ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕೋವಿಡ್ ಎರಡನೇ ಅಲೆಯಿಂದ ದೇಶದಲ್ಲಿ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಸಚಿವರ ಪರಿಷತ್ತಿನ ಸಭೆ

Posted On: 30 APR 2021 4:05PM by PIB Bengaluru

ಕೋವಿಡ್ ಎರಡನೇ ಅಲೆಯಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಸಚಿವರ ಪರಿಷತ್ತಿನ ಸಭೆ ಇಂದು ನಡೆಯಿತು.

ಪ್ರಸ್ತುತ ಸಾಂಕ್ರಾಮಿಕದ ಬಿಕ್ಕಟ್ಟು ‘ಒಂದು ಶತಮಾನಕ್ಕೆ ಒಮ್ಮೆ ಬರುವ ಬಿಕ್ಕಟ್ಟು’ ಮತ್ತು ಇದು ಜಗತ್ತಿಗೆ ದೊಡ್ಡ ಸವಾಲನ್ನು ಎಸೆದಿದೆ ಎಂಬುದನ್ನು ಮಂತ್ರಿ ಪರಿಷತ್ತಿನ ಸಭೆ ಗುರುತಿಸಿತು.

ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಭಾರತದ ಜನರ ಸಾಮೂಹಿಕ ಪ್ರಯತ್ನದ ಆಧಾರದ ಮೇಲೆ ಕೋವಿಡ್ ವಿರುದ್ಧ ಹೋರಾಡಲು ಭಾರತ ಸರ್ಕಾರದ ಟೀಮ್ ಇಂಡಿಯಾ ವಿಧಾನವನ್ನು ಪ್ರತಿಪಾದಿಸಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರದ ಎಲ್ಲ ಅಂಗಗಳೂ ಒಗ್ಗಟ್ಟಿನಿಂದ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು. ತಮ್ಮ ತಮ್ಮ ವಲಯದ ಜನರೊಂದಿಗೆ ಸಂಪರ್ಕದಲ್ಲಿದ್ದು, ಅವರಿಗೆ ನೆರವಾಗಿ, ಅವರ ಪ್ರತಿಕ್ರಿಯೆ ಪಡೆಯುತ್ತಿರುವಂತೆ ಸಚಿವರಿಗೆ ಅವರು ಆಗ್ರಹಿಸಿದರು. ಸ್ಥಳೀಯ ಮಟ್ಟದಲ್ಲಿ ಸಮಸ್ಯೆಗಳನ್ನು ತ್ವರಿತವಾಗಿ ಗುರುತಿಸಿ ಪರಿಹರಿಸಲಾಗಿದೆಯೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.

ಕಳೆದ 14 ತಿಂಗಳುಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಭಾರತದ ಜನರು ಮಾಡಿದ ಎಲ್ಲಾ ಪ್ರಯತ್ನಗಳನ್ನೂ ಮಂತ್ರಿ ಪರಿಷತ್ತು ಪರಾಮರ್ಶಿಸಿತು.

ಆಸ್ಪತ್ರೆ ಹಾಸಿಗೆಗಳು, ಪಿ.ಎಸ್‌.ಎ ಆಮ್ಲಜನಕ ಸೌಲಭ್ಯಗಳು, ಆಮ್ಲಜನಕ ಉತ್ಪಾದನೆ, ಸಂಗ್ರಹಣೆ ಮತ್ತು ಸಾಗಣೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ, ಅಗತ್ಯ ಔಷಧಿಗಳ ಲಭ್ಯತೆಗೆ ಸಂಬಂಧಿಸಿದ ವಿಷಯಗಳನ್ನು ನಿಭಾಯಿಸುವ ರೂಪದಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯಗಳ ಸಮನ್ವಯದೊಂದಿಗೆ ಕೇಂದ್ರ ಸರ್ಕಾರವು ಮಾಡಿದ ಪ್ರಯತ್ನಗಳನ್ನೂ ಸಭೆಗೆ ವಿವರಿಸಲಾಯಿತು. ಅವುಗಳ ಪೂರೈಕೆ ಮತ್ತು ಲಭ್ಯತೆಯನ್ನು ಮತ್ತಷ್ಟು ಹೆಚ್ಚಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಸಹ ಗಮನಸೆಳೆಯಲಾಯಿತು. ದುರ್ಬಲ ವರ್ಗದ ಜನರಿಗೆ ಆಹಾರ-ಧಾನ್ಯಗಳನ್ನು ಒದಗಿಸುವ ಮತ್ತು ಜನ್ ಧನ್ ಖಾತೆದಾರರಿಗೆ ಹಣಕಾಸಿನ ನೆರವು ನೀಡುವ ಕ್ರಮಗಳನ್ನು ಸಹ ಸೂಚಿಸಲಾಯಿತು.

ಭಾರತವು ಎರಡು ಲಸಿಕೆಗಳನ್ನು ಯಶಸ್ವಿಯಾಗಿ ಉತ್ಪಾದಿಸುತ್ತಿದ್ದು, ಇನ್ನೂ ಹಲವು ಅನುಮೋದನೆ ಮತ್ತು ಪರಿಚಯಿಸುವ ವಿವಿಧ ಹಂತಗಳಲ್ಲಿವೆ ಎಂಬುದನ್ನು ಸಹ ಉಲ್ಲೇಖಿಸಲಾಯಿತು. ಈ ದಿನಾಂಕದವರೆಗೆ 15 ಕೋಟಿಗೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ.

ಸಚಿವರ ಪರಿಷತ್ತು ಕೋವಿಡ್ ಸೂಕ್ತ ನಡೆವಳಿಕೆ – ಮಾಸ್ಕ್ ಧಾರಣೆ, 6 ಅಡಿಗಳ ದೈಹಿಕ ಅಂತರ ಮತ್ತು ಪದೇಪದೇ ಕೈ ತೊಳೆಯುವುದರ ಮಹತ್ವವನ್ನು ಒತ್ತಿ ಹೇಳಿತು.

ಮುಂದಿರುವ ಬೃಹತ್ ಸವಾಲು ಎದುರಿಸಲು ಸಮಾಜದ ಪಾಲ್ಗೊಳ್ಳುವಿಕೆ ಅತ್ಯಂತ ಪ್ರಮುಖ ಅಂಶವಾಗಿದೆ ಎಂದು ಪುನರುಚ್ಚರಿಸಿದ ಮಂತ್ರಿ ಪರಿಷತ್ತು, ದೇಶ ಈ ಸಂದರ್ಭಕ್ಕೆ ಸೂಕ್ತವಾಗಿ ನಿಂತು ವೈರಾಣುವನ್ನು ಮಣಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿತು.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವಹಿಸಿದ್ದರು, ಸಚಿವರು, ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿಗಳು ಭಾಗಿಯಾಗಿದ್ದರು. ನೀತಿ ಆಯೋಗದ (ಆರೋಗ್ಯ) ಸದಸ್ಯ ಡಾ. ವಿ.ಕೆ. ಪಾಲ್ ಕೋವಿಡ್ 19 ಸಾಂಕ್ರಾಮಿಕದ ನಿರ್ವಹಣೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

***


(Release ID: 1715132) Visitor Counter : 208