ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಮೂರು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ (ಎಂಎಸ್ಎಂಇ) ʻಸಿಎಸ್ಐಆರ್-ಸಿಎಂಇಆರ್ಐʼ ತಂತ್ರಜ್ಞಾನಗಳ ವರ್ಗಾವಣೆ

Posted On: 06 MAY 2021 10:07AM by PIB Bengaluru

ʻಕೇಂದ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯು(ಸಿಎಸ್ಐಆರ್) ತನ್ನ ಆಕ್ಸಿಜನ್ ಕಾನ್ಸಂಟ್ರೇಟರ್‌ (ಆಮ್ಲಜನಕ ಸಾಂದ್ರಕ) ತಂತ್ರಜ್ಞಾನ ಮತ್ತು ʻಹೈ ಫ್ಲೋ ರೇಟ್ ಐರನ್ ರಿಮೂವಲ್ ಪ್ಲಾಂಟ್ʼ (ಅಧಿಕ ಹರಿವು ದರದ ಕಬ್ಬಿಣಾಂಶ ನಿರ್ಮೂಲನಾ ಘಟಕ) ತಂತ್ರಜ್ಞಾನಗಳನ್ನು 05.05.2021 ರಂದು ವರ್ಚುಯಲ್‌ ಕಾರ್ಯಕ್ರಮದ ಮೂಲಕ ವರ್ಗಾವಣೆ ಮಾಡಿತು. ಆಕ್ಸಿಜನ್ ಕಾನ್ಸಂಟ್ರೇಟರ್‌ ತಂತ್ರಜ್ಞಾನವನ್ನು ಮೆಸ್ಸರ್ಸ್‌ ಸಿ ಮತ್ತು ಐ ಕ್ಯಾಲಿಬ್ರೇಶನ್ಸ್ ಪ್ರೈವೇಟ್ ಲಿಮಿಟೆಡ್, ಕೋಟಾ, ರಾಜಸ್ಥಾನ ಮತ್ತು ಮೆಸರ್ಸ್ ʻಎಸ್ ಎ ಕಾರ್ಪ್ʼ, ಐಎಂಟಿ ಮನೆಸಾರ್, ಗುರ್‌ಗಾಂವ್‌ ಇವರಿಗೆ ವರ್ಗಾಯಿಸಲಾಯಿತು. ಹೈ ಫ್ಲೋ ರೇಟ್‌ ಐರನ್‌ ರಿಮೂವಲ್‌ ಪ್ಲಾಂಟ್‌ ತಂತ್ರಜ್ಞಾನವನ್ನು ಗುವಾಹತಿಯ ಮೆಸರ್ಸ್‌ ʻಮಾ ದುರ್ಗಾ ಸೇಲ್ಸ್‌ ಏಜೆನ್ಸಿʼಗೆ ವರ್ಗಾಯಿಸಲಾಯಿತು.

https://static.pib.gov.in/WriteReadData/userfiles/image/image001ITA6.png

ಸಿಎಸ್ಐಆರ್-ಸಿಎಂಇಆರ್‌ಐ ನಿರ್ದೇಶಕ ಪ್ರೊ (ಡಾ) ಹರೀಶ್ ಹಿರಾನಿ ಅವರು ಮಾತನಾಡಿ, ʻಸಿಎಸ್ಐಆರ್-ಸಿಎಂಇಆರ್‌ಐʼ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳನ್ನು (ಎಂಎಸ್ಎಂಇ) ಉತ್ತೇಜಿಸಲು  ಪ್ರಯತ್ನಿಸುತ್ತಿದೆ, ಇದರಿಂದ ಇಂತಹ ಉದ್ಯಮಗಳು ತಮಗೆ ಸಾಧ್ಯವಾದಂತಹ ಉತ್ಪನ್ನಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ತಯಾರಿಸಬಹುದು ಎಂಬ ಆಶಯ ವ್ಯಕ್ತಪಡಿಸಿದರು. ಸಾಮಾನ್ಯ ಜನರಿಗೆ ನಾವಿನ್ಯತೆಯನ್ನು ತಲುಪಿಸಲು ಪ್ರತಿಯೊಬ್ಬರಿಗೂ ಸಹಾಯ ಮಾಡುವುದು ʻಸಿಎಸ್ಐಆರ್-ಸಿಎಂಇಆರ್‌ಐʼನ ಮುಖ್ಯ ಧ್ಯೇಯವಾಗಿದೆ. ʻಎಂಎಸ್‌ಎಂಇʼಗಳು ಕಡಿಮೆ ವೆಚ್ಚದಲ್ಲಿ ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿರುವುದರಿಂದ ನಮಗೆ ಅವುಗಳ ಸಹಕಾರ ಅಗತ್ಯವಿದೆʼ ಎಂದರು.

ಗುವಾಹತಿಯ ಮೆಸ್ಸರ್ಸ್‌ ಮಾ ದುರ್ಗಾ ಸೇಲ್ಸ್‌ ಏಜೆನ್ಸೀಸ್‌ನ ಶ್ರೀ ಓಂಕಾರ್‌ ಬನ್ಸಾಲ್‌ ಅವರು ಮಾತನಾಡಿ, ಅಸ್ಸಾಂನ ಹಲವಾರು ಪ್ರದೇಶಗಳು ಕುಡಿಯುವ ನೀರಿನಲ್ಲಿ ಅತಿಯಾದ ಕಬ್ಬಿಣದ ಅಂಶದಿಂದಾಗಿ ಕಲುಷಿತ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ತಮ್ಮ ಕಂಪನಿಯು ಅತ್ಯಂತ ಗಂಭೀರ ಸಮಸ್ಯೆ ಎದುರಿಸುತ್ತಿರುವ ಅಸ್ಸಾಂನ ನಾಲ್ಕು ಜಿಲ್ಲೆಗಳಾದ ಕಾಮರೂಪ್ ಮೆಟ್ರೋ, ಕಾಮರೂಪ್ ಅರ್ಬನ್, ಬಾರ್ಪೇಟಾ ಮತ್ತು ಶಿವ ಸಾಗರ್ ನಲ್ಲಿ ಕಾರ್ಯ ಆರಂಭಿಸಲು ಯೋಜಿಸುತ್ತಿದೆ ಎಂದು ಹೇಳಿದರು. ಪ್ರಸ್ತುತ, ಕಂಪನಿಯು ಗಂಟೆಗೆ 1000 ಲೀಟರ್ ಸಾಮರ್ಥ್ಯದ 700 ಸಣ್ಣ ನೀರು ಶುದ್ಧೀಕರಣ ಘಟಕಗಳ ವ್ಯವಸ್ಥೆಯನ್ನು ಅಳವಡಿಸಲು ಕೆಲಸ ಮಾಡುತ್ತಿದೆ. ಸರಕಾರ ಮತ್ತು ಆಯಾ ಪಂಚಾಯತ್‌ಗಳಿಂದ ಪಡೆದ ಯೋಜನೆಗಳ ಭಾಗವಾಗಿ ಅಸ್ಸಾಂನ ವಿವಿಧ ಜಿಲ್ಲೆಗಳಲ್ಲಿ ʻಸಿಎಸ್ಐಆರ್-ಸಿಎಂಇಆರ್‌ಐʼನ ʻಹೈ ಫ್ಲೋ ರೇಟ್‌ (6000 ರಿಂದ 12000 ಎಲ್‌ಪಿಎಚ್) ಐರನ್‌ ರಿಮೂವಲ್‌ ಫಿಲ್ಟರ್ʼ ತಂತ್ರಜ್ಞಾನವನ್ನು ಸ್ಥಾಪಿಸಲು ಹಾಗೂ ಭಾರತ ಸರಕಾರದ ಜಲ ಜೀವನ್ ಮಿಷನ್‌ನಲ್ಲಿ ಪಾಲ್ಗೊಳ್ಳಲು ಕಂಪನಿ ಯೋಜಿಸಿದೆ ಎಂದರು.

https://static.pib.gov.in/WriteReadData/userfiles/image/image0024WDD.png

ರಾಜಸ್ಥಾನದ ಕೋಟಾದ 'ಸಿ ಮತ್ತು ಐ ಕ್ಯಾಲಿಬ್ರೇಶನ್ಸ್ ಪ್ರೈವೇಟ್ ಲಿಮಿಟೆಡ್' ನ ಶ್ರೀ ಅಶೋಕ್ ಪತ್ನಿ ಅವರು ಮಾತನಾಡಿ, ತಂತ್ರಜ್ಞಾನವನ್ನು ಒದಗಿಸಿದ್ದಕ್ಕಾಗಿ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್‌ ಉತ್ಪನ್ನ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿದ್ದಕ್ಕಾಗಿ ಪ್ರೊ. ಹಿರಾನಿ ಮತ್ತು ಸಂಸ್ಥೆಯ ತಂಡಕ್ಕೆ ಧನ್ಯವಾದ ಅರ್ಪಿಸಿದರು. ಉತ್ಪನ್ನವನ್ನು ತಯಾರಿಸಲು ಸಾಕಷ್ಟು ಮೂಲಸೌಕರ್ಯ ಮತ್ತು ʻಎನ್ಎಬಿಎಲ್ʼ ಮಾನ್ಯತೆ ಪಡೆದ ಪ್ರಯೋಗಾಲಯಗಳ ಅನುಕೂಲತೆಯನ್ನೂ ಸಂಸ್ಥೆಯು ಹೊಂದಿದೆ ಎಂದರು. ಸಂಸ್ಥೆಯು 700ಕ್ಕೂ ಹೆಚ್ಚು ಉಪಕರಣಗಳ ಪರೀಕ್ಷೆಗಳನ್ನು ನಡೆಸುತ್ತಿರುವುದಾಗಿ ಅವರು ಉಲ್ಲೇಖಿಸಿದರು. ಪ್ರಸ್ತುತ ಸಾಂಕ್ರಾಮಿಕದ ಸನ್ನಿವೇಶದಲ್ಲಿ, ಉತ್ಪನ್ನದ ತಯಾರಿಕೆಯನ್ನು ಗರಿಷ್ಠಗೊಳಿಸುವ ಮೂಲಕ ಅಗತ್ಯವಿರುವ ಜನರಿಗೆ ಸಹಾಯ ಹಸ್ತ ಚಾಚಿ, ಅವರು ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಿ ಸಮಾಜಕ್ಕೂ ಸಹಾಯ ಮಾಡಲು ಬಯಸುತ್ತಿರುವುದಾಗಿ ಅವರು ತಿಳಿಸಿದರು.  ಪ್ರಸ್ತುತ 5 ಲೀಟರ್ ಸಾಮರ್ಥ್ಯದ ಆಮ್ಲಜನಕ ಸಾಂದ್ರಕಗಳ ಮೇಲೆ ಗಮನ ಹರಿಸಲಾಗುತ್ತಿದ್ದು, ದೇಶದ ಮೂಲೆ ಮೂಲೆಗಳನ್ನು ತಲುಪಿಸಲು ಪ್ರಯತ್ನಿಸುತ್ತಿರುವುದಾಗಿ ಅವರು ಹೇಳಿದರು.  ಈ ಸಮಯದಲ್ಲಿ ತಿಂಗಳಿಗೆ 3000-4೦೦೦ ಘಟಕಗಳಷ್ಟು ಆಮ್ಲಜನಕ ಸಾಂದ್ರಕ ಘಟಕಗಳನ್ನು ತಯಾರಿಸಲು ಯೋಜಿಸಲಾಗಿದೆ. ಕಚ್ಚಾ ವಸ್ತುಗಳ ಲಭ್ಯತೆ ಮತ್ತು ವೆಚ್ಚದ ವಿಚಾರದಲ್ಲಿ ಕೆಲವು ಅಡಚಣೆಗಳಿದ್ದರೂ, ಸಾಂದ್ರಕಗಳ ಆಮದಿನ ಬದಲು ಪರ್ಯಾಯ ವ್ಯವಸ್ಥೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ತಿಳಿಸಿದರು.

ಗುರ್‌ಗಾಂವ್‌ನ 'ಎಸ್ ಎ ಕಾರ್ಪ್'ನ ಶ್ರೀ ದೀಪಕ್ ಜೈನ್ ಅವರು ಮಾತನಾಡಿ, ತಾವು ಮೂಲ ಮಾದರಿಗಳ ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತಿದ್ದು ತಿಂಗಳಿಗೆ 5೦೦೦ ಘಟಕಗಳ ಉತ್ಪಾದನೆ ಗುರಿ ಹೊಂದಿರುವುದಾಗಿ ತಿಳಿಸಿದರು. ಇದರ ಪ್ರಮಾಣವನ್ನು ಶೀಘ್ರವೇ ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಕಚ್ಚಾ ವಸ್ತುಗಳ ದರದಲ್ಲಿ ದಿಢೀರ್‌ ಏರಿಕೆಯಿಂದಾಗಿ ಮೂಲಮಾದರಿಯನ್ನು ಅಭಿವೃದ್ಧಿಪಡಿಸಲು ಆರಂಭಿಕ ಸುಮಾರು 40000-45000 ರೂ. ಖರ್ಚಾಗುತ್ತಿದೆ ಎಂದು ಅವರು ಹೇಳಿದರು. ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಿದರೆ ಈ ವೆಚ್ಚವು ಕಡಿಮೆಯಾಗುವ ನಿರೀಕ್ಷೆ ವ್ಯಕ್ತಪಡಿಸಿದ ಅವರು, ಈ ಸಂಬಂಧ ಅವರು ಸಂಸ್ಥೆಗೂ ಮನವಿ ಸಲ್ಲಿಸಿದರು.

*****



(Release ID: 1716508) Visitor Counter : 182