ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್ ಪರಿಸ್ಥಿತಿಯ ಬಗ್ಗೆ ದೇಶಾದ್ಯಂತದ ವೈದ್ಯರೊಂದಿಗೆ ಪ್ರಧಾನಿ ಸಂವಾದ

ಕೋವಿಡ್ ಎರಡನೇ ಅಲೆಯ ಅಸಾಧಾರಣ ಪರಿಸ್ಥಿತಿಯಲ್ಲಿ ಮಾದರಿ ಹೋರಾಟಕ್ಕಾಗಿ ವೈದ್ಯಕೀಯ ಸಮುದಾಯಕ್ಕೆ ಪ್ರಧಾನಿ ಧನ್ಯವಾದ

ಲಸಿಕಾ ಕಾರ್ಯಕ್ರಮವನ್ನು ಮುಂಚೂಣಿ ಯೋಧರೊಂದಿಗೆ ಪ್ರಾರಂಭಿಸಿದ ಕಾರ್ಯತಂತ್ರವು ಎರಡನೇ ಅಲೆಯಲ್ಲಿ ಪ್ರಯೋಜನ ನೀಡಿದೆ: ಪ್ರಧಾನಿ

ರೋಗಿಗಳ ಗೃಹ ಆರೈಕೆಯು ಎಸ್ಒಪಿ ಆಧಾರಿತವಾಗಿರಬೇಕು : ಪ್ರಧಾನಿ

ದೇಶದ ಎಲ್ಲಾ ತಾಲ್ಲೂಕು ಮತ್ತು ಜಿಲ್ಲೆಗಳಿಗೆ ಟೆಲಿಮೆಡಿಸಿನ್ ಸೇವೆಯನ್ನು ವಿಸ್ತರಿಸುವುದು ಅತ್ಯಗತ್ಯವಾಗಿದೆ: ಪ್ರಧಾನಿ

ದೈಹಿಕ ಆರೈಕೆಯಷ್ಟೇ ಮಾನಸಿಕ ಆರೈಕೆಯೂ ಮುಖ್ಯ: ಪ್ರಧಾನಿ

Posted On: 17 MAY 2021 7:24PM by PIB Bengaluru

ಕೋವಿಡ್ ಪರಿಸ್ಥಿತಿ ಕುರಿತು ದೇಶಾದ್ಯಂತದ ವೈದ್ಯರ ಗುಂಪಿನೊಂದಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರು.

ಕೋವಿಡ್‌ನ ಎರಡನೇ ಅಲೆಯ ಅಸಾಧಾರಣ ಸನ್ನಿವೇಶಗಳ ವಿರುದ್ಧ ವೈದ್ಯಕೀಯ ಸಮುದಾಯ  ಮತ್ತು ಅರೆವೈದ್ಯಕೀಯ ಸಿಬ್ಬಂದಿಯು ನಡೆಸುತ್ತಿರುವ ಅನುಕರಣೀಯ ಹೋರಾಟಕ್ಕೆ ಧನ್ಯವಾದ ತಿಳಿಸಿದ ಪ್ರಧಾನಿಯವರು, ಇಡೀ ದೇಶವು ಅವರಿಗೆ ಋಣಿಯಾಗಿದೆ ಎಂದರು. ಪರೀಕ್ಷೆಗಳು, ಔಷಧಿಗಳ ಪೂರೈಕೆ ಅಥವಾ ದಾಖಲೆಯ ಸಮಯದಲ್ಲಿ ಹೊಸ ಮೂಲಸೌಕರ್ಯಗಳನ್ನು ಸನ್ನದ್ದಗೊಳಿಸುವುದು, ಇವೆಲ್ಲವನ್ನೂ ವೇಗವಾಗಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಆಮ್ಲಜನಕದ ಉತ್ಪಾದನೆ ಮತ್ತು ಪೂರೈಕೆಯ ಹಲವಾರು ಸವಾಲುಗಳನ್ನು ನಿವಾರಿಸಲಾಗುತ್ತಿದೆ. ಕೋವಿಡ್ ಚಿಕಿತ್ಸೆಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಪ್ರದೇಶದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಮಾನವ ಸಂಪನ್ಮೂಲ ವೃದ್ಧಿಗೆ ಕೈಗೊಂಡ ಕ್ರಮಗಳು ಆರೋಗ್ಯ ವ್ಯವಸ್ಥೆಗೆ ಹೆಚ್ಚುವರಿ ಬೆಂಬಲವನ್ನು ನೀಡಿವೆ ಎಂದು ಅವರು ಹೇಳಿದರು.

ಮುಂಚೂಣಿಯ ಯೋಧರೊಂದಿಗೆ ಲಸಿಕಾ ಕಾರ್ಯಕ್ರಮವನ್ನು ಪ್ರಾರಂಭಿಸುವ ಕಾರ್ಯತಂತ್ರವು ಎರಡನೇ ಅಲೆಯಲ್ಲಿ ಅಪಾರ ಪ್ರಯೋಜನ ನೀಡಿದೆ ಎಂದು ಪ್ರಧಾನಿ ಒತ್ತಿಹೇಳಿದರು. ದೇಶದ ಸುಮಾರು ಶೇ.90 ರಷ್ಟು ಆರೋಗ್ಯ ವೃತ್ತಿಪರರು ಈಗಾಗಲೇ ಮೊದಲ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಲಸಿಕೆಗಳು ಬಹುತೇಕ ವೈದ್ಯರ ಸುರಕ್ಷತೆಯನ್ನು ಖಚಿತಪಡಿಸಿವೆ ಎಂದರು.

ತಮ್ಮ ದೈನಂದಿನ ಕೆಲಸಗಳಲ್ಲಿ ಆಮ್ಲಜನಕ ಲೆಕ್ಕಪರಿಶೋಧನೆಯನ್ನು ಸೇರಿಸಿಕೊಳ್ಳಬೇಕು ಎಂದು ಪ್ರಧಾನಿ ವೈದ್ಯರಿಗೆ ಕರೆ ಕೊಟ್ಟರು. ‘ಮನೆಯ ಪ್ರತ್ಯೇಕ ವಾಸ’ದಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಯವರು, ಪ್ರತಿ ರೋಗಿಯ ಮನೆ ಆರೈಕೆಯು ಎಸ್‌ಒಪಿ ಆಧಾರಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವಂತೆ ವೈದ್ಯರನ್ನು ಕೋರಿದರು. ಮನೆ ಪ್ರತ್ಯೇಕತೆಯಲ್ಲಿರುವ ರೋಗಿಗಳಿಗೆ ಟೆಲಿಮೆಡಿಸಿನ್ ದೊಡ್ಡ ಪಾತ್ರ ವಹಿಸಿದೆ ಮತ್ತು ಗ್ರಾಮೀಣ ಪ್ರದೇಶಗಳಿಗೂ ಈ ಸೇವೆಯನ್ನು ವಿಸ್ತರಿಸಬೇಕಾಗಿದೆ ಎಂದು ಅವರು ಹೇಳಿದರು. ತಂಡಗಳನ್ನು ರಚಿಸಿಕೊಂಡು ಹಳ್ಳಿಗಳಲ್ಲಿ ಟೆಲಿಮೆಡಿಸಿನ್ ಸೇವೆಯನ್ನು ಒದಗಿಸುತ್ತಿರುವ ವೈದ್ಯರನ್ನು ಅವರು ಶ್ಲಾಘಿಸಿದರು. ಇದೇ ರೀತಿಯ ತಂಡಗಳನ್ನು ರಚಿಸಿ, ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮತ್ತು ಎಂಬಿಬಿಎಸ್ ಇಂಟರ್ನಿಗಳಿಗೆ ತರಬೇತಿ ನೀಡಬೇಕು ಮತ್ತು ದೇಶದ ಎಲ್ಲಾ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಟೆಲಿಮೆಡಿಸಿನ್ ಸೇವೆ ಲಭ್ಯವಾಗುವಂತೆ ಮಾಡಬೇಕು ಎಂದು ಅವರು ದೇಶಾದ್ಯಂತದ ವೈದ್ಯರಿಗೆ ಮನವಿ ಮಾಡಿದರು.

ಮ್ಯೂಕರ್ ಮೈಕೋಸಿಸ್ ಸವಾಲಿನ ಬಗ್ಗೆಯೂ ಪ್ರಧಾನಿ ಚರ್ಚಿಸಿದರು. ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲು ವೈದ್ಯರು ಹೆಚ್ಚಿನ ಪ್ರಯತ್ನ ಮಾಡಬೇಕು ಎಂದು ಹೇಳಿದರು. ದೈಹಿಕ ಆರೈಕೆಯ ಮಹತ್ವದೊಂದಿಗೆ ಮಾನಸಿಕ ಆರೈಕೆಯ ಮಹತ್ವವನ್ನು ಅವರು ಒತ್ತಿಹೇಳಿದರು. ವೈರಾಣು ವಿರುದ್ಧದ ಈ ಸುದೀರ್ಘ ಹೋರಾಟವನ್ನು ನಿರಂತರವಾಗಿ ನಡೆಸುವುದು ವೈದ್ಯಕೀಯ ಸಮುದಾಯಕ್ಕೆ ಮಾನಸಿಕವಾಗಿ ಸವಾಲಾಗಿದೆ, ಆದರೆ ನಾಗರಿಕರ ವಿಶ್ವಾಸದ ಬಲವು ಈ ಹೋರಾಟದಲ್ಲಿ ಅವರೊಂದಿಗಿದೆ ಎಂದು ಅವರು ಹೇಳಿದರು.

ಸಂವಾದದ ಸಮಯದಲ್ಲಿ, ಇತ್ತೀಚಿಗೆ ಪ್ರಕರಣಗಳು ಉಲ್ಬಣಗೊಂಡ ಸಂದರ್ಭದಲ್ಲಿ ಪ್ರಧಾನಿಯವರ ಮಾರ್ಗದರ್ಶನ ಮತ್ತು ನಾಯಕತ್ವಕ್ಕೆ ವೈದ್ಯರು ಧನ್ಯವಾದ ತಿಳಿಸಿದರು. ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯಲ್ಲಿ ಆದ್ಯತೆ ನೀಡಿದ ಪ್ರಧಾನಿಯವರಿಗೆ ವೈದ್ಯರು ಧನ್ಯವಾದ ಅರ್ಪಿಸಿದರು. ಕೋವಿಡ್‌ನ ಮೊದಲ ಅಲೆಯಿಂದ ಅವರು ಮಾಡಿಕೊಂಡ ಸಿದ್ಧತೆ ಮತ್ತು ಎರಡನೇ ಅಲೆಯಲ್ಲಿ ಅವರು ಎದುರಿಸಿದ ಸವಾಲುಗಳ ಬಗ್ಗೆ ಅವರು ಪ್ರಧಾನ ಮಂತ್ರಿಯವರಿಗೆ ಮಾಹಿತಿ ನೀಡಿದರು. ವೈದ್ಯರು ತಮ್ಮ ಅನುಭವಗಳು, ಉತ್ತಮ ಅಭ್ಯಾಸಗಳು ಮತ್ತು ಹೊಸ ಪ್ರಯತ್ನಗಳನ್ನು ಪ್ರಧಾನಿಯವರೊಂದಿಗೆ ಹಂಚಿಕೊಂಡರು. ಕೋವಿಡ್ ವಿರುದ್ಧದ ಹೋರಾಟದಲ್ಲಿ, ಕೋವಿಡೇತರ ರೋಗಿಗಳ ಬಗ್ಗೆ ಸೂಕ್ತ ಕಾಳಜಿ ವಹಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಔಷಧಿಗಳ ಅಸಮರ್ಪಕ ಬಳಕೆಯ ವಿರುದ್ಧ ರೋಗಿಗಳಿಗೆ ತಿಳಿವಳಿಕೆ ನೀಡುವುದೂ ಸೇರಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅನುಭವಗಳನ್ನು ವೈದ್ಯರು ಹಂಚಿಕೊಂಡರು.

ನೀತಿ ಆಯೋಗದ ಸದಸ್ಯ (ಆರೋಗ್ಯ), ಆರೋಗ್ಯ ಸಚಿವಾಲಯದ ಕಾರ್ಯದರ್ಶಿ, ಔಷಧ ಕಾರ್ಯದರ್ಶಿ ಮತ್ತು ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು, ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

*****(Release ID: 1719500) Visitor Counter : 26