ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್‌-19 ಮುಂಚೂಣಿ ಕಾರ್ಯಕರ್ತರಿಗಾಗಿ “ವೈಯಕ್ತೀಕರಿಸಿದ ಕ್ರಾಶ್‌ ಕೋರ್ಸ್‌ʼʼ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ


ಈ ಅಭಿಯಾನದ ಅಡಿಯಲ್ಲಿ 2-3 ತಿಂಗಳಲ್ಲಿ ಒಂದು ಲಕ್ಷ ಯುವಜನತೆಗೆ ತರಬೇತಿ ನೀಡಲಾಗುವುದು

26 ರಾಜ್ಯಗಳ, 111 ಕೇಂದ್ರಗಳಲ್ಲಿ 6 ವೈಯಕ್ತೀಕರಿಸಿದ ಕೋರ್ಸ್‌ಗಳನ್ನು ಪ್ರಾರಂಭಿಸಲಾಯಿತು.

ವೈರಾಣು ಇನ್ನೂ ನಮ್ಮ ನಡುವೆಯೇ ಇದ್ದು, ಅದು ರೂಪಾಂತರಗೊಳ್ಳುವ ಸಾಧ್ಯತೆಯಿದೆ, ಹೀಗಾಗಿ ನಾವು ಸನ್ನದ್ಧವಾಗಿರಬೇಕು: ಪ್ರಧಾನಿ

ಕೋವಿಡ್‌ ಸಮಯವು ಕೌಶಲ್ಯ, ಮರು-ಕೌಶಲ್ಯ ಮತ್ತು ಕೌಶಲ್ಯ ಸುಧಾರಣೆ ಮಹತ್ವವನ್ನು ಸಾಬೀತುಪಡಿಸಿದೆ

ಸಾಂಕ್ರಾಮಿಕವು ವಿಶ್ವದ ಪ್ರತಿಯೊಂದು ದೇಶ, ಸಂಸ್ಥೆ, ಸಮಾಜ, ಕುಟುಂಬ ಮತ್ತು ವ್ಯಕ್ತಿಯ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಿದೆ: ಪ್ರಧಾನಿ

ಜೂನ್‌ 21ರಿಂದ 45 ವರ್ಷದ ಒಳಗಿನ ಜನರೂ ಸಹ ಲಸಿಕೆ ವಿಚಾರದಲ್ಲಿ 45 ವರ್ಷ ಮೇಲ್ಪಟ್ಟವರು ಪಡೆಯುತ್ತಿರುವಂತಹ ಸಮಾನ ಆದ್ಯತೆ ಪಡೆಯಲಿದ್ದಾರೆ

ಪ್ರಧಾನಿ ಅವರು ಹಳ್ಳಿಗಳ ಆಸ್ಪತ್ರೆಗಳಲ್ಲಿ ನಿಯೋಜಿಸಲ್ಪಟ್ಟಿರುವ ಆಶಾ ಕಾರ್ಯಕರ್ತೆಯರು, ಸೂಲಗಿತ್ತಿಯರು (ಎಎನ್‌ಎಂ), ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರನ್ನು ಶ್ಲಾಘಿಸಿದರು

Posted On: 18 JUN 2021 12:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಕೋವಿಡ್-19 ಮುಂಚೂಣಿ ಕಾರ್ಮಿಕರಿಗಾಗಿ `ವೈಯಕ್ತೀಕರಿಸಿದ ಕ್ರ್ಯಾಶ್ ಕೋರ್ಸ್’ ಕಾರ್ಯಕ್ರಮಕ್ಕೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಈ ತರಬೇತಿ ಕಾರ್ಯಕ್ರಮವನ್ನು 26 ರಾಜ್ಯಗಳಲ್ಲಿರುವ 111 ತರಬೇತಿ ಕೇಂದ್ರಗಳಲ್ಲಿ ನಡೆಸಲಾಗುವುದು. ಈ ಉಪಕ್ರಮದಲ್ಲಿ ಸುಮಾರು ಒಂದು ಲಕ್ಷ ಮುಂಚೂಣಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು. ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ. ಮಹೇಂದ್ರ ನಾಥ್ ಪಾಂಡೆ ಸೇರಿದಂತೆ ಅನೇಕ ಕೇಂದ್ರ ಸಚಿವರು, ರಾಜ್ಯಗಳ ಸಚಿವರು, ತಜ್ಞರು ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು, ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದು ಕೊರೊನಾ ವಿರುದ್ಧದ ಹೋರಾಟದಲ್ಲಿ ನಮ್ಮ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು. ವೈರಾಣು ಇನ್ನೂ ನಮ್ಮ ನಡುವೆಯೇ ಇದ್ದು, ಅದು ರೂಪಾಂತರಗೊಳ್ಳುವ ಸಾಧ್ಯತಯಿದೆ ಎಂದು ಅವರು ಎಚ್ಚರಿಸಿದರು. ವೈರಾಣು ನಮ್ಮ ಮುಂದೆ ಒಡ್ಡಬಹುದಾದ ಸವಾಲುಗಳು ಎಂಥವು ಎಂಬುದನ್ನು ಎರಡನೇ ಅಲೆಯು ನಿರೂಪಿಸಿದೆ. ಈ ಸವಾಲುಗಳನ್ನು ಎದುರಿಸಲು ದೇಶ ಸನ್ನದ್ಧವಾಗಿರಬೇಕು, ಈ ನಿಟ್ಟಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮುಂಚೂಣಿ ಕಾರ್ಯಕರ್ತರನ್ನು ತರಬೇತುಗೊಳಿಸುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು.

ಕೋವಿಡ್‌ ಸಾಂಕ್ರಾಮಿಕವು ವಿಶ್ವದ ಪ್ರತಿಯೊಂದು ದೇಶ, ಸಂಸ್ಥೆ, ಸಮಾಜ, ಕುಟುಂಬ ಮತ್ತು ವ್ಯಕ್ತಿಯ ಸಾಮರ್ಥ್ಯವನ್ನು ಪರೀಕ್ಷಿಸಿದೆ ಎಂದು ಪ್ರಧಾನಿ ನೆನಪಿಸಿದರು. ಇದೇ ವೇಳೆ, ವಿಜ್ಞಾನ, ಸರಕಾರ, ಸಮಾಜ, ಸಂಸ್ಥೆ ಅಥವಾ ವ್ಯಕ್ತಿಗಳಾಗಿ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಇದು ನಮಗೆ ಎಚ್ಚರಿಕೆ ಗಂಟೆಯಾಗಿದೆ ಎಂದರು. ಭಾರತವು ಈ ಸವಾಲನ್ನು ಸ್ವೀಕರಿಸಿತು ಮತ್ತು ಪ್ರಸ್ತುತ ದೇಶದಲ್ಲಿರುವ ಪಿಪಿಇ ಕಿಟ್‌ ಉತ್ಪಾದನೆ, ಟೆಸ್ಟಿಂಗ್‌ ಮತ್ತಿತರ ಕೋವಿಡ್‌ ಆರೈಕೆ ಹಾಗೂ ಚಿಕಿತ್ಸೆ ಸಂಬಂಧಿತ ವೈದ್ಯಕೀಯ ಮೂಲಸೌಕರ್ಯದ ಸ್ಥಿತಿಗತಿಯು ನಮ್ಮ ಪ್ರಯತ್ನಗಳ ಸಾಫಲ್ಯತೆಗೆ ಸಾಕ್ಷಿಯಾಗಿದೆ ಎಂದರು. ದೂರದ ಆಸ್ಪತ್ರೆಗಳಿಗೂ ವೆಂಟಿಲೇಟರ್ ಮತ್ತು ಆಮ್ಲಜನಕ ಸಾಂದ್ರಕವನ್ನು ಒದಗಿಸಲಾಗಿದೆ. ಸಮರೋಪಾದಿಯಲ್ಲಿ 1500ಕ್ಕೂ ಹೆಚ್ಚು ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಈ ಎಲ್ಲಾ ಪ್ರಯತ್ನಗಳ ನಡುವೆ, ನುರಿತ ಮಾನವ ಶಕ್ತಿಯ ಪಾತ್ರವೂ ನಿರ್ಣಾಯಕವಾಗಿದೆ. ಇದಕ್ಕಾಗಿ ಮತ್ತು ಕೊರೊನಾ ಯೋಧರ ಪ್ರಸ್ತುತ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಲಕ್ಷ ಯುವಕರಿಗೆ ತರಬೇತಿ ನೀಡಲಾಗುತ್ತಿದೆ. ಈ ತರಬೇತಿ ಎರಡು-ಮೂರು ತಿಂಗಳಲ್ಲಿ ಮುಗಿಯಬೇಕು ಎಂದು ಪ್ರಧಾನಿ ಹೇಳಿದರು.

ಇಂದು ಆರಂಭಿಸಲಾದ ಈ ಆರು ಕೋರ್ಸ್‌ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬೇಡಿಕೆಗಳ ಪ್ರಕಾರ ದೇಶದ ಉನ್ನತ ತಜ್ಞರು ವಿನ್ಯಾಸಗೊಳಿಸಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಮನೆ ಆರೈಕೆ, ಪ್ರಾಥಮಿಕ ಆರೈಕೆ, ಸುಧಾರಿತ ಆರೈಕೆ, ತುರ್ತು ಆರೈಕೆ, ಮಾದರಿ ಸಂಗ್ರಹ, ಮತ್ತು ವೈದ್ಯಕೀಯ ಪರಿಕರ ನೆರವು ಎಂಬ ಆರು ವೈಯಕ್ತೀಕರಿಸಿದ ಉದ್ಯೋಗ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೊರೊನಾ ಯೋಧರಿಗೆ ತರಬೇತಿ ನೀಡಲಾಗುವುದು. ಇದು ಹೊಸ ಕೌಶಲ್ಯ ಕಲಿಕೆ ಮತ್ತು ಈಗಾಗಲೇ ಈ ರೀತಿಯ ಕೆಲಸದಲ್ಲಿ ಕೊಂಚ ತರಬೇತಿ ಹೊಂದಿರುವವರಿಗೆ ಕೌಶಲ್ಯ ಸುಧಾರಣೆಯನ್ನು ಇದು ಒಳಗೊಂಡಿರುತ್ತದೆ. ಈ ಅಭಿಯಾನವು ಆರೋಗ್ಯ ವಲಯದ ಮುಂಚೂಣಿ ಕಾರ್ಯಕರ್ತರಿಗೆ ಹೊಸ ಶಕ್ತಿಯನ್ನು ನೀಡುತ್ತದೆ ಮತ್ತು ನಮ್ಮ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದರು.

ಕರೋನಾ ಅವಧಿಯು ಕೌಶಲ್ಯ, ಮರು ಕೌಶಲ್ಯ ಮತ್ತು ಕೌಶಲ್ಯ ಸುಧಾರಣೆ ಎಷ್ಟು ಮುಖ್ಯ ಎಂಬುದನ್ನು ಸಾಬೀತುಪಡಿಸಿದೆ. ದೇಶದಲ್ಲಿ ಮೊದಲ ಬಾರಿಗೆ ಪ್ರತ್ಯೇಕವಾಗಿ ʻಸ್ಕಿಲ್ ಇಂಡಿಯಾ ಅಭಿಯಾನʼವನ್ನು ಅನ್ನು ಪ್ರಾರಂಭಿಸಲಾಯಿತು, ಕೌಶಲ್ಯ ಅಭಿವೃದ್ಧಿ ಸಚಿವಾಲಯವನ್ನು ಸ್ಥಾಪಿಸಲಾಯಿತು ಮತ್ತು ದೇಶಾದ್ಯಂತ ಪ್ರಧಾನ ಮಂತ್ರಿಯವರ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ತೆರೆಯಲಾಯಿತು ಎಂದು ಪ್ರಧಾನಿ ಹೇಳಿದರು. ಇಂದು ʻಸ್ಕಿಲ್ ಇಂಡಿಯಾʼ ಅಭಿಯಾನವು ದೇಶದ ಲಕ್ಷಾಂತರ ಯುವಕರಿಗೆ ಇಂದಿನ ಅಗತ್ಯಗಳಿಗೆ ಅನುಗುಣವಾಗಿ ತರಬೇತಿ ಪಡೆಯಲು ಸಹಾಯ ಮಾಡುತ್ತಿದೆ. ಕಳೆದ ವರ್ಷದಿಂದ ಕೌಶಲ್ಯ ಅಭಿವೃದ್ಧಿ ಸಚಿವಾಲಯವು ಸಾಂಕ್ರಾಮಿಕದ ನಡುವೆಯೂ ದೇಶಾದ್ಯಂತ ಲಕ್ಷಾಂತರ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಿದೆ ಎಂದು ಪ್ರಧಾನಿ ಹೇಳಿದರು.

ನಮ್ಮ ಜನಸಂಖ್ಯೆಯ ಗಾತ್ರವನ್ನು ಗಮನಿಸಿದರೆ, ಆರೋಗ್ಯ ಕ್ಷೇತ್ರದಲ್ಲಿ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಪ್ರಧಾನಿ ಹೇಳಿದರು. ಕಳೆದ 7 ವರ್ಷಗಳಲ್ಲಿ ಹೊಸ ಏಮ್ಸ್, ಹೊಸ ವೈದ್ಯಕೀಯ ಕಾಲೇಜುಗಳು ಮತ್ತು ಹೊಸ ನರ್ಸಿಂಗ್ ಕಾಲೇಜುಗಳನ್ನು ಪ್ರಾರಂಭಿಸಲು ಸರಕಾರ ಗುರಿ ನಿರ್ದೇಶಿತ ವಿಧಾನದಲ್ಲಿ ಕೆಲಸ ಮಾಡಿದೆ. ಅದೇ ರೀತಿ, ವೈದ್ಯಕೀಯ ಶಿಕ್ಷಣ ಮತ್ತು ಸಂಬಂಧಿತ ಸಂಸ್ಥೆಗಳಲ್ಲಿ ಸುಧಾರಣೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಆರೋಗ್ಯ ವೃತ್ತಿಪರರನ್ನು ಸನ್ನದ್ಧಗೊಳೀಸುವ ನಿಟ್ಟಿನಲ್ಲಿ ಈಗ ನಡೆಯುತ್ತಿರುವ ಕೆಲಸದ ಗಂಭೀರತೆ ಮತ್ತು ವೇಗವು ಅಭೂತಪೂರ್ವವಾದುದು ಎಂದು ಪ್ರಧಾನಿ ಹೇಳಿದರು.

ಹಳ್ಳಿಗಳಲ್ಲಿನ ಆಸ್ಪತ್ರೆಗಳಲ್ಲಿ ನಿಯೋಜಿಸಲಾದ ಆಶಾ ಕಾರ್ಯಕರ್ತೆಯರು, ಸೂಲಗಿತ್ತಿಯರು (ಎಂಎನ್‌ಎಂ), ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತರಂತಹ ವೈದ್ಯಕೀಯ ವೃತ್ತಿಪರರು ನಮ್ಮ ಆರೋಗ್ಯ ಕ್ಷೇತ್ರದ ಬಲವಾದ ಆಧಾರಸ್ತಂಭಗಳಲ್ಲಿ ಒಂದೆನಿಸಿದ್ದಾರೆ. ಆದರೆ, ಆಗಾಗ್ಗೆ ಅವರು ಚರ್ಚೆಯಿಂದ ಹೊರಗುಳಿಯುತ್ತಾರೆ ಎಂದು ಪ್ರಧಾನಿ ಹೇಳಿದರು. ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಹೆಗಲು ನೀಡುವ ಮೂಲಕ ಸೋಂಕನ್ನು ತಡೆಗಟ್ಟುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದ ಪ್ರಧಾನಿ, ಪ್ರತಿಯೊಬ್ಬ ದೇಶವಾಸಿಯ ಸುರಕ್ಷತೆಗಾಗಿ ಎಲ್ಲ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಆರೋಗ್ಯ ಕಾರ್ಯಕರ್ತರು ಮಾಡಿದ ಕಾರ್ಯವನ್ನು ಶ್ಲಾಘಿಸಿದರು. ದೂರದ ಪ್ರದೇಶಗಳಲ್ಲಿ ಮತ್ತು ಗುಡ್ಡಗಾಡು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಅವರ ಪಾತ್ರ ದೊಡ್ಡದೆಂದು ಬಣ್ಣಿಸಿದರು. 

ಜೂನ್ 21ರಿಂದ ಪ್ರಾರಂಭವಾಗಲಿರುವ ಲಸಿಕಾ ಅಭಿಯಾನಕ್ಕೆ ಸಂಬಂಧಿಸಿದಂತೆ ಅನೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಪ್ರಧಾನಿ ಹೇಳಿದರು. 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಿಗೂ ಜೂನ್ 21ರಿಂದ ಲಸಿಕೆ ವಿಚಾರದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಸಿಗುವ ಪ್ರಾಧಾನ್ಯತೆಯೇ ದೊರೆಯಲಿದೆ. ಕೊರೊನಾ ಶಿಷ್ಟಾಚಾರದ ಪಾಲನೆಯೊಂದಿಗೆ ಪ್ರತಿಯೊಬ್ಬ ನಾಗರಿಕನಿಗೂ ಉಚಿತ ಲಸಿಕೆಗಳನ್ನು ನೀಡಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದರು.

ತರಬೇತಿ ಪಡೆಯಲಿರುವವರಿಗೆ ಶುಭ ಹಾರೈಸಿದ ಪ್ರಧಾನಿ,  ಕಲಿಕಾರ್ಥಿಗಳ ಹೊಸ ಕೌಶಲ್ಯಗಳು  ದೇಶವಾಸಿಗಳ ಜೀವ ಉಳಿಸುವಲ್ಲಿ ಬಳಕೆಯಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

 

***



(Release ID: 1728178) Visitor Counter : 318