ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಖಾದಿ ಮತ್ತು ಗ್ರಾಮೋದ್ಯೋಗ  ಆಯೋಗ [ಕೆ.ವಿ.ಐ.ಸಿ] ದಿಂದ 2020-21 ರಲ್ಲಿ ಕೋವಿಡ್ ಸಾಂಕ್ರಾಮಿಕದ ನಡುವೆಯೂ ಅತಿ ಹೆಚ್ಚು ವಹಿವಾಟು ದಾಖಲು

Posted On: 17 JUN 2021 1:53PM by PIB Bengaluru

ಕೋವಿಡ್-19 ಸಾಂಕ್ರಾಮಿಕದಿಂದ ಸಂಪೂರ್ಣವಾಗಿ ನಾಶವಾದ ಒಂದು ವರ್ಷದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ [ಕೆ.ವಿ.ಐ.ಸಿ] ಅತಿ ಹೆಚ್ಚು ವಹಿವಾಟು ದಾಖಲಿಸಿದೆ. ಕೆ.ವಿ.ಐ.ಸಿ 2020-21 ರಲ್ಲಿ ಒಟ್ಟು ವಾರ್ಷಿಕ ವಹಿವಾಟು 95,741.74 ಕೋಟಿ ರೂ ನಷ್ಟಾಗಿದ್ದು, ಇದಕ್ಕೂ ಹಿಂದಿನ ವರ್ಷ 2019-20 ರಲ್ಲಿ 88,887 ಕೋಟಿ ರೂ ವಹಿವಾಟು ನಡೆಸಿ ಶೇ 7.71 ರಷ್ಟು ಏರಿಕೆ ದಾಖಲಿಸಿದೆ.

ಕಳೆದ ಮಾರ್ಚ್ 25 ರಿಂದ ರಾಷ್ಟ್ರವ್ಯಾಪಿ ಮೂರು ತಿಂಗಳ ಕಾಲ ಲಾಕ್ ಡೌನ್ ಘೋಷಿಸಿದ ಕಾರಣ ಉತ್ಪಾದನೆ ಸ್ಥಗಿತಗೊಂಡಿತ್ತು, ಇದರ  ಹೊರತಾಗಿಯೂ 2020-21 ರಲ್ಲಿ ಕೆ.ವಿ.ಐ.ಸಿ ಯ ಕಾರ್ಯಕ್ಷಮತೆ ಬಹಳ ಮಹತ್ವದ್ದಾಗಿದೆ. ಈ ಅವಧಿಯಲ್ಲಿ ಎಲ್ಲಾ ಖಾದಿ ಉತ್ಪಾದನಾ ಘಟಕಗಳು ಮತ್ತು ಮಾರಾಟ ಮಳಿಗೆಗಳು ಮುಚ್ಚಿದ್ದ ಕಾರಣ ಉತ್ಪಾದನೆ ಮತ್ತು ಮಾರಾಟದ ಮೇಲೆ ತೀವ್ರ ರೀತಿಯಲ್ಲಿ ಪರಿಣಾಮ ಬೀರಿತ್ತು. ಇಷ್ಟಾದರೂ  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ “ಆತ್ಮನಿರ್ಭರ್ ಭಾರತ್” ಮತ್ತು “ವೋಕಲ್ ಫಾರ್ ಲೋಕಲ್“ ಕರೆಯಿಂದಾಗಿ ಕೆವಿಐಸಿ ವೇಗವಾಗಿ ಪುಟಿದೆದ್ದಿತು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರ ವಿನೂತನ ಮಾರುಕಟ್ಟೆ ಉಪಾಯಗಳು ಕೆ.ವಿ.ಐ.ಸಿಯ ಉತ್ಪನ್ನಗಳ ಶ್ರೇಣಿಯನ್ನು ಮತ್ತಷ್ಟು ವೈವಿಧ್ಯಗೊಳಿಸಿ, ಸ್ಥಳೀಯ ಉತ್ಪಾದನೆ ಹೆಚ್ಚಿಸಿವೆ ಮತ್ತು ಖಾದಿಯ ನಿರಂತರ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿವೆ.   

2015-16 ರಲ್ಲಿ ಖಾದಿ ಮತ್ತು  ಗ್ರಾಮೋದ್ಯೋಗ ವಲಯದ ಒಟ್ಟಾರೆ ಉತ್ಪಾದನೆ 2020-21 ರ ವೇಳೆಗೆ ಶೇ 101 ರಷ್ಟು ಬೆಳವಣಿಗೆ ದಾಖಲಿಸಿದ್ದು, ಒಟ್ಟಾರೆ ಮಾರಾಟದ ಬೆಳವಣಿಗೆ ಶೇ 128.66 ರಷ್ಟು ಏರಿಕೆ ಕಂಡಿದೆ.  ಖಾದಿ ಇ ಪೋರ್ಟಲ್ ಆರಂಭಿಸಿ, ಖಾದಿ ಮಾಸ್ಕ್ ಗಳು, ಖಾದಿ ಪಾದರಕ್ಷೆ, ಖಾದಿ ಪ್ರಾಕೃತಿಕ ಬಣ್ಣ, ಖಾದಿ ಕರ ಶುಚಿಗೊಳಿಸುವ ಸ್ಯಾನಿಟೈಸರ್ ಗಳ ಮಾರಾಟದಂತಹ ವಿನೂತನ ಕ್ರಮಗಳನ್ನು ಕೈಗೊಳ್ಳಲಾಗಿದೆ. ದಾಖಲೆ ಪ್ರಮಾಣದಲ್ಲಿ ಹೊಸದಾಗಿ ಪಿ.ಎಂ.ಇ.ಜಿ.ಪಿ ಘಟಕಗಳ ಸ್ಥಾಪನೆ, ಹೊಸದಾಗಿ ಎಸ್.ಎಫ್,ಯು.ಆರ್.ಟಿ.ಐ ಕ್ಲಸ್ಟರ್ ಗಳು, ಸರ್ಕಾರದ ಸ್ವದೇಶಿ ಕ್ರಮಗಳು  ಮತ್ತು ಅರೆಸೇನಾ ಪಡೆಗಳೊಂದಿಗೆ ಕೆ.ವಿ.ಐ.ಸಿ.ಯ ಐತಿಹಾಸಿಕ ಒಪ್ಪಂದಗಳು ಸಾಂಕ್ರಾಮಿಕದ ಸಂದರ್ಭದಲ್ಲಿ ಗ್ರಾಮೋದ್ಯಮ ಕ್ಷೇತ್ರದ ವಹಿವಾಟು ಹೆಚ್ಚಿಸಿವೆ. 2019 – 20 ರಲ್ಲಿ  65,393.40 ಕೋಟಿ ರೂಪಾಯಿ ಮೊತ್ತದ ಉತ್ಪಾದನೆಯಾಗಿದ್ದು, 2020-21 ರ ವೇಳೆಗೆ ಗ್ರಾಮ ಕೈಗಾರಿಕಾ ವಲಯದ ಉತ್ಪಾದನೆ 70,329.67 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದೇ ರೀತಿ 2020-21 ನೇ ಸಾಲಿನಲ್ಲಿ ಗ್ರಾಮ ಕೈಗಾರಿಕೆಯ ಉತ್ಪಾದನೆ 92,214.03 ಕೋಟಿ ರೂ ನಷ್ಟಿತ್ತು. ಇದಕ್ಕೂ ಹಿಂದಿನ 2019-20 ರಲ್ಲಿ 84,675.29 ಕೋಟಿ ರೂ ವಹಿವಾಟು ನಡೆದಿತ್ತು. ಆದರೆ ಸಾಂಕ್ರಾಮಿಕ ಸಂದರ್ಭದಲ್ಲಿ ದೇಶಾದ್ಯಂತ ನೂಲುವ ಮತ್ತು ನೇಯ್ಗೆ ಚಟುವಟಿಕೆಗಳಿಗೆ ದೊಡ್ಡ ಹೊಡೆತ ಬಿದ್ದಿದ್ದರಿಂದ ಖಾದಿ ವಲಯದಲ್ಲಿ ಉತ್ಪಾದನೆ ಮತ್ತು ಮಾರಾಟ ಸ್ವಲ್ಪ ಮಟ್ಟಿಗೆ ಕುಂಠಿತಗೊಂಡಿತ್ತು.  2020-21 ರಲ್ಲಿ ಒಟ್ಟಾರೆ ಖಾದಿ ವಲಯದಿಂದಲೇ ಉತ್ಪಾದನೆ 1904.49 ಕೋಟಿ ರೂ ನಷ್ಟಿತ್ತು. ಇದಕ್ಕೂ ಹಿಂದಿನ ವರ್ಷದಲ್ಲಿ 2019-20 ರಲ್ಲಿ 2292.44 ಕೋಟಿ ರೂ ನಷ್ಟಿತ್ತು. ಒಟ್ಟಾರೆ 3527.71 ಕೋಟಿ ರೂ ನಷ್ಟು ಖಾದಿ ಉತ್ಪನ್ನಗಳು ಮಾರಾಟವಾಗಿದ್ದು, ಇದಕ್ಕೂ ಹಿಂದಿನ ವರ್ಷ 4211.26 ರೂ ನಷ್ಟಿತ್ತು.

ಕೆ.ವಿ.ಐ.ಸಿ ಅಧ್ಯಕ್ಷ ಶ್ರೀ ವಿನಯ್ ಕುಮಾರ್ ಸೆಕ್ಸೇನಾ ಮಾತನಾಡಿ, ಸಾಂಕ್ರಾಮಿಕ ಸಂದರ್ಭದಲ್ಲಿ “ಆತ್ಮ ನಿರ್ಭರ್ ಭಾರತ್“ ಮತ್ತು “ವೋಕಲ್ ಫಾರ್ ಲೋಕಲ್“ ಕರೆಗೆ ಜನತೆ ಉತ್ಸಾಹದಿಂದ ಪ್ರತಿಕ್ರಿಯೆ ನೀಡಿದರು. ಈ ಅವಧಿಯಲ್ಲಿ ಕುಶಲಕರ್ಮಿಗಳು ಮತ್ತು ನಿರುದ್ಯೋಗಿ ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿಸುವುದರತ್ತ ಕೆ.ವಿ.ಐ.ಸಿ ಗಮನ ಕೇಂದ್ರೀಕರಿಸಿತ್ತು. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹೆಚ್ಚಿನ ಸಂಖ್ಯೆಯ ಯುವ ಸಮೂಹ ಪಿ.ಎಂ.ಇ.ಜಿ.ಪಿ ಅಡಿ ಸ್ವ ಉದ್ಯೋಗ ಮತ್ತು ಉತ್ಪಾದನಾ ಚಟುವಟಿಕೆಗಳನ್ನು ಕೈಗೊಂಡಿದ್ದರು. ಇದು ಗ್ರಾಮ ಉದ್ಯಮ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಿಸಿತು. ಇದೇ ಕಾಲಕ್ಕೆ ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವಂತೆ ಪ್ರಧಾನಮಂತ್ರಿ ಅವರು ನೀಡಿದ ಕರೆಯ ಪರಿಣಾಮ ಖಾದಿ ಮತ್ತು ಗ್ರಾಮ ಕೈಗಾರಿಕೆಗಳ ಉತ್ಪನ್ನಗಳ ಮಾರಾಟ ಗಣನೀಯವಾಗಿ ಹೆಚ್ಚಳವಾಯಿತು ಎಂದು ಹೇಳಿದರು.

***



(Release ID: 1727920) Visitor Counter : 282