ಪ್ರಧಾನ ಮಂತ್ರಿಯವರ ಕಛೇರಿ

ರಕ್ಷಣಾ ವಲಯದಲ್ಲಿ ಆಯ-ವ್ಯಯ ಪ್ರಸ್ತಾವಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ವೆಬಿನಾರ್‌ನಲ್ಲಿ ಪ್ರಧಾನಿ ಭಾಷಣ


ಭಾರತದ ರಕ್ಷಣಾ ವಲಯವು ಪಾರದರ್ಶಕತೆ, ನಿರೀಕ್ಷಣೀಯತೆ & ಸುಲಭ ವ್ಯವಹಾರ ಸಾಧ್ಯತೆಯೊಂದಿಗೆ ಮುನ್ನುಗ್ಗುತ್ತಿದೆ: ಪ್ರಧಾನಿ

ರಕ್ಷಣಾ ವಲಯದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ: ನರೇಂದ್ರ ಮೋದಿ

Posted On: 22 FEB 2021 1:36PM by PIB Bengaluru

ರಕ್ಷಣಾ ವಲಯದಲ್ಲಿ ಕೇಂದ್ರ ಬಜೆಟ್ ಪ್ರಸ್ತಾವಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವೆಬಿನಾರ್‌ನಲ್ಲಿ ಮಾತನಾಡಿದರು. ದೇಶದ ರಕ್ಷಣಾ ವಲಯವನ್ನು ಸ್ವಾವಲಂಬಿಯಾಗಿ ಮಾಡುವ ಮಹತ್ವದ ವಿಷಯದ ಮೇಲೆ ಗಮನ ಕೇಂದ್ರೀಕರಿಸುತ್ತಿರುವುದರಿಂದ, ಈ ವೆಬಿನಾರ್‌ ಹೆಚ್ಚಿನ ಪ್ರಾಧಾನ್ಯತೆ ಪಡೆದಿದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ನೂರಾರು ಶಸ್ತ್ರಾಸ್ತ್ರ ಕಾರ್ಖಾನೆಗಳಿದ್ದವು. ಮೊದಲನೇ ಮತ್ತು ಎರಡನೇ ಮಹಾಯುದ್ಧಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಭಾರತದಿಂದ ರಫ್ತು ಮಾಡಲಾಯಿತು. ಆದರೆ, ಹಲವು ಕಾರಣಗಳಿಂದಾಗಿ ಸ್ವಾತಂತ್ರ್ಯಾ ನಂತರ ಈ ವ್ಯವಸ್ಥೆಯು ಅಗತ್ಯ ಬಲ ಮತ್ತು ಬೆಂಬಲವನ್ನು ಪಡೆಯಲಿಲ್ಲ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ತೇಜಸ್ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸುವಲ್ಲಿ ನಮ್ಮ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳ ಸಾಮರ್ಥ್ಯಗಳನ್ನು ನಮ್ಮ ಸರ್ಕಾರ ಅವಲಂಬಿಸಿದೆ.  ಇಂದು ತೇಜಸ್ ಆಕಾಶದಲ್ಲಿ ಮನೋಹರವಾಗಿ ಗರಿಬಿಚ್ಚಿ ಹಾರಾಡುತ್ತಿದೆ.  ಕೆಲವು ವಾರಗಳ ಹಿಂದೆ ತೇಜಸ್‌ಗಾಗಿ 48 ಸಾವಿರ ಕೋಟಿ ರೂ. ಮೌಲ್ಯದ ಆರ್ಡರ್‌ ನೀಡಲಾಗಿದೆ ಎಂದು ಅವರು ಹೇಳಿದರು. 

ಈ ಕ್ಷೇತ್ರದಲ್ಲಿ ಪಾರದರ್ಶಕತೆ, ನಿರೀಕ್ಷಣೀಯತೆ ಮತ್ತು ಸುಲಭ ವ್ಯವಹಾರ ಸಾಧ್ಯತೆಯೊಂದಿಗೆ ಮುನ್ನಡೆಯಬೇಕು ಎನ್ನುವುದು 2014ರಿಂದಲೂ ಈ ಸರಕಾರದ ಪ್ರಯತ್ನವಾಗಿದೆ. ಇದಕ್ಕಾಗಿ ಪರವಾನಗಿ-ರಹಿತ ವ್ಯವಸ್ಥೆ, ನಿಯಂತ್ರಣ-ರಹಿತ ವ್ಯವಸ್ಥೆ, ರಫ್ತು ಉತ್ತೇಜನ, ವಿದೇಶಿ ಹೂಡಿಕೆ ಉದಾರೀಕರಣ ಮುಂತಾದ ಕ್ರಮಗಳನ್ನು ಸರಕಾರ ಕೈಗೊಂಡಿದೆ ಎಂದರು.

ನಮ್ಮ ಸ್ಥಳೀಯ ಕೈಗಾರಿಕೆಗಳ ನೆರವಿನಿಂದ ದೇಶೀಯವಾಗಿ ತಯಾರಿಸಬಹುದಾದ ರಕ್ಷಣಾ ಸಂಬಂಧಿತ 100 ಪ್ರಮುಖ ವಸ್ತುಗಳ ಪಟ್ಟಿಯನ್ನು ಭಾರತ ತಯಾರಿಸಿದೆ. ಇದಕ್ಕಾಗಿ ಸಮಯ ಸೂಚಿಯನ್ನು ನಿಗದಿಪಡಿಸಲಾಗಿದ್ದು, ಕೈಗಾರಿಕೆಗಳು ಈ ಅಗತ್ಯಗಳನ್ನು ಪೂರೈಸಲು ಯೋಜನೆ ರೂಪಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಇದನ್ನು ಅಧಿಕೃತ ಭಾಷೆಯಲ್ಲಿ ಋಣಾತ್ಮಕ ಪಟ್ಟಿ ಎಂದು ಕರೆಯಲಾಗುತ್ತದೆ, ಆದರೆ ಸ್ವಾವಲಂಬನೆಯ ಭಾಷೆಯಲ್ಲಿ ಇದು ಧನಾತ್ಮಕ ಪಟ್ಟಿಯಾಗಿದೆ ಎಂದರು. ಈ ಧನಾತ್ಮಕ ಪಟ್ಟಿಯ ಆಧಾರದ ಮೇಲೆಯೇ ದೇಶದ ಉತ್ಪಾದನಾ ಸಾಮರ್ಥ್ಯವು ಹೆಚ್ಚಲಿದೆ. ಇದೇ ಧನಾತ್ಮಕ ಪಟ್ಟಿ ಭಾರತದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಭಾರತದ ರಕ್ಷಣಾ ಅಗತ್ಯಗಳಿಗಾಗಿ ವಿದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಧನಾತ್ಮಕ ಪಟ್ಟಿಯೂ ಇದೇ ಆಗಿದೆ. ಇದೇ ಪಟ್ಟಿ, ಭಾರತದಲ್ಲಿ ದೇಸಿ ಉತ್ಪನ್ನಗಳ ಮಾರಾಟವನ್ನು ಖಾತರಿಪಡಿಸುತ್ತದೆ ಎಂದರು.

ದೇಶೀಯ ಖರೀದಿಗೆ ರಕ್ಷಣಾ ಇಲಾಖೆಯ ಬಂಡವಾಳ ನಿಧಿಯಲ್ಲೂ ಒಂದು ಭಾಗವನ್ನು ಕಾಯ್ದಿರಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಖಾಸಗಿ ವಲಯವು ಮುಂದೆ ಬಂದು ರಕ್ಷಣಾ ಉಪಕರಣಗಳ ವಿನ್ಯಾಸ ಮತ್ತು ತಯಾರಿಕೆ ಎರಡನ್ನೂ ಕೈಗೆತ್ತಿಕೊಳ್ಳಬೇಕು, ಇದರಿಂದ ಭಾರತದ ಧ್ವಜವು ಜಾಗತಿಕ ಮಟ್ಟದಲ್ಲಿ ಎತ್ತರೆತ್ತರಕ್ಕೆ ಹಾರಲು ಸಾಧ್ಯವಾಗಲಿದೆ ಎಂದು ಅವರು ಕರೆ ನೀಡಿದರು.

ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಇಡೀ ಉತ್ಪಾದನಾ ವಲಯಕ್ಕೆ ಬೆನ್ನೆಲುಬಾಗಿ ಕೆಲಸ ಮಾಡುತ್ತವೆ. ಇಂದು ನಡೆಯುತ್ತಿರುವ ಸುಧಾರಣೆಗಳು ಇಂತಹ ಕೈಗಾರಿಕೆಗಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತಿವೆ ಮತ್ತು ವಿಸ್ತರಣೆಗೆ ಪ್ರೋತ್ಸಾಹಿಸುತ್ತಿವೆ ಎಂದು ಅವರು ಹೇಳಿದರು.

ಇಂದು ದೇಶದಲ್ಲಿ ನಿರ್ಮಾಣವಾಗುತ್ತಿರುವ ರಕ್ಷಣಾ ಕಾರಿಡಾರ್‌ಗಳು ಸ್ಥಳೀಯ ಉದ್ಯಮಿಗಳಿಗೆ ಮತ್ತು ಸ್ಥಳೀಯ ಉತ್ಪಾದನೆಗೆ ನೆರವಾಗಲಿವೆ. ಅಂದರೆ ಇಂದು ನಮ್ಮ ರಕ್ಷಣಾ ಕ್ಷೇತ್ರದಲ್ಲಿನ ಸ್ವಾವಲಂಬನೆಯನ್ನು “ಜವಾನ ಮತ್ತು ಯುವಜನʼʼ - ಈ ಎರಡೂ ರಂಗಗಳ ಸಬಲೀಕರಣವೆಂದು ಪರಿಗಣಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದರು.

***



(Release ID: 1699941) Visitor Counter : 154