ಪ್ರಧಾನ ಮಂತ್ರಿಯವರ ಕಛೇರಿ
ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನ ಮಂತ್ರಿ ಅವರ ಭಾಷಣ
Posted On:
21 JUN 2021 7:22AM by PIB Bengaluru
ನಮಸ್ಕಾರ!
ನಿಮಗೆಲ್ಲಾ 7 ನೇ ಅಂತಾರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳು.
ಇಂದು ಇಡೀ ವಿಶ್ವವೇ ಕೊರೊನಾ ಎಂಬ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಸೆಣಸಾಡುತ್ತಿರುವಾಗ ಯೋಗ ಒಂದು ಆಶಾಕಿರಣವಾಗಿ ಉಳಿದಿದೆ. ಜಗತ್ತಿನ ಸುತ್ತಮುತ್ತಲಿನ ರಾಷ್ಟ್ರಗಳಲ್ಲಾಗಲೀ, ಭಾರತದಲ್ಲಾಗಲೀ ಕಳೆದ ಎರಡು ವರ್ಷಗಳಿಂದ ಯಾವುದೇ ಪ್ರಮುಖ ಕಾರ್ಯಕ್ರಮಗಳು ಏರ್ಪಾಡಾಗಿಲ್ಲ. ಆದರೂ ಯೋಗ ದಿನದ ಉತ್ಸಾಹ ಸ್ವಲ್ಪವೂ ಕುಂದಿಲ್ಲ. ಕೊರೊನಾ ಇದ್ದರೂ ಈ ವರ್ಷದ ಯೋಗ ದಿನದ ವಿಷಯ “ಕ್ಷೇಮಕ್ಕಾಗಿ ಯೋಗ” ಎಂಬುದಾಗಿದ್ದು, ಅದು ಕೋಟ್ಯಂತರ ಜನರಲ್ಲಿ ಭಾರೀ ಉತ್ಸಾಹವನ್ನು ಮೂಡಿಸಿದೆ. ನಾನು ಪ್ರತಿಯೊಂದು ದೇಶ, ಸಮಾಜ, ಮತ್ತು ವ್ಯಕ್ತಿಗಳು ಆರೋಗ್ಯದಿಂದಿರಲಿ ಎಂದು ಪ್ರಾರ್ಥಿಸುತ್ತೇನೆ, ಮತ್ತು ನಾವೆಲ್ಲರೂ ಒಗ್ಗೂಡಿ ಇತರ ಪ್ರತಿಯೊಬ್ಬರಿಗೂ ಪರಸ್ಪರ ಶಕ್ತಿ ನೀಡೋಣ.
ಸ್ನೇಹಿತರೇ,
ನಮ್ಮ ಸಾಧು ಸಂತರು, ಯೋಗವನ್ನು “समत्वम् योग उच्यते” ಎಂದರು. ಅಂದರೆ, ಪ್ರತಿಯೊಂದು ಸಂದರ್ಭದಲ್ಲಿಯೂ ಸ್ಥಿರವಾಗಿ, ಅಚಲವಾಗಿ ಉಳಿಯಲು ಅದು ಸಹಕಾರಿ ಎಂದರು. ಅವರು ಸಂಯಮವನ್ನು ಯೋಗದ ಮಾನದಂಡವಾಗಿ ಮಾಡಿದರು, ಸಂತೋಷ ಮತ್ತು ದುಃಖದಲ್ಲಿಯೂ ದೃಢವಾಗಿ ಇರುವಂತಹ ಮೌಲ್ಯವನ್ನು ಅದಕ್ಕೆ ಅಳವಡಿಸಿದರು. ಇಂದು ಯೋಗವು ಇದನ್ನು ಜಾಗತಿಕ ದುರಂತದ ಸಂದರ್ಭದಲ್ಲಿಯೂ ಸಾಬೀತು ಮಾಡಿದೆ. ಈ ಒಂದೂವರೆ ವರ್ಷದಲ್ಲಿ ಭಾರತ ಸಹಿತ ಹಲವಾರು ದೇಶಗಳು ಬಹು ದೊಡ್ಡ ಬಿಕ್ಕಟ್ಟನ್ನು ಅನುಭವಿಸಿವೆ.
ಸ್ನೇಹಿತರೇ,
ಯೋಗ ದಿನ ಎನ್ನುವುದು ವಿಶ್ವದ ಬಹುಪಾಲು ದೇಶಗಳಿಗೆ ಹಳೆಯ ಸಾಂಸ್ಕೃತಿಕ ಹಬ್ಬವೇನಲ್ಲ. ಜನರು ಈ ಕಷ್ಟದ ಸಮಯದಲ್ಲಿ ಅದನ್ನು ಬಹಳ ಸುಲಭವಾಗಿ ಮರೆತು ಬಿಡಬಹುದು ಮತ್ತು ಅದರ ಬಗ್ಗೆ ನಿರ್ಲಕ್ಷ್ಯ ಮಾಡಬಹುದು. ಆದರೆ ಇದಕ್ಕೆ ಬದಲಾಗಿ ಜನರಲ್ಲಿ ಯೋಗದ ಬಗ್ಗೆ ಪ್ರೀತಿ ಮತ್ತು ಉತ್ಸಾಹ ಹೆಚ್ಚಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಜಗತ್ತಿನ ಪ್ರತಿಯೊಂದು ಭಾಗದಲ್ಲಿಯೂ ಲಕ್ಷಾಂತರ ಹೊಸ ಯೋಗಾಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಯೋಗದ ಪ್ರಥಮ ಪರ್ಯಾಯವಾದ ಸಂಯಮ ಮತ್ತು ಶಿಸ್ತನ್ನು ಅನುಷ್ಠಾನ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಸ್ನೇಹಿತರೇ,
ಕೊರೊನಾ ಎಂಬ ದೃಗ್ಗೋಚರವಲ್ಲದ ವೈರಸ್ ಜಗತ್ತಿಗೆ ಅಪ್ಪಳಿಸಿರುವಾಗ, ಯಾವ ದೇಶವೂ ಅದನ್ನೆದುರಿಸಲು ಸಾಮರ್ಥ್ಯವಾಗಲೀ, ಸಂಪನ್ಮೂಲವಾಗಲೀ ಅಥವಾ ಮಾನಸಿಕ ದೃಢತೆಯನ್ನು ಸೇರಿದಂತೆ ಯಾವುದೇ ಸಿದ್ಧತೆಯನ್ನು ಹೊಂದಿಲ್ಲದ ಸಮಯದಲ್ಲಿ, ನಾವು ಪ್ರತಿಕೂಲ ಪರಿಸ್ಥಿತಿಯಲ್ಲಿ ಯೋಗವು ಆತ್ಮಸ್ಥೈರ್ಯ ನೀಡುವ ಬಹಳ ದೊಡ್ಡ ಮಾಧ್ಯಮವಾಗಿ ರೂಪುಗೊಂಡಿರುವುದನ್ನು ನೋಡಿದ್ದೇವೆ. ಯೋಗವು ಈ ರೋಗದ ವಿರುದ್ಧ ವಿಶ್ವಾಸವನ್ನು ಕ್ರೋಡೀಕರಿಸಲು ಜನತೆಗೆ ಸಹಾಯ ಮಾಡಿದೆ.
ನಾನು ಮುಂಚೂಣಿ ವಾರಿಯರ್ ಗಳು ಮತ್ತು ವೈದ್ಯರ ಬಳಿ ಮಾತನಾಡಿದಾಗ, ಅವರು ಕೂಡಾ ಕೊರೊನಾ ವಿರುದ್ಧದ ಹೋರಾಟದಲ್ಲಿ ಯೋಗವನ್ನು ತಮ್ಮ ರಕ್ಷಣಾ ಕವಚವನ್ನಾಗಿ ಮಾಡಿಕೊಂಡದ್ದನ್ನು ತಿಳಿಸಿದ್ದಾರೆ. ವೈದ್ಯರು ಯೋಗದೊಂದಿಗೆ ತಮ್ಮನ್ನು ತಾವು ಬಲಿಷ್ಠರನ್ನಾಗಿಸಿ ಕೊಂಡಿದ್ದಾರೆ ಮತ್ತು ರೋಗಿಗಳು ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯವಾಗುವಂತೆ ಅದನ್ನು ಬಳಸಿಕೊಂಡಿದ್ದಾರೆ. ಇಂದು ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು ರೋಗಿಗಳಿಗೆ ಯೋಗವನ್ನು ಕಲಿಸಿಕೊಡುತ್ತಿರುವ ಮತ್ತು ರೋಗಿಗಳು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿರುವ ಅನೇಕ ಯಶೋಗಾಥೆಗಳು ಲಭ್ಯವಾಗುತ್ತಿವೆ. ಜಗತ್ತಿನ ತಜ್ಞರು ಕೂಡಾ ಶ್ವಾಸೋಚ್ಛಾಸ ವ್ಯವಸ್ಥೆಯನ್ನು ಬಲಪಡಿಸುವುದಕ್ಕಾಗಿ ಉಸಿರಾಟದ ವ್ಯಾಯಾಮವಾದ “ಪ್ರಾಣಯಾಮ” ಮತ್ತು “ಅನುಲೋಮ-ವಿಲೋಮ” ಗಳ ಮಹತ್ವವನ್ನು ಒತ್ತಿ ಹೇಳುತ್ತಿದ್ದಾರೆ ಮತ್ತು ಅನುಸರಿಸುವಂತೆ ಸಲಹೆ ನೀಡುತ್ತಿದ್ದಾರೆ.
ಸ್ನೇಹಿತರೇ,
ತಮಿಳಿನ ಪ್ರಖ್ಯಾತ ಸಂತ ತಿರುವಳ್ಳುವರ್ ಹೇಳಿದ್ದಾರೆ “नोइ नाडी, नोइ मुदल नाडी, हदु तनिक्कुम, वाय नाडी वायपच्चयल" ಎಂಬುದಾಗಿ. ಅಂದರೆ ಅಲ್ಲಿ ಖಾಯಿಲೆ ಇದ್ದರೆ, ಅದನ್ನು ಪತ್ತೆ ಹಚ್ಚಿರಿ, ಅದರ ಮೂಲಕ್ಕೆ ಹೋಗಿರಿ, ರೋಗಕ್ಕೆ ಕಾರಣ ಏನು ಎಂಬುದನ್ನು ಹುಡುಕಿರಿ ಮತ್ತು ಆನಂತರ ಅದರ ಚಿಕಿತ್ಸೆಯನ್ನು ಖಾತ್ರಿಪಡಿಸಿರಿ. ಯೋಗ ಈ ದಾರಿಯನ್ನು ಹೇಳಿಕೊಡುತ್ತದೆ. ಇಂದು ವೈದ್ಯ ವಿಜ್ಞಾನ ಕೂಡಾ ಗುಣಪಡಿಸುವಿಕೆಗೆ ಅಷ್ಟೇ ಮಹತ್ವವನ್ನು ಕೊಡುತ್ತದೆ. ಮತ್ತು ಈ ಗುಣಪಡಿಸುವ ಪ್ರಕ್ರಿಯೆಯಲ್ಲಿ ಯೋಗವು ಪ್ರಯೋಜನಕಾರಿಯಾಗುತ್ತದೆ. ಇಂದು ಜಗತ್ತಿನಾದ್ಯಂತದಿಂದ ತಜ್ಞರು ಯೋಗದ ಈ ಗುಣದ ಬಗ್ಗೆ ವಿವಿಧ ರೀತಿಯ ವೈಜ್ಞಾನಿಕ ಸಂಶೋಧನೆಯನ್ನು ಕೈಗೊಂಡಿರುವುದು ನನಗೆ ತೃಪ್ತಿ ತಂದಿದೆ.
ನಮ್ಮ ದೇಹಕ್ಕೆ ಯೋಗದಿಂದಾಗುವ ಲಾಭಗಳ ಬಗ್ಗೆ ಹಲವಾರು ಅಧ್ಯಯನಗಳು ನಡೆಯುತ್ತಿವೆ, ಅದು ನಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಉಂಟು ಮಾಡುವ ಧನಾತ್ಮಕ ಪರಿಣಾಮಗಳ ಬಗ್ಗೆಯೂ ಅಧ್ಯಯನಗಳು ಸಾಗಿವೆ. ಇತ್ತೀಚೆಗೆ ಹಲವು ಶಾಲೆಗಳಲ್ಲಿ ಮಕ್ಕಳಿಗೆ ಯೋಗ-ಪ್ರಾಣಾಯಾಮವನ್ನು ಆನ್ ಲೈನ್ ತರಗತಿಗಳು ಆರಂಭವಾಗುವುದಕ್ಕೆ ಮೊದಲು 10-15 ನಿಮಿಷ ಹೇಳಿಕೊಡುತ್ತಿದ್ದುದನ್ನು ನಾವು ಕಾಣುತ್ತಿದ್ದೇವೆ. ಇದು ಮಕ್ಕಳನ್ನು ಕೊರೊನಾ ವಿರುದ್ಧ ಹೋರಾಡಲು ದೈಹಿಕವಾಗಿ ತಯಾರು ಮಾಡುತ್ತಿದೆ.
ಸ್ನೇಹಿತರೇ
ಭಾರತದ ಋಷಿ ಮುನಿಗಳು ನಮಗೆ ಹೇಳಿಕೊಟ್ಟಿದ್ದಾರೆ-
व्यायामात् लभते स्वास्थ्यम्,
दीर्घ आयुष्यम् बलम् सुखम्।
आरोग्यम् परमम् भाग्यम्,
स्वास्थ्यम् सर्वार्थ साधनम् ॥
ಅಂದರೆ, ಯೋಗ ಮಾಡುವುದರಿಂದ ನಮಗೆ ಉತ್ತಮ ಆರೋಗ್ಯ ಲಭಿಸುತ್ತದೆ, ಶಕ್ತಿ ಸಿಗುತ್ತದೆ ಮತ್ತು ಧೀರ್ಘಾಯುಷ್ಯ ಲಭಿಸುತ್ತದೆ. ನಮಗೆ ಆರೋಗ್ಯ ಬಹಳ ದೊಡ್ಡ ಅದೃಷ್ಟ. ಮತ್ತು ಉತ್ತಮ ಆರೋಗ್ಯ ಎಂಬುದು ಎಲ್ಲಾ ಯಶಸ್ಸಿನ ಮೂಲ. ಭಾರತದ ಋಷಿ ಮುನಿಗಳು ಆರೋಗ್ಯದ ಬಗೆಗೆ ಮಾತನಾಡುವಾಗೆಲ್ಲ ಅವರು ದೈಹಿಕ ಆರೋಗ್ಯದ ಬಗ್ಗೆ ಮಾತ್ರ ಮಾತನಾಡಿದ್ದಲ್ಲ. ಯೋಗದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಬಹಳ ಒತ್ತು ಇದೆ. ಜೊತೆಗೆ ದೈಹಿಕ ಆರೋಗ್ಯವೂ ಇದೆ. ನಾವು “ಪ್ರಾಣಾಯಾಮ” ಮಾಡುವಾಗ, ಧ್ಯಾನ ಮಾಡುವಾಗ ಮತ್ತು ಇತರ ಯೋಗ ಚಟುವಟಿಕೆಗಳನ್ನು ಮಾಡುವಾಗ ನಾವು ಅಂತರಾತ್ಮದ ಅನುಭವವನ್ನು ಪಡೆಯುತ್ತೇವೆ. ಯೋಗದ ಮೂಲಕ ನಾವು ನಮ್ಮ ಆಂತರಿಕ ಶಕ್ತಿಯನ್ನು ಕಂಡುಕೊಳ್ಳುತ್ತೇವೆ, ಅದು ಎಷ್ಟು ಬಲಿಷ್ಠ ಎಂದರೆ ಜಗತ್ತಿನ ಯಾವ ಸಮಸ್ಯೆಯೂ, ಯಾವ ಋಣಾತ್ಮಕ ಶಕ್ತಿಯೂ ನಮ್ಮನ್ನು ಕಂಗೆಡಿಸಲಾರದು. ಯೋಗವು ನಮಗೆ ಒತ್ತಡದಿಂದ ಶಕ್ತಿಯತ್ತ ಮತ್ತು ಋಣಾತ್ಮಕತೆಯಿಂದ ರಚನಾತ್ಮಕತೆಯತ್ತ ದಾರಿ ತೋರಿಸುತ್ತದೆ. ಯೋಗವು ನಮ್ಮನ್ನು ವಿಷಣ್ಣತೆಯಿಂದ ಆನಂದದತ್ತ ಮತ್ತು ಆನಂದದಿಂದ ಆಶೀರ್ವಾದದತ್ತ ಕೊಂಡೊಯ್ಯುತ್ತದೆ.
ಸ್ನೇಹಿತರೇ,
ಅಲ್ಲಿ ಹಲವಾರು ಸಮಸ್ಯೆಗಳಿರಬಹುದು, ಆದರೆ ನಮಗೆ ಅಗಣಿತ ಪರಿಹಾರಗಳು ನಮ್ಮೊಳಗೇ ಲಭ್ಯ ಇರುತ್ತವೆ ಎಂದು ಯೋಗ ನಮಗೆ ಹೇಳಿಕೊಡುತ್ತದೆ. ನಮ್ಮ ವಿಶ್ವದಲ್ಲಿ ನಾವು ಅತ್ಯಂತ ದೊಡ್ಡ ಶಕ್ತಿಯ ಮೂಲ. ಹಲವಾರು ವಿಭಜನೆಗಳಿರುವ ಕಾರಣಕ್ಕೆ ನಾವು ಈ ಶಕ್ತಿಯನ್ನು ಮನಗಾಣುತ್ತಿಲ್ಲ. ಜನರ ಜೀವನ ಒಂದೆಡೆ ಕೂಡಿ ಹಾಕಿದಂತೆ ಇದ್ದಾಗ, ಈ ವಿಭಜನೆಗಳು ನಮ್ಮ ಒಟ್ಟು ವ್ಯಕ್ತಿತ್ವದ ಮೇಲೂ ಪ್ರಭಾವ ಬೀರುತ್ತವೆ. ಈ ಏಕಾಂಗಿತನದಿಂದ ಯೋಗಕ್ಕೆ ಬದಲಾದಾಗ ತನ್ಮಯತೆಯ , ಎಲ್ಲರೂ ಒಂದೇ ಎಂಬ ಅನುಭವ ಸಾಕ್ಷಾತ್ಕಾರಗೊಳ್ಳುತ್ತದೆ. ಅದು ಯೋಗದ ಕೊಡುಗೆ. ಪ್ರಖ್ಯಾತ ಗುರುದೇವ ಠ್ಯಾಗೋರ ಅವರ ಮಾತುಗಳು ನನಗೆ ನೆನಪಾಗುತ್ತವೆ. ಅವರು ಹೇಳಿದ್ದರು, ಮತ್ತು ನಾನದನ್ನು ಉಲ್ಲೇಖಿಸುತ್ತೇನೆ : “ ನಮ್ಮತನದ ಅರ್ಥ ದೇವರು ಮತ್ತು ಇತರರನ್ನು ವಿಭಜಿಸುವುದರಲ್ಲಿ ಇಲ್ಲ. ಆದರೆ ಅದು ಯೋಗವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಇದೆ, ಒಗ್ಗಟ್ಟಿನಲ್ಲಿ ಇದೆ”
वसुधैव कुटुम्बकम्’ ಎಂಬುದು ಮಂತ್ರ , ಇದನ್ನು ಭಾರತ ಪ್ರಾಚೀನ ಕಾಲದಿಂದ ಅನುಸರಿಸುತ್ತಿದೆ. ಈಗ ಇದು ಜಾಗತಿಕ ಸ್ವೀಕಾರಾರ್ಹತೆಯನ್ನು ಪಡೆದಿದೆ. ನಾವೆಲ್ಲರೂ ಪರಸ್ಪರ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದೇವೆ. ಮಾನವತೆಗೆ ಬೆದರಿಕೆ ಬಂದಾಗ ಯೋಗವು ನಮಗೆ ಸಮಗ್ರ, ಪೂರ್ಣವಾದ ಆರೋಗ್ಯವನ್ನು ಒದಗಿಸುತ್ತದೆ. ಯೋಗ ನಮಗೆ ಸಂತೋಷದಿಂದ ಕೂಡಿದ ಬದುಕನ್ನು ನೀಡುತ್ತದೆ. ನನಗೆ ಖಚಿತವಿದೆ –ಯೋಗವು ಜನಸಮೂಹದ ಆರೋಗ್ಯ ರಕ್ಷಣೆಯಲ್ಲಿ, ರೋಗ ತಡೆಯಲ್ಲಿ ಧನಾತ್ಮಕ ಪಾತ್ರವನ್ನು ವಹಿಸುತ್ತದೆ ಎಂಬುದಾಗಿ.
ಸ್ನೇಹಿತರೇ,
ಭಾರತವು ವಿಶ್ವ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಬಗ್ಗೆ ಪ್ರಸ್ತಾಪವಿಟ್ಟಾಗ ಅದರ ಹಿಂದಿದ್ದ ಉದ್ದೇಶ ಮತ್ತು ಸ್ಫೂರ್ತಿಯು ಈ ಯೋಗ ವಿಜ್ಞಾನವನ್ನು ಇಡೀ ಜಗತ್ತಿಗೆ ಲಭ್ಯವಾಗುವತೆ ಮಾಡಬೇಕು ಎಂಬುದಾಗಿತ್ತು. ಇಂದು ಭಾರತವು ಈ ನಿಟ್ಟಿನಲ್ಲಿ ವಿಶ್ವ ಸಂಸ್ಥೆ ಮತ್ತು ಡಬ್ಲ್ಯು.ಎಚ್.ಒ. ಜೊತೆಗೂಡಿ ಇನ್ನೊಂದು ಪ್ರಮುಖ ಹೆಜ್ಜೆಯನ್ನಿಟ್ಟಿದೆ.
ಈಗ ಜಗತ್ತಿಗೆ ಎಂ-ಯೋಗ ಆಪ್ ನ ಶಕ್ತಿ ಸಿಗಲಿದೆ. ಈ ಆಪ್ ನಲ್ಲಿ ಸಾಮಾನ್ಯ ಯೋಗ ಶಿಷ್ಟಾಚಾರವನ್ನು ಆಧರಿಸಿ ವಿಶ್ವದ ವಿವಿಧ ಭಾಷೆಗಳಲ್ಲಿ ಯೋಗ ತರಬೇತಿಯ ವಿಡಿಯೋಗಳು ಲಭ್ಯವಾಗುತ್ತವೆ. ಇದು ಆಧುನಿಕ ತಂತ್ರಜ್ಞಾನ ಮತ್ತು ಪ್ರಾಚೀನ ವಿಜ್ಞಾನ ಸಮ್ಮಿಳಿತಗೊಂಡಿರುವುದಕ್ಕೆ ಒಂದು ಶ್ರೇಷ್ಠ ಉದಾಹರಣೆ. ಎಂ-ಯೋಗ ಆಪ್ ಯೋಗವನ್ನು ಜಗತ್ತಿನಾದ್ಯಂತ ಪಸರಿಸುವಲ್ಲಿ ಮತ್ತು ಏಕ ವಿಶ್ವ ಏಕ ಆರೋಗ್ಯವನ್ನು ಯಶಸ್ಸುಗೊಳಿಸುವ ನಿಟ್ಟಿನ ಪ್ರಯತ್ನದಲ್ಲಿ ಬಲು ದೊಡ್ಡ ಪಾತ್ರ ವಹಿಸಲಿದೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ.
ಸ್ನೇಹಿತರೇ,
ಗೀತದಲ್ಲಿ ಹೇಳಲಾಗಿದೆ
तं विद्याद् दुःख संयोग-
वियोगं योग संज्ञितम्।
ಯೋಗ ಎಂದರೆ ನೋವಿನಿಂದ ಮುಕ್ತಿ. ನಾವು ಯೋಗ ಎಂಬ ಮಾನವತೆಯ ಈ ಪ್ರಯಾಣವನ್ನು ಮುಂದುವರಿಸಿಕೊಂಡು ಹೋಗಬೇಕು. ಪ್ರತಿಯೊಬ್ಬರನ್ನೂ ಅದರ ಜೊತೆಗೂಡಿ ಕರೆದೊಯ್ಯಬೇಕು. ಸ್ಥಳ, ಪರಿಸ್ಥಿತಿ, ವಯಸ್ಸು ಯಾವುದೇ ಇರಲಿ, ಯೋಗವು ಎಲ್ಲರಿಗೂ ಪರಿಹಾರಗಳನ್ನು ಒದಗಿಸುವ ಶಕ್ತಿಯನ್ನು ಹೊಂದಿದೆ. ಇಂದು ಜಗತ್ತಿನಲ್ಲಿ ಯೋಗದ ಬಗ್ಗೆ ಆಸಕ್ತಿ ಇರುವ, ಕುತೂಹಲ ಇರುವ ಜನರ ಸಂಖ್ಯೆ ವೃದ್ಧಿಸುತ್ತಿದೆ. ದೇಶದಲ್ಲಿ ಮತ್ತು ಹೊರದೇಶಗಳಲ್ಲಿ ಯೋಗ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಯೋಗದ ಮೂಲ ತತ್ವಜ್ಞಾನ ಪ್ರತಿಯೊಬ್ಬರನ್ನೂ ತಲುಪಬೇಕು. ಆದರೆ ಅದರ ನೆಲೆಗಟ್ಟು ಮತ್ತು ತಿರುಳು ಶಿಥಿಲಗೊಳ್ಳಬಾರದು. ಮತ್ತು ಈ ಕೆಲಸವನ್ನು ಯೋಗದ ಜೊತೆ ಸಂಬಂಧ ಹೊಂದಿರುವ ಜನರು ಮಾಡಬೇಕು. ಯೋಗ ಶಿಕ್ಷಕರು, ಯೋಗ ಬೋಧಕರು ಜೊತೆಗೂಡಿ ಇದನ್ನು ಮಾಡಬೇಕು. ನಾವು ಯೋಗದ ಪ್ರತಿಜ್ಞೆ ಮಾಡಬೇಕು ಮತ್ತು ನಮ್ಮ ಪ್ರೀತಿ ಪಾತ್ರರನ್ನು ಇದರ ಜೊತೆ ಜೋಡಿಸಬೇಕು. “ಯೋಗದಿಂದ ಸಹಕಾರ” ಎಂಬ ಮಂತ್ರವು ನಮಗೆ ನವ ಭವಿಷ್ಯದ ಹಾದಿಯನ್ನು ತೋರಿಸಲಿದೆ ಮತ್ತು ಮಾನವತೆಯನ್ನು ಸಶಕ್ತಗೊಳಿಸಲಿದೆ.
ನಾನು ನಿಮಗೆ ಮತ್ತು ಇಡೀಯ ಮಾನವ ಕುಲಕ್ಕೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳನ್ನು ಹಾರೈಸುತ್ತೇನೆ.
ಬಹಳ ಬಹಳ ಧನ್ಯವಾದಗಳು.
ಘೋಷಣೆ: ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ ಇದು. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
***
(Release ID: 1729253)
Visitor Counter : 333
Read this release in:
Assamese
,
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam