ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಶಟ್ಲರ್ ಪಿ.ವಿ.ಸಿಂಧು, ಎರಡು ಒಲಿಂಪಿಕ್ಸ್ ಗಳಲ್ಲಿ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ
Posted On:
01 AUG 2021 7:51PM by PIB Bengaluru
ಪ್ರಮುಖ ಮುಖ್ಯಾಂಶಗಳು;
- ಕಂಚಿನ ಪದಕ ಪಂದ್ಯದಲ್ಲಿ ಚೀನಾದ ಹೆ ಬಿಂಗ್ ಜಿಯಾವೋ ರನ್ನು 21-13 ಮತ್ತು 21-15ರಿಂದ ಮಣಿಸಿದ ಸಿಂಧು.
- ಅದ್ಭುತ ಸಾಧನೆಗಾಗಿ ಸಿಂಧು ಅವರನ್ನು ಅಭಿನಂದಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ.
- ಸಿಂಧು ಅವರನ್ನು ಅಭಿನಂದಿಸಿ, ನೀವು ಇತಿಹಾಸ ಸೃಷ್ಟಿಸಿದ್ದೀರಿ ಎಂದು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿಕೆ.
ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಟೋಕಿಯೋ ಒಲಿಂಪಿಕ್ಸ್ ನಲ್ಲಿಂದು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಪಿ.ವಿ. ಸಿಂಧು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾದ ಹೆ ಬಿಂಗ್ ಜಿಯಾವೋ ಅವರನ್ನು 21-13 ಮತ್ತು 21-15 ರಿಂದ ಸೋಲಿಸಿದರು ಮತ್ತು ಸತತ ಎರಡು ಒಲಿಂಪಿಕ್ಸ್ ಗಳಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂದು ಕೀರ್ತಿಗಳಿಸಿದ್ದಾರೆ. ಸಿಂಧು 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಕುಸ್ತಿಪಟು ಸುಶೀಲ್ ಕುಮಾರ್ ಎರಡು ಒಲಿಂಪಿಕ್ ಪದಕಗಳನ್ನು ಪಡೆದ ಮೊದಲ ಹಾಗೂ ಏಕೈಕ ಭಾರತೀಯ ಆಟಗಾರರಾಗಿದ್ದಾರೆ. ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ದೇಶದ ಎಲ್ಲ ಮೂಲೆಗಳ ಭಾರತೀಯರು ಪಿ.ವಿ. ಸಿಂಧು ಅವರ ಸಾಧನೆಗಾಗಿ ಅವರನ್ನು ಅಭಿನಂದಿಸಿದ್ದಾರೆ.
ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ಸಿಂಧು ಅವರ ಗೆಲುವಿಗಾಗಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಶ್ರೀ ಕೋವಿಂದ್ ಅವರು ತಮ್ಮ ಟ್ವೀಟ್ ನಲ್ಲಿ “ಎರಡು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಜಯಿಸಿದ ಮೊದಲ ಭಾರತೀಯ ಮಹಿಳೆ ಪಿ.ವಿ. ಸಿಂಧು ಆಗಿದ್ದಾರೆ. ಸ್ಥಿರತೆ, ಸಮರ್ಪಣೆ ಮತ್ತು ಶ್ರೇಷ್ಠತೆಗೆ ಹೊಸ ಮಾನದಂಡವನ್ನು ನಿಗದಿಪಡಿಸಿದ್ದಾರೆ. ಭಾರತಕ್ಕೆ ಕೀರ್ತಿಗಾಗಿ ತಂದಿದ್ದಕ್ಕಾಗಿ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು” ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಂಧು ಅವರ ಸಾಧನೆಗಾಗಿ ಅವರನ್ನು ಅಭಿನಂದಿಸಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು, ತಮ್ಮ ಟ್ವೀಟ್ ನಲ್ಲಿ “ಪಿ.ವಿ. ಸಿಂಧು ಅವರ ಅದ್ಭುತ ಸಾಧನೆ ನಮಗೆಲ್ಲಾ ಹರ್ಷ ತಂದಿದೆ. ಟೋಕಿಯೊ 2020ರಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು, ಅವರು ಭಾರತದ ಹೆಮ್ಮೆಯ ಮತ್ತು ನಮ್ಮ ಅತ್ಯುತ್ತಮ ಒಲಿಂಪಿಯನ್ ಗಳಲ್ಲಿ ಒಬ್ಬರಾಗಿದ್ದಾರೆ ” ಎಂದು ಹೇಳಿದ್ದಾರೆ.
ಸಿಂಧು ಅವರನ್ನು ಅಭಿನಂದಿಸಿರುವ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ತಮ್ಮ ಟ್ವೀಟ್ ನಲ್ಲಿ “ಪಿ.ವಿ. ಸಿಂಧುಗೆ ಭರ್ಜರಿ ಜಯ ! ನೀವು ಕ್ರೀಡೆಯಲ್ಲಿ ಪ್ರಾಬಲ್ಯ ಮೆರೆದಿದ್ದೀರಿ ಮತ್ತು ಟೋಕಿಯೊ 2020ಯಲ್ಲಿ ಇತಿಹಾಸ ನಿರ್ಮಿಸಿದ್ದೀರಿ. ಎರಡು ಬಾರಿ ಒಲಿಂಪಿಕ್ ಪದಕ ಜಯಿಸಿದ್ದೀರಿ. ಭಾರತಕ್ಕೆ ನಿಮ್ಮ ಬಗ್ಗೆ ಹೆಮ್ಮೆಯಿದೆ ಮತ್ತು ನಿಮ್ಮ ವಾಪಸಾತಿಗೆ ಕಾಯುತ್ತಿದ್ದೇವೆ. ನೀವು ಸಾಧನೆ ಮಾಡಿ ತೋರಿಸಿದ್ದೀರಿ ಎಂದು ಹೇಳಿದ್ದಾರೆ.
ಪಿ.ವಿ. ಸಿಂಧು ಬೆಳ್ಳಿ ಪದಕ ವಿಜೇತರು(ರಿಯೊ ಒಲಿಂಪಿಕ್ಸ್ 2016). ಆಕೆಯ ಪೋಷಕರಿಬ್ಬರು ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರರು. ಆಕೆಯ ತಂದೆ ಅರ್ಜುನ ಪ್ರಶಸ್ತಿ ಪುರಸ್ಕೃತರು. ಆಕೆ 8ನೇ ವಯಸ್ಸಿನಲ್ಲಿದ್ದಾಗಲೇ ಬ್ಯಾಡ್ಮಿಂಟನ್ ಆಟದ ಕಲಿಕೆಯನ್ನು ಮೆಹಬೂಬ್ ಆಲಿ ಅವರ ಮಾರ್ಗದರ್ಶನದಲ್ಲಿ ಆರಂಭಿಸಿದ್ದರು ಮತ್ತು ಸಿಕಂದರಾಬಾದ್ ನಲ್ಲಿರುವ ಭಾರತೀಯ ರೈಲ್ವೆಯ ಇನ್ಸ್ ಟಿಟ್ಯೂಟ್ ಆಫ್ ಸಿಗ್ನಲ್ ಇಂಜಿನಿಯರಿಂಗ್ ಮತ್ತು ಟೆಲಿ ಕಮ್ಯುನಿಕೇಷನ್ ಕೇಂದ್ರದ ಬ್ಯಾಡ್ಮಿಂಟನ್ ಕೋರ್ಟ್ ಗಳಲ್ಲಿ ಬ್ಯಾಡ್ಮಿಂಟನ್ ಅನ್ನು ಕಲಿತರು. ಅವರು ಪ್ರತಿ ದಿನ ತಮ್ಮ ನಿವಾಸದಿಂದ ಬ್ಯಾಡ್ಮಿಂಟನ್ ಕೋರ್ಟ್ ಗೆ 56 ಕಿ.ಮೀ. ಪ್ರಯಾಣ ಬೆಳಸಿ, ಕ್ರೀಡೆಯನ್ನು ಕಲಿತು ಅಭ್ಯಾಸ ಮಾಡುತ್ತಿದ್ದರು. ಅವರು ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಸೇರಿ ಹತ್ತು ವರ್ಷದೊಳಗಿನವರ ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ಜಯಿಸಿದ್ದರು.
ವೈಯಕ್ತಿಕ ವಿವರಗಳು:
ಜನ್ಮ ದಿನಾಂಕ: ಜುಲೈ 05, 1995
ಸ್ವಂತ ಊರು: ಹೈದ್ರಾಬಾದ್, ತೆಲಂಗಾಣ
ತರಬೇತಿ ನೆಲೆ: ಪಿಜಿಬಿಎ ಮತ್ತು ಜಿಎಂಸಿ ಬಾಲಯೋಗಿ ಕ್ರೀಡಾ ಸಂಕೀರ್ಣ, ಗಚಿಬೌಲಿ
ವೈಯಕ್ತಿಕ ಕೋಚ್: ಪಾರ್ಕ್ ಟೆ ಸಂಗ್
ರಾಷ್ಟ್ರೀಯ ಕೋಚ್: ಪುಲ್ಲೆಲ ಗೋಪಿಚಂದ್
ಸಾಧನೆಗಳು:
ಬೆಳ್ಳಿ ಪದಕ, ರಿಯೋ ಒಲಿಂಪಿಕ್ಸ್ 2016
ಚಿನ್ನದ ಪದಕ, ಸಿಡಬ್ಲ್ಯೂಜಿ 2018(ತಂಡ ಸ್ಪರ್ಧೆ)
ಬೆಳ್ಳಿ ಪದಕ, ಸಿಡಬ್ಲ್ಯೂಜಿ 2018
ಬೆಳ್ಳಿ ಪದಕ, ಏಷ್ಯನ್ ಕ್ರೀಡಾಕೂಟ 2018
ವಿಶ್ವ ಚಾಂಪಿಯನ್, 2019
ಸರ್ಕಾರದ ಪ್ರಮುಖ ಮಧ್ಯಪ್ರವೇಶ
ಹಲವು ರಾಷ್ಟ್ರೀಯ ಸ್ಪರ್ಧೆಗಳು ಮತ್ತು ವಿದೇಶಿ ತರಬೇತಿಗಳಿಗೆ ವೀಸಾ ನೆರವಿನ ಪತ್ರಗಳು
ಟಿಒಪಿಎಸ್ ಅಡಿ ಅಂತಾರಾಷ್ಟ್ರೀಯ ತರಬೇತಿಗಳಿಗೆ ಫಿಜಿಯೋಥೆರಪಿಸ್ಟ್ ಮತ್ತು ದೈಹಿಕ ಕ್ಷಮತೆ ತರಬೇತುದಾರರ ಬೆಂಬಲ
ಟಿಒಪಿಎಸ್ ಅಡಿ ಫಿಜಿಯೋಥೆರಪಿಸ್ಟ್ (2018ರಲ್ಲಿ ಮೂರು ತಿಂಗಳು ಗಾಯತ್ರಿಶೆಟ್ಟಿ) ಬೆಂಬಲ
ಪ್ರಸಕ್ತ ಒಲಿಂಪಿಕ್ ಆವೃತ್ತಿಯ 52 ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಆರ್ಥಿಕ ನೆರವು.
ತ್ವರಿತವಾಗಿ ಗುಣಮುಖರಾಗಲು ಬೆಂಬಲ ನೀಡಲು ಟೋಕಿಯೊಗೆ ಗೇಮ್ ರೆಡಿ ರಿಕವರಿ ಸಿಸ್ಟಮ್ ಪೂರೈಕೆ. ಅವರ ಮನವಿಯ 24 ಗಂಟೆಗಳಲ್ಲಿ ಮೊತ್ತ ಬಿಡುಗಡೆ.
ತೆಲಂಗಾಣ ರಾಜ್ಯದ ಸಹಭಾಗಿತ್ವದಲ್ಲಿ ಗಚಿಬೌಲಿ ಕ್ರೀಡಾಂಗಣದಲ್ಲಿ ಕೋರ್ಟ್ ಮ್ಯಾಟ್ ಅಳವಡಿಕೆ ಸೇರಿ ವಿಶೇಷ ತರಬೇತಿಗೆ ನೆರವು.
ಎಸಿಟಿಸಿ ಅಡಿಯಲ್ಲಿ ವೈಯಕ್ತಿಕ ವಿದೇಶಿ ಕೋಚ್ ಪಾರ್ಕ್ ಟೆ ಸಂಗ್ ಆಯ್ಕೆಗೆ ಅವಕಾಶ.
ಕೋವಿಡ್-19 ಸಂದರ್ಭದಲ್ಲಿ ಆಕೆಗೆ ಮತ್ತು ಆಕೆಯ ವೈಯಕ್ತಿಕ ಸಿಬ್ಬಂದಿಗೆ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಪ್ರಯಾಣಕ್ಕೆ ನೆರವು .
ಎಸಿಟಿಸಿ ಅಡಿಯಲ್ಲಿ ರಾಷ್ಟ್ರೀಯ ಕೋಚಿಂಗ್ ಕ್ಯಾಂಪ್
ಟೋಕಿಯೊದಲ್ಲಿ ಜೀವನ, ಕೋವಿಡ್-19 ಶಿಷ್ಟಾಚಾರ, ಆಂಟಿ ಡೋಪಿಂಗ್ ಮತ್ತು ಭಾರತದಿಂದ ಹೆಮ್ಮೆಯ ಪ್ರವಾಸ ಕೈಗೊಳ್ಳುವುದನ್ನು ಅರ್ಥಮಾಡಿಕೊಳ್ಳಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು..
ಆರ್ಥಿಕ ನೆರವು
ಟಿಒಪಿಎಸ್: 51,28,030 ರೂ.
ಎಸಿಟಿಸಿ: 3,46,51,150 ರೂ.
ಒಟ್ಟು: 3,97,79,180 ರೂ.
ಪ್ರಶಸ್ತಿಗಳು
ಪದ್ಮಭೂಷಣ (2020)
ಪದ್ಮಶ್ರೀ (2015)
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ (2016)
ಅರ್ಜುನ ಪ್ರಶಸ್ತಿ (2013)
ಆರಂಭಿಕ ಕೋಚ್: ಮೆಹಬೂಬ್ ಅಲಿ(8-10 ವರ್ಷ), ಮೊಹಮ್ಮದ್ ಅಲಿ, ಅರೀಫ್ ಸರ್, ಗೋವರ್ಧನ್ ಸರ್ ಮತ್ತು ಟಾಮ್ ಜಾನ್(ವಯಸ್ಸು 10-12)
ಅಭಿವೃದ್ಧಿ ಕೋಚ್: ಪುಲ್ಲೇಲ ಗೋಪಿಚಂದ್ ಮತ್ತು ಗೋಪಿಚಂದ್ ಅಕಾಡೆಮಿಯ ಇತರರು.
ಹೆಮ್ಮೆಯ ತರಬೇತುದಾರರು: ಮುಲ್ಯೊ, ಕಿಮ್, ದ್ವಿ, ರಿಫಾನ್ ಮತ್ತು ಪಾರ್ಕ್ ಟೆ ಸಂಗ್(2018ರ ನಂತರ ಈವರೆಗೆ)
***
(Release ID: 1741403)
Visitor Counter : 592