ನೀತಿ ಆಯೋಗ
2021ರ ಜೂನ್ 3ರಂದು ʻ2020-21ನೇ ಸಾಲಿನ ಭಾರತದ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ಸೂಚ್ಯಂಕ ಮತ್ತು ಡ್ಯಾಶ್‌ಬೋರ್ಡ್ʼ ಬಿಡುಗಡೆ ಮಾಡಲಿರುವ ನೀತಿ ಆಯೋಗ
Posted On:
02 JUN 2021 11:45AM by PIB Bengaluru
ಭಾರತದ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್ಡಿಜಿ) ಸೂಚ್ಯಂಕದ ಮೂರನೇ ನಿರೂಪಣೆಯನ್ನು ನೀತಿ ಆಯೋಗವು 2021ರ ಜೂನ್ 3ರಂದು ಬಿಡುಗಡೆ ಮಾಡಲಿದೆ. 2018ರ ಡಿಸೆಂಬರ್ನಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾದ ಈ ಸೂಚ್ಯಂಕವು ದೇಶದ ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವ ಪ್ರಾಥಮಿಕ ಸಾಧನವಾಗಿದೆ. ಜೊತೆಗೆ, ಜಾಗತಿಕ ಗುರಿಗಳ ಸಾಧನೆಯನ್ನು ಆಧರಿಸಿ ಶ್ರೇಯಾಂಕ ನೀಡುವ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ಸ್ಪರ್ಧಾತ್ಮಕತೆಯನ್ನೂ ಈ ಸೂಚ್ಯಂಕ ಬೆಳೆಸಿದೆ. ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಅವರು ನೀತಿ ಆಯೋಗದ ಸದಸ್ಯ ಡಾ. ವಿನೋದ್ ಪಾಲ್, ನೀತಿ ಆಯೋಗದ ಸಿಇಒ ಶ್ರೀ ಅಮಿತಾಬ್ ಕಾಂತ್ ಮತ್ತು ನೀತಿ ಆಯೋಗದ ಸಲಹೆಗಾರ (ಎಸ್ಡಿಜಿ) ಶ್ರೀಮತಿ ಸನ್ಯುಕ್ತಾ ಸಮದ್ದಾರ್ ಅವರ ಸಮ್ಮುಖದಲ್ಲಿ ʻಎಸ್ಡಿಜಿ ಇಂಡಿಯಾ ಸೂಚ್ಯಂಕ ಡ್ಯಾಶ್ಬೋರ್ಡ್ 2020-21ʼಗೆ ಚಾಲನೆ ನೀಡಲಿದ್ದಾರೆ. ನೀತಿ ಆಯೋಗವು ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಈ ಸೂಚ್ಯಂಕವನ್ನು ಪ್ರಾಥಮಿಕ ಮಧ್ಯಸ್ಥಗಾರರಾದ - ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು; ಭಾರತದಲ್ಲಿರುವ ವಿಶ್ವ ಸಂಸ್ಥೆಯ ಏಜೆನ್ಸಿಗಳು, ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (ಎಂಒಎಸ್ಪಿಐ) ಮತ್ತು ಪ್ರಮುಖ ಕೇಂದ್ರ ಸಚಿವಾಲಯಗಳ ಜೊತೆ ವ್ಯಾಪಕ ಸಮಾಲೋಚನೆ ಬಳಿಕ ಸಿದ್ಧಪಡಿಸಲಾಗಿದೆ.
ಎಸ್ಡಿಜಿ ಇಂಡಿಯಾ ಸೂಚ್ಯಂಕ ಮತ್ತು ಡ್ಯಾಶ್ಬೋರ್ಡ್, 2020-21: ದಶಕದ ಕಾರ್ಯಯೋಜನೆಯಲ್ಲಿ ಪಾಲುದಾರಿಕೆ
ಭಾರತದಲ್ಲಿನ ವಿಶ್ವಸಂಸ್ಥೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಈ ಸೂಚ್ಯಂಕವು ರಾಷ್ಟ್ರೀಯ ಮತ್ತು ಉಪ-ರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಗುರಿಗಳು ಮತ್ತು ಧ್ಯೇಯೋದ್ದೇಶಗಳ ಸಾಧನೆಯಲ್ಲಿ ದೇಶದ ಪ್ರಗತಿಯ ಹಾದಿಯನ್ನು ಮಾಪನ ಮಾಡುತ್ತದೆ. ಅಲ್ಲದೆ, ಸುಸ್ಥಿರತೆ, ಸ್ಥಿತಿಸ್ಥಾಪಕತ್ವ ಮತ್ತು ಪಾಲುದಾರಿಕೆಯ ಸಂದೇಶಗಳನ್ನು ಪ್ರಚಾರ ಮಾಡುವ ಸಮರ್ಥ ಸಾಧನವಾಗಿ ಇದು ಯಶಸ್ಸು ಕಂಡಿದೆ. 2030ರ ಕಾರ್ಯಸೂಚಿಯನ್ನು ಸಾಧಿಸುವ ನಿಟ್ಟಿನಲ್ಲಿ ಮೂರನೇ ಒಂದು ಭಾಗದಷ್ಟು ದಾರಿಯನ್ನು ನಾವು ಕ್ರಮಿಸಿರುವ ಹಿನ್ನಲೆಯಲ್ಲಿ ಈ ಸೂಚ್ಯಂಕ ವರದಿಯ ಆವೃತ್ತಿಯು ಪಾಲುದಾರಿಕೆಯ ಮಹತ್ವವದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಈ ವರದಿಗೆ ʻಎಸ್ಡಿಜಿ ಇಂಡಿಯಾ ಸೂಚ್ಯಂಕ ಮತ್ತು ಡ್ಯಾಶ್ಬೋರ್ಡ್, 2020-21: ದಶಕದ ಕಾರ್ಯಯೋಜನೆಯಲ್ಲಿ ಪಾಲುದಾರಿಕೆʼ ಎಂಬ ಶೀರ್ಷಿಕೆ ನೀಡಲಾಗಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯಕ್ಷಮತೆಗೆ ಮಾನದಂಡ ನಿಗದಿಪಡಿಸುವುದು ಮತ್ತು ಈ ನಿಟ್ಟಿನಲ್ಲಿ ಪ್ರಗತಿಯನ್ನು ನಿರಂತರ ಅಳೆಯುವುದು; ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ʻಎಸ್ಡಿಜಿʼಗೆ ಸಂಬಂಧಿಸಿದ ತಾಜಾ ದತ್ತಾಂಶ ಸದಾ ಲಭ್ಯವಾಗುವಂತೆ ಮಾಡುವುದು ಅತ್ಯಗತ್ಯವಾಗಿದೆ. ಇದಕ್ಕಾಗಿ ಈ ಪ್ರಮುಖ ಸಾಧನವನ್ನು ಆವೃತ್ತಿಯಿಂದ ಆವೃತ್ತಿಗೆ ಮತ್ತಷ್ಟು ಪರಿಷ್ಕರಿಸುವ ಮತ್ತು ಸುಧಾರಿಸುವ ಉಪಕ್ರಮವನ್ನೂ ಕೈಗೊಳ್ಳಲಾಗಿದೆ. 2018-19ರಲ್ಲಿ ಮೊದಲ ಆವೃತ್ತಿಯಲ್ಲಿ 13 ಗುರಿಗಳು, 39 ಲಕ್ಷ್ಯಗಳು ಮತ್ತು 62 ಸೂಚಕಗಳನ್ನು ಹಾಗೂ ಎರಡನೇ ಆವೃತ್ತಿಯಲ್ಲಿ 17 ಗುರಿಗಳು, 54 ಲಕ್ಷ್ಯಗಳು ಮತ್ತು 100 ಸೂಚಕಗಳನ್ನು ಇದು ಒಳಗೊಂಡಿತ್ತು. ಮೂರನೇ ಆವೃತ್ತಿಯು 17 ಗುರಿಗಳು, 70 ಲಕ್ಷ್ಯಗಳು ಮತ್ತು 115 ಸೂಚಕಗಳನ್ನು ಒಳಗೊಂಡಿದೆ.
ವಿಧಾನ ಮತ್ತು ಪ್ರಕ್ರಿಯೆ
ʻಎಸ್ಡಿಜಿʼಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯಕ್ಷಮತೆಯನ್ನು ಅಳೆಯುವುದು ಮತ್ತು ಅವುಗಳಿಗೆ ಶ್ರೇಯಾಂಕ ನೀಡುವುದು; ಹೆಚ್ಚಿನ ಗಮನ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸುವಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೆರವು ನೀಡುವುದು; ಮತ್ತು ಅವುಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುವ ಪ್ರಧಾನ ಉದ್ದೇಶಗಳನ್ನು ಸೂಚ್ಯಂಕ ರಚನೆಯಲ್ಲಿ ಹೊಂದಲಾಗಿದೆ. ಮೊದಲ 16 ಗುರಿಗಳಿಗೆ ಸಂಬಂಧಿಸಿದ ಸೂಚಕಗಳ ದತ್ತಾಂಶ ಹಾಗೂ 17 ಲಕ್ಷ್ಯಗಳ ಗುಣಾತ್ಮಕ ಮೌಲ್ಯಮಾಪನವನ್ನು ಸೂಚ್ಯಂಕದ ಅಂದಾಜು ಆಧರಿಸಿದೆ. ಗುರಿ ನಿಗದಿ ಮತ್ತು ಮೌಲ್ಯಾಂಕ (ಸ್ಕೋರ್) ಸಾಮಾನ್ಯೀಕರಣದ ತಾಂತ್ರಿಕ ಪ್ರಕ್ರಿಯೆಯಲ್ಲಿ ಜಾಗತಿಕ ಮಟ್ಟದಲ್ಲಿ ನಿರ್ದಿಷ್ಟಪಡಿಸಲಾದ ಪ್ರಮಾಣಿತ ಕಾರ್ಯ ವಿಧಾನವನ್ನು ಅನುಸರಿಸಲಾಗುತ್ತದೆ. ಗುರಿ ನಿಗದಿ ಪ್ರಕ್ರಿಯೆಯು ಪ್ರತಿ ಸೂಚ್ಯಂಕದ ವಿಚಾರದಲ್ಲಿ ಗುರಿಯ ಸಾಧನೆ ಮತ್ತು ಸಾಗಬೇಕಿರುವ ದೂರವನ್ನು ಅಳೆಯಲು ಅನುವು ಮಾಡಿಕೊಟ್ಟರೆ; ಧನಾತ್ಮಕ ಮತ್ತು ನಕಾರಾತ್ಮಕ ಸೂಚಕಗಳ ಸಾಮಾನ್ಯೀಕರಣದ ಪ್ರಕ್ರಿಯೆಯು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಗುರಿಗಳ ವಿಚಾರದಲ್ಲಿ ಮೌಲ್ಯಾಂಖಗಳ ಹೋಲಿಕೆ ಹಾಗೂ ಅಂದಾಜಿಗೆ ಅನುವುಮಾಡಿಕೊಡುತ್ತದೆ. 2030ರ ಕಾರ್ಯಸೂಚಿಯ ಅವಿಭಾಜ್ಯ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಪ್ರತಿ ಗುರಿಗೆ ಸಮಾನ ಮೌಲ್ಯ ನಿಗದಿಪಡಿಸುವ ಮೂಲಕ ಪ್ರತಿಯೊಂದು ರಾಜ್ಯದ ಸಂಯೋಜಿತ ಮೌಲ್ಯಾಂಕವನ್ನು(ಸ್ಕೋರ್) ಪಡೆಯಲಾಗುತ್ತದೆ.
ʻಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯʼ (ಎಂಒಎಸ್ಪಿಐ), ಕೇಂದ್ರ ಸಚಿವಾಲಯಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಾಲುದಾರರ ಜೊತೆ ಸಮನ್ವಯ ಹಾಗೂ ವಿಸ್ತೃತ ಸಮಾಲೋಚನೆ ಬಳಿಕ ಸೂಚಕಗಳ ಆಯ್ಕೆಗೆ ಕೈಗೊಳ್ಳಲಾಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಲಾದ ಸೂಚಕಗಳ ಕರಡು ಪಟ್ಟಿಯಲ್ಲಿನ ಪ್ರತಿಕ್ರಿಯೆಗಳು ಮತ್ತು ಸಲಹೆಗಳ ಬಗ್ಗೆಯೂ ಆಯ್ಕೆ ಪ್ರಕ್ರಿಯೆ ವೇಳೆ ಮಾಹಿತಿ ನೀಡಲಾಗುತ್ತದೆ. ಈ ಸ್ಥಳೀಕರಣ ಸಾಧನದ ಅಗತ್ಯ ಪಾಲುದಾರರಾಗಿ ಮತ್ತು ಪ್ರೇಕ್ಷಕರಾಗಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೂಚ್ಯಂಕವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೀಡುವ ತಮ್ಮ ಸ್ಥಳೀಯ ಒಳನೋಟಗಳು ಮತ್ತು ವಾಸ್ತವಿಕ ಅನುಭವದೊಂದಿಗೆ ನೀಡುವ ಪ್ರಕ್ರಿಯೆಯು ಈ ಪ್ರಕ್ರಿಯೆಯನ್ನು ಶ್ರೀಮಂತಗೊಳಿಸುತ್ತದೆ.
ಈ ಸೂಚ್ಯಂಕವು ರಾಷ್ಟ್ರೀಯ ಆದ್ಯತೆಗಳಿಗೆ ಹೊಂದಿಕೊಂಡಂತೆ, 2030ರ ಕಾರ್ಯಸೂಚಿಯ ಅಡಿಯಲ್ಲಿ ಜಾಗತಿಕ ಗುರಿಗಳ ಸಮಗ್ರ ಸ್ವರೂಪದ ಅಭಿವ್ಯಕ್ತಿಯನ್ನು ಪ್ರತಿನಿಧಿಸುತ್ತದೆ. ಸೂಚ್ಯಂಕದ ನಮ್ಯ ಸ್ವರೂಪವು ಆರೋಗ್ಯ, ಶಿಕ್ಷಣ, ಲಿಂಗ, ಆರ್ಥಿಕ ಬೆಳವಣಿಗೆ, ಸಂಸ್ಥೆಗಳು, ಹವಾಮಾನ ಬದಲಾವಣೆ ಮತ್ತು ಪರಿಸರ ಸೇರಿದಂತೆ ಗುರಿಗಳ ವಿಸ್ತಾರವಾದ ಸ್ವರೂಪದ ಬಗ್ಗೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಗತಿಯನ್ನು ಅಳೆಯುವ ಸಿದ್ಧ ಸಾಧನವಾಗಿ ಮತ್ತು ನೀತಿ ಸಾಧನವಾಗಿ ಮಾರ್ಪಟ್ಟಿದೆ. ರಾಜ್ಯಗಳ ಕುರಿತಾಗಿ 15ನೇ ಹಣಕಾಸು ಆಯೋಗದ ಶಿಫಾರಸು ಮಾಹಿತಿಯಿಂದ ಹಿಡಿದು, ʻಇನ್ವೆಸ್ಟ್ ಇಂಡಿಯಾದ ಎಸ್ಡಿಜಿ ಹೂಡಿಕೆದಾರರ ನಕ್ಷೆʼ ವರೆಗೆ ದೇಶದಲ್ಲಿ ʻಎಸ್ಡಿಜಿ ಕಾರ್ಯಸೂಚಿʼಗೆ ಚಾಲ ಶಕ್ತಿಯಾಗಿಯೂ ಸೂಚ್ಯಂಕ ಯಶಸ್ವಿಯಾಗಿದೆ. ʻರಾಜ್ಯ ಎಸ್ಡಿಜಿ ದೂರಗಾಮಿ ಯೋಜನೆಗಳು, ರಾಜ್ಯ ಮತ್ತು ಜಿಲ್ಲಾ ಸೂಚ್ಯಂಕ ರಚನೆ, ಸಾಂಸ್ಥಿಕ ಪರಿಶೀಲನೆ ಮತ್ತು ಅನುಸರಣಾ ವ್ಯವಸ್ಥೆಯ ಅಭಿವೃದ್ಧಿಗೆ ಉತ್ತೇಜಿಸುವ ಮೂಲಕ ಈ ಸೂಚ್ಯಂಕವು ಎಸ್ಡಿಜಿ ಕಾರ್ಯಸೂಚಿ ಸಾಧನೆಯಲ್ಲಿ ನೆರವಾಗುತ್ತಿದೆ.
ರಾಷ್ಟ್ರೀಯ ಮತ್ತು ಉಪ-ರಾಷ್ಟ್ರೀಯ ಮಟ್ಟದಲ್ಲಿ ಎಸ್ಡಿಜಿಗಳ ಅಳವಡಿಕೆ ಮತ್ತು ಮೇಲ್ವಿಚಾರಣೆಯನ್ನು ಸಮನ್ವಯಗೊಳಿಸುವ ಧ್ಯೇಯವನ್ನು ನೀತಿ ಆಯೋಗ ಹೊಂದಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸ್ಥಳೀಯಗೊಳಿಸುವ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಸಾಕಾರಗೊಳಿಸಲು ಮತ್ತು ಎಸ್ಡಿಜಿ ಚೌಕಟ್ಟಿನ ಅಡಿಯಲ್ಲಿ ಪ್ರಗತಿಯ ಮೇಲ್ವಿಚಾರಣೆಯನ್ನು ಸುಧಾರಿಸಲು ನೀತಿ ಆಯೋಗವು ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಆಯೋಗದ ಈ ಪ್ರಯತ್ನಗಳನ್ನು ʻಭಾರತದ ಎಸ್ಡಿಜಿ ಸೂಚ್ಯಂಕ ಮತ್ತು ಡ್ಯಾಶ್ಬೋರ್ಡ್ʼ ಪ್ರತಿನಿಧಿಸುತ್ತದೆ.
***
(Release ID: 1723766)
Visitor Counter : 399