ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಲಸಿಕೆಯ ಮಿಥ್ಯೆಗಳನ್ನು ಭೇದಿಸುವುದು
ಭಾರತ ಸರಕಾರವು ದೇಶದ ಇಡೀ ಜನತೆಗೆ ತ್ವರಿತವಾಗಿ ಲಸಿಕೆ ನೀಡುವ ಸಲುವಾಗಿ ವ್ಯಾಕ್ಸಿನ್ ಆಮದು ಮಾಡಿಕೊಳ್ಳಲು ಪರಿಶೀಲಿಸುತ್ತಿದೆ
ಉತ್ಪಾದನಾ ಸಾಮರ್ಥ್ಯದ ಸಮರ್ಪಕತೆಯ ವಿಷಯ ಇಲ್ಲಿ ಉದ್ಭವಿಸದು
ಪ್ರಕಟಣಾ ದಿನಾಂಕ:
28 MAY 2021 9:22PM by PIB Bengaluru
ಈ ವರ್ಷದ ಜನವರಿಯಿಂದ ಲಸಿಕೆ ವಿಚಾರದಲ್ಲಿ ಕೋವಿಡ್ ರೋಗಿಗಳ ಪರಿಣಾಮಕಾರಿ ನಿರ್ವಹಣೆಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳನ್ನು ಭಾರತ ಸರಕಾರ 'ಸಂಪೂರ್ಣ ಸರಕಾರ' ವಿಧಾನದ ಅಡಿಯಲ್ಲಿ ಬೆಂಬಲಿಸುತ್ತಿದೆ.
ಕೋವಿಡ್ ವಿಶ್ವವ್ಯಾಪಿಯಾಗಿ ಪರಿಣಾಮ ಹೊಂದಿರುವಂತಹ ಸಾಂಕ್ರಾಮಿಕವಾಗಿರುವ ಕಾರಣ, ಜಗತ್ತಿನಾದ್ಯಂತ ಲಸಿಕೆಗಳಿಗಾಗಿ ಅತೀವ ಬೇಡಿಕೆ ಉಂಟಾಗಿದೆ, ಆದರೆ ವಿವಿಧ ದೇಶಗಳಲ್ಲಿ ಲಸಿಕೆ ಉತ್ಪಾದಕರು ಮತ್ತು ಅವರ ಉತ್ಪಾದನಾ ಸಾಮರ್ಥ್ಯವು ಸೀಮಿತವಾಗಿದೆ. 1.4 ಶತಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತವು, ವಿಶ್ವ ಬ್ಯಾಂಕ್‌ನ ಅಂದಾಜಿನಂತೆ ಜಗತ್ತಿನ ಒಟ್ಟಾರೆ 7.7 ಶತಕೋಟಿ ಜನಸಂಖ್ಯೆಯಲ್ಲಿ ಗಣನೀಯ ಪಾಲನ್ನು ಹೊಂದಿದೆ.
ಭಾರತದಲ್ಲಿ, ಎರಡು ಲಸಿಕೆಗಳಿಗೆ ನಿಯಂತ್ರಣ ಪ್ರಾಧಿಕಾರವು ಜನವರಿ 2021ರಲ್ಲಿ ಅನುಮೋದನೆಯನ್ನು ನೀಡಿದೆ. ಆ ಎರಡು ಲಸಿಕೆ ತಯಾರಕ ಕಂಪನಿಗಳಾದ ಸೀರಮ್ ಇನ್ಸ್‌ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ 2020ರ ಡಿಸೆಂಬರ್ನಲ್ಲಿ ತಿಂಗಳಿಗೆ ಸುಮಾರು 1 ಕೋಟಿ ಡೋಸ್‌ಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದ್ದವು.
ಆದ್ಯತೆ ಮೇರೆಗೆ ಫಲಾನುಭವಿಗಳನ್ನು ಗುರುತಿಸುವುದು, ಸಂಗ್ರಹಣೆ, ಲಸಿಕೆ ಆಯ್ಕೆ ಮತ್ತು ಅದರ ವಿತರಣೆ ಸೇರಿದಂತೆ ಲಸಿಕೆ ಕುರಿತಾದ ಎಲ್ಲಾ ಅಂಶಗಳ ಬಗ್ಗೆ ಮಾರ್ಗದರ್ಶನ ನೀಡಲು ʻಕೋವಿಡ್-19 ಲಸಿಕೀಕರಣ ರಾಷ್ಟ್ರೀಯ ತಜ್ಞರ ತಂಡʼವನ್ನು (ಎನ್‌ಇಜಿವಿಎಸಿ) ಈಗಾಗಲೇ 2020ರ ಆಗಸ್ಟ್‌ನಲ್ಲೇ ಸ್ಥಾಪಿಸಲಾಗಿದೆ.
ಲಭ್ಯವಿರುವ ವೈಜ್ಞಾನಿಕ ಪುರಾವೆಗಳ ಪರಿಶೀಲನೆ, ವಿಶ್ವ ಆರೋಗ್ಯ ಸಂಸ್ಥೆ ಪ್ರಸ್ತಾಪಿಸಿದ ಮಾರ್ಗಸೂಚಿಗಳು, ಜಾಗತಿಕ ಉದಾಹರಣೆಗಳು ಮತ್ತು ಇತರ ದೇಶಗಳಲ್ಲಿ ಅನುಸರಿಸುವ ಅಭ್ಯಾಸಗಳ ಆಧಾರದ ಮೇಲೆ ಭಾರತದಲ್ಲಿ ಕೋವಿಡ್-19 ಲಸಿಕೆಗೆ ಫಲಾನುಭವಿಗಳ ಆದ್ಯತೆಯನ್ನು ಮಾಡಲಾಗಿದ್ದು, ಇದರ ಪ್ರಾಥಮಿಕ ಉದ್ದೇಶವೆಂದರೆ:
• ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರನ್ನು ರಕ್ಷಿಸುವುದು ಮತ್ತು ಆ ಮೂಲಕ ಸಾಂಕ್ರಾಮಿಕಕ್ಕೆ ಸ್ಪಂದನೆ ವ್ಯವಸ್ಥೆಯನ್ನು ರಕ್ಷಿಸುವುದು.
• ಕೋವಿಡ್-19ನಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟುವುದು ಮತ್ತು ಹೆಚ್ಚಿನ ಅಪಾಯದಲ್ಲಿರುವ ಹಾಗೂ ಮರಣ ಸಾಧ್ಯತೆ ಹೆಚ್ಚಿರುವ ವ್ಯಕ್ತಿಗಳನ್ನು ರಕ್ಷಿಸುವುದು.
ಅದರಂತೆ, ಆದ್ಯತೆಯ ಗುಂಪುಗಳಿಗೆ ಅನುಸಾರವಾಗಿ ದೇಶದಲ್ಲಿ ಲಸಿಕೆ ಅಭಿಯಾನವನ್ನು ಕ್ರಮವಾಗಿ ವಿಸ್ತರಿಸಲಾಯಿತು. ಜನವರಿ 16ರಂದು ಆರೋಗ್ಯ ಕಾರ್ಯಕರ್ತರಿಗೆ (ಎಚ್‌ಸಿಡಬ್ಲ್ಯೂ) ಮೊದಲ ಆದ್ಯತೆ ಮೇರೆಗೆ ಲಸಿಕೆ ನೀಡುವುದರಿಂದ ಆರಂಭಿಸಲಾಯಿತು. ನಂತರ ಫೆಬ್ರವರಿ 21ರಿಂದ ಮುಂಚೂಣಿ ಕಾರ್ಯಕರ್ತರಿಗೆ (ಎಫ್‌ಎಲ್‌ಡಬ್ಲ್ಯೂ), 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳು ಮತ್ತು ಈಗಾಗಲೇ ಗುರುತಿಸಲಾದ 20 ಸಹ-ಅಸ್ವಸ್ಥತೆಗಳನ್ನು (ಕೋಮಾರ್ಬಿಡಿಟಿ) ಹೊಂದಿರುವ 45-59 ವರ್ಷ ವಯಸ್ಸಿನವರಿಗೆ 2021ರ ಮಾರ್ಚ್ 1ರಿಂದ ಲಸಿಕೆ ನೀಡಿಕೆ ಆರಂಭಿಸಲಾಯಿತು. ತದನಂತರ, ಏಪ್ರಿಲ್ 1, 2೦21ರಿಂದ, 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ವ್ಯಕ್ತಿಗಳಿಗೂ ಲಸಿಕೆ ಪಡೆಯುವ ಅರ್ಹತೆ ವಿಸ್ತರಿಸಲಾಯಿತು.
ಲಸಿಕೆ ನೀಡಿಕೆಗೆ ಅನುಸರಿಸಲಾದ ಈ ವಿಧಾನದಿಂದ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಯಿತು. ನೋಂದಾಯಿತ ಆರೋಗ್ಯ ಕಾರ್ಯಕರ್ತರಲ್ಲಿ ಶೇ. 90ಕ್ಕಿಂತ ಹೆಚ್ಚು ಮಂದಿ ಹಾಗೂ ನೋಂದಾಯಿತ ಮುಂಚೂಣಿ ಕಾರ್ಯಕರ್ತರಲ್ಲಿ ಶೇ.84% ಮಂದಿಗೆ 1ನೇ ಡೋಸ್ ಲಸಿಕೆ ವ್ಯಾಪ್ತಿ ವಿಸ್ತರಿಸಲು ಸಾಧ್ಯವಾಗಿದೆ. ಆ ಮೂಲಕ ಕೋವಿಡ್-19 ಸಾಂಕ್ರಾಮಿಕದ 2ನೇ ಅಲೆಯ ನಡುವೆಯೂ ಆರೋಗ್ಯ ಸೇವೆ, ನಿಗಾ ಹಾಗೂ ಸೋಂಕು ನಯಂತ್ರಣ ಚಟುವಟಿಕೆಗಳಲ್ಲಿ ತೊಡಗಿದ್ದ ಈ ತಂಡವನ್ನು ರಕ್ಷಿಸಲು ಸಾಧ್ಯವಾಯಿತು.
ಅದೇ ರೀತಿ, ಮರಣ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ಮುಂದಿನ ಹಂತದಲ್ಲಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಮತ್ತು ಸಹ-ಅಸ್ವಸ್ಥತೆಗಳನ್ನು (ಕೋಮಾರ್ಬಿಡಿಟಿ) ಹೊಂದಿರುವ 45-59 ವರ್ಷ ವಯಸ್ಸಿನವರಿಗೆ ಮಾರ್ಚ್ 1 ರಿಂದ ಲಸಿಕೆ ಯನ್ನು ಒದಗಿಸಲು ಆರಂಭಿಸಲಾಯಿತು. ಬಳಿಕ, 2021ರ ಏಪ್ರಿಲ್ 1ರಿಂದ 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ವ್ಯಕ್ತಿಗಳಿಗೆ ಲಸಿಕೆ ನೀಡಿಕೆ ಪ್ರಾರಂಭಿಸಲಾಯಿತು.
ಕೋವಿಡ್-19 ಲಸಿಕೆಯ 3ನೇ ಹಂತವು ಮೇ 1ರಿಂದ ಪ್ರಾರಂಭವಾಗಿದೆ. ಇದರ ಅಡಿಯಲ್ಲಿ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ನಾಗರಿಕರು ಲಸಿಕೆಗೆ ಅರ್ಹರಾಗಿದ್ದಾರೆ. ಕೋವಿಡ್-19 ಲಸಿಕೆಯ 3ನೇ ಹಂತದದಲ್ಲಿ 'ಉದಾರೀಕೃತ ದರ ಮತ್ತು ವೇಗವರ್ಧಿತ ರಾಷ್ಟ್ರೀಯ ಕೋವಿಡ್-19 ಲಸಿಕೆ ಕಾರ್ಯತಂತ್ರ'ವನ್ನು 2021ರ ಮೇ 1ರಿಂದ ಅಳವಡಿಸಿಕೊಳ್ಳಲಾಗುತ್ತಿದ್ದು, ಪ್ರಸ್ತುತ 3ನೇ ಹಂತದ ಲಸಿಕೆ ಅಭಿಯಾನದ ಈ ಕಾರ್ಯತಂತ್ರದ ಮಾರ್ಗದರ್ಶನದಲ್ಲೇ ನಡೆಯುತ್ತಿದೆ. ಈ ಕಾರ್ಯತಂತ್ರವು ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಲಸಿಕೆ ತಯಾರಕರನ್ನು ಉತ್ತೇಜಿಸುವ ಮತ್ತು ಹೊಸ ತಯಾರಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ಇದರಿಂದ ಲಸಿಕೆ ಉತ್ಪಾದನೆ ಹೆಚ್ಚಾಗುವುದರಿಂದ ಲಸಿಕೆಗಳ ವ್ಯಾಪಕ ಲಭ್ಯತೆಯು ಹೆಚ್ಚಾಗಿ, ಲಸಿಕೆಗಳ ದರ, ಸಂಗ್ರಹಣೆ ಮತ್ತು ನೀಡಿಕೆಯಲ್ಲಿ ನಮ್ಯತೆಗೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಅಂತಿಮವಾಗಿ ಲಸಿಕೆಯ ವ್ಯಾಪ್ತಿ ಸುಧಾರಿಸುತ್ತದೆ.
ಇದುವರೆಗೂ ಭಾರತವು ರೋಗ ಪ್ರತಿರೋಧಕ ಶಕ್ತಿ ವರ್ಧನೆ ಅಭಿಯಾನದಡಿ ಕೋವಿಡ್-19 ವಿರುದ್ಧ ಮೂರು ಲಸಿಕೆಗಳನ್ನು ಬಳಸುತ್ತಿದೆ; ಇದರಲ್ಲಿ ಎರಡು ಭಾರತದಲ್ಲಿ ತಯಾರಿಸಿದ ಲಸಿಕೆಗಳಾದ - ಸೀರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಸೇರಿವೆ. ಈ ಎರಡೂ ಸಂಸ್ಥೆಗಳು 2021ರ ಮೇ ತಿಂಗಳಲ್ಲಿ ಸುಮಾರು 7.92 ಕೋಟಿ ಲಸಿಕೆ ಡೋಸ್‌ಗಳನ್ನು ಪೂರೈಸಿವೆ.
ಲಸಿಕೆ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲಾಗಿದೆ. ಲಸಿಕೆಯು ಜೈವಿಕ ಉತ್ಪನ್ನವಾಗಿರುವುದರಿಂದ ತಯಾರಿ ಮತ್ತು ಗುಣಮಟ್ಟ ಪರೀಕ್ಷೆಗೆ ಸಮಯ ತೆಗೆದುಕೊಳ್ಳುತ್ತದೆ. ಲಸಿಕೆಯು ಸುರಕ್ಷಿತ ಉತ್ಪನ್ನ ಎನಿಸಬೇಕಾದರೆ ಅದನ್ನು ರಾತ್ರೋರಾತ್ರಿ ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ, ಉತ್ಪಾದನಾ ಸಾಮರ್ಥ್ಯದ ಹೆಚ್ಚಳವು ಸಹ ಸೂಕ್ತ ಮಾರ್ಗದರ್ಶನ ಪ್ರಕ್ರಿಯೆ ಮೂಲಕವೇ ಸಾಗಬೇಕಿದೆ.
ರಷ್ಯಾದ ʻಸ್ಪುಟ್ನಿಕ್-ವಿʼ ಲಸಿಕೆಯು ಭಾರತದಲ್ಲಿ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ ʻಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾʼದಿಂದ (ಡಿಸಿಜಿಐ) ಅನುಮೋದನೆ ಪಡೆದ ಮೂರನೇ ಲಸಿಕೆಯಾಗಿದೆ. ಪ್ರಸ್ತುತ ಇದನ್ನು ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಲಭ್ಯತೆ ಹೆಚ್ಚಾಗುವ ನಿರೀಕ್ಷೆಯಿದೆ.
ಕೋವಿಡ್-19 ಲಸಿಕೆಗಳು ದೇಶದಲ್ಲಿ ಸಮರ್ಪಕವಾಗಿ ಲಭ್ಯವಾಗುವಂತೆ ಮಾಡಲು ಭಾರತ ಸರಕಾರವು, ʻಎನ್‌ಇಜಿವಿಎಸಿʼ ಮೂಲಕ ಫೈಜರ್, ಮಾಡರ್ನಾ ಮುಂತಾದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಲಸಿಕೆ ತಯಾರಕರೊಂದಿಗೆ ನಿಯಮಿತ ಸಂವಹನವನ್ನು ಮುಂದುವರಿಸಿದೆ.
ಭಾರತ ಸರಕಾರವು ದೇಶದಲ್ಲಿ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಜೊತೆಗೆ, ರಾಷ್ಟ್ರೀಯ ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಅಗತ್ಯವಿರುವ ಲಸಿಕೆ ಡೋಸ್‌ಗಳನ್ನು ಪೂರೈಸಲು ವಿದೇಶಿ ಲಸಿಕೆ ತಯಾರಕರನ್ನು ಆಕರ್ಷಿಸುತ್ತಿದೆ ಎಂಬುದನ್ನು ಈ ದಿಟ್ಟ ಕ್ರಮಗಳು ಸ್ಪಷ್ಟವಾಗಿ ಸೂಚಿಸುತ್ತವೆ.
ಲಭ್ಯತೆಯ ಸೀಮಿತತೆಯ ಹೊರತಾಗಿಯೂ, ಭಾರತವು ಕೇವಲ 130 ದಿನಗಳಲ್ಲಿ 200 ದಶಲಕ್ಷ ಜನರಿಗೆ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದು, ಆ ಮೂಲಕ ಲಸಿಕೆ ವ್ಯಾಪ್ತಿಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ.
***
(ಪ್ರಕಟಣೆ ಐ.ಡಿ.: 1722646)
ವಿಸಿಟರ್ ಕೌಂಟರ್ : 213