ಪ್ರಧಾನ ಮಂತ್ರಿಯವರ ಕಛೇರಿ

ದೇಶದ ಲಸಿಕೆ ಅಭಿಯಾನ ಮತ್ತು ಕೋವಿಡ್ -19 ಪರಿಸ್ಥಿತಿಯ ಕುರಿತಂತೆ ರಾಜ್ಯಪಾಲರುಗಳೊಂದಿಗೆ ಪ್ರಧಾನಮಂತ್ರಿ ಸಂವಾದ

Posted On: 14 APR 2021 9:05PM by PIB Bengaluru

ಕೋವಿಡ್ ವಿರುದ್ಧದ ಸಮರದಲ್ಲಿ ಜನರ ಪಾಲ್ಗೊಳ್ಳುವಿಕೆಯಲ್ಲಿ ರಾಜ್ಯಪಾಲರು ಪ್ರಮುಖ ಸ್ತಂಭವಾಗಿದ್ದಾರೆ:ಪ್ರಧಾನಮಂತ್ರಿ

ಹೋರಾಟದಲ್ಲಿ ಎಲ್ಲಸಮುದಾಯ ಸಂಘಟನೆಗಳು, ರಾಜಕೀಯ ಪಕ್ಷಗಳು, ಎನ್.ಜಿ..ಗಳು ಮತ್ತು ಸಾಮಾಜಿಕ ಸಂಸ್ಥೆಗಳ ಸಂಘಟಿತ ಶಕ್ತಿಯನ್ನು ಸಂಪೂರ್ಣ ಬಳಸಿಕೊಳ್ಳಬೇಕು: ಪ್ರಧಾನಮಂತ್ರಿ

ಪತ್ತೆ, ಸಂಪರ್ಕ ಪತ್ತೆ, ಚಿಕಿತ್ಸೆಯ ಮಹತ್ವದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿ; ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯ ಹೆಚ್ಚಳದ ಮಹತ್ವದ ಪ್ರತಿಪಾದನೆ

ಅಗತ್ಯ ಪ್ರಮಾಣದ ಲಸಿಕೆಗಳ ಲಭ್ಯತೆಯ ಖಾತ್ರಿಪಡಿಸಲು ಸರ್ಕಾರ ಬದ್ಧ : ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ರಾಜ್ಯಗಳ ರಾಜ್ಯಪಾಲರುಗಳೊಂದಿಗೆ ದೇಶದ ಕೋವಿಡ್ -19 ಪರಿಸ್ಥಿತಿ ಮತ್ತು ಪ್ರಸಕ್ತ ಚಾಲ್ತಿಯಲ್ಲಿರುವ ಲಸಿಕೆ ಅಭಿಯಾನದ ಬಗ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆಯ ಜೊತೆಗೆ, ನಮ್ಮ ಮೌಲ್ಯಗಳು ಮತ್ತು ಕರ್ತವ್ಯ ಪ್ರಜ್ಞೆ ನಮ್ಮ ಅತಿ ದೊಡ್ಡ ಶಕ್ತಿ ಎಂದು ಹೇಳಿದರು. ಕಳೆದ ವರ್ಷ ತಮ್ಮ ಕರ್ತವ್ಯವನ್ನು ಪರಿಗಣಿಸಿ ಹೋರಾಟದಲ್ಲಿ ಪಾಲ್ಗೊಂಡ ಎಲ್ಲ ನಾಗರಿಕರನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಇದೇ ಜನರ ಪಾಲ್ಗೊಳ್ಳುವಿಕೆಯನ್ನು ಈಗಲೂ ಉತ್ತೇಜಿಸುವ ಅಗತ್ಯವಿದೆ ಎಂದರು. ಇದನ್ನು ಸಾಧಿಸಲು ತಮ್ಮ ಸಾಮಾಜಿಕ ಸ್ಥಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ರಾಜ್ಯಪಾಲರ ಪಾತ್ರ ಹೆಚ್ಚು ನಿರ್ಣಾಯಕವಾಗುತ್ತದೆ ಎಂದು ಅವರು ಹೇಳಿದರು. ರಾಜ್ಯ ಸರ್ಕಾರಗಳು ಮತ್ತು ಸಮಾಜದ ನಡುವೆ ಉತ್ತಮ ಸಮನ್ವಯವನ್ನು ಖಾತ್ರಿಪಡಿಸಿಕೊಳ್ಳಲು ರಾಜ್ಯಪಾಲರು ಒಂದು ಪ್ರಮುಖ ಕೊಂಡಿಯಾಗಿದ್ದು, ಎಲ್ಲಾ ಸಮುದಾಯ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಎನ್‌.ಜಿ..ಗಳು ಮತ್ತು ಸಾಮಾಜಿಕ ಸಂಸ್ಥೆಗಳ ಸಂಯೋಜಿತ ಅಧಿಕಾರವನ್ನು ಬಳಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.

ಸೂಕ್ಷ್ಮ ಕಂಟೈನ್ಮೆಂಟ್ ಗಾಗಿ ರಾಜ್ಯ ಸರ್ಕಾರಗಳೊಂದಿಗೆ ಸಾಮಾಜಿಕ ಸಂಸ್ಥೆಗಳು ತಡೆರಹಿತವಾಗಿ ಸಹಯೋಗ ನೀಡಲು ರಾಜ್ಯಪಾಲರುಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಪ್ರಧಾನಮಂತ್ರಿ ಸಲಹೆ ಮಾಡಿದರು. ಅವರ ಸಾಮಾಜಿಕ ಸಂಪರ್ಕಜಾಲ ಆಂಬುಲೆನ್ಸ್ ಗಳು, ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳು ಮತ್ತು ಆಕ್ಸಿಜನ್ ಸಾಮರ್ಥ್ಯ ಹೆಚ್ಚಳದ ಖಾತ್ರಿಪಡಿಸಲು ನೆರವಾಗುತ್ತದೆ ಎಂದು ಹೇಳಿದರು. ಲಸಿಕೆ ಮತ್ತು ಚಿಕಿತ್ಸೆಯ ಸಂದೇಶವನ್ನು ಸಾರುವುದರ ಜೊತೆಗೆ ರಾಜ್ಯಪಾಲರು ಆಯುಷ್ ಸಂಬಂಧಿತ ಪರಿಹಾರಗಳ ಬಗ್ಗೆಯೂ ಜಾಗೃತಿ ಮೂಡಿಸಬಹುದು ಎಂದರು.

ನಮ್ಮ ಯುವಜನರು, ನಮ್ಮ ಕಾರ್ಯಪಡೆ, ನಮ್ಮ ಆರ್ಥಿಕತೆಯ ಮಹತ್ವದ ಭಾಗವಾಗಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ. ಹೀಗಾಗಿ ನಮ್ಮ ಯುವಜನರು ಎಲ್ಲ ಕೋವಿಡ್ ಸಂಬಂಧಿತ ಶಿಷ್ಟಾಚಾರಗಳನ್ನು ಮತ್ತು ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಜನರ ಪಾಲ್ಗೊಳ್ಳುವಿಕೆಯ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳ ಆವರಣದಲ್ಲಿರುವ ನಮ್ಮ ವಿದ್ಯಾರ್ಥಿಗಳ ಹೆಚ್ಚಿನ ಕಾರ್ಯಚಟುವಟಿಕೆಯಲ್ಲಿ ಸಹ ರಾಜ್ಯಪಾಲರುಗಳ ಪಾತ್ರ ಪ್ರಮುಖವಾಗಿದೆ ಎಂದೂ ತಿಳಿಸಿದರು.   ನಾವು ವಿಶ್ವವಿದ್ಯಾಲಯಗಳು ಮತ್ತು ಕಾಲೇಜು ಆವರಣಗಳಲ್ಲಿರುವ ಸೌಲಭ್ಯಗಳನ್ನು ಉತ್ತಮವಾಗಿ ಬಳಸಿಕೊಳ್ಳುವತ್ತ ಗಮನ ಹರಿಸುವ ಅಗತ್ಯವಿದೆ. ಕಳೆದ ವರ್ಷದಂತೆ, ವರ್ಷವೂ ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ ಎಂದೂ ಹೇಳಿದರು. ಸಮರದಲ್ಲಿ ಜನರ ಪಾಲ್ಗೊಳ್ಳುವಿಕೆಯಲ್ಲಿ ರಾಜ್ಯಪಾಲರುಗಳು ಪ್ರಮುಖ ಸ್ತಂಭವಾಗಿದ್ದು, ರಾಜ್ಯ ಸರ್ಕಾರಗಳೊಂದಿಗೆ ಅವರ ಸಹಕಾರ ಮತ್ತು ರಾಜ್ಯದ ಸಂಸ್ಥೆಗಳಿಗೆ ಅವರ ಮಾರ್ಗದರ್ಶನ ದೇಶದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳದ ಬಗ್ಗೆ ಚರ್ಚಿಸಿದ ಪ್ರಧಾನಮಂತ್ರಿಯವರು, ವೈರಾಣುವಿನ ವಿರುದ್ಧದ ಹೋರಾಟದ ಹಂತದಲ್ಲಿ, ಕಳೆದ ವರ್ಷ ಗಳಿಸಿದ ಅನುಭವ ಮತ್ತು ಸುಧಾರಿತ ಆರೋಗ್ಯ ಸಾಮರ್ಥ್ಯದಿಂದ ದೇಶವು ಪ್ರಯೋಜನ ಪಡೆಯುತ್ತಿದೆ ಎಂದು ಹೇಳಿದರು. ಆರ್‌.ಟಿ,ಪಿ.ಸಿ.ಆರ್ಪರೀಕ್ಷಾ ಸಾಮರ್ಥ್ಯದ ಹೆಚ್ಚಳ ಕುರಿತು ಅವರು ಚರ್ಚಿಸಿದರು ಮತ್ತು ಕಿಟ್‌ ಗಳು ಮತ್ತು ಪರೀಕ್ಷೆಗೆ ಸಂಬಂಧಿಸಿದ ಇತರ ವಸ್ತುಗಳಿಗೆ ಸಂಬಂಧಿಸಿದಂತೆ ದೇಶವು ಆತ್ಮನಿರ್ಭರವಾಗಿದೆ ಎಂದು ಉಲ್ಲೇಖಿಸಿದರು. ಇವೆಲ್ಲವೂ ಆರ್‌.ಟಿ.ಪಿ.ಸಿ.ಆರ್ ಪರೀಕ್ಷೆಗಳ ವೆಚ್ಚವನ್ನು ಕಡಿಮೆ ಮಾಡಲು ಕಾರಣವಾಗಿದೆ. ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ಉತ್ಪನ್ನಗಳು ಜಿಎಂ ಪೋರ್ಟಲ್‌ ನಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು. ಪತ್ತೆ, ಸಂಪರ್ಕ ಪತ್ತೆ ಮತ್ತು ಪರೀಕ್ಷೆಯನ್ನು ಹೆಚ್ಚಿಸುವ ಮಹತ್ವವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು ಮತ್ತು ಆರ್‌.ಟಿ.ಪಿ.ಸಿ.ಆರ್ ಪರೀಕ್ಷೆಯನ್ನು ಶೇ.60 ರಿಂದ ಶೇ.70ಕ್ಕೆ ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದರು. ಹೆಚ್ಚು ಹೆಚ್ಚು ಜನರು ಪರೀಕ್ಷೆಗೆ ಒಳಗಾಗುವುದನ್ನು ಖಾತ್ರಿಪಡಿಸಿಕೊಳ್ಳುವುದು ಸೂಕ್ತವಾಗಿದೆ ಎಂದು ಅವರು ಹೇಳಿದರು.

ಲಸಿಕೆಗಳ ಅಗತ್ಯ ಲಭ್ಯತೆಗೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಭಾರತ ತ್ವರಿತವಾಗಿ 10 ಕೋಟಿ ಲಸಿಕೆಯ ಗಡಿ ತಲುಪಿದ ರಾಷ್ಟ್ರವಾಗಿದೆ, ಲಸಿಕೆ ಉತ್ಸವದ ಧನಾತ್ಮಕ ಪರಿಣಾಮದಿಂದಾಗಿ, ಕಳೆದ ನಾಲ್ಕು ದಿನಗಳಲ್ಲಿ ಲಸಿಕಾ ಅಭಿಯಾನ ವಿಸ್ತಾರವಾಗಿದೆ ಮತ್ತು ಹೊಸ ಲಸಿಕಾ ಕೇಂದ್ರಗಳೂ ರೂಪುಗೊಂಡಿವೆ ಎಂದರು.

ಸಂವಾದ

ಭಾರತದ ಉಪ ರಾಷ್ಟ್ರಪತಿಯವರು, ಕೇಂದ್ರ ಸಚಿವರುಗಳು ಮತ್ತು ಕೇಂದ್ರ ಆರೋಗ್ಯ ಸಚಿವರು ಸಹ ಸಂವಾದದಲ್ಲಿ ಭಾಗಿಯಾದರು.

ಉಪ ರಾಷ್ಟ್ರಪತಿಯವರು ಕೋವಿಡ್ ವಿರುದ್ಧದ ಸಮರದ ನೇತೃತ್ವ ವಹಿಸಿರುವ ಮತ್ತು ಸಾಂಕ್ರಾಮಿಕದ ನಿಗ್ರಹಕ್ಕೆ ಅಗತ್ಯವಾದ ಮೂಲಸೌಕರ್ಯಕ್ಕಾಗಿ ಕೈಗೊಂಡ ಸಕ್ರಿಯ ಕ್ರಮಗಳಿಗಾಗಿ ಪ್ರಧಾನಮಂತ್ರಿಯವನ್ನು ಶ್ಲಾಘಿಸಿದರು. ಭಾರತಕ್ಕೆ ಮತ್ತು ಇಡೀ ವಿಶ್ವಕ್ಕೆ ಲಸಿಕೆಯನ್ನು ನೀಡಿದ ವೈಜ್ಞಾನಿಕ ಸಮುದಾಯದ ಕೊಡುಗೆಯನ್ನೂ ಅವರು ಒತ್ತಿ ಹೇಳಿದರು. ಸಾಂಕ್ರಾಮಿಕದ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕಾರ್ಯಕರ್ತರು ಮತ್ತು ಇತರ ಮುಂಚೂಣಿ ಕಾರ್ಯಕರ್ತರ ಬಗ್ಗೆಯೂ ಮಾತನಾಡಿದರು.

ಕೋವಿಡ್ ಸೂಕ್ತ ನಡೆವಳಿಕೆಯ ಜಾಗೃತಿ ಮೂಡಿಸಲು ಆಯಾ ರಾಜ್ಯಗಳಲ್ಲಿ ಸರ್ವಪಕ್ಷ ಸಭೆಗಳನ್ನು ನಡೆಸುವ ಮೂಲಕ ಮತ್ತು ನಾಗರಿಕ ಸಮಾಜ ಸಂಸ್ಥೆಗಳೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಸಮನ್ವತೆ ಸಾಧಿಲು ರಾಜ್ಯಪಾಲರುಗಳಿಗೆ ಉಪ ರಾಷ್ಟ್ರಪತಿ ಕರೆ ನೀಡಿದರು. ಪಕ್ಷಾತೀತವಾಗಿ 'ಭಾರತದ ತಂಡ ಸ್ಫೂರ್ತಿ' ಅಳವಡಿಸಿಕೊಳ್ಳಬೇಕು ಮತ್ತು ನಿಟ್ಟಿನಲ್ಲಿ ರಾಜ್ಯಪಾಲರು 'ರಾಜ್ಯದಳ ರಕ್ಷಕ'ರಾಗಿ ರಾಜ್ಯ ಸರ್ಕಾರಗಳಿಗೆ ಮಾರ್ಗದರ್ಶನ ನೀಡಬಹುದು ಎಂದು ಉಪ ರಾಷ್ಟ್ರಪತಿ ಹೇಳಿದರು.

ಕೇಂದ್ರ ಗೃಹ ಸಚಿವರು ಪ್ರತಿಯೊಬ್ಬರ ಜೀವವನ್ನು ರಕ್ಷಿಸುವ ಮಹತ್ವವನ್ನು ಪ್ರತಿಪಾದಿಸಿದರು. ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು ಕೋವಿಡ್ ಪ್ರಕರಣಗಳು ಮತ್ತು ಲಸಿಕಾ ಅಭಿಯಾನ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಪ್ರಯತ್ನದಲ್ಲಿ ಭಾರತ ಹೇಗೆ ಸಕ್ರಿಯ ಮತ್ತು ಪೂರ್ವಭಾವಿ ದೃಷ್ಟಿಕೋನವನ್ನು ಅನುಸರಿಸಿತು ಎಂಬ ಬಗ್ಗೆ ಪಕ್ಷಿನೋಟ ಬೀರಿದರು.

ರಾಜ್ಯಪಾಲರುಗಳು ವೈರಾಣು ಪ್ರಸರಣ ತಡೆ ಕುರಿತು ತಮ್ಮ ತಮ್ಮ ರಾಜ್ಯಗಳಲ್ಲಿ ಕೈಗೊಂಡ ಕ್ರಮಗಳು ಮತ್ತು  ಲಸಿಕಾ ಅಭಿಯಾನವನ್ನು ಸುಗಮವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನಡೆದಿರುವ ಚಟುವಟಿಕೆಗಳನ್ನು ಸಮನ್ವಯಗೊಳಿಸುತ್ತಿರುವ ಬಗ್ಗೆ ವಿವರಗಳನ್ನು ಹಂಚಿಕೊಂಡರು, ರಾಜ್ಯಗಳಲ್ಲಿನ ಆರೋಗ್ಯ ಸೌಲಭ್ಯಗಳ ನ್ಯೂನತೆಗಳ ಬಗ್ಗೆಯೂ ಉಲ್ಲೇಖಿಸಿದರು.

ಪ್ರಯತ್ನಗಳಲ್ಲಿ ಮತ್ತಷ್ಟು ಸುಧಾರಣೆಗೆ ಅವರು ಸಲಹೆಗಳನ್ನು ನೀಡಿದರು ಮತ್ತು ವಿವಿಧ ಗುಂಪುಗಳ ಸಕ್ರಿಯ ಸಾಮಾಜಿಕ ಕಾರ್ಯಕ್ರಮದ ಮೂಲಕ ಜನರ ಪಾಲ್ಗೊಳ್ಳುವಿಕೆಯನ್ನು ಹೇಗೆ ಹೆಚ್ಚಿಸಬಹುದು ಎಂಬ ಯೋಜನೆಗಳ ಕುರಿತೂ ಹಂಚಿಕೊಂಡರು.

***



(Release ID: 1711993) Visitor Counter : 180