ಪಂಚಾಯತ್ ರಾಜ್ ಸಚಿವಾಲಯ

2021 ರ ಏಪ್ರಿಲ್ 24 ರಂದು 12 ನೇ ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಣೆ

ದೇಶಾದ್ಯಂತ ಉತ್ತಮ ಸಾಧನೆ ಮಾಡಿದ ಪಂಚಾಯತ್ ಗಳು/ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪಂಚಾಯತ್ ರಾಜ್ ಸಚಿವಾಲಯದಿಂದ ಪ್ರಶಸ್ತಿ

ಪ್ರಶಸ್ತಿ ಪಡೆದ ಪಂಚಾಯತ್ ಗಳಿಗೆ [ಅನುದಾನ ಸಹಾಯವಾಗಿ] ನೇರವಾಗಿ ಇದೇ ಮೊದಲ ಬಾರಿಗೆ ಏಕಕಾಲಕ್ಕೆ ಪ್ರಶಸ್ತಿ ಮೊತ್ತ ವರ್ಗಾಯಿಸಲಿರುವ ಪ್ರಧಾನಮಂತ್ರಿ

2021 ರ ಏಪ್ರಿಲ್ 24 ರಂದು ಸ್ವಾಮಿತ್ವ ಯೋಜನೆಯನ್ನು ಇಡೀ ದೇಶಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ

5002 ಗ್ರಾಮಗಳ 40,99,45 ಆಸ್ತಿದಾರರಿಗೆ ಸ್ವಾಮಿತ್ವ ಯೋಜನೆಯಡಿ ಆಸ್ತಿ ಚೀಟಿ, ಟೈಟಲ್ ಡೀಡ್ಸ್ [ಸಂಪಟ್ಟಿ ಪತ್ರಕ್] ಗಳನ್ನು ವಿದ್ಯುನ್ಮಾನ ವಿಧಾನದ ಮೂಲಕ ಪ್ರಧಾನಮಂತ್ರಿ ಅವರು ವಿತರಿಸಲಿದ್ದಾರೆ

Posted On: 23 APR 2021 6:31PM by PIB Bengaluru

ದೇಶದಲ್ಲಿ ಕೋವಿಡ್-19 ಎರಡನೇ ಅಲೆ ಕಾಣಿಸಿಕೊಂಡು ಹಿಂದೆಂದೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ 2021 ರ ಏಪ್ರಿಲ್ 24 ರಂದು [ಶನಿವಾರ] ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ವರ್ಚುವಲ್ ಮೂಲಕ ಆಯೋಜಿಸಲು ತೀರ್ಮಾನಿಸಲಾಗಿದೆ.  ಸಾಮಾನ್ಯವಾಗಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ದೊಡ್ಡಮಟ್ಟದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ ಮತ್ತು ಅನೇಕ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಸಮಾರಂಭದ ಆಕರ್ಷಣೆಯಾಗುತ್ತಾರೆ. ಈ ವರ್ಷ ರಾಷ್ಟ್ರೀಯ ಸಮಾರಂಭವನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲು ಪ್ರಸ್ತಾವಿಸಲಾಗಿತ್ತು.  

1993 ರ ಏಪ್ರಿಲ್ 24 ರಂದು ತಳಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣದ ಇತಿಹಾಸಕ್ಕೆ ಸಾಕ್ಷಿಯಾದ ಮತ್ತು ಪಂಚಾಯತ್ ರಾಜ್ ನ 1992 ರ ಸಂವಿಧಾನ ತಿದ್ದುಪಡಿ [73ನೇ ತಿದ್ದುಪಡಿ] ಜಾರಿಗೆ ಬಂದ ದಿನವಾಗಿದೆ. ಇದರ ಅಂಗವಾಗಿ ಪಂಚಾಯತ್ ರಾಜ್ ಸಚಿವಾಲಯ ಪ್ರತಿವರ್ಷ ಏಪ್ರಿಲ್ 24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಿಸಲಾಗುತ್ತಿದ್ದು, (राष्ट्रीय पंचायती राज दिवस) (ಎನ್.ಪಿ.ಆರ್.ಡಿ), ಇದೇ ದಿನ 73 ನೇ ತಿದ್ದುಪಡಿ ಜಾರಿಗೆ ಬಂದ ದಿನವಾಗಿದೆ. ಈ ಸಂದರ್ಭದಲ್ಲಿ ದೇಶಾದ್ಯಂತ ಪಂಚಾಯತ್ ಪ್ರತಿನಿಧಿಗಳೊಂದಿಗೆ ನೇರ ಸಂವಾದ ನಡೆಸಲು ಅವಕಾಶ ಒದಗಿಸಲಾಗಿದೆ ಮತ್ತು ಅವರ ಸಾಧನೆಗಳನ್ನು ಗುರುತಿಸಿ ಅವರನ್ನು ಮತ್ತಷ್ಟು ಸಶಕ್ತಗೊಳಿಸಲು ಈ ಕಾರ್ಯಕ್ರಮ ಪ್ರೇರೇಪಿಸುತ್ತದೆ.

ಈ ಸಂದರ್ಭದಲ್ಲಿ ಪ್ರತಿ ವರ್ಷ ದೇಶಾದ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತ್ ಗಳು/ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಉತ್ತಮ ಸೇವೆ, ಸಾರ್ವಜನಿಕ ಆಡಳಿತ ವಲಯದಲ್ಲಿ ಉತ್ತಮವಾಗಿ ಕೆಲಸ ಮಾಡಿದ ಪಂಚಾಯತ್ ಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ್ (ಡಿ..ಡಿ.ಯು.ಪಿ.ಎಸ್.ಪಿ) ಪುರಸ್ಕಾರ್. ನೇತಾಜಿ ದೇಶ್ ಮುಖ್ ರಾಷ್ಟ್ರೀಯ ಗೌರವ್ ಗ್ರಾಮ ಸಭಾ (ಎನ್.ಡಿ.ಆರ್.ಜಿ.ಜಿ.ಎಸ್.ಪಿ) ಪುರಸ್ಕಾರ್.  ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ (ಜಿ.ಪಿ.ಡಿ.ಪಿ) ಪ್ರಶಸ್ತಿ. ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ (ಸಿ.ಎಫ್.ಜಿ.ಪಿ.ಎ)  ಪ್ರಶಸ್ತಿ  ಮತ್ತು ಇ-ಪಂಚಾಯತ್ ಪುರಸ್ಕಾರ್ [ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗುತ್ತದೆ.]

ಈ ವರ್ಷ ನಿರ್ಬಂಧಗಳು ಮತ್ತು ಮಿತಿಗಳ ಹೊರತಾಗಿಯೂ ದೇಶಾದ್ಯಂತ ಪಂಚಾಯತ್ ಗಳಲ್ಲಿ ಅನೇಕ ಅತ್ಯುತ್ತಮ ಸಾಮರ್ಥ್ಯ  ಪ್ರದರ್ಶನವಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ [ಅನುದಾನ ಸಹಾಯವಾಗಿ] 5 ರಿಂದ 50 ಲಕ್ಷ ರೂಪಾಯಿವರೆಗಿನ ಪ್ರಶಸ್ತಿ ಮೊತ್ತವನ್ನು ಗುಂಡಿ ಒತ್ತುವ ಮೂಲಕ ವರ್ಗಾವಣೆ ಮಾಡಲಿದ್ದಾರೆ.  ಸಂಬಂಧಪಟ್ಟ ಪಂಚಾಯತ್ ಗಳ ಬ್ಯಾಂಕ್ ಖಾತೆಗಳಿಗೆ ಏಕಕಾಲಕ್ಕೆ ಪ್ರಶಸ್ತಿ ಮೊತ್ತ ವರ್ಗಾವಣೆಯಾಗಲಿದೆ. ಇದೇ ಮೊದಲ ಬಾರಿಗೆ ಇಂತಹ ವಿನೂತನ ಕ್ರಮ ಅನುಸರಿಸಲಾಗುತ್ತಿದೆ.

2021 ರ ರಾಷ್ಟ್ರೀಯ ಪಂಚಾಯತ್ ರಾಜ್ ಪುರಸ್ಕಾರಗಳನ್ನು ಈ ಕೆಳಕಂಡ ವಲಯಗಳಲ್ಲಿ ನೀಡಲಾಗುತ್ತಿದೆ: ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ್ ಪುರಸ್ಕಾರ್ [224 ಪಂಚಾಯತ್ ಗಳಿಗೆ]. ನೇತಾಜಿ ದೇಶ್ ಮುಖ್ ರಾಷ್ಟ್ರೀಯ ಗೌರವ್ ಗ್ರಾಮ ಸಭಾ ಪುರಸ್ಕಾರ್ [30 ಗ್ರಾಮ ಪಂಚಾಯತ್ ಗಳಿಗೆ].  ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ ಪ್ರಶಸ್ತಿ [29ಗ್ರಾಮ ಪಂಚಾಯತ್ ಗಳಿಗೆ]. ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಪ್ರಶಸ್ತಿ [30 ಗ್ರಾಮ ಪಂಚಾಯತ್ ಗಳಿಗೆ] ಮತ್ತು ಇ-ಪಂಚಾಯತ್ ಪುರಸ್ಕಾರ್ [12 ರಾಜ್ಯಗಳಿಗೆ]

ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳು ಪಂಚಾಯತ್ ಗಳ ಸಾಧನೆಗಳ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸಲು ಮತ್ತು ಜ್ಞಾನ ಹಂಚಿಕೊಳ್ಳಲು ಒಂದು ಮಾಧ್ಯಮವಾಗಿ ಮಾರ್ಪಟ್ಟಿದೆ. ಹೀಗಾಗಿ ಎಲ್ಲಾ ಪಾಲುದಾರರಿಂದ ಬದ್ಧತೆಯ ಮಟ್ಟ ಹೆಚ್ಚಿಸುತ್ತದೆ ಮತ್ತು ಇದರ ಪರಿಣಾಮವಾಗಿ ರಾಷ್ಟ್ರಕ್ಕೆ ಲಾಭವಾಗುತ್ತದೆ. ನಮ್ಮ ದೇಶದ ಸಶಕ್ತ ಪಂಚಾಯತ್ ರಾಜ್ ಸಂಸ್ಥೆಗಳು ಪ್ರಬಲ ರಾಷ್ಟ್ರ ನಿರ್ಮಿಸುವಲ್ಲಿ ಬೆಂಬಲ ನೀಡುವುದಲ್ಲದೇ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದಲ್ಲಿ ಹೊಸ ಶಕೆಯನ್ನು  ನಿರ್ಮಿಸುವ ತನ್ನ ಪಾತ್ರದಿಂದ ಇತರೆ ದೇಶಗಳಿಗೆ ವಿಶಿಷ್ಟ ಉದಾಹರಣೆ ನೀಡಲು ಇದರಿಂದ ಸಾಧ್ಯವಾಗಲಿದೆ.

2021 ರ ರಾಷ್ಟ್ರೀಯ ಪಂಚಾಯತ್ ಪುರಸ್ಕಾರಗಳಿಗಾಗಿ [2019-20 ರ ಸಾಲಿನ ಮೌಲ್ಯಮಾಪನ] ಆನ್ ಲೈನ್ ಮೂಲಕ ಮೂರು ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಂದ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ್ ಪುರಸ್ಕಾರ್. ನೇತಾಜಿ ದೇಶ್ ಮುಖ್ ರಾಷ್ಟ್ರೀಯ ಗೌರವ್ ಗ್ರಾಮ ಸಭಾ ಪುರಸ್ಕಾರ್,  ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ ಪ್ರಶಸ್ತಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಪ್ರಶಸ್ತಿ ಮತ್ತು ಇ-ಪಂಚಾಯತ್ ಪುರಸ್ಕಾರ್ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.  74,000 ಕ್ಕೂ ಹೆಚ್ಚು ಪಂಚಾಯತ್ ಗಳು ಯಶಸ್ವಿಯಾಗಿ ಪ್ರಶಸ್ತಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದವು. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ [ಅಂದಾಜು] ಶೇ 28 ರಷ್ಟು ಹೆಚ್ಚಿನ ಪ್ರಮಾಣದ ಅರ್ಜಿಗಳಾಗಿವೆ.

ಗ್ರಾಮೀಣ ಭಾರತದ ಸಾಮಾಜಿಕ-ಆರ್ಥಿಕ ಸಬಲೀಕರಣ ಮತ್ತು ಸ್ವಾವಲಂಬನೆ ಸಾಧಿಸುವ ಉದ್ದೇಶದ ಕೇಂದ್ರೀಯ ಯೋಜನೆಯಾದ “ ಸ್ವಾಮಿತ್ವ [ಹಳ್ಳಿಗಳ ಸಮೀಕ್ಷೆ ಮತ್ತು ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಮ್ಯಾಪಿಂಗ್ ಮಾಡುವ] ಯೋಜನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2020 ರ ಏಪ್ರಿಲ್ 24 ರಂದು ಉದ್ಘಾಟನೆ ಮಾಡಿದ್ದರು. 2020 – 2021 ರ ಸಾಲಿನಲ್ಲಿ ಮಹಾರಾಷ್ಟ್ರ, ಕರ್ನಾಟಕ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ ರಾಜ್ಯಗಳಲ್ಲಿ ಮತ್ತು ಪಂಜಾಬ್ ಹಾಗೂ ರಾಜಸ್ಥಾನ ರಾಜ್ಯಗಳ ಕೆಲ ಆಯ್ದ ಗಡಿ ಹಳ್ಳಿಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಈ ಸಂದರ್ಭದಲ್ಲಿ 4.09 ಲಕ್ಷ ಆಸ್ತಿ ಮಾಲೀಕರಿಗೆ ಇ-ಆಸ್ತಿ ಚೀಟಿಗಳನ್ನು ವಿತರಿಸಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ದೇಶಾದ್ಯಂತ ಸ್ವಾಮಿತ್ವ ಯೋಜನೆಯ ಅನುಷ್ಠಾನಕ್ಕೆ ಪ್ರಧಾನಮಂತ್ರಿ ಅವರು ಚಾಲನೆ ನೀಡಲಿದ್ದಾರೆ.

ಈ ಯೋಜನೆ ಜಾರಿಗೆ 566.23 ಕೋಟಿ ರೂಪಾಯಿ ಮಂಜೂರಾಗಿದ್ದು, ಮುಂದಿನ ಐದು ವರ್ಷಗಳಲ್ಲಿ [2020-2025] ಹಂತ ಹಂತವಾಗಿ ಇಡೀ ದೇಶದ 6.62 ಲಕ್ಷ ಹಳ್ಳಿಗಳಲ್ಲಿ ಇದನ್ನು ಜಾರಿಗೆ ತರಲಾಗುತ್ತಿದೆ.  

ಆಂಧ್ರಪ್ರದೇಶ, ಹರಿಯಾಣ, ಕರ್ನಾಟಕ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ ಹಾಗೂ ರಾಜಸ್ಥಾನದ ಸುಮಾರು 40,000 ಹಳ್ಳಿಗಳಲ್ಲಿ ಪ್ರಾಯೋಗಿಕವಾಗಿ ನಿರಂತರ ಕಾರ್ಯಾಚರಣಾ ವ್ಯವಸ್ಥೆ [ಸಿ.ಒ.ಆರ್.ಎಸ್]ಯ ಕೇಂದ್ರಗಳ ಜಾಲವನ್ನು ಸ್ಥಾಪಿಸುವುದರೊಂದಿಗೆ ಡ್ರೋನ್ ಹಾರಾಟ ಪೂರ್ಣಗೊಳಿಸಲಾಗಿದೆ.

2021 ರ ಏಪ್ರಿಲ್ 24 ರಂದು 12 ನೇ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಹಿನ್ನೆಲೆಯಲ್ಲಿ ಉತ್ತಮ ಸಾಧನೆ ಮಾಡಿದ ಪಂಚಾಯತ್ ಸಂಸ್ಥೆಗಳಿಗೆ ರಾಷ್ಟ್ರೀಯ ಪುರಸ್ಕಾರ ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು 5002 ಗ್ರಾಮಗಳ 40,99,45 ಆಸ್ತಿದಾರರಿಗೆ ಸ್ವಾಮಿತ್ವ ಯೋಜನೆಯಡಿ ಆಸ್ತಿ ಚೀಟಿ, ಟೈಟಲ್ ಡೀಡ್ಸ್ [ಸಂಪಟ್ಟಿ ಪತ್ರಕ್] ಗಳನ್ನು ವಿದ್ಯುನ್ಮಾನ ವಿಧಾನದ ಮೂಲಕ ವಿತರಿಸಲಿದ್ದಾರೆ. ಬಹುತೇಕ ಆಸ್ತಿದಾರರು ತಮ್ಮ ಆಸ್ತಿ ಚೀಟಿಯನ್ನು ತಮ್ಮ ಮೊಬೈಲ್ ಫೋನ್ ನಿಂದ ಎಸ್.ಎಂ.ಎಸ್ ಕಳುಹಿಸಿ ಸಂಪರ್ಕ ಪಡೆದು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಸೂಕ್ತ ಶಿಷ್ಟಾಚಾರದ ಮೂಲಕ ಆಸ್ತಿ ಚೀಟಿ, ಟೈಟಲ್ ಡೀಡ್ ಗಳನ್ನು ವಿತರಣೆ ಮಾಡಲಿವೆ.

ಇದೇ ಸಂದರ್ಭದಲ್ಲಿ 5002 ಗ್ರಾಮಗಳಲ್ಲಿ ಕೋವಿಡ್ ನ ಸೂಕ್ತ ವರ್ತನೆ ಮೂಲಕ ಆಸ್ತಿ ದಾಖಲೆಗಳ ಭೌತಿಕ ವಿತರಣೆ ಪೂರ್ಣಗೊಳಿಸಲಾಗಿದೆ. ಹರಿಯಾಣದ 1308, ಕರ್ನಾಟಕದ 410, ಮಹಾರಾಷ್ಟ್ರದ 99, ಮಧ್ಯಪ್ರದೇಶದ 1399, ರಾಜಸ್ಥಾನದ 39, ಮಧ್ಯ ಪ್ರದೇಶದ 1409 ಮತ್ತು ಉತ್ತರಾಖಂಡದ 338 ಗ್ರಾಮಗಳಲ್ಲಿ ಪೂರ್ಣಗೊಳಿಸಲಾಗಿದೆ.

2021-2025 ರ ಅವಧಿಯಲ್ಲಿ ದೇಶದ ಸುಮಾರು 6.62 ಲಕ್ಷ ಹಳ್ಳಿಗಳಲ್ಲಿ ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸುವ ಯೋಜನೆಗೆ ಪ್ರಧಾನಮಂತ್ರಿ ಅವರು ಚಾಲನೆ ನೀಡಲಿದ್ದಾರೆ. ಇದುವರೆಗೆ ಯೋಜನೆಯ ಕಲಿಕೆಗಳು, ಸವಾಲುಗಳು ಮತ್ತು ಯಶಸ್ಸಿನ ವಿವಿಧ ಅಂಶಗಳನ್ನು ಒಳಗೊಂಡ ಸ್ವಾಮಿತ್ವ ಯೋಜನೆ ಕುರಿತ ಕಾಫಿಟೇಬಲ್ ಪುಸ್ತಕವನ್ನು ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಿದ್ದಾರೆ.

ಪ್ರಾಯೋಗಿಕವಾಗಿ ಯೋಜನೆ ಜಾರಿಗೆ ತಂದ 9 ರಾಜ್ಯಗಳ ಜತೆಗೆ ಬಹುತೇಕ ಇನ್ನಿತರ ರಾಜ್ಯಗಳು ಸರ್ವೆ ಆಫ್ ಇಂಡಿಯಾ ಜತೆ ಡ್ರೋನ್ ಸಮೀಕ್ಷೆ ಮಾಡಲು ಎಂಒಯು ಮಾಡಿಕೊಳ್ಳುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.   ಈ ರಾಜ್ಯಗಳಲ್ಲೂ ಸಹ ಡಿಜಿಟಲ್ ಆಸ್ತಿ ಚೀಟಿ/ಟೈಟಲ್ ಡೀಡ್, ಬೇಡಿಕೆಗೆ ಅನುಗುಣವಾಗಿ ತಿದ್ದುಪಡಿಗಳು ನಡೆಯುತ್ತಿವೆ. ಪ್ರತಿಯೊಂದು ರಾಜ್ಯದಲ್ಲೂ ಆಸ್ತಿ ಚೀಟಿಯನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಹರಿಯಾಣದಲ್ಲಿ “ಟೈಟಲ್ ಡೀಡ್”, ಕರ್ನಾಟಕದಲ್ಲಿ “ ರೂರಲ್ ಪ್ರಾಪರ್ಟಿ ವೊನರ್ ಶಿಪ್ ರೆಕಾರ್ಡ್ಸ್, ಮಧ‍್ಯ ಪ್ರದೇಶದಲ್ಲಿ “ ಅಧಿಕಾರ ಅಧಿಲೇಖ”, ಮಹಾರಾಷ್ಟ್ರದಲ್ಲಿ “ಸನ್ನದ್” ರಾಜಸ್ಥಾನದಲ್ಲಿ “ಪಟ್ಟಾ” “ಸ್ವಾಮಿತ್ವ ಅಧಿಲೇಖ”, ಉತ್ತರಾಖಂಡದಲ್ಲಿ  ಉತ್ತರ ಪ್ರದೇಶದಲ್ಲಿ “ ಘರೌನಿ” ಎಂಬ ಹೆಸರಿನಿಂದ ಕರೆಯಲಾಗುತ್ತದೆ. 

ಈ ಯೋಜನೆಯು ಗ್ರಾಮೀಣ ಭಾರತವನ್ನು ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ.  ಪಟ್ಟಣಗಳು ಮತ್ತು ನಗರಗಳಲ್ಲಿನಂತೆ ಸಾಲ ಮತ್ತು ಇತರೆ ಹಣಕಾಸಿನ ಪ್ರಯೋಜನಗಳನ್ನು ತೆಗೆದುಕೊಳ್ಳಲು ಗ್ರಾಮಸ್ಥರು ಆಸ್ತಿಯನ್ನು ಆರ್ಥಿಕ ಶಕ್ತಿಯಾಗಿ ಬಳಸಿಕೊಳ್ಳಲು ಇದು ದಾರಿ ಮಾಡಿಕೊಡುತ್ತದೆ. ಇದೇ ಮೊದಲ ಬಾರಿಗೆ ಲಕ್ಷಾಂತರ ಗ್ರಾಮೀಣ ಆಸ್ತಿ ಮಾಲಿಕರಿಗೆ ಅನುಕೂಲ ಕಲ್ಪಿಸಲು ಹೆಚ್ಚಿನ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಇಂತಹ ದೊಡ್ಡ ಪ್ರಮಾಣದ ಕಸರತ್ತು ನಡೆಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಎನ್.ಪಿ.ಆರ್.ಡಿ-2021 ಕಾರ್ಯಕ್ರಮ ಡಿಡಿ ನ್ಯೂಸ್ ನಲ್ಲಿ ಅಲ್ಲದೇ ಎಲ್ಲಾ ಪ್ರಾದೇಶಿಕ ಕೇಂದ್ರಗಳಲ್ಲೂ ನೇರ ಪ್ರಸಾರವಾಗಲಿದೆ. ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ರಾಜ್ಯ/ಜಿಲ್ಲೆ/ಬ್ಲಾಕ್/ಪಂಚಾಯತ್ ಹಂತದ ಇತರೆ ಪಾಲುದಾರರು ಈ ಕಾರ್ಯಕ್ರಮಕ್ಕೆ ನೇರ ಸಾಕ್ಷಿಯಾಗಲಿದ್ದಾರೆ. ಕೋವಿಡ್-19 ಶಿಷ್ಟಾಚಾರಗಳು, ಸಾರ್ವಜನಿಕ ಆರೋಗ್ಯ ಉದ್ದೇಶಗಳು, ಕೋವಿಡ್-19 ನಿಯಂತ್ರಣ ಕ್ರಮಗಳು, ಕರಶುದ್ದೀಕರಣ ಮತ್ತು ಸಾಮಾಜಿಕ ಅಂತರ ನಿಯಮ ಪಾಲನೆಯಲ್ಲಿ ಯಾವುದೇ ರಾಜೀಯಿಲ್ಲ. ಲೈವ್ ವೆಬ್ ಸ್ಟ್ರೀಮಿಂಗ್ 2021, ಏಪ್ರಿಲ್ 24 ರ ಮಧ್ಯಾಹ್ನ 12 ಗಂಟೆಗೆ, ಲಾಗ್ ಇನ್ ಆಗಿ : https://pmindiawebcast.nic.in/

ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಹಿನ್ನೆಲೆಯಲ್ಲಿ [24.042021] ರಾಷ್ಟ್ರವ್ಯಾಪಿ ಸ್ವಾಮಿತ್ವ ಯೋಜನೆ ಜಾರಿ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆನ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳಿ https://pmevents.ncog.gov.in/

*****



(Release ID: 1713709) Visitor Counter : 1331