ಪ್ರಧಾನ ಮಂತ್ರಿಯವರ ಕಛೇರಿ

‘ಆತ್ಮನಿರ್ಭರ ನಾರಿಶಕ್ತಿ ಸೆ ಸಂವಾದ’ದಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳೊಂದಿಗೆ ಪ್ರಧಾನಮಂತ್ರಿ ಸಂವಾದ


ಕೊರೊನಾ ಸಮಯದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಮಹಿಳಾ ಸ್ವ-ಸಹಾಯ ಗುಂಪುಗಳ ಕಾರ್ಯಕ್ಕೆ ಶ್ಲಾಘನೆ

ನಮ್ಮ ಸಹೋದರಿಯರು ಎಲ್ಲ ಗ್ರಾಮಗಳು ಸಮೃದ್ಧಿ ಮತ್ತು ಏಳಿಗೆಯ ಜೊತೆ ಸಂಪರ್ಕಿಸುವಂತಹ ವಾತಾವರಣ ಮತ್ತು ನಿರ್ಮಿಸಲು ಸರ್ಕಾರ ನಿರಂತರ ಪ್ರಯತ್ನ : ಪ್ರಧಾನಮಂತ್ರಿ

ಭಾರತದಲ್ಲಿ ತಯಾರಿಸಿದ ಆಟಿಕೆಗಳನ್ನು ಉತ್ತೇಜಿಸಲು ಸ್ವ-ಸಹಾಯ ಗುಂಪುಗಳಿಗೆ ಸಾಕಷ್ಟು ಸಾಮರ್ಥ್ಯವಿದೆ: ಪ್ರಧಾನಮಂತ್ರಿ

ಸುಮಾರು 4 ಲಕ್ಷ ಸ್ವ-ಸಹಾಯ ಗುಂಪುಗಳಿಗೆ 1625 ಕೋಟಿ ರೂ. ಮೌಲ್ಯದ ಮೂಲ ಬಂಡವಾಳ ನೆರವು ಬಿಡುಗಡೆ ಮಾಡಿದ ಪ್ರಧಾನಮಂತ್ರಿ

ಆಹಾರ ಸಂಸ್ಕರಣಾ ಸಚಿವಾಲಯ ಪಿಎಂಎಫ್ಎಂಇ(ಪಿಎಂ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳ ಔಪಚಾರಿಕೀಕರಣ) ಯೋಜನೆಯಡಿ 7500 ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ 25 ಕೋಟಿ ಮೂಲ ಬಂಡವಾಳ ಮತ್ತು ಮಿಷನ್ ಅಡಿಯಲ್ಲಿ 75 ಎಫ್ ಪಿಒಗಳಿಗೆ(ರೈತ ಉತ್ಪನ್ನ ಸಂಸ್ಥೆ) 4.13 ಕೋಟಿ ರೂಪಾಯಿ ಬಿಡುಗಡೆ

Posted On: 12 AUG 2021 3:09PM by PIB Bengaluru

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಆತ್ಮನಿರ್ಭರ ನಾರಿಶಕ್ತಿ ಸೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ) ಅಡಿಯಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳು(ಎಸ್ಎಚ್ ಜಿ) ಸದಸ್ಯರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಕಾರ್ಯಕ್ರಮದ ವೇಳೆ ದೇಶಾದ್ಯಂತ ಎಲ್ಲಾ ಭಾಗಗಳ ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರ ಯಶೋಗಾಥೆಗಳನ್ನು ಒಳಗೊಂಡ ಸಂಕಲನ ಮತ್ತು ಕೃಷಿ ಜೀವನೋಪಾಯ ಸಾರ್ವತ್ರೀಕರಣ ಕುರಿತ ಕೈಪಿಡಿಯನ್ನು ಪ್ರಧಾನಮಂತ್ರಿ ಬಿಡುಗಡೆ ಮಾಡಿದರು.

 

 ಪ್ರಧಾನಮಂತ್ರಿ ಅವರು, ಇದೇ ವೇಳೆ ಸುಮಾರು 4 ಲಕ್ಷ ಸ್ವಸಹಾಯ ಗುಂಪುಗಳಿಗೆ 1625 ಕೋಟಿ ರೂಪಾಯಿ ನಗದು ನೆರವಿನ ನಿಧಿಯನ್ನು ಬಿಡುಗಡೆ ಮಾಡಿದರು. ಅಲ್ಲದೆ ಅವರು ಆಹಾರ ಸಂಸ್ಕರಣಾ ಸಚಿವಾಲಯದ ಪಿಎಂಎಫ್ಎಂಇ(ಪಿಎಂ-ಸಣ್ಣ ಆಹಾರ ಸಂಸ್ಕರಣಾ ಉದ್ಯಮ ಔಪಚಾರಿಕೀಕರಣ) ಯೋಜನೆಯಡಿ 7500 ಸ್ವಸಹಾಯ ಗುಂಪುಗಳಿಗೆ 25 ಕೋಟಿ ರೂಪಾಯಿ ಮೂಲ ಬಂಡವಾಳ ಮತ್ತು 75 ಎಫ್ ಪಿಒ(ರೈತ ಉತ್ಪನ್ನ ಸಂಸ್ಥೆಗಳಿಗೆ 4.13 ಕೋಟಿ ರೂಪಾಯಿ ನಿಧಿಯನ್ನು ಬಿಡುಗಡೆ ಮಾಡಿದರು.

 

ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಗಿರಿರಾಜ್ ಸಿಂಗ್; ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಶ್ರೀ ಪಶುಪತಿ ಕುಮಾರ್ ಪಾರಸ್; ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವರಾದ ಸಾಧ್ವಿ ನಿರಂಜನ್ ಜ್ಯೋತಿ ಮತ್ತು ಶ್ರೀ ಫಗ್ಗನ್ ಸಿಂಗ್ ಕುಲಸ್ತೆ; ಪಂಚಾಯತ್ ರಾಜ್ ಸಹಾಯಕ ಸಚಿವರಾದ  ಕಪಿಲ್ ಮೋರೇಶ್ವರ ಪಾಟೀಲ್ ಮತ್ತು ಆಹಾರ ಸಂಸ್ಕರಣ ಕೈಗಾರಿಕೆಗಳ ಸಚಿವಾಲಯದ ಸಹಾಯಕ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಉಪಸ್ಥಿತರಿದ್ದರು.

 

 ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಕೊರೊನಾ ಅವಧಿಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಮಹಿಳಾ ಸ್ವ-ಸಹಾಯ ಗುಂಪುಗಳ ಕಾರ್ಯವನ್ನು ಶ್ಲಾಘಿಸಿದರು. ಮಾಸ್ಕ್ ಗಳು ಮತ್ತು ಸ್ಯಾನಿಟೈಸರ್ ಒದಗಿಸುವಲ್ಲಿ ಅಸಮಾನ್ಯ ಕೊಡುಗೆಯನ್ನು ನೀಡಿವೆ ಮತ್ತು ಅಗತ್ಯವಿರುವವರಿಗೆ ಆಹಾರ ಒದಗಿಸುವುದು ಮತ್ತು ಜಾಗೃತಿ ಮೂಡಿಸಲು ಸಹ ಶ್ರಮಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು. 

 

 ಮಹಿಳೆಯರಲ್ಲಿ ಉದ್ಯಮಶೀಲತೆಯ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಆತ್ಮನಿರ್ಭರ ಭಾರತ ಸಂಕಲ್ಪದಲ್ಲಿ ಮಹಿಳೆಯರು ಹೆಚ್ಚಾಗಿ ಉದ್ಯಮಿಗಳಾಗುವುದನ್ನು ಬೆಂಬಿಸಲು, ರಕ್ಷಾಬಂಧನದ ಮುನ್ನಾ ದಿನವಾದ ಇಂದು ನಾಲ್ಕು ಲಕ್ಷಕ್ಕೂ ಅಧಿಕ ಸ್ವ-ಸಹಾಯ ಗುಂಪುಗಳಿಗೆ ಆರ್ಥಿಕ ನೆರವನ್ನು ನೀಡಲಾಗಿದೆ ಎಂದರು. ಸ್ವ-ಸಹಾಯ ಗುಂಪುಗಳು ಮತ್ತು ದೀನ್ ದಯಾಳ್ ಅಂತ್ಯೋದಯ ಯೋಜನೆ ಗ್ರಾಮೀಣ ಭಾರತದಲ್ಲಿ ಹೊಸ ಕ್ರಾಂತಿಯನ್ನುಂಟುಮಾಡಿದೆ ಎಂದು ಅವರು ಹೇಳಿದರು. ಮಹಿಳಾ ಸ್ವ-ಸಹಾಯ ಸಂಘಗಳ ಈ ಚಳವಳಿ ಕಳೆದ ಆರೇಳು ವರ್ಷಗಳಲ್ಲಿ ತೀವ್ರಗೊಂಡಿದೆ ಎಂದು ಅವರು ಹೇಳಿದರು. ಇಂದು ದೇಶಾದ್ಯಂತ 70 ಲಕ್ಷ ಸ್ವ-ಸಹಾಯ ಗುಂಪುಗಳಿವೆ. ಕಳೆದ ಆರೇಳು ವರ್ಷಗಳಲ್ಲಿ ಇವುಗಳ ಸಂಖ್ಯೆ 3 ಪಟ್ಟು ಅಧಿಕವಾಗಿದೆ.

 

ಈ ಸರ್ಕಾರಕ್ಕೂ ಮುನ್ನ  ಕೋಟ್ಯಾಂತರ ಸಹೋದರಿಯರಿಗೆ ಬ್ಯಾಂಕ್ ಖಾತೆ ಇರಲಿಲ್ಲ, ಅವರು ಬ್ಯಾಂಕಿಂಗ್ ವ್ಯವಸ್ಥೆಯಿಂದ ಮೈಲುಗಟ್ಟಲೆ ದೂರವಿದ್ದರು ಎಂದು ಪ್ರಧಾನಮಂತ್ರಿ ನೆನಪುಮಾಡಿಕೊಂಡರು.  ಆದ್ದರಿಂದ ಸರ್ಕಾರ ಜನ್-ಧನ್ ಖಾತೆಗಳನ್ನು ಆರಂಭಿಸುವ ಬಹುದೊಡ್ಡ ಅಭಿಯಾನವನ್ನು ಕೈಗೆತ್ತಿಕೊಂಡಿತು ಎಂದು ಅವರು ಹೇಳಿದರು. ಇಂದು 42 ಕೋಟಿಗೂ ಅಧಿಕ ಜನ್-ಧನ್ ಖಾತೆಗಳಿವೆ. ಆ ಪೈಕಿ ಶೇಕಡ 55ರಷ್ಟು ಖಾತೆಗಳು ಮಹಿಳೆಯರದ್ದಾಗಿವೆ ಎಂದು ಹೇಳಿದರು. ಬ್ಯಾಂಕ್ ನಿಂದ ಸಾಲ ಪಡೆಯುವುದನ್ನು ಸುಲಭಗೊಳಿಸಲು ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು ಎಂದು ಅವರು ಹೇಳಿದರು.

 

ರಾಷ್ಟ್ರೀಯ ಜೀವನೋಪಾಯ ಮಿಷನ್ ಅಡಿ ಈ ಸಹೋದರಿಯರಿಗೆ ಸರ್ಕಾರ ಆರ್ಥಿಕ ನೆರವನ್ನು ನೀಡುತ್ತಿದೆ. ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ಆ ನೆರವು ಹಲವು ಪಟ್ಟು ಹೆಚ್ಚಾಗಿದೆ ಎಂದರು. ಸ್ವ-ಸಹಾಯ ಗುಂಪುಗಳಿಗೆ ಸುಮಾರು 4 ಲಕ್ಷ ಕೋಟಿ ರೂಪಾಯಿವರೆಗೆ ಭದ್ರತೆರಹಿತ ಸಾಲವನ್ನು ಲಭ್ಯವಾಗುವಂತೆ ಮಾಡಲಾಗಿದೆ. ಕಳೆದ 7 ವರ್ಷಗಳಲ್ಲಿ ಸ್ವ-ಸಹಾಯ ಗುಂಪುಗಳು ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡುವ ಮೂಲಕ ಉತ್ತಮ ಕೆಲಸವನ್ನು ಮಾಡಿವೆ. ಬ್ಯಾಂಕುಗಳ ನಿರುಪಯುಕ್ತ ಸಾಲ ಶೇ.9ರಷ್ಟು ಇದ್ದ ಕಾಲವೊಂದಿತ್ತು. ಇದೀಗ ಆ ಪ್ರಮಾಣ ಶೇ.2 ರಿಂದ 3ಕ್ಕೆ ಇಳಿಕೆಯಾಗಿದೆ. ಅದಕ್ಕಾಗಿ ಸ್ವ-ಸಹಾಯ ಗುಂಪುಗಳ ಮಹಿಳೆಯರ ಪ್ರಮಾಣಿಕತೆ ಬಗ್ಗೆ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

 

ಇದೀಗ ಸ್ವ-ಸಹಾಯ ಗುಂಪುಗಳಿಗೆ ಗ್ಯಾರಂಟಿ ರಹಿತ ಸಾಲದ ಮಿತಿಯನ್ನು 20 ಲಕ್ಷ ರೂಪಾಯಿವರೆಗೆ ಹೆಚ್ಚಿಸಿ ದುಪ್ಪಟ್ಟುಗೊಳಿಸಲಾಗಿದೆ ಎಂದು ಪ್ರಧಾನಮಂತ್ರಿ ಪ್ರಕಟಿಸಿದರು. ನಿಮ್ಮ ಉಳಿತಾಯ ಖಾತೆಗಳನ್ನು ಸಾಲ ಖಾತೆಯೊಂದಿಗೆ ಸಂಯೋಜಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಅಂತಹ ಹಲವು ಕ್ರಮಗಳ ಮೂಲಕ ಸ್ವಾವಲಂಬನೆಯ ಅಭಿಯಾನದಲ್ಲಿ ಇನ್ನೂ ಹೆಚ್ಚಿನ ಉತ್ಸಾಹದೊಂದಿಗೆ ಪಾಲ್ಗೊಂಡು ಮುಂಚೂಣಿಗೆ ಬರಬೇಕೆಂದು ಕರೆ ನೀಡಿದರು.

 

ಇದು 75ನೇ ಸ್ವಾತಂತ್ರ್ಯೋತ್ಸವದ ಸಮಯವಾಗಿದೆ ಪ್ರಧಾನಮಂತ್ರಿ ಹೇಳಿದರು. ಇದೀಗ ಹೊಸ ಗುರಿಗಳನ್ನು ನಿಗದಿಪಡಿಸುವ ಸಮಯ ಮತ್ತು ಹೊಸ ಶಕ್ತಿಯೊಂದಿಗೆ ಮುನ್ನಡೆಯಬೇಕಾಗಿದೆ. ನಮ್ಮ ಸಹೋದರಿಯರ ಸಾಮೂಹಿಕ ಶಕ್ತಿ ಕೂಡ ಹೊಸ ಸಾಮರ್ಥ್ಯದೊಂದಿಗೆ ಮುನ್ನಡೆಯಬೇಕಿದೆ. ನಮ್ಮ ಸಹೋದರಿಯರು ತಮ್ಮ ಸಮೃದ್ಧಿ ಮತ್ತು ಏಳಿಗೆಯೊಂದಿಗೆ ಗ್ರಾಮಗಳನ್ನು ಬೆಸೆಯುವಂತಹ ಸ್ಥಿತಿ ಹಾಗೂ ಪರಿಸರ ನಿರ್ಮಾಣಕ್ಕೆ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದರು.

 

ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಅಪರಿಮಿತ ಸಾಧ್ಯತೆಗಳಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಸ್ವ-ಸಹಾಯ ಗುಂಪುಗಳು ಕೂಡ ವಿಶೇಷ ನಿಧಿಯನ್ನು ಸ್ಥಾಪಿಸಲಾಗಿದ್ದು, ಸ್ವ-ಸಹಾಯ ಗುಂಪುಗಳು ಕೂಡ ಆ ನಿಧಿಯ ನೆರವು ಪಡೆದು, ಕೃಷಿ ಆಧಾರಿತ ಸೌಕರ್ಯಗಳನ್ನು ಸೃಷ್ಟಿಸಬಹುದಾಗಿದೆ ಎಂದರು. ಈ ಸೌಕರ್ಯಗಳ ಪ್ರಯೋಜನವನ್ನು ಎಲ್ಲ ಸದಸ್ಯರು ಪಡೆದುಕೊಳ್ಳಬೇಕಾಗಿದೆ. ಅವರು ಸೂಕ್ತ ದರವನ್ನು ನಿಗದಿಪಡಿಸಬಹುದು ಮತ್ತು ಇತರರಿಗೂ ಬಾಡಿಗೆ ನೀಡಬಹುದು.

 

ನೂತನ ಕೈಗಾರಿಕಾ ಸುಧಾರಣೆಗಳಿಂದ ಕೇವಲ ನಮ್ಮ ರೈತರಿಗೆ ಮಾತ್ರ ಲಾಭವಾಗುವುದಿಲ್ಲ, ಸ್ವ-ಸಹಾಯ ಗುಂಪುಗಳಿಗೂ ಕೂಡ ಸೀಮಾತೀತ ಸಾಧ್ಯತೆಗಳು ಸೃಷ್ಟಿಯಾಗಲಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಸ್ವ-ಸಹಾಯ ಗುಂಪುಗಳು ಇದೀಗ ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸಬಹುದು ಮತ್ತು ಬೇಳೆ-ಕಾಳು ಸೇರಿದಂತೆ ಇತರ ಆಹಾರಧಾನ್ಯಗಳನ್ನು ನೇರವಾಗಿ ಮನೆಗಳಿಗೆ ತಲುಪಿಸಬಹುದು ಎಂದರು.

 

ಇದೀಗ ಆಹಾರ ಧಾನ್ಯಗಳನ್ನು ದಾಸ್ತಾನು ಮಾಡಿಕೊಳ್ಳಲು ಯಾವುದೇ ಮಿತಿ ಇಲ್ಲ. ಸ್ವ-ಸಹಾಯ ಗುಂಪುಗಳು ಕೃಷಿ ತೋಟಗಳಿಂದ ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು ಅಥವಾ ಆಹಾರ ಸಂಸ್ಕರಣಾ ಘಟಕವನ್ನು ಸ್ಥಾಪಿಸಬಹುದು ಮತ್ತು ಉತ್ತಮ ರೀತಿಯಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡಲು ಆಯ್ಕೆಗಳಿವೆ. ಆನ್ ಲೈನ್ ಕಂಪನಿಗಳೊಂದಿಗೆ ಸಹಭಾಗಿತ್ವ ಸಾಧಿಸುವ ಮೂಲಕ ಸ್ವ-ಸಹಾಯ ಗುಂಪು ಉತ್ತಮ ಪ್ಯಾಕೆಟ್ ಗಳ ಮೂಲಕ ತಮ್ಮ ಉತ್ಪನ್ನಗಳನ್ನು ನಗರಗಳಿಗೆ ಸುಲಭವಾಗಿ ಸಾಗಿಸಬಹುದು ಎಂದು ಅವರು ಸಲಹೆ ಮಾಡಿದರು.

 

ಭಾರತದಲ್ಲಿ ತಯಾರಿಸಿದ ಆಟಿಕೆಗಳಿಗೆ ಸರ್ಕಾರ ಉತ್ತೇಜನ ನೀಡುತ್ತಿದೆ ಮತ್ತು ಇದಕ್ಕಾಗಿ ಸಾಧ್ಯವಾದ ಎಲ್ಲ ನೆರವನ್ನು ನೀಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಿಶೇಷವಾಗಿ ನಮ್ಮ ಬುಡಕಟ್ಟ ಪ್ರದೇಶಗಳ ಸಹೋದರಿಯರು ಸಾಂಪ್ರದಾಯಿಕವಾಗಿ ಇದರ ಜೊತೆ ಬೆಸೆದುಕೊಂಡಿದ್ದಾರೆ. ಇದರಲ್ಲೂ ಕೂಡ ಸ್ವ-ಸಹಾಯ ಗುಂಪುಗಳಿಗೆ ಸಾಕಷ್ಟು ಅವಕಾಶವಿದೆ ಎಂದು ಹೇಳಿದರು.

 

ಇಂದು ದೇಶವನ್ನು ಏಕ ಬಳಕೆ(ಸಿಂಗಲ್ ಯೂಸ್ ಪ್ಲಾಸ್ಟಿಕ್- ಒಮ್ಮೆಲೆ ಬಳಸಿ ಬಿಸಾಡುವ) ಪ್ಲಾಸ್ಟಿಕ್ ಮುಕ್ತಗೊಳಿಸುವ ಅಭಿಯಾನ ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದರಲ್ಲಿ ಸ್ವ-ಸಹಾಯ ಗುಂಪುಗಳು ದ್ವಿಪಾತ್ರವಹಿಸಬೇಕಾಗಿದೆ. ಸ್ವ-ಸಹಾಯ ಗುಂಪುಗಳು, ಬಿಡಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಪರ್ಯಾಯಗಳತ್ತ ಕಾರ್ಯೋನ್ಮುಖವಾಗಬೇಕು ಎಂದು ಕರೆ ನೀಡಿದರು. ಸ್ವ-ಸಹಾಯ ಗುಂಪುಗಳು ಆನ್ ಲೈನ್ ಸರ್ಕಾರಿ ಇ-ಮಾರುಕಟ್ಟೆ ತಾಣದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಇಂದಿನ ಪರಿವರ್ತನೆಯಾಗುತ್ತಿರುವ ಭಾರತದಲ್ಲಿ ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ಮುಂದುವರಿಯಲು ಹೆಚ್ಚು ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದರು.

 

ನಮ್ಮ ಎಲ್ಲ ಸಹೋದರಿಯರಿಗೆ ಮನೆ, ಶೌಚಾಲಯ, ವಿದ್ಯುಚ್ಛಕ್ತಿ, ನೀರು ಮತ್ತು ಅನಿಲ ಮತ್ತಿತರ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಸರ್ಕಾರ ಶಿಕ್ಷಣ, ಆರೋಗ್ಯ, ಪೌಷ್ಟಿಕಾಂಶ, ಲಸಿಕೆ ಹಾಗೂ ಇತರ ಅಗತ್ಯಗಳನ್ನು ಪೂರೈಸಲು ಗಂಭೀರವಾಗಿ ಕಾರ್ಯೋನ್ಮುಖವಾಗಿದೆ. ಇದರಿಂದಾಗಿ ಮಹಿಳೆಯರ ಘನತೆ ಮಾತ್ರ ಹೆಚ್ಚಾಗಿರುವುದೇ ಅಲ್ಲದೆ, ನಮ್ಮ ಹೆಣ್ಣು ಮಕ್ಕಳು ಮತ್ತು ಸಹೋದರಿಯರ ವಿಶ್ವಾಸವೂ ಹೆಚ್ಚಾಗಿದೆ. 

 

ಸ್ವ-ಸಹಾಯ ಗುಂಪುಗಳು, ರಾಷ್ಟ್ರ ನಿರ್ಮಾಣದ ತಮ್ಮ ಪ್ರಯತ್ನಗಳನ್ನು ಅಮೃತ ಮಹೋತ್ಸವದ ಜತೆ ಸಂಯೋಜಿಸಬೇಕು ಎಂದು ಪ್ರಧಾನಮಂತ್ರಿ ಕರೆ ನೀಡಿದರು. 8 ಕೋಟಿಗೂ ಅಧಿಕ ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಸಾಮೂಹಿಕ ಶಕ್ತಿ ಅಮೃತ ಮಹೋತ್ಸವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಅವರು ಹೇಳಿದರು. ಸೇವೆಯ ಸ್ಫೂರ್ತಿಯೊಂದಿಗೆ ತಾವು ಹೇಗೆ ಸಹಕಾರ ನೀಡಬೇಕು ಎಂಬ ಕುರಿತು ಆಲೋಚಿಸುವಂತೆ ಅವರು ಮಹಿಳೆಯರನ್ನು ಕೋರಿದರು. ಮಹಿಳೆಯರಿಗಾಗಿ ಪೌಷ್ಟಿಕಾಂಶ ಜಾಗೃತಿ ಅಭಿಯಾನಗಳನ್ನು ನಡೆಸುವುದು ಮತ್ತು ತಮ್ಮ ಗ್ರಾಮಗಳಲ್ಲಿ ಹಾಗೂ ಇತರೆಡೆ ಕೋವಿಡ್-19 ಲಸಿಕೆ, ಶುಚಿತ್ವ ಮತ್ತು ಜಲಸಂರಕ್ಷಣೆ ಕುರಿತು ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಬಹುದು ಎಂದು ಅವರು ಉದಾಹರಣೆ ನೀಡಿದರು. ಸ್ವ-ಸಹಾಯ ಗುಂಪುಗಳಲ್ಲಿನ ಮಹಿಳೆಯರು ತಮ್ಮ ಸಮೀಪದ ಡೈರಿ ಘಟಕ, ಜೈವಿಕ ಅನಿಲ ಘಟಕ ಮತ್ತು ಸೌರ ಘಟಕಗಳಿಗೆ ಭೇಟಿ ನೀಡಬೇಕು ಮತ್ತು ಅವುಗಳಲ್ಲಿನ ಉತ್ತಮ ಪದ್ಧತಿಗಳನ್ನು ಕಲಿಯಬೇಕು ಎಂದು ಹೇಳಿದರು. 

 

ಪ್ರಧಾನಮಂತ್ರಿ ಸ್ವಸಹಾಯ ಗುಂಪುಗಳ ಕಾರ್ಯವನ್ನು ಶ್ಲಾಘಿಸಿದರು ಮತ್ತು ಅವರ ಪ್ರಯತ್ನದಿಂದಾಗಿ ಅಮೃತ ಮಹೋತ್ಸವದ ಯಶಸ್ಸಿನ ಅಮೃತ ಎಲ್ಲೆಡೆ ಪಸರಿಸುತ್ತದೆ ಮತ್ತು ಇದರಿಂದ ಇಡೀ ದೇಶಕ್ಕೆ ಲಾಭವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.

 


****



(Release ID: 1745200) Visitor Counter : 306