ರಕ್ಷಣಾ ಸಚಿವಾಲಯ

ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾದಲ್ಲಿ ಮೂರು ಸೇನಾ ಪಡೆಗಳಿಂದ ಪ್ರವಾಹ ಪರಿಹಾರ ಕಾರ್ಯಾಚರಣೆ

Posted On: 25 JUL 2021 9:59AM by PIB Bengaluru

ಪ್ರಮುಖ ಮುಖ್ಯಾಂಶಗಳು:

  • ಭಾರತೀಯ ಸೇನೆಯ ಕಾರ್ಯಪಡೆಗಳು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಮೂರು ಜಿಲ್ಲೆಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತವೆ
  • ಭಾರತೀಯ ನೌಕಾಪಡೆ ತಂಡಗಳು ಕರ್ನಾಟಕದಲ್ಲಿ 200ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿವೆ
  • ಸುಮಾರು 400 ಎನ್ಡಿಆರ್ಎಫ್ ಸಿಬ್ಬಂದಿಯನ್ನು ಭಾರತೀಯ ವಾಯುಪಡೆ ಪ್ರವಾಹ ಪೀಡಿತ ಪ್ರದೇಶಗಳಿಗೆ ವಿಮಾನದಲ್ಲಿ ಕರೆದೊಯ್ದಿದೆ
  • ಮತ್ತಷ್ಟು ರಕ್ಷಣಾ ತಂಡಗಳು ಮತ್ತು ವಿಮಾನಗಳು ಸನ್ನದ್ಧ ಸ್ಥಿತಿಯಲ್ಲಿವೆ

ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ

ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ಮೂರೂ ಸೇನಾ ಪಡೆಗಳು ನಾಗರಿಕ ಆಡಳಿತ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳೊಂದಿಗೆ ಕೈಜೋಡಿಸಿವೆ. ಮಹಾರಾಷ್ಟ್ರದ ರತ್ನಗಿರಿ, ಕೊಲ್ಹಾಪುರ ಮತ್ತು ಸಾಂಗ್ಲಿಜಿಲ್ಲೆಗಳ ಆಡಳಿತಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕೆಲಸ ಮಾಡುತ್ತಿರುವ ಭಾರತೀಯ ಸೇನೆತಯು, ಅತ್ಯಧಿಕ ಬಾಧಿತ ಪ್ರದೇಶಗಳಲ್ಲಿ ಪದಾತಿದಳ, ಎಂಜಿನಿಯರ್‌ಗಳು, ಸಂವಹನ, ಚೇತರಿಕೆ ಮತ್ತು ವೈದ್ಯಕೀಯ ತಂಡಗಳನ್ನು ಒಳಗೊಂಡ ಕಾರ್ಯಪಡೆಗಳನ್ನು ನಿಯೋಜಿಸಿದೆ. ಈ ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಿದ್ದು, ಚಿಪ್ಲುನ್, ಶಿರೋಲ್, ಹತ್‌ಕಾಂಗ್ಲೆ, ಪಾಲಸ್ ಮತ್ತು ಮಿರಾಜ್ ಪ್ರದೇಶಗಳಲ್ಲಿ ಅಮೂಲ್ಯ ಜೀವಗಳನ್ನು ಉಳಿಸಿವೆ.

 

ಕರ್ನಾಟಕದಲ್ಲಿ, ಭಾರತೀಯ ನೌಕಾಪಡೆಯು ಮುಳುಗುತಜ್ಞರು, ರಬ್ಬರ್ 'ಜೆಮಿನಿ' ದೋಣಿಗಳು, ಲೈಫ್ ಜಾಕೆಟ್‌ಗಳು ಮತ್ತು ವೈದ್ಯಕೀಯ ಸಲಕರಣೆಗಳೊಂದಿಗೆ ಏಳು ಸುಸಜ್ಜಿತ ಪ್ರವಾಹ ಪರಿಹಾರ ತಂಡಗಳನ್ನು ಪ್ರವಾಹ ಪರಿಹಾರ ಕಾರ್ಯಾಚರಣೆಗಾಗಿ ಸಜ್ಜುಗೊಳಿಸಿದೆ. ಕದ್ರಾ ಅಣೆಕಟ್ಟಿನ ಬಳಿಯ ಸಿನ್ಗುಡ್ಡ ಮತ್ತು ಭೈರೆ ಗ್ರಾಮಗಳಿಂದ 165 ಜನರನ್ನು ಈ ತಂಡಗಳು ಸ್ಥಳಾಂತರಿಸಿವೆ. ಕೈಗಾದ ತಗ್ಗು ಪ್ರದೇಶಗಳಿಂದ 70 ಜನರನ್ನು ಸ್ಥಳಾಂತರಿಸಲಾಗಿದೆ.

ನೌಕಾ ಸೀಕಿಂಗ್, ಸುಧಾರಿತ ಲಘು ಹೆಲಿಕಾಪ್ಟರ್‌ಗಳು ಮತ್ತು ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್‌ಗಳು ಅನೇಕ ಬಾರಿ ಸಂಚಾರಗಳನ್ನು ನಡೆಸಿದ್ದು, ನೀರಿನ ಮಟ್ಟ ಹಠಾತ್ ಮತ್ತು ತೀವ್ರ ಏರಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಜನರನ್ನು ರಕ್ಷಿಸಿವೆ.  ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಹಾಗೂ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಯೋಜಿಸಲು ಅನುಕೂಲವಾಗುವಂತೆ ಹಿರಿಯ ಅಧಿಕಾರಿಗಳು ಬಾಧಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

ಭುವನೇಶ್ವರ, ಕೋಲ್ಕತ್ತಾ ಮತ್ತು ವಡೋದರಾದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ(ಎನ್‌ಡಿಆರ್‌ಎಫ್) ಸುಮಾರು 400 ಸಿಬ್ಬಂದಿಯನ್ನು 40 ಟನ್ ರಕ್ಷಣಾ ಸಾಧನಗಳೊಂದಿಗೆ ಭಾರತೀಯ ವಾಯುಪಡೆಯ ವಿಮಾನಗಳ ಮೂಲಕ ಮಹಾರಾಷ್ಟ್ರದ ಪುಣೆ, ಕೊಲ್ಹಾಪುರ ಮತ್ತು ರತ್ನಗಿರಿ ಮತ್ತು ಗೋವಾಕ್ಕೆ ತೆರಳಿಸಲಾಯಿತು.

 

ಮೂರು ಸೇನಾ ಪಡೆಗಳ ತಂಡಗಳು ಪ್ರವಾಹದಿಂದ ಸಂತ್ರಸ್ತರಾದ ಸ್ಥಳೀಯರನ್ನು ರಕ್ಷಿಸಲು ಹಗಲಿರುಳು ಶ್ರಮಿಸುತ್ತಿವೆ. ಜೊತೆಗೆ ಅವರಿಗೆ ಆಹಾರ, ನೀರು, ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸುತ್ತಿವೆ. ಹೆಚ್ಚಿನ ರಕ್ಷಣಾ ತಂಡಗಳು ಮತ್ತು ವಿಮಾನಗಳು ನಿಯೋಜನೆಗಾಗಿ ಸನ್ನದ್ಧ ಸ್ಥಿತಿಯಲ್ಲಿವೆ.

***



(Release ID: 1738916) Visitor Counter : 292