ಬುಡಕಟ್ಟು ವ್ಯವಹಾರಗಳ ಸಚಿವಾಲಯ
ವಿಶ್ವದಾದ್ಯಂತ ಭಾರತೀಯ ರಾಜತಾಂತ್ರಿಕ ಕಚೇರಿ/ ರಾಯಭಾರ ಕಚೇರಿಗಳಲ್ಲಿ ʻಆತ್ಮನಿರ್ಭರ್ ಕಾರ್ನರ್ʼ ಸ್ಥಾಪಿಸಲಿರುವ ಟ್ರೈಫೆಡ್
ʻಜಿಐ ಟ್ಯಾಗ್ʼ ಮಾಡಲಾದ, ನೈಸರ್ಗಿಕ ಮತ್ತು ಸಾವಯವ ಬುಡಕಟ್ಟು ಉತ್ಪನ್ನಗಳನ್ನು ವಿದೇಶಗಳಲ್ಲಿ ಉತ್ತೇಜಿಸಲು ಮೀಸಲಾದ ವಿಶೇಷ ಸ್ಥಳ ಇದಾಗಿರಲಿದೆ
Posted On:
05 AUG 2021 1:08PM by PIB Bengaluru
ಮುಖ್ಯಾಂಶಗಳು:
- ʻಭಾರತೀಯ ಬುಡಕಟ್ಟು ಸಹಕಾರ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟʼವು (ಟ್ರೈಫೆಡ್) ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ವಿಶ್ವದಾದ್ಯಂತ 100 ಭಾರತೀಯ ರಾಜತಾಂತ್ರಿಕ ಕಚೇರಿ/ ರಾಯಭಾರ ಕಚೇರಿಗಳಲ್ಲಿ ʻಆತ್ಮನಿರ್ಭರ್ ಭಾರತ್ ಕಾರ್ನರ್ʼ (ಆತ್ಮನಿರ್ಭರ ಪ್ರದರ್ಶನ ಸ್ಥಳ) ಸ್ಥಾಪಿಸಲಿದೆ.
- ಬುಡಕಟ್ಟು ಉತ್ಪನ್ನಗಳ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸುವ ಕ್ಯಾಟಲಾಗ್‌ಗಳು ಮತ್ತು ಬ್ರೋಷರ್‌ಗಳನ್ನು ಈ ಜಾಗದಲ್ಲಿ ಪ್ರದರ್ಶಿಸುವ ಸಲುವಾಗಿ ರಾಜತಾಂತ್ರಿಕ ಕಚೇರಿಗಳು ಮತ್ತು ರಾಯಭಾರ ಕಚೇರಿಗಳೊಂದಿಗೆ ಅವುಗಳನ್ನು ಹಂಚಿಕೊಳ್ಳಲಾಗಿದೆ.
- ಈ ವರ್ಷದ ʻಆದಿ ಮಹೋತ್ಸವʼದಲ್ಲಿ ನಡೆದ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯ ದೇಶಗಳ ರಾಜತಾಂತ್ರಿಕರು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು
“ವೋಕಲ್ ಫಾರ್ ಲೋಕಲ್” ಮತ್ತು "ಆತ್ಮನಿರ್ಭರ್ ಭಾರತ್" ನಿರ್ಮಾಣದತ್ತ ಗಮನ ಕೇಂದ್ರೀಕರಿಸಿ ʻಭಾರತೀಯ ಬುಡಕಟ್ಟು ಸಹಕಾರ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟʼವು (ಟ್ರೈಫೆಡ್) ಸಂಸ್ಕೃತಿ ಸಚಿವಾಲಯ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ), ವಾಣಿಜ್ಯ ಸಚಿವಾಲಯ, ಪ್ರವಾಸೋದ್ಯಮ ಸಚಿವಾಲಯ, ಭಾರತೀಯ ಅಂಚೆ, ಪ್ರಧಾನ ಮಂತ್ರಿಗಳ ಕಾರ್ಯಾಲಯ ಹೀಗೆ ಹಲವು ಸಚಿವಾಲಯ ಹಾಗೂ ಇಲಾಖೆಗಳೊಂದಿಗೆ ಸಕ್ರಿಯ ಸಹಯೋಗಕ್ಕೆ ಮುಂದಾಗಿದೆ. ಬುಡಕಟ್ಟು ಉತ್ಪನ್ನಗಳೊಂದಿಗೆ ʻಜಿಐ ಟ್ಯಾಗ್ʼ ಉತ್ಪನ್ನಗಳನ್ನು ಉತ್ತೇಜಿಸುವುದು ಹಾಗೂ ಬುಡಕಟ್ಟು ಕುಶಲಕರ್ಮಿಗಳ ಸಬಲೀಕರಣವನ್ನು ಸಂಕೇತಿಸುವ ಬ್ರಾಂಡ್ ಆಗಿ ಅವುಗಳನ್ನು ಪರಿವರ್ತಿಸುವುದು ಇದರ ಹಿಂದಿನ ಉದ್ದೇಶವಾಗಿದೆ.
ಈ ನಿಟ್ಟಿನಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ʻಟ್ರೈಫೆಡ್ʼ ವಿಶ್ವದಾದ್ಯಂತ 100 ಭಾರತೀಯ ರಾಜತಾಂತ್ರಿಕ / ರಾಯಭಾರ ಕಚೇರಿಗಳಲ್ಲಿ ʻಆತ್ಮನಿರ್ಭರ್ ಭಾರತ್ ಕಾರ್ನರ್ʼ ಸ್ಥಾಪಿಸಲಿದೆ. ನೈಸರ್ಗಿಕ ಮತ್ತು ಸಾವಯವ ಉತ್ಪನ್ನಗಳ ಜೊತೆಗೆ ʻಜಿಐ ಟ್ಯಾಗ್ʼ ಮಾಡಲಾದ ಬುಡಕಟ್ಟು ಕಲೆ ಮತ್ತು ಕರಕುಶಲ ಉತ್ಪನ್ನಗಳನ್ನು ಉತ್ತೇಜಿಸಲು ಈ ʻಕಾರ್ನರ್ʼ ವಿಶೇಷ ಸ್ಥಳವಾಗಿರುತ್ತದೆ. ಈ ಉದ್ದೇಶಕ್ಕಾಗಿ ಬುಡಕಟ್ಟು ಉತ್ಪನ್ನಗಳ ಶ್ರೀಮಂತಿಕೆ ಮತ್ತು ವೈವಿಧ್ಯವನ್ನು ಪ್ರದರ್ಶಿಸುವ ಕ್ಯಾಟಲಾಗ್‌ಗಳು ಮತ್ತು ಬ್ರೋಷರ್‌ಗಳನ್ನು ರಾಜತಾಂತ್ರಿಕ ಮತ್ತು ರಾಯಭಾರ ಕಚೇರಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಸಂಪರ್ಕಿಸಲಾದ ರಾಜತಾಂತ್ರಿಕ ಮತ್ತು ರಾಯಭಾರ ಕಚೇರಿಗಳ ಪೈಕಿ ಜಮೈಕಾ, ಐರ್ಲೆಂಡ್, ಟರ್ಕಿ, ಕೀನ್ಯಾ, ಮಂಗೋಲಿಯಾ, ಇಸ್ರೇಲ್, ಫಿನ್ಲ್ಯಾಂಡ್, ಫ್ರಾನ್ಸ್ ಮತ್ತು ಕೆನಡಾ ಸೇರಿದಂತೆ 42 ದೇಶಗಳಿಂದ ಪ್ರತಿಕ್ರಿಯೆ ಬಂದಿದೆ. ಈ ʻಕಾರ್ನರ್ʼನಲ್ಲಿ ಪ್ರದರ್ಶನಕ್ಕಾಗಿ ಬುಡಕಟ್ಟು ಉತ್ಪನ್ನಗಳ ಮೊದಲ ಸೆಟ್ ಅನ್ನು ಕಳುಹಿಸುವ ಪ್ರಕ್ರಿಯೆಯಲ್ಲಿ ʻಟ್ರೈಫೆಡ್ʼ ತೊಡಗಿದೆ.
ಇತ್ತೀಚೆಗೆ ಅಂತರರಾಷ್ಟ್ರೀಯ ಯೋಗ ದಿನದ ಆಚರಣೆಯ ಭಾಗವಾಗಿ, ನ್ಯೂಯಾರ್ಕ್‌ನ ʻಟೈಮ್ಸ್ ಸ್ಕ್ವೇರ್ʼನಲ್ಲಿ ಯೋಗ, ಸಮಗ್ರ ಆರೋಗ್ಯ, ಆಯುರ್ವೇದ ಮತ್ತು ಸ್ವಾಸ್ಥ್ಯದ ಬಗ್ಗೆ ಪ್ರದರ್ಶನಕ್ಕಾಗಿ ಒಂದು ದಿನದ ಕಾರ್ಯಕ್ರಮವನ್ನು ನ್ಯೂಯಾರ್ಕ್‌ನ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಆಯೋಜಿಸಿತ್ತು. 3000ಕ್ಕೂ ಹೆಚ್ಚು ಜನರು ಭಾಗವಹಿಸಿದ, ನ್ಯೂಯಾರ್ಕ್‌ನ ಮೇರು ಸ್ಥಳದಲ್ಲಿ ನಡೆದ ಈ ಕಾರ್ಯಕ್ರಮವು ತುಂಬಾ ಯಶಸ್ವಿಯಾಯಿತು. ಇಲ್ಲಿನ ವಿಶೇಷ ಆಕರ್ಷಣೆಯೆಂದರೆ ನೈಸರ್ಗಿಕ ಬುಡಕಟ್ಟು ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದ ಮಳಿಗೆಗಳು. ರೋಗನಿರೋಧಕ ಶಕ್ತಿ ವರ್ಧಕಗಳು ಮತ್ತು ಆಯುರ್ವೇದ ಉತ್ಪನ್ನಗಳು ಸೇರಿದಂತೆ ಅನನ್ಯ ನೈಸರ್ಗಿಕ ಬುಡಕಟ್ಟು ಉತ್ಪನ್ನಗಳನ್ನು ಈ ಮಳಿಗೆಗಳಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ʻಟ್ರೈಬ್ಸ್ ಇಂಡಿಯಾʼ ಸ್ಥಾಪಿಸಿದ್ದ ಮಳಿಗೆಯಲ್ಲಿ ಸಾವಯವ ಉತ್ಪನ್ನಗಳು ಹಾಗೂ ಅಗತ್ಯ ನೈಸರ್ಗಿಕ ರೋಗನಿರೋಧಕ ಶಕ್ತಿ ಹೆಚ್ಚಿಸುವ ಉತ್ಪನ್ನಗಳಾದ ಸಿರಿಧಾನ್ಯಗಳು, ಅಕ್ಕಿ, ಮಸಾಲೆಗಳು, ಜೇನು, ಚ್ಯವನ್‌ಪ್ರಾಶ್, ಆಮ್ಲಾ, ಅಶ್ವಗಂಧ ಪುಡಿಗಳು, ಗಿಡಮೂಲಿಕೆ ಚಹಾಗಳು ಮತ್ತು ಕಾಫಿ ಮತ್ತು ಯೋಗ ಚಾಪೆಗಳು, ಕೊಳಲು, ಗಿಡಮೂಲಿಕೆ ಸಾಬೂನುಗಳು, ಬಿದಿರಿನ ಸುವಾಸನೆಯ ಮೇಣದ ಬತ್ತಿಗಳು ಮುಂತಾದ ಬುಡಕಟ್ಟು ಉತ್ಪನ್ನಗಳ ದೊಡ್ಡ ಶ್ರೇಣಿಯನ್ನು ಪ್ರದರ್ಶಿಸಲಾಗಿತ್ತು. ಮಳಿಗೆಗಳಿಗೆ ಭಾರಿ ಸಂಖ್ಯೆ ಜನರು ಭೇಟಿ ನೀಡಿದರು ಮತ್ತು ಭಾರತೀಯ ಬುಡಕಟ್ಟುಗಳು ಹಾಗೂ ಬುಡಕಟ್ಟು ಉತ್ಪನ್ನಗಳ ಅನನ್ಯತೆಯ ಬಗ್ಗೆ ತಿಳಿಯಲು ಸಾಕಷ್ಟು ಆಸಕ್ತಿ ಕಂಡುಬಂದಿತು. ಈ ಕಾರ್ಯಕ್ರಮಕ್ಕಾಗಿ ಸುಮಾರು 8.5 ಲಕ್ಷ ರೂ. ಮೌಲ್ಯದ ಬುಡಕಟ್ಟು ಉತ್ಪನ್ನಗಳಿಗೆ ನ್ಯೂಯಾರ್ಕ್ನ ಭಾರತೀಯ ಕಾನ್ಸುಲೇಟ್ ಬೇಡಿಕೆಯಿಟ್ಟಿತ್ತು.
ಈ ಹಿಂದೆ, 2021ರ ಫೆಬ್ರವರಿಯಲ್ಲಿ, ಸ್ವಾವಲಂಬಿ ಭಾರತಕ್ಕಾಗಿ ಪ್ರಧಾನ ಮಂತ್ರಿಯವರ ʻವೋಕಲ್ ಫಾರ್ ಲೋಕಲ್ʼ ದೃಷ್ಟಿಕೋನಕ್ಕೆ ಅನುಗುಣವಾಗಿ ಟ್ರೈಬ್ಸ್ ಇಂಡಿಯಾ ಆದಿ ಮಹೋತ್ಸವದಲ್ಲಿ ಭಾರತ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ʻಟ್ರೈಬ್ಸ್ ಇಂಡಿಯಾʼ ಸಮಾವೇಶವನ್ನು ಆಯೋಜಿಸಲಾಗಿತ್ತು. ದೇಶದ ಶ್ರೀಮಂತ ಬುಡಕಟ್ಟು ಪರಂಪರೆಯನ್ನು ಅಂತರರಾಷ್ಟ್ರೀಯ ಪ್ರೇಕ್ಷಕರಿಗೆ ಪರಿಚಯಿಸುವ ಉದ್ದೇಶವನ್ನೂ ಹೊಂದಿದ್ದ ಈ ಕಾರ್ಯಕ್ರಮದಲ್ಲಿ ಭಾರತದ 30ಕ್ಕೂ ಹೆಚ್ಚು ರಾಜತಾಂತ್ರಿಕ ಕಚೇರಿಗಳ 120ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಆದಿ ಮಹೋತ್ಸವದ ಪಾಲ್ಗೊಂಡರು.
ತೈಪೆ, ಇಂಡೋನೇಷ್ಯಾ, ಬಾಂಗ್ಲಾದೇಶ, ಮ್ಯಾನ್ಮಾರ್, ಮಲೇಷ್ಯಾ, ಬೊಲಿವಿಯಾ, ಜಾಂಬಿಯಾ, ಫಿನ್ಲ್ಯಾಂಡ್, ಪೋಲೆಂಡ್, ಬ್ರೆಜಿಲ್, ಈಜಿಪ್ಟ್, ಕೋಸ್ಟಾರಿಕಾ, ಕಾಂಬೋಡಿಯಾ, ಕೀನ್ಯಾ, ಮಾಲ್ಟಾ, ಫಿಲಿಪ್ಪೀನ್ಸ್, ಲಾವೋಸ್, ಟುನೀಷಿಯಾ, ಕ್ರೊಯೇಷಿಯಾ, ಟೋಗೊ, ಆಫ್ಘಾನಿಸ್ತಾನ, ಅಮೆರಿಕ, ಘಾನಾ, ಟರ್ಕಿ, ಉಜ್ಬೇಕಿಸ್ತಾನ್, ಬ್ರಿಟನ್, ಇರಾನ್, ಫ್ರಾನ್ಸ್‌ನಂತಹ ದೇಶಗಳ ರಾಜತಾಂತ್ರಿಕರು ಈ ಗಣ್ಯರಲ್ಲಿ ಸೇರಿದ್ದಾರೆ. ʻಯುಎನ್‌ಎಚ್‌ಸಿಆರ್ʼ ಮತ್ತು ʻಯುಎನ್‌ಡಿಪಿʼಯಂತಹ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳನ್ನೂ ಈ ಗಣ್ಯರ ಪಟ್ಟಿ ಒಳಗೊಂಡಿದೆ.
ಅವು ಕರಕುಶಲ ವಸ್ತುಗಳಾಗಿರಲಿ, ಕೈಮಗ್ಗವಾಗಿರಲಿ ಅಥವಾ ಮತ್ತಾವುದೇ ಉತ್ಪನ್ನಗಳಾಗಿರಲಿ ಭಾರತವು ದೇಶೀಯ ಉತ್ಪನ್ನಗಳ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಶತಮಾನಗಳಿಂದ ದೇಶಾದ್ಯಂತ ಬುಡಕಟ್ಟು ಸಮುದಾಯಗಳು ಉತ್ಪಾದಿಸುತ್ತಿರುವ ಸ್ಥಳೀಯ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಮತ್ತು ಉತ್ತೇಜಿಸಲು ರಾಷ್ಟ್ರೀಯ ನೋಡಲ್ ಏಜೆನ್ಸಿಯಾಗಿ ʻಟ್ರೈಫೆಡ್ʼ ವ್ಯಾಪಕವಾಗಿ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ʻಭೌಗೋಳಿಕ ಸೂಚಕʼ ಅಥವಾ ʻಜಿಐ ಟ್ಯಾಗ್ʼ ಇನ್ನೂ ಹೆಚ್ಚಿನ ಪ್ರಾಮುಖ್ಯವನ್ನು ಪಡೆದುಕೊಂಡಿದೆ.
ನಮ್ಮ ಜನಸಂಖ್ಯೆಯಲ್ಲಿ ಬುಡಕಟ್ಟು ಸಮುದಾಯಗಳ ಪಾಲು 8%ಕ್ಕಿಂತ ಹೆಚ್ಚಿದೆ. ಆದಾಗ್ಯೂ, ಅವರು ಸಮಾಜದ ಅನನುಕೂಲಕರ ವರ್ಗಗಳಲ್ಲಿ ಉಳಿದಿದ್ದಾರೆ. ಬುಡಕಟ್ಟು ಜನರಿಗೆ ತಿಳಿವಳಿಕೆ ಹೇಳಬೇಕು ಮತ್ತು ಸಹಾಯ ಮಾಡಬೇಕು ಎಂಬ ತಪ್ಪು ನಂಬಿಕೆ ಹಾಗೂ ಮನೋಭಾವವು ಮುಖ್ಯವಾಹಿನಿಯಲ್ಲಿರುವ ಜನರಲ್ಲಿ ವ್ಯಾಪಿಸಿದೆ. ಆದರೆ ವಾಸ್ತವಾಂಶವು ತದ್ವಿರುದ್ಧವಾಗಿದೆ. ಬುಡಕಟ್ಟು ಜನರು ನಗರ ಭಾರತದ ಜನತೆಗೆ ಕಲಿಸಲು ಸಾಕಷ್ಟು ವಿಷಯಗಳನ್ನು ಹೊಂದಿದ್ದಾರೆ. ಸ್ವಾಭಾವಿಕ ಸರಳತೆಯ ಸಾಕಾರ ರೂಪವಾದ ಅವರ ಸೃಷ್ಟಿಗಳು ಕಾಲಾತೀತ ಆಕರ್ಷಣೆಯನ್ನು ಹೊಂದಿವೆ. ಕೈಯಿಂದ ನೇಯ್ದ ಹತ್ತಿ, ರೇಷ್ಮೆ ಬಟ್ಟೆಗಳು, ಉಣ್ಣೆ, ಲೋಹದ ಕರಕುಶಲ ವಸ್ತುಗಳು, ಟೆರಾಕೋಟಾ, ಮಣಿ-ಕೆಲಸ ಸೇರಿದಂತೆ ವ್ಯಾಪಕ ಶ್ರೇಣಿಯ ಕರಕುಶಲ ವಸ್ತುಗಳಿಗೆ ಸಂರಕ್ಷಣೆ ಮತ್ತು ಉತ್ತೇಜನ ಬೇಕಿದೆ.
ವಿಶ್ವ ವ್ಯಾಪಾರ ಸಂಸ್ಥೆಯಿಂದ ಗುರುತಿಸಲ್ಪಟ್ಟಿರುವ ʻಭೌಗೋಳಿಕ ಸೂಚಕʼ(ಜಿಐ ಟ್ಯಾಗ್)ವನ್ನು ಯಾವುದೇ ಒಂದು ಉತ್ಪನ್ನದ ಭೌಗೋಳಿಕ ಪ್ರದೇಶವನ್ನು ಸೂಚಿಸಲು ಬಳಸಲಾಗುತ್ತದೆ. ಅದು ಕೃಷಿ ಉತ್ಪನ್ನವಾಗಿರಬಹುದು, ನೈಸರ್ಗಿಕ ಉತ್ಪನ್ನವಾಗಿರಬಹುದು ಅಥವಾ ತಯಾರಿಸಲ್ಪಟ್ಟ ಉತ್ಪನ್ನ ಯಾವುದೇ ಆದರೂ ಅದನ್ನು ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದ ವಿಶಿಷ್ಟತೆಯೊಂದಿಗೆ ನಂಟು ಮಾಡಲಾಗುತ್ತದೆ. ಆ ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಉತ್ಪಾದಿಸಲಾದ ಆ ಉತ್ಪನ್ನವು ನೈಜತೆ ಮತ್ತು ಗುಣಮಟ್ಟದ ಭರವಸೆಯನ್ನು ಒದಗಿಸುತ್ತದೆ. ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯೂಟಿಒ) ಸದಸ್ಯ ದೇಶವಾಗಿ ಭಾರತವು ಈ ಸಂಬಂಧ ನಿರ್ಣಯಕ್ಕೆ ಸಹಿ ಹಾಕಿತು. ʻಭೌಗೋಳಿಕ ಸೂಚಕʼ (ನೋಂದಣಿ ಮತ್ತು ಸಂರಕ್ಷಣಾ ಕಾಯ್ದೆ) 1999 ಜಾರಿ ಮೂಲಕ ಸೆಪ್ಟೆಂಬರ್ 15, 2003 ರಿಂದ ಇದನ್ನು ಜಾರಿಗೆ ತಂದಿತು.
ಪ್ರಚಾರ ಸಂಬಂಧಿತ ಉತ್ತೇಜನದೊಂದಿಗೆ, ಈ ವಿಶಿಷ್ಟ ಉತ್ಪನ್ನಗಳು ದೊಡ್ಡ ಮಟ್ಟದಲ್ಲಿ ಮಾರುಕಟ್ಟೆಯನ್ನು ಪಡೆಯುತ್ತವೆ. ಜೊತೆಗೆ "ಲೋಕಲ್ ಫಾರ್ ವೋಕಲ್, ಬುಡಕಟ್ಟು ವಸ್ತು ಖರೀದಿಸಿ" ಎಂಬ ವಿಸ್ತೃತ ದೃಷ್ಟಿಕೋನವನ್ನು ಇದರಿಂದ ಸಾಧಿಸಬಹುದು. ಇದು ಸುಸ್ಥಿರ ಆದಾಯ ಗಳಿಕೆ ಮತ್ತು ಬುಡಕಟ್ಟು ಜನರ ಉದ್ಯೋಗ ಕ್ಷೇತ್ರಗಳಲ್ಲಿ ನೈಜ ಪರಿವರ್ತೆನಗೂ ಕಾರಣವಾಗಲಿದೆ ಎಂದು ಆಶಿಸಲಾಗಿದೆ.
***
(Release ID: 1742753)
Visitor Counter : 315