ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಅವರು ರಾಷ್ಟ್ರದ ಜನತೆಯವನ್ನುದ್ಧೇಶಿಸಿ ಮಾಡಿದ ಭಾಷಣದ ಕನ್ನಡ ಅನುವಾದ

Posted On: 07 JUN 2021 7:49PM by PIB Bengaluru

ಪ್ರೀತಿಯ ದೇಶವಾಸಿಗಳಿಗೆ ನನ್ನ ನಮಸ್ಕಾರಗಳು! ಕೊರೋನಾದ ಎರಡನೇ ಅಲೆಯ ವಿರುದ್ಧ ನಮ್ಮ ಹೋರಾಟ ಇನ್ನೂ ಮುಂದುವರಿಯುತ್ತಿದೆ. ವಿಶ್ವದ ಅನೇಕ ದೇಶಗಳಂತೆ, ಭಾರತವೂ ಹೋರಾಟದ ಸಮಯದಲ್ಲಿ ಸಾಕಷ್ಟು ನೋವನ್ನು ಅನುಭವಿಸಿದೆ. ನಮ್ಮಲ್ಲಿ ಅನೇಕರು ನಮ್ಮ ಸಂಬಂಧಿಕರು ಮತ್ತು ಪರಿಚಯಸ್ಥರನ್ನು ಕಳೆದುಕೊಂಡಿದ್ದಾರೆ, ಹಲವರನ್ನು ನಾವು ಕಳೆದುಕೊಂಡಿದ್ದೇವೆ. ಅಂತಹ ಎಲ್ಲ ಕುಟುಂಬಗಳಿಗೆ ನನ್ನ ಮನದಾಳದ ಸಂತಾಪ.

ಸ್ನೇಹಿತರೇ,

ಕಳೆದ 100 ವರ್ಷಗಳಲ್ಲಿ ಇದು ಅತಿದೊಡ್ಡ ಸಾಂಕ್ರಾಮಿಕ ಮತ್ತು ದುರಂತ ಇದಾಗಿದೆ. ಆಧುನಿಕ ಜಗತ್ತು ಇಂತಹ ಸಾಂಕ್ರಾಮಿಕ ರೋಗವನ್ನು ಈತನಕ ನೋಡಿಲ್ಲ ಅಥವಾ ಅನುಭವಿಸಿರಲಿಲ್ಲ. ಇಂತಹ ಬೃಹತ್ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ನಮ್ಮ ದೇಶವು ಅನೇಕ ರಂಗಗಳಲ್ಲಿ ಒಟ್ಟಾಗಿ ಹೋರಾಡಿದೆ. ಕೋವಿಡ್ ಆಸ್ಪತ್ರೆಯನ್ನು ನಿರ್ಮಿಸುವುದರಿಂದ ಹಿಡಿದು, ಆಸ್ಪತ್ರೆಗಳ ಐಸಿಯು ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವವರೆಗೆ, ಭಾರತದಲ್ಲಿ ವೆಂಟಿಲೇಟರ್ಗಳನ್ನು ತಯಾರಿಸುವುದರಿಂದ ಹಿಡಿದು ಪರೀಕ್ಷಾ ಪ್ರಯೋಗಾಲಯಗಳ ಬೃಹತ್ ಜಾಲವನ್ನು ರಚಿಸುವವರೆಗೆ, ಕಳೆದ ಒಂದೂವರೆ ವರ್ಷಗಳಲ್ಲಿ ದೇಶದಲ್ಲಿ ಹೊಸ ಆರೋಗ್ಯ ಮೂಲಸೌಕರ್ಯವನ್ನು ರಚಿಸಲಾಗಿದೆ. ಎರಡನೇ ಅಲೆಯಿಂದಾಗಿ ಭಾರತದಲ್ಲಿ ವೈದ್ಯಕೀಯ ಆಮ್ಲಜನಕದ ಬೇಡಿಕೆ ಇದೇ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಅನಿರೀಕ್ಷಿತವಾಗಿ ಹೆಚ್ಚಾಗಿದೆ. ಭಾರತದ ಇತಿಹಾಸದಲ್ಲಿ ಎಂದಿಗೂ ವೈದ್ಯಕೀಯ ಆಮ್ಲಜನಕದ ಅಗತ್ಯವನ್ನು ಅಂತಹ ಪ್ರಮಾಣದಲ್ಲಿ ಬಳಕೆಯಾಗಲಿಲ್ಲ ಮತ್ತು ಇಂತಹ ಪರಿಸ್ಥಿತಿಯನ್ನು ಅನುಭವಿಸಿಲ್ಲ. ಬೇಡಿಕೆಯನ್ನು ಈಡೇರಿಸಲು ಯುದ್ದೋಪಾದಿಯ ಹೆಜ್ಜೆಯಲ್ಲಿ ಪ್ರಯತ್ನಗಳು ಸಾಗುತ್ತಿವೆ. ಸರ್ಕಾರದ ಸಂಪೂರ್ಣ ವ್ಯವಸ್ಥೆಗಳ್ನು ಇದಕ್ಕಾಗಿ ತೊಡಗಿಸಿಕೊಳ್ಳಲಾಗಿದೆ. ಆಕ್ಸಿಜನ್ ರೈಲುಗಳನ್ನು ನಿಯೋಜಿಸಲಾಯಿತು, ವಾಯುಪಡೆಯ ವಿಮಾನಗಳನ್ನು ಬಳಸಲಾಯಿತು ಮತ್ತು ನೌಕಾಪಡೆಯನ್ನು ಕೂಡಾ ನಿಯೋಜಿಸಲಾಯಿತು. ವೈದ್ಯಕೀಯ ದ್ರವ ಆಮ್ಲಜನಕದ ಉತ್ಪಾದನೆಯನ್ನು ಬಹಳ ಕಡಿಮೆ ಸಮಯದಲ್ಲಿ 10 ಪಟ್ಟು ಹೆಚ್ಚಿಸಲಾಗಿದೆ. ಪ್ರಪಂಚದ ಯಾವುದೇ ಭಾಗದಿಂದ ಯಾವದೇ ಸೌಲಭ್ಯ ಲಭ್ಯವಾಗಬಹುದೆಂಬುದನ್ನು ಅರಿತು ಪಡೆಯಲು ಅದನ್ನು ಎಲ್ಲ ಪ್ರಯತ್ನಗಳನ್ನು ಮಾಡಲಾಯಿತು. ಅಂತೆಯೇ, ಅಗತ್ಯ ಔಷಧಿಗಳ ಉತ್ಪಾದನೆಯನ್ನು ಅನೇಕ ಪಟ್ಟು ಹೆಚ್ಚಿಸಲಾಯಿತು ಮತ್ತು ವಿದೇಶದಲ್ಲಿ ಲಭ್ಯವಿದೆ ಎಂದಾದರೆ ಎಲ್ಲಿಂದಲಾದರೂ ಅವುಗಳನ್ನು ತರಲು ಬೇಕಾದ ಯಾವುದೇ ಪ್ರಯತ್ನವನ್ನೂ ಮಾಡದೆ ಬಿಡಲಿಲ್ಲ.

ಸ್ನೇಹಿತರೇ,

ಕೊರೋನಾದಂತಹ ಅದೃಶ್ಯ ಮತ್ತು ರೂಪಾಂತರಿತ ಶತ್ರುವಿನ ವಿರುದ್ಧದ ಹೋರಾಟದಲ್ಲಿ ಅತ್ಯಂತ ಪರಿಣಾಮಕಾರಿ ಆಯುಧವೆಂದರೆ ಕೋವಿಡ್ ಶಿಷ್ಟಾಚಾರ, ಮುಖಗವಸು ಬಳಕೆ, ಎರಡು ಗಜಗಳ ಅಂತರ ಮತ್ತು ಇತರ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು. ಹೋರಾಟದಲ್ಲಿ ನಮಗೆ ರಕ್ಷಣಾತ್ಮಕ ಗುರಾಣಿಯಂತೆ ಇದೆ ಲಸಿಕೆ. ಇಂದು ಪ್ರಪಂಚದಾದ್ಯಂತ ಲಸಿಕೆಗಳ ಬೇಡಿಕೆಗೆ ಹೋಲಿಸಿದರೆ, ಅವುಗಳನ್ನು ಉತ್ಪಾದಿಸುವ ದೇಶಗಳು ಮತ್ತು ಲಸಿಕೆಗಳನ್ನು ತಯಾರಿಸುವ ಕಂಪನಿಗಳು ಬಹಳ ಕಡಿಮೆ. ಅವುಗಳ ಸಂಖ್ಯೆಯನ್ನು ಎಣಿಸಬಹುದು. ನಾವು ಭಾರತದಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸದಿದ್ದರೆ, ಇಂದು ಭಾರತದಂತಹ ದೊಡ್ಡ ದೇಶದಲ್ಲಿ ಏನಾಗಬಹುದೆಂದು ಗ್ರಹಿಸಿ. ಕಳೆದ 50-60 ವರ್ಷಗಳ ಇತಿಹಾಸವನ್ನು ನೀವು ಗಮನಿಸಿದರೆ, ಭಾರತವು ವಿದೇಶದಿಂದ ಲಸಿಕೆ ಪಡೆಯಲು ದಶಕಗಳನ್ನು ತೆಗೆದುಕೊಳ್ಳುತ್ತಿತ್ತು ಎಂದು ನಿಮಗೆ ತಿಳಿಯುತ್ತದೆ. ವಿದೇಶದಲ್ಲಿ ಲಸಿಕೆ ಕೆಲಸ ಮುಗಿದ ನಂತರವೂ ನಮ್ಮ ದೇಶದಲ್ಲಿ ಲಸಿಕೆ ಹಾಕುವ ಕೆಲಸವನ್ನು ಪ್ರಾರಂಭಿಸಲಾಗಲಿಲ್ಲ. ಪೋಲಿಯೊ, ಸಿಡುಬು, ಅಥವಾ ಹೆಪಟೈಟಿಸ್ ಬಿ ಲಸಿಕೆಗಳು ಇರಲಿ, ದೇಶವಾಸಿಗಳು ದಶಕಗಳಿಂದ ಕಾಯುತ್ತಿದ್ದರು. ದೇಶವಾಸಿಗಳು 2014 ರಲ್ಲಿ ನಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ಭಾರತದಲ್ಲಿ ಲಸಿಕೆ ವ್ಯಾಪ್ತಿಯು ಕೇವಲ 60 ಪ್ರತಿಶತದಷ್ಟಿತ್ತು. ಮತ್ತು ನಮ್ಮ ದೃಷ್ಟಿಯಲ್ಲಿ, ಇದು ಬಹಳ ಕಳವಳಕಾರಿ ಸಂಗತಿಯಾಗಿದೆ.ಭಾರತದ ರೋಗನಿರೋಧಕ ಕಾರ್ಯಕ್ರಮದ ಪ್ರಗತಿಯಲ್ಲಿರುವ ದರವು ದೇಶವು 100% ಲಸಿಕೆ ವ್ಯಾಪ್ತಿಯ ಗುರಿಯನ್ನು ಸಾಧಿಸಲು ಸುಮಾರು 40 ವರ್ಷಗಳನ್ನು ತೆಗೆದುಕೊಂಡಿದೆ. ಸಮಸ್ಯೆಯನ್ನು ಪರಿಹರಿಸಲು ನಾವು ಸಂಕಲ್ಪಯೋಜನೆ (ಮಿಷನ್) ಇಂದ್ರಧನುಷ್ ಅನ್ನು ಪ್ರಾರಂಭಿಸಿದೆವು. ಮಿಷನ್ ಇಂದ್ರಧನುಷ್ ಮೂಲಕ ಯುದ್ದೋಪಾದಿಯ ರೀತಿಯಲ್ಲಿ ಲಸಿಕೆ ಹಾಕುವ ಕೆಲಸವನ್ನು ಕೈಗೊಳ್ಳಲಾಗಿದೆ ಮತ್ತು ಅಗತ್ಯವಿರುವವರಿಗೆ ಲಸಿಕೆ ಹಾಕುವ ಪ್ರಯತ್ನ ಮಾಡಬೇಕು ಎಂದು ನಾವು ನಿರ್ಧರಿಸಿದೆವು. ನಾವು ಸಂಕಲ್ಪ ಆಧಾರದಲ್ಲಿ (ಮಿಷನ್ ಮೋಡ್ನಲ್ಲಿ) ಕೆಲಸ ಮಾಡಿದ್ದೇವೆ ಮತ್ತು ಲಸಿಕೆ ವ್ಯಾಪ್ತಿಯು ಕೇವಲ 5-6 ವರ್ಷಗಳಲ್ಲಿ ಶೇಕಡಾ 60 ರಿಂದ 90 ಕ್ಕೆ ಏರಿದೆ. ಅಂದರೆ, ನಾವು ಲಸಿಕೆ ಕಾರ್ಯಕ್ರಮದ ವೇಗವನ್ನು ತೀವ್ರ ಗತಿಯಲ್ಲಿ ಹೆಚ್ಚಿಸಿದ್ದೇವೆ.  

ಭಾರತದ ಲಸಿಕೆ ಅಭಿಯಾನದ ಒಂದು ಭಾಗವಾಗಿ ನಾವು ಅನೇಕ ಹೊಸ ಲಸಿಕೆಗಳನ್ನು ಮಾಡಿದ್ದೇವೆ. ಎಂದಿಗೂ ಲಸಿಕೆ ಪಡೆಯದ ಮಕ್ಕಳು, ಬಡವರು ಮತ್ತು ಬಡವರ ಮಕ್ಕಳ ಬಗ್ಗೆ ಕಾಳಜಿ ವಹಿಸಿದ್ದರಿಂದ ನಾವು ಇದನ್ನು ಮಾಡಿದ್ದೇವೆ. ಕೊರೋನವೈರಸ್ ಹೊಸತಾಗಿ ಬಂದಿರುವ ಸಂದರ್ಭದಲ್ಲಿ ನಾವು 100% ಲಸಿಕೆ ವ್ಯಾಪ್ತಿಯತ್ತ ಸಾಗುತ್ತಿದ್ದೆವು. ಇಷ್ಟು ದೊಡ್ಡ ಜನಸಂಖ್ಯೆಯನ್ನು ಭಾರತವು ಹೇಗೆ ರಕ್ಷಿಸಲು ಸಾಧ್ಯವಾಗುತ್ತದೆ ಎಂಬ ಆತಂಕ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಲ್ಲಿಯೂ ಇತ್ತು. ಆದರೆ ಸ್ನೇಹಿತರೇ, ಉದ್ದೇಶವು ಶುದ್ಧವಾಗಿದ್ದಾಗ, ನೀತಿ ಸ್ಪಷ್ಟವಾಗಿರುತ್ತದೆ ಮತ್ತು ನಿರಂತರ ಶ್ರಮವಿದೆ, ಉತ್ತಮ ಫಲಿತಾಂಶಗಳನ್ನೂ ಸಹ ನಿರೀಕ್ಷಿಸಲಾಗಿದೆ. ಪ್ರತಿ ಆತಂಕವನ್ನು ನಿರ್ಲಕ್ಷಿಸಿ, ಭಾರತವು ಒಂದು ವರ್ಷದೊಳಗೆ ಒಂದಲ್ಲ ಎರಡು 'ಮೇಡ್ ಇನ್ ಇಂಡಿಯಾ' ಲಸಿಕೆಗಳನ್ನು ಬಿಡುಗಡೆ ಮಾಡಿತು. ಭಾರತವು ಅಭಿವೃದ್ಧಿ ಹೊಂದಿದ ದೇಶಗಳ ಹಿಂದೆ ಇಲ್ಲ, ಮುಂದಿದೆ ಎಂದು ನಮ್ಮ ದೇಶ ಮತ್ತು ದೇಶದ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ. ಇಂದು ನಾನು ನಿಮ್ಮೊಂದಿಗೆ ಮಾತನಾಡುವಾಗ, ದೇಶದಲ್ಲಿ ತನಕ 23 ಕೋಟಿಗೂ ಹೆಚ್ಚು ಲಸಿಕೆ ಪ್ರಮಾಣವನ್ನು ನೀಡಲಾಗಿದೆ.

ಸ್ನೇಹಿತರೇ,

ಇದರಲ್ಲಿ ಒಂದು विश्वासेन सिद्धि ನಂಬಿಕೆ ಇದೆ. ಅಂದರೆ, ನಮ್ಮಲ್ಲಿ ನಂಬಿಕೆ ಇರುವಾಗ ನಮ್ಮ ಪ್ರಯತ್ನಗಳಲ್ಲಿ ನಾವು ಖಂಡಿತಾ ಯಶಸ್ಸನ್ನು ಪಡೆಯುತ್ತೇವೆ. ನಮ್ಮ ವಿಜ್ಞಾನಿಗಳು ಲಸಿಕೆಗಳನ್ನು ಬಹಳ ಕಡಿಮೆ ಸಮಯದಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ನಮಗಿತ್ತು. ನಂಬಿಕೆಯಿಂದಾಗಿ, ನಮ್ಮ ವಿಜ್ಞಾನಿಗಳು ತಮ್ಮ ಸಂಶೋಧನಾ ಕಾರ್ಯಗಳಲ್ಲಿ ನಿರತರಾಗಿದ್ದಾಗ, ನಾವು ಲಾಜಿಸ್ಟಿಕ್ಸ್ ಮತ್ತು ಇತರ ಸಿದ್ಧತೆಗಳನ್ನು ಪ್ರಾರಂಭಿಸಿದ್ದೇವೆ. ಕಳೆದ ವರ್ಷ ಏಪ್ರಿಲ್ನಲ್ಲಿ ಕೆಲವೇ ಸಾವಿರ ಕೊರೋನಾ ಪ್ರಕರಣಗಳು ಇದ್ದಾಗ, ಅದೇ ಸಮಯದಲ್ಲಿ ಲಸಿಕೆ ಕಾರ್ಯಪಡೆ ರಚನೆಯಾಯಿತು ಎಂಬುದು ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಲಸಿಕೆಗಳನ್ನು ತಯಾರಿಸುವ ಭಾರತೀಯ ಕಂಪನಿಗಳಿಗೆ ಸರ್ಕಾರ ಎಲ್ಲ ರೀತಿಯಲ್ಲೂ ಬೆಂಬಲ ನೀಡಿತು. ಲಸಿಕೆ ತಯಾರಕರಿಗೆ ಚಿಕಿತ್ಸಾ ( ಕ್ಲಿನಿಕಲ್) ಪ್ರಯೋಗಗಳಲ್ಲಿ ಸಹಾಯ ಮಾಡಲಾಯಿತು, ಸಂಶೋಧನೆ ಮತ್ತು ಅಭಿವೃದ್ಧಿಗೆ ಧನಸಹಾಯ ನೀಡಲಾಯಿತು ಮತ್ತು ಸರ್ಕಾರವು ಪ್ರತಿ ಹಂತದಲ್ಲೂ ಅವರೊಂದಿಗೆ ಭುಜದಿಂದ ಭುಜಕ್ಕೆ ಕೊಟ್ಟು ಪ್ರೋತ್ಸಾಹಿಸಿ ಜೊತೆಯಲ್ಲಿ ಸಾಗಿತು.

ಆತ್ಮನಿರ್ಭರ ಭಾರತ್ ಪ್ಯಾಕೇಜ್ ಅಡಿಯಲ್ಲಿ ಮಿಷನ್ ಕೋವಿಡ್ ಸುರಕ್ಷದ ಮೂಲಕ ಸಹಸ್ರಾರು ಕೋಟಿ ರೂಪಾಯಿಗಳನ್ನು ಅವರಿಗೆ ಅನುಕೂಲವಾಗಲು ಲಭ್ಯಗೊಳಿಸಲಾಯಿತುದೇಶದಲ್ಲಿ ದೀರ್ಘಕಾಲದವರೆಗೆ ದೂರದೃಷ್ಟಿ ಇಟ್ಟು ನಡೆಯುತ್ತಿರುವ ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮ, ಮುಂದಿನ ದಿನಗಳಲ್ಲಿ ಲಸಿಕೆಗಳ ಪೂರೈಕೆ ಇನ್ನೂ ಹೆಚ್ಚಾಗಲಿದೆ. ಇಂದು ದೇಶದ ಏಳು ಕಂಪನಿಗಳು ವಿವಿಧ ರೀತಿಯ ಲಸಿಕೆಗಳನ್ನು ಉತ್ಪಾದಿಸುತ್ತಿವೆ. ಇನ್ನೂ ಮೂರು ಲಸಿಕೆಗಳ ಪ್ರಯೋಗವು ಮುಂದುವರಿದ ಹಂತದಲ್ಲಿ ನಡೆಯುತ್ತಿದೆ. ದೇಶದಲ್ಲಿ ಲಸಿಕೆಗಳ ಲಭ್ಯತೆಯನ್ನು ಹೆಚ್ಚಿಸಲು ವಿದೇಶಿ ಕಂಪನಿಗಳಿಂದ ಲಸಿಕೆಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ, ಕೆಲವು ತಜ್ಞರು ನಮ್ಮ ಮಕ್ಕಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ದಿಕ್ಕಿನಲ್ಲಿಯೂ ಎರಡು ಲಸಿಕೆಗಳ ಪ್ರಯೋಗ ವೇಗವಾಗಿ ನಡೆಯುತ್ತಿದೆ. ಇದಲ್ಲದೆ, 'ನೇಸಲ್' (ಮೂಗಿನ) ಲಸಿಕೆ ಕುರಿತು ದೇಶದಲ್ಲಿಯೂ ಸಂಶೋಧನೆ ನಡೆಯುತ್ತಿದೆ. ಸಿರಿಂಜ್ ಬದಲಿಗೆ ಅದನ್ನು ಮೂಗಿಗೆ ಹಾಕಲಾಗುತ್ತದೆ. ಮುಂದಿನ ದಿನಗಳಲ್ಲಿ ಲಸಿಕೆಯಲ್ಲಿ ದೇಶವು ಯಶಸ್ವಿಯಾದರೆ, ಇದು ಭಾರತದ ಲಸಿಕೆ ಅಭಿಯಾನವನ್ನು ಇನ್ನಷ್ಟು ವೇಗಗೊಳಿಸುತ್ತದೆ.

ಸ್ನೇಹಿತರೇ,

ಇಷ್ಟು ಕಡಿಮೆ ಸಮಯದಲ್ಲಿ ಲಸಿಕೆ ಅಭಿವೃದ್ಧಿಪಡಿಸುವುದು ಇಡೀ ಮಾನವೀಯ ಜನಾಂಗಕ್ಕೆ ಒಂದು ದೊಡ್ಡ ಸಾಧನೆಯಾಗಿದೆ. ಆದರೆ ಅದರ ಬೆಳವಣಿಗೆಯಲ್ಲಿ ಮಿತಿಗಳೂ ಇವೆ. ಲಸಿಕೆ ಅಭಿವೃದ್ಧಿಪಡಿಸಿದ ನಂತರವೂ, ವಿಶ್ವದ ಕೆಲವೇ ದೇಶಗಳಲ್ಲಿ ಲಸಿಕೆ ಪ್ರಾರಂಭವಾಯಿತು, ಮತ್ತು ಅದೂ ಸಮೃದ್ಧ ದೇಶಗಳಲ್ಲಿ ಮಾತ್ರ. ಲಸಿಕೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳನ್ನು ನೀಡಿತು. ವಿಜ್ಞಾನಿಗಳು ಲಸಿಕೆಗಾಗಿ ರೂಪರೇಖೆಯನ್ನು ಹಾಕಿದರು. ಇತರ ದೇಶಗಳ ಉತ್ತಮ ಅಭ್ಯಾಸಗಳ ಆಧಾರದ ಮೇಲೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ಹಂತ ಹಂತವಾಗಿ ಲಸಿಕೆ ನೀಡಲು ಭಾರತ ನಿರ್ಧರಿಸಿತು. ಮುಖ್ಯಮಂತ್ರಿಗಳೊಂದಿಗೆ ನಡೆದ ವಿವಿಧ ಸಭೆಗಳಿಂದ ಪಡೆದ ಸಲಹೆಗಳು ಮತ್ತು ಸಂಸತ್ತಿನಲ್ಲಿ ವಿವಿಧ ಪಕ್ಷಗಳ ಸಹೋದ್ಯೋಗಿಗಳು ನೀಡಿದ ಹಾಗೂ ವಿವಿಧಡೆಗಳಿಂದ ಪಡೆದ ಸಲಹೆಗಳ ಬಗ್ಗೆ ಕೇಂದ್ರ ಸರ್ಕಾರ ಸಂಪೂರ್ಣ ಕಾಳಜಿ ವಹಿಸಿತು. ಇದರ ನಂತರವೇ, ಕೊರೋನಾದಿಂದ ಹೆಚ್ಚು ಅಪಾಯದಲ್ಲಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ನಿರ್ಧರಿಸಲಾಯಿತು. ಅದಕ್ಕಾಗಿಯೇ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು, 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಇತರ ದೀರ್ಘಕಾಲೀನ ವ್ಯಾಧಿಗಳಿಂದ ಬಳಲುತ್ತಿರುವವರು ಆಧ್ಯತೆಯಲ್ಲಿ ಲಸಿಕೆ ಪಡೆದರು. ಕೊರೋನಾದ ಎರಡನೇ ಅಲೆಗೆ  ಮುಂಚಿತವಾಗಿ ನಮ್ಮ ಮುಂಚೂಣಿ ಕಾರ್ಮಿಕರಿಗೆ ಲಸಿಕೆ ನೀಡದಿದ್ದಿದ್ದರೆ ಈಗ ಏನಾಗಬಹುದಿತ್ತು ಎಂದು ನೀವು ಊಹಿಸಬಲ್ಲಿರಾ? ಊಹಿಸಿಕೊಳ್ಳಿ, ನಮ್ಮ ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಗೆ ಲಸಿಕೆ ನೀಡದಿದ್ದರೆ ಏನಾಗುತ್ತಿತ್ತುಆಸ್ಪತ್ರೆಗಳನ್ನು ಸ್ವಚ್ಛ  ಗೊಳಿಸುವ ಕೆಲಸ ಮಾಡುತ್ತಿದ್ದ ನಮ್ಮ ಸಹೋದರರು ಮತ್ತು ಸಹೋದರಿಯರು ಮತ್ತು ನಮ್ಮ ಆಂಬ್ಯುಲೆನ್ಸ್ ಚಾಲಕರಿಗೆ ಆದ್ಯತೆಯಲ್ಲಿ ಲಸಿಕೆ ನೀಡದಿದ್ದರೆ ಏನಾಗುತ್ತಿತ್ತು? ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕುವ ಕಾರಣದಿಂದಾಗಿ ಅವರು ಇತರರನ್ನು ನೋಡಿಕೊಳ್ಳಲು ಮತ್ತು ಲಕ್ಷಾಂತರ ದೇಶವಾಸಿಗಳ ಪ್ರಾಣ ಉಳಿಸಲು ಸಾಧ್ಯವಾಯಿತು. ಆದರೆ ದೇಶದಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿರುವ ಮಧ್ಯೆ, ವಿಭಿನ್ನ ಸಲಹೆಗಳು ಮತ್ತು ಬೇಡಿಕೆಗಳು ಕೇಂದ್ರ ಸರ್ಕಾರದ ಮುಂದೆ ಬರಲಾರಂಭಿಸಿದವು. ಇದನ್ನು ಕೇಳಲಾಯಿತು, ಭಾರತ ಸರ್ಕಾರವು ಎಲ್ಲವನ್ನೂ ಏಕೆ ನಿರ್ಧರಿಸುತ್ತಿದೆ? ರಾಜ್ಯ ಸರ್ಕಾರಗಳಿಗೆ ಏಕೆ ಅವಕಾಶ ನೀಡುತ್ತಿಲ್ಲ? ಲಾಕ್ಡೌನ್ ಸಡಿಲಿಕೆಯನ್ನು ನಿರ್ಧರಿಸುವಲ್ಲಿ ರಾಜ್ಯ ಸರ್ಕಾರಗಳಿಗೆ ಏಕೆ ಅವಕಾಶ ನೀಡುತ್ತಿಲ್ಲ? ಒಂದು ಸೂತ್ರದ ಗಾತ್ರವು ಏಲ್ಲಡೆಗೆ ಹೊಂದಿಕೆಯಾಗುವುದಿಲ್ಲ ಎಂಬಂತಹ ಪ್ರತಿಕ್ರಿಯೆಗಳನ್ನು ಸಹ ಮಾಡಲಾಗಿದೆ. ಆರೋಗ್ಯವು ಪ್ರಾಥಮಿಕವಾಗಿ ಸಂವಿಧಾನದ ಅಡಿಯಲ್ಲಿ ರಾಜ್ಯ ವಿಷಯವಾಗಿರುವುದರಿಂದ, ರಾಜ್ಯಗಳು ಅಗತ್ಯ ಕಾರ್ಯಗಳನ್ನು ನಿರ್ವಹಿಸುವುದು ಉತ್ತಮ ಎಂದು ವಾದಿಸಲಾಯಿತು. ಆದ್ದರಿಂದ, ದಿಕ್ಕಿನಲ್ಲಿ ಒಂದು ಆರಂಭವನ್ನು ಮಾಡಲಾಯಿತು. ಭಾರತ ಸರ್ಕಾರವು ಸಮಗ್ರ ಮಾರ್ಗಸೂಚಿಯನ್ನು ರೂಪಿಸಿ ರಾಜ್ಯಗಳಿಗೆ ತಮ್ಮ ಅಗತ್ಯತೆ ಮತ್ತು ಅನುಕೂಲಕ್ಕೆ ಅನುಗುಣವಾಗಿ ಕೆಲಸ ಮಾಡುವಂತೆ ನೀಡಿತು. ಸ್ಥಳೀಯ ಮಟ್ಟದಲ್ಲಿ ಕೊರೋನಾ ಕರ್ಫ್ಯೂ ಹೇರುವುದು, ಸೂಕ್ಷ್ಮ ಧಾರಕ ವಲಯಗಳ ರಚನೆ ಮತ್ತು ಚಿಕಿತ್ಸೆಯ ವ್ಯವಸ್ಥೆ ಮಾಡುವ ಬಗ್ಗೆ ರಾಜ್ಯಗಳ ಬೇಡಿಕೆಗಳನ್ನು ಭಾರತ ಸರ್ಕಾರ ಒಪ್ಪಿಕೊಂಡಿತು.

ಸ್ನೇಹಿತರೇ,

ಜನವರಿ 16 ರಿಂದ ವರ್ಷದ ಏಪ್ರಿಲ್ ಅಂತ್ಯದವರೆಗೆ ಭಾರತದ ಲಸಿಕೆ ಕಾರ್ಯಕ್ರಮವು ಮುಖ್ಯವಾಗಿ ಕೇಂದ್ರ ಸರ್ಕಾರದ ಮೇಲ್ವಿಚಾರಣೆಯಲ್ಲಿ ನಡೆಯಿತು. ಎಲ್ಲರಿಗೂ ಉಚಿತ ಲಸಿಕೆಗಳನ್ನು ನೀಡುವ ದಿಕ್ಕಿನಲ್ಲಿ ದೇಶ ಸಾಗುತ್ತಿತ್ತು. ದೇಶದ ನಾಗರಿಕರು ಸಹ ಶಿಸ್ತು ಕಾಪಾಡಿಕೊಳ್ಳುತ್ತಿದ್ದರು ಮತ್ತು ಲಸಿಕೆ ಪಡೆಯುತ್ತಿದ್ದರು. ಏತನ್ಮಧ್ಯೆ, ಲಸಿಕೆ ಕಾರ್ಯವನ್ನು ಡಿ-ಕೇಂದ್ರೀಕೃತಗೊಳಿಸಬೇಕು ಮತ್ತು ರಾಜ್ಯಗಳಿಗೆ ಬಿಡಬೇಕು ಎಂದು ಹಲವಾರು ರಾಜ್ಯ ಸರ್ಕಾರಗಳು ಮತ್ತೆ ಹೇಳಿದವು. ಹಲವಾರು ಧ್ವನಿಗಳು ಎದ್ದವು. ವ್ಯಾಕ್ಸಿನೇಷನ್ಗಾಗಿ ವಯಸ್ಸಿನ ಗುಂಪುಗಳನ್ನು ಏಕೆ ರಚಿಸಲಾಗಿದೆ? ಮತ್ತೊಂದೆಡೆ, ಯಾರಾದರೂ ವಯೋಮಿತಿಯನ್ನು ಕೇಂದ್ರ ಸರ್ಕಾರ ಏಕೆ ನಿರ್ಧರಿಸಬೇಕು ಎಂದು ಹೇಳಿದರು. ವಯಸ್ಸಾದವರಿಗೆ ಮೊದಲೇ ಲಸಿಕೆ ನೀಡಲಾಗುತ್ತಿದೆ ಎಂದು ಕೆಲವು ಧ್ವನಿಗಳು ಇದ್ದವು. ವಿವಿಧ ಒತ್ತಡಗಳನ್ನು ಸಹ ರಚಿಸಲಾಯಿತು ಮತ್ತು ದೇಶದ ಮಾಧ್ಯಮಗಳ ಒಂದು ಭಾಗವು ಅದನ್ನು ಅಭಿಯಾನದ ರೂಪದಲ್ಲಿ ನಡೆಸಿತು.

ಸ್ನೇಹಿತರೇ,

ಹೆಚ್ಚಿನ ಚರ್ಚೆಯ ನಂತರ, ರಾಜ್ಯ ಸರ್ಕಾರಗಳು ಸಹ ಅವರ ಪರವಾಗಿ ಪ್ರಯತ್ನಗಳನ್ನು ಮಾಡಲು ಬಯಸಿದರೆ, ಭಾರತ ಸರ್ಕಾರ ಏಕೆ ಆಕ್ಷೇಪಿಸಬೇಕು? ರಾಜ್ಯಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಅವರ ಮನವಿಯನ್ನು ಪರಿಗಣಿಸಿ, ಜನವರಿ 16 ರಿಂದ ಪ್ರಯೋಗವಾಗಿ ನಡೆಯುತ್ತಿರುವ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ರಾಜ್ಯಗಳು ಬೇಡಿಕೆಯನ್ನು ಮಾಡುತ್ತಿರುವಾಗ ಮತ್ತು ಅವರಿಗೆ ಉತ್ಸಾಹವಿದೆ ಎಂದು ನಾವು ಭಾವಿಸಿದ್ದೇವೆ, ಆದ್ದರಿಂದ ಶೇಕಡಾ 25 ರಷ್ಟು ಕೆಲಸವನ್ನು ಅವರಿಗೆ ನೀಡೋಣ. ಇದರ ಫಲವಾಗಿ, ಶೇಕಡಾ 25 ರಷ್ಟು ಕೆಲಸವನ್ನು ಮೇ 1 ರಿಂದ ರಾಜ್ಯಗಳಿಗೆ ಹಸ್ತಾಂತರಿಸಲಾಯಿತು ಮತ್ತು ಅದನ್ನು ಪೂರ್ಣಗೊಳಿಸಲು ಅವರು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಗಳನ್ನು ರಾಜ್ಯಗಳು ಮಾಡಿದರು.

ಕ್ರಮೇಣ, ಅಂತಹ ಮಹತ್ವದ ಕಾರ್ಯದಲ್ಲಿನ ತೊಂದರೆಗಳನ್ನು ರಾಜ್ಯಗಳು ಅರಿತುಕೊಳ್ಳಲು ಪ್ರಾರಂಭಿಸಿದರು. ಇಡೀ ಜಗತ್ತಿನಲ್ಲಿ ಲಸಿಕೆಯ ವಾಸ್ತವ ಸ್ಥಿತಿಯನ್ನು ರಾಜ್ಯಗಳು ಅರಿತುಕೊಂಡವು. ಒಂದು ಕಡೆ ಮೇ ತಿಂಗಳಲ್ಲಿ ಎರಡನೇ ಅಲೆ ಇರುವುದನ್ನು ನಾವು ಗಮನಿಸಿದ್ದೇವೆ, ಮತ್ತೊಂದೆಡೆ ಲಸಿಕೆಗಾಗಿ ಜನರಲ್ಲಿ ಆಸಕ್ತಿ ಹೆಚ್ಚುತ್ತಿದೆ ಮತ್ತು ರಾಜ್ಯ ಸರ್ಕಾರಗಳು ತೊಂದರೆಗಳನ್ನು ಅನುಭವಿಸ ತೊಡಗಿದವು. ಮೇ ತಿಂಗಳಲ್ಲಿ ಎರಡು ವಾರಗಳು ಕಳೆದಂತೆ, ಕೆಲವು ರಾಜ್ಯಗಳು ಹಿಂದಿನ ವ್ಯವಸ್ಥೆಯು ಉತ್ತಮವಾಗಿದೆ ಎಂದು ಬಹಿರಂಗವಾಗಿ ಹೇಳಲು ಪ್ರಾರಂಭಿಸಿತು. ಲಸಿಕೆ ಅನ್ನು ರಾಜ್ಯಗಳಿಗೆ ವಹಿಸಬೇಕೆಂದು ಪ್ರತಿಪಾದಿಸುತ್ತಿದ್ದವರು ಕೂಡ ತಮ್ಮ ಅಭಿಪ್ರಾಯಗಳನ್ನು ಬದಲಾಯಿಸಲು ಪ್ರಾರಂಭಿಸಿದರು. ಸಮಯಕ್ಕೆ ಮರುಪರಿಶೀಲಿಸುವ ಬೇಡಿಕೆಯೊಂದಿಗೆ ರಾಜ್ಯಗಳು ಮತ್ತೆ ಮುಂದೆ ಬಂದಿರುವುದು ಒಳ್ಳೆಯದು. ರಾಜ್ಯಗಳ ಬೇಡಿಕೆಯ ಮೇರೆಗೆ, ದೇಶವಾಸಿಗಳು ತೊಂದರೆ ಅನುಭವಿಸಬಾರದು ಮತ್ತು ಅವರ ಲಸಿಕೆ ಸರಾಗವಾಗಿ ಮುಂದುವರಿಯಬೇಕು ಎಂದು ನಾವು ಭಾವಿಸಿದ್ದೇವೆ, ಆದ್ದರಿಂದ ನಾವು ಮೇ 1 ಮೊದಲು ಜಾರಿಯಲ್ಲಿದ್ದ ಹಳೆಯ ವ್ಯವಸ್ಥೆಯನ್ನು ಅಂದರೆ ಜನವರಿ 16 ರಿಂದ ಏಪ್ರಿಲ್ ಅಂತ್ಯದವರೆಗೆ ಇದ್ದ ಹಳೆಯ ವ್ಯವಸ್ಥೆಯನ್ನು ಪುನಃ ಜಾರಿಗೆ ತರಲು ನಿರ್ಧರಿಸಿದ್ದೇವೆ.

ಸ್ನೇಹಿತರೇ,

ರಾಜ್ಯಗಳೊಂದಿಗೆ ಲಸಿಕೆ ಹಾಕುವಿಕೆಗೆ ಸಂಬಂಧಿಸಿದ ಶೇಕಡಾ 25 ರಷ್ಟು ಕೆಲಸದ ಜವಾಬ್ದಾರಿಯನ್ನು ಭಾರತ ಸರ್ಕಾರವೂ ಕೂಡಾ ವಹಿಸಲಿದೆ ಎಂದು ಇಂದು ನಿರ್ಧರಿಸಲಾಗಿದೆ. ಮುಂದಿನ ಎರಡು ವಾರಗಳಲ್ಲಿ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಎರಡು ವಾರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಹೊಸ ಮಾರ್ಗಸೂಚಿಗಳ ಪ್ರಕಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತವೆ. ಕಾಕತಾಳೀಯವಾಗಿ, ಎರಡು ವಾರಗಳ ನಂತರ, ಅಂತರರಾಷ್ಟ್ರೀಯ ಯೋಗ ದಿನವು, ಜೂನ್ 21 ರಂದು ಬರುತ್ತದೆ. ಜೂನ್ 21 ರಿಂದ ನಂತರ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆಗಳನ್ನು ನೀಡಲು ಭಾರತ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಲಸಿಕೆ ನೀಡುತ್ತದೆ. ಭಾರತ ಸರ್ಕಾರವೇ ಲಸಿಕೆ ಉತ್ಪಾದಕರಿಂದ ಒಟ್ಟು ಲಸಿಕೆ ಉತ್ಪಾದನೆಯಲ್ಲಿ ಶೇ 75 ರಷ್ಟು ಖರೀದಿಸಿ ಅದನ್ನು ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ನೀಡಲಿದೆ. ಅಂದರೆ, ದೇಶದ ಯಾವುದೇ ರಾಜ್ಯ ಸರ್ಕಾರವು ಲಸಿಕೆಗಾಗಿ ಏನನ್ನೂ ಖರ್ಚು ಮಾಡಬೇಕಾಗಿಲ್ಲ. ಇಲ್ಲಿಯವರೆಗೆ, ದೇಶದ ಕೋಟಿ ಜನರಿಗೆ ಉಚಿತ ಲಸಿಕೆಗಳು ದೊರೆತಿವೆ.

ಈಗ, ಇನ್ನುಮುಂದೆ 18 ವರ್ಷ ವಯಸ್ಸಿನ ಜನರು ಸಹ ಅದರ ಭಾಗವಾಗುತ್ತಾರೆ. ಮೂಲಕ ಭಾರತ ಸರ್ಕಾರ ಮಾತ್ರ ಎಲ್ಲಾ ದೇಶವಾಸಿಗಳಿಗೆ ಉಚಿತ ಲಸಿಕೆಗಳನ್ನು ನೀಡುತ್ತದೆ. ಭಾರತ ಸರ್ಕಾರದ ಅಭಿಯಾನದಲ್ಲಿ ಸಂಪೂರ್ಣ ಉಚಿತ ಸಲಿಕೆ ಇರುತ್ತದೆ , ಅದು ಬಡವರಾಗಲಿ, ಕೆಳ ಮಧ್ಯಮ ವರ್ಗದವರಾಗಲಿ, ಮಧ್ಯಮ ವರ್ಗದವರಾಗಲಿ, ಅಥವಾ ಮೇಲ್ವರ್ಗದವರಾಗಲಿ, ಉಚಿತ ಲಸಿಕೆಯನ್ನು ಎಲ್ಲರಿಗೂ ನೀಡಲಾಗುತ್ತದೆ. ಲಸಿಕೆ ಉಚಿತವಾಗಿ ಪಡೆಯಲು ಬಯಸದ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಲು ಬಯಸುವವರನ್ನೂ ಸಹ ನೋಡಿಕೊಳ್ಳಲಾಗಿದೆ. ದೇಶದಲ್ಲಿ 25 ಪ್ರತಿಶತದಷ್ಟು ಲಸಿಕೆ ಸಂಗ್ರಹಿಸುವ ಖಾಸಗೀಕರಣ ವಲಯದ ಆಸ್ಪತ್ರೆಗಳ ವ್ಯವಸ್ಥೆ ಅದೇ ರೀತಿಯಲ್ಲಿ ಮುಂದುವರಿಯಲಿದೆ. ಖಾಸಗಿ ಆಸ್ಪತ್ರೆಗಳು ಲಸಿಕೆಯ ನಿಗದಿತ ಬೆಲೆಯ ನಂತರ ಒಂದೇ ಪ್ರಮಾಣಕ್ಕೆ ( ಡೋಸ್ಗೆ) ಗರಿಷ್ಠ 150 ರೂ.ಗಳ ಸೇವಾ ಶುಲ್ಕವನ್ನು ವಿಧಿಸಬಹುದು. ಇದರ ಮೇಲ್ವಿಚಾರಣೆಯ ಸಂಪೂರ್ಣ ಕಾರ್ಯಹೊಣೆಗಾರಿಕೆಯು ರಾಜ್ಯ ಸರ್ಕಾರಗಳ ಬಳಿ ಇರುತ್ತದೆ.

ಸ್ನೇಹಿತರೇ,

ನಮ್ಮ ಧರ್ಮಗ್ರಂಥಗಳಲ್ಲಿ प्राप्य आपदं व्यथते, उद्योगम् अनु इच्छति प्रमत्त प्रमत्त ಇದನ್ನು ಹೇಳಲಾಗಿದೆ, ಅಂದರೆ, ವಿಪತ್ತು ಸಂಭವಿಸಿದಾಗ ವಿಜಯಶಾಲಿಗಳು ಕೈಬಿಡುವುದಿಲ್ಲ, ಆದರೆ ಸಾಹಸ ಮಾಡಿ, ಶ್ರಮವಹಿಸಿ ಮತ್ತು ಪರಿಸ್ಥಿತಿಯ ಮೇಲೆ ಜಯಗಳಿಸುತ್ತಾರೆ. 130 ಕೋಟಿಗೂ ಹೆಚ್ಚು ಭಾರತೀಯರು ಪರಸ್ಪರ ಸಹಕಾರ ಮತ್ತು ಹಗಲು ರಾತ್ರಿ ಶ್ರಮದಿಂದ ಕೊರೋನಾ ವಿರುದ್ಧ ಹೋರಾಡಿದ್ದಾರೆ. ಭವಿಷ್ಯದಲ್ಲಿ, ನಮ್ಮ ಪ್ರಯತ್ನಗಳು ಮತ್ತು ಸಹಕಾರದಿಂದ ಮಾತ್ರ ನಮ್ಮ ಪ್ರಯಾಣವನ್ನು ಬಲಪಡಿಸಲಾಗುತ್ತದೆ. ನಾವು ಲಸಿಕೆಗಳನ್ನು ಪಡೆಯುವ ವೇಗವನ್ನು ಹೆಚ್ಚಿಸುತ್ತೇವೆ ಮತ್ತು ಲಸಿಕೆ ಅಭಿಯಾನಕ್ಕೆ ಮತ್ತಷ್ಟು ಪ್ರಚೋದನೆಯನ್ನು ನೀಡುತ್ತೇವೆ. ಭಾರತದಲ್ಲಿ ಲಸಿಕೆ ಅಭಿಯಾನ ವೇಗವು ಇಡೀ ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿದೆ, ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ವೇಗವಾಗಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ನಮ್ಮ ತಂತ್ರಜ್ಞಾನ ವೇದಿಕೆ ಕೋವಿನ್ ಅನ್ನು ಪ್ರಪಂಚದಾದ್ಯಂತ ಚರ್ಚಿಸಲಾಗುತ್ತಿದೆ. ಭಾರತದ ವೇದಿಕೆಯನ್ನು ಬಳಸಲು ಅನೇಕ ದೇಶಗಳು ಆಸಕ್ತಿ ತೋರಿಸಿವೆ. ಲಸಿಕೆಯ ಪ್ರತಿ ಡೋಸ್ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ನಾವೆಲ್ಲರೂ ನೋಡುತ್ತಿದ್ದೇವೆಕೇಂದ್ರ ಸರ್ಕಾರವು ವ್ಯವಸ್ಥೆಯನ್ನು ಮಾಡಿದ್ದು, ಪ್ರತಿ ರಾಜ್ಯಕ್ಕೆ ಕೆಲವು ವಾರಗಳ ಮುಂಚಿತವಾಗಿ ತಿಳಿಸಲಾಗುವುದು ಮತ್ತು ಅದು ಯಾವಾಗ ಮತ್ತು ಎಷ್ಟು ಪ್ರಮಾಣವನ್ನು ಪಡೆಯಲಿದೆ ಎಂದು ತಿಳಿಸಲಾಗುವುದು. ಮಾನವೀಯತೆಯ ಪವಿತ್ರ ಕಾರ್ಯದಲ್ಲಿ, ವಾದಗಳು ಮತ್ತು ರಾಜಕೀಯ ಜಗಳಗಳಂತಹ ವಿಷಯಗಳನ್ನು ಯಾರೂ ಉತ್ತಮವಾಗಿ ಪರಿಗಣಿಸುವುದಿಲ್ಲ. ಲಸಿಕೆಗಳನ್ನು ಸಂಪೂರ್ಣ ಶಿಸ್ತಿನಿಂದ ನಿರ್ವಹಿಸಬೇಕು ಎಂಬುದು ಪ್ರತಿ ಸರ್ಕಾರ, ಸಾರ್ವಜನಿಕ ಪ್ರತಿನಿಧಿ ಮತ್ತು ಆಡಳಿತದ ಸಾಮೂಹಿಕ ಜವಾಬ್ದಾರಿಯಾಗಿದ್ದು, ಲಸಿಕೆಗಳ ಲಭ್ಯತೆಗೆ ಅನುಗುಣವಾಗಿ ನಾವು ದೇಶದ ಪ್ರತಿಯೊಬ್ಬ ನಾಗರಿಕರನ್ನು ತಲುಪಬಹುದು.

ಆತ್ಮೀಯ ದೇಶವಾಸಿಗಳೇ,

ಲಸಿಕೆ ಹೊರತುಪಡಿಸಿ, ಮತ್ತೊಂದು ಪ್ರಮುಖ ನಿರ್ಧಾರದ ಬಗ್ಗೆ ನಾನು ಇಂದು ನಿಮಗೆ ತಿಳಿಸಲು ಬಯಸುತ್ತೇನೆ. ಕಳೆದ ವರ್ಷ, ಕೊರೋನಾದಿಂದಾಗಿ ಲಾಕ್ಡೌನ್ ವಿಧಿಸಬೇಕಾದಾಗ, ನಮ್ಮ ದೇಶವು 80 ಕೋಟಿಗೂ ಹೆಚ್ಚು ದೇಶವಾಸಿಗಳಿಗೆ ಎಂಟು ತಿಂಗಳ ಕಾಲ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಉಚಿತ ಪಡಿತರವನ್ನು ವ್ಯವಸ್ಥೆಗೊಳಿಸಲಾಗಿತ್ತು. ಎರಡನೇ ಅಲೆಯಿಂದಾಗಿ ವರ್ಷ ಮೇ ಮತ್ತು ಜೂನ್ ವರೆಗೆ ಯೋಜನೆಯನ್ನು ವಿಸ್ತರಿಸಲಾಯಿತು. ಇಂದು ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ  ಯೋಜನೆಯನ್ನು ಈಗ ಬರುವ  ದೀಪಾವಳಿ ಹಬ್ಬದವರೆಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ, ಸರ್ಕಾರವು ಬಡವರ ಪಾಲುದಾರನಾಗಿ ಅವರ ಪ್ರತಿಯೊಂದು ಅಗತ್ಯಕ್ಕೂ ಜೊತೆಯಾಗಿ ನಿಂತಿದೆ. ಅಂದರೆ ನವೆಂಬರ್ ವರೆಗೆ ಪ್ರತಿ ತಿಂಗಳು 80 ಕೋಟಿಗೂ ಹೆಚ್ಚು ದೇಶವಾಸಿಗಳಿಗೆ ಉಚಿತ ಆಹಾರ ಧಾನ್ಯಗಳು ನಿಗದಿತ ಪ್ರಮಾಣದಲ್ಲಿ ಲಭ್ಯವಿರುತ್ತವೆ. ಪ್ರಯತ್ನದ ಉದ್ದೇಶವೆಂದರೆ ನಮ್ಮ ಬಡ ಸಹೋದರ-ಸಹೋದರಿಯರಲ್ಲಿ ಯಾರೂ, ಹಾಗೂ ಅವರ ಕುಟುಂಬಗಳು ಹಸಿವಿನಿಂದ ಮಲಗಬಾರದು ಎಂಬುದಾಗಿದೆ.

ಸ್ನೇಹಿತರೇ,

ಪ್ರಯತ್ನಗಳ ಮಧ್ಯೆ, ಅನೇಕ ಭಾಗಗಳಿಂದ ಲಸಿಕೆಯ ಬಗ್ಗೆ ಗೊಂದಲ ಮತ್ತು ವದಂತಿಗಳು ಕಳವಳವನ್ನು ಹೆಚ್ಚಿಸುತ್ತವೆ. ಕಾಳಜಿಯನ್ನು ನಾನು ನಿಮಗೆ ವ್ಯಕ್ತಪಡಿಸಲು ಬಯಸುತ್ತೇನೆ. ಭಾರತದಲ್ಲಿ ಲಸಿಕೆಗಳ ಕೆಲಸ ಪ್ರಾರಂಭವಾದಾಗಿನಿಂದ, ಕೆಲವು ಜನರು ಮಾಡಿದ ಪ್ರತಿಕ್ರಿಯೆಗಳು ಜನಸಾಮಾನ್ಯರ ಮನಸ್ಸಿನಲ್ಲಿ ಅನುಮಾನಗಳನ್ನು ಸೃಷ್ಟಿಸಿದವು. ಭಾರತದ ಲಸಿಕೆ ತಯಾರಕರನ್ನು ನಿರಾಶೆಗೊಳಿಸಲು ಮತ್ತು ಅನೇಕ ಅಡೆತಡೆಗಳನ್ನು ಸೃಷ್ಟಿಸಲು ಸಹ ಪ್ರಯತ್ನಿಸಲಾಯಿತು. ಭಾರತದ ಲಸಿಕೆ ಬಂದಾಗ, ಅನೇಕ ವಿಧಾನಗಳ ಮೂಲಕ ಅನುಮಾನಗಳು ಮತ್ತು ಆತಂಕಗಳು ಮತ್ತಷ್ಟು ಹೆಚ್ಚಾದವು. ಲಸಿಕೆ ಬಳಕೆ ವಿರುದ್ಧ ವಿವಿಧ ವಾದಗಳನ್ನು ಪ್ರಚಾರ ಮಾಡಲಾಯಿತು. ಇಡೀ ದೇಶವೇ ಅವರನ್ನು ಗಮನಿಸುತ್ತಿದೆ. ಲಸಿಕೆ ಬಗ್ಗೆ ಆತಂಕ ಮೂಡಿಸುವ ಮತ್ತು ವದಂತಿಗಳನ್ನು ಹರಡುವ ಮಂದಿ ನಿಜವಾಗಿಯೂ ಮುಗ್ಧ ಸಹೋದರ ಸಹೋದರಿಯರ ಜೀವನದೊಂದಿಗೆ ಆಡುತ್ತಿದ್ದಾರೆ.

ಅಂತಹ ವದಂತಿಗಳ ಬಗ್ಗೆ ಪ್ರತಿಯೊಬ್ಬರು ಜಾಗರೂಕರಾಗಿರಬೇಕು. ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಸಹಕರಿಸಬೇಕೆಂದು ಸಮಾಜದ ಪ್ರಬುದ್ಧ ಜನರು ಮತ್ತು ಯುವಜನರೆಲ್ಲರಿಗೂ ನಾನು ವಿನಂತಿಸುತ್ತೇನೆ. ಇದೀಗ ಕೊರೋನಾ ಕರ್ಫ್ಯೂ ಅನೇಕ ಸ್ಥಳಗಳಲ್ಲಿ ಸಡಿಲಗೊಳ್ಳುತ್ತಿದೆ, ಆದರೆ ಕೊರೋನಾ ಕಣ್ಮರೆಯಾಯಿತು ಎಂದು ಇದರ ಅರ್ಥವಲ್ಲ. ನಾವು ಜಾಗರೂಕರಾಗಿರಬೇಕು ಮತ್ತು ಕೊರೋನಾದಿಂದ ನಮ್ಮನ್ನು ತಡೆಗಟ್ಟುವ ನಿಯಮಗಳನ್ನು ನಾವು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೊರೋನಾ ವಿರುದ್ಧದ ಯುದ್ಧದಲ್ಲಿ ನಾವೆಲ್ಲರೂ ಗೆಲ್ಲುತ್ತೇವೆ, ಭಾರತ ಗೆಲ್ಲುತ್ತದೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಶುಭಾಶಯಗಳೊಂದಿಗೆ, ಎಲ್ಲಾ ದೇಶವಾಸಿಗಳಿಗೆ ತುಂಬಾ ಧನ್ಯವಾದಗಳು!

ಹಕ್ಕುತ್ಯಾಗ: ಇದು ಪ್ರಧಾನಮಂತ್ರಿಯ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿ ಭಾಷೆಯಲ್ಲಿ ಭಾಷಣ ಮಾಡಲಾಗಿದೆ.

***



(Release ID: 1725519) Visitor Counter : 310