ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
7ನೇ ಅಂತಾರಾಷ್ಟ್ರೀಯ ಯೋಗ ಸ್ಮರಣಾರ್ಥ ಇಂಡಿಯಾ ಪೋಸ್ಟ್|ನಿಂದ ಬಿಡುಗಡೆ ಆಗಲಿದೆ ‘ವಿಶೇಷ ಲಕೋಟೆ’
‘ಯೋಗದ ಜತೆಗಿರಿ, ಮನೆಯಲ್ಲೇ ಇರಿ’: ದೆಹಲಿ ಅಂಚೆ ವೃತ್ತದಿಂದ ವಿಶೇಷ ಸಂದೇಶ
Posted On:
18 JUN 2021 5:29PM by PIB Bengaluru
2021 ಜೂನ್ 21ರಂದು ವಿಶ್ವ ಯೋಗ ದಿನಾಚರಣೆಯ ಸಾರವನ್ನು ಸೆರೆ ಹಿಡಿಯಲು ಇಂಡಿಯಾ ಪೋಸ್ಟ್ 'ವಿಶೇಷ ಲಕೋಟೆ'ಯನ್ನು ಹೊರತರುತ್ತಿದೆ. 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ-2021ರ ಸ್ಮರಣಾರ್ಥ ಅಂಚೆ ಇಲಾಖೆಯು ಈ ವಿಶಿಷ್ಟ (ಅನನ್ಯ) ಉಪಕ್ರಮವನ್ನು ಕೈಗೊಳ್ಳುತ್ತಿದೆ.
ಅಂಚೆ ಚೀಟಿ ಸಂಗ್ರಹದ ಸ್ಮರಣಿಕೆಗೆ ಯೋಗ ಮತ್ತು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಳು ಕಾಲಾನುಕ್ರಮದಲ್ಲಿ ಜನಪ್ರಿಯ ವಿಷಯಗಳಾಗಿವೆ. 2015ರ ಅಂತಾರಾಷ್ಟ್ರೀಯ ಯೋಗ ದಿನದ ಸ್ಮರಣಾರ್ಥ ಅಂಚೆ ಇಲಾಖೆಯು 2 ಅಂಚೆ ಚೀಟಿಗಳು ಮತ್ತು ಚಿತ್ರಾಲಂಕೃತ ಹಸ್ತಪ್ರತಿಯ ಸ್ಮರಣಿಕೆಗಳನ್ನು ಹೊರತಂದಿತ್ತು. 2016ರಲ್ಲಿ ನಡೆದ 2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೂರ್ಯ ನಮಸ್ಕಾರದ ಚಿತ್ರವುಳ್ಳ 2 ಅಂಚೆ ಚೀಟಿಗಳನ್ನು ಅನಾವರಣ ಮಾಡಿದ್ದರು. 2017ರ ಮೂರನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವಿಶ್ವಸಂಸ್ಥೆಯ ಅಂಚೆ ಆಡಳಿತ(ಯುಎನ್|ಪಿಎ)ವು ನ್ಯೂಯಾರ್ಕ್|ನಲ್ಲಿ 10 ಯೋಗಾಸನಗಳ ಚಿತ್ರವಿರುವ ಅಂಚೆ ಚೀಟಿಗಳನ್ನು ಹೊರತಂದಿತ್ತು.
2021 ಜೂನ್ 21ರಂದು ನಡೆಯಲಿರುವ 7ನೇ ಅಂತಾರಾಷ್ಟ್ರೀಯ ಯೋಗ ದಿನದ ಸ್ಮರಣಾರ್ಥ, ದೆಹಲಿಯ ಅಂಚೆ ವೃತ್ತವು ಕೆಳಗೆ ನಮೂದಿಸಿರುವ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ:
- ದೆಹಲಿಯಲ್ಲಿರುವ ಎಲ್ಲಾ ಅಂಚೆ ಕಚೇರಿಗಳಲ್ಲಿ 17.06.2021ರಿಂದ ಬುಕಿಂಗ್ ಮಾಡುತ್ತಿರುವ ಅಂಚೆ ಪತ್ರಗಳಿಗೆ ‘ಯೋಗದ ಜತೆಗಿರಿ, ಮನೆಯಲ್ಲೇ ಇರಿ’ ಎಂಬ ವಿಶೇಷ ಸಂದೇಶವನ್ನು ಅಂಟಿಸಿ, ಬಟವಾಡೆ ಮಾಡಲಾಗುತ್ತಿದೆ.
- ದೆಹಲಿಯ ಪ್ರಮುಖ 60 ಅಂಚೆ ಕಚೇರಿಗಳಿಗೆ ಭೇಟಿ ನೀಡುವ ಗ್ರಾಹಕರಿಗೆ ಯೋಗ ಉತ್ತೇಜಿಸಲು ವೀಡಿಯೊ ಹಾಕಿ ಅರಿವು ಮೂಡಿಸಲಾಗುತ್ತಿದೆ.
- ದೆಹಲಿ ಅಂಚೆ ವೃತ್ತದಲ್ಲಿ 17.06.201ರಂದು ಯೋಗ ಕುರಿತು ವರ್ಚುವಲ್ ಉಪನ್ಯಾಸ ಮತ್ತು ಪ್ರದರ್ಶನ ಕಲಾಪಗಳನ್ನು ಆಯೋಜಿಸಲಾಗಿತ್ತು. ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಚೇತರಿಕೆ ನಂತರದ ಸಮಕಾಲೀನ ಪರಿಸ್ಥಿತಿಗೆ ಒತ್ತು ನೀಡಿ, ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ದೆಹಲಿ ಅಂಚೆ ವೃತ್ತದ ಅಧಿಕಾರಿಗಳು ಮತ್ತು ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
- ದೆಹಲಿ ಅಂಚೆ ವೃತ್ತದ ವಿವಿಧ ಆಡಳಿತ ಮತ್ತು ಕಾರ್ಯಾಚರಣೆ ಕಚೇರಿಗಳಲ್ಲಿ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಚಾರಣೆ ಅಂಗವಾಗಿ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
- ದೆಹಲಿ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಅವರು ದೆಹಲಿಯ ಗೋಲ್ಡಖಾನದಲ್ಲಿರುವ ಪ್ರಧಾನ ಅಂಚೆ ಕಚೇರಿ(ಜಿಪಿಒ)ಯಲ್ಲಿ ಜೂನ್ 21ರ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಿದ್ದಾರೆ.
***
(Release ID: 1728357)
Visitor Counter : 198