ನೀತಿ ಆಯೋಗ
ನೀತಿ ಆಯೋಗ ಮತ್ತು ʻಆರ್‌ಎಂಐʼನಿಂದ ವಿದ್ಯುತ್ ವಿತರಣಾ ವಲಯದ ವರದಿ ಬಿಡುಗಡೆ
Posted On:
03 AUG 2021 11:59AM by PIB Bengaluru
ದೇಶದ ವಿದ್ಯುತ್ ವಿತರಣಾ ವಲಯವನ್ನು ಪರಿವರ್ತನೆಯತ್ತ ಕೊಂಡೊಯ್ಯಬಲ್ಲ ಸುಧಾರಣಾ ಕ್ರಮಗಳನ್ನು ಸೂಚಿಸುವ ವರದಿಯೊಂದನ್ನು ನೀತಿ ಆಯೋಗವು ಇಂದು ಬಿಡುಗಡೆ ಮಾಡಿತು. ಇದು ಈ ಕ್ಷೇತ್ರದಲ್ಲಿ ನೀತಿ ನಿರೂಪಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.
ʻಟರ್ನಿಂಗ್ ಅರೌಂಡ್ ದಿ ಪವರ್ ಡಿಸ್ಟ್ರಿಬ್ಯೂಷನ್ ಸೆಕ್ಟರ್ʼ ಎಂಬ ಶೀರ್ಷಿಕೆಯ ಈ ವರದಿಯನ್ನು ನೀತಿ ಆಯೋಗ, ಆರ್‌ಎಂಐ ಮತ್ತು ಆರ್‌ಎಂಐ ಇಂಡಿಯಾ ಜತೆಯಾಗಿ ಸಿದ್ಧಪಡಿಸಿವೆ. ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಅವರು ಇಂದು ವರದಿಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ವಿ.ಕೆ. ಸಾರಸ್ವತ್ (ನೀತಿ ಆಯೋಗದ ಸದಸ್ಯ), ಅಮಿತಾಬ್ ಕಾಂತ್ (ನೀತಿ ಆಯೋಗದ ಸಿಇಒ), ಅಲೋಕ್ ಕುಮಾರ್ (ಕೇಂದ್ರ ವಿದ್ಯುತ್ ಕಾರ್ಯದರ್ಶಿ), ಡಾ. ರಾಕೇಶ್ ಸರ್ವಲ್ (ನೀತಿ ಆಯೋಗದ ಹೆಚ್ಚುವರಿ ಕಾರ್ಯದರ್ಶಿ) ಮತ್ತು ಅಕ್ಷಿಮಾ ಘಾಟೆ (ಆರ್‌ಎಂಐ ಇಂಡಿಯಾ ಪ್ರಾಂಶುಪಾಲರು) ಉಪಸ್ಥಿತರಿದ್ದರು.
ಭಾರತದಲ್ಲಿ ಹೆಚ್ಚಿನ ವಿದ್ಯುತ್ ವಿತರಣಾ ಕಂಪನಿಗಳು (ಡಿಸ್ಕಾಂಗಳು) ಪ್ರತಿ ವರ್ಷ ನಷ್ಟವನ್ನು ಅನುಭವಿಸುತ್ತವೆ. 2021 ನೇ ಸಾಲಿನ ಹಣಕಾಸು ವರ್ಷದಲ್ಲಿ ಇವುಗಳ ಒಟ್ಟು ನಷ್ಟ ಸುಮಾರು 90,000 ಕೋಟಿ ರೂ.ಗಳಿಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಈ ನಿರಂತರ ನಷ್ಟಗಳಿಂದಾಗಿ, ಡಿಸ್ಕಾಂಗಳು ಸಮಯಕ್ಕೆ ಸರಿಯಾಗಿ ವಿದ್ಯುತ್ ಉತ್ಪಾದಕರಿಗೆ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ, ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಅಗತ್ಯವಿರುವ ಹೂಡಿಕೆಗಳನ್ನು ಮಾಡಲು ಅಥವಾ ಹೆಚ್ಚಿನ ಪ್ರಮಾಣದಲ್ಲಿ ನವೀಕರಿಸಬಹುದಾದ ಇಂಧನದ ಬಳಕೆಯಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ.
ಈ ವರದಿಯು ಭಾರತೀಯ ಮತ್ತು ಜಾಗತಿಕ ವಿದ್ಯುತ್ ವಿತರಣಾ ವಲಯದಲ್ಲಿ ಸುಧಾರಣೆಯ ಪ್ರಯತ್ನಗಳ ಪರಾಮರ್ಶೆಯನ್ನು ಒದಗಿಸುತ್ತದೆ. ದೇಶದಲ್ಲಿ ಯಥೇಚ್ಛವಾಗಿರುವ ನೀತಿ ಅನುಭವದ ಕಲಿಕೆ ಹಾಗೂ ಉತ್ತಮ ಕಾರ್ಯವೈಖರಿಗಳ ಮಾಹಿತಿ ಹೂರಣವನ್ನು ಇದು ಒಳಗೊಂಡಿದೆ. “ಈ ವರದಿಯು ವಿದ್ಯುತ್ ವಿತರಣೆಯಲ್ಲಿ ಖಾಸಗಿ ವಲಯದ ಪಾತ್ರ, ವಿದ್ಯುತ್ ಖರೀದಿ, ನಿಯಂತ್ರಣ ಮೇಲ್ವಿಚಾರಣೆ, ನವೀಕರಿಸಬಹುದಾದ ಇಂಧನದ ಸಂಯೋಜನೆ ಮತ್ತು ಮೂಲಸೌಕರ್ಯಗಳ ಉನ್ನತೀಕರಣ ಮುಂತಾದ ಅನೇಕ ಪ್ರಮುಖ ಸುಧಾರಣೆಗಳ ಮೇಲೆ ಬೆಳಕು ಚೆಲ್ಲುತ್ತದೆ,ʼʼ ಎಂದು ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಹೇಳಿದರು. “ಸುಗಮ ವ್ಯಾಪಾರಕ್ಕೆ ಅಥವಾ ಜೀವನದ ಸುಗಮತೆಗೆ ಅನುವುಮಾಡಿಕೊಡಲು ಆರೋಗ್ಯಕರ ಹಾಗೂ ದಕ್ಷ ವಿತರಣಾ ವಲಯ ಅತ್ಯಗತ್ಯ,ʼʼ ಎಂದರು.
ಈ ವರದಿಯನ್ನು ಹಲವು ಅಧ್ಯಾಯಗಳಾಗಿ ವಿಂಗಡಿಸಲಾಗಿದ್ದು ರಚನಾತ್ಮಕ ಸುಧಾರಣೆಗಳು, ನಿಯಂತ್ರಣ ಸುಧಾರಣೆಗಳು, ಕಾರ್ಯಾಚರಣೆ ಸುಧಾರಣೆಗಳು, ನಿರ್ವಹಣಾ ಸುಧಾರಣೆಗಳು ಮತ್ತು ನವೀಕರಿಸಬಹುದಾದ ಇಂಧನ ಸಂಯೋಜನೆ ಕುರಿತು ಅವು ಗಮನ ಕೇಂದ್ರೀಕರಿಸುತ್ತವೆ. ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಸಾರಸ್ವತ್ ಅವರು ಮಾತನಾಡಿ, “ವಿತರಣಾ ವಲಯವನ್ನು ದಕ್ಷತೆ ಮತ್ತು ಲಾಭದಾಯಕತೆಯ ಹಾದಿಯಲ್ಲಿ ಇರಿಸಲು ಕೈಗೊಳ್ಳಬೇಕಾದ ಸುಧಾರಣೆಗಳ ಆಯ್ಕೆಗಳನ್ನು ಈ ವರದಿಯು ನೀತಿ ನಿರೂಪಕರ ಮುಂದಿಡುತ್ತದೆ. ಈ ಸುಧಾರಣೆಗಳನ್ನು ಮುಂದುವರಿಸಲು ನೀತಿ ಆಯೋಗವು ಕೆಲವು ರಾಜ್ಯಗಳೊಂದಿಗೆ ಪಾಲುದಾರಿಕೆ ಹೊಂದಲಿದೆ,ʼʼ ಎಂದು ಹೇಳಿದರು.
ಪ್ರಸ್ತುತ ಸವಾಲುಗಳನ್ನು ಎದುರಿಸುವ ಅಗತ್ಯವನ್ನು ಒತ್ತಿ ಹೇಳಿದ ಆರ್‌ಎಂಐನ ವ್ಯವಸ್ಥಾಪಕ ನಿರ್ದೇಶಕ ಕ್ಲೇ ಸ್ಟ್ರೇಂಜರ್ ಅವರು “ಡಿಸ್ಕಾಂಗಳ ಸಂಕಟಗಳಿಗೆ ದೃಢವಾದ ಮತ್ತು ದೀರ್ಘಕಾಲೀನ ಪರಿಹಾರಕ್ಕೆ ನೀತಿಯಲ್ಲಿ ಬದಲಾವಣೆಗಳ ಜೊತೆಗೆ ಸಾಂಸ್ಥಿಕ, ವ್ಯವಸ್ಥಾಪಕ ಹಾಗೂ ತಾಂತ್ರಿಕ ಸುಧಾರಣೆಗಳ ಅಗತ್ಯವಿದೆ. ವಿವಿಧ ರಾಜ್ಯಗಳು ಸುಧಾರಣೆಗಳ ವಿವಿಧ ಮಾರ್ಗಗಳಲ್ಲಿ ಸಾಗುವ ಮೂಲಕ, ಕಲಿಕೆಗೆ ಸಮೃದ್ಧ ನೀತಿ ಪ್ರಯೋಗಗಳನ್ನು ಒದಗಿಸಿವೆ,ʼʼ ಎಂದು ಹೇಳಿದರು.
***
(Release ID: 1741813)
Visitor Counter : 388