ಪ್ರಧಾನ ಮಂತ್ರಿಯವರ ಕಛೇರಿ

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ

Posted On: 28 JUL 2021 8:17PM by PIB Bengaluru

ಅಮೆರಿಕದ ವಿದೇಶಾಂಗ  ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು.

ಬ್ಲಿಂಕೆನ್ ಅವರು, ಪ್ರಧಾನಮಂತ್ರಿಯವರಿಗೆ ರಾಷ್ಟ್ರಾಧ್ಯಕ್ಷ ಬೈಡನ್ ಮತ್ತು ಉಪ ರಾಷ್ಟ್ರಾಧ್ಯಕ್ಷೆ ಹ್ಯಾರಿಸ್ ಅವರುಗಳ ಶುಭಾಶಯಗಳನ್ನು ತಿಳಿಸಿದರು. ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ನಡೆದ ಫಲಪ್ರದ ವಿಚಾರ ವಿನಿಮಯದ ಕುರಿತಂತೆಯೂ ಅವರು ಪ್ರಧಾನಮಂತ್ರಿಯವರಿಗೆ ಸಂಕ್ಷಿಪ್ತವಾಗಿ ವಿವರಿಸಿ, ರಕ್ಷಣೆ, ಸಾಗರ ಭದ್ರತೆ, ವಾಣಿಜ್ಯ ಮತ್ತು ಹೂಡಿಕೆ, ಹವಾಮಾನ ಬದಲಾವಣೆ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸೇರಿದಂತೆ ವಿವಿಧ ವಲಯಗಳಲ್ಲಿ ಭಾರತ ಮತ್ತು ಅಮೆರಿಕಾ ನಡುವಿನ ವ್ಯೂಹಾತ್ಮಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಬಲವಾದ ಬದ್ಧತೆಯನ್ನು ವ್ಯಕ್ತಪಡಿಸಿದರು.

ಪ್ರಧಾನಮಂತ್ರಿಯವರು ರಾಷ್ಟ್ರಾಧ್ಯಕ್ಷ ಬೈಡನ್ ಮತ್ತು ಉಪ ರಾಷ್ಟ್ರಾಧ್ಯಕ್ಷೆ ಹ್ಯಾರಿಸ್ ಅವರಿಗೆ ಆಪ್ತ ಶುಭಾಶಯಗಳನ್ನು ಸಲ್ಲಿಸಿ, ಕ್ವಾಡ್, ಕೋವಿಡ್ -19 ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಜಾನ್ ಬೈಡನ್ ಅವರು ಕೈಗೊಂಡಿರುವ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯದರ್ಶಿ ಬ್ಲಿಂಕೆನ್ ಅವರು ಭಾರತ ಮತ್ತು ಅಮೆರಿಕ ನಡುವೆ ವಿಸ್ತೃತ ಶ್ರೇಣಿಯ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವಿಚಾರಗಳ ಕುರಿತ ಒಮ್ಮತದ ಹೆಚ್ಚಳ ಮತ್ತು ಒಮ್ಮತವನ್ನು ಸಮಗ್ರ ಮತ್ತು ಪ್ರಾಯೋಗಿಕ ಸಹಕಾರವಾಗಿ ಬದಲಾಯಿಸುವ ವ್ಯೂಹಾತ್ಮಕ ಪಾಲುದಾರಿಕೆಯ ಬದ್ಧತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಮೋದಿ ಅವರು, ಅಮೆರಿಕ ಮತ್ತು ಭಾರತ ಎರಡೂ ಪ್ರಜಾಸತ್ತಾತ್ಮಕ, ಸ್ವಾತಂತ್ರ ಮತ್ತು ಮುಕ್ತ ಸ್ವಾತಂತ್ರ್ಯದ ಮೌಲ್ಯಗಳ ಆಳವಾದ ಬದ್ಧತೆಯನ್ನು ಹಂಚಿಕೊಳ್ಳುತ್ತವೆ ಮತ್ತು ಅಮೆರಿಕದಲ್ಲಿನ ಭಾರತೀಯ ವಲಸಿಗರು ದ್ವಿಪಕ್ಷೀಯ ಸಂಬಂಧಗಳ ವರ್ಧನೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದರು.

ಕೋವಿಡ್-19, ಜಾಗತಿಕ ಆರ್ಥಿಕ ಚೇತರಿಕೆ ಮತ್ತು ಹವಾಮಾನ ಬದಲಾವಣೆಯಿಂದ ಎದುರಾಗಿರುವ ಸವಾಲುಗಳ ಹಿನ್ನೆಲೆಯಲ್ಲಿ ಮುಂಬರುವ ವರ್ಷಗಳಲ್ಲಿ ಭಾರತ-ಅಮೆರಿಕ ಕಾರ್ಯತಂತ್ರದ ಸಹಭಾಗಿತ್ವವು ಇನ್ನೂ ಹೆಚ್ಚಿನ ಜಾಗತಿಕ ಮಹತ್ವವನ್ನು ಹೊಂದಿರುತ್ತದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು.

***



(Release ID: 1740168) Visitor Counter : 319