ಸಂಪುಟ

ಸೆಂಟ್ರಲ್‌ ರೈಲ್‌ಸೈಡ್‌ ವೇರ್‌ಹೌಸ್‌ ಕಂಪನಿ ಲಿಮಿಟೆಡ್‌(ಸಿಆರ್‌ಡಬ್ಲ್ಯೂಸಿ) ಅನ್ನು ಸೆಂಟ್ರಲ್‌ ವೇರ್‌ಹೌಸಿಂಗ್‌ ಕಾರ್ಪೊರೇಷನ್‌(ಸಿಡಬ್ಲ್ಯೂಸಿ) ಜತೆ ವಿಲೀನಗೊಳಿಸಲು ಸಚಿವ ಸಂಪುಟ ಅನುಮೋದನೆ


ಸಿಡಬ್ಲ್ಯೂಸಿ-ಸಿಆರ್‌ಡಬ್ಲ್ಯೂಸಿ ವಿಲೀನದೊಂದಿಗೆ "ಕನಿಷ್ಠ ಸರಕಾರ, ಗರಿಷ್ಠ ಆಡಳಿತ"

ಈ ವಿಲೀನದಿಂದ ಸಂಗ್ರಹ, ನಿರ್ವಹಣೆ ಮತ್ತು ಸಾರಿಗೆಯಂತಹ ಎರಡೂ ಕಂಪನಿಗಳ ಒಂದೇ ರೀತಿಯ ಕಾರ್ಯಗಳನ್ನು ಏಕೀಕೃತಗೊಳಿಸಲು ನೆರವಾಗಲಿದೆ

ಇದರಿಂದ ದಕ್ಷತೆ, ಗರಿಷ್ಠ ಸಾಮರ್ಥ್ಯದ ಬಳಕೆ, ಪಾರದರ್ಶಕತೆ, ರೈಲ್ವೆ ಹಳಿ ಬದಿಯ ಉಗ್ರಾಣಕ್ಕೆ ಬಂಡವಾಳದ ಒಳಹರಿವು ಮತ್ತು ಉದ್ಯೋಗ ಸೃಷ್ಟಿಗೆ ದಾರಿಯಾಗಲಿದೆ


ಕಾರ್ಪೊರೇಟ್‌ ಕಚೇರಿ ಬಾಡಿಗೆ, ಉದ್ಯೋಗಿಗಳ ಸಾಲ ಮತ್ತು ಇತರೆ ಆಡಳಿತಾತ್ಮಕ ವೆಚ್ಚದಲ್ಲಿ ಉಳಿತಾಯದಿಂದಾಗಿ ರೈಲ್‌ಸೈಡ್‌ ವೇರ್‌ಹೌಸ್‌ ಕಾಂಪ್ಲೆಕ್ಸ್‌ಗಳ(ಆರ್‌ಡಬ್ಲ್ಯೂಸಿ) ನಿರ್ವಹಣಾ ವೆಚ್ಚವು 5 ಕೋಟಿ ರೂ.ಗಳಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ವಿಲೀನದಿಂದ ಸರಕು-ಶೆಡ್ ಸ್ಥಳಗಳ ಬಳಿ ಇನ್ನೂ ಕನಿಷ್ಠ 50 ರೈಲ್ವೆ ಹಳಿ ಬದಿಯ ಉಗ್ರಾಣಗಳನ್ನು ಸ್ಥಾಪಿಸಲು ಅನುಕೂಲವಾಗಲಿದೆ

Posted On: 23 JUN 2021 12:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 'ಸೆಂಟ್ರಲ್ ರೈಲ್‌ಸೈಡ್ ವೇರ್‌ಹೌಸ್ ಕಂಪನಿ ಲಿಮಿಟೆಡ್' (ಸಿಆರ್‌ಡಬ್ಲ್ಯುಸಿ) ಎಲ್ಲಾ ಸ್ವತ್ತುಗಳುಹೊಣೆಗಾರಿಕೆಗಳುಹಕ್ಕುಗಳು ಮತ್ತು ಬಾಧ್ಯತೆಗಳನ್ನು ಸೆಂಟ್ರಲ್‌ ವೇರ್‌ಹೌಸಿಂಗ್‌ ಕಾರ್ಪೊರೇಷನ್‌(ಸಿಡಬ್ಲ್ಯೂಸಿ)ನೊಂದಿಗೆ ವಿಲೀನಗೊಳಿಸಲು ಅನುಮೋದನೆ ನೀಡಿದೆ.  "ಕನಿಷ್ಠ ಸರಕಾರ, ಗರಿಷ್ಠ ಆಡಳಿತ"ಕ್ಕೆ ಪ್ರಧಾನಿಯವರು ನೀಡಿದ ನಿರ್ದೇಶನವನ್ನು ಅನುಷ್ಠಾನಗೊಸುವ, ಸುಗಮ ವ್ಯಾಪಾರವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲೂ ಖಾಸಗಿ ವಲಯದಷ್ಟೇ ದಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಚಿವ ಸಂಪುಟ ಇರಿಸಿದ ಮತ್ತೊಂದು ಹೆಜ್ಜೆ ಇದಾಗಿದೆ. ಸೆಂಟ್ರಲ್‌ ರೈಲ್‌ಸೈಡ್‌ ವೇರ್‌ಹೌಸ್‌ ಕಂಪನಿ ಲಿಮಿಟೆಡ್‌ ಒಂದು ಮಿನಿ ರತ್ನ ವರ್ಗ-2 ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದು (ಸಿಪಿಎಸ್‌ಇ), ಕಂಪನಿ ಕಾಯಿದೆ 1956ರ ಅಡಿಯಲ್ಲಿ 2007ರಲ್ಲಿ ಇದನ್ನು ಸ್ಥಾಪಿಸಲಾಗಿತ್ತು. ಎರಡೂ ಕಂಪನಿಗಳ ವಿಲೀನದಿಂದ ಎರಡೂ ಸಂಸ್ಥೆಗಳ ಒಂದೇ ಬಗೆಯ (ಸಂಗ್ರಹ, ನಿರ್ವಹಣೆ ಮತ್ತು ಸಾರಿಗೆಯಂತಹ) ಕೆಲಸಗಳನ್ನು ಏಕೀಕೃತವಾಗಿ ನಿರ್ವಹಿಸಲು ಸಾಧ್ಯವಾಗಲಿದೆ. ಜೊತೆಗೆ ಒಂದೇ ಆಡಳಿತದ ವ್ಯವಸ್ಥೆ ಮೂಲಕ ದಕ್ಷತೆ ಹೆಚ್ಚಳ, ಸಾಮರ್ಥ್ಯದ ಗರಿಷ್ಠ ಬಳಕೆ, ಪಾರದರ್ಶಕತೆ, ಉತ್ತರದಾಯಿತ್ವವನ್ನು ಉತ್ತೇಜಿಸಲು ನೆರವಾಗಲಿದೆ. ಅಲ್ಲದೆ, ಇದರಿಂದ ಹಣಕಾಸು ಉಳಿತಾಯವಾಗಲಿದ್ದು, ರೈಲ್ವೆ ಹಳಿಗಳ ಬದಿಯಲ್ಲಿ ಮತ್ತಷ್ಟು ಉಗ್ರಾಣಗಳ ಸ್ಥಾಪನೆಗೆ ಸಹಾಯಕವಾಗಲಿದೆ.

ಕಾರ್ಪೊರೇಟ್ ಕಚೇರಿ ಬಾಡಿಗೆ, ಉದ್ಯೋಗಿಗಳ ವೇತನ ಮತ್ತು ಇತರ ಆಡಳಿತಾತ್ಮಕ ವೆಚ್ಚಗಳ ಉಳಿತಾಯದಿಂದಾಗಿ ʻರೈಲ್‌ಸೈಡ್ ವೇರ್‌ಹೌಸ್ ಕಾಂಪ್ಲೆಕ್ಸ್‌ಗಳʼ (ರೈಲ್ವೆ ಹಳಿ ಬದಿಯ ಉಗ್ರಾಣ ಸಂಕೀರ್ಣಗಳು -ರ್‌ಡಬ್ಲ್ಯೂಸಿಗಳು) ನಿರ್ವಹಣಾ ವೆಚ್ಚವು ಕೋಟಿ ರೂ.ಗಳಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ವಿಲೀನದಿಂದ ʻಆರ್‌ಡಬ್ಲ್ಯೂಸಿʼಗಳ ಸದ್ಬಳಕೆ ಹೆಚ್ಚಾಗಲಿದ್ದು, ʻಸಿಡಬ್ಲ್ಯೂಸಿʼ ಪ್ರಸ್ತುತ ಸಂಗ್ರಹಿಸುತ್ತಿರುವ ಸಿಮೆಂಟ್, ರಸಗೊಬ್ಬರ, ಸಕ್ಕರೆ, ಉಪ್ಪು ಮತ್ತು ಸೋಡಾ ಹೊರತಾಗಿ ಇತರ ಸರಕುಗಳನ್ನೂ ಇವುಗಳಲ್ಲಿ ಸಂಗ್ರಹಿಸಲು ಅನುಕೂಲವಾಗಲಿದೆ. ಈ ವಿಲೀನದಿಂದ ಸರಕು-ಶೆಡ್ಗಳ ಸ್ಥಳಗಳ ಬಳಿ ಕನಿಷ್ಠ ಇನ್ನೂ 50  ರೈಲ್‌ಸೈಡ್ ಉಗ್ರಾಣಗಳನ್ನು ಸ್ಥಾಪಿಸಲು ಅನುಕೂಲವಾಗಲಿದೆ. ಇದರಿಂದ ನುರಿತ ಕಾರ್ಮಿಕರಿಗೆ 36,500 ಮಾನವ ದಿನಗಳು ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ 9,12,500 ಮಾನವ ದಿನಗಳಿಗೆ ಸಮಾನವಾದ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಈ ವಿಲೀನ ಪ್ರಕ್ರಿಯೆಯು, ನಿರ್ಧಾರ ಕೈಗೊಂಡ ದಿನಾಂಕದ 8 ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ʻಸಿಡಬ್ಲ್ಯೂಸಿʼ - ಇದು 1957ರಲ್ಲಿ ಸ್ಥಾಪಿಸಲಾದ ಮಿನಿ-ರತ್ನ ವರ್ಗ-1 ಸಾರ್ವಜನಿಕ ವಲಯದ ಉದ್ಯಮವಾಗಿದೆ. ಕೇಂದ್ರ ಸರಕಾರವು ಸೂಚಿಸಿದ ಕೃಷಿ ಉತ್ಪನ್ನಗಳು ಮತ್ತು ಇತರ ಕೆಲವು ಸರಕುಗಳ ದಾಸ್ತಾನಿನ ಉದ್ದೇಶಕ್ಕಾಗಿ ವೇರ್‌ಹೌಸಿಂಗ್‌ ಕಾರ್ಪೊರೇಷನ್‌ಗಳ ನಿಯಂತ್ರಣ ಉದ್ದೇಶಕ್ಕೆ ಇದನ್ನು ಸ್ಥಾಪಿಸಲಾಯಿತು. ʻಸಿಡಬ್ಲ್ಯೂಸಿʼಯು ಲಾಭದಾಯಕ ಸಾರ್ವಜನಿಕ ವಲಯದ ಉದ್ಯಮವಾಗಿದ್ದು (ಪಿಎಸ್‌ಇ) ಪ್ರಸ್ತುತ, ಇದು  100 ಕೋಟಿ ರೂ.ಗಳ ಅಧಿಕೃತ ಬಂಡವಾಳವನ್ನು ಮತ್ತು 68.02 ಕೋಟಿ ರೂ. ಷೇರು ಬಂಡವಾಳವನ್ನು ಹೊಂದಿದೆ. ʻಸಿಡಬ್ಲ್ಯೂಸಿʼಯು 2007ರ ಜುಲೈ 10ರಂದು ʻಸೆಂಟ್ರಲ್‌ ರೈಲ್‌ಸೈಡ್‌ ವೇರ್‌ಹೌಸ್‌ ಕಂಪನಿ ಲಿಮಿಟೆಡ್‌ʼ (ಸಿಆರ್‌ಡಬ್ಲ್ಯೂಸಿ) ಹೆಸರಿನ ಪ್ರತ್ಯೇಕ ಅಧೀನ ಸಂಸ್ಥೆಯನ್ನು ಸ್ಥಾಪಿಸಿತು. ರೈಲ್ವೆಯಿಂದ ಗುತ್ತಿಗೆಗೆ ಪಡೆದ ಅಥವಾ ಖರೀದಿಸಿದ ಭೂಮಿಯಲ್ಲಿ ಭೂಮಿಯಲ್ಲಿ ರೈಲ್‌ಸೈಡ್‌ ವೇರ್‌ಹೌಸಿಂಗ್‌ ಕಾಂಪ್ಲೆಕ್ಸ್‌ಗಳು/ಟರ್ಮಿನಲ್‌ಗಳು/ವಿವಿಧ ಮಾದರಿಯ ಸರಕು-ಸಾಗಣೆ ಹಬ್‌ಗಳ ಸ್ಥಾಪನೆ, ಅಭಿವೃದ್ಧಿ, ಉತ್ತೇಜನ ಮತ್ತು ನಿರ್ವಹಣೆ ಮಾಡುವುದು ಇದರ ಹಿಂದಿನ ಉದ್ದೇಶ. ʻಸಿಆರ್‌ಡಬ್ಲ್ಯೂಸಿʼ ಕೇವಲ 50 ಉದ್ಯೋಗಿಗಳು ಹಾಗೂ 48 ಹೊರಗುತ್ತಿಗೆ ಉದ್ಯೋಗಿಗಳನ್ನು ಹೊಂದಿರುವ ಪುಟ್ಟ ಸಂಸ್ಥೆಯಾಗಿದೆ. ಪ್ರಸ್ತುತ ಇದು 20 ರೈಲ್ವೆ ಹಳಿ ಬದಿಯ (ರೈಲ್‌ಸೈಡ್‌) ಉಗ್ರಾಣಗಳನ್ನು ನಿರ್ವಹಿಸುತ್ತಿದೆ. 2020ರ ಮಾರ್ಚ್ 31ರ ವರೆಗೆ ಕಂಪನಿಯ ನಿವ್ವಳ ಮೌಲ್ಯ (ಷೇರು ಬಂಡವಾಳ ಮತ್ತು ಮುಕ್ತ ಮೀಸಲು) 137.94 ಕೋಟಿ ರೂ.ಗಳಾಗಿದೆ. ʻಆರ್‌ಡಬ್ಲ್ಯೂಸಿʼಗಳ ಅಭಿವೃದ್ಧಿ ಮತ್ತು ಕಾರ್ಯಾಚರಣೆಯಲ್ಲಿ ವಿಶೇಷತೆ, ಪರಿಣತಿ ಮತ್ತು ಸದ್ಭಾವನೆಯನ್ನು ʻಸಿಆರ್‌ಡಬ್ಲ್ಯೂಸಿʼಯು ಸಾಧಿಸಿದೆ. ಆದರೆ ಬಂಡವಾಳದ ಕೊರತೆಯಿಂದಾಗಿ ಮತ್ತು ರೈಲ್ವೆ ಸಚಿವಾಲಯದೊಂದಿಗೆ ಒಪ್ಪಂದದಲ್ಲಿರುವ ಕೆಲವು ನಿರ್ಬಂಧಿತ ಷರತ್ತುಗಳಿಂದಾಗಿ, ಅದು ನಿರೀಕ್ಷಿತ ವೇಗದಲ್ಲಿ ಬೆಳವಣಿಗೆ ಕಂಡಿಲ್ಲ.

ʻಸಿಆರ್‌ಡಬ್ಲ್ಯೂಸಿʼನ ಏಕೈಕ ಷೇರುದಾರ ʻಸಿಡಬ್ಲ್ಯೂಸಿʼ ಆಗಿರುವುದರಿಂದ ಮತ್ತು ಎಲ್ಲಾ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳು ಮತ್ತು ಹಕ್ಕುಗಳು ಮತ್ತು ಬಾಧ್ಯತೆಗಳನ್ನು ಸಿಡಬ್ಲ್ಯುಸಿಗೆ ವರ್ಗಾಯಿಸಲಾಗುವುದರಿಂದ, ಇದು ಸಮಷ್ಟಿ ಪರಿಣಾಮಕ್ಕೆ ದಾರಿ ಮಾಡಲಿದ್ದು, ಎರಡೂ ಕಡೆ ಆರ್ಥಿಕ ನಷ್ಟವನ್ನು ತಪ್ಪಿಸುತ್ತದೆ. ʻರ್‌ಡಬ್ಲ್ಯೂಸಿʼಗಳ ಕಾರ್ಯಾಚರಣೆ ಮತ್ತು ಮಾರುಕಟ್ಟೆ ನಿರ್ವಹಣೆಗಾಗಿ 'ಆರ್‌ಡಬ್ಲ್ಯುಸಿ ವಿಭಾಗ' ಎಂಬ ಹೆಸರಿನೊಂದಿಗೆ ಪ್ರತ್ಯೇಕ ವಿಭಾಗವನ್ನು ʻಸಿಡಬ್ಲ್ಯುಸಿʼ ರಚಿಸಲಿದೆ.

*******



(Release ID: 1729776) Visitor Counter : 159