ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ರೈತರಿಗೆ ಅವರು ಬಯಸುವ ಭಾಷೆಯಲ್ಲಿ ‘ಸೂಕ್ತ ಸಮಯದಲ್ಲಿ ಸೂಕ್ತ ಮಾಹಿತಿ’ ಪಡೆಯಲು ಅವಕಾಶ ಕಲ್ಪಿಸುವ ಕಿಸಾನ್ ಸಾರಥಿ ಡಿಜಿಟಲ್ ವೇದಿಕೆಗೆ ಚಾಲನೆ


ಡಿಜಿಟಲ್ ವೇದಿಕೆಯ ಮೂಲಕ ರೈತರು ಕೃಷಿ ಮತ್ತು ಪೂರಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೇರವಾಗಿ ವಿಜ್ಞಾನಿಗಳಿಂದ ವ್ಯಕ್ತಿಗತ ಸಲಹೆ ಪಡೆಯಬಹುದು: ಐ.ಟಿ. ಸಚಿವ ಶ್ರೀ ಅಶ್ವಿನಿ ವೈಷ್ಣವ್

Posted On: 16 JUL 2021 3:21PM by PIB Bengaluru

ರೈತರಿಗೆ ಅವರು ಬಯಸುವ ಭಾಷೆಯಲ್ಲಿ ‘ಸೂಕ್ತ ಸಮಯದಲ್ಲಿ ಸೂಕ್ತ ಮಾಹಿತಿ’ ನೀಡುವ ನಿಟ್ಟಿನಲ್ಲಿ ‘ಕಿಸಾನ್ ಸಾರಥಿ’ ಹೆಸರಿನ ಡಿಜಿಟಲ್ ವೇದಿಕೆಗೆ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ಥೋಮರ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ಐಸಿಎಆರ್.ನ 93ನೇ ಸಂಸ್ಥಾಪನಾ ದಿನವಾದ 2021ರ ಜುಲೈ 16ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಜಂಟಿಯಾಗಿ ಚಾಲನೆ ನೀಡಿದರು.  

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪರುಷೋತ್ತಮ್ ರೂಪಾಲಾ, ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ಶ್ರೀ ಕೈಲಾಶ್ ಚೌಧರಿ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ಸುಶ್ರೀ ಶೋಭಾ ಕರಂದ್ಲಾಜೆ ವಹಿಸಿದ್ದರು.

ಈ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗಿಯಾದ ಇತರ ಗಣ್ಯರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಜಯ್ ಸಹಾನಿ, ಕಾರ್ಯದರ್ಶಿ (ಡಿಎಆರ್.ಇ) ಡಾ. ತ್ರಿಲೋಚನ್ ಮೊಹಾಪಾತ್ರ ಮತ್ತು ಮಹಾ ನಿರ್ದೇಶಕ (ಐ.ಸಿ.ಎ.ಆರ್.) ಅಭಿಷೇಕ್ ಸಿಂಗ್, ಡಿಜಿಟಲ್ ಇಂಡಿಯಾ ನಿಗಮದ ಎಂ.ಡಿ. ಮತ್ತು ಸಿ.ಇ.ಓ. ಮತ್ತು ಎಂಇಐಟಿವೈ, ಐಸಿಎಆರ್ ಮತ್ತು ಡಿಎಆರ್.ಇ.ಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ರೈತರು, ಐಸಿಎ.ಆರ್., ಡಿಎ.ಆರ್.ಇ., ಎಂ.ಇ.ಐ.ಟಿ.ವೈ ಬಾಧ್ಯಸ್ಥರು ಮತ್ತು ಪಾಲುದಾರರು ಹಾಗೂ ದೇಶದಾದ್ಯಂತದ ಕೆ.ವಿ.ಕೆ. ಸಾಕ್ಷಿಯಾಗಿತ್ತು. 

ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಶ್ರೀ ವೈಷ್ಣವ್ ತಮ್ಮ ಭಾಷಣದಲ್ಲಿ, ದೂರದ ಪ್ರದೇಶದಲ್ಲಿನ ರೈತರನ್ನು ತಲುಪಲು ಮತ್ತು ತಂತ್ರಜ್ಞಾನದ ಮಧ್ಯಸ್ಥಿಕೆಯೊಂದಿಗೆ ರೈತರನ್ನು ಸಬಲೀಕರಿಸಲು ಕಿಸಾನ್ ಸಾರಥಿ ಉಪಕ್ರಮ ಕೈಗೆತ್ತಿಕೊಂಡ ವಿಧ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಕ್ಕೆ ಅಭಿನಂದನೆ ಸಲ್ಲಿಸಿದರು. ಈ ಡಿಜಿಟಲ್ ವೇದಿಕೆಯೊಂದಿಗೆ ರೈತರು ಕೃಷಿ ಮತ್ತು ಕೃಷಿಗೆ ಪೂರಕ ಕ್ಷೇತ್ರಗಳ ಕುರಿತಂತೆ ನೇರವಾಗಿ ಕೃಷಿ ವಿಜ್ಞಾನ ಕೇಂದ್ರ (ಕೆ.ವಿ.ಕೆ.ಗಳು)ಗಳ ಸಂಬಂಧಿತ ವಿಜ್ಞಾನಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ ವ್ಯಕ್ತಿಗತವಾಗಿ ಸಲಹೆ ಪಡೆಯಬಹುದಾಗಿದೆ ಎಂದರು.   

ರೈತರ ಉತ್ಪನ್ನಗಳನ್ನು ಅವರ ಜಮೀನಿನ ಬಾಗಿಲಿನಿಂದ ಗೋದಾಮಿಗೆ, ಮಾರುಕಟ್ಟೆಗೆ ಮತ್ತು ಅವರು ಮಾರಾಟ ಮಾಡಲು ಇಚ್ಛಿಸುವ ಸ್ಥಳಕ್ಕೆ ಅತಿ ಕಡಿಮೆ ಹಾನಿಯೊಂದಿಗೆ ಸಾಗಣೆ ಮಾಡುವ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಮಧ್ಯಸ್ಥಿಕೆಗಳ ಕುರಿತಂತೆ ಸಂಶೋಧನೆ ಕೈಗೊಳ್ಳುವಂತೆ ಐ.ಸಿಎ.ಆರ್. ವಿಜ್ಞಾನಿಗಳಿಗೆ ಶ್ರೀ ವೈಷ್ಣವ್ ಕರೆ ನೀಡಿದರು. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಸಂಪರ್ಕ ಸಚಿವಾಲಯವು ರೈತರ ಸಬಲೀಕರಣಕ್ಕಾಗಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಮೀನುಗಾರಿಕೆ ಸಚಿವಾಲಯ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯಕ್ಕೆ ಎಲ್ಲ ಅಗತ್ಯ ಬೆಂಬಲ ಒದಗಿಸಲು ಸಿದ್ಧವಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಚಿವರು ಭರವಸೆ ನೀಡಿದರು. ರೈಲ್ವೆ ಸಚಿವಾಲಯವು ಫಸಲಿನ ಸಾಗಣೆಯ ಸಮಯ ತಗ್ಗಿಸಲು ಯೋಜನೆ ರೂಪಿಸುತ್ತಿದೆ ಎಂದೂ ಅವರು ಹೇಳಿದರು.

93ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯನ್ನು ಅಭಿನಂದಿಸಿದ ಶ್ರೀ ವೈಷ್ಣವ್, ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರ ದಕ್ಷ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ‘ಕಿಸಾನ್ ಸಾರಥಿ’ ಉಪಕ್ರಮವು ರೈತರಿಗೆ ಸ್ಥಳ ನಿರ್ದಿಷ್ಟ ಮಾಹಿತಿಯ ಅಗತ್ಯ ಪೂರೈಸುವುದಷ್ಟೇ ಅಲ್ಲದೆ, ಕೃಷಿ ವಿಸ್ತರಣೆ, ಶಿಕ್ಷಣ ಮತ್ತು ಐ.ಸಿ.ಎ.ಆರ್.ನ ಸಂಶೋಧನಾ ಚಟುವಟಿಕೆಗಳಿಗೂ ಅತ್ಯಂತ ಮಹತ್ವದ್ದಾಗಿದೆ ಎಂದರು. 

***



(Release ID: 1736266) Visitor Counter : 258