ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
2011ರ ಅರ್ಜುನ ಪ್ರಶಸ್ತಿ ವಿಜೇತೆ ವಿ. ತೇಜಸ್ವಿನಿ ಬಾಯಿ ಅವರಿಗೆ 2 ಲಕ್ಷ ರೂ.ಗಳ ನೆರವನ್ನು ಅನುಮೋದಿಸಿದ ಕ್ರೀಡಾ ಸಚಿವಾಲಯ
Posted On:
21 MAY 2021 12:08PM by PIB Bengaluru
2011ರಲ್ಲಿ ʻಅರ್ಜುನʼ ಪ್ರಶಸ್ತಿಗೆ ಭಾಜನರಾದ ಹಾಗೂ 2010 ಮತ್ತು 2014ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಮಹಿಳಾ ಕಬಡ್ಡಿ ತಂಡದ ಸದಸ್ಯರಾಗಿದ್ದ ಕರ್ನಾಟಕದ ವಿ. ತೇಜಸ್ವಿನಿ ಬಾಯಿ ಅವರಿಗೆ 2 ಲಕ್ಷ ರೂ.ಗಳ ನೆರವನ್ನು ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವಾಲಯ (ಎಂವೈಎಎಸ್) ಅನುಮೋದಿಸಿದೆ.
ಕೋವಿಡ್-19 ಸಾಂಕ್ರಾಮಿಕದ ನಡುವೆ ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ನೆರವಾಗಲು ಭಾರತೀಯ ಕ್ರೀಡಾ ಪ್ರಾಧಿಕಾರ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮತ್ತು ʻಎಂವೈಎಎಸ್ʼ ಜಂಟಿ ಸಹಯೋಗದಲ್ಲಿ ಕೈಗೊಂಡಿರುವ ಉಪಕ್ರಮದ ಭಾಗವಾಗಿ, ಕ್ರೀಡಾಪಟುಗಳಿಗಾಗಿ ಪಂಡಿತ್ ದೀನದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿಯಿಂದ ಈ ಆರ್ಥಿಕ ನೆರವನ್ನು ಅನುಮೋದಿಸಲಾಗಿದೆ.
ತೇಜಸ್ವಿನಿ ಮತ್ತು ಅವರ ಪತಿಗೆ ಮೇ 1ರಂದು ಕೋವಿಡ್ ಸೋಂಕು ದೃಢಪಟ್ಟಿತ್ತು. ತೇಜಸ್ವಿನಿ ಅವರಿಗೆ ಸ್ವಲ್ಪ ಕೆಮ್ಮು ಇದ್ದರೂ ಮನೆಯಲ್ಲಿ ಚೇತರಿಕೆಯ ಹಾದಿಯಲ್ಲಿದ್ದಾರೆ. ಆದರೆ ಅವರ ಪತಿ ನವೀನ್ ಮೇ 11ರಂದು ಸೋಂಕಿಗೆ ಬಲಿಯಾದರು. "ಅವರಿಗೆ ಕೇವಲ 30 ವರ್ಷ, ತಮ್ಮ ತಂದೆಯ ಮರಣದ ನಂತರ ಅವರು ಸಾಕಷ್ಟು ಭಯಭೀತರಾಗಿದ್ದರು. ಭಯ ಮತ್ತು ಒತ್ತಡವೇ ಅವರ ಜೀವವನ್ನು ಕಸಿದುಕೊಂಡಿತು" ಎಂದು ತೇಜಸ್ವಿನಿ ಹೇಳಿದ್ದಾರೆ. ಆರ್ಥಿಕ ನೆರವಿನ ಬಗ್ಗೆ ಮಾತನಾಡಿದ ಅವರು, "ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ ಕ್ರೀಡಾ ಸಚಿವಾಲಯ, ಎಸ್ಎಐ ಮತ್ತು ಐಒಎ ಸಕಾಲದಲ್ಲಿ ತುರ್ತಾಗಿ ಕ್ರಮ ಕೈಗೊಂಡು ನಮಗೆ ನೆರವು ನೀಡುವ ಈ ನಿರ್ಧಾರವನ್ನು ತೆಗೆದುಕೊಂಡಿವೆ. ನಮಗೆ ಈ ರೀತಿ ಬೆಂಬಲ ನೀಡಿರುವುದು ಇದೇ ಮೊದಲು. ನಮ್ಮಂತಹ ಅನೇಕ ಜನರಿಗೆ ಆರ್ಥಿಕ ಸಮಸ್ಯೆಗಳಿವೆ ಮತ್ತು ಇಂತಹ ಸಮಯದಲ್ಲಿ ನಮಗೆ ಸರಿಯಾದ ಸಹಾಯ ಬಂದರೆ, ನಿಜಕ್ಕೂ ಅದು ಒಳ್ಳೆಯ ವಿಚಾರ,ʼʼ. ಎಂದಿದ್ದಾರೆ.
ಕರ್ನಾಟಕ ಕ್ರೀಡಾ ಸಮಿತಿ ಸದಸ್ಯ ಮತ್ತು ಮಾಜಿ ಅರ್ಜುನ ಪ್ರಶಸ್ತಿ ವಿಜೇತ ಶ್ರೀ ಹೊನ್ನಪ್ಪಗೌಡ ಅವರಿಂದ ಉಪಕ್ರಮದ ಬಗ್ಗೆ ತಿಳಿಯಿತು. ಈಗ ನನ್ನ ಮಗುವಿನ ಭವಿಷ್ಯಕ್ಕಾಗಿ ಈ ಹಣವನ್ನು ಹೂಡಿಕೆ ಮಾಡಲು ಬಯಸುತ್ತೇನೆ ಎಂದು ತೇಜಸ್ವಿನಿ ಮಾಹಿತಿ ನೀಡಿದ್ದಾರೆ. "ನಾನು ನನ್ನ 5 ತಿಂಗಳ ಮಗುವನ್ನು ನೋಡಿಕೊಳ್ಳಬೇಕು. ಈ ಹಣವನ್ನು ಅವಳ ಭವಿಷ್ಯದ ಮೇಲೆ ಹೂಡಿಕೆ ಮಾಡಬೇಕು. ನಾನು ಈಗ ಮಗುವಿನ ಏಕೈಕ ಪೋಷಕಿ. ನನ್ನ ಮಗುವಿಗಾಗಿ ಏನಾದರೂ ಮಾಡಲೇಬೇಕು" ಎಂದು ಅವರು ಹೇಳಿದ್ದಾರೆ.
(Release ID: 1720622)
Visitor Counter : 234