ಹಣಕಾಸು ಸಚಿವಾಲಯ

ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಶೋಧ ಕಾರ್ಯಾಚರಣೆ

Posted On: 11 FEB 2021 5:55PM by PIB Bengaluru

ಆದಾಯ ತೆರಿಗೆ ಇಲಾಖೆ 09.02.2021ರಂದು ಬೆಂಗಳೂರು ಮೂಲದ ಪ್ರಮುಖ ಮದ್ಯ ತಯಾರಿಕಾ ಸಮೂಹಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತದ 26 ಕಡೆಗಳಲ್ಲಿ  ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಸಿದೆ.  ಸಮೂಹ ಅಪಾರ ಪ್ರಮಾಣದ ಭೂ ಬ್ಯಾಂಕ್ ಹೊಂದಿದ್ದು, ಅದನ್ನು ಬೆಂಗಳೂರು ಮೂಲದ ಬಿಲ್ಡರ್ ಜೊತೆಗೂಡಿ ವಸತಿ ಮತ್ತು ವಾಣಿಜ್ಯ ಸ್ವತ್ತಾಗಿ ಅಭಿವೃದ್ಧಿಪಡಿಸಿದೆ. ಈ ಶೋಧ ಕಾರ್ಯಾಚರಣೆಯ ಫಲವಾಗಿ ಬೆಂಗಳೂರು ಮೂಲದ ಪ್ರಮುಖ ಬಿಲ್ಡರ್ ಜೊತೆ ಜಂಟಿ ಅಭಿವೃದ್ಧಿ ಯೋಜನೆಯಲ್ಲಿ 692.82 ಕೋಟಿ ರೂ.ಗಿಂತ ಹೆಚ್ಚು ಆದಾಯವನ್ನು ಮರೆಮಾಚುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಪತ್ತೆಹಚ್ಚಲಾಗಿದೆ. ಜೊತೆಗೆ, ಈ ಸಮೂಹ ಕಂಪನಿಗಳು ವಂಚನೆಯ ಮೂಲಕ 86 ಕೋಟಿ ರೂ. ವೆಚ್ಚವಾಗಿದೆ ಎಂದು ಕ್ಲೇಮ್ ಮಾಡಿದ್ದನ್ನೂ ಪತ್ತೆ ಮಾಡಲಾಗಿದೆ.

ಅವರ ಮದ್ಯ ವ್ಯಾಪಾರಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿರುವ ಅವರ ಒಂದು ಮದ್ಯ ತಯಾರಿಕಾ ಘಟಕದಲ್ಲಿ ಲೆಕ್ಕ ತೋರಿಸದ 74 ಕೋಟಿ ರೂ. ಮಾರಾಟವನ್ನೂ ಪತ್ತೆ ಮಾಡಲಾಗಿದೆ. ಈ ಸಮೂಹ ಕಂಪನಿಗಳು ತಮ್ಮ ವಾಣಿಜ್ಯ ಕಾಯಗಳಲ್ಲಿ 17 ಕೋಟಿ ರೂ. ಬೋಗಸ್ ವೆಚ್ಚವನ್ನು ಕ್ಲೇಮ್ ಮಾಡಿರುವುದೂ ಬೆಳಕಿಗೆ ಬಂದಿದೆ. ಸಮೂಹದ ನಿರ್ದೇಶಕರು 9 ಕೋಟಿ ರೂ. ಮೊತ್ತದ ವಿವರಣೆಯಿಲ್ಲದ ವೆಚ್ಚವನ್ನು ಮಾಡಿದ್ದು, ಇದು ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 69ಸಿಯನ್ವಯ ಲೋಪವಾಗಿರುತ್ತದೆ.

ಈ ಸಮೂಹ ಹಲವಾರು ವರ್ಷಗಳಿಂದ ತನ್ನ ನೌಕರರು ಮತ್ತು ಸಹವರ್ತಿಗಳ ಹೆಸರುಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಬೇನಾಮಿ ಆಸ್ತಿಯಲ್ಲಿ ಹೂಡಿಕೆ ಮಾಡಿರುವುದೂ ಪತ್ತೆಯಾಗಿದೆ. ಒಟ್ಟಾರೆ ಅವರ ಬಂಧುಗಳು ಮತ್ತು ಸಹವರ್ತಿಗಳ ಹೆಸರಿನಲ್ಲಿರುವ 35 ಶಂಕಿತ ಬೇನಾಮಿ ಆಸ್ತಿಗಳನ್ನು ಗುರುತಿಸಲಾಗಿದ್ದು, ಇವುಗಳ ಮೌಲ್ಯ 150 ಕೋಟಿ ರೂ. ಆಗಿದೆ.

ಇಷ್ಟೇ ಅಲ್ಲದೆ, ಸಮೂಹ ಕಂಪನಿಗಳ ನಿರ್ದೇಶಕರ ಹೆಸರಿನಲ್ಲಿ ವಿದೇಶಗಳಲ್ಲಿ ಆಸ್ತಿ ಇರುವುದಕ್ಕೂ ಸಾಕ್ಷ್ಯ ದೊರೆತಿದೆ.

ಒಟ್ಟಾರೆ, ಈ ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಯ ಫಲವಾಗಿ, ಒಟ್ಟು ಘೋಷಣೆಯಾಗದ 878.82 ಕೋಟಿ ರೂ. ಮೌಲ್ಯದ ಆದಾಯ ಪತ್ತೆಯಾಗಿದೆ.

ತನಿಖೆ ಮುಂದುವರಿದಿದೆ.

***



(Release ID: 1697307) Visitor Counter : 135