ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ವರ್ಷವಿಡೀ ಹಣ್ಣು ಬಿಡುವ ಮಾವಿನ ತಳಿ ಅಭಿವೃದ್ಧಿ ಪಡಿಸಿರುವ ಕೋಟಾ ರೈತ

Posted On: 05 APR 2021 3:02PM by PIB Bengaluru

ರಾಜಾಸ್ಥಾನದ ಕೋಟಾದ ರೈತ ಶ್ರೀಕಿಶನ್ ಸುಮನ್ (55 ವರ್ಷ) ನಾವಿನ್ಯಪೂರ್ಣವಾದ ಮಾವಿನ ತಳಿಯನ್ನು ಸಂಶೋಧಿಸಿದ್ದು, ಸದಾಬಹರ್ ಎಂಬ ಈ ಮಾವು ನಿಯಮಿತ ಮತ್ತು  ಕುಬ್ಜ ತಳಿ, ವರ್ಷವಿಡೀ ಹಣ್ಣು ಕೊಡುತ್ತದೆ, ಇದು ಸಾಮಾನ್ಯವಾಗಿ ಮಾವಿನಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳು ಮತ್ತು ಅತ್ಯಂತ ಪ್ರಮುಖ ಕಾಯಿಲೆಗಳ ನಿರೋಧಕವಾಗಿದೆ.
ಈ ಹಣ್ಣು ಲಂಗ್ರಾಗೆ ಹೋಲಿಸಿದರೆ ತುಂಬಾ ರುಚಿಯಾಗಿದ್ದು, ಇದು ಕುಬ್ಜ ತಳಿಯಾಗಿದೆ, ಇದು ಅಡುಮನೆಯ ಉದ್ಯಾನ, ಅತಿ ದಟ್ಟ ತೋಪುಗಳಿಗೂ ಸೂಕ್ತವಾಗಿದೆ, ಮತ್ತು ಇದು ಕೆಲವು ವರ್ಷಗಳ ಕಾಲ ಕುಂಡಗಳಲ್ಲೂ ಬೆಳೆಯುತ್ತದೆ. ಜೊತೆಗೆ, ವರ್ಷವಿಡೀ ಸಿಗುವ ಹಣ್ಣಿನ ತಿರುಳು, ಕಡು ಕಿತ್ತಳೆ ಬಣ್ಣದಿಂದ ಕೂಡಿದ್ದು, ಬಹು ಸವಿಯಾಗಿರುತ್ತದೆ, ತಿರುಳಿನಲ್ಲಿ ಕಡಿಮೆ ಪ್ರಮಾಣದ ಫೈಬರ್ ಅಂಶವಿದ್ದು ಅದನ್ನು ಇತರ ಮಾವಿನ ಪ್ರಭೇದಗಳಿಂದ ಪ್ರತ್ಯೇಕಿಸುತ್ತದೆ. ಈ ಮಾವು ಪೋಷಕಾಂಶಗಳಿಂದ ತುಂಬಿದ್ದು ಆರೋಗ್ಯಕ್ಕೆ ಒಳ್ಳೆಯದಾಗಿದೆ.
ಈ ಮಾವಿನ ತಳಿಯ ಹಿಂದೆ ಬಡತನದಲ್ಲೇ ಬೆಳೆದ ಶ್ರೀ ಕಿಶನ್ ಶ್ರಮವಿದೆ, ಎರಡನೇ ತರಗತಿಯಲ್ಲೇ ಶಾಲೆ ಬಿಟ್ಟ ಇವರು, ಕುಲ ಕಸುಬಾದ ಮಾಲಿಯ ವೃತ್ತಿ ಹಿಡಿದರು. ಇವರ ಕುಟುಂಬದವರು ಭತ್ತ ಮತ್ತು ಗೋಧಿ ಬೆಳೆಯುವತ್ತ ಗಮನ ಹರಿಸಿದರೆ, ಇವರು ಹೂ ಬೆಳೆಸುವುದರಲ್ಲಿ ಮತ್ತು   ಹಣ್ಣಿನ ತೋಟದ ನಿರ್ವಹಣೆಯಲ್ಲಿ ಆಸಕ್ತಿ ತೋರಿದರು.  ಮಳೆ, ಪ್ರಾಣಿಗಳ ದಾಳಿ ಇತ್ಯಾದಿಗಳ ಮೇಲೆ ಗೋಧಿ ಮತ್ತು ಭತ್ತದಂತಹ ಬೆಳೆಗಳ ಯಶಸ್ಸು ಅವಲಂಬಿತವಾಗಿದ್ದು, ಅವರ ಲಾಭಾಂಶ ಸೀಮಿತಗೊಳಿಸುತ್ತದೆ ಎಂಬುದನ್ನು ಅವರು ಅರಿತರು. 
ಅವರು ಕುಟುಂಬದ ಆದಾಯವನ್ನು ಹೆಚ್ಚಿಸಲು ಹೂ ಬೆಳೆಸಲು ಆರಂಭಿಸಿದರು. ಮೊದಲಿಗೆ ವಿವಿಧ ಬಗೆಯ ಗುಲಾಬಿಗಳನ್ನು ಬೆಳೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರು. ಇದರೊಂದಿಗೆ ಅವರು ಮಾವಿನ ಹಣ್ಣೂ ಬೆಳೆಯಲು ಆರಂಭಿಸಿದರು. 
2000ದಲ್ಲಿ, ಅವರು ತಮ್ಮ ಹಣ್ಣಿನ ತೋಟದಲ್ಲಿ ಗಾಢ ಹಸುರಿನ ಎಲೆಗಳಿಂದ ಕೂಡಿದ ಗಮನಾರ್ಹ ಬೆಳೆವಣಿಗೆ ಪ್ರವೃತ್ತಿಯ ಒಂದು ಮಾವಿನ ಗಿಡವನ್ನು ಗುರುತಿಸಿದರು. ವರ್ಷವಿಡೀ ಮರ ಅರಳುವುದನ್ನು ನೋಡಿದರು. ಈ ವಿಶಿಷ್ಟ ಲಕ್ಷಣವನ್ನು ಗಮನಿಸಿದ ಅವರು,  ಕಸಿ ಬಡ್ಡೆಗಳನ್ನು ಬಳಸಿ ಐದು ಕಸಿ ಮಾಡಿದ ಮಾವಿನ ಸಸಿಗಳನ್ನು ಸಿದ್ಧಪಡಿಸಿದರು. ಅವರಿಗೆ ಈ ತಳಿಯನ್ನು ಸಂರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು 15 ವರ್ಷ ತೆಗೆದುಕೊಂಡಿತು. ಕಸಿ ಮಾಡಿ ನೆಟ್ಟ ಎರಡನೇ ವರ್ಷದಿಂದಲೇ ಗಿಡಗಳು ಫಲ ಬಿಡುವುದನ್ನು ಅವರು ಗಮನಿಸಿದರು.   
ಈ ನಾವಿನ್ಯ ತಳಿಯನ್ನು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ಭಾರತದ ರಾಷ್ಟ್ರೀಯ ನಾವಿನ್ಯ ಪ್ರತಿಷ್ಠಾನ (ಎನ್.ಐ.ಎಫ್.) ಪರಿಶೀಲಿಸಿದೆ. ಐಸಿಎಆರ್ ಮೂಲಕ - ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್.ಆರ್.)ಯಿಂದ ಈ ತಳಿಯ ಮೌಲ್ಯಮಾಪನಕ್ಕೆ  ಸಹ ಎನ್.ಐ.ಎಫ್. ಅವಕಾಶ ನೀಡಿದೆ ಮತ್ತು ರಾಜಾಸ್ಥಾನದ ಜೋಬ್ನೇರ್ (ಜೈಪುರ)ದ ಎಸ್.ಕೆ.ಎನ್. ಕೃಷಿ ವಿಶ್ವವಿದ್ಯಾಲಯದ ಕ್ಷೇತ್ರ ಪರೀಕ್ಷೆಗೂ ಅವಕಾಶ ನೀಡಲಾಗಿದೆ. ಇದನ್ನು ಸಸ್ಯ ತಳಿಯ ಸಂರಕ್ಷಣೆ ಮತ್ತು ರೈತರ ಹಕ್ಕು ಕಾಯಿದೆ ಅಡಿಯಲ್ಲಿ ಮತ್ತು ಐಸಿಎಆರ್– ನವದೆಹಲಿಯ ಸಸ್ಯ ವಂಶವಾಹಿ ಸಂಶೋಧನೆ (ಎನ್.ಬಿ.ಪಿ.ಜಿ.ಆರ್.), ರಾಷ್ಟ್ರೀಯ ಸಂಸ್ಥೆಯಲ್ಲಿ ನೋಂದಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ನವದೆಹಲಿಯ ರಾಷ್ಟ್ರಪತಿ ಭವನದ ಮುಘಲ್ ಉದ್ಯಾನದಲ್ಲಿ ಸದಾಬಹಾರ್ ಮಾವಿನ ತಳಿಯನ್ನು ನೆಡುವ ಕಾರ್ಯವೂ ಎನ್.ಐ.ಎಫ್.ನಿಂದ ನಡೆಯುತ್ತಿದೆ.
ಈ ಹಚ್ಚ ಹಸಿರು ತಳಿಯ ಅಭಿವೃದ್ಧಿಗಾಗಿ ಶ್ರೀಕಿಶನ್ ಸುಮನ್ ಅವರಿಗೆ ಎನ್.ಐ.ಎಫ್. ನ 9ನೇ ರಾಷ್ಟ್ರೀಯ ಬೇರುಮಟ್ಟದ ನಾವಿನ್ಯತೆ ಮತ್ತು ಸಾಂಪ್ರದಾಯಿಕ ಜ್ಞಾನ ಪ್ರಶಸ್ತಿ ನೀಡಲಾಗಿದೆ, ಅವರಿಗೆ ನಂತರ ಹಲವು ವೇದಿಕೆಗಳಲ್ಲಿ ಮನ್ನಣೆ ದೊರೆತಿದೆ. ವಿವಿಧ ವಾಹಿನಿಗಳ ಮೂಲಕ, ಎನ್.ಐ.ಎಫ್. ಈ ತಳಿಯ ಮಾಹಿತಿಯನ್ನು ರೈತರ ಜಾಲದಲ್ಲಿ, ಸರ್ಕಾರಿ ಸಂಸ್ಥೆಗಳಲ್ಲಿ, ರಾಜ್ಯ ಕೃಷಿ ಇಲಾಖೆ ಮತ್ತು ಎನ್.ಜಿ.ಓ. ಇತ್ಯಾದಿಗಳಿಗೆ ಪಸರಿಸುವ ಪ್ರಯತ್ನ ಮಾಡುತ್ತಿದೆ.
2017-2020ರ ಸಾಲಿನಲ್ಲಿ ಶ್ರೀ ಕಿಶನ್ ಸುಮನ್ ಅವರಿಗೆ 8000 ಸದಾಬಹಾರ್ ಗಾಗಿ ಭಾರತ ಮತ್ತು ವಿದೇಶಗಳಿಂದ ಬೇಡಿಕೆ ಬಂದಿದೆ. ಅವರು ಆಂಧ್ರಪ್ರದೇಶ, ಗೋವಾ, ಬಿಹಾರ, ಛತ್ತೀಸಗಢ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಕೇರಳ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಾಸ್ಥಾನ, ತಮಿಳುನಾಡು, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ್, ಪಶ್ಚಿಮ ಬಂಗಾಳ, ದೆಹಲಿ ಮತ್ತು ಚಂಡೀಗಢ ರಾಜ್ಯಗಳಿಗೆ 2018-2020ರ ಅವಧಿಯಲ್ಲಿ 6 ಸಾವಿರ ಸಸಿಗಳನ್ನು ಸರಬರಾಜು ಮಾಡಿದ್ದಾರೆ. ಸುಮಾರು 500 ಸಸಿಗಳನ್ನು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಮತ್ತು ರಾಜಾಸ್ಥಾನ ಮತ್ತು ಮಧ್ಯಪ್ರದೇಶದ ಸಂಶೋಧನಾ ಸಂಸ್ಥೆಗಳಲ್ಲಿ ಕಸಿ ಮಾಡಲಾಗಿದೆ ಮತ್ತು ನಾವಿನ್ಯಕಾರರಿಂದ, ಮತ್ತು ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್‌ ನ ವಿವಿಧ ಸಂಶೋಧನಾ ಸಂಸ್ಥೆಗಳಿಗೆ 400ಕ್ಕೂ ಹೆಚ್ಚು ಕಸಿಮಾಡಿದ ಸಸ್ಯಗಳನ್ನು ಒದಗಿಸಲಾಗಿದೆ
.


 ***


(Release ID: 1709729) Visitor Counter : 312