ಪ್ರಧಾನ ಮಂತ್ರಿಯವರ ಕಛೇರಿ

ಟೋಕಿಯೋಗೆ ತೆರಳುವ ಭಾರತೀಯ ಕ್ರೀಡಾಳುಗಳ ತಂಡದ ಜೊತೆ ಪ್ರಧಾನ ಮಂತ್ರಿ ಅವರ ಸಂವಾದ

Posted On: 13 JUL 2021 11:30PM by PIB Bengaluru

ಪ್ರಧಾನ ಮಂತ್ರಿ: ದೀಪಿಕಾ ಜೀ ನಮಸ್ತೇ !

ದೀಪಿಕಾ: ನಮಸ್ತೇ ಸರ್!

ಪ್ರಧಾನ ಮಂತ್ರಿ: ದೀಪಿಕಾ ಜೀ, ನಾನು ಹಿಂದಿನ ಮನ್ ಕೀ ಬಾತ್ ಆವೃತ್ತಿಯಲ್ಲಿ ನಿಮ್ಮ ಬಗ್ಗೆ ಮತ್ತು ನಿಮ್ಮ ಇತರ ಹಲವು ಸಹೋದ್ಯೋಗಿಗಳ ಬಗ್ಗೆ ಚರ್ಚಿಸಿದ್ದೆ. ನೀವು ಇತ್ತೀಚೆಗೆ ಪ್ಯಾರಿಸ್ ನಲ್ಲಿ ಚಿನ್ನದ ಪದಕ ಪಡೆದ ಬಳಿಕ ಇಡೀ ದೇಶದಲ್ಲಿ ನೀವು ಚರ್ಚೆಯಾಗುತ್ತಿರುವಿರಿ. ನೀವೀಗ ವಿಶ್ವದ ನಂಬರ್-1 ಶ್ರೇಯಾಂಕದಲ್ಲಿದ್ದೀರಿ. ನೀವು ಬಾಲ್ಯದಲ್ಲಿ ಅಭ್ಯಾಸ ಮಾಡುವಾಗ ಮಾವಿನ ಹಣ್ಣುಗಳನ್ನು ಗುರಿಯಾಗಿಟ್ಟುಕೊಳ್ಳುತ್ತಿದ್ದಿರಿ ಎಂಬುದಾಗಿ ನನಗೆ ತಿಳಿದು ಬಂದಿತು. ಮಾವಿನ ಹಣ್ಣುಗಳ ಜೊತೆ ಆರಂಭವಾದ ನಿಮ್ಮ ಪ್ರಯಾಣ ಬಹಳ ವಿಶೇಷವಾಗಿದೆ. ಯಾನದ ಬಗ್ಗೆ ಬಹಳಷ್ಟನ್ನು ದೇಶ ತಿಳಿದುಕೊಳ್ಳಲಿಚ್ಛಿಸುತ್ತದೆ. ನೀವು ನನಗೆ ಏನನ್ನಾದರೂ ತಿಳಿಸಿದರೆ ಬಹಳ ಉತ್ತಮ.

ದೀಪಿಕಾ: ಸರ್ ನನ್ನ ಯಾನ ಆರಂಭದಿಂದಲೇ ಬಹಳ ಉತ್ತಮವಾಗಿತ್ತು. ನಾನು ಮಾವಿನ ಹಣ್ಣುಗಳನ್ನು ಬಹಳ ಇಷ್ಟಪಡುತ್ತಿದ್ದೆ. ಅದರಿಂದಾಗಿ ಕಥೆ ಹುಟ್ಟಿತು. ಸೌಲಭ್ಯಗಳು ಅಲ್ಲಿ ಉತ್ತಮವಾಗಿಲ್ಲದಿದ್ದುದರಿಂದ ಆರಂಭದಲ್ಲಿ ಸ್ವಲ್ಪ ತೊಂದರೆಗಳುಂಟಾದವು. ಆದರೆ ಒಂದು ವರ್ಷದ ಬಳಿಕ, ನನಗೆ ಒಳ್ಳೆಯ ಸೌಲಭ್ಯಗಳು ದೊರೆತವು ಮತ್ತು ಉತ್ತಮ ಕೋಚ್ ಗಳು ಕೂಡಾ ದೊರೆತರು.

ಪ್ರಧಾನ ಮಂತ್ರಿ: ದೀಪಿಕಾ ಜೀ, ನೀವು ಇಂತಹ ಯಶಸ್ಸಿನ ಎತ್ತರವನ್ನು ತಲುಪಿದಾಗ, ನಿಮ್ಮಿಂದ ಜನರ ನಿರೀಕ್ಷೆ ಕೂಡಾ ಹೆಚ್ಚುತ್ತದೆ. ಈಗ ದೊಡ್ಡ ಕ್ರೀಡಾಕೂಟ-ಒಲಿಂಪಿಕ್ಸ್ ಎದುರಿದೆ, ಈಗ ನೀವು ಹೇಗೆ ನಿರೀಕ್ಷೆಗಳನ್ನು ಮತ್ತು ಗಮನವನ್ನು ಸಮತೋಲನ ಮಾಡುತ್ತೀರಿ?

ದೀಪಿಕಾ: ಸರ್, ಅಲ್ಲಿ ನಿರೀಕ್ಷೆಗಳಿವೆ, ಆದರೆ ಗರಿಷ್ಠ ನಿರೀಕ್ಷೆಗಳು ಬರುವುದು ನಮ್ಮಿಂದಲೇ ಮತ್ತು ನಾವು ಅದರ ಮೇಲೆ ಗಮನ ನೆಟ್ಟಿದ್ದೇವೆ. ನಾನು ನನ್ನ ಅಭ್ಯಾಸದ ಮೇಲೆ ಮತ್ತು ನಾನು ಹೇಗೆ ಸಾಧಿಸಬೇಕು ಎಂಬುದರ ಮೇಲೆ ಗಮನ ಕೇಂದ್ರೀಕರಿಸಿದ್ದೇನೆ.

ಪ್ರಧಾನ ಮಂತ್ರಿ: ಸರಿ, ನಿಮಗೆ ಬಹಳ ಅಭಿನಂದನೆಗಳು. ನೀವು ಬಿಟ್ಟುಕೊಡದಿರಿ ಮತ್ತು ಸವಾಲುಗಳನ್ನು ಬಲವನ್ನಾಗಿ ಪರಿವರ್ತಿಸಿ. ನಾನು ಪರದೆಯ ಮೇಲೆ ನಿಮ್ಮ ಕುಟುಂಬ ಸದಸ್ಯರನ್ನೂ ಕಾಣುತ್ತಿದ್ದೇನೆ. ಅವರಿಗೂ ನನ್ನ ಶುಭಾಶಯಗಳು!. ಒಲಿಂಪಿಕ್ಸ್ ನಲ್ಲಿ ನೀವು ದೇಶಕ್ಕೆ ಹೆಮ್ಮೆ ತರುತ್ತೀರಿ ಎಂಬ ಬಗ್ಗೆ ದೇಶಕ್ಕೆ ನಿಮ್ಮಲ್ಲಿ ಪೂರ್ಣ ನಂಬಿಕೆ ಇದೆ. ನಿಮಗೆ ನನ್ನ ಶುಭ ಹಾರೈಕೆಗಳು.

ದೀಪಿಕಾ : ಧನ್ಯವಾದಗಳು ಸರ್!

ಪ್ರಧಾನ ಮಂತ್ರಿ: ನಾವೀಗ ಪ್ರವೀಣ ಕುಮಾರ್ ಜಾಧವ ಜೀ ಅವರ ಜೊತೆ ಮಾತನಾಡೋಣ. ಪ್ರವೀಣ್ ಜೀ, ನಮಸ್ತೇ!

ಪ್ರವೀಣ್ : ನಮಸ್ತೇ ಸರ್!

ಪ್ರಧಾನ ಮಂತ್ರಿ: ಪ್ರವೀಣ್ ಜೀ, ನಾನು ಕೇಳಲ್ಪಟ್ಟೆ, ನೀವು ಮೊದಲು ಅಥ್ಲೀಟ್ ಆಗಿ ತರಬೇತಿ ಪಡೆದಿರುವಿರಿ ಎಂಬುದಾಗಿ.

ಪ್ರವೀಣ್ : ಹೌದು ಸರ್!

ಪ್ರಧಾನ ಮಂತ್ರಿ: ಒಲಿಂಪಿಕ್ಸ್ ನಲ್ಲಿ ಈಗ ನೀವು ಬಿಲ್ಲುಗಾರಿಕೆಯಲ್ಲಿ ದೇಶವನ್ನು ಪ್ರತಿನಿಧಿಸಲು ಹೋಗುತ್ತಿದ್ದೀರಿ. ಬದಲಾವಣೆ ಹೇಗಾಯಿತು?

ಪ್ರವೀಣ್ : ಸರ್, ಮೊದಲು ನಾನು ಅಥ್ಲೆಟಿಕ್ಸ್ ನಲ್ಲಿದ್ದೆ ಮತ್ತು ಸರಕಾರದ ಅಕಾಡೆಮಿಯಲ್ಲಿ ನನ್ನ ಆಯ್ಕೆಯೂ ಅಥ್ಲೆಟಿಕ್ಸ್ ಕ್ಷೇತ್ರದಲ್ಲಾಗಿತ್ತು. ಸಂದರ್ಭದಲ್ಲಿ ನಾನು ಸ್ವಲ್ಪ ದುರ್ಬಲ ದೇಹಿಯಾಗಿದ್ದುದರಿಂದ, ಅಲ್ಲಿ ಕೋಚ್ ನನಗೆ ಹೇಳಿದರು ನಾನು ಇತರ ಕ್ರೀಡೆಗಳಲಿ ಉತ್ತಮ ಸಾಧನೆ ತೋರಲು ಸಾಧ್ಯವಿದೆ ಎಂದು. ನನಗೆ ಬಿಲ್ಲುಗಾರಿಕೆ ನೀಡಲಾಯಿತು. ಬಳಿಕ ನಾನು ಅಮರಾವತಿಯಲ್ಲಿ ಬಿಲ್ಲುಗಾರಿಕೆಯಲ್ಲಿ ಮುಂದುವರಿದೆ

ಪ್ರಧಾನ ಮಂತ್ರಿ: ಎಲ್ಲಾ ಬದಲಾವಣೆಗಳಿಂದಾಗಿ ನೀವು ಭರವಸೆ, ಪರಿಪೂರ್ಣತೆಯನ್ನು ಹೇಗೆ ತಂದುಕೊಳ್ಳುತ್ತೀರಿ?

ಪ್ರವೀಣ್: ಸರ್, ನನ್ನ ಹಣಕಾಸು ಪರಿಸ್ಥಿತಿ ಚೆನ್ನಾಗಿಲ್ಲ.

ಪ್ರಧಾನ ಮಂತ್ರಿ: ನಾನು ನಿಮ್ಮ ಪೋಷಕರನ್ನು ನೋಡುತ್ತಿದ್ದೇನೆ, ಅವರಿಗೆ ನನ್ನ ಶುಭಾಶಯಗಳು!. ಸರಿ ಪ್ರವೀಣ್ ಹೇಳಿ ನನಗೆ.

ಪ್ರವೀಣ್; ಮನೆಗೆ ಮರಳಿದರೆ ನಾನು ಕೂಲಿ ಕೆಲಸ ಮಾಡಬೇಕಾಗುತ್ತದೆ ಎಂಬುದು ನನಗೆ ಗೊತ್ತಿತ್ತು. ಆದುದರಿಂದ ಭವಿಷ್ಯಕ್ಕೆ ಇಲ್ಲಿಯೇ ಕಠಿಣ ಪರಿಶ್ರಮ ಹಾಕುವುದು ಉತ್ತಮ ಎಂದು ನಾನು ಭಾವಿಸಿದೆ. ಹಾಗಾಗಿ ನಾನು ಮುಂದುವರಿದೆ.

ಪ್ರಧಾನ ಮಂತ್ರಿ: ನೋಡಿ, ನೀವು ಬಾಲ್ಯದಲ್ಲಿ ನಿಮ್ಮ ಹೋರಾಟಗಳಿಂದ ಬಹಳಷ್ಟನ್ನು ಕಲಿತುಕೊಂಡಿರುವಿರಿ. ದಿನಗೂಲಿಯಾಗಿ ಆರಂಭಗೊಂಡ ನಿಮ್ಮ ಪ್ರಯಾಣ ದೇಶವನ್ನು ಪ್ರತಿನಿಧಿಸುವವರೆಗೆ ಬಂದಿರುವುದು ಬಹಳ ಪ್ರೇರಣಾದಾಯಕ. ನಿಮಗೆ ಕಷ್ಟದ ದಿನಗಳಿದ್ದವು, ಆದರೆ ನೀವು ಗುರಿ ತಪ್ಪಲಿಲ್ಲ. ನಿಮ್ಮ ಮೊದಲಿನ ಜೀವನದ ಅನುಭವಗಳು ನೀವು ಚಾಂಪಿಯನ್ ಆಗುವಂತೆ ಮಾಡುವಲ್ಲಿ ಹೇಗೆ ಸಹಾಯ ಮಾಡಿದವು?

ಪ್ರವೀಣ್: ಸರ್, ಬಗ್ಗೆ ಯೋಚಿಸಿದಾಗೆಲ್ಲ ಸ್ವಲ್ಪ ಕಷ್ಟವಾಗುತ್ತದೆ. ಈಗ ನಾನು ಕೈಬಿಟ್ಟರೆ, ಆಗ ಎಲ್ಲವೂ ಮುಗಿದು ಹೋಗುತ್ತದೆ ಎಂಬುದನ್ನು ನಾನು ನನಗೇ ನೆನಪು ಮಾಡಿಕೊಳ್ಳುತ್ತಿರುತ್ತೇನೆ. ಹಾಗಾಗಿ, ಯಶಸ್ಸು ಸಾಧಿಸಲಿಕ್ಕೆ ಹೆಚ್ಚು ಪರಿಶ್ರಮ ಹಾಕುವುದು ಉತ್ತಮ ಎಂದುಕೊಳ್ಳುತ್ತೇನೆ.

ಪ್ರಧಾನ ಮಂತ್ರಿ: ಪ್ರವೀಣ್ ಜೀ, ನೀವು ಒಬ್ಬ ಚಾಂಪಿಯನ್. ಆದರೆ ನನ್ನ ದೃಷ್ಟಿಯಲ್ಲಿ ನಿಮ್ಮ ಪೋಷಕರು ಕೂಡಾ ಚಾಂಪಿಯನ್ . ನಾನು ನಿಮ್ಮ ಪೋಷಕರ ಜೊತೆಗೂ ಮಾತನಾಡಲು ಇಚ್ಛಿಸುತ್ತೇನೆ. ನಮಸ್ತೇಜೀ!

ಪ್ರವೀಣ್ ತಂದೆ: ನಮಸ್ಕಾರ!

ಪ್ರಧಾನ ಮಂತ್ರಿ: ನೀವು ದಿನಗೂಲಿಯಾಗಿ ಕೆಲಸ ಮಾಡುತ್ತಿರುವಾಗ ನಿಮ್ಮ ಮಗನ ಭವಿಷ್ಯದ ಬಗ್ಗೆ ನೀವು ಚಿಂತೆ ಮಾಡಿದ್ದೀರಿ. ಈಗ ನಿಮ್ಮ ಮಗ ಒಲಿಂಪಿಕ್ಸ್ ನಲ್ಲಿ ಆಡಲು ಹೋಗುತ್ತಿದ್ದಾರೆ. ನೀವು ಕಠಿಣ ಪರಿಶ್ರಮದ ಮತ್ತು ಪ್ರಾಮಾಣಿಕತೆಯ ನೈಜ ಶಕ್ತಿಯನ್ನು ತೋರಿಸಿದ್ದೀರಿ. ನೀವೀಗ ಏನನ್ನು ಹೇಳಲು ಇಚ್ಛಿಸುತ್ತೀರಿ?.

ಪ್ರವೀಣರ ತಂದೆ:....

ಪ್ರಧಾನ ಮಂತ್ರಿ: ನೋಡಿ, ನೀವುದೃಢ ನಿಶ್ಚಯ ಇದ್ದರೆ, ಯಾವ ಅಡ್ಡಿಯೂ ಯಾರನ್ನೂ ತಡೆದು ನಿಲ್ಲಿಸಲಾರದು ಎಂಬುದನ್ನು ಸಾಬೀತು ಮಾಡಿದ್ದೀರಿ. ನಿಮ್ಮ ಯಶಸ್ಸಿನ ಮೂಲಕ ತಳಮಟ್ಟದಲ್ಲಿ ಆಯ್ಕೆ ಸರಿಯಾಗಿದ್ದರೆ, ದೇಶದ ಪ್ರತಿಭೆ ಅದ್ಭುತವಾದುದನ್ನು ಮಾಡಬಲ್ಲದು ಎಂಬುದನ್ನು ಸ್ಪಷ್ಟವಾಗಿ ತೋರಿಸಿದ್ದೀರಿ. ಪ್ರವೀಣ್ ನಾನು ನಿಮಗೆ ಒಳಿತಾಗಲಿ ಎಂದು ಹಾರೈಸುತ್ತೇನೆ. ಮತ್ತು ಮಗದೊಮ್ಮೆ ನಾನು ನಿಮ್ಮ ಪೋಷಕರಿಗೆ ಶುಭ ಹಾರೈಸುತ್ತೇನೆ. ಜಪಾನಿನಲ್ಲಿ ಪೂರ್ಣ ಶಕ್ತಿ ಸಾಮರ್ಥ್ಯದೊಂದಿಗೆ ಆಟ ಆಡಿ.

ಪ್ರವೀಣ್ : ನಿಮಗೆ ಧನ್ಯವಾದಗಳು ಸರ್ !

ಪ್ರಧಾನ ಮಂತ್ರಿ : ಒಳ್ಳೆಯದು, ನಾವು ಈಗ ನೀರಜ್ ಚೋಪ್ರಾ ಜೀ ಅವರ ಜೊತೆ ಮಾತನಾಡಲಿದ್ದೇವೆ.

ನೀರಜ್: ನಮಸ್ತೇ ಸರ್!

ಪ್ರಧಾನ ಮಂತ್ರಿ : ನೀರಜ್, ನೀವು ಭಾರತೀಯ ಸೇನೆಯಲ್ಲಿದ್ದೀರಿ. ಸೇನೆಯಲ್ಲಿ ನಿಮ್ಮ ತರಬೇತಿ ಮತ್ತು ಅನುಭವದ ಯಾವ ಭಾಗ ಕ್ರೀಡಾ ಕ್ಷೇತ್ರದಲ್ಲಿ ಸ್ಥಾನಕ್ಕೆ ಬರಲು ನಿಮಗೆ ಸಹಕಾರಿಯಾಯಿತು?.

ನೀರಜ್: ಸರ್, ನಾನು ಆರಂಭದಿಂದಲೂ ಭಾರತೀಯ ಸೇನೆಯನ್ನು ಇಷ್ಟಪಡುತ್ತಿದ್ದೆ. 5-6 ವರ್ಷಗಳ ಕಾಲ ನಾನು ಆಟವಾಡಿದ ನಂತರ, ನನ್ನನ್ನು ಸೇನೆಗೆ ಸೇರುವಂತೆ ಹೇಳಲಾಯಿತು. ನಾನು ಬಹಳ ಸಂತೋಷಪಟ್ಟೆ ಮತ್ತು ನಾನು ಭಾರತೀಯ ಸೇನೆಯನ್ನು ಸೇರಿದೆ, ಅಂದಿನಿಂದ ನಾನು ನನ್ನ ಆಟದ ಮೇಲೆ ಗಮನ ಕೇಂದ್ರೀಕರಿಸಿದ್ದೇನೆ. ಭಾರತೀಯ ಸೇನೆ ಮತ್ತು ಭಾರತ ಸರಕಾರ ನನಗೆ ಎಲ್ಲಾ ಸೌಕರ್ಯಗಳನ್ನು ಒದಗಿಸುತ್ತಿದೆ. ನಾನು ಬಹಳ ಪರಿಶ್ರಮ ಹಾಕುತ್ತಿದ್ದೇನೆ.

ಪ್ರಧಾನ ಮಂತ್ರಿ: ನೀರಜ್ ಜೀ ನಾನು ನಿಮ್ಮೊಂದಿಗೆ ಇಡೀ ಕುಟುಂಬವನ್ನು ನೋಡಬಲ್ಲವನಾಗಿದ್ದೇನೆ. ಅವರಿಗೆ ನನ್ನ ಶುಭ ಹಾರೈಕೆಗಳು!

ಪ್ರಧಾನ ಮಂತ್ರಿ: ನೀರಜ್ ಜೀ, ನನಗೆ ತಿಳಿಸಲಾಗಿದೆ, ನೀವು ಗಾಯಗೊಂಡರೂ ವರ್ಷ ರಾಷ್ಟ್ರ ದಾಖಲೆಯನ್ನು ಮಾಡಿರುವಿರಿ ಎಂಬುದಾಗಿ. ನೀವು ನಿಮ್ಮ ನೈತಿಕ ಬಲವನ್ನು ಮತ್ತು ಅಭ್ಯಾಸವನ್ನು ಹೇಗೆ ನಿಭಾಯಿಸುತ್ತಿರುವಿರಿ?.

ನೀರಜ್: ಸರ್, ಗಾಯಗೊಳ್ಳುವುದು ಕ್ರೀಡೆಯ ಒಂದು ಭಾಗವೆಂದು ನಾನು ಪರಿಗಣಿಸಿದ್ದೇನೆ. 2019 ರಲ್ಲಿ ನಾನು ವಿಶ್ವ ಚಾಂಪಿಯನ್ ಶಿಪ್ ಗಾಗಿ ಕಠಿಣ ಪರಿಶ್ರಮ ಹಾಕುತ್ತಿದ್ದೆ....

ಪ್ರಧಾನ ಮಂತ್ರಿ: ಬಹಳ ದೊಡ್ಡ ಸಂಗತಿ!. ನೀವು ನಿಮ್ಮ ಗಾಯಗಳಲ್ಲಿಯೂ ಕ್ರೀಡಾಳುವಿನ ಸ್ಪೂರ್ತಿಯನ್ನು ಕಾಣುತ್ತಿರುವಿರಿ.

ನೀರಜ್: ಸರ್, ಇದು ನಮ್ಮ ಪ್ರಯಾಣ. ನಮ್ಮ ಕೆರಿಯರ್ ಅವಧಿ ಬಹಳ ಸಣ್ಣದು ಮತ್ತು ನಾವು ನಮ್ಮನ್ನೇ ಪ್ರೇರೇಪಿಸುತ್ತಿರಬೇಕಾಗುತ್ತದೆ. ಹುರಿದುಂಬಿಸಬೇಕಾಗಿರುತ್ತದೆ. ನಾನು ವಿಶ್ವ ಚಾಂಪಿನ ಶಿಪ್ ಗೆ ಮತ್ತು ಏಶ್ಯನ್ ಚಾಂಪಿಯನ್ ಶಿಪ್ ಗೆ ಬಹಳ ಉತ್ತಮವಾಗಿ ತಯಾರಾಗಿದ್ದೆ. ಆದರೆ ಗಾಯಗಳಿಂದಾಗಿ ನನ್ನ ಒಂದು ವರ್ಷ ಹಾಳಾಯಿತು. ಬಳಿಕ ನಾನು ನನ್ನ ಪೂರ್ಣ ಗಮನವನ್ನು ಒಲಿಂಪಿಕ್ಸ್ ಗೆ ಮೀಸಲಾಗಿಟ್ಟೆ ಮತ್ತು ಮರಳಿ ಬಂದೆ. ಮೊದಲ ಸ್ಪರ್ಧೆಯಲ್ಲಿಯೇ ನಾನು ಉತ್ತಮ ಆಟ ಆಡಿದೆ ಮತ್ತು ಒಲಿಂಪಿಕ್ಸ್ ಗೆ ಅರ್ಹತೆ ಪಡೆದೆ. ಬಳಿಕ ಕೊರೊನಾ ಕಾರಣಕ್ಕಾಗಿ ಒಲಿಂಪಿಕ್ಸ್ ಮುಂದೂಡಲ್ಪಟ್ಟಿತು. ಆದರೆ ನಾನು ನನ್ನ ತಯಾರಿಗಳೊಂದಿಗೆ ಮುನ್ನಡೆದೆ. ಮುಂದಿನ ಸ್ಪರ್ಧೆಯಲ್ಲಿ, ನಾನು ಉತ್ತಮವಾಗಿ ಆಡಿದೆ ಮತ್ತು ರಾಷ್ಟ್ರೀಯ ದಾಖಲೆ ಮಾಡಿದೆ. ನಾನು ಕಠಿಣ ಪರಿಶ್ರಮವನ್ನು ಹಾಕುತ್ತಿದ್ದೇನೆ ಮತ್ತು ಒಲಿಂಪಿಕ್ಸ್ ನಲ್ಲಿ ನನ್ನ ಪೂರ್ಣ   ಸಾಮರ್ಥ್ಯದೊಡನೆ ಆಡಲು ಪ್ರಯತ್ನಿಸುತ್ತೇನೆ.

ಪ್ರಧಾನ ಮಂತ್ರಿ: ನೀರಜ್ ಜೀ ನಿಮ್ಮೊಂದಿಗೆ ಮಾತನಾಡುವುದು ಬಹಳ ಸಂತೋಷದ ಸಂಗತಿ. ನಾನು ಒಂದು ಪ್ರಮುಖ ಸಂಗತಿ ನಿಮಗೆ ತಿಳಿಸಲಿಚ್ಛಿಸುತ್ತೇನೆ, ನೀವು ನಿರೀಕ್ಷೆಗಳ ಭಾರವನ್ನು ಹೊತ್ತುಕೊಳ್ಳಬೇಕಾಗಿಲ್ಲ. ನೀವು ನಿಮ್ಮ 100 ಶೇಖಡಾ ಶ್ರಮವನ್ನು ಕೊಡಿ. ಯಾವುದೇ ಒತ್ತಡಕ್ಕೆ ಒಳಗಾಗದೆ ನಿಮ್ಮಲ್ಲಿರುವ ಉತ್ತಮವಾದುದನ್ನು ಕೊಡಲು ಪ್ರಯತ್ನಿಸಿ. ನಾನು ನಿಮಗೆ ಶುಭವನ್ನು ಹಾರೈಸುತ್ತೇನೆ ಮತ್ತು ನಿಮ್ಮ ಪೋಷಕರಿಗೂ ಶುಭಾಶಯಗಳು.

ಪ್ರಧಾನ ಮಂತ್ರಿ: ನಾವು ಈಗ ದ್ಯುತಿ ಚಂದ್ ಜೀ ಅವರೊಂದಿಗೆ ಮಾತನಾಡುವ.

ಪ್ರಧಾನ ಮಂತ್ರಿ: ದ್ಯುತಿ ಚಂದ್ ಜೀ , ನಮಸ್ತೇ!.

ದ್ಯುತಿ: ಗೌರವಾನ್ವಿತ ಪ್ರಧಾನ ಮಂತ್ರಿ ಅವರೇ, ನಮಸ್ತೇ!.

ಪ್ರಧಾನ ಮಂತ್ರಿ: ದ್ಯುತಿ ಜೀ, ನಿಮ್ಮ ಹೆಸರೆಂದರೆ ಹೊಳಪು, ಮಿನುಗುವಿಕೆ. ದ್ಯುತಿ ಅಂದರೆ ದಿವ್ಯ  ಪ್ರಭೆ! ಮತ್ತು ನೀವು ಆಟದ ಮೂಲಕ ಪ್ರಭೆಯನ್ನು ಹರಡುತ್ತಿದ್ದೀರಿ. ನೀವು ಈಗ ಒಲಿಂಪಿಕ್ಸ್ ನಲ್ಲಿ ಮಿಂಚಲು ತಯಾರಾಗಿದ್ದೀರಿ. ಇಂತಹ ಬಹಳ ದೊಡ್ಡ ಸ್ಪರ್ಧೆಯ ಬಗ್ಗೆ ನೀವೇನು ಹೇಳುತ್ತೀರಿ.

ದ್ಯುತಿ: ಸರ್, ಎಲ್ಲಕ್ಕಿಂತ ಮೊದಲು,ನಾನು ನಿಮಗೆ ಹೇಳಲಿಚ್ಛಿಸುತ್ತೇನೆ ಏನೆಂದರೆ ಒಡಿಶಾದ ನೇಕಾರ ಕುಟುಂಬಕ್ಕೆ ಸೇರಿದವಳು ನಾನು. ನಮ್ಮ  ಕುಟುಂಬದಲ್ಲಿ ಮೂವರು ಸಹೋದರಿಯರು ಮತ್ತು ಓರ್ವ ಸಹೋದರ ಇದ್ದಾರೆ. ಒಬ್ಬರ ಹಿಂದೆ ಒಬ್ಬರು ಹೆಣ್ಣು ಮಕ್ಕಳು ಹುಟ್ಟಿದಾಗ ಹಳ್ಳಿಯ ಜನರು ನನ್ನ ತಾಯಿಯನ್ನು ಟೀಕಿಸುತ್ತಿದ್ದರು. ನಮ್ಮದು ಅತ್ಯಂತ ಬಡ ಕುಟುಂಬ. ನಮಗೆ ತಿನ್ನಲು ಆಹಾರ ಇರಲಿಲ್ಲ. ಮತ್ತು ನಮ್ಮ ತಂದೆಯ ಆದಾಯ ಅತ್ಯಂತ ಕಡಿಮೆ ಪ್ರಮಾಣದ್ದಾಗಿತ್ತು.

ಪ್ರಧಾನ ಮಂತ್ರಿ: ನಿಮ್ಮ ಪೋಷಕರು ನನ್ನ ಎದುರಿದ್ದಾರೆ.

ದ್ಯುತಿ: ನಾನು ಸದಾ ಯೋಚಿಸುತ್ತಿದ್ದೆ, ನಾನು ಉತ್ತಮವಾಗಿ ಆಡಿದರೆ, ದೇಶಕ್ಕೆ ಪದಕಗಳನ್ನು ತಂದರೆ ನನಗೆ ಸರಕಾರಿ ಕೆಲಸ ಸಿಗುತ್ತದೆ ಮತ್ತು ನನ್ನ ಕುಟುಂಬದ ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವಾಗುತ್ತದೆ ಎಂಬುದಾಗಿ. ನಾನು ನನ್ನ ಕುಟುಂಬದ ಪರಿಸ್ಥಿತಿಯನ್ನು ಉತ್ತಮಪಡಿಸುವಲ್ಲಿ ಸಫಲಳಾಗಿದ್ದೇನೆ. ನನಗೆ ಬೆಂಬಲ ನೀಡಿದುದಕ್ಕಾಗಿ ನಾನು ನಿಮಗೆ ಸದಾ ಕೃತಜ್ಞಳಾಗಿರುತ್ತೇನೆ. ನನ್ನ ಬದುಕು ವಿವಾದಗಳ ಮೊತ್ತ. ಇಂದು ನಾನು ನಿಮಗೆ ಮಾಧ್ಯಮದ ಮೂಲಕ ಹೇಳಲಿಚ್ಛಿಸುವುದೇನೆಂದರೆ ಸ್ಥಾನಕ್ಕೆ ತಲುಪಲು ನಾನು ನನ್ನ ಜೀವನದಲ್ಲಿ ಬಹಳಷ್ಟು ಕಷ್ಟ ನಷ್ಟಗಳನ್ನು ಎದುರಿಸಬೇಕಾಯಿತು. ನಾನು ಒಲಿಂಪಿಕ್ಸ್ ಗೆ ಹೋಗುತ್ತಿರುವುದು ಎರಡನೇ ಬಾರಿ. ನಾನು ಪೂರ್ಣ ಧೈರ್ಯದೊಂದಿಗೆ ಹೋಗುತ್ತಿದ್ದೇನೆ. ಮತ್ತು ನನಗೆ ಹಿಂಜರಿಕೆ ಇಲ್ಲ. ಭಾರತದ ಯಾವ ಮಹಿಳೆಯೂ ದುರ್ಬಲಳಲ್ಲ. ಮಹಿಳೆಯರು ಮುಂದುವರೆಯಬಲ್ಲರು ಮತ್ತು ದೇಶಕ್ಕೆ ಕೀರ್ತಿಯನ್ನು, ಪದಕಗಳನ್ನು ತರಬಲ್ಲರು. ನಂಬಿಕೆಯೊಂದಿಗೆ ನಾನು ಒಲಿಂಪಿಕ್ಸ್ ನಲ್ಲಿ ಆಟ ಆಡುತ್ತೇನೆ. ಮತ್ತು ದೇಶಕ್ಕೆ ಪದಕಗಳನ್ನು ತರಲು ಪ್ರಯತ್ನಿಸುತ್ತೇನೆ.

ಪ್ರಧಾನ ಮಂತ್ರಿ: ದ್ಯುತಿ ಜೀ, ನಿಮ್ಮ  ಹಲವು ವರ್ಷಗಳ ಕಠಿಣ  ದುಡಿಮೆಯ ನಿರ್ಣಯ ಕೆಲವೇ ಸೆಕೆಂಡುಗಳಲ್ಲಿ ಆಗುತ್ತದೆ. ವಿಜಯ ಮತ್ತು ಸೋಲಿನ ನಡುವಿನ ವ್ಯತ್ಯಾಸದ ಅಂತರ  ಕಣ್ರೆಪ್ಪೆ ಮಿಟುಕಿಸುವಷ್ಟು ಮಾತ್ರ. ಇದನ್ನು ಎದುರಿಸುವುದು ಎಷ್ಟು ಕಷ್ಟ?

ದ್ಯುತಿ: ನೀವು 100 ಮೀಟರ್ ನೋಡಿದರೆ 10-11 ಸೆಕೆಂಡುಗಳಲ್ಲಿ ಪ್ರತಿಯೊಂದೂ ನಿರ್ಣಯಿಸಲ್ಪಡುತ್ತದೆ. ಆದರೆ ಸಾಧನೆಯನ್ನು ಪುನಾರವರ್ತಿಸಲು ವರ್ಷ ಬೇಕಾಗುತ್ತದೆ. ಬಹಳಷ್ಟು ಕಠಿಣ ದುಡಿಮೆಯನ್ನು ಮಾಡಬೇಕಾಗುತ್ತದೆ.100 ಮೀಟರ್ ರೇಸಿಗೆ ನಾವು 10-12 ಬಾರಿ ಓಡಬೇಕಾಗುತ್ತದೆ. ಇದಕ್ಕೆ ಜಿಮ್ ಮತ್ತು ಈಜು ಕೊಳದಲ್ಲಿ ಬಹಳಷ್ಟು ವ್ಯಾಯಾಮ ಮಾಡಬೇಕಾಗುತ್ತದೆ. ನಾವು ಸದಾ ಇದನ್ನು ಸವಾಲಾಗಿ ಸ್ವೀಕರಿಸಬೇಕು. ಯಾಕೆಂದರೆ ನಾವು ಒಂದು ಕ್ಷಣ ಮಾತ್ರವೂ ಜಾರಿದರೆ ನಾವು ಅನರ್ಹರಾಗುತ್ತೇವೆ. ಆದುದರಿಂದ  ನಾವು ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಓಡಬೇಕಾಗುತ್ತದೆ. ಸಮಯದಲ್ಲಿ ಮನಸ್ಸಿನಲ್ಲಿ ಭಯ ಇರುತ್ತದೆ. ಆದರೆ ನಾನು ನನ್ನ ವೈಯಕ್ತಿಕ ಜೀವನದಲ್ಲಿ ಮಾಡಿದಂತೆ ಧೈರ್ಯದಿಂದ ಅದನ್ನು ಎದುರಿಸಿ ನಿಲ್ಲುತ್ತೇನೆ. ಇದರ ಪರಿಣಾಮವಾಗಿ ನನ್ನ ಸಮಯ ಉತ್ತಮವಾಗಿದೆ ಮತ್ತು ನಾನು ದೇಶಕ್ಕೆ ಪದಕಗಳನ್ನು ತರುತ್ತೇನೆ.

ಪ್ರಧಾನ ಮಂತ್ರಿ: ದ್ಯುತಿ ಜೀ, ನೀವು ದೇಶಕ್ಕಾಗಿ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿರುವಿರಿ. ಬಾರಿ ನೀವು ಒಲಿಂಪಿಕ್ ಪೋಡಿಯಂನಲ್ಲಿ ಖಂಡಿತವಾಗಿಯೂ ಇರುತ್ತೀರಿ ಎಂಬ ಬಗ್ಗೆ ದೇಶಕ್ಕೆ ಭರವಸೆ ಇದೆ. ಆಟದಲ್ಲಿ ಭಯರಹಿತವಾಗಿ ಭಾಗವಹಿಸಿ. ಇಡೀ ಭಾರತ ಅದರ ಒಲಿಂಪಿಕ್ಸ್ ಆಟಗಾರರ ಜೊತೆಗಿದೆ. ನಾನು ನಿಮಗೆ ಶುಭವನ್ನು ಹಾರೈಸುತ್ತೇನೆ. ಮತ್ತು ನಿಮ್ಮ ಪೋಷಕರಿಗೆ ವಿಶೇಷ ನಮಸ್ಕಾರಗಳು.

ಪ್ರಧಾನ ಮಂತ್ರಿ: ನಾವಿನ್ನು ಅಶೀಷ್ ಕುಮಾರ್ ಜೀ ಅವರ ಜೊತೆ ಮಾತನಾಡುವ.

ಪ್ರಧಾನ ಮಂತ್ರಿ: ಅಶೀಷ್ ಜೀ, ನಿಮ್ಮ ತಂದೆ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರರು ಮತ್ತು ನಿಮ್ಮ ಕುಟುಂಬದಲ್ಲಿ ಹಲವು ಆಟಗಾರರಿದ್ದಾರೆ. ನೀವು ಬಾಕ್ಸಿಂಗ್ ಯಾಕೆ ಆಯ್ಕೆ ಮಾಡಿಕೊಂಡಿರಿ?.

ಆಶೀಷ್: ನಾನು ಸಣ್ಣವನಿದ್ದಾಗ, ನಮ್ಮ ಮನೆಯ ವಾತಾವರಣ ಕ್ರೀಡೆಗಳಿಂದ ತುಂಬಿತ್ತು. ನಮ್ಮ ತಂದೆ ಅವರ ಕಾಲದ ಅತ್ಯುತ್ತಮ ಆಟಗಾರರಾಗಿದ್ದರು. ಹಾಗಾಗಿ ಅವರು ತಮ್ಮ ಮಕ್ಕಳು ಬಾಕ್ಸಿಂಗ್ ಆಡಬೇಕು ಎಂದು ಬಯಸಿದರು. ಅವರು ನನ್ನನ್ನು ಕಬಡ್ಡಿ ಆಡುವಂತೆ ಬಲವಂತ ಮಾಡಲಿಲ್ಲ. ಆದರೆ ನನ್ನ ಸಹೋದರರ್ರು ರೆಸ್ಲಿಂಗ್ (ಮಲ್ಲಯುದ್ಧ) ಮತ್ತು ಬಾಕ್ಸಿಂಗ್ ಮಾಡುತ್ತಿದ್ದರು. ಮತ್ತು ಅವರು ಉತ್ತಮ ಮಟ್ಟದಲ್ಲಿ ಆಡುತ್ತಿದ್ದರು. ಹಾಗಾಗಿ ನನಗೆ ಎರಡರಲ್ಲಿ ಯಾವುದಾದರೊಂದಕ್ಕೆ ಸೇರುವಂತೆ ತಿಳಿಸಲಾಯಿತು. ನಾನು ಬಹಳ ಸಪೂರ ಇದ್ದೆ ಮತ್ತು ದಷ್ಟ ಪುಷ್ಟನಾಗಿರಲಿಲ್ಲ.ಹಾಗಾಗಿ ನಾನು ರೆಸ್ಲಿಂಗ್ ಮಾಡಲು ಸಮರ್ಥ ಅಲ್ಲ ಮತ್ತು ನಾನು ಬಾಕ್ಸಿಂಗ್ ಮಾಡುವುದು ಉತ್ತಮ ಎಂದು ಭಾವಿಸಿದೆ. ಹಾಗಾಗಿ ನಾನು ಬಾಕ್ಸಿಂಗ್ ನಲ್ಲಿ ಆಸಕ್ತಿ ಬೆಳೆಸಿಕೊಂಡೆ.

ಪ್ರಧಾನ ಮಂತ್ರಿ: ಆಶೀಷ್ ಜೀ, ನೀವು ಕೂಡಾ ಕೋವಿಡ್ ಗೆ ಸಿಕ್ಕಿಕೊಂಡಿದ್ದಿರಿ. ಆಟಗಾರರಾಗಿ ಅದು ನಿಮಗೆ ಎಷ್ಟೊಂದು ಕಷ್ಟದಾಯಕವಾಗಿತ್ತು?.ನಿಮ್ಮ ಆಟ ಮತ್ತು ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ನೀವು ಏನೇನು ಮಾಡಿದಿರಿ?. ನನಗೆ ಗೊತ್ತಿದೆ, ಸಂಕೀರ್ಣನಿರ್ಣಾಯಕ ಕಾಲಘಟ್ಟದಲ್ಲಿ ನೀವು ನಿಮ್ಮ ತಂದೆಯನ್ನು ಕಳೆದುಕೊಂಡಿರಿ. ಇಂತಹ ಪರಿಸ್ಥಿತಿಯಲ್ಲಿಯು ಕೂಡಾ ನಿಮ್ಮ ಗುರಿಯಿಂದ ನೀವು ವಿಚಲಿತರಾಗಲಿಲ್ಲ. ನಿಮ್ಮ ಭಾವನೆಗಳನ್ನು ತಿಳಿದುಕೊಳ್ಳಲು ನಾನು ಇಚ್ಛಿಸುತ್ತೇನೆ.

ಆಶೀಷ್: ಸರ್, ನನ್ನ ತಂದೆ ಸ್ಪರ್ಧೆಗೆ 25 ದಿನಗಳ ಮೊದಲು ತೀರಿಕೊಂಡರು. ನಾನು ದಿಗ್ಭ್ರಮೆಯಲ್ಲಿದ್ದೆ ಮತ್ತು ಭಾವನಾತ್ಮಕವಾಗಿ ಘಾಸಿಗೊಂಡಿದ್ದೆ. ಸಮಯದಲ್ಲಿ ನಾನು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಸಮಯದಲ್ಲಿ ಕುಟುಂಬದ ಬೆಂಬಲ ನನಗೆ ಅತೀ ಅವಶ್ಯವಾಗಿತ್ತು. ನನ್ನ ಕುಟುಂಬ ನನ್ನನ್ನು ಬಹಳಷ್ಟು ಬೆಂಬಲಿಸಿತು. ನನ್ನ ಸಹೋದರ, ಸಹೋದರಿ ಮತ್ತು ನನ್ನೆಲ್ಲ ಕುಟುಂಬದ ಸದಸ್ಯರು ನನಗೆ ಬಹಳ ಬೆಂಬಲ ನೀಡಿದರು.ನನ್ನ ಸ್ನೇಹಿತರು ಕೂಡಾ ನನ್ನ ತಂದೆಯ ಕನಸನ್ನು ನನಸು ಮಾಡಲು ಹುರಿದುಂಬಿಸಿದರು. ಅವರು ನನಗೆ ಎಲ್ಲವನ್ನೂ ಬಿಟ್ಟು ನನ್ನ ತಂದೆಯ ಕನಸನ್ನು ಈಡೇರಿಸಲು ಶಿಬಿರಕ್ಕೆ ಸೇರುವಂತೆ ಹೇಳಿದರು. ನಾನು ಸ್ಪೈನ್ ನಲ್ಲಿದ್ದಾಗ ಕೋವಿಡ್ ಪಾಸಿಟಿವ್ ಆಗಿದ್ದೆ. ನನ್ನಲ್ಲಿ ಕೆಲವು ರೋಗ ಲಕ್ಷಣಗಳಿದ್ದವು. ಅಲ್ಲಿ ನನಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಯಿತು. ನಾನು ನನ್ನ ತಂಡದ ನಿರ್ದೇಶಕ ಕರಣ್ ಜೊತೆ ನಿಯಮಿತವಾಗಿ ಸಂಪರ್ಕದಲ್ಲಿದ್ದೆ. ನನಗೆ ಏನು ಅವಕಾಶ ನೀಡಲಾಗಿದೆಯೋ, ಅದನ್ನು ನಾನು ಅಭ್ಯಾಸಕ್ಕೆ ಬಳಸಿಕೊಂಡೆ. ಮತ್ತು ದೈಹಿಕ ಕ್ಷಮತೆ ವ್ಯಾಯಾಮ ಮಾಡಲು ಬಳಸಿಕೊಂಡೆ. ಆದರೆ ನನಗೆ ಪೂರ್ಣವಾಗಿ ಗುಣಮುಖನಾಗಲು ಬಹಳ ಸಮಯ ತೆಗೆದುಕೊಂಡಿತು. ನಾನು ಭಾರತಕ್ಕೆ  ಬಂದ ಮೇಲೆ ಶಿಬಿರಕ್ಕೆ ಸೇರ್ಪಡೆಗೊಂಡೆ. ಕೋಚ್ ಗಳು ಮತ್ತು ಪೂರಕ ಸಿಬ್ಬಂದಿಗಳು ನನಗೆ ಬಹಳ ಸಹಾಯ ಮಾಡಿದರು. ನನ್ನ ಕೋಚ್ ಧರ್ಮೇಂದ್ರ ಸಿಂಗ್ ಯಾದವ್ ನನ್ನ ಆರೋಗ್ಯ ಮರುಕಳಿಸುವಲ್ಲಿ ಬಹಳ ಸಹಾಯ ಮಾಡಿದರು ಮತ್ತು ನನ್ನ ಆಟದ ಲಯದಲ್ಲಿ ಮತ್ತೆ ಹಿಡಿತ ಲಭಿಸುವಂತೆ ಮಾಡಿದರು.

ಪ್ರಧಾನ ಮಂತ್ರಿ: ಆಶೀಷ್ ಜೀ, ನಾನು ನಿಮ್ಮ ಕುಟುಂಬ ಸದಸ್ಯರಿಗೆ ನಮಿಸುತ್ತೇನೆ. ಆಶೀಷ್ ಜೀ, ನೀವು ನೆನಪು ಮಾಡಿಕೊಳ್ಳಿ, ಸಚಿನ್ ತೆಂಡೂಲ್ಕರ್ ಜೀ ಅವರು ಬಹಳ ಮುಖ್ಯವಾದ ಪಂದ್ಯ ಆಡುವಾಗ ಅವರ ತಂದೆ ತೀರಿಕೊಂಡರು. ಆದರೆ ಅವರು ಪಂದ್ಯಕ್ಕೆ ಮಹತ್ವ, ಆದ್ಯತೆ  ಕೊಟ್ಟರು ಮತ್ತು ತಮ್ಮ ತಂದೆಗೆ ಅದರ ಮೂಲಕ ಶ್ರದ್ಧಾಂಜಲಿ ಸಮರ್ಪಿಸಿದರು. ನೀವು ಕೂಡಾ ಇಂತಹ ಅದ್ಭುತ ಸಂಗತಿಯನ್ನು ಮಾಡಿದ್ದೀರಿ. ನಿಮ್ಮ ತಂದೆಯನ್ನು ಕಳೆದುಕೊಂಡರೂ, ನೀವು ನಿಮ್ಮ ಶಕ್ತಿಯನ್ನು ಒಗ್ಗೂಡಿಸಿಕೊಂಡು ನಿಮ್ಮ ಆಟದತ್ತ ಗಮನ ಕೇಂದ್ರೀಕರಿಸಿದಿರಿ. ನಿಮ್ಮ ಉದಾಹರಣೆ ಒಂದು ರೀತಿಯಲ್ಲಿ ನಿಜವಾಗಿಯೂ ಬಹಳ ಪ್ರೇರಣಾದಾಯಕ. ಆಟಗಾರರಾಗಿ ನೀವು ಪ್ರತೀ ಸಂದರ್ಭದಲ್ಲಿಯೂ ಗೆಲುವನ್ನು ಸಾಧಿಸಿದ್ದೀರಿ. ಇದರ ಜೊತೆಗೆ ನೀವು ದೈಹಿಕ ಮತ್ತು ಭಾವನಾತ್ಮಕ ಸವಾಲುಗಳನ್ನು ವ್ಯಕ್ತಿಯಾಗಿ ಎದುರಿಸಿ ಅವುಗಳನ್ನು ಮೀರಿ ನಿಂತಿದ್ದೀರಿ. ಇಡೀ ದೇಶ ನಿಮ್ಮ ಮೇಲೆ ಭಾರೀ ಭರವಸೆ ಇಟ್ಟಿದೆ. ಒಲಿಂಪಿಕ್ಸ್ ನಲ್ಲಿ ನೀವು ಉತ್ತಮ ಸಾಧನೆ ತೋರುತ್ತೀರಿ ಎಂಬ ಬಗ್ಗೆ ನಮಗೆ ವಿಶ್ವಾಸವಿದೆ. ನಾನು ನಿಮಗೆ ಶುಭವನ್ನು ಹಾರೈಸುತ್ತೇನೆ. ನಾನು ನಿಮ್ಮ ಕುಟುಂಬವರ್ಗದವರಿಗೆ ವಂದಿಸುತ್ತೇನೆ.

ಪ್ರಧಾನ ಮಂತ್ರಿ: ಬಹಳ ಚಿರಪರಿಚಿತ ಮುಖದವರು ಇಲ್ಲಿದ್ದಾರೆ, ನಮ್ಮೊಂದಿಗೆ. ನಾವು ಮೇರಿ ಕೋಮ್ ಜೊತೆ ಮಾತನಾಡೋಣ.

ಪ್ರಧಾನ ಮಂತ್ರಿ: ಮೇರಿ ಕೋಮ್, ನಮಸ್ತೇ!.

ಮೇರಿ ಕೋಮ್: ನಮಸ್ತೇ, ಸರ್!.

ಪ್ರಧಾನ ಮಂತ್ರಿ: ನೀವು ಎಂತಹ ಆಟಗಾರರೆಂದರೆ ಇಡೀ ದೇಶ ನಿಮ್ಮಿಂದ ಪ್ರೇರೇಪಣೆ ಪಡೆಯುತ್ತದೆ. ಒಲಿಂಪಿಕ್ಸ್ ತಂಡದಲ್ಲಿರುವ ಹಲವಾರು ಆಟಗಾರರಿಗೆ ನೀವೊಂದು ರೋಲ್ ಮಾಡೆಲ್ ಆಗಿರುವಿರಿ. ಅವರು ನಿಮ್ಮನ್ನು ಕರೆಯುತ್ತಿರಲೂ ಬಹುದು. ಅವರು ನಿಮ್ಮಲ್ಲಿ ಏನು ಕೇಳುತ್ತಾರೆ?.

ಮೇರಿ ಕೋಮ್: ಸರ್, ಮನೆಯಲ್ಲಿರುವ ಪ್ರತಿಯೊಬ್ಬರೂ ನನಗಾಗಿ ಪ್ರಾರ್ಥಿಸುತ್ತಿದ್ದಾರೆ. ನನ್ನ ಮಕ್ಕಳು ನನ್ನನ್ನು ಬಹಳ ಮಿಸ್ ಮಾಡಿಕೊಂಡಿದ್ದಾರೆ. ನಾನವರಿಗೆ ನಿಮ್ಮ ತಾಯಿ ದೇಶದ  ಕೆಲಸವೊಂದಕ್ಕೆ ಹೋಗುತ್ತಿದ್ದಾಳೆ ಮತ್ತು ನೀವು ನಿಮ್ಮ ತಂದೆ ಏನು ಹೇಳುತ್ತಾರೋ, ಅದನ್ನು ಕೇಳಬೇಕು ಎಂಬುದಾಗಿ ಹೇಳಿದ್ದೇನೆ. ಕೋವಿಡ್ ನಿಂದಾಗಿ ಮನೆಯಲ್ಲಿಯೇ ಇರಬೇಕು, ಮನೆಯಿಂದ ಹೊರಗೆ ಹೋಗಬಾರದು ಎಂದು ಹೇಳಿದ್ದೇನೆ. ಮಕ್ಕಳು ಕೂಡಾ ಮನೆಯಲ್ಲಿಯೇ ಕುಳಿತು ಬೇಸರಗೊಂಡಿದ್ದಾರೆ. ಅವರು ಆನ್ ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಮಕ್ಕಳು ಆಟಗಳನ್ನು ಆಡಲು ಇಷ್ಟಪಡುತ್ತಾರೆ. ಆದರೆ ಕೋವಿಡ್ ನಿಂದಾಗಿ ಅವರಿಗೆ ಅವರ ಸ್ನೇಹಿತರ ಜೊತೆ ಆಟ ಆಡಲು ಸಾಧ್ಯವಾಗುತ್ತಿಲ್ಲ. ಅವರಿಗೆ ಜಾಗೃತರಾಗಿರುವಂತೆ ಮತ್ತು ಸುರಕ್ಷಿತವಾಗಿರುವಂತೆ ನಾನು ಹೇಳಿರುತ್ತೇನೆ. ನಾನು ಕೂಡಾ ನೀವು ಮತ್ತು ನಾನೂ ಸುರಕ್ಷಿತವಾಗಿರುವುದನ್ನು ಆಶಿಸುತ್ತೇನೆ. ನಾನು ದೇಶಕ್ಕೆ ಒಳಿತಾದುದೇನಾದರೂ ಮಾಡಬೇಕೆಂಬ  ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ.

ಪ್ರಧಾನ ಮಂತ್ರಿ: ನಾನು ನಿಮ್ಮ ಮಕ್ಕಳನ್ನು ನೋಡುತ್ತಿದ್ದೇನೆ, ಅವರು ನಿಮ್ಮನ್ನು ಆಲಿಸುತ್ತಿದ್ದಾರೆ. ನೀವು ಎಲ್ಲಾ ಪಂಚ್ ಗಳಲ್ಲಿಯೂ ಚಾಂಪಿಯನ್ ಆಗಿದ್ದರೂ, ನಿಮ್ಮ ಅಚ್ಚು ಮೆಚ್ಚಿನ ಪಂಚ್ ಯಾವುದು? ಜಾಬ್, ಹುಕ್ , ಅಪ್ಪರ್ ಕಟ್, ಅಥವಾ ಇನ್ನಾವುದಾದರು!. ಮತ್ತು ಪಂಚ್ ಯಾಕೆ ನಿಮಗೆ ಅಚ್ಚು ಮೆಚ್ಚು ಎಂಬುದನ್ನೂ ನನಗೆ ಹೇಳಿ.

ಮೇರಿ ಕೋಮ್ : ಸರ್, ನನ್ನ ಅಚ್ಚು ಮೆಚ್ಚಿನ ಪಂಚ್ ಸೌತ್ ಪೋಲ್. ನನ್ನ ವಿರೋಧಿಗಳು ಅದನ್ನು ತಪ್ಪಿಸಿಕೊಳ್ಳಲು ಕಷ್ಟಪಡುತ್ತಾರೆ. ಅದು ಅವರನ್ನು ಹೊಡೆಯುತ್ತದೆ.

ಪ್ರಧಾನ ಮಂತ್ರಿ: ನಿಮ್ಮ ಆಚ್ಚು ಮೆಚ್ಚಿನ ಆಟಗಾರ ಯಾರೆಂಬುದನ್ನು ನಾನು ತಿಳಿಯಲಿಚ್ಛಿಸುತ್ತೇನೆ.

ಮೇರಿ ಕೋಮ್: ಸರ್, ಬಾಕ್ಸಿಂಗ್ ನಲ್ಲಿ ನನ್ನ ಹೀರೋ, ನನ್ನ ಪ್ರೇರಣೆ ಮುಹಮ್ಮದ್ ಅಲಿ.

ಪ್ರಧಾನ ಮಂತ್ರಿ: ಮೇರಿ ಕೋಮ್ ಜೀ, ನೀವು ಬಾಕ್ಸಿಂಗ್ ನಲ್ಲಿಯ ಬಹುತೇಕ ಪ್ರತೀ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲೂ ಗೆದ್ದಿದ್ದೀರಿ. ಒಲಿಂಪಿಕ್ಸ್ ಚಿನ್ನ ನಿಮ್ಮ ಕನಸು ಎಂದೆಲ್ಲೋ ನೀವು ಹೇಳಿರುವಿರಿ. ಇದು ನಿಮ್ಮ ಕನಸು ಮಾತ್ರವಲ್ಲ, ಅದು ಇಡೀ ದೇಶದ ಕನಸು. ನಿಮ್ಮ ಕನಸನ್ನು ಮತ್ತು ದೇಶದ ಕನಸನ್ನು ಖಂಡಿತವಾಗಿ ಈಡೇರಿಸಿಕೊಳ್ಳುತ್ತೀರಿ ಎಂಬ ಭರವಸೆ ಇದೆ. ನಾನು ನಿಮಗೆ ಶುಭವನ್ನು ಹಾರೈಸುತ್ತೇನೆ, ನಿಮ್ಮ ಕುಟುಂಬ ವರ್ಗದವರಿಗೆ ಧನ್ಯವಾದಗಳು.

ಮೇರಿ ಕೋಮ್ : ಬಹಳ ಧನ್ಯವಾದಗಳು, ಸರ್.

ಪ್ರಧಾನ ಮಂತ್ರಿ: ನಾವೀಗ ಪಿ.ವಿ.ಸಿಂಧೂ ಬಳಿ ಮಾತನಾಡೋಣ.

ಪ್ರಧಾನ ಮಂತ್ರಿ: ಸಿಂಧೂ ಜೀ, ಟೋಕಿಯೋ ಒಲಿಂಪಿಕ್ಸ್ ಗೆ ಮೊದಲು ಒಲಿಂಪಿಕ್ಸ್ ಗಾತ್ರದ ಕೋರ್ಟಿನಲ್ಲಿ ಅಭ್ಯಾಸ ಮಾಡಲು ತಾವು ಇಚ್ಛಿಸಿದ್ದೀರೆಂದು ನನಗೆ ತಿಳಿಸಲಾಗಿದೆ. ಗಚ್ಚಿಬೌಲಿಯಲ್ಲಿ ಈಗ ನಿಮ್ಮ ಅಭ್ಯಾಸ ಹೇಗೆ ಸಾಗಿದೆ.?.

ಪಿ.ವಿ.ಸಿಂಧೂ: ಗಚ್ಚಿಬೌಲಿಯಲ್ಲಿ ಅಭ್ಯಾಸ ಉತ್ತಮವಾಗಿ ಸಾಗುತ್ತಿದೆ, ಸರ್. ಕ್ರೀಡಾಂಗಣ ಉತ್ತಮವಾಗಿರುವುದರಿಂದ ಮತ್ತು ಇಲ್ಲಿ ಅವಕಾಶವೂ ಇರುವುದರಿಂದ ನಾನಿದನ್ನು ಆಯ್ಕೆ ಮಾಡಿಕೊಂಡೆ. ನಾನು ಫೆಬ್ರವರಿಯಿಂದ ಅಭ್ಯಾಸ ಮಾಡುತ್ತಿದ್ದೇನೆ. ನಾನು ಸರಕಾರದಿಂದ ಅನುಮತಿಯನ್ನು ಪಡೆದಿದ್ದೇನೆ. ನನಗೆ ತಕ್ಷಣ ಅನುಮತಿ ಕೊಡುವಾಗ ಅವರು ನನಗೆ ಕೋವಿಡ್ ಗೆ ಸಂಬಂಧಿಸಿದ ಎಲ್ಲಾ ಶಿಷ್ಟಾಚಾರ ಪಾಲಿಸುವಂತೆ ತಿಳಿಸಿದ್ದಾರೆ. ನನಗೆ ತಕ್ಷಣ ಅನುಮತಿ ನೀಡಿರುವುದಕ್ಕೆ ಅವರಿಗೆ ನಾನು ತುಂಬಾ ಋಣಿಯಾಗಿದ್ದೇನೆ. ನಾನು ಈಗಲೇ ಆರಂಭ ಮಾಡಿದರೆ ಆಗ ಟೋಕಿಯೋದಲ್ಲಿಯ ಬೃಹತ್ ಕ್ರೀಡಾಂಗಣದಲ್ಲಿ ಆಡುವುದು ನನಗೆ ಕಷ್ಟವಾಗಲಾರದು ಎಂದು ಭಾವಿಸಿದೆ.

ಪ್ರಧಾನ ಮಂತ್ರಿ: ನನ್ನ ಎದುರು ನಿಮ್ಮ ಕುಟುಂಬದ ಸದಸ್ಯರೂ ಇದ್ದಾರೆ, ಅವರಿಗೆ ನಮಸ್ಕಾರಗಳು. ಗೋಪೀಚಂದ ಜೀ ಅವರು ಒಂದು ಸಂದರ್ಶನದಲ್ಲಿ ರಿಯೋ ಒಲಿಂಪಿಕ್ಸ್ ಗೆ ಮೊದಲು ನಿಮ್ಮ ಫೋನನ್ನು ತೆಗೆದುಕೊಂಡಿದ್ದಾಗಿ ಹೇಳಿದ್ದು ನನಗೆ ನೆನಪಾಗುತ್ತಿದೆ. ನಿಮ್ಮನ್ನು ಐಸ್ ಕ್ರೀಂ ತಿನ್ನುವುದಕ್ಕೂ ಬಿಡುತ್ತಿರಲಿಲ್ಲವಂತೆ. ಐಸ್ ಕ್ರೀಂ ಮೇಲೆ ನಿಷೇಧ ಈಗಲೂ ಇದೆಯೇ ಅಥವಾ ನಿಮಗೆ ಸ್ವಲ್ಪ ಸ್ವಾತಂತ್ರ್ಯ ಸಿಕ್ಕಿದೆಯೇ?

ಪಿ.ವಿ.ಸಿಂಧೂ: ಸರ್, ಖಂಡಿತವಾಗಿಯೂ ನಾನು ಸ್ವಲ್ಪ ನಿಯಂತ್ರಿಸುತ್ತೇನೆ, ಯಾಕೆಂದರೆ ಆಹಾರ ನಿಯಂತ್ರಣ ಅಥ್ಲೀಟ್ ಗೆ ಬಹಳ ಮುಖ್ಯ. ಮತ್ತು ನಾನು ಒಲಿಂಪಿಕ್ಸ್ ಗೆ ತಯಾರಾಗುತ್ತಿರುವುದರಿಂದ, ನಾನು ನನ್ನ ಆಹಾರ ಪಥ್ಯವನ್ನು ಮಾಡಲೇ ಬೇಕಾಗುತ್ತದೆ. ನಾನು ಐಸ್ ಕ್ರೀಂನ್ನು ಬಹಳ ತಿನ್ನುವುದಿಲ್ಲ, ಯಾವಾಗಲಾದರೂ ಒಮ್ಮೆ ತಿನ್ನುತ್ತೇನೆ.

ಪ್ರಧಾನ ಮಂತ್ರಿ: ಸಿಂಧೂ ಜೀ, ನಿಮ್ಮ ಇಬ್ಬರು ಪೋಷಕರೂ ಕ್ರೀಡಾ ಕ್ಷೇತ್ರದಲ್ಲಿದ್ದರು. ಮತ್ತು ನಾನವರ ಜೊತೆ ಮಾತನಾಡಲು ಇಚ್ಛಿಸುತ್ತೇನೆ. ನಮಸ್ತೇ! ಮಗುವಿನ ಆಸಕ್ತಿ ಕ್ರೀಡಾ ಕ್ಷೇತ್ರಕ್ಕೆ ಹೋಗುವುದು ಎಂದಾದಾಗ ಅದು ಬಹಳ ಪೋಷಕರಿಗೆ ಕಷ್ಟದ ಸಂಗತಿ ಎನಿಸುತ್ತದೆ. ಹಲವು ಪೋಷಕರಿಗೆ ಸಂಶಯಗಳಿರುತ್ತವೆ. ಇಂತಹ ಎಲ್ಲಾ ಪೋಷಕರಿಗೆ ನೀವು ಯಾವ ಸಂದೇಶ ಕೊಡಲು ಇಚ್ಛಿಸುತ್ತೀರಿ?

ಪೋಷಕರು: ಮಕ್ಕಳು ಆಟವಾಡಿದರೆ ಅವರು ಆರೋಗ್ಯವಂತರಾಗಿರುತ್ತಾರೆ ಎಂಬುದನ್ನು ಪೋಷಕರು ತಿಳಿದಿರಬೇಕು. ಅವರ ಗಮನ ಕೇಂದ್ರೀಕರಿಸುವಿಕೆ ಕೂಡಾ ಹೆಚ್ಚಾಗುತ್ತದೆ. ಅವರು ಪ್ರತಿಯೊಂದು ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಮಾಡುತ್ತಾರೆ ಹಾಗು ಉನ್ನತ ಸ್ಥಾನಕ್ಕೆ ಏರುತ್ತಾರೆ.

ಪ್ರಧಾನ ಮಂತ್ರಿ: ನೀವು ಯಶಸ್ವೀ ಆಟಗಾರರ ಪೋಷಕರು. ಮಕ್ಕಳನ್ನು ಕ್ರೀಡಾಳುಗಳನ್ನಾಗಿಸುವುದಕ್ಕೆ ಯಾವ ರೀತಿಯಲ್ಲಿ ಅವರನ್ನು ಪೋಷಿಸಬೇಕು.?

ಪೋಷಕರು: ಮಕ್ಕಳನ್ನು ಪ್ರೋತ್ಸಾಹಿಸಬೇಕಾಗಿರುವುದರಿಂದ ಪೋಷಕರು ಇಲ್ಲಿ ಪ್ರಮುಖವಾದ ಪಾತ್ರವನ್ನು ಹೊಂದಿದ್ದಾರೆ. ನೀವು ಅವರನ್ನು ಉತ್ತೇಜಿಸಬೇಕು. ನಿಮಗೆ ಗೊತ್ತಿದೆ, ಪ್ರತೀ ಆಟಗಾರರಿಗೂ ಸರಕಾರ ಎಲ್ಲಾ ಸವಲತ್ತುಗಳನ್ನು ನೀಡುತ್ತಿದೆ. ಹಾಗಾಗಿ ನಾವು ಅವರಿಗೆ ತಿಳುವಳಿಕೆ ನೀಡಬೇಕು ಮತ್ತು ಅವರು ದೇಶಕ್ಕಾಗಿ ಉತ್ತಮ ರೀತಿಯ ಸಾಧನೆಯನ್ನು ಮಾಡಬೇಕು. ನಾವು ಅವರಿಗೆ ಪ್ರೋತ್ಸಾಹ ನೀಡಬೇಕು. ಅವರಿಗಿಂತ ಹಿರಿಯರನ್ನು ಗೌರವಿಸಲು ಮತ್ತು ಅವರ ಆಶೀರ್ವಾದ ಪಡೆಯಲು ನಾವು ಅವರಿಗೆ ಹೇಳಿಕೊಡಬೇಕಾದ ಆವಶ್ಯಕತೆ ಇದೆ.

ಪ್ರಧಾನ ಮಂತ್ರಿ: ಸಿಂಧೂ ಜೀ, ನಿಮ್ಮ ಪೋಷಕರು ನಿಮ್ಮನ್ನು ವಿಶ್ವ ಚಾಂಪಿಯನ್ ಆಗಿ ಮಾಡಲು ಬಹಳಷ್ಟು ತ್ಯಾಗ ಮಾಡಿದ್ದಾರೆ. ಅವರು ಅವರ ಕರ್ತವ್ಯ ಮಾಡಿದ್ದಾರೆ. ಈಗ ನಿಮ್ಮ ಸರದಿ. ಕಠಿಣ ದುಡಿಮೆ ಮಾಡಿ. ಬಾರಿ ಕೂಡಾ ನಿಮಗೆ ಯಶಸ್ಸು ಲಭಿಸುತ್ತದೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ. ನಿಮ್ಮ ಯಶಸ್ಸಿನ ಬಳಿಕ ನಾನು ನಿಮ್ಮೆಲ್ಲರನ್ನೂ ಭೇಟಿಯಾಗಲಿರುವುದರಿಂದ ಆಗ ನಾನು ಖಂಡಿತವಾಗಿಯೂ ನಿಮ್ಮೊಂದಿಗೆ ಐಸ್ ಕ್ರೀಂ ತಿನ್ನುತ್ತೇನೆ.

ಪ್ರಧಾನ ಮಂತ್ರಿ: ನಾವೀಗ ಇಳಾ ಜೊತೆ ಮಾತನಾಡುವ. ನಮಸ್ತೇ ಇಳಾ!

ಇಳಾವೆನಿಲ್: ನಮಸ್ತೇಸರ್!

ಪ್ರಧಾನ ಮಂತ್ರಿ: (ಗುಜರಾತಿಯಲ್ಲಿ ಮಾತನಾಡುತ್ತಾ) ಇಳಾವೆನಿಲ್, ನಾನು ಕೇಳಲ್ಪಟ್ಟೆ, ನೀವು ಆರಂಭದಲ್ಲಿ ಅಥ್ಲೆಟಿಕ್ಸ್ ಗೆ ಹೋಗಲು ಇಚ್ಛಿಸಿದ್ದಿರಿ ಎಂಬುದಾಗಿ. ಬಳಿಕ ಶೂಟಿಂಗ್ ಆಯ್ಕೆ  ಮಾಡಿಕೊಳ್ಳಲು ಪ್ರೇರಣೆ ಏನು?.

ಇಳಾವೆನಿಲ್: ನಾನು ಶೂಟಿಂಗ್ ಆಯ್ಕೆ ಮಾಡಿಕೊಳ್ಳುವುದಕ್ಕೆ ಮೊದಲು ಹಲವು ಕ್ರೀಡೆಗಳಲ್ಲಿ ಪ್ರಯತ್ನ ಮಾಡಿದೆ. ನಾನು ಬಾಲ್ಯದಿಂದಲೇ ಕ್ರೀಡೆಗಳಲ್ಲಿ ಒಲವು ಹೊಂದಿದ್ದೆ. ನಾನು ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಜೂಡೋ ಇತ್ಯಾದಿಗಳಲ್ಲಿ ಪ್ರಯತ್ನ ಮಾಡಿದೆ. ಆದರೆ ನಾನು ಶೂಟಿಂಗ್ ಆರಂಭ ಮಾಡಿದಾಗ ನಾನು ಕ್ರೀಡೆಯಲ್ಲಿ ಬಹಳ ರೋಮಾಂಚನಉದ್ವಿಗ್ನತೆಯನ್ನು ಅನುಭವಿಸಿದೆ. ಯಾಕೆಂದರೆ ನಾವು ಬಹಳ ಸ್ಥಿರವಾಗಿರಬೇಕಾಗುತ್ತದೆ. ಇದಕ್ಕೆ ಬಹಳ ಶಾಂತ ಸ್ಥಿತಿ ಬೇಕು. ನಾನು ಶಾಂತತೆಯಲ್ಲಿ ಹಿಂದೆ ಬಿದ್ದಿದ್ದ ಕಾರಣದಿಂದ ಕ್ರೀಡೆಯನ್ನು ಪ್ರಯತ್ನಿಸುವ, ಯಾಕೆಂದರೆ ನಾನಿದರಲ್ಲಿ ಬಹಳ ಕಲಿಯಬಹುದು ಎಂದು ಯೋಚಿಸಿದೆ. ನಂತರ ನಾನು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡೆ.

ಪ್ರಧಾನ ಮಂತ್ರಿ: ಈಗ, ನಾನು ದೂರದರ್ಶನದಲ್ಲಿ ಕಾರ್ಯಕ್ರಮವೊಂದನ್ನು ನೋಡುತ್ತಿದ್ದೆ. ನಾನು ನಿಮ್ಮ ಪೋಷಕರು ಹೇಳುವುದನ್ನು ಕೇಳುತ್ತಿದ್ದೆ. ನೀವು ಸಂಸ್ಕಾರಧಾಮದಿಂದ ಆರಂಭಿಸಿದಿರಿ. ನಿಮ್ಮ ತಾಯಿ ವಿವರವಾಗಿ ಹೇಳುತ್ತಿದ್ದರು. ಅವರು ಬಹಳ ಹೆಮ್ಮೆ ಪಡುತ್ತಿದ್ದರು. ಶಾಲೆಯಿಂದ ಒಲಿಂಪಿಕ್ಸ್ ವರೆಗಿನ ನಿಮ್ಮ ಪ್ರಯಾಣವನ್ನು ಅರಿಯಲು ಬಹಳ ಯುವಜನರು ಅಪೇಕ್ಷೆ ಮಾಡುತ್ತಾರೆ. ನಾನು ಮಣಿನಗರ ಶಾಸಕನಾಗಿದ್ದೆ. ಮತ್ತು ನೀವು ಕೂಡಾ ಮಣಿನಗರದಲ್ಲಿ ವಾಸವಾಗಿದ್ದೀರಿ. ನಾನು ನನ್ನ ವಿಧಾನ ಸಭಾ ಕ್ಷೇತ್ರದ ಖೋಕ್ರಾದಲ್ಲಿ ಮೊದಲ ಕ್ರೀಡಾ ಅಕಾಡೆಮಿ ಆರಂಭ ಮಾಡಿದಾಗ, ನೀವು ಅಲ್ಲಿಗೆ ಬಂದು ಆಟ ಆಡುತ್ತಿದ್ದಿರಿ. ಆಗ ನೀವು ಮಗುವಾಗಿದ್ದಿರಿ. ಮತ್ತು ಇಂದು ನಿಮ್ಮನ್ನು ನೋಡಿದ ಬಳಿಕ ನಾನು ಹೆಮ್ಮೆ ಪಡುತ್ತಿದ್ದೇನೆ. ಹಾಗಾಗಿ ನಿಮ್ಮ ಬಗ್ಗೆ ಏನಾದರೂ ಹೇಳಿ.

ಇಳಾವೆನಿಲ್: ಸರ್, ಶೂಟಿಂಗ್ ನಲ್ಲಿ ನನ್ನ ವೃತ್ತಿಪರ ಯಾನ ಸಂಸ್ಕಾರಧಾಮದಿಂದಲೇ ಆರಂಭವಾಯಿತು. ನಾನು ಹತ್ತನೇ ತರಗತಿಯಲ್ಲಿರುವಾಗ, ಅದು ತಾಯಿ ಮತ್ತು ತಂದೆಯ ಆಶಯವಾಗಿತ್ತು. ಅವರು ಕ್ರೀಡೆಯಲ್ಲಿ ನಿನಗೆ ಆಸಕ್ತಿ ಇರುವುದೇ ಹೌದಾದರೆ, ಅದಕ್ಕೆ ಪ್ರಯತ್ನ ಪಡಬಹುದು ಎಂದು ಹೇಳಿದರು. ಗುಜರಾತ್ ಕ್ರೀಡಾ ಪ್ರಾಧಿಕಾರ ಮತ್ತು ಗನ್ ಫಾರ್ ಗ್ಲೋರಿ ಶೂಟಿಂಗ್ ಅಕಾಡೆಮಿ ನಡುವೆ  ಆಗ ತಿಳಿವಳಿಕಾ ಒಡಂಬಡಿಕೆಗೆ ಅಂಕಿತ ಹಾಕಲಾಯಿತು. ಸರ್, ಸಂಸ್ಕಾರಧಾಮ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿತು. ಹಾಗಾಗಿ ಅಲ್ಲಿ ಕೂಡಾ ಅಭ್ಯಾಸ  ನಡೆಯಿತು. ಅಲ್ಲಿ ನಮಗೆ ಇಡೀ ದಿನ ತರಬೇತಿ ನೀಡಲಾಗುತ್ತಿತ್ತು. ಯಾನ ಬಹಳ ಉತ್ತಮವಾಗಿತ್ತು, ಯಾಕೆಂದರೆ ಅಲ್ಲಿಂದ ನಾನು ಆರಂಭ ಮಾಡಿದೆ  ಮತ್ತು ಈಗ ನಾನು ನನ್ನ ಮೊದಲ ಒಲಿಂಪಿಕ್ಸ್ ಗೆ ಹೋಗುತ್ತಿದ್ದೇನೆ. ನಾನು ಬಹಳ ಹೆಮ್ಮೆಯಿಂದಿದ್ದೇನೆ, ಸರ್. ಬಹಳ ಮಂದಿ ನನಗೆ ಬೆಂಬಲ ನೀಡಿದ್ದಾರೆ ಮತ್ತು ಮಾರ್ಗದರ್ಶನ ಮಾಡಿದ್ದಾರೆ. ಇದು ನನಗೆ ನಿಜವಾಗಿಯೂ ಬಹಳ ಸಂತೋಷ ತಂದಿದೆ.

ಪ್ರಧಾನ ಮಂತ್ರಿ: ಇಳಾವೆನಿಲ್, ನೀವು ಪದವಿ ಓದುತ್ತಿದ್ದೀರಿ. ನೀವು ನಿಮ್ಮ ಶೂಟಿಂಗ್ ಮತ್ತು ವಿದ್ಯಾಭ್ಯಾಸವನ್ನು ಹೇಗೆ ಸಮತೋಲನ ಮಾಡುತ್ತೀರಿ?

ಇಳಾವೆನಿಲ್: ಸರ್, ನಾನು ಗುಜರಾತ್ ವಿಶ್ವ ವಿದ್ಯಾಲಯದ ಭವನ್ ಶೇತ್ ಆರ್..ಕಲಾ ಮತ್ತು ವಾಣಿಜ್ಯ ಕಾಲೇಜ್ ಗೆ ಧನ್ಯವಾದ ಹೇಳುತ್ತೇನೆ. ಅದು ನನಗೆ ಕಡ್ಡಾಯವಾಗಿ ಕಾಲೇಜಿಗೆ ಬರಲು ಹೇಳಲಿಲ್ಲ. ನನ್ನ ಪರೀಕ್ಷೆಗೆ ವಿಶೇಷ ವ್ಯವಸ್ಥೆ ಮಾಡುತ್ತಾರೆ ಮತ್ತು ನನಗೆ ಸಾಕಷ್ಟು ಅವಕಾಶವನ್ನೂ ಕೊಡುತ್ತಾರೆ. ನಾನು ನನ್ನ ಸೆಮಿನಾರ್ ಗಳನ್ನು ಪ್ರತ್ಯೇಕವಾಗಿ ಮಾಡುತ್ತೇನೆ. ಸರ್, ನನ್ನ ಶಾಲೆ ಮತ್ತು ಕಾಲೇಜು ನನ್ನ ಪ್ರಯಾಣದಲ್ಲಿ ನನಗೆ ಬಹಳ ಬೆಂಬಲ ನೀಡಿದೆ.

ಪ್ರಧಾನ ಮಂತ್ರಿ: ಇಳಾವೆನಿಲ್, ನಿಮ್ಮ ತಲೆಮಾರು ಮಹತ್ವಾಕಾಂಕ್ಷಿಯಾಗಿದೆ ಮತ್ತು ಪಕ್ವತೆಯನ್ನೂ ಹೊಂದಿದೆ. ನೀವು ಇಷ್ಟೊಂದು ಸಣ್ಣ ವಯಸ್ಸಿನಲ್ಲಿ ವಿಶ್ವ ಮಟ್ಟದ ಯಶಸ್ಸನ್ನು ಸಾಧಿಸಿದ್ದೀರಿ. ದೇಶವು, ನೀವು ಆಟದ ಅತ್ಯಂತ ದೊಡ್ಡ ವೇದಿಕೆಯಲ್ಲಿ ಪ್ರಯಾಣವನ್ನು ಮುಂದುವರಿಸುತ್ತೀರಿ ಎಂಬ ಬಗ್ಗೆ ಭರವಸೆ ಹೊಂದಿದೆ. ನಾನು ನಿಮಗೆ ಶುಭವನ್ನು ಹಾರೈಸುತ್ತೇನೆ ಮತ್ತು ನಿಮ್ಮ ಪೋಷಕರಿಗೂ ಶುಭಾಶಯಗಳನ್ನು ಕೋರುತ್ತೇನೆ. ವಣಕ್ಕಂ

ಪ್ರಧಾನ ಮಂತ್ರಿ: ಈಗ ನಾವು ಸೌರಭ್ ಚೌಧರಿ ಜೊತೆ ಮಾತನಾಡುವ. ನಮಸ್ತೇ, ಸೌರಭ್ ಜೀ!

ಪ್ರಧಾನ ಮಂತ್ರಿ: ನೀವು ಇಂತಹ ಕಿರಿಯ ವಯಸ್ಸಿನಲ್ಲಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದೀರಿ. ನಿಮ್ಮ ಯಾನ ಹೇಗೆ ಮತ್ತು ಯಾವಾಗ ಆರಂಭವಾಯಿತು?

ಸೌರಭ್: ಸರ್, ನಾನು 2015 ರಲ್ಲಿ ಶೂಟಿಂಗ್ ಆರಂಭ ಮಾಡಿದೆ. ನಾವು ಹತ್ತಿರದ ಹಳ್ಳಿಯಲ್ಲಿ ಶೂಟಿಂಗ್ ಅಕಾಡೆಮಿಯನ್ನು ಹೊಂದಿದ್ದೇವೆ. ಅಲ್ಲಿಂದ ನಾನು ಆರಂಭ ಮಾಡಿದೆ. ನನ್ನ ಕುಟುಂಬ ಕೂಡಾ ನನಗೆ ಬೆಂಬಲ ನೀಡಿದೆ. ಅವರೇ ನನಗೆ ಹೇಳಿದರು, ನೀನು ಅದನ್ನು ಅಷ್ಟೊಂದು ಇಷ್ಟಪಡುತ್ತಿಯಾದರೆ ನೀನೊಂದು ಪ್ರಯತ್ನ ಮಾಡು ಎಂದರು. ಹಾಗಾಗಿ ನಾನು ಅಲ್ಲಿ ಅಭ್ಯಾಸಕ್ಕೆ ಹೋದೆ. ಬಳಿಕ ನಾನದನ್ನು ಇಷ್ಟಪಟ್ಟೆ ಮತ್ತು ಅದರೊಂದಿಗೆ ಮುಂದುವರೆದೆ. ಉತ್ತಮ ಫಲಿತಾಂಶಗಳಿಂದಾಗಿ, ಭಾರತ ಸರಕಾರ ಕೂಡಾ ನನಗೆ ಸಹಾಯ ಮಾಡಲಾರಂಭಿಸಿತು ಮತ್ತು ಇಂದು ನಾನಿಲ್ಲಿದ್ದೇನೆ, ಸರ್.

ಪ್ರಧಾನ ಮಂತ್ರಿ: ನಾನು ನಿಮ್ಮ ಹೆಮ್ಮೆಯ ಕುಟುಂಬ ಸದಸ್ಯರನ್ನು ಕಾಣುತ್ತಿದ್ದೇನೆ ಮತ್ತು ಅವರ ಕಣ್ಣುಗಳಲ್ಲಿಯ ಕನಸುಗಳು ಗೋಚರಿಸುತ್ತಿವೆ. ಸೌರಭ್, ಕಠಿಣ ಪರಿಶ್ರಮದ ಜೊತೆ ಶೂಟಿಂಗ್ ಗೆ ಮನಸ್ಸಿನ ಕೇಂದ್ರೀಕರಣವೂ ಅವಶ್ಯ. ನೀವು ಯೋಗ ಇತ್ಯಾದಿಗಳನ್ನು ಮಾಡುತ್ತಿರುವಿರೋ ಅಥವಾ ಅಲ್ಲಿ ನಾನು ಮತ್ತು ನಮ್ಮ ದೇಶದ ಯುವಜನತೆ ತಿಳಿದುಕೊಳ್ಳುವಂತಹ ಹೊಸ ವಿಧಾನ ಏನಾದರೂ ಇದೆಯೇ?

ಸೌರಭ್: ನಾನು ಶಾಂತವಾಗಿರಲು ಧ್ಯಾನ ಮತ್ತು ಯೋಗವನ್ನು ಮಾಡುತ್ತೇನೆ. ವಾಸ್ತವ ಎಂದರೆ ನೀವು ಇಡೀ ದೇಶದ ಬಗ್ಗೆ ಕಾಳಜಿ ಮಾಡುತ್ತಿರುವಾಗ ನೀವು ಏನು ಮಾಡುತ್ತೀರಿ ಎಂದು ನಾವು ನಿಮ್ಮಿಂದ ತಿಳಿದುಕೊಳ್ಳಬೇಕಾಗಿದೆ?

ಪ್ರಧಾನ ಮಂತ್ರಿ :ಸರಿ, ಸೌರಭ್, ನೀವು ಒಂದು ಸಂಗತಿಯ ಬಗ್ಗೆ ಹೇಳಿ, ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳು ನಿಮ್ಮಲ್ಲಿಗೆ ಬಂದು ನಿಮ್ಮೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಾರೆಯೇ ಮತ್ತು ಆಗ ನಿಮಗೇನನಿಸುತ್ತದೆ?. ಅವರು ಇದನ್ನು ಮೊದಲು ಮಾಡುತ್ತಿರಲಿಲ್ಲ ಅಲ್ಲವೇ?

ಸೌರಭ್: ನಾನು ಮನೆಗೆ ಹೋಗುವಾಗ, ನನ್ನ ಗ್ರಾಮದಲ್ಲಿರುವ ಸ್ನೇಹಿತರು ಸೆಲ್ಫೀಗಾಗಿ ಮನೆಗೆ ಬರುತ್ತಾರೆ. ಅವರು ನನ್ನ ಪಿಸ್ತೂಲಿನೊಂದಿಗೆ ಸೆಲ್ಫೀಗಳನ್ನು ತೆಗೆದುಕೊಳ್ಳುತ್ತಾರೆ. ನಾನದನ್ನು ಆನಂದಿಸುತ್ತೇನೆ.

ಪ್ರಧಾನ ಮಂತ್ರಿ: ಸೌರಬ್, ನೀವು ಬಹಳ ಗಮನಿಸಲ್ಪಟ್ಟವರಂತೆ ಕಾಣುತ್ತಿರುವಿರಿ, ನಿಮ್ಮಂತಹ ಯುವಜನತೆಗೆ ಇದು ಬಹಳ ಒಳ್ಳೆಯದು. ಶೂಟಿಂಗ್ ಕೂಡಾ ಇಂತಹ ಗಮನ ಮತ್ತು ಸ್ಥಿರತೆಯನ್ನು ಬಯಸುತ್ತದೆ. ನೀವು ಇನ್ನೂ ಬಹಳ ದೂರ ಸಾಗಲಿಕ್ಕಿದೆ ಮತ್ತು ದೇಶಕ್ಕಾಗಿ ಅನೇಕ ಮೈಲಿಗಲ್ಲುಗಳ ಸಾಧನೆಯನ್ನು ಮಾಡಲಿಕ್ಕಿದೆ. ಒಲಿಂಪಿಕ್ಸ್ ನಲ್ಲಿ ನೀವು ಉತ್ತಮ ಸಾಧನೆ ಮಾಡುವಿರಿ ಎಂಬ ನಂಬಿಕೆ ನಮ್ಮೆಲ್ಲರಿಗೆ ಇದೆ ಮತ್ತು ಭವಿಷ್ಯದಲ್ಲಿ ಬಹಳ ಎತ್ತರಕ್ಕೆ ಏರುತ್ತೀರೆಂಬ ಬಗ್ಗೆ ವಿಶ್ವಾಸವಿದೆ. ನಿಮಗೆ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ನನ್ನ ಶುಭ ಹಾರೈಕೆಗಳು.

ಪ್ರಧಾನ ಮಂತ್ರಿ: ನಾವೀಗ ಶರತ್ ಕುಮಾರ್ ಜೀ ಅವರೊಂದಿಗೆ ಮಾತನಾಡುವ. ಶರತ್ ಜೀ, ನಮಸ್ತೇ!

ಶರತ್: ನಮಸ್ತೇ ಸರ್!

ಪ್ರಧಾನ ಮಂತ್ರಿ: ಶರತ್ ಜೀ, ನೀವು ಮೂರು ಒಲಿಂಪಿಕ್ಸ್ ಗಳಲ್ಲಿ ಭಾಗವಹಿಸಿದ್ದೀರಿ. ನೀವು ಚಿರಪರಿಚಿತ ಆಟಗಾರರು. ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ದೇಶವನ್ನು ಪ್ರತಿನಿಧಿಸುತ್ತಿರುವ ಕಿರಿಯ, ಯುವ ಆಟಗಾರರಿಗೆ ನಿಮ್ಮ ಸಲಹೆ ಏನು?.

ಶರತ್: ಬಾರಿ ಒಲಿಂಪಿಕ್ಸ್ ಹೊಸ ವಾತಾವರಣದಲ್ಲಿ ನಡೆಯುತ್ತಿದೆ. ಕೋವಿಡ್ -19  ಮಧ್ಯದಲ್ಲಿ ನಡೆಯುತ್ತಿದೆ. ಕಳೆದ ಮೂರು ಒಲಿಂಪಿಕ್ಸ್ ಗಳಲ್ಲಿ ನಮ್ಮ ಗಮನ ನಮ್ಮ ಸುರಕ್ಷೆ ಮತ್ತು ಶಿಷ್ಟಾಚಾರ ಕಾಪಾಡುವುದಕ್ಕಿಂತ ಹೆಚ್ಚು ಕ್ರೀಡೆಯಲ್ಲಿಯೇ ಕೇಂದ್ರೀಕೃತಗೊಳ್ಳುತ್ತಿತ್ತು. ಆದರೆ ಬಾರಿ ಕ್ರೀಡೆಯ ಜೊತೆಗೆ ನಾವು ಸಂಗತಿಗಳ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಒಲಿಂಪಿಕ್ಸ್ ಗೆ ಮೊದಲ ಬಾರಿಗೆ ಹೋಗುವವರಿಗೆ ನಾನು ಹೇಳಲಿಚ್ಛಿಸುವುದೇನೆಂದರೆ ನಾವು ಶಿಷ್ಟಾಚಾರ ಪಾಲಿಸದಿದ್ದರೆ ನಾವು ಆಟದಿಂದ ಹೊರಗೆ ಬೀಳುತ್ತೇವೆ. ಆದರೆ ನಾವು ಒಲಿಂಪಿಕ್ಸ್ ಗಾಗಿ ಅಲ್ಲಿಗೆ ತಲುಪಿದಾಗ ನಮ್ಮ ಪೂರ್ಣ ಗಮನ ನಮ್ಮ ಕ್ರೀಡೆಯ ಮೇಲಿರಬೇಕು.

ಪ್ರಧಾನ ಮಂತ್ರಿ: ಶರತ್ ಜೀ, ನೀವು ಆಟ ಆರಂಭಿಸಿದಾಗ ಮತ್ತು ಈಗಿನ ಕಾಲಕ್ಕೆ ಹೋಲಿಸಿದಾಗ ಟೇಬಲ್ ಟೆನ್ನಿಸ್ ನಲ್ಲಿ ಯಾವ ಬದಲಾವಣೆಗಳು ತಮ್ಮ ಗಮನಕ್ಕೆ ಬಂದಿವೆ?. ಕ್ರೀಡೆಗೆ ಸಂಬಂಧಿಸಿ ಸರಕಾರಿ ಇಲಾಖೆಗಳ ಧೋರಣೆ ಬದಲಾಗಿರುವುದು ನಿಮ್ಮ ಗಮನಕ್ಕೆ ಬಂದಿದೆಯೇ?. 

ಶರತ್: 2006 ರಲ್ಲಿ ನಾನು ಮೊದಲ ಬಾರಿಗೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಾಗಿನಿಂದ ಮತ್ತು ನಾವು ತಂಡವಾಗಿ 2018ರಲ್ಲಿ ಚಿನ್ನದ ಪದಕಗಳನ್ನು ಗೆದ್ದಾಗಲೂ ಬಹಳಷ್ಟು ಬದಲಾವಣೆಗಳಾಗಿವೆ. 2006 ಮತ್ತು 2018 ನಡುವೆ ಭಾರೀ ಬದಲಾವಣೆಗಳು ಕಾಣಸಿಗುತ್ತವೆ. ಈಗ ಕ್ರೀಡೆಯಲ್ಲಿ ವೃತ್ತಿಪರತೆ ಬಂದಿದೆ. 2006 ರಲ್ಲಿ ನಾನು ಗೆದ್ದಾಗ ಅಲ್ಲಿ ಅಷ್ಟೊಂದು ವೃತ್ತಿಪರತೆ ಇರಲಿಲ್ಲ. ವಾಸ್ತವವಾಗಿ ಅಧ್ಯಯನ ಬಹಳ ಮುಖ್ಯ ಮತ್ತು ಕ್ರೀಡೆಗಳು ಬದಿಯಲ್ಲಿರಲಿ ಎಂಬ ಭಾವನೆ ಇತ್ತು. ಈಗ ಹಾಗಿಲ್ಲ. ಸರಕಾರ ಮತ್ತು ಖಾಸಗಿ ಸಂಘಟನೆಗಳು ಕ್ರೀಡೆಗೆ ಮಹತ್ವ ಕೊಡುತ್ತಿವೆ. ಈಗ ವೃತ್ತಿಪರ ಕ್ರೀಡಾಳು ಆಗಲು ಹೆಚ್ಚು ಅವಕಾಶಗಳಿವೆ. ಈಗ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಸ್ವಲ್ಪವಾದರೂ ಗ್ಯಾರಂಟಿ ಇದೆ. ಗ್ಯಾರಂಟಿಗಿಂತ ಹೆಚ್ಚಾಗಿ, ಅಲ್ಲಿ ಭರವಸೆ (ಪೋಷಕರಲ್ಲಿ) ಮೂಡಿದೆ. ಅವರ ಮಕ್ಕಳು ಕ್ರೀಡೆಯಲ್ಲಿ ಉತ್ತಮವಾದುದನ್ನು ಸಾಧಿಸಿದರೆ, ಅವರು ತಮ್ಮ ಜೀವನವನ್ನು ಸುಗಮವಾಗಿ ಮಾಡಬಹುದು ಎಂಬ ಭಾವನೆ ಬಂದಿದೆ. ಇದು ಬಹಳ ಧನಾತ್ಮಕ ಮನಸ್ಥಿತಿ.

ಪ್ರಧಾನ ಮಂತ್ರಿ: ಶರತ್ ಜೀ, ನೀವು ಟೇಬಲ್ ಟೆನ್ನಿಸ್ ಮಾತ್ರವಲ್ಲ ಪ್ರಮುಖ ವಿಷಯಗಳಲ್ಲಿಯೂ ವಿಸ್ತಾರವಾದ ಅನುಭವವನ್ನು ಹೊಂದಿದ್ದೀರಿ. ಅನುಭವ ನಿಮಗೆ ಬಹಳ ಉಪಯುಕ್ತವಾಗುವುದು ಮಾತ್ರವಲ್ಲ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲಿರುವ ಇಡೀ ದೇಶದ ತಂಡಕ್ಕೂ ಉಪಯುಕ್ತವಾಗಬಲ್ಲದು. ಬಾರಿ ನಿಮಗೆ ದೊಡ್ಡ ಪಾತ್ರವಿದೆ. ನಿಮ್ಮದೇ ಕ್ರೀಡೆಯ ಜೊತೆಗೆ ಇಡೀ ತಂಡವನ್ನು ನಿಭಾಯಿಸುವಲ್ಲಿ ನಿಮ್ಮ ಕೊಡುಗೆ ದೊಡ್ಡದಿರುತ್ತದೆ. ಮತ್ತು ಅದನ್ನು ನೀವು ಉತ್ತಮವಾಗಿ ಮಾಡುತ್ತೀರಿ ಎಂಬ ಬಗ್ಗೆ  ನನಗೆ ಖಾತ್ರಿ ಇದೆ. ನಿಮಗೆ ಮತ್ತು ನಿಮ್ಮ ತಂಡಕ್ಕೂ ನನ್ನ ಶುಭ ಹಾರೈಕೆಗಳು.

ಪ್ರಧಾನ ಮಂತ್ರಿ: ನಾವಿನ್ನು ಮಣಿಕಾ ಭಾತ್ರಾ ಜೀ ಜೊತೆ ಮಾತನಾಡುವ, ಮಣಿಕಾ ಜೀ ನಮಸ್ತೇ!.

ಮಣಿಕಾ: ನಮಸ್ತೇ ಸರ್!

ಪ್ರಧಾನ ಮಂತ್ರಿ: ಮಣಿಕಾ, ನಾನು ಕೇಳಿ ತಿಳಿದಿರುವೆ, ಟೇಬಲ್ ಟೆನ್ನಿಸ್ ಆಡುವುದರ ಜೊತೆಗೆ ನೀವು ಆಟವನ್ನು ಬಡ ಮಕ್ಕಳಿಗೆ ಹೇಳಿಕೊಡುತ್ತಿರುವಿರಿ ಎಂಬುದಾಗಿ. ನೀವು ಅವರಿಗೆ ಸಹಾಯವನ್ನೂ ಮಾಡುತ್ತಿರುವಿರಿ. ನೀವು ಬಹಳ ಕಿರಿಯರು. ನಿಮಗೆ ಚಿಂತನೆ ಹೇಗೆ ಬಂತು?

ಮಣಿಕಾ: ಸರ್. ನಾನು ಪುಣೆಯಲ್ಲಿ ಆಡುತ್ತಿದ್ದೆ. ಮತ್ತು ನಾನು ಇಲ್ಲಿಗೆ ಮೊದಲ ಬಾರಿಗೆ ಬಂದೆ.ಅವಕಾಶವಂಚಿತರು ಮತ್ತು ಅನಾಥರು ಉತ್ತಮವಾಗಿ ಆಡುತ್ತಿರುವುದನ್ನು ನೋಡಿದೆ ಮತ್ತು ಅವರಿಗೆ ಕೇಂದ್ರದಲ್ಲಿ ಕಲಿಸಲಾಗುತ್ತಿತ್ತು. ಇದು ನನಗೆ ಒಂದು ವಿಭಿನ್ನ ಅನುಭವ. ಅವರ ಬದುಕಿನಲ್ಲಿ ಇಂತಹ ಸಂಗತಿಗಳ ಪ್ರವೇಶ ಆಗಲು ಮತ್ತು  ಅವರು ಅವುಗಳನ್ನು ಮಾಡುವಂತಾಗಲು, ನಾನವರಿಗೆ ಸಹಾಯ ಮಾಡಬೇಕು, ಅವರು ನನ್ನನ್ನು ಅನುಸರಿಸಿ ಉತ್ತಮ ಆಟಗಾರರಾಗಬಹುದು ಎಂದು ಭಾವಿಸಿದೆ. ನಾನು ಅವರ ಆಟವನ್ನು ನೋಡುವುದರಿಂದ ಉತ್ತೇಜನ, ಪ್ರೇರಣೆ ಪಡೆಯುತ್ತಿದ್ದೆ. ಇಂತಹ ಸಣ್ಣ ವಯಸ್ಸಿನಲ್ಲಿ ಅವರಿಗೆ ಅವರ ಜೀವನದಲ್ಲಿ ಯಾರೂ ಇಲ್ಲ. ಆದರೂ ಅವರು ಉತ್ತಮವಾಗಿ ಆಡುತ್ತಾರೆ. ನಾನು ಅವರು ಆಟವಾಡುವುದನ್ನು ನೋಡುತ್ತಾ ಪ್ರೇರಣೆ ಪಡೆದೆ.

ಪ್ರಧಾನ ಮಂತ್ರಿ: ಮಣಿಕಾ, ನಿಮ್ಮ ಪಂದ್ಯಗಳಲ್ಲಿ ಕೆಲವೊಮ್ಮೆ ನಿಮ್ಮ ಕೈಗಳ ಮೇಲೆ ತ್ರಿವರ್ಣ ಧ್ವಜವನ್ನು ಚಿತ್ರಿಸಿಕೊಂಡದ್ದನ್ನು ನಾನು ನೋಡಿದ್ದೇನೆ. ನಿಮ್ಮ ಪ್ರೇರಣೆಯ ಬಗ್ಗೆ ನಮಗೆ ಹೇಳಿ, ಅದರ ಹಿಂದಿನ ಚಿಂತನೆ, ಸ್ಫೂರ್ತಿಯನ್ನು ತಿಳಿಸಿ.

ಮಣಿಕಾ: ಸಣ್ಣ ಹುಡುಗಿಯಾಗಿದ್ದಾಗಿನಿಂದಲೂ ಭಾರತೀಯ ಧ್ವಜವನ್ನು ಇಟ್ಟುಕೊಳ್ಳುವಂತಹ ಸಂಗತಿಗಳನ್ನು ಇಷ್ಟಪಡುತ್ತಿದ್ದೆ. ನಾನು ಆಡುವಾಗ, ಪಂದ್ಯದಲ್ಲಿ ಸರ್ವಿಸ್ ಮಾಡುವಾಗ, ನಾನು ನನ್ನ ಎಡಗೈ ನೋಡುತ್ತೇನೆ ಮತ್ತು ಅಲ್ಲಿರುವ ಭಾರತೀಯ ಧ್ವಜ ನನಗೆ ಸ್ಫೂರ್ತಿ ನೀಡುತ್ತದೆ. ಆದುದರಿಂದ ನಾನು ದೇಶವನ್ನು ಪ್ರತಿನಿಧಿಸುವಾಗೆಲ್ಲ, ನಾನು ನನ್ನೊಂದಿಗೆ ಭಾರತಕ್ಕೆ ಸಂಬಂಧಿಸಿದ, ನನ್ನ ಹೃದಯಕ್ಕೆ ಹತ್ತಿರವಾದ ಧ್ವಜ ಅಥವಾ ಯಾವುದಾದರೊಂದು ವಸ್ತುವನ್ನು ಇಟ್ಟುಕೊಳ್ಳುತ್ತೇನೆ.

ಪ್ರಧಾನ ಮಂತ್ರಿ: ಮಣಿಕಾ, ನನಗೆ ತಿಳಿಸಲಾಗಿದೆ ನೀವು ನೃತ್ಯದಲ್ಲಿಯೂ ಪ್ರವೀಣರೆಂದು. ನೃತ್ಯ ಮಾಡುವ ನಿಮ್ಮ ಹವ್ಯಾಸ ನಿಮ್ಮ ಒತ್ತಡವನ್ನು ಕಡಿಮೆ ಮಾಡುವುದೇ?

ಮಣಿಕಾ: ಹೌದು ಸರ್. ಕೆಲವರು ಸಂಗೀತ ಕೇಳುವುದನ್ನು ಇಷ್ಟ ಪಡುತ್ತಾರೆ. ನೃತ್ಯ ನನಗೆ ಒತ್ತಡವನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ನನ್ನ ಪಂದ್ಯಾಟಗಳ ನಡುವೆ ಸಮಯ ಸಿಕ್ಕಾಗೆಲ್ಲ, ನಾನು ನನ್ನ ಕೊಠಡಿಗೆ  ಬಂದು ನೃತ್ಯ ಮಾಡುತ್ತೇನೆ. ನಾನದನ್ನು ಆನಂದಿಸುತ್ತೇನೆ ಮತ್ತು ಅದು ನನಗೆ ಆತ್ಮವಿಶ್ವಾಸವನ್ನು ಕೊಡುತ್ತದೆ.

ಪ್ರಧಾನ ಮಂತ್ರಿ: ಇಂತಹ ಪ್ರಶ್ನೆಗಳನ್ನು ಕೇಳುವಾಗ ನಿಮ್ಮ ಕುಟುಂಬದ ಸದಸ್ಯರು, ನಿಮ್ಮ ಸ್ನೇಹಿತರು ನಗುತ್ತಿದ್ದಾರೆ.

ಪ್ರಧಾನ ಮಂತ್ರಿ: ಮಣಿಕಾ ನೀವು ಅಂತಾರಾಷ್ಟ್ರೀಯ ಮಟ್ಟದ ಚಾಂಪಿಯನ್. ನೀವು ನಿಮ್ಮ ಆಟದ ಜೊತೆ ಮಕ್ಕಳನ್ನು ಜೋಡಿಸಿಕೊಂಡಿದ್ದೀರಿ. ನಿಮ್ಮ ಯಶಸ್ಸು ಮಕ್ಕಳನ್ನು ಪ್ರೇರೇಪಿಸುವುದು ಮಾತ್ರವಲ್ಲ ಟೆಬಲ್ ಟೆನ್ನಿಸ್ ಆಡುವ ದೇಶದ ಎಲ್ಲಾ ಯುವ ಆಟಗಾರರಿಗೆ ಪ್ರೇರಣೆಯಾಗುತ್ತದೆ. ನಾನು ಇಂದಿನ ಕಾರ್ಯಕ್ರಮದಲ್ಲಿ ಭಾರೀ ಉತ್ಸಾಹದಿಂದ ಪಾಲ್ಗೊಂಡ ನಿಮಗೆ ಮತ್ತು ನಿಮ್ಮ ಎಲ್ಲಾ ಸಹೋದ್ಯೋಗಿಗಳಿಗೆ ಶುಭವನ್ನು ಹಾರೈಸುತ್ತೇನೆ. ನಿಮ್ಮ ಕುಟುಂಬದ ಸದಸ್ಯರು ನೋಡುತ್ತಿದ್ದಾರೆ. ನಾನು ನಿಮಗೆ ಶುಭಾಶಯಗಳನ್ನು ಹೇಳುತ್ತೇನೆ. ನಿಮಗೆ ಬಹಳ ಧನ್ಯವಾದಗಳು.

ಪ್ರಧಾನ ಮಂತ್ರಿ: ನಾವಿನ್ನು ವಿನೀಶ್ ಫೋಗಟ್ ಜೀ ಅವರನ್ನು ಭೇಟಿಯಾಗೋಣ. ನಮಸ್ತೇ, ವಿನೀಶ್

ವಿನೀಶ್: ನಮಸ್ತೇ ಸರ್!

ಪ್ರಧಾನ ಮಂತ್ರಿ: ವಿನೀಶ್, ನೀವು ಫೊಗಾಟ್ ಕುಟುಂಬದಿಂದ ಬಂದವರು. ನಿಮ್ಮ ಇಡೀ ಕುಟುಂಬ ಕ್ರೀಡಾ ಕ್ಷೇತ್ರದಲ್ಲಿ ದೇಶಕ್ಕೆ ಬಹಳಷ್ಟನ್ನು ಕೊಟ್ಟಿದೆ. ಇಂತಹ ಗುರುತಿಸುವಿಕೆ ಸ್ವಲ್ಪ ಹೆಚ್ಚು ಒತ್ತಡವನ್ನು, ಸ್ವಲ್ಪ ಹೆಚ್ಚು ಜವಾಬ್ದಾರಿಯನ್ನು ಉಂಟು ಮಾಡುವುದಿಲ್ಲವೇ?

ವಿನೀಶ್: ಸರ್ ಜವಾಬ್ದಾರಿ ಎನ್ನುವುದು ಖಚಿತವಾಗಿ ಇದೆಯಾಕೆಂದರೆ ಕುಟುಂಬ ಪ್ರಯಾಣವನ್ನು ಆರಂಭಿಸಿದೆ. ಅದನ್ನು ಮುಗಿಸಬೇಕಾಗಿದೆ ಮತ್ತು ಅವರು ಯಾವ ಕನಸಿನೊಂದಿಗೆ ಆರಂಭ ಮಾಡಿದರೋ ಅದು ಬಹುಷಃ ಒಲಿಂಪಿಕ್ಸ್ ಪದಕದೊಂದಿಗೆ ಮಾತ್ರವೇ ಮುಕ್ತಾಯಗೊಳ್ಳಲು ಸಾಧ್ಯ. ನಾನು ಆಶಾವಾದಿಯಾಗಿದ್ದೇನೆಸರ್. ಇಡೀ ದೇಶಕ್ಕೆ ಭರವಸೆ ಇದೆ; ಕುಟುಂಬಕ್ಕೂ ಭರವಸೆ ಇದೆ. ಮತ್ತು ನನ್ನ ಪ್ರಕಾರ ನಿರೀಕ್ಷೆಗಳು ನಮಗೆ ಬಹಳ ಮುಖ್ಯ. ಯಾಕೆಂದರೆ ನಿರೀಕ್ಷೆಗಳಿದ್ದಾಗ ನಾನು ಒಂದು ನಿರ್ದಿಷ್ಟ ಮಟ್ಟಕ್ಕೆ ತಲುಪಿದಾಗ ಸ್ವಲ್ಪ ಮುಂದಕ್ಕೆ ತಳ್ಳಲ್ಪಡುತ್ತೇವೆ. ಅಲ್ಲಿ ಒತ್ತಡ ಇಲ್ಲದಿದ್ದರೆ, ಅದು ಉತ್ತಮ. ನಾವು ಉತ್ತಮವಾಗಿ ಆಡುತ್ತೇವೆ ಮತ್ತು ದೇಶ ಹೆಮ್ಮೆಪಡುವಂತಹ  ಅವಕಾಶವನ್ನು ಕೊಡುತ್ತೇವೆ.

ಪ್ರಧಾನ ಮಂತ್ರಿ: ಕಳೆದ ಬಾರಿ, ಗಾಯಗಳಿಂದಾಗಿ ನೀವು ರಿಯೋ ಒಲಿಂಪಿಕ್ಸ್ ನಿಂದ ಹಿಂದೆ ಸರಿಯಬೇಕಾಯಿತು. ಕಳೆದ ವರ್ಷ ಕೂಡಾ ನಿಮಗೆ ಅನಾರೋಗ್ಯ ಕಾಡಿತು. ಎಲ್ಲಾ ಅಡೆತಡೆಗಳನ್ನು ಮೀರಿ ನೀವು ಬಹಳ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದ್ದೀರಿ. ಬಹಳಷ್ಟು ಒತ್ತಡವನ್ನು ಯಶಸ್ಸಾಗಿ ಪರಿವರ್ತಿಸುವುದು ಬಹಳ ಪ್ರಯಾಸದ ಕೆಲಸ, ಇದನ್ನು ನೀವು ಹೇಗೆ ಮಾಡಿದಿರಿ?

ವಿನೀಶ್: ಸರ್ , ಇದು ಬಹಳ ಕಠಿಣ. ಆದರೆ ನಾವು ಅಥ್ಲೀಟ್ ಆಗಿ ಸಾಧಿಸಬೇಕಾಗಿದ್ದರೆ ಮಾನಸಿಕವಾಗಿ ಗಟ್ಟಿಯಾಗಿರಬೇಕು. ಅದರಲ್ಲಿ ಕುಟುಂಬದ ಪಾತ್ರ ಬಹಳ ದೊಡ್ಡದಿರುತ್ತದೆ. ಕುಟುಂಬದ ಬೆಂಬಲ ಮತ್ತು ನಮ್ಮೊಂದಿಗೆ ಕಾರ್ಯನಿರತರಾಗಿರುವ ಆಡಳಿತಾತ್ಮಕ ವ್ಯಕ್ತಿಗಳ ಪ್ರಾಮಾಣಿಕ ಬೆಂಬಲ ನಮಗೆ ಸಂಪೂರ್ಣವಾಗಿ ಸಿಕ್ಕಿದೆ. ಹಾಗಾಗಿ ನಮ್ಮ ಮೇಲೆ ಭರವಸೆ ಇಟ್ಟಿರುವವರಿಗೆ ನಿರಾಶೆ ಮಾಡುವ ಯಾವುದೇ ಮನಸ್ಥಿತಿಯಲ್ಲಿ ನಾವಿಲ್ಲ. ನಾವು ನಿಲ್ಲಬೇಕಾಗಿಲ್ಲ ಮತ್ತು ಅವರು ನಮ್ಮನ್ನು ತಳ್ಳುತ್ತಿದ್ದಾರೆ. ನಾವು ಆಟವಾಡುವಾಗೆಲ್ಲ ಎಂತಹ ಸಂಗತಿಗಳು ಮನಸ್ಸಿಗೆ ಬರುತ್ತವೆ. ಆದುದರಿಂದ ನಾವು ಗಾಯಾಳುಗಳಾಗಿರಲಿ, ಅಥವಾ ಇಲ್ಲದಿರಲಿ ನಮ್ಮ ಪ್ರಯತ್ನಗಳಲ್ಲಿ ನಾವು ನಿರಂತರವಾಗಿ ತೊಡಗಿಸಿಕೊಂಡಿರುತ್ತೇವೆ.

ಪ್ರಧಾನ ಮಂತ್ರಿ: ಟೊಕಿಯೋದಲ್ಲಿ ತಾವು ಶ್ರೇಷ್ಟ ಸಾಧನೆ ತೋರುತೀರಿ ಎಂಬ ಬಗ್ಗೆ ನನಗೆ ಖಚಿತವಿದೆ. ನಿಮ್ಮ ಬಗ್ಗೆ ಬಯೋಪಿಕ್ ಕೂಡಾ ಇರಲಿದೆ ಎಂದು ನಾವು ವಿಶ್ವಾಸದಿಂದಿರಬಹುದಲ್ಲವೇ?.

ವಿನೀಶ್: ಸರ್, ನಮಗೆ ನಿಮ್ಮ ಪ್ರಾರ್ಥನೆಗಳು, ಹಾರೈಕೆಗಳು ಬೇಕು. ಅಲ್ಲಿಗೆ ಹೋಗುವ ಎಲ್ಲಾ ಅಥ್ಲೀಟ್ ಗಳು ಪದಕಗಳನ್ನು ನಿರೀಕ್ಷೆ ಮಾಡುತ್ತಿರುವ ದೇಶಕ್ಕೆ ನಿರಾಸೆ ಮಾಡಲಾರರು ಎಂದು ನಾನು ಆಶಿಸುತ್ತೇನೆ.

ಪ್ರಧಾನ ಮಂತ್ರಿ: ಕಾರ್ಯಕ್ರಮದಲ್ಲಿ ನಿಮ್ಮ ಪೋಷಕರೂ ಭಾಗವಹಿಸಿದ್ದಾರೆ. ಒಂದು ರೀತಿಯಲ್ಲಿ ನಿಮ್ಮ ಪೋಷಕರು ಕೂಡಾ ನಿಮ್ಮ ಗುರು. ನಾನು ನಿಮ್ಮ ತಂದೆಯ ಜೊತೆ ಮಾತನಾಡಲು ಆಶಿಸುತ್ತೇನೆ. ನಮಸ್ಕಾರ!. ನಿಮಗೆ ನನ್ನ  ಪ್ರಶ್ನೆ ಸ್ವಲ್ಪ ಭಿನ್ನ. ಯಾರಾದರೊಬ್ಬರು ದೈಹಿಕ ಕ್ಷಮತೆ ಹೊಂದಿರುವಾಗ, ಆರೋಗ್ಯವಂತರಾಗಿರುವಾಗ- ನಮ್ಮ ದೇಶದಲ್ಲಿ ಕೇಳಲಾಗುತ್ತದೆ-ನೀವು ಯಾವ ಗಿರಣಿಯ ಹಿಟ್ಟು ತಿನ್ನುತ್ತಿದ್ದೀರಿ ಎಂದು?. ಹಾಗಾಗಿ ಫೊಗಟ್ ಕುಟುಂಬ ತಮ್ಮ ಪುತ್ರಿಯರಿಗೆ ಯಾವ ಧಾನ್ಯಗಳ ಹಿಟ್ಟನ್ನು ಉಣಿಸುತ್ತಿದ್ದೀರಿ? ಅದೇ ರೀತಿ ನನಗೆ ಹೇಳಿ, ಟೊಕಿಯೋಗಾಗಿ ವಿನೀಶ್ ಗೆ ನೀವು ಯಾವ ಮಂತ್ರ ಕೊಟ್ಟಿದ್ದೀರಿ.

ವಿನೀಶ್ ತಂದೆ: ಅವರು ತಮ್ಮ ಹಳ್ಳಿಯ ಗಿರಣಿಯ ಹಿಟ್ಟನ್ನು ಮತ್ತು ನಾವು ಹೊಂದಿರುವ ಆಕಳು ಮತ್ತು ಎಮ್ಮೆಗಳ ಹಾಲು, ಮೊಸರು, ತುಪ್ಪ, ಬೆಣ್ಣೆಯನ್ನು ಸೇವಿಸುತ್ತಾರೆ. 2006ರಲ್ಲಿ ವಿನೀಶ್ ಗಾಯಗೊಂಡ ಬಳಿಕ ಇಡೀ ದೇಶಕ್ಕೆ ನಾನು (ಅವರ ಪ್ರಾರ್ಥನೆ ಮತ್ತು ಹಾರೈಕೆಗಳಿಗಾಗಿ ) ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇಂದು ದೇಶವು ಆಕೆಯ ಮೇಲೆ ಭರವಸೆ ಇಟ್ಟಿದೆ. ನನು ಆಕೆಗೆ ಒಂದೇ ಒಂದು ಮಾತು ಕೊಟ್ಟಿದ್ದೇನೆ. ಒಲಿಂಪಿಕ್ಸ್ ನಲ್ಲಿ ನೀನು ಚಿನ್ನದ ಪದಕ ಗೆದ್ದು ಬಂದರೆ ನಿನ್ನನ್ನು ಸ್ವಾಗತಿಸಲು ನಾನು ವಿಮಾನ ನಿಲ್ದಾಣಕ್ಕೆ ಬರುತ್ತೇನೆ, ಇಲ್ಲದಿದ್ದರೆ ಬರುವುದಿಲ್ಲ. ಕಳೆದ ಸಾರಿ ನನ್ನ ಮಗಳಿಗೆ ಅದು ಕೈತಪ್ಪಿತು. ಆದರೆ, ಬಾರಿ ನನಗೆ ತೃಪ್ತಿ ಇದೆ. ನೀವು ಆಕೆಯ ಹಳೆಯ ಟೂರ್ನಮೆಂಟ್ ಗಳನ್ನು ನೋಡಬಹುದು. ನಾನು ನನ್ನ ಮಗಳ ವಿಷಯದಲ್ಲಿ ಬಾರಿ ಆಕೆ ಚಿನ್ನದ ಪದಕ ಗೆದ್ದು ಬರುತ್ತಾಳೆ ಮತ್ತು ನನ್ನ ಕನಸನ್ನು ನನಸು ಮಾಡುತ್ತಾಳೆ ಎಂಬ ಬಗ್ಗೆ ಪೂರ್ಣ ಭರವಸೆ ಇಟ್ಟಿದ್ದೇನೆ.

ಪ್ರಧಾನ ಮಂತ್ರಿ: ನಿಮ್ಮ ಪೋಷಕರ ಮಾತುಗಳೊಂದಿಗೆ, ವಿನೀಶ್ ನೀವು ಖಂಡಿತವಾಗಿಯೂ ಗೆಲ್ಲುತ್ತೀರಿ ಎಂಬ ಬಗ್ಗೆ ನನಗೆ ಭರವಸೆ ಇದೆ. ನೀವು ಹೋರಾಡಿ, ನೀವು ಬೀಳಬಹುದು, ನೀವು ಕಾದಾಟ ಮಾಡಿ, ಆದರೆ ನೀವು ಬಿಟ್ಟುಕೊಡಬೇಡಿ. ನಿಮ್ಮ ಕುಟುಂಬದಿಂದ ನೀವು ಏನು ಕಲಿತಿದ್ದೀರೋ ಅದು ಖಂಡಿತವಾಗಿಯೂ ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಪ್ರಯೋಜನಕ್ಕೆ ಬರುತ್ತದೆ. ನಿಮಗೆ ಶುಭಾಶಯಗಳು.

ಪ್ರಧಾನ ಮಂತ್ರಿ: ನಾವೀಗ ಸಜನ್ ಪ್ರಕಾಶ್ ಜೀ ಅವರ ಜೊತೆ ಮಾತನಾಡೋಣ. ಸಜನ್ ಜೀ, ನಮಸ್ತೇ!.ನಿಮ್ಮ ತಾಯಿ ಕೂಡಾ ಅಥ್ಲೆಟಿಕ್ಸ್ ನಲ್ಲಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ನೀವು ನಿಮ್ಮ ತಾಯಿಯಿಂದ ಏನನ್ನು ಕಲಿತಿರುವಿರಿ?

ಸಜನ್ ಪ್ರಕಾಶ್: ಸರ್, ನನ್ನ ತಾಯಿ ನನಗೆ ಎಲ್ಲವೂ ಆಗಿದ್ದಾರೆ. ಮತ್ತು ಆಕೆ ಹಿಂದಿನ ದಿನಗಳಲ್ಲಿ ಕ್ರೀಡಾಳು ಆಗಿದ್ದರು. ಮತ್ತು ಆಕೆ ನನ್ನ ಸಾಧನೆಗೆ ಎಲ್ಲಾ ಹೋರಾಟಗಳನ್ನು ಮತ್ತು ಅಡ್ಡಿ ಆತಂಕಗಳನ್ನು ದಾಟಿ ಬರಲು ನನಗೆ ಸಹಾಯ ಮಾಡಿದ್ದಾರೆ.

ಪ್ರಧಾನ ಮಂತ್ರಿ: ನೀವು ತೀವ್ರವಾಗಿ ಗಾಯಗೊಂಡಿದ್ದಿರಿ ಎಂದು ನನಗೆ ತಿಳಿಸಲಾಗಿದೆ. ಅದನ್ನು ನೀವು ಹೇಗೆ ನಿಭಾಯಿಸಿರುವಿರಿ?

ಸಜನ್ ಪ್ರಕಾಶ್: ಈಜು ಕೊಳವನ್ನು 18 ತಿಂಗಳು ಮುಚ್ಚಲಾಗಿತ್ತು. ನಾವು ಬಹಳಷ್ಟು ತೊಂದರೆಗಳನ್ನು, ಅಡ್ಡಿ ಆತಂಕಗಳನ್ನು ಎದುರಿಸಬೇಕಾಯಿತು. ನಾವು ಇಷ್ಟು ಧೀರ್ಘ ಕಾಲ ಈಜುಕೊಳದಿಂದ ಹೊರಗಿದ್ದೆವು. ಮತ್ತು ಗಾಯಗೊಂಡಿರುವುದು ಇನ್ನಷ್ಟು ಹತಾಶ ಸ್ಥಿತಿಯನ್ನು ತಂದಿಟ್ಟಿತ್ತು ಹಾಗು ಆತಂಕಕ್ಕೆ ಕಾರಣವಾಗಿತ್ತು. ಆದರೆ ಎಲ್ಲಾ ಜನತೆಯ ಬೆಂಬಲ ಮತ್ತು ನನ್ನ ಕೋಚ್ ಗಳ ಬೆಂಬಲ, ಗೌರಿ ಆಂಟಿ ಮತ್ತು ಕೇರಳ ಪೊಲೀಸರ ಬೆಂಬಲ, ಭಾರತೀಯ ಸ್ವಿಮ್ಮಿಂಗ್ ಫೆಡರೇಶನ್ನಿನ ಸಹಿತ ಪ್ರತಿಯೊಬ್ಬರೂ ಬೆಂಬಲ ನೇಡಿದರು. ನನಗನಿಸುತ್ತದೆ ಸಮಯದಲ್ಲಿ ಅವರು ನನಗೆ ಮಾನಸಿಕವಾಗಿ ಬಲಿಷ್ಠಗೊಳ್ಳಲು ಮತ್ತು ನೋವಿನಿಂದ ಹೊರಬರಲು ಸಹಾಯ ಮಾಡಿದರು ಸರ್.

ಪ್ರಧಾನ ಮಂತ್ರಿ: ಸಜನ್, ನೀವು ಒಲಿಂಪಿಕ್ಸ್ ಗಿಂತ ಮೊದಲು ಭಾರತೀಯ ಕ್ರೀಡೆಯ ಚಿನ್ನದ ಚರಿತ್ರೆಯಲ್ಲಿ ಸ್ಥಾನ ಪಡೆದಿರುವಿರಿ. ನೀವು ಸಾಧನೆಯನ್ನು ನಿಮ್ಮ ಪರಿಶ್ರಮದ ಮೂಲಕ ಇನ್ನಷ್ಟು ಉಜ್ವಲಗೊಳಿಸುತ್ತೀರಿ ಎಂಬ ಬಗ್ಗೆ ನನಗೆ ಭರವಸೆ ಇದೆ.

ಪ್ರಧಾನ ಮಂತ್ರಿ: ಮನ್ ಪ್ರೀತ್, ಕೊರೊನಾದ ಮೊದಲ ಅಲೆಯಲ್ಲಿ ನೀವೆಲ್ಲರೂ ಬೆಂಗಳೂರಿನಲ್ಲಿ .ತಂಗ ಬೇಕಾಯಿತು ಮತ್ತು ಕೊರೊನಾ ವಿರುದ್ಧ ಒಟ್ಟಾಗಿ ಹೋರಾಡಬೇಕಾಯಿತು. ಇದು ನಿಮ್ಮ ತಂಡ ಸ್ಪೂರ್ತಿಯ ಮೇಲೆ ಹೇಗೆ ಪರಿಣಾಮ ಬೀರಿತು ?

ಮನ್ ಪ್ರೀತ್: ಸರ್, ಸಮಯದಲ್ಲಿ ಸರಕಾರದಿಂದ ಬಹಳಷ್ಟು ಬೆಂಬಲ ಸಿಕ್ಕಿತು ಎಂದು ನಾನು ಹೇಳಲಿಚ್ಛಿಸುತ್ತೇನೆ. ನಾವು ಬೆಂಗಳೂರಿನಲ್ಲಿದ್ದಾಗ, ನಮ್ಮೆದುರು ಇದ್ದ ಸಂಗತಿ ಎಂದರೆ ನಮ್ಮ ತಂಡವನ್ನು ಹೇಗೆ ಬಲಿಷ್ಠವಾಗಿಸಬೇಕು ಎಂಬುದಾಗಿತ್ತು. ನಾವು ನಿಟ್ಟಿನಲ್ಲಿ ಕಾರ್ಯಾಚರಿಸಿದೆವು. ನಮಗೆ ಅಟಗಾರರ ಹಿನ್ನೆಲೆ ಅರಿವಾಯಿತು ಮತ್ತು ಅವರ ಕುಟುಂಬಗಳು ಅವರ ಮಕ್ಕಳಿಗಾಗಿ ಎಂತಹ ತ್ಯಾಗ ಮಾಡಿವೆ ಎಂಬುದೂ ಅರಿವಾಯಿತು. ನಮ್ಮ ತಂಡವನ್ನು ಬಲಿಷ್ಠ ಮಾಡಲು ನಮಗೆ ಬಹಳಷ್ಟು ಸಂಗತಿಗಳು ತಿಳಿದು ಬಂದವು. ನಮಗೆ ಇನ್ನೂ ಒಂದು ವರ್ಷ ಹೆಚ್ಚಿಗೆ ಸಿಕ್ಕಿದೆ ಮತ್ತು ಅದರಿಂದ ನಾವು ಇನ್ನಷ್ಟು ಸುಧಾರಣೆ ಹೇಗೆ ಮಾಡಬಹುದು ಎಂಬ ನಿಟ್ಟಿನಲ್ಲಿ ಚಿಂತಿಸಿದೆವು.ನಾವು ಇತರ ತಂಡಗಳ ಬಗ್ಗೆಯೂ ಅಧ್ಯಯನ ಮಾಡಿದೆವು. ಅವುಗಳ ಹೆಚ್ಚುಗಾರಿಕೆ ಏನು ಮತ್ತು ದುರ್ಬಲ ಸಂಗತಿಗಳೇನು ಎಂಬ ಬಗ್ಗೆ ಅಧ್ಯಯನ ಮಾಡಿದೆವು ಹಾಗು ನಾವು ಅವರನ್ನು ಎಲ್ಲಿ ಸೋಲಿಸಬಹುದು ಎಂಬುದನ್ನೂ ತಿಳಿದುಕೊಂಡೆವು. ಇದು ನಮಗೆ ಬಹಳ ಸಹಾಯ ಮಾಡಬಲ್ಲದು.

ಪ್ರಧಾನ ಮಂತ್ರಿ: ಒಲಿಂಪಿಕ್ಸ್ ಹಾಕಿಯಲ್ಲಿ ನಮ್ಮ ದೇಶಕ್ಕೆ ಬಹಳ ಉಜ್ವಲವಾದ , ವೈಭವದ ಇತಿಹಾಸವಿದೆ. ಇದರಿಂದಾಗಿ ಆಟಗಾರರ ಮೇಲೆ ದಾಖಲೆಯನ್ನು ನಿಭಾಯಿಸಬೇಕಾದಂತಹ ಹೆಚ್ಚಿನ ಒತ್ತಡ ಇರುವುದು ಸಹಜ. ಕಾರಣದಿಂದಾಗಿ ಆಟದಲ್ಲಿ ನೀವು ಇನ್ನಷ್ಟು ಹೆಚ್ಚಿನ ಒತ್ತಡಕ್ಕೆ ಒಳಗಾಗಿರುವಿರೋ?

ಮನ್ ಪ್ರೀತ್: ಇಲ್ಲ ಸರ್, ಇಲ್ಲವೇ ಇಲ್ಲ. ಇದುವರೆಗೆ ನಾವು ಹಾಕಿಯಲ್ಲಿ 8 ಚಿನ್ನದ ಪದಕಗಳನ್ನು ಗೆದ್ದಿದ್ದೇವೆ. ಮತ್ತು ಅವು ಯಾವುದೇ ಕ್ರೀಡಾ ಕ್ಷೇತ್ರಕ್ಕಿಂತ ಹೆಚ್ಚಿನವುಗಳಾಗಿವೆ. ಮತ್ತು ನಾವು ಕ್ರೀಡೆಯನ್ನು ಆಡುತ್ತಿದ್ದೇವೆ ಎಂಬ ಕಾರಣಕ್ಕೆ ನಾವು ಹೆಮ್ಮೆಯಿಂದಿದ್ದೇವೆ. ನಾವು ಒಲಿಂಪಿಕ್ಸ್ ಗೆ ಹೋದಾಗ, ನಾವು ಉತ್ತಮವಾದುದನ್ನು ನೀಡಲು ಪ್ರಯತ್ನಿಸುತ್ತೇವೆ ಮತ್ತು ಭಾರತಕ್ಕಾಗಿ ಪದಕಗಳನ್ನು ತರಲು ಪ್ರಯತ್ನಿಸುತ್ತೇವೆ.

ಪ್ರಧಾನ ಮಂತ್ರಿ: ನಾನು ನಿಮ್ಮ ಕುಟುಂಬದ ಸದಸ್ಯರನ್ನೂ ಕಾಣುತ್ತಿದ್ದೇನೆ. ಅವರಿಗೆ ನನ್ನ ಶುಭಾಶಯಗಳು!. ಅವರ ಆಶೀರ್ವಾದಗಳು ನಿಮ್ಮ ಮೇಲಿರುತ್ತವೆ ಮತ್ತು ದೇಶವಾಸಿಗಳ ಶುಭ ಹಾರೈಕೆಗಳೂ ನಿಮಗಿವೆ.

ಪ್ರಧಾನ ಮಂತ್ರಿ: ಮನ್ ಪ್ರೀತ್ ನಿಮ್ಮೊಂದಿಗೆ ಮಾತನಾಡುತ್ತಿರುವಾಗ, ನನಗೆ ಹಾಕಿಯ ಶ್ರೇಷ್ಠ ಆಟಗಾರರಾದ ಮೇಜರ್ ಧ್ಯಾನ್ ಚಂದ್, ಕೆ.ಡಿ.ಸಿಂಗ್ ಬಾಬು ಮತ್ತು ಮಹಮ್ಮದ್ ಶಾಹೀದ್ ಅವರ ನೆನಪಾಗುತ್ತದೆ. ನೀವು ಹಾಕಿಯ ಇತಿಹಾಸಕ್ಕೆ ಇನ್ನ್ನಷ್ಟು ವಿಜೃಂಭಣೆಯನ್ನು ತರಲಿದ್ದೀರಿ ಎಂಬುದು ನನ್ನ ಮತ್ತು ಇಡೀ ದೇಶದ ನಂಬಿಕೆಯಾಗಿದೆ.

ಪ್ರಧಾನ ಮಂತ್ರಿ: ಸಾನಿಯಾ ಜೀ, ನೀವು ಹಲವು ಗ್ರ್ಯಾನ್ ಸ್ಲಾಮ್ ಗಳನ್ನು ಗೆದ್ದಿದ್ದೀರಿ ಮತ್ತು ಅತ್ಯಂತ ಉನ್ನತ ಆಟಗಾರರ ಜೊತೆ ಆಡಿದ್ದೀರಿ. ಟೆನ್ನಿಸ್ ಚಾಂಪಿಯನ್ ಆಗಲು ಯಾವ ರೀತಿಯ ಗುಣಗಳು ಅವಶ್ಯ ಎಂದು ನೀವು ಭಾವಿಸುತ್ತೀರಿ?. ಯಾಕೆಂದರೆ ಈಗಿನ ದಿನಗಳಲ್ಲಿ ಟಯರ್-2 ಮತ್ತು ಟಯರ್ -3 ನಗರಗಳಲ್ಲಿ ಕೂಡಾ ನಿಮಗೆ ಅಭಿಮಾನಿಗಳಿರುವುದನ್ನು ನಾನು ಕಂಡಿದ್ದೇನೆ ಮತ್ತು ಅಲ್ಲಿಯ ಯುವಜನರೂ ಟೆನ್ನಿಸ್ ಕಲಿಯಲು ಇಚ್ಛಿಸುತ್ತಿದ್ದಾರೆ.

ಸಾನಿಯಾ: ಸರ್, ನನ್ನ ಪ್ರಕಾರ ಟೆನ್ನಿಸ್ ಜಾಗತಿಕ ಕ್ರೀಡೆಯಾಗಿದೆ. 25 ವರ್ಷಗಳ ಹಿಂದೆ ನಾನು ಆರಂಭಿಸಿದಾಗ ಟೆನ್ನಿಸ್ ಆಡುವವರ ಸಂಖ್ಯೆ ಬಹಳಷ್ಟೇನೂ ಇರಲಿಲ್ಲ. ಆದರೆ, ಇಂದು ತಾವು ಹೇಳುತ್ತಿರುವಂತೆ ಟೆನ್ನಿಸ್ ಬ್ಯಾಟನ್ನು ಹಿಡಿಯುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಮತ್ತು ಅವರು ಅದರಲ್ಲಿ ವೃತ್ತಿಪರರಾಗಲು ಇಚ್ಛಿಸುತ್ತಿದ್ದಾರೆ ಹಾಗು ತಾವು ಟೆನ್ನಿಸ್ ಶ್ರೇಷ್ಠ ಆಟಗಾರರಾಗಬಹುದು ಎಂದು ಭಾವಿಸುತ್ತಿದ್ದಾರೆ. ಇದಕ್ಕೆ ನಿಮಗೆ ಖಂಡಿತವಾಗಿಯೂ ಬೆಂಬಲ, ಅರ್ಪಣಾಭಾವ ಮತ್ತು ಬಹಳ ಮುಖ್ಯವಾಗಿ ಅದೃಷ್ಟವೂ ಬೇಕಾಗುತ್ತದೆ, ಯಾಕೆಂದರೆ ಅದು ಇದರಲ್ಲಿ ತನ್ನ ಪಾತ್ರ ವಹಿಸುತ್ತದೆ. ಕಠಿಣ ಪರಿಶ್ರಮ ಇಲ್ಲದಿದ್ದರೆ ಮತ್ತು ಪ್ರತಿಭೆ ಇಲ್ಲದಿದ್ದರೆ ಯಾವುದೂ ಸಾಧ್ಯವಾಗುವುದಿಲ್ಲ. ಅದು ಟೆನ್ನಿಸ್ ಇರಲಿ, ಅಥವಾ ಯಾವುದೇ ಕ್ರೀಡೆ ಇರಲಿ ಇವೆಲ್ಲವೂ ಅವಶ್ಯ. ಮತ್ತು ಈಗ ಬಹಳ ಉತ್ತಮ ಸೌಲಭ್ಯಗಳಿವೆ. 25 ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಈಗ ಬಹಳ ಉತ್ತಮ ಕ್ರೀಡಾಂಗಣಗಳಿವೆ. ಹಾರ್ಡ್ ಕೋರ್ಟ್ ಗಳೂ ಇವೆ. ಆದುದರಿಂದ ಭಾರತದಲ್ಲಿ ಹಲವು ಟೆನ್ನಿಸ್ ಆಟಗಾರರು ಉದಯಿಸಲಿದ್ದಾರೆ ಎಂಬ ಬಗ್ಗೆ ನನಗೆ ಭರವಸೆ ಇದೆ.

ಪ್ರಧಾನ  ಮಂತ್ರಿ: ಒಲಿಂಪಿಕ್ಸ್ ಸಹಭಾಗಿ ಅಂಕಿತಾ ರೈನಾ ಜೊತೆ ನಿಮ್ಮ ಸಹಭಾಗಿತ್ವ ಹೇಗೆ ಸಾಗುತ್ತಿದೆ? ನಿಮ್ಮಿಬ್ಬರ ತಯಾರಿ ಹೇಗೆ ಸಾಗಿದೆ?

ಸಾನಿಯಾ: ಅಂಕಿತ ಕಿರಿಯ ವಯಸ್ಸಿನ ಯುವ ಆಟಗಾರ್ತಿ. ಮತ್ತು ಆಕೆ ಚೆನ್ನಾಗಿ ಆಡುತ್ತಿದ್ದಾರೆ. ಅವಳೊಂದಿಗೆ ಆಡಲು ನಾನು ಅತ್ಯಂತ ಉತ್ಸುಕಳಾಗಿರುತ್ತೇನೆ. ಮತ್ತು ನಾವು ಕಳೆದ ಫೆಬ್ರವರಿಯಲ್ಲಿ ಫೆಡ್ ಕಪ್ ಪಂದ್ಯದಲ್ಲಿ ಆಡಿದ್ದೆವು. ಅದರಲ್ಲಿ ನಾವು ಉತ್ತಮವಾದ ನಿರ್ವಹಣೆಯನ್ನು ತೋರಿದ್ದೆವು. ನಾವೀಗ ಒಲಿಂಪಿಕ್ಸ್ ಗೆ ಹೋಗುವುದನ್ನು ಎದುರು ನೋಡುತ್ತಿದ್ದೇವೆ. ಮತ್ತು ಇದು ನನ್ನ ನಾಲ್ಕನೇ ಒಲಿಂಪಿಕ್ಸ್. ಆಕೆಗೆ  ಇದು ಮೊದಲ ಒಲಿಂಪಿಕ್ಸ್. ಈಗ ಹಂತದಲ್ಲಿ, ನನಗೆ ಯುವ ಕಾಲುಗಳು ಬೇಕಾಗಿವೆ, ಅದನ್ನವಳು ಒದಗಿಸಬಲ್ಲಳು.

ಪ್ರಧಾನ ಮಂತ್ರಿ: ಸಾನಿಯಾ, ನೀವು ಹಿಂದೆ ಕೂಡಾ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿ ಸರಕಾರಿ ಇಲಾಖೆಗಳು ಕಾರ್ಯನಿರ್ವಹಿಸುವ ರೀತಿಯನ್ನು ನೋಡಿರುವಿರಿ. ಕಳೆದ 5-6 ವರ್ಷಗಳಲ್ಲಿ ಯಾವ ಬದಲಾವಣೆಗಳಾಗಿವೆ ಎಂದು ನೀವು ಭಾವಿಸುತ್ತೀರಿ?.

ಸಾನಿಯಾ: ನಾವು ಕಾಮನ್ ವೆಲ್ತ್ ಕ್ರೀಡಾ ಕೂಟ ಸಂಘಟಿಸಿದ ಬಳಿಕ ಕ್ರಿಕೆಟ್ ಅಲ್ಲದೆ ಹಲವಾರು ಕ್ರೀಡಾಳುಗಳು ಮೈದಾನಗಳಲ್ಲಿ ಕಂಡು ಬರುತ್ತಿದ್ದಾರೆ, ಅವರು ಉತ್ತಮ ನಿರ್ವಹಣೆ ತೋರುತ್ತಿದ್ದಾರೆ ಮತ್ತು ದೇಶಕ್ಕೂ ಒಳ್ಳೆಯ ಹೆಸರು ತರುತ್ತಿದ್ದಾರೆ. ಕಳೆದ ಐದು-ಆರು ವರ್ಷಗಳಲ್ಲಿ ನಂಬಿಕೆ ಹೆಚ್ಚಾಗಿದೆ. ಮತ್ತು, ನಮಗೆ ಸರಕಾರದ ಬೆಂಬಲ ಸದಾ ಸಿಗುತ್ತಿದೆ. ನಾನು ತಮ್ಮನ್ನು ಭೇಟಿಯಾದಾಗೆಲ್ಲ, ತಾವು ತಮ್ಮ ಬೆಂಬಲವನ್ನು ಪುನರುಚ್ಚರಿಸಿದ್ದೀರಿ. ಹಾಗೆ ಕಳೆದ 5-6 ವರ್ಷಗಳಲ್ಲಿ ಬಹಳಷ್ಟು ಸಂಗತಿಗಳು ಜರಗಿವೆ ಮತ್ತು ಅಲ್ಲಿ ಕಳೆದ ಒಲಿಂಪಿಕ್ಸ್ ಗೆ ಹೋಲಿಸಿದರೆ ಬಹಳ ಬದಲಾವಣೆಗಳು ಆಗಿವೆ.

ಪ್ರಧಾನ ಮಂತ್ರಿ: ಸಾನಿಯಾ, ನೀವು ಚಾಂಪಿಯನ್ ಆಗುರುವಂತೆಯೇ ಹೋರಾಟಗಾರ್ತಿಯೂ ಆಗಿರುವಿರಿ. ಒಲಿಂಪಿಕ್ಸ್ ನಲ್ಲಿ ತಾವು ಅತ್ಯಂತ ಯಶಸ್ವೀ ಆಟಗಾರರಾಗಿ ಮೂಡಿ ಬರುತ್ತೀರಿ ಎಂಬ ಭರವಸೆ ನನಗಿದೆ. ನಿಮಗೆ ನಾನು ಶುಭವನ್ನು ಹಾರೈಸುತ್ತೇನೆ.

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***


(Release ID: 1737504) Visitor Counter : 268