ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಹಿಮಾಲಯದಲ್ಲಿ ಬೆಳೆದ ಸಾವಯವ ಸಿರಿಧಾನ್ಯಗಳನ್ನು ಡೆನ್ಮಾರ್ಕ್‌ಗೆ ರಫ್ತು ಮಾಡಲು ಆರಂಭಿಸಿದ ಭಾರತ

Posted On: 05 MAY 2021 6:01PM by PIB Bengaluru

ದೇಶದಿಂದ ಸಾವಯವ ಉತ್ಪನ್ನಗಳ ರಫ್ತಿಗೆ ಪ್ರಮುಖ ಉತ್ತೇಜನವೆಂಬಂತೆ, ದೇವ ಭೂಮಿ  ಉತ್ತರಾಖಂಡದ ಹಿಮಾಲಯದ ತಪ್ಪಲಿನಲ್ಲಿ ಹಿಮಜನಿತ ಗಂಗಾನದಿಯ ನೀರಿನಿಂದ ಬೆಳೆಯಲಾದ ಸಿರಿಧಾನ್ಯಗಳ ಮೊದಲ ಸರಕುಗಳನ್ನು ಡೆನ್ಮಾರ್ಕ್‌ಗೆ ರಫ್ತು ಮಾಡಲಾಗುತ್ತಿದೆ.
ಉತ್ತರಾಖಂಡ ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿ (ಯುಕೆಎಪಿಎಂಬಿ) ಮತ್ತು ರಫ್ತುದಾರ ಸಂಸ್ಥೆ ʻಜಸ್ಟ್ ಆರ್ಗನಿಕ್ʼನ ಸಹಯೋಗದೊಂದಿಗೆ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (ಎಪಿಇಡಿಎ)ಯು ಐರೋಪ್ಯ ಒಕ್ಕೂಟದ ಸಾವಯವ ಪ್ರಮಾಣೀಕರಣ ಮಾನದಂಡಗಳನ್ನು ಪೂರೈಸುವಂತಹ ರಾಗಿ ಮತ್ತು ಊದಲು ಧಾನ್ಯಗಳನ್ನು ರಫ್ತು ಮಾಡುವ ಉದ್ದೇಶಕ್ಕಾಗಿ ರೈತರಿಂದ ಖರೀದಿಸಿ, ಅವುಗಳನ್ನು ಸಂಸ್ಕರಿಸಿದೆ.

ʻಯುಕೆಎಪಿಎಂಬಿʼಯು ಈ ರೈತರಿಂದ ನೇರವಾಗಿ ಸಿರಿಧಾನ್ಯಗಳನ್ನು ಖರೀದಿಸಿದ್ದು, ಅವುಗಳನ್ನು ಮಂಡಿ ಮಂಡಳಿ ನಿರ್ಮಿಸಿದ ಮತ್ತು ʻಜಸ್ಟ್ ಆರ್ಗಾನಿಕ್' ನಿರ್ವಹಿಸುವ ಅತ್ಯಾಧುನಿಕ ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸಲಾಗಿದೆ.

"ಸಿರಿಧಾನ್ಯಗಳು ಭಾರತದ ವಿಶಿಷ್ಟ ಕೃಷಿ ಉತ್ಪನ್ನಗಳೆನಿಸಿದ್ದು, ಅವುಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಹಿಮಾಲಯ ಪ್ರದೇಶದಿಂದ ಬರುವ ಉತ್ಪನ್ನಗಳ ಮೇಲೆ ವಿಶೇಷ ಗಮನ ಕೇಂದ್ರೀಕರಿಸಿ ನಾವು ಸಿರಿಧಾನ್ಯಗಳಿಗೆ ರಫ್ತು ಉತ್ತೇಜನವನ್ನು ಮುಂದುವರಿಸುತ್ತೇವೆ," ಎಂದು ಎಪಿಇಡಿಎ ಅಧ್ಯಕ್ಷ ಡಾ.ಎಂ. ಅಂಗಮುತ್ತು ಹೇಳಿದರು. ಭಾರತೀಯ ಸಾವಯವ ಉತ್ಪನ್ನಗಳು, ಪೋಷಣಾಖಾದ್ಯಗಳು ಮತ್ತು ಆರೋಗ್ಯಕಾರಿ  ಆಹಾರವು ಸಾಗರೋತ್ತರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದೆ ಎಂದು ಅವರು ಹೇಳಿದರು

ಉತ್ತರಾಖಂಡದಲ್ಲಿ,  ಗುಡ್ಡಗಾಡು ಪ್ರದೇಶಗಳಲ್ಲಿ ಸಾಮಾನ್ಯ ರೀತಿಯ ಅನೇಕ ಸಿರಿಧಾನ್ಯಗಳೇ ಇಂದಿಗೂ ಪ್ರಮುಖ ಆಹಾರ. ಉತ್ತರಾಖಂಡ ಸರಕಾರವು ಸಾವಯವ ಕೃಷಿಗೆ ಬೆಂಬಲ ನೀಡುತ್ತಿದೆ. ʻಯುಕೆಎಪಿಎಂಬಿʼಯು ವಿಶಿಷ್ಟ ಉಪಕ್ರಮದ ಮೂಲಕ ಸಾವಯವ ಪ್ರಮಾಣೀಕರಣಕ್ಕಾಗಿ ಸಾವಿರಾರು ರೈತರಿಗೆ ನೆರವು ನೀಡುತ್ತಿದೆ. ಈ ರೈತರು ಮುಖ್ಯವಾಗಿ ರಾಗಿ, ಊದಲು, ರಾಜಗಿರಿ(ಅಮರಾಂತಸ್‌) ಮುಂತಾದ ಸಿರಿಧಾನ್ಯಗಳನ್ನು ಬೆಳೆಯುತ್ತಾರೆ.
ಡೆನ್ಮಾರ್ಕ್‌ಗೆ ಸಿರಿಧಾನ್ಯಗಳ ರಫ್ತಿನಿಂದಾಗಿ ಯೂರೋಪ್‌ ದೇಶಗಳಿಗೆ ರಫ್ತು ಅವಕಾಶಗಳ ವಿಸ್ತರಣೆಯಾಗಲಿದೆ. ಸಾವಯವ ಕೃಷಿಯಲ್ಲಿ ತೊಡಗಿಕೊಳ್ಳುತ್ತಿರುವ ಸಾವಿರಾರು ರೈತರಿಗೂ ರಫ್ತು ಬೆಂಬಲ ದೊರೆಯುತ್ತದೆ. ಹೆಚ್ಚಿನ ಪೌಷ್ಟಿಕ ಮೌಲ್ಯಗಳಿಂದಾಗಿ ಮತ್ತು ಗ್ಲುಟೆನ್ ಮುಕ್ತವಾಗಿರುವುದರಿಂದ ಸಿರಿಧಾನ್ಯಗಳು ಜಾಗತಿಕವಾಗಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿವೆ.
ಏತನ್ಮಧ್ಯೆ, ಹಿಂದಿನ ಹಣಕಾಸು ವರ್ಷದ (2019-20) ಇದೇ ಅವಧಿಗೆ ಹೋಲಿಸಿದರೆ ಏಪ್ರಿಲ್-ಫೆಬ್ರವರಿ (2020-21) ಅವಧಿಯಲ್ಲಿ ಭಾರತದ ಸಾವಯವ ಆಹಾರ ಉತ್ಪನ್ನಗಳ ರಫ್ತು ಶೇ. 51ಕ್ಕಿಂತಲೂ ಅಧಿಕ ಮಟ್ಟದಲ್ಲಿ ಹೆಚ್ಚಾಗಿದ್ದು, 7078 ಕೋಟಿ ರೂ.ಗಳಿಗೆ (1040 ದಶಲಕ್ಷ ಡಾಲರ್) ಏರಿಕೆಯಾಗಿದೆ.
ಪರಿಮಾಣದ ದೃಷ್ಟಿಯಿಂದ ಹೇಳುವುದಾದರೆ, ಸಾವಯವ ಆಹಾರ ಉತ್ಪನ್ನಗಳ ರಫ್ತು ಏಪ್ರಿಲ್-ಫೆಬ್ರವರಿ (2020-21) ಅವಧಿಯಲ್ಲಿ 39% ಹೆಚ್ಚಾಗಿದೆ. ಏಪ್ರಿಲ್-ಫೆಬ್ರವರಿ (2019-20) ರಲ್ಲಿ ರಫ್ತು ಮಾಡಲಾದ 638,998 ಮೆಟ್ರಿಕ್ ಟನ್‌ಗೆ ಹೋಲಿಸಿದರೆ, ಏಪ್ರಿಲ್-ಫೆಬ್ರವರಿ (2020-21) ಅವಧಿಯಲ್ಲಿ 888,179 ಮೆಟ್ರಿಕ್ ಟನ್‌ಗೆ ಹೆಚ್ಚಿದೆ. ಕೋವಿಡ್-19 ಸಾಂಕ್ರಾಮಿಕರೋಗವು ತಂದೊಡ್ಡಿರುವ ಸಾರಿಗೆ ಮತ್ತು ಕಾರ್ಯಾಚರಣೆಯ ಸವಾಲುಗಳ ಹೊರತಾಗಿಯೂ ಸಾವಯವ ಉತ್ಪನ್ನಗಳಲ್ಲಿ ಪ್ರಗತಿ ಸಾಧಿಸಲಾಗಿದೆ. 
ತೈಲದ ಹಿಂಡಿಯು ದೇಶದಿಂದ ಸಾವಯವ ಉತ್ಪನ್ನ ರಫ್ತಿನ ಪ್ರಮುಖ ಸರಕಾಗಿದೆ. ತೈಲ ಬೀಜಗಳು, ಹಣ್ಣಿನ ತಿರುಳುಗಳು, ದವಸ ಮತ್ತು ಧಾನ್ಯಗಳು, ಮಸಾಲೆ ಪದಾರ್ಥಗಳು, ಚಹಾ, ಔಷಧೀಯ ಸಸ್ಯ ಉತ್ಪನ್ನಗಳು, ಒಣ ಹಣ್ಣುಗಳು, ಸಕ್ಕರೆ, ಬೇಳೆಕಾಳುಗಳು, ಕಾಫಿ, ಸಸ್ಯಜನ್ಯ ತೈಲ ಇತ್ಯಾದಿ ಉತ್ಪನ್ನಗಳು ನಂತರದ ಸ್ಥಾನದಲ್ಲಿವೆ. 
ಭಾರತದ ಸಾವಯವ ಉತ್ಪನ್ನಗಳನ್ನು ಅಮೆರಿಕ, ಯುರೋಪ್‌ ಒಕ್ಕೂಟ, ಕೆನಡಾ, ಗ್ರೇಟ್ ಬ್ರಿಟನ್, ಆಸ್ಟ್ರೇಲಿಯಾ, ಸ್ವಿಟ್ಜರ್‌ಲ್ಯಾಂಡ್‌, ಇಸ್ರೇಲ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ 58 ದೇಶಗಳಿಗೆ ರಫ್ತು ಮಾಡಲಾಗುತ್ತದೆ.
ಪ್ರಸ್ತುತ, ಸಾವಯವ ಉತ್ಪಾದನೆಯ ರಾಷ್ಟ್ರೀಯ ಕಾರ್ಯಕ್ರಮದ (ಎನ್‌ಪಿಒಪಿ) ಅಗತ್ಯಗಳಿಗೆ ಅನುಗುಣವಾಗಿ ಉತ್ಪಾದಿಸಿ, ಸಂಸ್ಕರಿಸಿ, ಪ್ಯಾಕ್ ಮಾಡಿ ಮತ್ತು ಲೇಬಲ್ ಮಾಡಿದ ಸಾವಯವ ಸಾವಯವ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ.  ವಿದೇಶಿ ವ್ಯಾಪಾರ (ಅಭಿವೃದ್ಧಿ ಮತ್ತು ನಿಬಂಧನೆಗಳು) ಕಾಯ್ದೆ, 1992ರ ಅಡಿಯಲ್ಲಿ ಸೂಚಿಸಿದಂತೆ 2001ರಲ್ಲಿ ಪ್ರಾರಂಭವಾದಾಗಿನಿಂದಲೂ ʻಎನ್‌ಪಿಒಪಿʼಯನ್ನು ʻಎಪಿಇಡಿಎʼ ಅನುಷ್ಠಾನಗೊಳಿಸುತ್ತಿದೆ.
ʻಎನ್‌ಪಿಒಪಿʼ ಪ್ರಮಾಣೀಕರಣವನ್ನು ಯುರೋಪಿಯನ್ ಒಕ್ಕೂಟ ಮತ್ತು ಸ್ವಿಟ್ಜರ್‌ಲ್ಯಾಂಡ್‌ ಅನುಮೋದಿಸಿವೆ. ಇದರಿಂದ ಹೆಚ್ಚುವರಿ ಪ್ರಮಾಣೀಕರಣದ ಅಗತ್ಯವಿಲ್ಲದೆ ಈ ದೇಶಗಳಿಗೆ ಸಂಸ್ಕರಿಸದ ಸಸ್ಯ ಉತ್ಪನ್ನಗಳನ್ನು ರಫ್ತು ಮಾಡಲು ಭಾರತಕ್ಕೆ ಅನುವಾಗಿದೆ.  ಬ್ರೆಕ್ಸಿಟ್ ನಂತರದ ಹಂತದಲ್ಲೂ ಬ್ರಿಟನ್‌ಗೆ ಭಾರತೀಯ ಸಾವಯವ ಉತ್ಪನ್ನಗಳನ್ನು ರಫ್ತು ಮಾಡಲು ಎನ್‌ಪಿಒಪಿ ಅನುಕೂಲ ಮಾಡಿಕೊಡಲಿದೆ.
ಪ್ರಮುಖ ಆಮದು ರಾಷ್ಟ್ರಗಳ ನಡುವಿನ ವ್ಯಾಪಾರವನ್ನು ಸುಗಮಗೊಳಿಸುವ ಸಲುವಾಗಿ, ಭಾರತದಿಂದ ಸಾವಯವ ಉತ್ಪನ್ನಗಳ ರಫ್ತಿಗಾಗಿ ಪರಸ್ಪರ ಮಾನ್ಯತೆ ಒಪ್ಪಂದಗಳನ್ನು ಮಾಡಿಕೊಳ್ಳಲು ತೈವಾನ್, ಕೊರಿಯಾ, ಜಪಾನ್, ಆಸ್ಟ್ರೇಲಿಯಾ, ಯುಎಇ, ನ್ಯೂಜಿಲ್ಯಾಂಡ್‌ನೊಂದಿಗೆ ಮಾತುಕತೆಗಳು ನಡೆಯುತ್ತಿವೆ.
ದೇಶೀಯ ಮಾರುಕಟ್ಟೆಯಲ್ಲಿ ಸಾವಯವ ಉತ್ಪನ್ನಗಳ ವ್ಯಾಪಾರಕ್ಕಾಗಿ ʻಎನ್‌ಪಿಒಪಿʼಯು ಭಾರತೀಯ ಆಹಾರ ಸುರಕ್ಷತಾ ಪ್ರಮಾಣಿತ ಪ್ರಾಧಿಕಾರದಿಂದ (ಎಫ್‌ಎಸ್‌ಎಸ್‌ಎಐ) ಅನುಮೋದಿಸಲ್ಪಟ್ಟಿದೆ. ʻಎನ್‌ಪಿಓಪಿʼಯೊಂದಿಗಿನ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಬರುವ ಸಾವಯವ ಉತ್ಪನ್ನಗಳನ್ನು ಭಾರತದಲ್ಲಿ ಆಮದು ಮಾಡಿಕೊಳ್ಳಲು ಮರು ಪ್ರಮಾಣೀಕರಿಸುವ ಅಗತ್ಯವಿಲ್ಲ. 
ವೈಬಿ/ಎಸ್.ಎಸ್.


***



(Release ID: 1716504) Visitor Counter : 394