ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಅವರಿಂದ ಗುಜರಾತ್ ನಲ್ಲಿ ನಾಳೆ ನಾನಾ ರೈಲ್ವೆ ಯೋಜನೆಗಳ ಉದ್ಘಾಟನೆ ಮತ್ತು ಲೋಕಾರ್ಪಣೆ


ಗುಜರಾತ್ ನ ವಿಜ್ಞಾನ ನಗರಿಯಲ್ಲಿ ‘ಅಕ್ವಾಟಿಕ್ಸ್ ಮತ್ತು ರೊಬೊಟಿಕ್ಸ್ ಗ್ಯಾಲರಿ’ ಮತ್ತು ‘ನಿಸರ್ಗ ಉದ್ಯಾನ’ ಉದ್ಘಾಟಿಸಲಿರುವ ಪ್ರಧಾನ ಮಂತ್ರಿ

Posted On: 14 JUL 2021 6:43PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಗುಜರಾತ್ ನ ನಾನಾ ರೈಲ್ವೆ ಯೋಜನೆಗಳನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ, ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲದೆ, ಗುಜರಾತ್ ನ ವಿಜ್ಞಾನ ನಗರಿಯಲ್ಲಿ ಸ್ಥಾಪನೆಯಾಗಿರುವ ‘ಅಕ್ವಾಟಿಕ್ಸ್ ಮತ್ತು ರೊಬೊಟಿಕ್ಸ್ ಗ್ಯಾಲರಿ’ ಹಾಗೂ ‘ನಿಸರ್ಗ ಉದ್ಯಾನ’ವನ್ನು ಅವರು ಇದೇ ಸಂದರ್ಭದಲ್ಲಿ ದೇಶಕ್ಕೆ ಸಮರ್ಪಿಸಲಿದ್ದಾರೆ.

ಹೊಸದಾಗಿ ಪುನರಭಿವೃದ್ಧಿಪಡಿಸಿರುವ ಗಾಂಧಿ ನಗರ ರಾಜಧಾನಿ ರೈಲು ನಿಲ್ದಾಣ, ಗೇಜ್ ಪರಿವರ್ತನೆಯಾಗಿ ವಿದ್ಯುದೀಕರಣವಾಗಿರುವ ಮಹೆಸಾನ-ವರೇಥಾ ರೈಲು ಮಾರ್ಗ ಮತ್ತು ಹೊಸದಾಗಿ ವಿದ್ಯುದೀಕರಿಸಿರುವ ಸುರೇಂದ್ರನಗರ-ಪಿಪವಾವ್ ರೈಲು ಮಾರ್ಗವನ್ನು ಪ್ರಧಾನಿ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಗಾಂಧಿನಗರ ರಾಜಧಾನಿ-ವಾರಾಣಸಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಮತ್ತು ಗಾಂಧಿನಗರ ರಾಜಧಾನಿ-ವರೇಥಾ ನಡುವೆ ಮೆಮು ರೈಲು ಸೇವೆಗೆ ಶ್ರೀ ನರೇಂದ್ರ ಮೋದಿ ಅವರು ಹಸಿರುನಿಶಾನೆ ತೋರಲಿದ್ದಾರೆ.

 

ಗಾಂಧಿನಗರ ರಾಜಧಾನಿ ರೈಲು ನಿಲ್ದಾಣ ಮೇಲ್ದರ್ಜೆಗೆ

ಸುಮಾರು 71 ಕೋಟಿ ರೂ. ವೆಚ್ಚದಲ್ಲಿ ಗಾಂಧಿ ನಗರ ರಾಜಧಾನಿ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಿ, ಮೇಲ್ದರ್ಜೆಗೇರಿಸಲಾಗಿದೆ. ಆಧುನಿಕ ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಈ ರೈಲು ನಿಲ್ದಾಣಕ್ಕೆ ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿಶೇಷಚೇತನ-ಸ್ನೇಹಿ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿಶೇಷಚೇತನರಿಗೆ ವಿಶೇಷ ಟಿಕೆಟ್ ಬುಕಿಂಗ್ ಕೌಂಟರ್, ಇಳಿಜಾರುಗಳು, ಲಿಫ್ಟ್‌ಗಳು, ಮೀಸಲಾದ ಪಾರ್ಕಿಂಗ್ ಸ್ಥಳ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲು ಎಚ್ಚರ ವಹಿಸಲಾಗಿದೆ. ಸಂಪೂರ್ಣ ಕಟ್ಟಡವನ್ನು ಗ್ರೀನ್ ಬಿಲ್ಡಿಂಗ್ ರೇಟಿಂಗ್ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಅತ್ಯಾಧುನಿಕ ಮುಂಭಾಗವು 32 ಥೀಮ್ ಗಳೊಂದಿಗೆ ದೈನಂದಿನ ಥೀಮ್ ಆಧಾರಿತ ಬೆಳಕನ್ನು ಪ್ರಕಾಶಮಾನಗೊಳಿಸಲಿದೆ. ಈ ನಿಲ್ದಾಣದಲ್ಲಿ ಐದು ಪಂಚತಾರಾ ಹೋಟೆಲ್ ಗಳು ತಲೆಎತ್ತಿವೆ.

ಮಹೆಸಾನ-ವರೇಥಾ ಗೇಜ್ ಪರಿವರ್ತಿತ ವಿದ್ಯುದೀಕರಣ ಬ್ರಾಡ್ ಗೇಜ್ ಮಾರ್ಗ(ವಡ್ನಗರ್ ನಿಲ್ದಾಣ ಸೇರಿ)

ಮಹೆಸಾನ-ವರೇಥಾ ನಡುವಿನ 55 ಕಿ.ಮೀ. ದೂರದ ರೈಲು ಮಾರ್ಗವನ್ನು ಬ್ರಾಡ್ ಗೇಜ್ ಗೆ ಪರಿವರ್ತಿಸಿ, ವಿದ್ಯುದೀಕರಣ ಮಾಡಲಾಗಿದೆ. ಗೇಜ್ ಪರಿವರ್ತನೆಗೆ 293 ಕೋಟಿ ರೂ. ಹಾಗೂ ವಿದ್ಯುದೀಕರಣ ಕಾಮಗಾರಿಗೆ 74 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಮಾರ್ಗದಲ್ಲಿ 10 ನಿಲ್ದಾಣಗಳಿದ್ದು, ಅವುಗಳಲ್ಲಿ 4 ಹೊಸ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿಸ್ ನಗರ್, ವದ್ ನಗರ್, ಖೇರಾಲು ಮತ್ತು ವರೇಥಾದಲ್ಲಿ ಹೊಸ ನಿಲ್ದಾಣಗಳು ತಲೆಎತ್ತಿವೆ. ಈ ಮಾರ್ಗದಲ್ಲಿ ವದ್ ನಗರ ರೈಲು ನಿಲ್ದಾಣವು ಪ್ರಮುಖವಾಗಿದ್ದು, ಇದನ್ನು ವಡ್ನಗರ - ಮೊಧೇರಾ - ಪಟಾನ್ ಹೆರಿಟೇಜ್ ಸರ್ಕಿಟ್ ಅಡಿ ಅಭಿವೃದ್ಧಿಪಡಿಸಲಾಗಿದೆ. ಕಲ್ಲಿನ ಕೆತ್ತನೆಗಳನ್ನು ಬಳಸಿ ವಡ್ನನಗರ ನಿಲ್ದಾಣದ ಕಟ್ಟಡವನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ವಡ್ನಗರ ರೈಲು ಮಾರ್ಗವನ್ನು ಬ್ರಾಡ್ ಗೇಜ್ ಗೆ ಪರಿವರ್ತಿಸಲಾಗಿದ್ದು, ಈ ಮಾರ್ಗದಲ್ಲಿ ನಿರಂತರ ಪ್ರಯಾಣಿಕ ಮತ್ತು ಸರಕು ರೈಲುಗಳು ಸಂಚರಿಸಲಿವೆ.

 

ಸುರೇಂದ್ರನಗರ-ಪಿಪವಾವ್ ಮಾರ್ಗದ ವಿದ್ಯುದೀಕರಣ

ಸುರೇಂದ್ರನಗರ್-ಪಿಪವಾವ್ ರೈಲು ಮಾರ್ಗದ ವಿದ್ಯುದೀಕರಣ ಯೋಜನೆಯನ್ನು 289 ಕೋಟಿ ರೂ. ವೆಚ್ಚದಲ್ಲಿ ನೆರವೇರಿಸಲಾಗಿದೆ. ಪಲಾನ್ ಪುರ, ಅಹ್ಮದಾಬಾದ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಮಾರ್ಗ ಬದಲಿಸದೆ ರೈಲುಗಳು ಪಿಪವಾವ್ ಬಂದರಿಗೆ ಸಂಚರಿಸಲು ಈ ಯೋಜನೆ ಸಹಾಯಕವಾಗಿದೆ.

 

ಅಕ್ವಾಟಿಕ್ಸ್ ಗ್ಯಾಲರಿ

ಅತ್ಯಾಧುನಿಕ ಶೈಲಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಿರುವ ಸಾರ್ವಜನಿಕ ಅಕ್ವಾಟಿಕ್  ಗ್ಯಾಲರಿಯಲ್ಲಿ ವಿಶಿಷ್ಟವಾಗಿ ಕೊಳಗಳನ್ನು ನಿರ್ಮಿಸಲಾಗಿದೆ. ವಿಶ್ವದೆಲ್ಲೆಡೆ ಸಿಗುವ ಮೀನುಗಳನ್ನು ಇಲ್ಲಿ ಸಾಕಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಮುಖ ಕೊಳದಲ್ಲಿ ಶಾರ್ಕ್ ಮೀನುಗಳನ್ನು ಸಾಕಲಾಗುತ್ತದೆ. ಜತೆಗೆ, 28 ಮೀಟರ್ ಉದ್ದದ ಅನನ್ಯ ವಾಕ್ ವೇ ಸುರಂಗ ನಿರ್ಮಿಸಲಾಗಿದೆ. ಇದು ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ.

 

ರೊಬೊಟಿಕ್ಸ್ ಗ್ಯಾಲರಿ

ರೊಬೊಟಿಕ್ಸ್ ಗ್ಯಾಲರಿಯು ರೊಬೊಟಿಕ್ ವಲಯದ ತಂತ್ರಜ್ಞರನ್ನು ಪರಿಚಯಿಸುವ ಸಂವಾದಾತ್ಮಕ ಮತ್ತು ಕಲಾತ್ಮಕ ಪ್ರದರ್ಶನ ಮಂದಿರವಾಗಿದೆ. ರೊಬೊಟಿಕ್ಸ್ ತಂತ್ರಜ್ಞಾನವನ್ನು ಅರಿತುಕೊಳ್ಳಲು, ಮಾಹಿತಿ ಸಂಗ್ರಹಿಸಲು, ಸುಧಾರಿತ ತಂತ್ರಜ್ಞಾನಗಳನ್ನು ಕಲಿಯಲು ಇದು ಉತ್ತಮ ವೇದಿಕೆಯಾಗಲಿದೆ. ಗ್ಯಾಲರಿಯ ಮುಂಭಾಗ ಬೃಹತ್ ಟ್ರಾನ್ಸ್ ಫಾರ್ಮರ್ ರೊಬೊಟ್ ಪ್ರತಿಕೃತಿಯನ್ನು ನಿಲ್ಲಿಸಲಾಗಿದೆ. ಇದು ಪ್ರವಾಸಿಗರನ್ನು ಪ್ರದರ್ಶನ ಮಂದಿರಕ್ಕೆ ಸ್ವಾಗತ ನೀಡುತ್ತದೆ. ಈ ಗ್ಯಾಲರಿಯ ವಿಶಿಷ್ಟ ಆಕರ್ಷಣೆ ಎಂದರೆ, ಮಾನವಾಕೃತಿಯ ರೊಬೊಟ್ ಅನ್ನು ನಿಲ್ಲಿಸಲಾಗಿದ್ದು, ಇದು ಪ್ರವಾಸಿಗರ ಜತೆ ಭಾವನೆಗಳನ್ನು, ಆನಂದವನ್ನು ಹಂಚಿಕೊಳ್ಳುತ್ತದೆ. ವಿವಿಧ ವಲಯಗಳ ರೊಬೊಟ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ವೈದ್ಯಕೀಯ, ಕೃಷಿ, ಬಾಹ್ಯಾಕಾಶ, ರಕ್ಷಣೆ ಸೇರಿದಂತೆ ದೈನಂದಿನ ಜೀವನದಲ್ಲಿ ಬಳಸುವ ಆನ್ವಯಿಕಗಳನ್ನು ಈ ರೊಬೊಟ್ ಗಳು ಪ್ರದರ್ಶಿಸುತ್ತವೆ.

 

ನಿಸರ್ಗ ಉದ್ಯಾನ

ನಿಸರ್ಗ ಉದ್ಯಾನದಲ್ಲಿ ಹಿಮಉದ್ಯಾನ, ಚದುರಂಗ ಬನ, ಸೆಲ್ಫಿ ತಾಣಗಳು, ಕಲಾಕೃತಿ ಉದ್ಯಾನ ಇತ್ಯಾದಿ ಮನರಂಜನೆಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಕ್ಕಳ ಆಟಿಕೆಗಳು ಸಹ ಇಲ್ಲಿ ಲಭ್ಯ. ಅಳಿವಿನಂಚಿನಲ್ಲಿರುವ ರೋಮವುಳ್ಳ ಗಜ, ಟೆರರ್ ಬರ್ಡ್, ಸಿಂಹ ಮತ್ತಿತರ ಪ್ರಾಣಿ, ಪಕ್ಷಿಗಳ ಬೃಹತ್ ಕಲಾಕೃತಿಗಳನ್ನು ಉದ್ಯಾನವನದಲ್ಲಿ ಇರಿಸಲಾಗಿದ್ದು, ಅವುಗಳ ವೈಜ್ಞಾನಿಕ ಮಾಹಿತಿಯನ್ನು ಸಹ ಒದಗಿಸಲಾಗಿದೆ.

***



(Release ID: 1735808) Visitor Counter : 212