ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

2021ರ ಫೆಬ್ರವರಿ 25-26 ಮತ್ತು ಮಾರ್ಚ್ 1-2 ರಂದು ‘ಇಂಡಿಯಾ ಫಾರ್ಮಾ ಮತ್ತು ಭಾರತ ವೈದ್ಯಕೀಯ ಸಾಧನಗಳು 2021’ ಸಮಾವೇಶ


2030 ರ ವೇಳೆಗೆ ಭಾರತೀಯ ಔಷಧ ಮಾರುಕಟ್ಟೆ 130 ಬಿಲಿಯನ್ ಡಾಲರ್‌ಗೆ ಬೆಳೆಯಲಿದೆ: ಕೇಂದ್ರ ಸಚಿವ ಶ್ರೀ ಡಿವಿ ಸದಾನಂದ ಗೌಡ

ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಜಾಗತಿಕವಾಗಿ ಮೆಚ್ಚುಗೆ ಗಳಿಸಿದೆ: ಶ್ರೀ ಮನ್ಸುಖ್ ಮಾಂಡವೀಯ

ಭಾರತದಲ್ಲಿ ತಯಾರಿಸಿ, ಜಗತ್ತಿಗಾಗಿ ತಯಾರಿಸಿ- ಔಷಧೀಯ ಮತ್ತು ಸಾಧನಗಳ ಕ್ಷೇತ್ರದಲ್ಲಿ ತನ್ನ ಶಕ್ತಿ ಪ್ರದರ್ಶಿಸಲಿರುವ ಭಾರತ

Posted On: 08 FEB 2021 4:36PM by PIB Bengaluru

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಮತ್ತು ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಅವರು ಇಂದು ‘ಇಂಡಿಯಾ ಫಾರ್ಮಾ ಮತ್ತು ಇಂಡಿಯಾ ಮೆಡಿಕಲ್ ಡಿವೈಸ್ 2021’ ಕಾರ್ಯಕ್ರಮದ 6 ನೇ ಆವೃತ್ತಿಯನ್ನು ಕುರಿತು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧೀಯ ಇಲಾಖೆ, ಎಫ್‌ಐಸಿಸಿಐ ಮತ್ತು ಇನ್ವೆಸ್ಟ್ ಇಂಡಿಯಾ ಜಂಟಿಯಾಗಿ ಔಷಧೀಯ ಮತ್ತು ವೈದ್ಯಕೀಯ ಸಾಧನಗಳ 6 ನೇ ಆವೃತ್ತಿಯ ವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ - 'ಇಂಡಿಯಾ ಫಾರ್ಮಾ ಮತ್ತು ಭಾರತ ವೈದ್ಯಕೀಯ ಸಾಧನಗಳು 2021' 2021ರ ಫೆಬ್ರವರಿ 25-26 ಮತ್ತು ಮಾರ್ಚ್ 1- 2 ರಂದು ನಡೆಯಲಿದೆ. 
 ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಒದಗಿಸುವುದು, ರೋಗನಿರ್ಣಯ ಮತ್ತು ಚಿಕಿತ್ಸೆಯ ಲಭ್ಯತೆಯನ್ನು ಹೆಚ್ಚಿಸುವುದು, ವೈದ್ಯಕೀಯ ಉಪಕರಣಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡಲು ನಾವೀನ್ಯತೆಯನ್ನು ಉತ್ತೇಜಿಸುವ ಮೂಲಕ ಆರೋಗ್ಯ ರಕ್ಷಣೆಯು ಸರ್ಕಾರದ ಆದ್ಯತೆಯಾಗಿ ಮುಂದುವರೆದಿದೆ ಎಂದು ಶ್ರೀ ಸದಾನಂದಗೌಡ ಹೇಳಿದರು. ಸರ್ಕಾರವು ತನ್ನ ವಿವಿಧ ನೀತಿಗಳು ಮತ್ತು ಯೋಜನೆಗಳ ಮೂಲಕ ಕೈಗೆಟುಕುವ ವೈದ್ಯಕೀಯ ಸಾಧನಗಳು ಮತ್ತು ಔಷಧಿ ತಯಾರಿಕೆಯನ್ನು ತನ್ನ ‘ಮೇಕ್ ಇನ್ ಇಂಡಿಯಾ’ಉಪಕ್ರಮದಡಿ ಪ್ರೋತ್ಸಾಹಿಸುತ್ತಿದೆ. ಇಂಡಿಯಾ ಫಾರ್ಮಾ 2021 ಮತ್ತು ಇಂಡಿಯಾ ಮೆಡಿಕಲ್ ಡಿವೈಸ್ 2021 ಮುಂದಿನ ಅಭಿವೃದ್ಧಿಗೆ ಅಡಿಪಾಯ ಹಾಕಲಿವೆ ಎಂದು ಅವರು ಹೇಳಿದರು.
ಭಾರತವು ಕೈಗೆಟುಕುವ ದರದ ಜೆನೆರಿಕ್ಸ್‌ ಔಷಧಗಳ ಪ್ರಮುಖ ರಫ್ತುದಾರ ಮತ್ತು ವೈದ್ಯಕೀಯ ಸಾಧನಗಳು ಮತ್ತು ರೋಗನಿರ್ಣಯದ ಪ್ರಮುಖ ಕೇಂದ್ರವಾಗಿದೆ ಎಂದು ಅವರು ಹೇಳಿದರು. ಭಾರತವು ತನ್ನ ಫಾರ್ಮಾ ಉತ್ಪನ್ನಗಳೊಂದಿಗೆ 200 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಿಗೆ ಸೇವೆ ಸಲ್ಲಿಸುತ್ತಿದೆ ಮತ್ತು ಅದು ತನ್ನ ಜವಾಬ್ದಾರಿ ನಿರ್ವಹಣೆಯನ್ನು ಮುಂದುವರಿಸುತ್ತದೆ. ಸದೃಢ ವಿಜ್ಞಾನ, ತಂತ್ರಜ್ಞಾನ, ವ್ಯವಹಾರ ಪ್ರಜ್ಞೆ ಮತ್ತು ನೈತಿಕತೆಯನ್ನು ಆಧರಿಸಿದ ಯೋಜನೆಗಳನ್ನು ರೂಪಿಸುವುದನ್ನು ಮುಂದುವರಿಸಲು ನಾವು ಉದ್ದೇಶಿಸಿದ್ದೇವೆ. ಭಾರತದಲ್ಲಿ ಸುಲಲಿತ ವ್ಯಾಪಾರವನ್ನು ಹೆಚ್ಚಿಸಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ ಮತ್ತು ಇದಕ್ಕಾಗಿ ಈಗಾಗಲೇ ಹಲವಾರು ಕ್ರಮಗಳನ್ನು ಘೋಷಿಸಲಾಗಿದೆ. 4 ವಿಶ್ವ ದರ್ಜೆಯ ವೈದ್ಯಕೀಯ ಸಾಧನ ಪಾರ್ಕ್ ಗಳ ನಿರ್ಮಾಣಕ್ಕೆ 400 ಕೋಟಿ ರೂ. ಹಾಗೂ 3 ಪ್ರಮುಖ ಬೃಹತ್ ಔಷಧಿ ಪಾರ್ಕ್ ಗಳ ರಚನೆಗೆ 3000 ಕೋಟಿ ರೂ. ನೀಡಲಾಗಿದೆ. ಎಂದು ಸಚಿವರು ತಿಳಿಸಿದರು. ಭಾರತೀಯ ಫಾರ್ಮಾ ಉದ್ಯಮದ ಒಟ್ಟು ಮಾರುಕಟ್ಟೆ ಗಾತ್ರವು 2030 ರ ವೇಳೆಗೆ 130 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಭಾರತದಲ್ಲಿನ ವೈದ್ಯಕೀಯ ಸಾಧನಗಳ ಉದ್ಯಮವು 2025 ರ ವೇಳೆಗೆ 50 ಬಿಲಿಯನ್ ಡಾಲರ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ತಿಳಿಸಿದರು.

​​​​​​

ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಉದ್ಯಮವು ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ಮತ್ತು ಒಟ್ಟಾಗಿ ಪ್ರಗತಿಯ ಹಾದಿಯನ್ನು ರೂಪಿಸಲು ಒಂದು ವೇದಿಕೆಯನ್ನು ಒದಗಿಸಲಾಗಿದೆ ಎಂದು ಶ್ರೀ ಮನ್ಸುಖ್ ಮಾಂಡವೀಯ ಹೇಳಿದರು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಜಾಗತಿಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ಸಮಯದಲ್ಲಿ, ಭಾರತೀಯ ಔಷಧ ಉದ್ಯಮಗಳು ದೇಶದ ಸ್ವಂತ ಅಗತ್ಯಗಳನ್ನು ಪೂರೈಸುವುದರ ಜೊತೆಗೆ 120 ಕ್ಕೂ ಹೆಚ್ಚು ದೇಶಗಳಿಗೆ ಅಗತ್ಯವಾದ ಔಷಧಿಗಳನ್ನು ಪೂರೈಸಿದವು. ಭಾರತವು ವಿಶ್ವದ ಅತಿದೊಡ್ಡ ಕೋವಿಡ್-19 ಲಸಿಕಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಮತ್ತು ಇತರ ದೇಶಗಳಿಗೆ ಲಸಿಕೆಗಳನ್ನು ಒದಗಿಸುವ ಜಾಗತಿಕ ಪ್ರಯತ್ನದ ಕೇಂದ್ರಭಾಗದಲ್ಲಿದೆ ಎಂದು ಅವರು ಹೇಳಿದರು.
ಕೋವಿಡ್-19 ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸಲು ಈ ಅಂತರರಾಷ್ಟ್ರೀಯ ಸಮ್ಮೇಳನವು ಒಂದು ವೇದಿಕೆಯನ್ನು ಒದಗಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇದು ಸಾಮರ್ಥ್ಯವನ್ನು ಅನ್ಲಾಕ್ ಮಾಡಲು ಮತ್ತು ಹೊಸತನಕ್ಕೆ ವೇಗ ತುಂಬಲು ಸಹಾಯ ಮಾಡುತ್ತದೆ. ಇದು ದೇಶೀಯ ಕಂಪನಿಗಳು ಮತ್ತು ಜಾಗತಿಕ ಉದ್ಯಮಗಳನ್ನು ಜಗತ್ತಿಗಾಗಿ ಭಾರತದಲ್ಲಿ ತಯಾರಿಸಿ  ದೃಷ್ಟಿಕೋನವನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.
ಸಾಂಕ್ರಾಮಿಕದ ವರ್ಷದಲ್ಲಿ ವಿವಿಧ ಸವಾಲುಗಳನ್ನು ಎದುರಿಸಿ ಫಾರ್ಮಾ ಮತ್ತು ವೈದ್ಯಕೀಯ ಸಾಧನ ಕ್ಷೇತ್ರವು ಸಕಾರಾತ್ಮಕ ಬೆಳವಣಿಗೆಯನ್ನು ತೋರಿಸಿದೆ ಎಂದು ಔಷಧೀಯ ಇಲಾಖೆ ಕಾರ್ಯದರ್ಶಿ ಶ್ರೀಮತಿ ಎಸ್ ಅಪರ್ಣಾ ಹೇಳಿದರು. ವ್ಯಾಪಾರ ಸಂಪರ್ಕಗಳನ್ನು ಮತ್ತಷ್ಟು ಒದಗಿಸಲು ಮತ್ತು ಈ ವಲಯದ ಬೆಳವಣಿಗೆಗೆ ಇರುವ ಅಡೆತಡೆಗಳನ್ನು ತೆಗೆದುಹಾಕಲು, ಸಮಾವೇಶದ ಈ ಆವೃತ್ತಿಯನ್ನು ವರ್ಚುವಲ್ ಮಾದರಿಯಲ್ಲಿ ಆಯೋಜಿಸಲಾಗುವುದು ಮತ್ತು ಜಗತ್ತಿನಾದ್ಯಂತದ ಉದ್ಯಮಗಳು ಇದರಲ್ಲಿ ಭಾಗವಹಿಸುತ್ತವೆ ಎಂದು ಅವರು ಹೇಳಿದರು.
ಈ ವರ್ಷದ ಸಮಾವೇಶದ ಘೋಷ ವಾಕ್ಯಗಳು- ಇಂಡಿಯಾ ಫಾರ್ಮಾಕ್ಕೆ ‘ಇಂಡಿಯನ್ ಫಾರ್ಮಾ ಇಂಡಸ್ಟ್ರಿ:ಫ್ಯೂಚರ್ ಈಸ್ ನೌ ”ಮತ್ತು ಇಂಡಿಯಾ ಮೆಡಿಕಲ್ ಡಿವೈಸ್ ಗೆ“ ಇಂಡಿಯಾ ಮೆಡ್‌ಟೆಕ್ ಫ್ಯೂಚರ್: ಇನ್ನೋವೇಟ್ & ಮೇಕ್ ಇನ್ ಇಂಡಿಯಾ ಥ್ರೋ ಗ್ಲೋಬಲ್ ಅಲೈಯನ್ಸ್”. ಭಾಗವಹಿಸುವವರು ಕ್ಷೇತ್ರಗಳಲ್ಲಿನ ಅವಕಾಶಗಳು ಮತ್ತು ಪ್ರಮುಖ ಸವಾಲುಗಳನ್ನು ಕುರಿತು ಚರ್ಚೆ ನಡೆಸುತ್ತಾರೆ. ಭಾರತದಲ್ಲಿನ ಹೂಡಿಕೆ ಅವಕಾಶಗಳ ಪ್ರದರ್ಶನ, ಉದ್ಯಮದ ಮುಖಂಡರೊಂದಿಗೆ ಚರ್ಚೆಗಳು, ಅಂತರರಾಷ್ಟ್ರೀಯ ಔಷಧ ನಿಯಂತ್ರಕ ಅಧಿವೇಶನ, ಭಾರತ ಫಾರ್ಮಾ ಮತ್ತು ವೈದ್ಯಕೀಯ ಸಾಧನ ಪ್ರಶಸ್ತಿಗಳು ಮತ್ತು ವಲಯದ ನವೋದ್ಯಮಗಳನ್ನು ಕುರಿತು ಚರ್ಚೆಗಳು ಕಾರ್ಯಕ್ರಮದ ಪ್ರಮುಖ ಅಂಶಗಳಾಗಿವೆ. ವರ್ಚುವಲ್ ಮಾದರಿಯಲ್ಲಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ.



(Release ID: 1696276) Visitor Counter : 183