ನೀತಿ ಆಯೋಗ
ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮಕ್ಕೆ ಯುಎನ್‌ಡಿಪಿ ವರದಿ ಶ್ಲಾಘನೆ, ವಿಶ್ವದ ಇತರ ಭಾಗಗಳಲ್ಲೂ ಅನುಷ್ಠಾನಕ್ಕೆ ಶಿಫಾರಸು
Posted On:
11 JUN 2021 7:21PM by PIB Bengaluru
ಇಂದು ಬಿಡುಗಡೆಯಾದ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಸ್ವತಂತ್ರ ಮೌಲ್ಯಮಾಪನ ವರದಿಯು, ಭಾರತದ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವನ್ನು (ಎಡಿಪಿ) 'ಸ್ಥಳೀಯ ಪ್ರದೇಶ ಅಭಿವೃದ್ಧಿಯ ಅತ್ಯಂತ ಯಶಸ್ವಿ ಮಾದರಿ' ಎಂದು ಶ್ಲಾಘಿಸಿದೆ. ಹಲವಾರು ಕಾರಣಗಳಿಂದಾಗಿ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮಾನತೆಗಳಿರುವ ಹಲವಾರು ದೇಶಗಳು ಈ ಮಾದರಿಯನ್ನು ಅಳವಡಿಸಿಕೊಳ್ಳಬಹುದು ಎಂದೂ ವರದಿ ಹೇಳಿದೆ.
ಎಡಿಪಿ ಅಡಿಯಲ್ಲಿ ನಡೆದ ಏಕೀಕೃತ ಪ್ರಯತ್ನಗಳಿಂದಾಗಿ ಈ ಹಿಂದೆ ನಿರ್ಲಕ್ಷಿಸಲ್ಪಟ್ಟಿದ್ದ ಜಿಲ್ಲೆಗಳು, ದೂರ ಪ್ರದೇಶಗಳು ಮತ್ತು ಎಡಪಂಥೀಯ ಉಗ್ರವಾದದಿಂದ ಪೀಡಿತವಾದ ಪ್ರದೇಶಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಸಾಧಿಸಲಾಗಿದೆ ಎಂದು ವರದಿ ಹೇಳಿದೆ. ಕಾರ್ಯಕ್ರಮದ ಅನುಷ್ಠಾನದಲ್ಲಿ ಕೆಲವು ಅಡೆತಡೆಗಳ ಹೊರತಾಗಿಯೂ, ಎಪಿಡಿ ‘ಹಿಂದುಳಿದ ಜಿಲ್ಲೆಗಳಲ್ಲಿ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಅಪಾರ ಯಶಸ್ಸನ್ನು ಕಂಡಿದೆ’ಎಂದು ವರದಿ ತಿಳಿಸಿದೆ.
ಈ ವರದಿಯನ್ನು ಇಂದು ಯುಎನ್‌ಡಿಪಿ ಭಾರತ ಪ್ರತಿನಿಧಿ ಶೋಕೊ ನೋಡಾ ಅವರು ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್ ಮತ್ತು ಸಿಇಒ ಅಮಿತಾಬ್ ಕಾಂತ್ ಅವರಿಗೆ ಹಸ್ತಾಂತರಿಸಿದರು. ವರದಿಯು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಪ್ರಗತಿಯನ್ನು ತಿಳಿಸುತ್ತದೆ ಮತ್ತು ಹೆಚ್ಚಿನ ಸುಧಾರಣೆಗಳಿಗೆ ಶಿಫಾರಸುಗಳನ್ನು ಮಾಡುತ್ತದೆ. ವರದಿಯು ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶಗಳ ಪರಿಮಾಣಾತ್ಮಕ ವಿಶ್ಲೇಷಣೆ ಮತ್ತು ಜಿಲ್ಲಾಧಿಕಾರಿಗಳು, ಕೇಂದ್ರ ಪ್ರಭಾರಿ ಅಧಿಕಾರಿಗಳು, ಜಿಲ್ಲಾ ಅಧಿಕಾರಿಗಳು ಮತ್ತು ಇತರ ಅಭಿವೃದ್ಧಿ ಪಾಲುದಾರರು ಸೇರಿದಂತೆ ವಿವಿಧ ಪಾಲುದಾರರ ಸಂದರ್ಶನಗಳನ್ನು ಆಧರಿಸಿದೆ.
ಎಡಿಪಿಯ 5 ಪ್ರಮುಖ ಕ್ಷೇತ್ರಗಳಾದ ಆರೋಗ್ಯ ಮತ್ತು ಪೋಷಕಾಂಶ, ಶಿಕ್ಷಣ; ಕೃಷಿ ಮತ್ತು ಜಲ ಸಂಪನ್ಮೂಲಗಳು, ಮೂಲಸೌಕರ್ಯ, ಕೌಶಲ್ಯ ಅಭಿವೃದ್ಧಿ ಮತ್ತು ಆರ್ಥಿಕ ಸೇರ್ಪಡೆಗಳಲ್ಲಿ ಈ ಜಿಲ್ಲೆಗಳಲ್ಲಿ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಕಾರ್ಯಕ್ರಮವು ವೇಗವರ್ಧಕವಾಗಿ ಕಾರ್ಯನಿರ್ವಹಿಸಿದೆ ಎಂದು ಯುಎನ್‌ಡಿಪಿಯ ವಿಶ್ಲೇಷಣೆ ತಿಳಿಸಿದೆ. ವರದಿಯ ಪ್ರಕಾರ, ಆರೋಗ್ಯ ಮತ್ತು ಪೋಷಕಾಂಶ, ಶಿಕ್ಷಣ ಮತ್ತು ಒಂದು ನಿರ್ದಿಷ್ಟ ಹಂತದಲ್ಲಿ, ಕೃಷಿ ಮತ್ತು ಜಲ ಸಂಪನ್ಮೂಲಗಳು ಭಾರಿ ಸುಧಾರಣೆಗಳನ್ನು ದಾಖಲಿಸಿವೆ, ಇತರ ಸೂಚಕಗಳಲ್ಲಿ ಗಮನಾರ್ಹವಾದ ಪ್ರಗತಿಯನ್ನು ಸಾಧಿಸಿದರೂ ಮತ್ತಷ್ಟು ಬಲಪಡಿಸಲು ಅವಕಾಶಗಳಿವೆ.
ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತಮ ಅಭಿವೃದ್ಧಿ ಸಾಧಿಸಿರುವುದು ಕಂಡುಬಂದಿದೆ. ಆರೋಗ್ಯ ಮತ್ತು ಪೋಷಕಾಂಶ ಮತ್ತು ಆರ್ಥಿಕ ಸೇರ್ಪಡೆ ಕ್ಷೇತ್ರಗಳಲ್ಲಿ, ಇನ್ನೂ ಶೇ.9.6 ರಷ್ಟು ಮನೆ ಸೇವೆಗಳು ನುರಿತ ಜನನ ಪರಿಚಾರಕರಿಂದ ನಡೆದಿವೆ. ತೀವ್ರ ರಕ್ತಹೀನತೆಯಿಂದ ಬಳಲುತ್ತಿರುವ ಶೇ. 5.8 ರಷ್ಟು ಗರ್ಭಿಣಿ ಮಹಿಳೆಯರಿಗೆ ಚಿಕಿತ್ಸೆ ನೀಡಲಾಗಿದೆ. ಅತಿಸಾರದಿಂದ ಬಳಲುತ್ತಿರುವ ಶೇ.4.8 ರಷ್ಟು ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಶೇ.4.5 ರಷ್ಟು ಗರ್ಭಿಣಿಯರು ತಮ್ಮ ಮೊದಲ ತ್ರೈಮಾಸಿಕದಲ್ಲಿ ಪ್ರಸವಪೂರ್ವ ಆರೈಕೆಗಾಗಿ ನೋಂದಾಯಿಸಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜನಧನ್ ಯೋಜನೆ ಅಡಿಯಲ್ಲಿ ಕ್ರಮವಾಗಿ 1 ಲಕ್ಷ ಜನಸಂಖ್ಯೆಗೆ 406, 847 ಮತ್ತು 1580 ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ. ಯುಎನ್‌ಡಿಪಿ ವರದಿಯು ಬಿಜಾಪುರ ಮತ್ತು ದಾಂತೇವಾಡದಲ್ಲಿನ ‘ಮಲೇರಿಯಾ ಮುಕ್ತ ಬಸ್ತರ್ ಅಭಿಯಾನ’ವನ್ನು ಶಿಫಾರಸು ಮಾಡಿದೆ, ಇದು ಈ ಜಿಲ್ಲೆಗಳಲ್ಲಿ ಮಲೇರಿಯಾ ರೋಗವನ್ನು ಕ್ರಮವಾಗಿ ಶೇ.71 ಮತ್ತು ಶೇ.54 ರಷ್ಟು ಕಡಿಮೆ ಮಾಡಿದೆ, ಇದು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಕಂಡುಬರುವ ‘ಅತ್ಯುತ್ತಮ ಅಭ್ಯಾಸ’ ಗಳಲ್ಲಿ ಒಂದಾಗಿದೆ.
ವರದಿಯ ಪ್ರಕಾರ, ಆರೋಗ್ಯ ಮತ್ತು ಪೋಷಕಾಂಶ ಕುರಿತಾದ ಕಾರ್ಯಕ್ರಮವು ಕೋವಿಡ್ ಬಿಕ್ಕಟ್ಟನ್ನು ಹೆಚ್ಚಿನ ಸ್ಥಿತಿಸ್ಥಾಪಕತ್ವದಿಂದ ನಿಭಾಯಿಸಲು ಸಹಾಯ ಮಾಡಿದೆ ಎಂದು ಜಿಲ್ಲೆಗಳು ಹೇಳಿವೆ. ಉದಾಹರಣೆಗೆ, ‘ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯು ನೆರೆಯ ರಾಜ್ಯಗಳಾದ ಛತ್ತೀಸ್ ಗಢ್ ಮತ್ತು ಆಂಧ್ರಪ್ರದೇಶದ ಸಮೀಪದಲ್ಲಿದೆ, ಲಾಕ್‌ಡೌನ್‌ನ ಆರಂಭಿಕ ಹಂತದಲ್ಲಿ ಇದು ಹಲವಾರು ವಲಸೆ ಕಾರ್ಮಿಕರು ರಾಜ್ಯಕ್ಕೆ ಮರಳುವ ಪ್ರವೇಶ ಕೇಂದ್ರವಾಯಿತು. ಇಲ್ಲಿನ ಹೊಸ ಮೂಲಸೌಕರ್ಯವನ್ನು ವಲಸಿಗರಿಗೆ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರವಾಗಿ ಬಳಸಿಕೊಳ್ಳಲಾಯಿತು ಎಂದು ಜಿಲ್ಲಾ ಅಧಿಕಾರಿಗಳು ಹೇಳಿದ್ದಾರೆ.
ನೈಜ-ಸಮಯದ ಡೇಟಾವನ್ನು ಮೇಲ್ವಿಚಾರಣೆ ಮಾಡುವುದು, ಸರ್ಕಾರಿ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಸಮನ್ವಯಗೊಳಿಸುವುದು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಪ್ರಯೋಜನಗಳನ್ನು ಗಣನೀಯವಾಗಿ ಪಡೆಯುವುದು ಉಪಕ್ರಮದ ಯಶಸ್ಸಿನ ಹಿಂದಿನ ಕಾರಣಗಳಾಗಿವೆ.
ಉದ್ದೇಶ ಮತ್ತು ಗುರಿಗಳನ್ನು ಸಾಧಿಸಲು ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳು, ಅಭಿವೃದ್ಧಿ ಪಾಲುದಾರರು ಮತ್ತು ನಾಗರಿಕರು ಸೇರಿದಂತೆ ಎಲ್ಲಾ ಮಧ್ಯಸ್ಥಗಾರರನ್ನು ಒಟ್ಟುಗೂಡಿಸುವ ಕಾರ್ಯಕ್ರಮದ ವಿಶಿಷ್ಟ ಸಹಯೋಗದ ಸ್ವರೂಪವನ್ನು ವರದಿಯು ಗುರುತಿಸಿದೆ. ಈ ಪ್ರಮುಖ ಸ್ತಂಭವೇ ಜಿಲ್ಲಾಧಿಕಾರಿಗಳಿಗೆ ಆಯಾ ಜಿಲ್ಲೆಗಳಲ್ಲಿನ ಪಂಚಾಯಿತಿಗಳು ಮತ್ತು ಸಮುದಾಯದ ಮುಖಂಡರು ಮತ್ತು ಅಭಿವೃದ್ಧಿ ಪಾಲುದಾರರೊಂದಿಗೆ ‘ಬಲವಾದ ಕೋವಿಡ್ -19 ಪ್ರತಿಕ್ರಿಯೆಯನ್ನು ನಿರ್ಮಿಸಲು ಮತ್ತು ಸಾಂಕ್ರಾಮಿಕ ಸವಾಲುಗಳನ್ನು ನಿಭಾಯಿಸಲು’ಸಹಾಯ ಮಾಡಿದೆ.
ಕಾರ್ಯಕ್ರಮದ ಬಗ್ಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಸೇರಿದಂತೆ ದೇಶದ ಉನ್ನತ ನಾಯಕತ್ವ ತೋರಿಸಿದ ಗಮನಾರ್ಹ ಬದ್ಧತೆಯನ್ನು ವರದಿಯು ಶ್ಲಾಘಿಸಿದೆ. 2018 ರಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗಿನಿಂದಲೂ, ಪ್ರಧಾನಿಯವರು ನಿರಂತರವಾಗಿ ‘ಜಿಲ್ಲಾಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಲು ಪ್ರೇರೇಪಿಸಿದರು’ ಎಂದು ಹೇಳಲಾಗಿದೆ.
ಎಡಿಪಿಯ ವಿಧಾನವಾದ 'ಸಮನ್ವಯ, ಸ್ಪರ್ಧೆ ಮತ್ತು ಸಹಯೋಗ' ಎಂಬ 3 ಸಿಗಳ ಬಗ್ಗೆ ಮಾತನಾಡುವಾಗ, ಬಹುತೇಕ ಮಂದಿ ಸಮನ್ವಯದ ಪ್ರಾಮುಖ್ಯವನ್ನು ಒತ್ತಿಹೇಳಿದ್ದಾರೆ, ಇದು ಕಾರ್ಯಕ್ರಮದ ಗುರಿಗಳನ್ನು ಸಾಧಿಸಲು ಯೋಜನೆ ಮತ್ತು ಆಡಳಿತದಲ್ಲಿನ ಅಡಚಣೆಗಳನ್ನು ನಿವಾರಿಸಲು ನೆರವಾಯಿತು. ಅಂತೆಯೇ, ಉತ್ತಮ ಗುರಿ ಮೇಲ್ವಿಚಾರಣೆಯನ್ನು ಉತ್ತೇಜಿಸಲು ಮತ್ತು ಕಾರ್ಯಕ್ರಮದ ಗುರಿಗಳನ್ನು ಸಾಧಿಸಲು ಆರೋಗ್ಯಕರ ಸ್ಪರ್ಧೆಯನ್ನು ಸೃಷ್ಟಿಸಲು ‘ಸ್ಪರ್ಧೆ’ ಅಂಶವು ಸಹಕಾರಿಯಾಗಿದೆ ಎಂದು ಕಂಡುಬಂದಿದೆ. ಜಿಲ್ಲೆಗಳು ತಮ್ಮ ಪ್ರಯತ್ನಗಳನ್ನು ಹೆಚ್ಚಿಸಲು ಮತ್ತು ಪ್ರಗತಿಯನ್ನು ಪತ್ತೆಹಚ್ಚಲು ಇದು ಪ್ರೇರಕ ಅಂಶವಾಗಿದೆ.
ಈ ಕಾರ್ಯಕ್ರಮವು ಜಿಲ್ಲೆಗಳ ತಾಂತ್ರಿಕ ಮತ್ತು ಆಡಳಿತಾತ್ಮಕ ಸಾಮರ್ಥ್ಯಗಳನ್ನು ಬಲಪಡಿಸಿದೆ, ಆದಾಗ್ಯೂ, ‘ತಾಂತ್ರಿಕ ಪರಿಣತಿ, ಕೌಶಲ್ಯ ತರಬೇತಿ, ಇತ್ಯಾದಿಗಳನ್ನು ಒದಗಿಸಲು ಅಭಿವೃದ್ಧಿ ಪಾಲುದಾರರೊಂದಿಗೆ ಸಹಕರಿಸಲು ಎಲ್ಲಾ ಜಿಲ್ಲೆಗಳಾದ್ಯಂತ ಮಹತ್ವಾಕಾಂಕ್ಷೆಯ ಜಿಲ್ಲಾ ಫೆಲೋಗಳು ಅಥವಾ ತಾಂತ್ರಿಕ ಬೆಂಬಲ ಘಟಕಗಳಂತಹ ಸಮರ್ಪಿತ ಸಿಬ್ಬಂದಿಯನ್ನು ನೇಮಿಸುವುದು ಸೇರಿದಂತೆ ಸಾಮರ್ಥ್ಯ ವೃದ್ಧಿಗೆ ಹೆಚ್ಚಿನ ಗಮನ ಹರಿಸುವ ಅವಶ್ಯಕತೆಯಿದೆ’ ಎಂದು ವರದಿ ಹೇಳಿದೆ.
ಕಾರ್ಯಕ್ರಮದ ಚಾಂಪಿಯನ್ಸ್ ಆಫ್ ಚೇಂಜ್ ಡ್ಯಾಶ್‌ಬೋರ್ಡ್‌ನಲ್ಲಿ ಒದಗಿಸಲಾದ ಡೆಲ್ಟಾ ಶ್ರೇಯಾಂಕಗಳನ್ನು ವರದಿಯು ಶ್ಲಾಘಿಸಿದೆ. ಕಳೆದ ಮೂರು ವರ್ಷಗಳಲ್ಲಿ ತಮ್ಮ ಸ್ಥಾನಗಳನ್ನು ಸುಧಾರಿಸಿಕೊಳ್ಳಲು ಸ್ಪರ್ಧಾತ್ಮಕ ಮತ್ತು ಕ್ರಿಯಾತ್ಮಕ ಕ್ರಮಗಳು ಹಲವಾರು ಕಡಿಮೆ ಕಾರ್ಯನಿರ್ವಹಣೆಯ ಜಿಲ್ಲೆಗಳಿಗೆ (ಬೇಸ್‌ಲೈನ್ ಶ್ರೇಯಾಂಕಗಳ ಪ್ರಕಾರ) ನೆರವಾಗಿವೆ. ಕಾರ್ಯಕ್ರಮದ ಪ್ರಾರಂಭದಿಂದಲೂ ಸಿಮ್‌ದೇಗಾ (ಜಾರ್ಖಂಡ್), ಚಂದೌಲಿ (ಉತ್ತರ ಪ್ರದೇಶ), ಸೋನ್‌ಭದ್ರ (ಉತ್ತರ ಪ್ರದೇಶ) ಮತ್ತು ರಾಜ್‌ಗಢ (ಮಧ್ಯಪ್ರದೇಶ) ಜಿಲ್ಲೆಗಳು ಹೆಚ್ಚು ಪ್ರಗತಿ ಸಾಧಿಸಿವೆ.
ಕಾರ್ಯಕ್ರಮದ ಅಡಿಯಲ್ಲಿ ಕೈಗೊಂಡ ಹಲವಾರು ಉಪಕ್ರಮಗಳನ್ನು ಅತ್ಯುತ್ತಮ ಅಭ್ಯಾಸಗಳೆಂದು ವರದಿ ಶಿಫಾರಸು ಮಾಡಿದೆ. ಅವುಗಳಲ್ಲಿ ಗಮನಾರ್ಹವಾದುದು ಗೋಲ್ ಮಾರ್ಟ್, ಅಸ್ಸಾಂನ ಗೋಲ್ಪಾರ ಜಿಲ್ಲಾಡಳಿತವು ಇ-ಕಾಮರ್ಸ್ ಪೋರ್ಟಲ್ ‘ಜಿಲ್ಲೆಯ ಗ್ರಾಮೀಣ, ಬುಡಕಟ್ಟು ಮತ್ತು ಕೃಷಿ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ತೇಜಿಸಲು’ ಪ್ರಾರಂಭಿಸಿದೆ. ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಈ ಉಪಕ್ರಮವು ರೈತರು ಮತ್ತು ಚಿಲ್ಲರೆ ವ್ಯಾಪಾರಿಗಳನ್ನು ಅಂಗಡಿಗಳ ಹಿಡಿತದಿಂದ ಬಿಡುಗಡೆ ಮಾಡಿತು. ಗೋಲ್ಪಾರಾದ ಕಪ್ಪು ಅಕ್ಕಿ ಈ ಪೋರ್ಟಲ್‌ನಲ್ಲಿ ಅಚ್ಚುಮೆಚ್ಚಿನದು ಮತ್ತು ಇದು ರೈತರಿಗೆ ಹೆಚ್ಚು ಲಾಭ ತಂದುಕೊಡುತ್ತದೆ ಎಂದು ಸಾಬೀತಾಗಿದೆ. ಅಂತೆಯೇ, ಉತ್ತರ ಪ್ರದೇಶದ ಚಾಂದೇಲ್ ಜಿಲ್ಲೆಯು ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆ ಮತ್ತು ಉತ್ತಮ ಲಾಭಾಂಶದಿಂದಾಗಿ ಕಪ್ಪು ಅಕ್ಕಿಯ ಕೃಷಿಯನ್ನು ಪ್ರಯೋಗಿಸಲು ನಿರ್ಧರಿಸಿತು. ಯೋಜನೆಯು ಯಶಸ್ವಿಯಾಯಿತು ಮತ್ತು ಉತ್ತಮ ಗುಣಮಟ್ಟದ ಕಪ್ಪು ಅಕ್ಕಿಯನ್ನು ಈಗ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ರಫ್ತು ಮಾಡಲಾಗುತ್ತಿದೆ.
ಸವಾಲುಗಳು ಮತ್ತು ಸಲಹೆಗಳಿಗೆ ಸಂಬಂಧಿಸಿದಂತೆ, ಮೂಲಭೂತ ಸೌಕರ್ಯಗಳ ಸೂಚಕವಾಗಿ ‘ಮನೆಗಳ ವಿದ್ಯುದೀಕರಣ’ ಮುಂತಾದ ಕೆಲವು ಸೂಚಕಗಳನ್ನು ಪರಿಷ್ಕರಿಸುವ ಅಗತ್ಯವನ್ನು ಕೆಲವು ಮಧ್ಯಸ್ಥಗಾರರು ಎತ್ತಿ ತೋರಿಸಿದ್ದಾರೆ ಎಂದು ವರದಿ ಹೇಳಿದೆ. ಸರಾಸರಿಯಾಗಿ, ಜಿಲ್ಲೆಗಳು ಸ್ಥಿತಿಸ್ಥಾಪಕತ್ವ ಹೆಚ್ಚಳ ಮತ್ತು ದುರ್ಬಲತೆಗಳಲ್ಲಿ ಇಳಿಕೆ ಕಂಡಿದ್ದರೂ, ಕಡಿಮೆ-ಸುಧಾರಿತ ಜಿಲ್ಲೆಗಳು ದುರ್ಬಲತೆಗಳ ಹೆಚ್ಚಳಕ್ಕೆ ಸಾಕ್ಷಿಯಾಗಿವೆ, ಈ ಜಿಲ್ಲೆಗಳು ಉತ್ತಮ ಸಾಧನೆ ತೋರಿದ ಕ್ಷೇತ್ರಗಳ ಮೇಲೆ ವಿಶೇಷ ಗಮನ ಹರಿಸಬೇಕು.
ಎಸ್‌ಡಿಜಿಗಳ ಪ್ರಮುಖ ಸಾರವಾದ “ಯಾರನ್ನೂ ಹಿಂದೆ ಬಿಡಬಾರದು”ಎಂಬ ತತ್ವಕ್ಕೆ ಎಡಿಪಿಯನ್ನು ಹೊಂದಿಸಲಾಗಿದೆ ಎಂದು ವರದಿ ಹೇಳಿದೆ. ಉನ್ನತ ಮಟ್ಟದ ರಾಜಕೀಯ ಬದ್ಧತೆಯು ಕಾರ್ಯಕ್ರಮದ ತ್ವರಿತ ಯಶಸ್ಸಿಗೆ ಕಾರಣವಾಗಿದೆ.
ಒಟ್ಟಾರೆಯಾಗಿ, ವರದಿಯು ಕಾರ್ಯಕ್ರಮದ ಸಕಾರಾತ್ಮಕ ಪರಿಣಾಮವನ್ನು ಶ್ಲಾಘಿಸಿದೆ. ಅಭಿವೃದ್ಧಿಯತ್ತ ಗಮನ ಹರಿಸುವುದನ್ನು ಮತ್ತಷ್ಟು ಪ್ರೋತ್ಸಾಹಿಸಬೇಕು ಮತ್ತು ಬೆಳವಣಿಗೆಯನ್ನು ಚುರುಕುಗೊಳಿಸುವಲ್ಲಿ ಇಲ್ಲಿಯವರೆಗೆ ಗಳಿಸಿದ ಆವೇಗವನ್ನು ಕಾಪಾಡಿಕೊಳ್ಳಬೇಕು. ಮೌಲ್ಯಮಾಪನದ ಆಧಾರದ ಮೇಲೆ ಕಾರ್ಯಕ್ರಮದ ಯಶಸ್ಸನ್ನು ಇತರ ವಲಯಗಳು ಮತ್ತು ಜಿಲ್ಲೆಗಳಿಗೆ ವಿಸ್ತರಿಸಬೇಕು ಎಂದು ಸೂಚಿಸಲಾಗಿದೆ.
ದೇಶದ ನಾಗರಿಕರ ಜೀವನ ಮಟ್ಟವನ್ನು ಹೆಚ್ಚಿಸಲು ಮತ್ತು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ತತ್ವದಡಿ ಎಲ್ಲರ ಸಮಗ್ರ ಬೆಳವಣಿಗೆಯನ್ನು ಖಾತ್ರಿಪಡಿಸುವ ಪ್ರಯತ್ನದ ಭಾಗವಾಗಿ 2018 ರ ಜನವರಿಯಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
***
(Release ID: 1726405)
Visitor Counter : 327