ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಪಿಪಿಇ ಕಿಟ್ ಮತ್ತು ಮಾಸ್ಕ್ ಬಳಕೆ ಮಾಡಿ, ಸೋಂಕು ನಿವಾರಿಸಿ ಮತ್ತು ಮರುಬಳಕೆ ಮಾಡಿ; ವಜ್ರ ಕವಚಕ್ಕೆ ಧನ್ಯವಾದ

ಪಿಪಿಇ ಕಿಟ್, ಎನ್ 95 ಮಾಸ್ಕ್ ಅನ್ನು ಕೆಲವೇ ನಿಮಿಷಗಳಲ್ಲಿ ಸೋಂಕು ಮುಕ್ತಗೊಳಿಸಬಹುದು; ವೈರಾಣು ಪ್ರಮಾಣ ಶೇ.99.999 ತಗ್ಗಿಸಬಹುದು

“ಪರಿಸರಸ್ನೇಹಿ ಪರಿಹಾರ, ತಗ್ಗಲಿರುವ ಜೈವಿಕ ತ್ಯಾಜ್ಯ ಉತ್ಪಾದನೆ”

Posted On: 31 MAY 2021 1:46PM by PIB Bengaluru

 ‘ವಜ್ರ ಕವಚ’ ಹೆಸರಿನ ಉತ್ಪನ್ನ ನಮ್ಮ ಕೊರೊನಾ ಯೋಧರು ಬಳಕೆ ಮಾಡಿದ ಸಾಧನಗಳಲ್ಲಿ ವೈರಾಣುಗಳ ಅಂಶ ಇರುತ್ತದೆ ಎಂಬ ವಿಪತ್ತನ್ನು ದೂರ ಮಾಡುತ್ತದೆ. ಹೌದು ಇದು ಸೋಂಕು ನಿವಾರಕ ವ್ಯವಸ್ಥೆಯಾಗಿದ್ದು, ಇದನ್ನು ಮುಂಬೈ ಮೂಲದ ನವೋದ್ಯಮ ಇಂದ್ರ ವಾಟರ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದು ವೈಯಕ್ತಿಕ ರಕ್ಷಣಾ ಸಾಧನ(ಪಿಪಿಇ ಕಿಟ್), ಎನ್ 95 ಮಾಸ್ಕ್, ಕೋಟ್, ಕೈಗವಸು ಮತ್ತು ಗೌನ್ ಗಳಲ್ಲಿ ಸಾರ್ಸ್-ಸಿಒವಿ-2 ವೈರಾಣುವಿನಿಂದ ಎದುರಾಗಲಿರುವ ಸಂಭಾವ್ಯ ಸೋಂಕನ್ನು ದೂರಮಾಡುತ್ತದೆ. ಇದರಿಂದಾಗಿ ಆರೋಗ್ಯ ಕಾರ್ಯಕರ್ತರು ಬಳಸುವ ಪಿಪಿಇ ಮತ್ತು ಇತರ ಸಾಮಗ್ರಿಗಳನ್ನು ಪುನರ್ ಬಳಕೆ ಮಾಡಬಹುದಾಗಿದೆ. ಅಲ್ಲದೆ ಇದು ಅವರನ್ನು ಮಾತ್ರ ರಕ್ಷಿಸುವುದಿಲ್ಲ, ಜೈವಿಕ ತ್ಯಾಜ್ಯ ಉತ್ಪಾದನೆಯನ್ನು ತಗ್ಗಿಸಲೂ ಸಹ ಸಹಕಾರಿಯಾಗಲಿದೆ. ಇದು ವೈಯಕ್ತಿಕ ರಕ್ಷಣಾ ಸಾಧನಗಳನ್ನು ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡುತ್ತದೆ.

 

 “ಕೆಲವೇ ನಿಮಿಷಗಳಲ್ಲಿ ನಿಮ್ಮ ವಸ್ತುಗಳಲ್ಲಿನ ಸೋಂಕು ನಿವಾರಣೆಯಾಗಲಿದೆ”

          ಇದು ಇನ್ನೂ ಹೆಚ್ಚು ಉಪಯುಕ್ತ. ಹೇಗೆಂದರೆ ಈ ಸೋಂಕು ನಿವಾರಣೆ ಕೆಲವೇ ನಿಮಿಷಗಳಲ್ಲಿ ಆಗಲಿದೆ. ಇಂತಹ ವ್ಯವಸ್ಥೆಯನ್ನು ಮುಂಬೈನ ಭಿವಾಂಡಿಯಲ್ಲಿ ಇಂದ್ರಾ ವಾಟರ್ಸ್ ಕಾರ್ಖಾನೆಯಲ್ಲಿ ಉತ್ಪಾದಿಸಲಾಗಿದ್ದು, ಅಲ್ಲಿಂದ ಇದನ್ನು ಆಸ್ಪತ್ರೆಗಳಿಗೆ ಪೂರೈಸಲಾಗಿದೆ.

ಭಿವಾಂಡಿಯಲ್ಲಿನ ಕಾರ್ಖಾನೆ

 

ವೈರಾಣುಗಳ ಪ್ರಮಾಣ ಸುಮಾರು ಒಂದು ಲಕ್ಷ  ಪಟ್ಟು ಇಳಿಕೆ

        “ನಮ್ಮ ವ್ಯವಸ್ಥೆ ಸೂಕ್ಷ್ಮ ಜೀವಿಗಳ ಸಂಖ್ಯೆಯಲ್ಲಿ 1,00,000 ಪಟ್ಟು ಕಡಿತವನ್ನು ಸಾಧಿಸಲು ಸಾಧ್ಯವಾಗಲಿದೆ. ವೈಜ್ಞಾನಿಕ ರೀತಿಯಲ್ಲಿ ಹೇಳುವುದಾದರೆ ಪರೀಕ್ಷೆಗಳಿಂದ ವೈರಾಣುಗಳು ಮತ್ತು ಬ್ಯಾಕ್ಟೀರಿಯಾಗಳ ಪ್ರಮಾಣ 5 ಲಾಗ್(ಶೇ.99.999ರಷ್ಟು) ಕಡಿತವಾಗಿದೆ” ಎಂದು ಇಂದ್ರಾ ವಾಟರ್ಸ್ ನ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಅಭಿಜಿತ್ ವಿವಿಆರ್ ಹೆಮ್ಮೆಯಿಂದ ಹೇಳಿದ್ದಾರೆ. ‘ಲಾಗ್ ರಿಡಕ್ಷನ್’ ಎಂಬ ಪದವನ್ನು ಮುಖ್ಯವಾಗಿ ಸೋಂಕು ನಿವಾರಣಾ ಪ್ರಕ್ರಿಯೆ ನಂತರ

ಜೀವಂತ ಸೂಕ್ಷ್ಮಾಣು ಜೀವಿಗಳ ಸಾಕ್ಷೇಪ ಸಂಖ್ಯೆಯನ್ನು ಸೂಚಿಸಲು ಬಳಕೆ ಮಾಡಲಾಗುತ್ತದೆ.

          ಐಐಟಿ ಬಾಂಬೆಯ ಜೈವಿಕ ವಿಜ್ಞಾನಗಳು ಮತ್ತು ಜೈವಿಕ ಇಂಜಿನಿಯರಿಂಗ್ ವಿಭಾಗ ಈ ವ್ಯವಸ್ಥೆಯ ಪರೀಕ್ಷೆ ನಡೆಸಿ ಪ್ರಮಾಣೀಕರಿಸಿದೆ. “ವಜ್ರ ಕವಚ ಅತ್ಯಂತ ಸುದೀರ್ಘವಾದ ಪರೀಕ್ಷಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಇದನ್ನು ಎಸ್ಚೆರಿಚಿಯಾ ವೈರಾಣು ಎಂಎಸ್2(ಕೊರೊನಾ ಸೋಂಕು ಮತ್ತು ಜ್ವರದ ಸೋಂಕು, ಉಸಿರಾಟದ ಸೋಂಕುಗಳನ್ನು  ಮಾಡಲಾಗುವುದು) ಮತ್ತು ಇ.ಕೊಲಿ ಸಿ3000 ವೈರಾಣುನೊಂದಿಗೆ ಪರೀಕ್ಷೆ ಮಾಡಲಾಯಿತು. ವೈರಸ್ ಮತ್ತು ಬ್ಯಾಕ್ಟೀರಿಯಾ ಮಾದರಿಗಳ ಪೂರ್ಣ ಹೊರೆಯನ್ನು ಪಿಪಿಇಗಳ ಮೇಲೆ ಹೇರಲಾಗಿತ್ತು. ಪಿಪಿಇಅನ್ನು ನಂತರ ವಜ್ರ ಕವಚದೊಳಗೆ ಇಡಲಾಗಿತ್ತು. ಸೋಂಕು ನಿವಾರಣೆ ನಂತರ ಪಿಪಿಇಅನ್ನು ಹೊರ ತೆಗೆಯಲಾಯಿತು. ಮಾದರಿಯನ್ನು ಮರುಪರಿಶೀಲಿಸಿ ವೈರಾಣು ಪ್ರಮಾಣ ತಗ್ಗಿರುವುದು ಮತ್ತು ಅದರ ಬೆಳವಣಿಗೆ ದರವನ್ನು ಪರಿಶೀಲಿಸಲಾಯಿತು”. ಪಿಪಿಇ ನಲ್ಲಿರುವ ವೈರಸ್ ಗಳು, ಬ್ಯಾಕ್ಟೀರಿಯಾಗಳು ಮತ್ತು ಇತರ ಸೂಕ್ಷ್ಮ ಜೀವಿಗಳನ್ನು ನಿಷ್ಕ್ರಿಯಗೊಳಿಸಲು ಸುಧಾರಿತ ಆಕ್ಸಿಡೇಷನ್, ಕೊರೊನಾ ಡಿಸ್ಚಾರ್ಜ್ ಮತ್ತು ಯುವಿ-ಸಿ ಲೈಟ್ ಸ್ಪೆಕ್ಟ್ರಮ್ ಮತ್ತು ಇತರೆ ಮೈಕ್ರೊಬಯಲ್ ವೈರಾಣುಗಳನ್ನು ಒಳಗೊಂಡಿರುವ ಮಲ್ಟಿಸ್ಟೇಜ್ ಸೋಂಕು ನಿವಾರಕ ಪ್ರಕ್ರಿಯೆಯನ್ನು ಬಳಸಲಾಗುವುದು ಮತ್ತು ಇದು ಶೇ.99.999ಗೂ ಅಧಿಕ ದಕ್ಷತೆಯನ್ನು ಸಾಧಿಸಿದೆ ಎಂದು ಅಭಿಜಿತ್ ತಿಳಿಸಿದ್ದಾರೆ.   

ವಜ್ರ ಕವಚದ ಪರಿಕಲ್ಪನೆ

          ಸಾಮಗ್ರಿಗಳನ್ನು ವಿಲೇವಾರಿ ಮಾಡುವ ಬದಲು ಮರುಬಳಕೆ ಮಾಡುವ ಕಲ್ಪನೆಯೊಂದಿಗೆ ಉತ್ಪನ್ನ ಹೇಗೆ ಸರಳ ಮತ್ತು ಶಕ್ತಿಶಾಲಿ ಹಾಗೂ ಮಿತವ್ಯಯದ್ದಾಗಿದೆ ಎಂದು ಅಭಿಜಿತ್ ಅವರು ಪಿಐಬಿಗೆ ತಿಳಿಸಿದರು. “2020ರ ಮಾರ್ಚ್ ನಲ್ಲಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಇದ್ದ ಸಮಯದಲ್ಲಿ ಈ ವಜ್ರ ಕವಚ ಪರಿಕಲ್ಪನೆ ಮೊಳಕೆಯೊಡೆಯತು. ದೇಶ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ನಾವು ಹೇಗೆ ಸಹಾಯ ಮಾಡಬಹುದು ಎಂಬ ಕುರಿತು ಚಿಂತನೆ ನಡೆಸಿದ್ದವು. ಪಿಪಿಇ ಕಿಟ್ ಮತ್ತು ಎನ್ 95 ಮಾಸ್ಕ್ ಗಳಿಗೆ ಭಾರೀ ಬೇಡಿಕೆ ಇರುವುದನ್ನು ನಾವು ಅರ್ಥ ಮಾಡಿಕೊಂಡೆವು ಮತ್ತು ರಾಷ್ಟ್ರ ನಮ್ಮ ಆರೋಗ್ಯ ಕಾರ್ಯಕರ್ತರಿಗೆ ಅಗತ್ಯ ವೈದ್ಯಕೀಯ ಸಾಧನಗಳನ್ನು ನೀಡಲು ಹೋರಾಟ ನಡೆಸುತ್ತಿರುವುದನ್ನು ಕಂಡಿದ್ದೆವು. ಆಗ ನಮಗೆ ನಮ್ಮ ಕೊರೊನಾ ಯೋಧರು ತಮ್ಮ ಮಾಸ್ಕ್ ಹಾಗೂ ಪಿಪಿಇ ಕಿಟ್ ಗಳನ್ನು ಮರುಬಳಕೆ ಮಾಡುವಂತಹ ಸರಳ ಸೋಂಕು ನಿವಾರಕ ಪ್ರಕ್ರಿಯೆಯ ಕಲ್ಪನೆ ಹುಟ್ಟಿಕೊಂಡಿತು”.

ತೆಲಂಗಾಣದ ವಾರಂಗಲ್ ನ ಜಿಡಬ್ಲ್ಯೂಎಂಸಿ ಕಚೇರಿಯಲ್ಲಿ ಎಎಸ್ ಸಿಐ(ಭಾರತೀಯ ಆಡಳಿತಾತ್ಮಕ ಸಿಬ್ಬಂದಿ ಕಾಲೇಜು) ಸಹಭಾಗಿತ್ವದಲ್ಲಿ ತೆಲಂಗಾಣ ಸರ್ಕಾರದ ಗ್ರೇಟರ್ ವಾರಂಗಲ್ ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ ಪಮೇಲಾ ಸತ್ಪತಿ ಅವರು ವಜ್ರ ಕವಚವನ್ನು ಬಿಡುಗಡೆ ಮಾಡಿದರು.

 

ಕಲ್ಪನೆಯಿಂದ ಸಾಕಾರದ ವರೆಗೆ

          ಈ ಆಲೋಚನೆಯನ್ನು ಕಾರ್ಯಗತಗೊಳಿಸಲು ಇಂದ್ರಾ ವಾಟರ್ ಸಂಸ್ಥೆ ತನ್ನ ನೀರು ಶುದ್ಧೀಕರಣ ತಂತ್ರಜ್ಞಾನವನ್ನು ಮಾರ್ಪಡಿಸಿತು ಮತ್ತು ಸಂಪೂರ್ಣ ದೇಶೀಯ ಸೋಂಕು ನಿವಾರಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು ಎಂದು ಅಭಿಜಿತ್ ಹೇಳಿದರು. “ಈ ಸೋಂಕು ನಿವಾರಕ ವ್ಯವಸ್ಥೆಯಲ್ಲಿ ಬಳಕೆ ಮಾಡಲಾಗಿರುವ ಪ್ರತಿಯೊಂದು ಬಿಡಿ ಭಾಗವೂ ಸಹ ಭಾರತದಲ್ಲೇ ತಯಾರಿಸಲ್ಪಟ್ಟಿದ್ದು, ಹೊರಗಿನಿಂದ ಯಾವುದನ್ನೂ ಖರೀದಿಸಿಲ್ಲ.

ಜಲ ವಲಯದಲ್ಲಿ ಆವಿಷ್ಕಾರಗಳನ್ನು ಉತ್ತೇಜಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿಧಿ – ಪ್ರಯಾಸ್ ಅನುದಾನ(ಐಐಟಿ ಬಾಂಬೆಯ ಇನೋವೇಷನ್ ಅಂಡ್ ಎಂಟರ್ ಪ್ರನರ್ ಶಿಪ್ ಸೊಸೈಟಿ ಮೂಲಕ) ಇಂದ್ರಾ ವಾಟರ್ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ(ಡಿಎಸ್ ಟಿ) ಅಡಿಯಲ್ಲಿ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಶೀಲತೆ ಅಭಿವೃದ್ಧಿ ಮಂಡಳಿ(ಎನ್ಎಸ್ ಟಿಇಡಿಬಿ)ಯ ಕೋವಿಡ್-19 ಆರೋಗ್ಯ ಬಿಕ್ಕಟ್ಟು ಎದುರಿಸಲು ಸಮರ ವೃದ್ಧಿ ಕೇಂದ್ರ (ಸಿಎಡಬ್ಲ್ಯೂಎಸಿಎಚ್) ಬೆಂಬಲ ಮತ್ತು ನೆರವಿನೊಂದಿಗೆ ಆರಂಭಿಸಲಾದ 51 ನವೋದ್ಯಮಗಳಲ್ಲಿ ಇಂದ್ರಾ ವಾಟರ್ ಸಂಸ್ಥೆಯೂ ಕೂಡ ಒಂದಾಗಿದೆ.

ತುಂಬಾ ಉಪಯುಕ್ತವಾಗಿದೆ ಎಂದ ಆರೋಗ್ಯ ಕಾರ್ಯಕರ್ತರು; ಸದ್ಯದಲ್ಲೇ ಹೊಸ ಮಾದರಿ

            “ವಜ್ರ ಕವಚ ಪಿಪಿಇ ಸೋಂಕು ನಿವಾರಕ ಯುವಿ  ಸೊಗಸಾದ, ಬಳಕೆದಾರರ ಸ್ನೇಹಿ ಮತ್ತು ಅತ್ಯಂತ ಉಪಯುಕ್ತವಾಗಿದೆ. ಇದು ನಮ್ಮ 25 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರಕ್ಕೆ ಸೂಕ್ತವಾಗಿದೆ. ಇದು ಕೆಲವೇ ಕೆಲವು ಪಿಪಿಇ ಕಿಟ್ ಗಳನ್ನು ಬಳಕೆ ಮಾಡಲು ಸಹಾಯಕವಾಗಲಿದೆ” ಎಂದು ಐಐಟಿ ಬಾಂಬೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ನಿಶಾ ಷಾ ಹೇಳಿದ್ದಾರೆ. ಮುಂಬೈನ ಕಾಮಾ ಆಸ್ಪತ್ರೆ, ಛತ್ರಪತಿ ಶಿವಾಜಿ ಮಹಾರಾಜ ಆಸ್ಪತ್ರೆ, ಸೆಂಟ್ ಜಾರ್ಟ್ ಆಸ್ಪತ್ರೆ ಮತ್ತು ಮುಂಬೈನ ಇತರೆ ಆಸ್ಪತ್ರೆಗಳಲ್ಲಿ ವಜ್ರ ಕವಚ ಸೋಂಕು ನಿವಾರಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ವಾರಂಗಲ್ ನ ಆಸ್ಪತ್ರೆಯೂ ಸಹ ಒಂದು ವ್ಯವಸ್ಥೆಯನ್ನು ಪಡೆದಿದೆ ಎಂದು ಅಭಿಜಿತ್ ಹೇಳಿದ್ದಾರೆ. “ಮುಂಬೈನ ಹಲವು ಆಸ್ಪತ್ರೆಗಳಲ್ಲಿ ಈಗಾಗಲೇ ಹತ್ತು ವಜ್ರ ಕವಚ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಸಾಕಷ್ಟು ಆರೋಗ್ಯ ರಕ್ಷಣಾ ಕಾರ್ಯಕರ್ತರೊಂದಿಗೆ ಮಾತನಾಡಿದ ನಂತರ ನಾವು ವ್ಯವಸ್ಥೆಯನ್ನು ಅವರು ಕೇವಲ ಎನ್ 95 ಮತ್ತು ಪಿಪಿಇ ಕಿಟ್ ಗಳ ಸೋಂಕು ನಿವಾರಣೆಗೆ ಅಲ್ಲದೆ ಪ್ರಯೋಗಾಲಯದ ಕೋಟ್, ಮಾಸ್ಕ್, ಏಪ್ರಾನ್, ಫೇಸ್ ಶೀಲ್ಡ್, ಐಸಿಯುನಲ್ಲಿ ಬಳಕೆ ಮಾಡುವ ಸಾಮಗ್ರಿಗಳು ಮೂಲ ವೈದ್ಯಕೀಯ ಸಲಕರಣೆಗಳು ಮತ್ತು ಇತರೆ ಬಟ್ಟೆಯಿಂದ ಮಾಡಿದ ಇತರೆ ವೈದ್ಯಕೀಯ ಸಾಮಗ್ರಿಗಳನ್ನೂ ಸಹ ಬಳಕೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

          ಇದೀಗ ತಾವು ಎರಡನೇ ಮಾದರಿಯ ವ್ಯವಸ್ಥೆಯನ್ನು ಸದ್ಯದಲ್ಲೇ ತರುತ್ತಿದ್ದೇವೆ ಮತ್ತು ಅದು ಇನ್ನೂ ಹೆಚ್ಚು ಬಳಕೆದಾರರ ಸ್ನೇಹಿಯಾಗಿದೆ ಎಂದು ಅಭಿಜಿತ್ ಹೇಳಿದರು. “ಪಿಪಿಇ ಕಿಟ್ ಗಾತ್ರ ದೊಡ್ಡದಿರುವುದರಿಂದ ವ್ಯವಸ್ಥೆಯಲ್ಲಿ ನಾವು ಅದಕ್ಕೆ ಸಾಕಷ್ಟು ಸ್ಥಳ ನೀಡಬೇಕಾಗುತ್ತದೆ. ಆದರೆ ನಾವು ವ್ಯವಸ್ಥೆಯನ್ನು ಕಾಂಪ್ಯಾಕ್ಟ್  ಮಾಡಲು ಯೋಜಿಸಿದ್ದೇವೆ”. ಇಂದಿರಾ ವಾಟರ್ ಸಂಸ್ಥೆ 20 ಸದಸ್ಯರ ನವೋದ್ಯಮ ಸಂಸ್ಥೆಯಾಗಿದ್ದು, ಅವರು ಪ್ರಮುಖವಾಗಿ ಕೈಗಾರಿಕೆಗಳು, ಕಾರ್ಖಾನೆಗಳು, ಅಪಾರ್ಟ್ ಮೆಂಟ್ ಗಳು ಇತ್ಯಾದಿಗಳು ಹೊರ ಹಾಕುವ ದ್ರವ ತ್ಯಾಜ್ಯ ಸೋಂಕು ನಿವಾರಣೆ ಮತ್ತು ಸಂಸ್ಕರಣೆ ವಿಷಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯನ್ನು contact@indrawater.com. ಮೂಲಕ ಸಂಪರ್ಕಿಸಬಹುದಾಗಿದೆ. 

 


 

****(Release ID: 1723210) Visitor Counter : 52