ಪ್ರಧಾನ ಮಂತ್ರಿಯವರ ಕಛೇರಿ

ಸಿಬಿಎಸ್‌ಇ ಹನ್ನೆರಡನೇ ತರಗತಿ ಬೋರ್ಡ್ ಪರೀಕ್ಷೆಗಳು ರದ್ದು


ಹನ್ನೆರಡನೇ ತರಗತಿಯ ಫಲಿತಾಂಶಗಳನ್ನು ಉತ್ತಮವಾಗಿ ವ್ಯಾಖ್ಯಾನಿಸಲಾದ ವಸ್ತುನಿಷ್ಠ ಮಾನದಂಡಗಳ ಪ್ರಕಾರ ಪ್ರಕಟಿಸಲಾಗುವುದು

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ: ಪ್ರಧಾನಿ

ನಮ್ಮ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ, ಇದರಲ್ಲಿ ಯಾವುದೇ ರಾಜಿ ಇಲ್ಲ: ಪ್ರಧಾನಿ

ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಆತಂಕವನ್ನು ಕೊನೆಗೊಳಿಸಬೇಕಾಗಿದೆ: ಪ್ರಧಾನಿ

ಇಂತಹ ಒತ್ತಡದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ಒತ್ತಾಯಿಸಬಾರದು: ಪ್ರಧಾನಿ

ಎಲ್ಲಾ ಪಾಲುದಾರರು ವಿದ್ಯಾರ್ಥಿಗಳ ಸಂವೇದನೆ ಅರ್ಥಮಾಡಿಕೊಳ್ಳಬೇಕಾಗಿದೆ: ಪ್ರಧಾನಿ

Posted On: 01 JUN 2021 7:27PM by PIB Bengaluru

ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಇಂದು ಸಿಬಿಎಸ್ಇಯ ಹನ್ನೆರಡನೇ ತರಗತಿಯ ಪರೀಕ್ಷೆಗಳಿಗೆ ಸಂಬಂಧಿಸಿದ ಪರಿಶೀಲನಾ ಸಭೆ ನಡೆಯಿತು. ಇದುವರೆಗೆ ನಡೆದ ವಿಶಾಲ ಮತ್ತು ವ್ಯಾಪಕವಾದ ಸಮಾಲೋಚನೆ ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಎಲ್ಲಾ ಪಾಲುದಾರರರಿಂದ ಪಡೆದ ಅಭಿಪ್ರಾಯಗಳ ಬಗ್ಗೆ ಅಧಿಕಾರಿಗಳು ವಿವರವಾದ ಪ್ರಸ್ತುತಿಯನ್ನು ನೀಡಿದರು.

https://static.pib.gov.in/WriteReadData/userfiles/image/IMG-20210601-WA00389U24.jpg

ಕೋವಿಡ್ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತ ಪರಿಸ್ಥಿತಿಗಳು ಮತ್ತು ವಿವಿಧ ಪಾಲುದಾರರಿಂದ ಪಡೆದ ಪ್ರತಿಕ್ರಿಯೆಯ ನಂತರ, ವರ್ಷ ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ರದ್ದುಪಡಿಸಲು ನಿರ್ಧರಿಸಲಾಯಿತು. ಸಿಬಿಎಸ್ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಕಾಲಮಿತಿಯಲ್ಲಿ ಉತ್ತಮವಾಗಿ ವ್ಯಾಖ್ಯಾನಿಸಲಾದ ವಸ್ತುನಿಷ್ಠ ಮಾನದಂಡಗಳ ಪ್ರಕಾರ ಸಂಕಲಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು. ಕೋವಿಡ್-19 ಸಾಂಕ್ರಾಮಿಕವು, ಶೈಕ್ಷಣಿಕ ಕ್ಯಾಲೆಂಡರ್ ಮೇಲೆ ಪರಿಣಾಮ ಬೀರಿದೆ ಮತ್ತು ಬೋರ್ಡ್ ಪರೀಕ್ಷೆಗಳ ವಿಷಯವು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಲ್ಲಿ ಅಪಾರ ಆತಂಕವನ್ನು ಉಂಟುಮಾಡಿದೆ, ಇದನ್ನು ಕೊನೆಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.

ಕೋವಿಡ್ ಪರಿಸ್ಥಿತಿ ದೇಶಾದ್ಯಂತ ಒಂದು ಜೀವಂತ ಪರಿಸ್ಥಿತಿಯಾಗಿದೆ ಎಂದು ಪ್ರಧಾನಿ ಹೇಳಿದರು. ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಗಳು ಕಡಿಮೆಯಾಗುತ್ತಿವೆ ಮತ್ತು ಕೆಲವು ರಾಜ್ಯಗಳು ಪರಿಣಾಮಕಾರಿಯಾದ ಸೂಕ್ಷ್ಮ ಕಂಟೈನ್ ಮೆಂಟ್ ಮೂಲಕ ಪರಿಸ್ಥಿತಿಯನ್ನು ನಿರ್ವಹಿಸುತ್ತಿವೆ, ಕೆಲವು ರಾಜ್ಯಗಳು ಇನ್ನೂ ಲಾಕ್ಡೌನ್ ನಲ್ಲಿಯೇ ಇವೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಸ್ವಾಭಾವಿಕವಾಗಿ ಆತಂಕಗೊಂಡಿದ್ದಾರೆ. ಇಂತಹ ಒತ್ತಡದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಹಾಜರಾಗುವಂತೆ ಒತ್ತಾಯಿಸಬಾರದು ಎಂದು ಪ್ರಧಾನಿ ಹೇಳಿದರು.

ನಮ್ಮ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ, ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಪ್ರಧಾನಿ ಒತ್ತಿ ಹೇಳಿದರು. ಇಂದಿನ ಪರಿಸ್ಥಿತಿಯಲ್ಲಿ, ಪರೀಕ್ಷೆಗಳು ನಮ್ಮ ಯುವಕರನ್ನು ಅಪಾಯಕ್ಕೆ ಸಿಲುಕಿಸಲು ಕಾರಣವಾಗಬಾರದು ಎಂದು ಅವರು ಹೇಳಿದರು.

ಎಲ್ಲಾ ಪಾಲುದಾರರು ವಿದ್ಯಾರ್ಥಿಗಳ ಸಂವೇದನೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು. ಫಲಿತಾಂಶಗಳನ್ನು ನ್ಯಾಯಯುತ ಮತ್ತು ಕಾಲಮಿತಿಯೊಳಗೆ ಉತ್ತಮವಾಗಿ ವ್ಯಾಖ್ಯಾನಿಸಲಾದ ಮಾನದಂಡಗಳಿಗೆ ಅನುಗುಣವಾಗಿ ಸಿದ್ಧಪಡಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿಶಾಲವಾದ ಸಮಾಲೋಚನಾ ಪ್ರಕ್ರಿಯೆಯ ಬಗ್ಗೆ ಉಲ್ಲೇಖಿಸಿದ ಪ್ರಧಾನಿಯವರು, ಭಾರತದ ಉದ್ದಗಲದ ಎಲ್ಲ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ವಿದ್ಯಾರ್ಥಿ ಸ್ನೇಹಿ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜ್ಯಗಳಿಗೆ ಅವರು ಧನ್ಯವಾದ ತಿಳಿಸಿದರು.

ಕಳೆದ ವರ್ಷದಂತೆ, ಕೆಲವು ವಿದ್ಯಾರ್ಥಿಗಳು ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬಯಸಿದರೆ, ಪರಿಸ್ಥಿತಿ ತಿಳಿಯಾದಾಗ ಅಂತಹ ಆಯ್ಕೆಯನ್ನು ಅವರಿಗೆ ಸಿಬಿಎಸ್ ಒದಗಿಸುತ್ತದೆ.

ಪ್ರಧಾನ ಮಂತ್ರಿಯವರು ಮೊದಲು 21/05/21 ರಂದು ಉನ್ನತ ಮಟ್ಟದ ಸಭೆ ನಡೆಸಿದ್ದರು, ಇದರಲ್ಲಿ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು. ನಂತರ ಕೇಂದ್ರ ರಕ್ಷಣಾ ಸಚಿವರ ಅಧ್ಯಕ್ಷತೆಯಲ್ಲಿ 23.05.2021 ರಂದು ನಡೆದ ಸಭೆಯಲ್ಲಿ ರಾಜ್ಯಗಳ ಶಿಕ್ಷಣ ಸಚಿವರು ಭಾಗವಹಿಸಿದ್ದರು. ಸಿಬಿಎಸ್ ಪರೀಕ್ಷೆಗಳನ್ನು ಕುರಿತ ಆಯ್ಕೆಗಳು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ಪ್ರತಿಕ್ರಿಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿತ್ತು.

ಇಂದಿನ ಸಭೆಯಲ್ಲಿ ಕೇಂದ್ರ ಗೃಹ ಸಚಿವರು, ರಕ್ಷಣಾ, ಹಣಕಾಸು, ವಾಣಿಜ್ಯ, ವಾರ್ತಾ ಮತ್ತು ಪ್ರಸಾರ, ಪೆಟ್ರೋಲಿಯಂ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಮತ್ತು ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ ಮತ್ತು ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು.

***(Release ID: 1723564) Visitor Counter : 262