ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಯುವ ಭಾರತೀಯ ಬರಹಗಾರರು ಮತ್ತು ಲೇಖಕರನ್ನು ಪ್ರೋತ್ಸಾಹಿಸಲು ಮೈಗೋವ್ ನಿಂದ ಆನ್‌ಲೈನ್ ಸ್ಪರ್ಧೆ


ಸ್ಪರ್ಧೆಗೆ ಭಾರತೀಯ ಯುವಕರಿಂದ ಉತ್ಸಾಹಭರಿತ ಪ್ರತಿಕ್ರಿಯೆ; ಜುಲೈ 19, 2021 ರವರೆಗೆ ಸುಮಾರು 5000 ಪುಸ್ತಕಗಳ ಪ್ರಸ್ತಾಪಗಳ ಸ್ವೀಕಾರ

ಜುಲೈ 31, 2021 ರವರೆಗೆ ಅರ್ಜಿ ಹಾಕುವ ಅವಕಾಶ

ಜಾಲತಾಣ nbtindia.gov.in ಮತ್ತು MyGov.in ಮೂಲಕ ನಡೆಯುತ್ತಿರುವ ಅಖಿಲ ಭಾರತ ಮಟ್ಟದ ಸ್ಪರ್ಧೆಯಲ್ಲಿ 75 ಲೇಖಕರ ಆಯ್ಕೆ

ಮಾರ್ಗದರ್ಶಕ ಯೋಜನೆಯಡಿ ಪ್ರತಿ ಲೇಖಕರಿಗೆ ಮುಂದಿನ ಆರು ತಿಂಗಳ ಅವಧಿಗೆ ಪ್ರತಿ ತಿಂಗಳು ರೂ. 50,000 ಗೌರವಧನ

Posted On: 20 JUL 2021 6:15PM by PIB Bengaluru

ಯುವ ಮನಸ್ಸುಗಳನ್ನು ಸಶಕ್ತಗೊಳಿಸಲು ಮತ್ತು ಭವಿಷ್ಯದ ನಾಯಕತ್ವದ ಪಾತ್ರಗಳಿಗಾಗಿ ಕಲಿಯುವ ಆಸಕ್ತಿಯ ಯುವಕರನ್ನು ಪೋಷಿಸುವಂತಹ ಕಲಿಕಾ ಪರಿಸರ ವ್ಯವಸ್ಥೆಯನ್ನು ರಚಿಸಲು, ಕೇಂದ್ರ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಪುಸ್ತಕ ಟ್ರಸ್ಟ್ (ಎನ್‌.ಬಿ.ಟಿ.) ಸಹಯೋಗದೊಂದಿಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಮೀಟಿವೈ) ಅಡಿಯಲ್ಲಿ ಮೈಗೋವ್ ಜಾಲತಾಣ ವೇದಿಕೆಯಾಗಿ ಪ್ರವರ್ತಿಸುತ್ತಿದೆ. ಯುವ ಬರಹಗಾರರಿಗಾಗಿರುವ ಪ್ರಧಾನಮಂತ್ರಿಗಳ ಮಾರ್ಗದರ್ಶನ ಯೋಜನೆಯಡಿ ಆನ್‌ಲೈನ್ ಸ್ಪರ್ಧೆಯನ್ನು ಆಯೋಜಿಸುವುದು ಇದರ ಉದ್ದೇಶ. ಈ ಮೂಲಕ ಜಗತ್ತಿನಾದ್ಯಂತದ ಯುವ ಮತ್ತು ಮಹತ್ವಾಕಾಂಕ್ಷಿ ಭಾರತೀಯ ಬರಹಗಾರರ ಭಾಗವಹಿಸುವಿಕೆಯನ್ನು ಬಯಸುತ್ತದೆ. ಆನ್‌ಲೈನ್ ಸ್ಪರ್ಧೆಯನ್ನು ಜೂನ್ 04, 2021 ರಂದು ಪ್ರಾರಂಭಿಸಲಾಯಿತು ಮತ್ತು ಅರ್ಜಿ ಹಾಕುವ ಅವಕಾಶವು  ಜುಲೈ 31, 2021 ರವರೆಗೆ ತೆರೆದಿರುತ್ತದೆ.

ಪ್ರಧಾನಮಂತ್ರಿಯವರ ಯುವ ಬರಹಗಾರರಿಗಾಗಿ ಮಾರ್ಗದರ್ಶನ ಯೋಜನೆ ರಾಷ್ಟ್ರದ ಮಟ್ಟದಲ್ಲಿ ಅಧಿಕ ಸಂಖ‍್ಯೆಯ ಯುವಕರಲ್ಲಿ ಹೆಚ್ಚಿನ ಆಸಕ್ತಿಯನ್ನು ಗಳಿಸುತ್ತಿದೆ. ಈ ಯೋಜನೆಯ ಭಾಗವಾಗಲು, ಅನೇಕ ಮಹತ್ವಾಕಾಂಕ್ಷಿ ಮತ್ತು ಉದಯೋನ್ಮುಖ ಬರಹಗಾರರು ತಮ್ಮ ಕರಡುಪ್ರತಿಗಳನ್ನು ಸಲ್ಲಿಸಲು ಮತ್ತು ಸರ್ಕಾರದ ಈ ವಿಶಿಷ್ಟ ಉಪಕ್ರಮದಿಂದ ಪ್ರಯೋಜನ ಪಡೆಯಲು ಈಗಾಗಲೇ ಮುಂದೆ ಬಂದಿದ್ದಾರೆ.  

ಜಾಲತಾಣ nbtindia.gov.in ಮತ್ತು MyGov.in ಗಳ ಮೂಲಕ ನಡೆಯುವ ಅಖಿಲ ಭಾರತ ಸ್ಪರ್ಧೆಯ ಮೂಲಕ ಒಟ್ಟು 75 ಲೇಖಕರನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿಗಳನ್ನು ಜುಲೈ 31, 2021ರವರೆಗೆ ಸಲ್ಲಿಸಬಹುದು ಮತ್ತು ವಿಜೇತರನ್ನು ಆಗಸ್ಟ್ 15, 2021 ರಂದು ಪ್ರಕಟಿಸಲಾಗುವುದು. ಜುಲೈ 19, 2021ರವರೆಗೆ ಸುಮಾರು 5000 ಪುಸ್ತಕ ಪ್ರಸ್ತಾಪಗಳನ್ನು ಈಗಾಗಲೇ ಸ್ವೀಕರಿಸಲಾಗಿದೆ.

ದೇಶದಲ್ಲಿ ಓದುವಿಕೆ, ಬರವಣಿಗೆ ಮತ್ತು ಪುಸ್ತಕ ಸಂಸ್ಕೃತಿಯನ್ನು ಉತ್ತೇಜಿಸುವ ಸಲುವಾಗಿ ಯುವ ಮತ್ತು ಉದಯೋನ್ಮುಖ ಲೇಖಕರಿಗೆ (30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ) ತರಬೇತಿ ನೀಡುವ ಉದ್ದೇಶದಿಂದ ಜಾಗತಿಕವಾಗಿ ಭಾರತ ಮತ್ತು ಭಾರತೀಯ ಬರಹಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯು ಮೇ 29, 2021 ರಂದು ಪ್ರಧಾನ ಮಂತ್ರಿ ಮಾರ್ಗದರ್ಶಿ ಯುವ ಯೋಜನೆಯನ್ನು ಪ್ರಾರಂಭಿಸಿತು.

ಭಾರತ@75 ಯೋಜನೆಯ (ಆಜಾದಿ ಕಾ ಅಮೃತ್ ಮಹೋತ್ಸವ್) ಭಾಗವಾಗಿ ಯುವ ಪೀಳಿಗೆಯ ಬರಹಗಾರರ ದೃಷ್ಟಿಕೋನಗಳನ್ನು ಪ್ರೋತ್ಸಾಹಿಸಲು ಯೋಜನೆ ರೂಪಿಸಲಾಗಿದೆ. ದೇಶದ ತೆರೆಮರೆಯ ಸಾಧಕರು, ಸ್ವಾತಂತ್ರ್ಯ ಹೋರಾಟಗಾರರು, ಅಜ್ಞಾತ ಮತ್ತು ಮರೆತುಹೋದ ಸ್ಥಳಗಳು ಮತ್ತು ರಾಷ್ಟ್ರೀಯ ಚಳವಳಿಯಲ್ಲಿ ಅವರ ಪಾತ್ರ, ಮತ್ತು ನವೀನ ಮತ್ತು ಸೃಜನಶೀಲ ರೀತಿಯಲ್ಲಿ ಇತರ ಸಂಬಂಧಿತ ವಿಷಯಗಳನ್ನು ಪ್ರೋತ್ಸಾಹಿಸಲು ಯುವ, ಉದಯೋನ್ಮುಖ ಮತ್ತು ಬಹುಮುಖ ಲೇಖಕರು (ಯುವ) ಎಂಬ ವಿನೂತನ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಯನ್ನು ಉತ್ತೇಜಿಸುವ ವಿಷಯಗಳು ವರ್ಣಪಟಲದಲ್ಲಿ ಬರೆಯಬಲ್ಲ ಬರಹಗಾರರ ಅಭಿರುಚಿಯನ್ನು ಅಭಿವೃದ್ಧಿಪಡಿಸುವ ಮತ್ತು ಸಹಾಯ ಮಾಡುವ ಯೋಜನೆಯಾಗಿದೆ.

ಪ್ರತಿ ಹಂತಗಳಲ್ಲಿ ಅನುಷ್ಠಾನಗೊಂಡು, ಉತ್ತಮವಾಗಿ ಯೋಜನೆಯನ್ನು ಕಾರ್ಯಗತಗೊಳಿಸುವುದನ್ನು ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿರುವ ನ್ಯಾಷನಲ್ ಬುಕ್ ಟ್ರಸ್ಟ್ ಸಂಸ್ಥೆಯ ಮಾರ್ಗದರ್ಶನದಲ್ಲಿ ಖಚಿತಪಡಿಸಲಾಗುತ್ತದೆ. ಈ ಯೋಜನೆಯಡಿ ಆಯ್ಕೆಗೊಂಡು ಸಿದ್ಧಪಡಿಸಿದ ಪುಸ್ತಕಗಳನ್ನು ಭಾರತದ ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸುತ್ತದೆ; ಮತ್ತು ಸಂಸ್ಕೃತಿ ಮತ್ತು ಸಾಹಿತ್ಯದ ವಿನಿಮಯವನ್ನು ಖಾತ್ರಿಪಡಿಸುವ ಉದ್ದೇಶದಿಂದ ಇತರ  ಭಾರತೀಯ ಭಾಷೆಗಳಿಗೆ ಅನುವಾದಿಸಲಾಗುವುದು, ಆ ಮೂಲಕ ಒಂದು ಭಾರತ ಶ್ರೇಷ್ಠ ಭಾರತ (ಏಕ್ ಭಾರತ್ ಶ್ರೇಷ್ಠ ಭಾರತ್’) ಸಂಕಲ್ಪವನ್ನು ಉತ್ತೇಜಿಸಲಾಗುವುದು. ಆಯ್ದ ಯುವ ಲೇಖಕರಿಗೆ ಕೆಲವು ಅತ್ಯುತ್ತಮ ಮತ್ತು ಹೆಸರಾಂತ ಲೇಖಕರೊಂದಿಗೆ ಸಂವಹನ ನಡೆಸಲು, ಸಾಹಿತ್ಯೋತ್ಸವ, ಮುಂತಾದ ಕಡೆಗಳಲ್ಲಿ ಭಾಗವಹಿಸಲು ಅವಕಾಶ ಕೂಡಾ ಲಭ್ಯವಾಗಲಿದೆ. 

“ಯುವ”ದ ಪ್ರಮುಖ ಮುಖ್ಯಾಂಶಗಳು (ಯುವ, ಉದಯೋನ್ಮುಖ ಮತ್ತು ಬಹುಮುಖ ಲೇಖಕರು)

1. ಅಖಿಲ ಭಾರತ ಸ್ಪರ್ಧೆಯ ಮೂಲಕ ಒಟ್ಟು 75 ಲೇಖಕರನ್ನು ಆಯ್ಕೆ ಮಾಡಲಾಗುತ್ತದೆ

2. ಎನ್‌.ಐ.ಟಿ.ಯಿಂದ ರಚಿಸಲ್ಪಡುವ ಸಮಿತಿಯಿಂದ ಲೇಖಕರ ಆಯ್ಕೆ ನಡೆಯಲಿದೆ

3. ಸ್ಪರ್ಧೆಯ ಅರ್ಜಿ ಹಾಕುವ ಅವಕಾಶ ಜೂನ್ 4, 2021 ರಿಂದ ಜುಲೈ 31, 2021 ರವರೆಗೆ ಇರುತ್ತದೆ

4. ಮಾರ್ಗದರ್ಶಕ ಯೋಜನೆಯಡಿ ಕೃತಿಯನ್ನು ಸರಿಯಾದ ಪುಸ್ತಕವಾಗಿ ಅಭಿವೃದ್ಧಿಪಡಿಸಿ ಪ್ರಕಟಿಸುವ ಸೂಕ್ತತೆಯನ್ನು ನಿರ್ಣಯಿಸಲು 5,000 ಪದಗಳ ಹಸ್ತಪ್ರತಿಯನ್ನು ಸಲ್ಲಿಸಲು ಪ್ರತಿಯೊಬ್ಬ ಸ್ಪರ್ಧಿಗಳನ್ನು ಕೇಳಲಾಗುತ್ತದೆ.

5. ಆಯ್ದ ಲೇಖಕರ ಹೆಸರನ್ನು ಆಗಸ್ಟ್15, 2021 ರಂದು ಪ್ರಕಟಿಸಲಾಗುವುದು

6. ಮಾರ್ಗದರ್ಶನದ ಆಧಾರದ ಮೇಲೆ, ಆಯ್ದ ಲೇಖಕರು ನಾಮನಿರ್ದೇಶಿತ ಮಾರ್ಗದರ್ಶಕರ ಮಾರ್ಗದರ್ಶನದಲ್ಲಿ ಅಂತಿಮ ಆಯ್ಕೆಗಾಗಿ ಹಸ್ತಪ್ರತಿಗಳನ್ನು ಸಿದ್ಧಪಡಿಸುತ್ತಾರೆ

7. ವಿಜೇತರ ಕೃತಿಗಳನ್ನು  ಡಿಸೆಂಬರ್ 15, 2021 ರೊಳಗೆ ಪ್ರಕಟಿಸಲು ಸಿದ್ಧಪಡಿಸಲಾಗುತ್ತದೆ

8. ಪ್ರಕಟವಾದ ಪುಸ್ತಕಗಳನ್ನು ಜನವರಿ 12, 2022 ರಂದು ಯುವ ದಿವಸ್ ಅಥವಾ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ

9. ಜೂನ್ 1,2021 ರಂದು 30 ವರ್ಷಕ್ಕಿಂತ ಕಡಿಮೆ ವಯಸ್ಸು ಹೊಂದಿರುವ ಭಾರತದ ನಾಗರಿಕರಿಗೆ ಈ ಸ್ಪರ್ಧೆಯು  ಮುಕ್ತವಾಗಿದೆ. ಭಾರತದ ಹೊರಗೆ ವಾಸಿಸುವ ಭಾರತೀಯ ಪ್ರಜೆಗಳು ಭಾರತ ಸಂಜಾತ ವ್ಯಕ್ತಿ  -ಪಿ.ಐ.ಒ ಕಾರ್ಡ್ (ಪರ್ಸನಲ್ ಆಫ್ ಇಂಡಿಯನ್ ಆರಿಜಿನ್) ಅಥವಾ ಭಾರತೀಯ ಪಾಸ್‌ ಪೋರ್ಟ್‌ಗಳನ್ನು ಹೊಂದಿರುವ ಅನಿವಾಸಿ ಭಾರತೀಯರು (ಎನ್‌.ಆರ್‌.ಐ ) ಸಹ ಈ ಸ್ಪರ್ಧೆಯಲ್ಲಿ ಮುಕ್ತವಾಗಿ ಭಾಗವಹಿಸಬಹುದು.

10. ಪ್ರತಿ ಲೇಖಕರಿಗೆ ಮುಂದಿನ ಆರು ತಿಂಗಳ ಅವಧಿಗೆ ಪ್ರತಿ ತಿಂಗಳು ರೂ.50,000 ವನ್ನು ಪ್ರಧಾನಮಂತ್ತ್ರಿ ಮಾರ್ಗದರ್ಶಕ ಯೋಜನೆಯಡಿ ಕ್ರೂಢೀಕರಿಸಿದ ಗೌರವವೇತನ ಲಭ್ಯ.

ಸ್ಪರ್ಧೆ ಅವಕಾಶ ಮುಗಿಯಲು ಕೆಲವೇ ದಿನಗಳು ಬಾಕಿಯಿದೆ. ಆಕಾಂಕ್ಷಿ ಬರಹಗಾರರು https://innovateindia.mygov.in/yuva/ or https://t.co/eq86MucRVH ಜಾಲತಾಣಗಳಿಗೆ ಭೇಟಿ ನೀಡಿ ಹೇಗೆ ಭಾಗವಹಿಸಬೇಕು, ಹಸ್ತಪ್ರತಿಗಳನ್ನು ಹೇಗೆ ಸಲ್ಲಿಸಬಹುದು, ಆಗಾಗ ಕೇಳುವ ಪ್ರಶ್ನೆಗಳು, ಇತ್ಯಾದಿ.ಗಳ ಮಾಹಿತಿ ಅರಿಯಬಹುದು, ಮತ್ತು ಈ ಯೋಜನೆಯಲ್ಲಿ ಭಾಗವಹಿಸಬಹುದು.

***



(Release ID: 1737495) Visitor Counter : 197