ಉಪರಾಷ್ಟ್ರಪತಿಗಳ ಕಾರ್ಯಾಲಯ

ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಸ್‌ಗಳನ್ನು ನೀಡಲು ಮುಂದಾದ 14 ಎಂಜಿನಿಯರಿಂಗ್ ಕಾಲೇಜುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಪ ರಾಷ್ಟ್ರಪತಿಗಳು


ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಸ್‌ಗಳನ್ನು ನೀಡುವಂತೆ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಕೋರಿದರು

ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ವರದಾನವಾಗಲಿವೆ: ಉಪ ರಾಷ್ಟ್ರಪತಿಗಳು

ಭಾರತೀಯ ಭಾಷೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಜನರ ಪಾಲ್ಗೊಳ್ಳುವಿಕೆಗೆ ಕರೆ ನೀಡಿದ ಉಪ ರಾಷ್ಟ್ರಪತಿಗಳು

ನಾವು ನಮ್ಮ ಮಾತೃ ಭಾಷೆಯೊಂದಿಗೆ ಹೊಕ್ಕುಳಬಳ್ಳಿಯ ಸಂಬಂಧವನ್ನು ಹಂಚಿಕೊಂಡಿದ್ದೇವೆ: ಉಪ ರಾಷ್ಟ್ರಪತಿಗಳು

ನಾವು ನಮ್ಮ ಮಾತೃ ಭಾಷೆಯಲ್ಲಿ ಮಾತನಾಡಲು ಹೆಮ್ಮೆ ಪಡಬೇಕು: ಉಪ ರಾಷ್ಟ್ರಪತಿಗಳು

ಭಾಷೆಗಳು ವ್ಯಾಪಕವಾಗಿ ಬಳಸಿದಾಗ ಮಾತ್ರ ಅಭಿವೃದ್ಧಿ ಹೊಂದುತ್ತವೆ ಮತ್ತು ಬದುಕುಳಿಯುತ್ತವೆ: ಉಪ ರಾಷ್ಟ್ರಪತಿಗಳು

Posted On: 21 JUL 2021 12:39PM by PIB Bengaluru

ಎಂಟು ರಾಜ್ಯಗಳ 14 ಎಂಜಿನಿಯರಿಂಗ್ ಕಾಲೇಜುಗಳು ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಸ್ಗಳನ್ನು ನೀಡಲು ಮುಂದಾಗಿರುವುದನ್ನು ಶ್ಲಾಘಿಸಿದ ಉಪ ರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು, ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಅದರಲ್ಲೂ ವಿಶೇಷವಾಗಿ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ನೀಡುವ ಸಂಸ್ಥೆಗಳು ಇದೇ ಹಾದಿಯನ್ನು ಅನುಸರಿಸಬೇಕೆಂದು ಕೋರಿದರು.

ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಸ್ಗಳನ್ನು ಒದಗಿಸುವುದು ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಲಿದೆ ಎಂದು ಅವರು ಪ್ರತಿಪಾದಿಸಿದರು. ಕುರಿತು ತಮ್ಮ ಉತ್ಕಟ ಬಯಕೆಯನ್ನು ವ್ಯಕ್ತಪಡಿಸಿದ ಶ್ರೀ ನಾಯ್ಡು ಅವರು, "ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಕಾನೂನಿನಂತಹ ಎಲ್ಲಾ ವೃತ್ತಿಪರ ಕೋರ್ಸ್ಗಳನ್ನು ಮಾತೃ ಭಾಷೆಗಳಲ್ಲಿ ಕಲಿಸುವ ದಿನವನ್ನು ನೋಡುವುದು ನನ್ನ ಬಯಕೆಯಾಗಿದೆ" ಎಂದು ಹೇಳಿದರು.

11 ಭಾಷೆಗಳಲ್ಲಿ ಪ್ರಕಟಿಸಲಾದ 'ಮಾತೃ ಭಾಷೆಯಲ್ಲಿ ಎಂಜಿನಿಯರಿಂಗ್ ಕೋರ್ಸ್ಗಳು-ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆ' ಎಂಬ ಶೀರ್ಷಿಕೆಯ ಫೇಸ್ಬುಕ್ ಪೋಸ್ಟ್ನಲ್ಲಿ ಉಪ ರಾಷ್ಟ್ರಪತಿಗಳು - ಹಿಂದಿ, ಮರಾಠಿ, ತಮಿಳು, ತೆಲುಗು, ಕನ್ನಡ, ಗುಜರಾತಿ, ಮಲಯಾಳಂ, ಬೆಂಗಾಳಿ, ಅಸ್ಸಾಮಿ, ಪಂಜಾಬಿ ಮತ್ತು ಒಡಿಯಾ 11 ಸ್ಥಳೀಯ ಭಾಷೆಗಳಲ್ಲಿ ಬಿ.ಟೆಕ್ಕೋರ್ಸ್ಗಳನ್ನು ನೀಡಲು ಅನುಮತಿಸಿದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ನಿರ್ಧಾರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹೊಸ ಶೈಕ್ಷಣಿಕ ವರ್ಷದಿಂದ ಆಯ್ದ ಶಾಖೆಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ  ಕೋರ್ಸ್ಗಳನ್ನು ಒದಗಿಸಲು ಎಂಟು ರಾಜ್ಯಗಳ 14 ಎಂಜಿನಿಯರಿಂಗ್ ಕಾಲೇಜುಗಳು ಕೈಗೊಂಡಿರುವ ನಿರ್ಧಾರವನ್ನೂ ಅವರು ಸ್ವಾಗತಿಸಿದ್ದಾರೆ. "ಇದು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆ ಎಂದು ನಾನು ಬಲವಾಗಿ ನಂಬುತ್ತೇನೆ." ಎಂದಿದ್ದಾರೆ.

ಮಾತೃಭಾಷೆಯಲ್ಲಿ ಕಲಿಕೆಯ ಪ್ರಯೋಜನಗಳನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಯವರು, ಇದು ವ್ಯಕ್ತಿಯ ಗ್ರಹಿಕೆ ಮತ್ತು ತಿಳಿವಳಿಕೆಯ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. "ಯಾವುದೇ ವಿಷಯವನ್ನು ಬೇರೆ ಭಾಷೆಯಲ್ಲಿ  ಅರ್ಥಮಾಡಿಕೊಳ್ಳಬೇಕಾದರೆ, ಮೊದಲು ವ್ಯಕ್ತಿಯು  ಭಾಷೆಯನ್ನು ಕಲಿಯಬೇಕು ಮತ್ತು ಕರಗತ ಮಾಡಿಕೊಳ್ಳಬೇಕು. ಅದಕ್ಕೆ ಸಾಕಷ್ಟು ಪ್ರಯತ್ನದ ಬೇಕಾಗುತ್ತದೆ. ಆದರೆ, ಒಬ್ಬ ವ್ಯಕ್ತಿ ಮಾತೃಭಾಷೆಯಲ್ಲೇ ವಿಷಯವನ್ನು ಕಲಿಯುವಾಗ ಇಷ್ಟೆಲ್ಲಾ ಕಸರತ್ತು ಅಗತ್ಯವಿರುವುದಿಲ್ಲ," ಎಂದು ಅವರು ಹೇಳಿದರು.

ನಮ್ಮ ದೇಶದ ಶ್ರೀಮಂತ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಒತ್ತಿ ಹೇಳಿದ ಉಪ ರಾಷ್ಟ್ರಪತಿಯವರು, ಭಾರತವು ನೂರಾರು ಭಾಷೆಗಳು ಮತ್ತು ಸಾವಿರಾರು ಉಪಭಾಷೆಗಳಿಗೆ ನೆಲೆಯಾಗಿದೆ ಎಂದರು. "ನಮ್ಮ ಭಾಷಾ ವೈವಿಧ್ಯತೆಯು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಮೂಲಾಧಾರಗಳಲ್ಲಿ ಒಂದಾಗಿದೆ" ಎಂದು ಅವರು ಹೇಳಿದರು. ಮಾತೃ ಭಾಷೆಯ ಮಹತ್ವವನ್ನು ಒತ್ತಿ ಹೇಳಿದ ಶ್ರೀ ನಾಯ್ಡು ಅವರು "ನಮ್ಮ ಮಾತೃ ಭಾಷೆ ಅಥವಾ ನಮ್ಮ ಸ್ಥಳೀಯ ಭಾಷೆ ನಮಗೆ ಬಹಳ ವಿಶೇಷವಾಗಿದೆ, ಏಕೆಂದರೆ ನಾವು ಅದರೊಂದಿಗೆ ಹೊಕ್ಕುಳಬಳ್ಳಿಯ ಸಂಬಂಧವನ್ನು ಹಂಚಿಕೊಂಡಿದ್ದೇವೆ," ಎಂದು ಹೇಳಿದರು.

ಪ್ರತಿ ಎರಡು ವಾರಗಳಿಗೊಮ್ಮೆ ವಿಶ್ವದ ಒಂದು ಭಾಷೆ ಅಳಿದುಹೋಗುತ್ತಿದೆ ಎಂಬ ವಿಶ್ವಸಂಸ್ಥೆಯ ವರದಿಯನ್ನು ಉಲ್ಲೇಖಿಸಿದ ಶ್ರೀ ನಾಯ್ಡು, ಭಾರತದಲ್ಲಿ 196 ಭಾರತೀಯ ಭಾಷೆಗಳು ಅಳಿವಿನಂಚಿನಲ್ಲಿವೆ ಎಂದು ಕಳವಳ ವ್ಯಕ್ತಪಡಿಸಿದರು. "ನಮ್ಮ ಸ್ಥಳೀಯ ಭಾಷೆಗಳನ್ನು ರಕ್ಷಿಸಲು ಮತ್ತು ಮಾತೃಭಾಷೆಯಲ್ಲಿ ಕಲಿಕೆಯನ್ನು ಉತ್ತೇಜಿಸಲು ಬಹುಮುಖಿ ವಿಧಾನವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ" ಎಂದು ಅವರು ಹೇಳಿದರುಜನರು ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯ ಭಾಷೆಗಳನ್ನು ಕಲಿಯಬೇಕೆಂದು ಶ್ರೀ ನಾಯ್ಡು ಕರೆ ನೀಡಿದರು. ವಿವಿಧ ಭಾಷೆಗಳಲ್ಲಿನ ಪ್ರಾವೀಣ್ಯವು ಇಂದಿನ ಪರಸ್ಪರ ಸಂಪರ್ಕಿತ ಜಗತ್ತಿನಲ್ಲಿ ಹೆಚ್ಚಿನ ಪ್ರಯೋಜನ ಒದಗಿಸುತ್ತದೆ ಎಂದು ಅವರು ಹೇಳಿದರು. "ನಾವು ಪ್ರತಿಯೊಂದು ಭಾಷೆಯನ್ನು ಕಲಿತಂತೆ, ಅದರ ಸಂಸ್ಕೃತಿಯೊಂದಿಗೆ ನಮ್ಮ ಸಂಪರ್ಕ ಆಳವಾಗುತ್ತಾ ಹೋಗುತ್ತದೆ,ʼʼ ಎಂದು ಅವರು ಹೇಳಿದರು.

ಭಾಷೆಗಳನ್ನು ರಕ್ಷಿಸಲು ಸರಕಾರ ಕೈಗೊಂಡಿರುವ ಕ್ರಮಗಳನ್ನು ಉಪ ರಾಷ್ಟ್ರಪತಿಗಳು ಶ್ಲಾಘಿಸಿದರು. ಹೊಸ ಶಿಕ್ಷಣ ನೀತಿಯು ಸಾಧ್ಯವಿರುವೆಡೆಯೆಲ್ಲಾ ಕನಿಷ್ಠ 5ನೇ ತರಗತಿಯವರೆಗೆ ಮತ್ತು ಆದ್ಯತೆಯ ಮೇರೆಗೆ 8ನೇ ತರಗತಿ ಮತ್ತು ಅದರಾಚೆಗೂ ಮಾತೃಭಾಷೆ/ಸ್ಥಳೀಯ ಭಾಷೆ/ಪ್ರಾದೇಶಿಕ ಭಾಷೆ/ಮನೆ ಭಾಷೆಯಲ್ಲಿ ಶಿಕ್ಷಣ ನೀಡಲು ಪ್ರೋತ್ಸಾಹಿಸುತ್ತದೆ ಎಂದು ಗಮನ ಸೆಳೆದರು. ಶಿಕ್ಷಣದ ಆರಂಭಿಕ ಹಂತಗಳಲ್ಲಿ ಮಾತೃಭಾಷೆಯಲ್ಲಿ ಬೋಧನೆಯು ಮಗುವಿನ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ ಮತ್ತು ಅವನ ಅಥವಾ ಅವಳ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂದು ವಿಶ್ವದಾದ್ಯಂತ ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ ಎಂದು ಅವರು ಹೇಳಿದರು.

ಅಳಿವಿನಂಚಿನಲ್ಲಿರುವ ಅಥವಾ ಮುಂದಿನ ದಿನಗಳಲ್ಲಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವ ಭಾಷೆಗಳನ್ನು ದಾಖಲಿಸುವ ಮತ್ತು ಸಂಗ್ರಹಿಸುವ ಉದ್ದೇಶದ ಶಿಕ್ಷಣ ಸಚಿವಾಲಯ ಆರಂಭಿಸಿರುವ ʻಅಳಿವಿನಂಚಿನಲ್ಲಿರುವ ಭಾಷೆಗಳ ರಕ್ಷಣೆ ಮತ್ತು ಸಂರಕ್ಷಣೆ (ಎಸ್ ಪಿಪಿಇಎಲ್) ಯೋಜನೆʼಯನ್ನು ಶ್ರೀ ನಾಯ್ಡು ಶ್ಲಾಘಿಸಿದರು.

ಸರಕಾರವೊಂದೇ ನಿರೀಕ್ಷಿತ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಹೇಳಿದರು. "ನಮ್ಮ ಭವಿಷ್ಯದ ಪೀಳಿಗೆಗೆ ಸಂಪರ್ಕ ಕೊಂಡಿಯನ್ನು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಸುಂದರ ಭಾಷೆಗಳನ್ನು ರಕ್ಷಿಸಲು ಜನರ ಪಾಲ್ಗೊಳ್ಳುವಿಕೆ ನಿರ್ಣಾಯಕವಾಗಿದೆ" ಎಂದು ಅವರು  ಅಭಿಪ್ರಾಯಪಟ್ಟರು. ತಮ್ಮ ಮಾತೃಭಾಷೆಯಲ್ಲಿ ಸಂವಹನ ನಡೆಸಲು ಜನರಲ್ಲಿಇರುವ ಹಿಂಜರಿಕೆಯ ಬಗ್ಗೆ ಗಮನ ಸೆಳೆದ ಶ್ರೀ ನಾಯ್ಡು ಅವರು, ಜನರು ತಮ್ಮ ಮಾತೃಭಾಷೆಯಲ್ಲಿ ಮನೆಯಲ್ಲಿ ಮಾತ್ರವಲ್ಲದೆ ಸಾಧ್ಯವಿರುವ ಎಲ್ಲಾ ಕಡೆ ಮಾತನಾಡುವಂತೆ ಮನವಿ ಮಾಡಿದರು. "ವ್ಯಾಪಕವಾಗಿ ಬಳಸಿದಾಗ ಮಾತ್ರ ಭಾಷೆಗಳು ಅಭಿವೃದ್ಧಿ ಹೊಂದುತ್ತವೆ ಮತ್ತು ಬದುಕುಳಿಯುತ್ತವೆ" ಎಂದು ಅವರು ಪ್ರತಿಪಾದಿಸಿದರು.

***



(Release ID: 1737502) Visitor Counter : 383