ ಚಿಹ್ನೆಯನ್ನು ತೋರಿಸುವ ಮೂಲಕ ಅವರ ಉತ್ಸಾಹವನ್ನು ಹೆಚ್ಚಿಸಿದರು.

ಭಾರತದ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷೆ ದೀಪಾ ಮಲಿಕ್ ಮಾತನಾಡಿ, "ಪ್ರತಿಯೊಬ್ಬರೂ ತುಂಬಾ ಶ್ರಮವಹಿಸಿದ್ದಾರೆ ಮತ್ತು ನಾವು ಟೋಕಿಯೊ 2020 ರಲ್ಲಿ ಅದ್ಭುತ ಸ್ಪರ್ಧೆಯನ್ನು ಎದುರು ನೋಡುತ್ತಿದ್ದೇವೆ ಮತ್ತು ನಾವು ತ್ರಿವರ್ಣ ಧ್ವಜಕ್ಕೆ ಹೆಚ್ಚಿನ ವೈಭವ, ಕೀರ್ತಿಯನ್ನು ತರುತ್ತೇವೆ ಎಂಬ ವಿಶ್ವಾಸವಿದೆ" ಎಂದು ಹೇಳಿದರು. ಪ್ಯಾರಾಲಿಂಪಿಕ್ ಸಮಿತಿಯ ಶ್ರೀ ಗುರುಶರಣ್ ಸಿಂಗ್ ಮತ್ತು ಶ್ರೀ ಅಶೋಕ್ ಬೇಡಿ ಕೂಡ ಸಂದರ್ಭದಲ್ಲಿ ಹಾಜರಿದ್ದರು.

ಭಾರತದ 54 ಕ್ರೀಡಾಪಟುಗಳು ಬಿಲ್ಲುಗಾರಿಕೆ, ಅಥ್ಲೆಟಿಕ್ಸ್ (ಟ್ರ್ಯಾಕ್ ಮತ್ತು ಫೀಲ್ಡ್), ಬ್ಯಾಡ್ಮಿಂಟನ್, ಈಜು, ವೇಟ್ ಲಿಫ್ಟಿಂಗ್ ಸೇರಿದಂತೆ 9 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಇದು ಭಾರತವು ಯಾವುದೇ ಪ್ಯಾರಾಲಿಂಪಿಕ್ಸ್‌ಗೆ ಕಳುಹಿಸುತ್ತಿರುವ ಅತಿದೊಡ್ಡ ತಂಡವಾಗಿದೆ.

#ICheer4India

***



(Release ID: 1745485) Visitor Counter : 203