ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಕುರಿತಾದ ಭಾರತೀಯ ಜೀನೋಮಿಕ್ ಒಕ್ಕೂಟವು ಮಾರ್ಚ್ 26, 2021 ರಿಂದ ರಾಜ್ಯಗಳೊಂದಿಗೆ ಜಿನೋಮ್ (ಜೀನ್‌ ಸಮುದಾಯ) ಅನುಕ್ರಮಣಿಕೆ ದತ್ತಾಂಶವನ್ನು ಅನೇಕ ಬಾರಿ ಹಂಚಿಕೊಂಡಿದೆ

ಭಾರತದಲ್ಲಿ ಬಳಸಲಾಗುತ್ತಿರುವ ಆರ್‌ಟಿಪಿಸಿಆರ್‌ ಪರೀಕ್ಷೆಗಳು ಬ್ರಿಟನ್‌, ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ಅವಳಿ ರೂಪಾಂತರಿ ವೈರಸ್‌ಗಳನ್ನು ಪತ್ತೆ ಹಚ್ಚುವುದರಲ್ಲಿ ವಿಫಲವಾಗುವುದಿಲ್ಲ

ಭಾರತೀಯ ಜೀನೋಮಿಕ್ ಒಕ್ಕೂಟವು ಇಲ್ಲಿಯವರೆಗೆ ಜಿನೋಮ್ ಅನುಕ್ರಮಣಿಕೆಗಾಗಿ 13,000ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಿದೆ

Posted On: 16 APR 2021 7:01PM by PIB Bengaluru

ʻಇಂಡಿಯನ್ ಸಾರ್ಸ್-ಕೋವ್‌-2 ಜೀನೋಮಿಕ್ಸ್ ಕನ್ಸಾರ್ಟಿಯಂʼ (ಇನ್ಸಾಕಾಗ್‌) ಎಂಬುದು ಭಾರತದಲ್ಲಿ ಸಾರ್ಸ್-ಕೋವ್‌-2 ವೈರಸ್‌ನ ಜಿನೋಮ್‌(ಜೀನ್‌ ಸಮೂಹದ) ಬದಲಾವಣೆಗಳನ್ನು ʻಸಂಪೂರ್ಣ ಜಿನೋಮ್ ಅನುಕ್ರಮಣಿಕೆʼ (ಡಬ್ಲ್ಯೂಜಿಎಸ್) ಮೂಲಕ ನಿರಂತರವಾಗಿ ಮೇಲ್ವಿಚಾರಣೆ ಮಾಡಲು 2020ರ ಡಿಸೆಂಬರ್ನಲ್ಲಿ ಸ್ಥಾಪಿಸಲಾದ ಹತ್ತು ಪ್ರಯೋಗಾಲಯಗಳ ಒಂದು ಜಾಲವಾಗಿದೆ.

ʻಇನ್ಸಾಕಾಗ್‌ʼನ ವಿವರವಾದ ಮಾರ್ಗಸೂಚಿಗಳನ್ನು ಡಿಸೆಂಬರ್ 27, 2020 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಬ್ರಿಟನ್‌ನಲ್ಲಿ ಪತ್ತೆಯಾದ ಸಾರ್ಸ್-ಕೋವ್‌-2 ವೈರಸ್‌ನ ಹೊಸ ರೂಪಾಂತರದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರದ ನಿಗಾ ಮತ್ತು ಪ್ರತಿಕ್ರಿಯೆಯ ಭಾಗವಾಗಿ ಎಲ್ಲಾ ರಾಜ್ಯಗಳಿಗೆ ಎಸ್‌ಒಪಿಗಳನ್ನು ಕಳುಹಿಸಲಾಗಿದ್ದು, ಡಿಸೆಂಬರ್ 22, 2020ರಂದು ಸಚಿವಾಲಯದ ವೆಬ್‌ಸೈಟ್ ನಲ್ಲೂ ಪ್ರಕಟಿಸಲಾಗಿದೆ.

ಇನ್ಸಾಕಾಗ್‌ ಮಾರ್ಗಸೂಚಿಗಳ ಪ್ರಕಾರ, ಸಂಪೂರ್ಣ ಜಿನೋಮ್ ಅನುಕ್ರಮಣಿಕೆಗಾಗಿ ಈ ಕೆಳಗಿನವುಗಳಿಂದ ಪಾಸಿಟಿವ್‌ ಮಾದರಿಗಳನ್ನು ಪಡೆಯಲಾಗುತ್ತದೆ:

  1. ಆರ್‌ಟಿ-ಪಿಸಿಆರ್‌ ವರದಿಯಲ್ಲಿ ಸೋಂಕು ದೃಢಪಟ್ಟ ಅಂತರರಾಷ್ಟ್ರೀಯ ಪ್ರಯಾಣಿಕರು.
  2. ಸಮುದಾಯ ಮಾದರಿಗಳನ್ನು ಸಂಯೋಜಿಸುವ ರಾಜ್ಯ ನಿಗಾ ಅಧಿಕಾರಿಗಳು ಜಿಲ್ಲೆಗಳು/ಪ್ರಯೋಗಾಲಯಗಳಿಂದ ಮಾದರಿಗಳನ್ನು ನಿಯೋಜಿತ ಇನ್ಸಾಕಾಗ್‌ ಪ್ರಯೋಗಾಲಯಗಳಿಗೆ ವರ್ಗಾಯಿಸಲು ನೆರವು ನೀಡುತ್ತಾರೆ. ಎಲ್ಲಾ ರಾಜ್ಯಗಳನ್ನು ನಿರ್ದಿಷ್ಟ ಇನ್ಸಾಕಾಗ್‌ ಪ್ರಯೋಗಾಲಯಗಳನ್ನು ಗೊತ್ತುಪಡಿಸಲಾಗಿದೆ.
  3. ಸೋಂಕಿನ ಪ್ರಕರಣಗಳ ಮಿತಿ ಮೀರಿದ ಏರಿಕೆ ವರದಿಯಾಗುವ ಜಿಲ್ಲೆಗಳ ಮಾದರಿಗಳು.

ಇನ್ಸಾಕಾಗ್ ಒಕ್ಕೂಟದದಲ್ಲಿ ಗುರುತಿಸಲಾದ 10 ಪ್ರಯೋಗಾಲಯಗಳು ತಮ್ಮ ಜಿನೋಮ್‌ ಅನುಕ್ರಮಣಿಕೆʼ ಫಲಿತಾಂಶಗಳನ್ನು ʻರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರʼದ [ಎನ್ ಸಿಡಿಸಿ]  ಕೇಂದ್ರ ಕಣ್ಗಾವಲು ಘಟಕಕ್ಕೆ ವರದಿ ಮಾಡುತ್ತವೆ; ಅಲ್ಲಿಂದ ಅದನ್ನು ಕೇಂದ್ರ ಕಣ್ಗಾವಲು ಘಟಕವು(ಸಿಎಸ್‌ಯು) ʻಐಡಿಎಸ್‌ಪಿʼಯ ರಾಜ್ಯ ಕಣ್ಗಾವಲು ಘಟಕಗಳೊಂದಿಗೆ (ಎಸ್‌ಎಸ್‌ಯುಗಳು) ಇಮೇಲ್ ಮೂಲಕ ಹಂಚಿಕೊಳ್ಳುತ್ತದೆ. ಜೊತೆಗೆ ರಾಜ್ಯ ಕಣ್ಗಾವಲು ಅಧಿಕಾರಿಗಳೊಂದಿಗೆ ಎನ್‌ಸಿಡಿಸಿ ನಿಯಮಿತ ಸಭೆಗಳನ್ನು ಮಾಡಿ ಈ ಮಾಹಿತಿಯನ್ನು ಹಂಚಿಕೊಳ್ಳುತ್ತದೆ. ನಂತರ ಅವರು, ಆಯಾ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳೊಂದಿಗೆ ಮುಂದಿನ ಕ್ರಮವನ್ನು ಕೈಗೊಳ್ಳುತ್ತಾರೆ. ಈ ಮೂಲಕ ರಾಜ್ಯಗಳಲ್ಲಿ ಕಂಡುಬರುವ ರೂಪಾಂತರಿ ವೈರಸ್‌ಗಳ ಬಗ್ಗೆ ರಾಜ್ಯಗಳಿಗೆ ನಿರಂತರವಾಗಿ ಮಾಹಿತಿ ನೀಡಲಾಗುತ್ತದೆ.

ಕೆಲವು ಸಂದರ್ಭಗಳಲ್ಲಿ, ಇನ್ಸಾಕಾಗ್‌ ಪ್ರಯೋಗಾಲಯಗಳು ಫಲಿತಾಂಶಗಳನ್ನು ನೇರವಾಗಿ ರಾಜ್ಯಗಳಿಗೆ ಕಳುಹಿಸಿದ್ದೂ ಇದೆ.

ʻಎನ್ಸಿಡಿಸಿʼ ಕಾಲಕಾಲಕ್ಕೆ ರಾಜ್ಯ ನಿರ್ದಿಷ್ಟ ಫಲಿತಾಂಶಗಳನ್ನು ಸಂಬಂಧಪಟ್ಟ ರಾಜ್ಯಗಳಿಗೆ ಔಪಚಾರಿಕವಾಗಿ ತಿಳಿಸಿದೆ. ಉದಾಹರಣೆಗೆ:

  • ಹಿಮಾಚಲ ಪ್ರದೇಶದ ಫಲಿತಾಂಶಗಳನ್ನು ಏಪ್ರಿಲ್ 8 ರಂದು ರಾಜ್ಯಕ್ಕೆ ತಿಳಿಸಲಾಗಿದೆ
  • ಪಂಜಾಬ್ ಫಲಿತಾಂಶವನ್ನು ಮಾರ್ಚ್ 26 ರಂದು ತಿಳಿಸಲಾಗಿದೆ
  • ಏಪ್ರಿಲ್ 10 ರಂದು ರಾಜಸ್ಥಾನದ ಫಲಿತಾಂಶ ತಿಳಿಸಲಾಗಿದೆ
  • ಮಹಾರಾಷ್ಟ್ರದ ಫಲಿತಾಂಶಗಳನ್ನು 2021 ಮಾರ್ಚ್12 ರಿಂದ ಏಪ್ರಿಲ್16ರವರೆಗೆ ಒಂಬತ್ತು ವಿಭಿನ್ನ ಸಂದರ್ಭಗಳಲ್ಲಿ ರಾಜ್ಯದೊಂದಿಗೆ ಹಂಚಿಕೊಳ್ಳಲಾಗಿದೆ

ಹೆಚ್ಚಿನ ಕಠಿಣ ಕ್ರಮಗಳ ಅಗತ್ಯದ ಬಗ್ಗೆ ಲಿಖಿತ ಸಂವಹನಗಳನ್ನು ಕೇವಲ ಹೆಚ್ಚಿನ ಸೋಂಕಿನ ಹೊರೆ ಇರುವ ರಾಜ್ಯಗಳಿಗೆ ಮಾತ್ರವಲ್ಲದೆ, ಎಲ್ಲಾ ರಾಜ್ಯಗಳಿಗೆ ಕಾಲಕಾಲಕ್ಕೆ ಕಳುಹಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ, ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ, ಎಬನ್‌ಸಿಡಿಸಿ ಮತ್ತು ನಿರ್ದೇಶಕರು ಮತ್ತು ಐಡಿಎಸ್‌ಪಿ ವತಿಯಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಗಳು, ʻಎಸ್ಎಸ್ಒʼಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಮುಂತಾದವರಿಗೆ ಈ ಲಿಖಿತ ಸಂದೇಶಗಳನ್ನು ಕಳುಹಿಸಲಾಗಿದೆ. ಪ್ರಸ್ತುತ ಅನ್‌ಲಾಕ್‌ ಪ್ರಕ್ರಿಯೆ ಜಾರಿ ಹಾಗೂ ವಿವಿಧ ದೇಶಗಳಿಂದ ರೂಪಾಂತರಿ ವೈರಸ್‌ ಆಗಮನದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾದ ಮುಂಜಾಗ್ರತಾ ಕ್ರಮಗಳನ್ನು ಕಾಯ್ದುಕೊಳ್ಳುವಂತೆ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪದೇ ಪದೇ ಸೂಚಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾಲಕಾಲಕ್ಕೆ ಪತ್ರಿಕಾ ಗೋಷ್ಠಿಗಳನ್ನು ನಡೆಸಿ, ಕಳವಳಕಾರಿ ರೂಪಾಂತರಿಯ ಬಗ್ಗೆ ಮತ್ತು ಹೊಸ ರೂಪಾಂತರಿಗಳ ಕುರಿತಾದ ಪ್ರಸ್ತುತ ಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ನೀಡುತ್ತಿದೆ. ಜೊತೆಗೆ, ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳ ಮೇಲೆ ಒತ್ತಡ ಹೇರುತ್ತದೆ. 2021ರ ಮಾರ್ಚ್ 24ರಂದು ಆಯೋಜಿಸಲಾದ ಪತ್ರಿಕಾ ಗೋಷ್ಠಿಯಲ್ಲಿ ʻಎನ್‌ಸಿಡಿಸಿʼ ನಿರ್ದೇಶಕರು ದೇಶದಲ್ಲಿ ಪತ್ತೆಯಾದ ಕೋವಿಡ್ ವೈರಸ್‌ನ ವಿವಿಧ ರೂಪಾಂತರಿಗಳ ಬಗ್ಗೆ ವಿವರವಾದ ಪ್ರಸ್ತುತಿಯನ್ನು ನೀಡಿದರು.

ಇತ್ತೀಚೆಗೆ, ಇನ್ಸಾಕಾಗ್ ಮಾರ್ಗಸೂಚಿಗಳನ್ನು ಮತ್ತೆ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದ್ದು, ಪಾಸಿಟಿವ್‌ ಫಲಿತಾಂಶ ಬಂದ ವ್ಯಕ್ತಿಗಳ ವೈದ್ಯಕೀಯ ದತ್ತಾಂಶದ ಜೊತೆಗೆ, ಜಿನೋಮ್ ಅನುಕ್ರಮಣಿಕೆಗಾಗಿ ಮಾದರಿಗಳನ್ನು ಕಳುಹಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಇದರಿಂದ ವಿವಿಧ ಸ್ಥಳಗಳಲ್ಲಿ ಸೋಂಕು ಉಲ್ಬಣಕ್ಕೆ ರೂಪಾಂತರಿಯು ಹೊಂದಿರುವ ಸಂಬಂಧದ ಬಗ್ಗೆ ಒಳನೋಟ ಪಡೆಯಲು ಅನುವಾಗಲಿದೆ; ಹಾಗೆಯೇ ಇದರಿಂದ ಸಮುದಾಯದಲ್ಲಿ ಇರಬಹುದಾದ ಇತರ ಕಳವಳಕಾರಿ ರುಪಾಂತರಿಯನ್ನು ಗುರುತಿಸಲು ಇನ್ಸಾಕಾಗ್‌ಗೆ ನೆರವಾಗಲಿದೆ. ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಕೇರಳ ಸೇರಿದಂತೆ ಅನೇಕ ರಾಜ್ಯಗಳು ಇನ್ನೂ ʻಎನ್‌ಸಿಡಿಸಿʼಯೊಂದಿಗೆ ದತ್ತಾಂಶವನ್ನು ಹಂಚಿಕೊಂಡಿಲ್ಲ, ಆದರೆ ಪಂಜಾಬ್ ಮತ್ತು ದೆಹಲಿ ಇಂತಹ ದತ್ತಾಂಶವನ್ನು ಹಂಚಿಕೊಂಡಿವೆ.

ಏಪ್ರಿಲ್‌ 15, 2021ರ ವೇಳೆಗೆ 13,614 ʻಡಬ್ಲ್ಯೂಜಿಎಸ್ʼ ಮಾದರಿಗಳನ್ನು 10 ನಿಯೋಜಿತ ಇನ್ಸಾಕಾಗ್‌ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇವುಗಳ ಪೈಕಿ 1,189 ಮಾದರಿಗಳಲ್ಲಿ ಭಾರತದಲ್ಲಿ ಸಾರ್ಸ್ ಕೋವಿ-2  ವೈರಸ್‌ನ ಕಳವಳಕಾರಿ ರೂಪಾಂತರಿ ದೃಢಪಟ್ಟಿದೆ. ಇವುಗಳಲ್ಲಿ ಬ್ರಿಟನ್‌ ರೂಪಾಂತರಿಯ 1,109 ಮಾದರಿಗಳು, ದಕ್ಷಿಣ ಆಫ್ರಿಕಾದ ರೂಪಾಂತರಿಯ 79 ಮಾದರಿಗಳು ಮತ್ತು ಬ್ರೆಜಿಲ್ ರೂಪಾಂತರಿಯ  1 ಮಾದರಿ ಸೇರಿವೆ.

ಕೋವಿಡ್-19 ವೈರಸ್ ರೂಪಾಂತರಗೊಂಡಿದ್ದು, ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ವಿವಿಧ ರೂಪಾಂತರಗಳು ಕಂಡುಬಂದಿವೆ. ಇವುಗಳಲ್ಲಿ ಬ್ರಿಟನ್‌ (17 ರೂಪಾಂತರಗಳು), ಬ್ರೆಜಿಲ್ (17 ರೂಪಾಂತರಗಳು), ಮತ್ತು ದಕ್ಷಿಣ ಆಫ್ರಿಕಾ (12 ರೂಪಾಂತರಗಳು) ರೂಪಾಂತರಿಗಳು ಸೇರಿವೆ. ಈ ರೂಪಾಂತರಿಗಳು ಹೆಚ್ಚಿನ ವ್ಯಾಪಿಸುವಿಕೆ ಸಾಮರ್ಥ್ಯವನ್ನು ಹೊಂದಿವೆ. ಬ್ರಿಟನ್‌ನಲ್ಲಿ ಮಾತ್ರ ಪತ್ತೆಯಾಗಿದ್ದ ಬ್ರಿಟನ್‌ ರೂಪಾಂತರಿಯು ಯೂರೋಪ್‌, ಏಷ್ಯಾ ಮತ್ತು ಅಮೆರಿಕದಾದ್ಯಂತ ವ್ಯಾಪಕವಾಗಿ ಹರಡಿದೆ.

ಅವಳಿ ರೂಪಾಂತರಿ (2 ರೂಪಾಂತರಗಳು) ಎಂಬುದು ಈ ವೈರಸ್‌ನ ಮತ್ತೊಂದು ಬಗೆಯ ರೂಪಾಂತರವಾಗಿದ್ದು, ಆಸ್ಟ್ರೇಲಿಯಾ, ಬೆಲ್ಜಿಯಂ, ಜರ್ಮನಿ, ಐರ್ಲೆಂಡ್, ನಮೀಬಿಯಾ, ನ್ಯೂಜಿಲ್ಯಾಂಡ್, ಸಿಂಗಾಪುರ್, ಬ್ರಿಟನ್‌, ಅಮೆರಿಕದಂತಹ ಹಲವಾರು ದೇಶಗಳಲ್ಲಿ ಕಂಡುಬಂದಿದೆ. ಈ ರೂಪಾಂತರಿಯು ವೇಗವಾಗಿ ಹಬ್ಬಬಲ್ಲದೇ ಎಂಬುದು ಇನ್ನೂ ಸಾಬೀತಾಗಿಲ್ಲ.

  • ಭಾರತದಲ್ಲಿ ನಡೆಸಲಾಗುತ್ತಿರುವ ಆರ್ಟಿಪಿಸಿಆರ್ ಪರೀಕ್ಷಾ ಪದ್ಧತಿಯಲ್ಲಿ ಎರಡಕ್ಕಿಂತ ಹೆಚ್ಚು ಜೀನ್ಗಳನ್ನು ಗುರಿಯಾಗಿಸಿಕೊಂಡಿರುವ ಹಿನ್ನೆಲೆಯಲ್ಲಿ, ಆರ್ಟಿಪಿಸಿಆರ್ ಪರೀಕ್ಷೆಗಳು ರೂಪಾಂತರಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗುವುದಿಲ್ಲ.
  • ಆರ್ಟಿಪಿಸಿಆರ್ ಪರೀಕ್ಷೆಗಳ ಸೂಕ್ಷ್ಮತೆ ಮತ್ತು ನಿರ್ದಿಷ್ಟತೆ ಹಿಂದಿನಂತೆಯೇ ಇದೆ.

ಈ ರೂಪಾಂತರಿಗಳ ಪತ್ತೆಯಿಂದಾಗಿ ಈ ಹಿಂದಿನಿಂದಲೂ ಅನುಸರಿಸಿಕೊಂಡು ಬರಲಾಗುತ್ತಿರುವ ನಿರ್ವಹಣಾ ಕಾರ್ಯತಂತ್ರ - ʻಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆʼ - ಇದರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಕೋವಿಡ್-19 ಹರಡುವುದನ್ನು ತಡೆಯಲು ಮಾಸ್ಕ್‌ಗಳ ಬಳಕೆಯು ಅತ್ಯಂತ ಪ್ರಮುಖ ರಕ್ಷೆಯಾಗಿದೆ.

***(Release ID: 1712482) Visitor Counter : 109