ಪ್ರಧಾನ ಮಂತ್ರಿಯವರ ಕಛೇರಿ

ಸೂಕ್ತ ಪ್ರಮಾಣದ ಪೂರೈಕೆ ಖಚಿತಪಡಿಸಿಕೊಳ್ಳಲು ಆಮ್ಲಜನಕದ ಸ್ಥಿತಿಗತಿ ಪ್ರಗತಿ ಪರಿಶೀಲಿಸಿದ ಪ್ರಧಾನಮಂತ್ರಿ

Posted On: 16 APR 2021 2:43PM by PIB Bengaluru

ದೇಶದಲ್ಲಿ ಸೂಕ್ತ ಪ್ರಮಾಣದಲ್ಲಿ ವೈದ್ಯಕೀಯ ದರ್ಜೆಯ ಆಮ್ಲಜನಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪ್ರಗತಿ ಪರಿಶೀಲನೆ ನಡೆಸಿದರು.

ಆರೋಗ್ಯ, ಕೈಗಾರಿಕೆ ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಡಿಪಿಐಐಟಿ, ಉಕ್ಕು, ರಸ್ತೆ ಸಾರಿಗೆ ಮತ್ತಿತರ ಸಚಿವಾಲಯಗಳು ಪ್ರಧಾನಮಂತ್ರಿ ಅವರಿಗೆ ಮಾಹಿತಿ ನೀಡಿದವು. ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳು ಆಮ್ಲಜನಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು

ಸೋಂಕು ಅತಿ ಹೆಚ್ಚಿರುವ 12 ರಾಜ್ಯಗಳಿಗೆ [ಮಹಾರಾಷ್ಟ್ರ, ಮಧ‍್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ, ದೆಹಲಿ, ಚತ್ತೀಸ್ ಘರ್, ಕರ್ನಾಟಕ, ಕೇರಳ, ತಮಿಳುನಾಡು, ಪಂಜಾಜ್, ಹರಿಯಾಣ ಮತ್ತು ರಾಜಸ್ಥಾನ] ಮುಂದಿನ 15 ದಿನಗಳಿಗೆ ಅಂದಾಜು ಅಗತ್ಯವಿರುವಷ್ಟು ಆಮ್ಲಜನಕದ ಸ್ಥಿತಿಗತಿ ಕುರಿತು ಪ್ರಗತಿ ಪರಾಮರ್ಶೆ ಮಾಡಿದರು. ರಾಜ್ಯಗಳಲ್ಲಿನ ಜಿಲ್ಲಾಮಟ್ಟದ ಪರಿಸ್ಥಿತಿಯ ವಿವರಗಳನ್ನು ಪ್ರಧಾನಮಂತ್ರಿ ಅವರಿಗೆ ನೀಡಲಾಗಿದೆ.

ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ  ನಿರಂತರ ಸಂಪರ್ಕದಲ್ಲಿದ್ದು, ಏಪ್ರಿಲ್ 20, ಏಪ್ರಿಲ್ 25 ಮತ್ತು ಏಪ್ರಿಲ್ 30ಕ್ಕೆ ಬೇಕಾಗುವ ಆಮ್ಲಜನಕದ ಬೇಡಿಕೆಯ ಕುರಿತು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿರುವ ಮಾಹಿತಿಯನ್ನೂ ಸಹ ಪ್ರಧಾನಮಂತ್ರಿ ಅವರಿಗೆ ನೀಡಲಾಗಿದೆ. ಇದಕ್ಕೆ ಅನುಗುಣವಾಗಿ ಏಪ್ರಿಲ್ 20, ಏಪ್ರಿಲ್ 25 ಮತ್ತು ಏಪ್ರಿಲ್ 30ಕ್ಕೆ ಅಂದಾಜು ಬೇಡಿಕೆಗಳಂತೆ ಕ್ರಮವಾಗಿ 4,880 ಎಂ.ಟಿ, 5,619 ಎಂ.ಟಿ, ಮತ್ತು 6,593 ಎಂ.ಟಿ. ಆಮ್ಲಜನಕವನ್ನು 12 ರಾಜ್ಯಗಳಿಗೆ ಮಂಜೂರು ಮಾಡಲಾಗಿದೆ.  

ಹೆಚ್ಚಾಗುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ದೇಶದಲ್ಲಿ ಉತ್ಪಾದನಾ ಸಾಮರ್ಥ್ಯದ ಬಗೆಗೂ ಪ್ರಧಾನಮಂತ್ರಿ ಅವರಿಗೆ ಮಾಹಿತಿ ನೀಡಲಾಗಿದೆ. ಪ್ರತಿಯೊಂದು ಘಟಕದಲ್ಲೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಮ್ಲಜನಕ ಉತ್ಪಾದನೆ ಹೆಚ್ಚಿಸುವಂತೆ ಪ್ರಧಾನಮಂತ್ರಿ ಅವರು ಸಲಹೆ ನೀಡಿದರು. ಉಕ್ಕು ಸ್ಥಾವರಗಳಲ್ಲಿರುವ ಹೆಚ್ಚುವರಿ ಆಮ್ಲಜನಕವನ್ನು ವೈದ್ಯಕೀಯ ಉದ್ದೇಶಕ್ಕೆ ಬಳಸುವ ಕುರಿತು ಸಹ ಚರ್ಚಿಸಲಾಯಿತು.

ದೇಶಾದ್ಯಂತ ಆಮ್ಲಜನಕವನ್ನು ಸಾಗಿಸುವ ಟ್ಯಾಂಕರ್ ಗಳ ತಡೆರಹಿತ ಮತ್ತು ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳುವಂತೆ ಪ್ರಧಾನಮಂತ್ರಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರ ಎಲ್ಲಾ ಅಂತಾರಾಜ್ಯ ಚಲನೆಯ ಪರವಾನಗಿ ನೋಂದಣಿಯಿಂದಲೂ ವಿನಾಯಿತಿ ನೀಡಿದೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆ ಸಾಮರ್ಥ್ಯ ಹೆಚ್ಚಳವನ್ನು ಖಚಿತಪಡಿಸಿಕೊಳ್ಳಲು ಟ್ಯಾಂಕರ್ ಗಳು ದಿನ ಪೂರ್ತಿ ಸಂಚರಿಸಬೇಕು. ಚಾಲಕರು ಶಿಪ್ಟ್ ಗಳಲ್ಲಿ ಕೆಲಸ ಮಾಡುವಂತೆ ಎಲ್ಲಾ ರಾಜ್ಯಗಳು ಮತ್ತು ಸಾರಿಗೆ ವಲಯಕ್ಕೆ ಸೂಚಿಸಲಾಗಿದೆ ಎಂದು ಸಭೆಯಲ್ಲಿ ಪ್ರಧಾನಮಂತ್ರಿ ಅವರಿಗೆ ತಿಳಿಸಲಾಗಿದೆ. ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಸಿಲಿಂಡರ್ ರೀಫಿಲ್ ಮಾಡುವ ಘಟಕಗಳು ಸಹ 24 ಗಂಟೆಗಳ ಕಾಲ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಕೈಗಾರಿಕಾ ಸಿಲಿಂಡರ್ ಗಳನ್ನು ಶುದ್ದೀಕರಿಸಿದ ನಂತರ ವೈದ್ಯಕೀಯ ವಲಯದ ಆಮ್ಲಜನಕಕ್ಕೆ  ಬಳಕೆ ಮಾಡಲು  ಸರ್ಕಾರ ಅನುಮತಿ ನೀಡಿದೆ. ಇದೇ ಸಂದರ್ಭದಲ್ಲಿ ಟ್ಯಾಂಕರ್ ಗಳ ಸಂಭವನೀಯ ಕೊರತೆ ನೀಗಿಸಲು ನೈಟ್ರೋಜೆನ್ ಮತ್ತು ಆರ್ಗಾನ್ ಟ್ಯಾಂಕರ್ ಗಳನ್ನು ಸ್ವಯಂಚಾಲಿತವಾಗಿ ಆಮ್ಲಜನಕ ಟ್ಯಾಂಕರ್ ಗಳನ್ನಾಗಿ ಪರಿವರ್ತಿಸಲು ಅನುಮತಿ ನೀಡಲಾಗಿದೆ

ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಆಮದು ಮಾಡಿಕೊಳ್ಳುವ ಕುರಿತಂತೆಯೂ ಪ್ರಯತ್ನಗಳು ಮುಂದುವರಿದಿವೆ ಎಂದು ಅಧಿಕಾರಿಗಳು ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರಿಗೆ ಮಾಹಿತಿ ನೀಡಿದರು.

***



(Release ID: 1712258) Visitor Counter : 243