ಪ್ರಧಾನ ಮಂತ್ರಿಯವರ ಕಛೇರಿ

ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಐಪಿಎಸ್ ಪ್ರೊಬೇಷನರಿ ಅಧಿಕಾರಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ


ಸ್ವಾತಂತ್ರ್ಯೋತ್ಸವದ 75ನೇ ವರ್ಷದಲ್ಲಿ ಸೇವೆ ಪ್ರವೇಶಿಸುತ್ತಿರುವ ನೀವು ಅದೃಷ್ಟವಂತರು, ಮುಂದಿನ 25 ವರ್ಷ ನಿಮಗೆ ಮತ್ತು ಭಾರತ ಎರಡಕ್ಕೂ ನಿರ್ಣಾಯಕ: ಪ್ರಧಾನಮಂತ್ರಿ

ಅವರು ‘ಸ್ವರಾಜ್ಯ’ಕ್ಕಾಗಿ ಹೋರಾಡಿದ್ದರು, ನೀವು ‘ಸುರಾಜ್ಯ”ಕ್ಕಾಗಿ ಮುನ್ನಡೆಯಿರಿ: ಪ್ರಧಾನಮಂತ್ರಿ

ತಾಂತ್ರಿಕ ಅಡಚಣೆಗಳ ಈ ಸಂದರ್ಭದಲ್ಲಿ ಪೊಲೀಸರನ್ನು ಸನ್ನದ್ಧವಾಗಿರಿಸುವುದು ಸವಾಲಿನ ಕೆಲಸ: ಪ್ರಧಾನಮಂತ್ರಿ

ನೀವು ‘ಏಕ ಭಾರತ್ – ಶ್ರೇಷ್ಠ ಭಾರತ್’ ನ ಧ್ವಜ ಹಿಡಿದಿರುವವರು ಸದಾ ‘ರಾಷ್ಟ್ರ ಮೊದಲು, ಸದಾ ರಾಷ್ಟ್ರವೇ ಮೊದಲು” ಎಂಬ ಮಂತ್ರ ಪಾಲನೆ ಮಾಡಿ: ಪ್ರಧಾನಮಂತ್ರಿ

ಸದಾ ಸ್ನೇಹಪರರಾಗಿರಿ ಮತ್ತು ಸಮವಸ್ತ್ರದ ಘನತೆಯನ್ನು ಎತ್ತಿಹಿಡಿಯಿರಿ: ಪ್ರಧಾನಮಂತ್ರಿ

ನಾನು ಹೊಸ ತಲೆಮಾರಿನ ಪ್ರತಿಭಾನ್ವಿತ ಮಹಿಳಾ ಅಧಿಕಾರಿಗಳನ್ನು ನೋಡುತ್ತಿದ್ದೇನೆ, ನಾವು ಪೊಲೀಸ್ ಪಡೆಯಲ್ಲಿ ಮಹಿಳೆಯರ ಸೇರ್ಪಡೆ ಹೆಚ್ಚಿಸಲು ಶ್ರಮಿಸಿದ್ದೇವೆ: ಪ್ರಧಾನಮಂತ್ರಿ

ಸಾಂಕ್ರಾಮಿಕದ ಸಮಯದಲ್ಲಿ ಸೇವೆಯಲ್ಲಿದ್ದಾಗ ಸಾವನ್ನಪ್ಪಿದ ಪೊಲೀಸ್ ಅಧಿಕಾರಿಗಳ ಕುಟುಂಬದವರಿಗೆ ಗೌರವ ನಮನ

ತರಬೇತಿ ಪಡೆಯುತ್ತಿರುವ ನೆರೆಹೊರೆಯ ದೇಶಗಳ ಅಧಿಕಾರಿಗಳು ನಮ್ಮ ನಿಕಟ ಮತ್ತು ಇತರೆ ಆಳವಾದ ಸಂಬಂಧವನ್ನು ಬಲವಾಗಿ ಪ್ರತಿಪಾದಿಸುತ್ತಾರೆ: ಪ್ರಧಾನಮಂತ್ರಿ

Posted On: 31 JUL 2021 1:46PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಐಪಿಎಸ್ ಪ್ರಶಿಕ್ಷಣಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಅವರು ತರಬೇತಿಯಲ್ಲಿರುವ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಷಾ ಮತ್ತು ಗೃಹ ಖಾತೆ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತರಬೇತಿಯಲ್ಲಿರುವ ಅಧಿಕಾರಿಗಳೊಂದಿಗೆ ಸಂವಾದ

ಪ್ರಧಾನಮಂತ್ರಿ ಅವರು, ಭಾರತೀಯ ಪೊಲೀಸ್ ಸೇವೆಯಲ್ಲಿರುವ ತರಬೇತಿಯಲ್ಲಿರುವ ಅಧಿಕಾರಿಗಳೊಂದಿಗೆ ಉತ್ಸಾಹದಿಂದ ಸಂವಾದ ನಡೆಸಿದರು. ತರಬೇತಿಯಲ್ಲಿರುವ ಅಧಿಕಾರಿಗಳೊಂದಿಗೆ ನಿರಂತರವಾಗಿ ನಡೆಸಿದ ಮಾತುಕತೆ ಹೊಸ ಗಾಳಿಯನ್ನು ಬೀಸಿತಲ್ಲದೆ, ಪ್ರಧಾನಮಂತ್ರಿ ಅವರು ಸೇವೆಯ ಅಧಿಕೃತ ಆಯಾಮಗಳಲ್ಲದೆ, ಹೊಸ ತಲೆಮಾರಿನ ಪೊಲೀಸ್ ಅಧಿಕಾರಿಗಳ ಕನಸು ಮತ್ತು ಆಶೋತ್ತರಗಳ ಕುರಿತೂ ಸಹ ಚರ್ಚೆ ನಡೆಸಿದರು.

ಐಐಟಿ ರೂರ್ಕೀಯಿಂದ ತೇರ್ಗಡೆ ಹೊಂದಿರುವ ಹರಿಯಾಣದ ಅನೂಜ್ ಪಲಿವಾಲ್ ಅವರು ಕೇರಳ ಕೇಡರ್ ಅನ್ನು ಆಯ್ಕೆ ಮಾಡಿಕೊಂಡಿದ್ದು, ಅವರು ಪ್ರಧಾನಮಂತ್ರಿ ಅವರೊಂದಿಗೆ ಸಂವಾದ ನಡೆಸಿ, ಅಧಿಕಾರಿಗಳ ಉಪಯುಕ್ತ ಆಯ್ಕೆ ಕುರಿತು ಮಾತನಾಡಿದರು. ತಮ್ಮ ವೃತ್ತಿ ಜೀವನದ ಅಂಶಗಳನ್ನು ವ್ಯವಹರಿಸುವಾಗ  ಅಪರಾಧ ತನಿಖೆ ಹಿನ್ನೆಲೆಯಲ್ಲಿ ಜೈವಿಕ ತಂತ್ರಜ್ಞಾನ ಬಳಕೆ ಮತ್ತು ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಮಾಜಶಾಸ್ತ್ರ ಐಚ್ಛಿಕ ವಿಷಯ ಆಯ್ಕೆ ಮಾಡಿಕೊಂಡಿದ್ದು ಹೇಗೆ ಸಹಕಾರಿಯಾಗುತ್ತಿದೆ ಎಂಬ ಕುರಿತು ಮಾತನಾಡಿದರು. ಪ್ರಧಾನಮಂತ್ರಿ ಅವರು ಶ್ರೀ ಪಲಿವಾಲ್ ಅವರಿಗೆ ಪೊಲೀಸ್ ವ್ಯವಸ್ಥೆಯ ಶುಷ್ಕ ಜಗತ್ತಿನಲ್ಲಿ ಸಂಗೀತ ಹವ್ಯಾಸ ತಮಗೆ ನೆರವಾಗಲಿದೆ ಮತ್ತು ಅದು ಅವರನ್ನು ಹೇಗೆ ಉತ್ತಮ ಅಧಿಕಾರಿಯನ್ನಾಗಿ ರೂಪಿಸುತ್ತದೆ ಹಾಗೂ ಸೇವಯನ್ನು ಉತ್ತಮಪಡಿಸಲು ಸಹಾಯಕವಾಗಲಿದೆ ಎಂದು ಹೇಳಿದರು

ರಾಜಕೀಯ ಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ವಿಚಾರವನ್ನು ತಮ್ಮ ನಾಗರಿಕ ಸೇವಾ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿರುವ ಕಾನೂನು ಪದವೀಧರ ಮತ್ತು ಈಜುಪಟು ರೋಹನ್ ಜಗದೀಶ್ ಅವರು ಪ್ರಧಾನಮಂತ್ರಿ ಅವರೊಂದಿಗೆ ಪೊಲೀಸ್ ಸೇವೆಯಲ್ಲಿ ದೈಹಿಕ ಕ್ಷಮತೆಯ ಪ್ರಾಮುಖ್ಯ ಕುರಿತು ಚರ್ಚೆ ನಡೆಸಿದರು. ಜಗದೀಶ್ ಅವರ ತಂದೆ ಕರ್ನಾಟಕ ರಾಜ್ಯದಲ್ಲಿ ಸೇವೆಯಲ್ಲಿದ್ದ ಅಧಿಕಾರಿಯಾಗಿದ್ದರು, ತಾವು ಕೂಡ ಐಪಿಎಸ್ ಅಧಿಕಾರಿಯಾಗಿ ಅಲ್ಲಿಗೆ ತೆರಳುತ್ತಿದ್ದೇನೆ ಎಂದು ವರ್ಷಗಳಿಂದೀಚೆಗೆ ತರಬೇತಿಯಲ್ಲಿ ಆಗಿರುವ ಬದಲಾವಣೆಗಳ ಕುರಿತು ಚರ್ಚಿಸಿದರು

ಚಂಡಿಗಢ ಕೇಡರ್ ಅನ್ನು ಆಯ್ಕೆ ಮಾಡಿಕೊಂಡಿರುವ ಮಹಾರಾಷ್ಟ್ರದ ಸಿವಿಲ್ ಇಂಜಿನಿಯರ್ ಆಗಿರುವ ಗೌರವ್ ರಾಮಪ್ರವೇಶ್ ರೈ ಅವರು ಪ್ರಧಾನಮಂತ್ರಿ ಅವರೊಂದಿಗೆ ತಮ್ಮ ಚಸ್  (ಚದುರಂಗ) ಹವ್ಯಾಸ ಮತ್ತು ಕ್ರೀಡೆ ಕ್ಷೇತ್ರ ಮಟ್ಟದಲ್ಲಿ ಹೇಗೆ ಕಾರ್ಯತಂತ್ರಗಳನ್ನು ರೂಪಿಸಬೇಕೆಂಬುದಕ್ಕೆ ನೆರವಾಗುತ್ತದೆ ಎಂದು ಚರ್ಚಿಸಿದರು. ತಮ್ಮ ಪ್ರದೇಶದ ಎಡಪಂಥೀಯ ಬಂಡುಕೋರರ ಹಾವಳಿ ಸನ್ನಿವೇಶದಲ್ಲಿ, ಪ್ರಧಾನಮಂತ್ರಿ ಅವರು, ಪ್ರದೇಶ ವಿಶಿಷ್ಟ ಸವಾಲುಗಳನ್ನು ಹೊಂದಿದೆ ಮತ್ತು ಕಾನೂನು ಸುವ್ಯವಸ್ಥೆ ಜೊತೆಗೆ ನಾವು ಆದಿವಾಸಿಗಳ ಪ್ರದೇಶಗಳಲ್ಲಿ ಅಭಿವೃದ್ಧಿ ಮತ್ತು ಸಾಮಾಜಿಕ ಸಂಪರ್ಕಕ್ಕೆ ಆದ್ಯತೆ ನೀಡುವ ಅಗತ್ಯವಿದೆ ಎಂದರು. ನಿಮ್ಮಂತಹ ಯುವ ಅಧಿಕಾರಿಗಳು, ಯುವಕರನ್ನು ಹಿಂಸಾ ಮಾರ್ಗ ಹಿಡಿಯುವುದರಿಂದ ದೂರ ಕೊಂಡೊಯ್ಯಲು ವ್ಯಾಪಕ ಕೊಡುಗೆ ನೀಡಬಹುದು ಎಂದು ಪ್ರಧಾನಮಂತ್ರಿ ಹೇಳಿದರು. ನಾವು ಮಾವೋವಾದಿ ಹಿಂಸಾಚಾರವನ್ನು ನಿಯಂತ್ರಿಸುತ್ತಿದ್ದೇವೆ ಮತ್ತು ಆದಿವಾಸಿಗಳ ಪ್ರದೇಶಗಳಲ್ಲಿ ಅಭಿವೃದ್ಧಿ ಮತ್ತು ವಿಶ್ವಾಸದ ಹೊಸ ಸೇತುವೆಗಳನ್ನು ಸ್ಥಾಪನೆ ಮಾಡುತ್ತಿದ್ದೇವೆ ಎಂದರು.

ರಾಜಸ್ಥಾನ ಕೇಡರ್ ಹರಿಯಾಣ ಮೂಲದ ಅಧಿಕಾರಿ ರಂಜಿತಾ ಶರ್ಮಾ ಅವರೊಂದಿಗೆ ಪ್ರಧಾನಮಂತ್ರಿ ಮಾತನಾಡಿ, ಅತ್ಯುತ್ತಮ ಪ್ರೊಬೆಷನರಿ ಎಂದು ಗೌರವಕ್ಕೆ ಪಾತ್ರವಾಗಿರುವ ಆಕೆಯ ಸಾಧನೆಗಳನ್ನು ಕುರಿತು ಮಾತನಾಡಿದರು ಮತ್ತು ತಮ್ಮ ಕೆಲಸದಲ್ಲಿ ತಮ್ಮ ವಿದ್ಯಾರ್ಹತೆ ಸಮೂಹ ಸಂವಹನವನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಶ್ರೀ ನರೇಂದ್ರ ಮೋದಿ ಅವರು, ರಾಜಸ್ಥಾನ ಮತ್ತು ಹರಿಯಾಣ ರಾಜ್ಯಗಳಲ್ಲಿ ಹೆಣ್ಣು ಮಕ್ಕಳ ಸ್ಥಿತಿಗತಿ ಸುಧಾರಣೆ ನಿಟ್ಟಿನಲ್ಲಿ ಕೈಗೊಂಡ ಕಾರ್ಯಗಳನ್ನು ಉಲ್ಲೇಖಿಸಿದರು. ತಮ್ಮನ್ನು ಎಲ್ಲಿಗೆ ನಿಯೋಜಿಸಲಾಗಿದೆಯೋ ಅಲ್ಲಿ ಪ್ರತಿವಾರ ಒಂದು ಗಂಟೆ ಹೆಣ್ಣು ಮಕ್ಕಳಿಗೆ ಮೀಸಲಾಗಿಟ್ಟು, ಅವರ ಜೊತೆ ಸಂವಾದ ನಡೆಸಿ, ತಮ್ಮ ಸಂಪೂರ್ಣ ಸಾಮರ್ಥ್ಯ ಸಾಧಿಸಲು ಉತ್ತೇಜನ ನೀಡಬೇಕು ಎಂದು ಅಧಿಕಾರಿಗೆ ಸಲಹೆ ನೀಡಿದರು

ಹೋಮ್ ಕೇಡರ್ ಗೆ ನಿಯೋಜನೆಗೊಂಡಿರುವ ಕೇರಳದ ಪಿ. ನಿತಿನ್ ರಾಜ್ ಅವರೊಂದಿಗೆ ಪ್ರಧಾನಮಂತ್ರಿ ಅವರು ಸಂವಾದ ನಡೆಸಿ, ಫೋಟೋಗ್ರಫಿ ಮತ್ತು ಬೋಧನೆ ಬಗ್ಗೆ ತಮ್ಮ ಆಸಕ್ತಿಯನ್ನು ಜೀವಂತವಾಗಿರಿಸಿಕೊಳ್ಳ ಬೇಕು ಅವು ಜನರೊಂದಿಗೆ ಸಂಪರ್ಕ ನಡೆಸಲು ಅತ್ಯುತ್ತಮ ವಿಧಾನಗಳಾಗಿವೆ ಎಂದರು ಸಲಹೆ ಮಾಡಿದರು.

ಬಿಹಾರ ಕೇಡರ್ ಗೆ ನಿಯೋಜನೆಗೊಂಡಿರುವ ಪಂಜಾಬ್ ದಂತ ವೈದ್ಯ ಡಾ. ನವಜೋತ್ ಸಿಮಿ ಅವರೊಂದಿಗೆ ಪ್ರಧಾನಮಂತ್ರಿ ಮಾತನಾಡಿ, ಪೊಲೀಸ್ ಪಡೆಯಲ್ಲಿ ಮಹಿಳಾ ಅಧಿಕಾರಿಗಳ ಇರುವಿಕೆ, ಸೇವೆಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ ಮತ್ತು ಯಾವುದೇ ಭಯವಿಲ್ಲದೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಂಯಮ ಮತ್ತು ಸೂಕ್ಷ್ಮ ಸಂವೇದನೆಯಲ್ಲಿ ನಿರ್ವಹಿಸಬಹುದು ಎಂದು ಸಲಹೆ ನೀಡಿದರು. ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣು ಮಕ್ಕಳನ್ನು ಸೇವೆಯಲ್ಲಿ ಸೇರ್ಪಡೆ ಮಾಡುವುದರಿಂದ ಪಡೆ ಇನ್ನಷ್ಟು ಬಲವರ್ಧನೆಯಾಗಲಿದೆ ಎಂದರು.

ಐಐಟಿ ಖರಗ್ಪುರ್ ಎಂಟೆಕ್ ಪದವೀಧರ ಆಂಧ್ರಪ್ರದೇಶದ ಕೊಮ್ಮಿ ಪ್ರತಾಪ ಶಿವಕಿಶೋರ್ ತಮ್ಮ ತವರು ರಾಜ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಅವರೊಂದಿಗೆ ಪ್ರಧಾನಮಂತ್ರಿ ಅವರು ಹಣಕಾಸು ವಂಚನೆಗಳ ನಿಯಂತ್ರಣ ಕುರಿತಂತೆ ಮಾತನಾಡಿದರು. ಮಾಹಿತಿ ತಂತ್ರಜ್ಞಾನದ ಸಂಭವನೀಯತೆಯನ್ನು ಸೇರಿಸಿಕೊಳ್ಳಲು ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಸೈಬರ್ ಅಪರಾಧ ಜಗತ್ತಿನ ಬೆಳವಣಿಗೆಗಳ ವೇಗದ ಮೇಲೆ ನಿಗಾ ಇಡಬೇಕು ಎಂದು ಅವರು ಸೂಚಿಸಿದರು. ಯುವ ಅಧಿಕಾರಿಗಳು ಡಿಜಿಟಲ್ ಜಾಗೃತಿಯನ್ನು ಸುಧಾರಿಸಲು ತಮ್ಮ ಸಲಹೆಗಳನ್ನು ಕಳುಹಿಸುವಂತೆ ಕೋರಿದರು.

ತರಬೇತಿಯಲ್ಲಿರುವ ಮಾಲ್ಡವೀಸ್ ಅಧಿಕಾರಿ ಮೊಹಮ್ಮದ್ ನಾಜಿಮ್ ಅವರೊಂದಿಗೆ ಶ್ರೀ ನರೇಂದ್ರ ಮೋದಿ ಸಂವಾದ ನಡೆಸಿದರು. ಪ್ರಧಾನಮಂತ್ರಿ ಅವರು ಮಾಲ್ಡವೀಸ್ ಪ್ರಕೃತಿ ಪ್ರೀತಿಸುವ ಜನರ ಬಗ್ಗೆ ಮೆಚ್ಚುಗೆ ಸಂದೇಶವನ್ನು ತಿಳಿಸಿದರು. ಮಾಲ್ಡವೀಸ್ ಕೇವಲ ನಮ್ಮ ನೆರೆಯ ರಾಷ್ಟ್ರವಲ್ಲ, ಅದು ಉತ್ತಮ ಸ್ನೇಹಿತ ರಾಷ್ಟ್ರವೂ ಹೌದು ಎಂದು ಅವರು ಹೇಳಿದರು. ಅಲ್ಲಿ ಪೊಲೀಸ್ ಅಕಾಡೆಮಿ ಸ್ಥಾಪನೆಗೆ ಭಾರತ ನೆರವು ನೀಡುತ್ತಿದೆ. ಪ್ರಧಾನಮಂತ್ರಿ ಅವರು ಎರಡೂ ದೇಶಗಳ ನಡುವಿನ ಸಾಮಾಜಿಕ ಮತ್ತು ವಾಣಿಜ್ಯ ಸಂಬಂಧಗಳ ಕುರಿತು ಪ್ರಸ್ತಾಪಿಸಿದರು.

ಪ್ರಧಾನಮಂತ್ರಿ ಅವರ ಭಾಷಣ

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು ಬರುವ ಆಗಸ್ಟ್ 15, ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕೋತ್ಸವ ಆಗಿರಲಿದೆ ಎಂದು ಉಲ್ಲೇಖಿಸಿದರು. ಕಳೆದ 75 ವರ್ಷಗಳಲ್ಲಿ ಉತ್ತಮ ಪೊಲೀಸ್ ಸೇವೆ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಗಳು ನಡೆದಿರುವುದನ್ನು ಕಂಡಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಪೊಲೀಸ್ ತರಬೇತಿಗೆ ಸಂಬಂಧಿಸಿದಂತೆ ಮೂಲಸೌಕರ್ಯದಲ್ಲಿ ಗಣನೀಯ ಸುಧಾರಣೆಗಳನ್ನು ತರಲಾಗಿದೆ. ಪ್ರಧಾನಮಂತ್ರಿ ಅವರು ಸ್ವಾತಂತ್ರ್ಯ ಸಂಗ್ರಾಮದ ಚೈತನ್ಯವನ್ನು  ತರಬೇತಿಯಲ್ಲಿರುವ ಅಧಿಕಾರಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು. 1930 ರಿಂದ 1947 ನಡುವಿನ ಅವಧಿಯಲ್ಲಿ ದೇಶದ ಅಂದಿನ ಯುವ ಪೀಳಿಗೆ ಶ್ರೇಷ್ಠ ಗುರಿ ಸಾಧನೆಗೆ ಒಗ್ಗಟ್ಟಿನಿಂದ ಮೇಲೆದ್ದು ಹೋರಾಡಿತ್ತು ಎಂದು ಹೇಳಿದರು. ಇಂದಿನ ಯುವ ಜನತೆಯಿಂದಲೂ ಅದೇ ಭಾವನೆ ನಿರೀಕ್ಷಿಸಲಾಗುತ್ತಿದೆ ಎಂದರು. ಅವರು ಸ್ವರಾಜ್ಯಕ್ಕಾಗಿ ಹೋರಾಡಿದ್ದರು; ನೀವು ಸುರಾಜ್ಯದತ್ತ ಮುನ್ನಡೆಯಬೇಕುಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು

ಭಾರತ ಪ್ರತಿಯೊಂದು ಹಂತದಲ್ಲೂ ಪರಿವರ್ತನೆಯಾಗುತ್ತಿರುವ ಸಂದರ್ಭದಲ್ಲಿ ತಾವು ವೃತ್ತಿಯನ್ನು ಪ್ರವೇಶಿಸುತ್ತಿರುವ ಮಹತ್ವವನ್ನು ತರಬೇತಿಯಲ್ಲಿರುವ ಅಧಕಾರಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಅಧಿಕಾರಿಗಳ ಸೇವೆಯಲ್ಲಿ ಮೊದಲ 25 ವರ್ಷಗಳು ಭಾರತದ ಜೀವನದಲ್ಲಿ 25 ವರ್ಷಗಳು ನಿರ್ಣಾಯಕವಾಗಲಿವೆ, ಏಕೆಂದರೆ ಆಗ ಭಾರತದ ಗಣರಾಜ್ಯವು 75 ವರ್ಷಗಳ ಸ್ವಾತಂತ್ರ್ಯದಿಂದ ಸ್ವಾತಂತ್ರೋತ್ಸವದ ಶತಮಾನೋತ್ಸವಕ್ಕೆ ಕಾಲಿಟ್ಟಿರುತ್ತದೆ ಎಂದರು.  

ತಾಂತ್ರಿಕ ಅಡಚಣೆಗಳ ಸಮಯದಲ್ಲಿ ಪೊಲೀಸ್ ಪಡೆಗಳನ್ನು ಸನ್ನದ್ಧವಾಗಿಟ್ಟುಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಹೆಚ್ಚು ವಿನೂತನ ಮಾದರಿಗಳನ್ನು ಅಳವಡಿಸಿಕೊಳ್ಳುತ್ತಿರುವ ಹೊಸ ಬಗೆಯ ಅಪರಾಧಗಳನ್ನು ನಿಯಂತ್ರಿಸುವ ಸವಾಲು ಇದೆ ಎಂದು ಅವರು ಹೇಳಿದರು. ಸೈಬರ್ ಭದ್ರತೆ ವಿಷಯದಲ್ಲಿ ನವೀನ ಪ್ರಯೋಗಗಳು, ಸಂಶೋಧನೆ ಮತ್ತು ವಿಧಾನಗಳನ್ನು ಕೈಗೆತ್ತಿಕೊಳ್ಳುವ ಅಗತ್ಯವಿದೆ ಎಂದು ಬಲವಾಗಿ ಪ್ರತಿಪಾದಿಸಿದರು.

ಜನರು ತಮ್ಮಿಂದ ಸ್ವಲ್ಪಮಟ್ಟಿನ ಸಂಯಮದ ವರ್ತನೆಯನ್ನು ನಿರೀಕ್ಷಿಸುತ್ತಿದ್ದಾರೆ ಎಂದು ನರೇಂದ್ರ ಮೋದಿ ಅವರು ತರಬೇತಿಯಲ್ಲಿರುವ ಅಧಿಕಾರಿಗಳಿಗೆ ತಿಳಿಸಿದರು. ಅಧಿಕಾರಿಗಳು ಕಚೇರಿಯಲ್ಲಿ ಅಥವಾ ಕೇಂದ್ರ ಕಚೇರಿಯಲ್ಲಿ ಇದ್ದಾಗ ಮಾತ್ರವಲ್ಲ, ಅದರ ನಂತರವೂ ಸೇವೆಯ ಘನತೆಯನ್ನು ಎತ್ತಿಹಿಡಿಯುವ ಬಗ್ಗೆ ಸದಾ ಎಚ್ಚರದಿಂದಿರಬೇಕು ಎಂದು ಹೇಳಿದರುನಿಮ್ಮ ಇಚ್ಛೆಯು ಸಮಾಜದ ಎಲ್ಲಾ ಪಾತ್ರಗಳ ಬಗ್ಗೆ ತಿಳಿದಿರಬೇಕು, ಸ್ನೇಹಪರರಾಗಿ  ಉಳಿಯಲು ಮತ್ತು ಸಮವಸ್ತ್ರದ ಘನತೆಯನ್ನು ಅತ್ಯುನ್ನತ ಮಟ್ಟದಲ್ಲಿ ಎತ್ತಿಹಿಡಿಯುವ ಅಗತ್ಯವಿದೆ’’ ಎಂದು ಪ್ರಧಾನಮಂತ್ರಿ ಹೇಳಿದರು.

ತರಬೇತಿಯಲ್ಲಿರುವ ಅಧಿಕಾರಿಗಳು ಏಕ ಭಾರತ್ ಶ್ರೇಷ್ಠ ಭಾರತ್ ಧ್ವಜ ಮುನ್ನಡೆಸುವವರು ಎಂಬುದನ್ನು ನೆನಪು ಮಾಡಿಕೊಟ್ಟ ಪ್ರಧಾನಮಂತ್ರಿ ಅವರು, ಹಾಗಾಗಿ ಅಧಿಕಾರಿಗಳು ಸದಾ ರಾಷ್ಟ್ರ ಮೊದಲು, ಸದಾ ಮೊದಲುಎಂಬ ಮಂತ್ರವನ್ನು ತಮ್ಮ ಮನಸ್ಸಿನಲ್ಲಿಟ್ಟುಕೊಳ್ಳಬೇಕು ಹಾಗು ಅದು ಅವರ ಎಲ್ಲಾ ಚಟುವಟಿಕೆಗಳಲ್ಲಿ ಪ್ರತಿಫಲನಗೊಳ್ಳಬೇಕು ಎಂದು ಹೇಳಿದರು. ಕ್ಷೇತ್ರಮಟ್ಟದಲ್ಲಿ ಅಧಿಕಾರಿಗಳು ರಾಷ್ಟ್ರದ ಹಿತಾಸಕ್ತಿ ಮತ್ತು ರಾಷ್ಟ್ರದ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸ ಪೀಳಿಗೆಯ ಯುವ ಪ್ರತಿಭಾನ್ವಿತ ಮಹಿಳಾ ಅಧಿಕಾರಿಗಳನ್ನು ಗುರುತಿಸಿದರು ಮತ್ತು ಪೊಲೀಸ್ ಪಡೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಹೆಚ್ಚಿನ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ನಮ್ಮ ಹೆಣ್ಣು ಮಕ್ಕಳು ಪೊಲೀಸ್ ಸೇವೆಯಲ್ಲಿ ಗರಿಷ್ಠ ಮಟ್ಟದ ದಕ್ಷತೆ, ಪ್ರಾಮಾಣಿಕತೆ ಮತ್ತು ಹೊಣೆಗಾರಿಕೆಯನ್ನು ತರಲಿದ್ದಾರೆ ಮತ್ತು ವಿನಯ ಹಾಗೂ ಸೂಕ್ಷ್ಮ ಅಂಶಗಳನ್ನು ತರಲಿದ್ದಾರೆ ಎಂದು ಭರವಸೆಯನ್ನು ವ್ಯಕ್ತಪಡಿಸಿದರು. ಹತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳಲ್ಲಿ ಕಮಿಷನರೇಟ್ ವ್ಯವಸ್ಥೆಯನ್ನು ಜಾರಿಗೊಳಿಸಲು ರಾಜ್ಯಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಉಲ್ಲೇಖಿಸಿದರು. ಈಗಾಗಲೇ 16 ರಾಜ್ಯಗಳ ಹಲವು ನಗರಗಳಲ್ಲಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದರು. ಪೊಲೀಸ್ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಭವಿಷ್ಯದ ದೃಷ್ಟಿಯಿಂದ ಸಜ್ಜುಗೊಳಿಸಲು ಸಾಮೂಹಿಕವಾಗಿ  ಮತ್ತು ಸೂಕ್ಷ್ಮದಿಂದ ಕಾರ್ಯನಿರ್ವಹಿಸುವುದು ಮುಖ್ಯವಾಗಿದೆ ಎಂದು ಹೇಳಿದರು.

ಸಾಂಕ್ರಾಮಿಕದ ಸಮಯದಲ್ಲಿ ಸೇವೆಯಲ್ಲಿದ್ದಾಗ ಸಾವನ್ನಪ್ಪಿದ ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೆ ಗೌರವವನ್ನು ಸಲ್ಲಿಸಿದರು ಮತ್ತು ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಅವರ ಕೊಡುಗೆಯನ್ನು ಸ್ಮರಿಸಿದರು.

ನೆರೆಯ ರಾಷ್ಟ್ರಗಳ ಪೊಲೀಸ್ ಅಧಿಕಾರಿಗಳೂ ಕೂಡ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಇದು ರಾಷ್ಟ್ರಗಳೊಂದಿಗಿನ ನಿಕಟ ಮತ್ತು ಆಳವಾದ ಸಂಬಂಧವನ್ನು ತೋರಿಸುತ್ತದೆ ಎಂದರು. ಭೂತಾನ್, ನೇಪಾಳ, ಮಾಲ್ಡ್ ವೀಸ್ ಅಥವಾ ಮಾರಿಷಸ್ ರಾಷ್ಟ್ರಗಳು ನಮಗೆ ಕೇವಲ ನೆರೆಯ ರಾಷ್ಟ್ರಗಳು ಮಾತ್ರವಲ್ಲ, ನಮ್ಮ ಆಲೋಚನೆ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಹಲವು ಸಮಾನ ಗುಣಗಳನ್ನು ಹೊಂದಿದ್ದೇವೆ ಎಂದು ಅವರು ಹೇಳಿದರು. ಅಗತ್ಯಬಿದ್ದಾಗ ನಾವು ಮಿತ್ರರಾಗಿರುತ್ತೇವೆ. ಯಾವುದೆ ವಿಪತ್ತು ಅಥವಾ ಕಷ್ಟಗಳು ಎದುರಾದರೆ ನಾವು ಪರಸ್ಪರ ಮೊದಲು ಸ್ಪಂದಿಸುತ್ತೇವೆ. ಇದು ಕೊರೊನಾ ಅವಧಿಯಲ್ಲೂ ಸಹ ದೃಢಪಟ್ಟಿದೆ ಎಂದು  ಹೇಳಿದರು.

***



(Release ID: 1741103) Visitor Counter : 275