ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸ್ವೀಡನ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಸ್ಟೀಫನ್ ಲೋಫ್ವೆನ್ ನಡುವೆ ವರ್ಚುವಲ್ ಶೃಂಗಸಭೆ
Posted On:
04 MAR 2021 6:28PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವೀಡನ್ ಸಂಸ್ಥಾನದ ಪ್ರಧಾನಮಂತ್ರಿ ಘನತೆವೆತ್ತ ಸ್ಟೀಫನ್ ಲೋಫ್ವೆನ್ ಅವರೊಂದಿಗೆ 2021ರ ಮಾರ್ಚ್ 5ರಂದು ವರ್ಚುವಲ್ ಶೃಂಗಸಭೆ ನಡೆಸಲಿದ್ದಾರೆ.
2015ರಿಂದ ಈ ಇಬ್ಬರು ನಾಯಕರ ನಡುವೆ ನಡೆಯುತ್ತಿರುವ ಐದನೇ ಸಂವಾದ ಇದಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಥಮ ಭಾರತ ನೋರ್ಡಿಕ್ ಶೃಂಗಸಭೆಗಾಗಿ 2018ರಲ್ಲಿ ಸ್ಟಾಕ್ ಹೋಂಗೆ ಭೇಟಿ ನೀಡಿದ್ದರು. ಪ್ರಧಾನಮಂತ್ರಿ ಘನತೆವೆತ್ತ ಸ್ಟೀಫನ್ ಲೋಫ್ವೆನ್ ಅವರು, ವಿಶೇಷ ಮೇಕ್ ಇನ್ ಇಂಡಿಯಾ ಸಪ್ತಾಹಕ್ಕಾಗಿ 2016ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಈ ಮುನ್ನ ಇಬ್ಬರೂ ನಾಯಕರು 2015ರ ಸೆಪ್ಟೆಂಬರ್ ನಲ್ಲಿ ನಡೆದ ವಿಶ್ವಸಂಸ್ಥೆಯ ಮಹಾಧಿವೇಶನದ ವೇಳೆ ಭೇಟಿ ಮಾಡಿದ್ದರು. 2020ರ ಏಪ್ರಿಲ್ ನಲ್ಲಿ ಇಬ್ಬರೂ ಪ್ರಧಾನಮಂತ್ರಿಗಳು ಕೋವಿಡ್ -19 ಸಾಂಕ್ರಾಮಿಕದಿಂದ ಹೊರಹೊಮ್ಮಿದ ಸನ್ನಿವೇಶದ ಬಗ್ಗೆ ಚರ್ಚಿಸಲು ದೂರವಾಣಿ ಸಂಭಾಷಣೆ ನಡೆಸಿದ್ದರು. ಇದರ ಜೊತಗೆ, ಅವರ ದೊರೆ ಕಾರ್ಲ್ XVI ಗುಸ್ತಾಫ್ ಮತ್ತು ಸ್ವೀಡನ್ನಿನ ರಾಣಿ ಸಿಲ್ವಿಯಾ ಅವರು 2019ರ ಡಿಸೆಂಬರ್ ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.
ಭಾರತ ಮತ್ತು ಸ್ವೀಡನ್ ನಡುವೆ ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಬಹುತ್ವದ ಹಂಚಿಕೆಯ ಮೌಲ್ಯಗಳ ಆಧಾರದ ಮೇಲೆ ಮತ್ತು ಅಂತಾರಾಷ್ಟ್ರೀಯ ವ್ಯವಸ್ಥೆಯ ನಿಯಮಾಧಾರಿತ ಆಪ್ತವಾದ ಮತ್ತು ಸ್ನೇಹಮಯ ಸಂಬಂಧವಿದೆ. ವ್ಯಾಪಾರ ಮತ್ತು ಹೂಡಿಕೆ, ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನದ ಜೊತೆಗೆ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಬಹಳ ನಿಕಟ ಸಹಕಾರವನ್ನು ಹೊಂದಿವೆ. ಆರೋಗ್ಯ ಮತ್ತು ಜೀವ ವಿಜ್ಞಾನ, ವಾಹನ ಉದ್ಯಮ, ಶುದ್ಧ ತಂತ್ರಜ್ಞಾನ, ರಕ್ಷಣೆ, ಭಾರೀ ಯಂತ್ರೋಪಕರಣಗಳು ಮತ್ತು ಸಲಕರಣೆಗಳಂತಹ ವಿವಿಧ ಕ್ಷೇತ್ರಗಳಲ್ಲಿ ಸುಮಾರು 250 ಸ್ವೀಡಿಷ್ ಕಂಪನಿಗಳು ಭಾರತದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಸ್ವೀಡನ್ ನಲ್ಲಿ ಸುಮಾರು 75 ಭಾರತೀಯ ಕಂಪನಿಗಳು ಸಕ್ರಿಯವಾಗಿವೆ.
ಈ ಶೃಂಗಸಭೆಯ ವೇಳೆ, ಇಬ್ಬರೂ ನಾಯಕರು ದ್ವಿಪಕ್ಷೀಯ ಬಾಂಧವ್ಯದ ಸಂಪೂರ್ಣ ಆಯಾಮಗಳ ಕುರಿತಂತೆ ಸಮಗ್ರ ಮಾತುಕತೆ ನಡೆಸಲಿದ್ದಾರೆ ಮತ್ತು ಕೋವಿಡೋತ್ತರ ಯುಗದಲ್ಲಿ ಸಹಕಾರವನ್ನು ಹೆಚ್ಚಿಸುವ ಸಲುವಾಗಿ ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.
***
(Release ID: 1702618)
Visitor Counter : 188
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam