ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ʻಎನ್‌ಸಿಎಸ್‌ಎಸ್‌ಆರ್‌ʼ ಯೋಜನೆಯಡಿ ಕ್ರೀಡಾ ವಿಜ್ಞಾನ ವಿಭಾಗ ಮತ್ತು ಕ್ರೀಡಾ ಔಷಧ ವಿಭಾಗ ಸ್ಥಾಪನೆಗೆ ಆರು ವಿಶ್ವವಿದ್ಯಾಲಯಗಳು/ಶಿಕ್ಷಣ ಸಂಸ್ಥೆಗಳು ಮತ್ತು ಐದು ಮೆಡಿಕಲ್‌ ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ: ಶ್ರೀ ಅನುರಾಗ್‌ ಸಿಂಗ್‌ ಠಾಕೂರ್‌

Posted On: 05 AUG 2021 2:40PM by PIB Bengaluru

ಮುಖ್ಯಾಂಶಗಳು:

  • ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಮತ್ತು ದೇಶಾದ್ಯಂತ ಆಯ್ದ ವಿಶ್ವವಿದ್ಯಾಲಯಗಳು/ಶಿಕ್ಷಣ ಸಂಸ್ಥೆಗಳು/ಮೆಡಿಕಲ್‌ ಕಾಲೇಜುಗಳ  ಮೂಲಕ ಈ ಯೋಜನೆಯ ಧ್ಯೇಯೋದ್ದೇಶಗಳನ್ನು ಜಾರಿಗೊಳಿಸಲಾಗುವುದು. ಈ ಯೋಜನೆಯ ಆರಂಭದಿಂದ ಇದುವರೆಗೂ ನಿವ್ವಳ 62.61 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ʻರಾಷ್ಟ್ರೀಯ ಕ್ರೀಡಾ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರʼದ ಯೋಜನೆಯು (NCSSR) ಗಣ್ಯ ಕ್ರೀಡಾಪಟುಗಳ ಅತ್ಯುನ್ನತ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಂಶೋಧನೆ, ಶಿಕ್ಷಣ ಮತ್ತು ನಾವೀನ್ಯತೆಯ ನೆರವು ನೀಡುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಎರಡು ಅಂಶಗಳನ್ನು ಹೊಂದಿದೆ: (i) ʻಎನ್‌ಸಿಎಸ್‌ಎಸ್‌ಆರ್ʼ ಕೇಂದ್ರ ಸ್ಥಾಪನೆ ಮತ್ತು (ii) ಆಯ್ದ ವಿಶ್ವವಿದ್ಯಾಲಯಗಳು/ಶಿಕ್ಷಣ ಸಂಸ್ಥೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಕ್ರಮವಾಗಿ ಕ್ರೀಡಾ ವಿಜ್ಞಾನ ವಿಭಾಗಗಳು ಮತ್ತು ಕ್ರೀಡಾ ಔಷಧ ವಿಭಾಗಗಳನ್ನು ಸ್ಥಾಪಿಸಲು ನೆರವು(ಧನಸಹಾಯ) ಒದಗಿಸುವುದು. ಈ ಯೋಜನೆಯ ಉದ್ದೇಶಗಳನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಮತ್ತು ದೇಶದಾದ್ಯಂತ ಆಯ್ದ ವಿಶ್ವವಿದ್ಯಾನಿಲಯಗಳು/ಶಿಕ್ಷಣ ಸಂಸ್ಥೆಗಳು/ವೈದ್ಯಕೀಯ ಕಾಲೇಜುಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಯೋಜನೆಯ ಪ್ರಾರಂಭದಿಂದಲೂ ನಿವ್ವಳ 62.61 ಕೋಟಿ ರೂ. ಮೊತ್ತವನ್ನು ಇದಕ್ಕಾಗಿ ಬಿಡುಗಡೆ ಮಾಡಲಾಗಿದೆ. ಹಣವನ್ನು ರಾಜ್ಯವಾರು ಮಂಜೂರು ಮಾಡಲಾಗಿಲ್ಲ/ಬಿಡುಗಡೆ ಮಾಡಲಾಗಿಲ್ಲ. ಅಲ್ಲದೆ, ಯೋಜನೆಯ ಉದ್ದೇಶಿತ ಗುರಿ ಸಾಧನೆಗಾಗಿ ಈ ಬಗ್ಗೆ ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ ನಡೆಸಲಾಗುವುದು.

ʻಎನ್‌ಸಿಎಸ್‌ಎಸ್‌ಆರ್‌ʼ ಯೋಜನೆಯಡಿ ಕ್ರೀಡಾ ವಿಜ್ಞಾನ ವಿಭಾಗಗಳು ಮತ್ತು ಕ್ರೀಡಾ ವೈದ್ಯಕೀಯ ವಿಭಾಗಗಳನ್ನು ಸ್ಥಾಪಿಸಲು ದೇಶಾದ್ಯಂತ ಇಲ್ಲಿಯವರೆಗೆ ಆರು ವಿಶ್ವವಿದ್ಯಾಲಯಗಳು/ಶಿಕ್ಷಣ ಸಂಸ್ಥೆಗಳು ಮತ್ತು ಐದು ವೈದ್ಯಕೀಯ ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ. ಈ ಆಯ್ಕೆಗಾಗಿ ಮಾನ್ಯತೆ, ಕಾಯಂ ಸಿಬ್ಬಂದಿ, ಪ್ರಕಟಣೆಗಳು/ಪೇಟೆಂಟ್‌ಗಳು, ನಿಧಿಯ ಅಗತ್ಯತೆ, ರಾಷ್ಟ್ರೀಯ/ಅಂತಾರಾಷ್ಟ್ರೀಯ ಸಹಕಾರ ಹಾಗೂ ಅಂತಹ ಸಂಸ್ಥೆಗಳೂ ಸಲ್ಲಿಸಿದ ಪ್ರಸ್ತಾವನೆ ಮತ್ತು ಪ್ರಸ್ತುತಿ ಮುಂದಾದ ಮಾನದಂಡಗಳನ್ನು ಅನುಸರಿಸಲಾಗಿದೆ.

ʻಎನ್‌ಸಿಎಸ್‌ಎಸ್‌ಆರ್ʼ ಯೋಜನೆಯ ಮೂಲಕ ನೀಡಲಾದ ನೆರವಿನ ಹೊರತಾಗಿ, ʻಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ʼ (ಟಾಪ್ಸ್‌) ಅಡಿಯಲ್ಲಿ ಗಣ್ಯ ಕ್ರೀಡಾಪಟುಗಳಿಗೆ ಈ ಸಚಿವಾಲಯವು ಸಂಶೋಧನೆ ಆಧಾರಿತ ಆಯ್ಕೆ ಮಾನದಂಡಗಳನ್ನು ಅಳವಡಿಸಿಕೊಂಡಿದೆ. ಈ ಮಾನದಂಡವು ಪ್ರಸ್ತುತ ಕಾರ್ಯಕ್ಷಮತೆ, ಹಿಂದಿನ ಕಾರ್ಯಕ್ಷಮತೆ, ತುಲನಾತ್ಮಕ ದತ್ತಾಂಶ, ಜಾಗತಿಕ ವಿಶ್ಲೇಷಣೆ, ಪ್ರಗತಿ ದರ ಮುಂತಾದ ವಿವಿಧ ಅಂಶಗಳನ್ನು ಆಧರಿಸಿದೆ. ಅಲ್ಲದೆ, ಕ್ರೀಡಾಪಟುಗಳ ಕಾರ್ಯಕ್ಷಮತೆಯ ಮೇಲೆ ವೈಜ್ಞಾನಿಕವಾಗಿ ನಿಗದಿಪಡಿಸಲಾದ ಮಾನದಂಡಗಳ ಆಧಾರದ ಮೇಲೆ ಸತತವಾಗಿ ನಿಗಾ ಇರಿಸಲಾಗುತ್ತದೆ.  ಇದಲ್ಲದೆ, ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿಯ (ಎನ್‌ಎಸ್‌ಡಿಎಫ್‌) ಅಡಿಯಲ್ಲಿ, ಈ ಸಚಿವಾಲಯವು ʻಟಾಪ್ಸ್‌ ಕೋರ್ ಗ್ರೂಪ್‌ʼ ಮತ್ತು ʻಅಭಿವೃದ್ಧಿ ಗುಂಪುʼಗಳಲ್ಲಿ ಆಯ್ಕೆಯಾದ ಕ್ರೀಡಾಪಟುಗಳ ತರಬೇತಿ ಅಗತ್ಯಗಳನ್ನು ಪೂರೈಸಲು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಕ್ಷೇತ್ರವಾರು ಅನುದಾನವನ್ನು ಒದಗಿಸುತ್ತದೆ.

ಎನ್‌ಸಿಎಸ್‌ಎಸ್‌ಆರ್‌ ಯೋಜನೆಯ ಗುರಿಗಳು ಮತ್ತು ಉದ್ದೇಶಗಳು:

• ಕ್ರೀಡಾ ಕಾರ್ಯಕ್ಷಮತೆಯ ಉತ್ತೇಜನ,  ನಿರ್ವಹಣೆ ಮತ್ತು ವರ್ಧನೆಗೆ ವೈಜ್ಞಾನಿಕ ತತ್ವಗಳ ಅನ್ವಯ.

• ಕ್ರೀಡಾಪಟುಗಳನ್ನು ಅವರ ಗರಿಷ್ಠ ಸಾಮರ್ಥ್ಯದವರೆಗೆ ಅಭಿವೃದ್ಧಿಪಡಿಸುವುದು ಮತ್ತು ಆ ಮೂಲಕ ಸ್ಪರ್ಧಾತ್ಮಕ ಕ್ರೀಡಾ ವೃತ್ತಿಜೀವನವನ್ನು ವಿಸ್ತರಿಸುವುದು.

• ಕ್ರೀಡಾ ವಿಜ್ಞಾನ ಮಾಹಿತಿಯ ಪ್ರಸಾರ

  • ಪೂರಕ ಆಹಾರಗಳು/ ಸ್ಥಳೀಯವಾಗಿ ಸಿದ್ಧಪಡಿಸಿದ ಆಹಾರಗಳ ಪರೀಕ್ಷೆ ಮತ್ತು ಪ್ರಮಾಣೀಕರಣ.
  • ಕ್ರೀಡಾ ಪ್ರದರ್ಶನದಲ್ಲಿ ಆಯುರ್ವೇದ/ಹೋಮಿಯೋಪತಿ ಔಷಧಗಳ ಅನ್ವಯ.

• ಕ್ರೀಡಾ ಗಾಯಗಳ ನಿರ್ವಹಣೆ ಮತ್ತು ಪುನರ್ವಸತಿ

ಎನ್‌ಸಿಎಸ್‌ಎಸ್‌ಆರ್ ಯೋಜನೆಯ ಅನುದಾನ ಪಡೆದ ಶಿಕ್ಷಣ ಸಂಸ್ಥೆಗಳ ಗುರಿ ಮತ್ತು ಉದ್ದೇಶಗಳು:

  • ಆಯ್ದ ವಿಶ್ವವಿದ್ಯಾನಿಲಯಗಳಲ್ಲಿ ಎಂ.ಎಸ್‌ಸಿ (ಕ್ರೀಡಾ ವಿಜ್ಞಾನಗಳು) ಮತ್ತು ಆಯ್ದ ವೈದ್ಯಕೀಯ ಕಾಲೇಜುಗಳಲ್ಲಿ ಕ್ರೀಡಾ ಔಷಧದಲ್ಲಿ ಎಂಡಿ (MD) ಮತ್ತು ಡಿಪ್ಲೊಮಾ (DSM) ಆರಂಭಿಸುವುದು.

• ಕ್ರೀಡಾ ವಿಜ್ಞಾನ ಮತ್ತು ಔಷಧದ ಬಳಕೆಯ ಮೂಲಕ ಕ್ರೀಡಾಪಟುಗಳ ಕಾರ್ಯಕ್ಷಮತೆ ವರ್ಧನೆ.

  • ಕ್ರೀಡಾಪಟುಗಳಿಗೆ ವೈಜ್ಞಾನಿಕ ನೆರವು  ಮತ್ತು ಗಾಯಗೊಂಡ ಕ್ರೀಡಾಪಟುವಿಗೆ ಪುನರ್ವಸತಿ.

•  ಕ್ರೀಡಾ ವಿಜ್ಞಾನಗಳು ಮತ್ತು ಕ್ರೀಡಾ ಔಷಧದಲ್ಲಿ ಮೂಲ ಮತ್ತು ಅನ್ವಯಿಕ ಸಂಶೋಧನೆ.

  • ಇದು ಕ್ರೀಡಾ ವಿಜ್ಞಾನ ಮತ್ತು ಕ್ರೀಡಾ ವೈದ್ಯಕೀಯದಲ್ಲಿ ತರಬೇತಿ ಪಡೆದ ನುರಿತ ತಜ್ಞರ ಸಂಖ್ಯೆ ಹೆಚ್ಚಿಸಲು ಸಹಾಯವಾಗುತ್ತದೆ ಮತ್ತು ಆ ಮೂಲಕ ವಿದೇಶಿ ತಜ್ಞರ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದ ರೂಪದಲ್ಲಿ ಈ ಮಾಹಿತಿಯನ್ನು ನೀಡಿದರು.

***



(Release ID: 1743020) Visitor Counter : 207