ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
15 ದಿನಗಳಲ್ಲಿ ವಾಹನಗಳ ಚೂರುಪಾರು (ತುಣುಕು ಅಥವಾ ರದ್ದಿ) ನೀತಿಯ ವಿವರ ಪ್ರಕಟ: ನಿತಿನ್ ಗಡ್ಕರಿ
ವಾಹನಗಳ ರದ್ದಿ ನೀತಿಯು 10 ಸಾವಿರ ಕೋಟಿ ರೂ. ಹೂಡಿಕೆ ಮತ್ತು 50 ಸಾವಿರ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ
ಬಜೆಟ್’ನಲ್ಲಿ ರಾಷ್ಟ್ರೀಯ ಹೆದ್ದಾರಿ ವಲಯದ ಯೋಜನಾ ಗಾತ್ರ ಹೆಚ್ಚಳ; ಸಚಿವರ ಸ್ವಾಗತ
Posted On:
01 FEB 2021 3:47PM by PIB Bengaluru
ಕೇಂದ್ರ ಬಜೆಟ್’ನಲ್ಲಿ ವಾಹನಗಳ ರದ್ದಿ ನೀತಿಗೆ ಸಂಬಂಧಿಸಿದ ಪ್ರಸ್ತಾವನೆ ಪ್ರಕಟಿಸಿರುವುದನ್ನು ಎಂಎಸ್ಎಂಇ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಸ್ವಾಗತಿಸಿದ್ದಾರೆ. ವಾಹನಗಳ ರದ್ದಿ ನೀತಿಯ ವಿವರಗಳನ್ನು 15 ದಿನಗಳಲ್ಲಿ ಪ್ರಕಟಿಸುವುದಾಗಿ ಅವರು ಘೋಷಿಸಿದ್ದಾರೆ.
ಬಜೆಟ್ ನಂತರ ತಮ್ಮ ನಿವಾಸದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ವಾಹನಗಳ ರದ್ದಿ ನೀತಿಯು ಸುಮಾರು 10 ಸಾವಿರ ಕೋಟಿ ರೂಪಾಯಿ ಹೊಸ ಹೂಡಿಕೆ ಮತ್ತು 50 ಸಾವಿರ ಹೊಸ ಉದ್ಯೋಗಗಳ ಸೃಷ್ಟಿಗೆ ಕಾರಣವಾಗಲಿದೆ ಎಂದು ಅವರು ತಿಳಿಸಿದ್ದಾರೆ.
20 ವರ್ಷಗಳಿಗಿಂತ ಹೆಚ್ಚಿನ ಕಾಲ ಬಳಸಿರುವ ಅಂದಾಜು 51 ಲಕ್ಷ ಲಘು ಮೋಟಾರು ವಾಹನಗಳು(ಎಲ್ಎಂವಿ) ಹಾಗೂ 15 ವರ್ಷಗಳಿಗಿಂತ ಹೆಚ್ಚಿನ ಕಾಲ ಬಳಸಿರುವ ಸುಮಾರು 34 ಲಕ್ಷ ಎಲ್ಎಂವಿಗಳು ಈ ನೀತಿಯಲ್ಲಿ ಸೇರ್ಪಡೆ ಆಗಲಿವೆ. ಜತೆಗೆ, 15 ವರ್ಷಗಳಿಗಿಂತ ಹೆಚ್ಚಿನ ಕಾಲ ಬಳಸಿರುವ ಹಾಗೂ ಪ್ರಸ್ತುತ ಸಮಂಜಸ ಫಿಟ್’ನೆಸ್ ಪ್ರಮಾಣಪತ್ರಗಳನ್ನು ಹೊಂದಿಲ್ಲದ ಮಧ್ಯಮ ಮತ್ತು ಬೃಹತ್ ಮೋಟಾರು ವಾಹನಗಳು ಸಹ ಈ ನೀತಿಯ ವ್ಯಾಪ್ತಿಗೆ ಸೇರಲಿವೆ. ಈ ವಾಹನಗಳು ಇತ್ತೀಚಿನ ಮತ್ತು ಹೊಸ ವಾಹನಗಳಿಗಿಂತ ಅಂದಾಜು 10-12 ಪಟ್ಟು ಹೆಚ್ಚಿನ ಪರಿಸರ ಮಾಲಿನ್ಯ ಉಂಟು ಮಾಡುತ್ತಿವೆ ಎಂದರು.
ವಾಹನಗಳ ರದ್ದಿ ನೀತಿಯ ಪ್ರಯೋಜನಗಳ ಕುರಿತು ಸಂಕ್ಷಿಪ್ತ ವಿವರ ನೀಡಿದ ಅವರು, ಲೋಹಗಳ ತ್ಯಾಜ್ಯದ ಮರುಬಳಕೆಗೆ ಇದು ಅವಕಾಶ ಕಲ್ಪಿಸಲಿದೆ. ಜತೆಗೆ, ಸುರಕ್ಷತೆಯ ಸುಧಾರಣೆ, ವಾಯುಮಾಲಿನ್ಯ ನಿಯಂತ್ರಣ, ಹೊಸ ವಾಹನಗಳ ಇಂಧನ ದಕ್ಷತೆ ಕಾರಣದಿಂದ ತೈಲ ಆಮದು ನಿಯಂತ್ರಣ ಮತ್ತು ಹೂಡಿಕೆಯನ್ನು ಉತ್ತೇಜಿಸಲಿದೆ ಎಂದರು.
ಸರ್ಕಾರ ಬಜೆಟ್’ನಲ್ಲಿ ಹೆದ್ದಾರಿ ವಲಯಕ್ಕೆ ಬಂಡವಾಳ ಹೂಡಿಕೆಯನ್ನು ಹಿಂದೆಂದಿಗಿಂತಲೂ 1,08,000 ಕೋಟಿ ರೂ.ಗೆ ಏರಿಕೆ ಮಾಡಿ, ಯೋಜನಾ ಗಾತ್ರವನ್ನು 1,18,000 ಕೋಟಿ ರೂ.ಗೆ ಹೆಚ್ಚಳ ಮಾಡಿರುವುದನ್ನು ಸಚಿವ ನಿತಿನ್ ಗಡ್ಕರಿ ಅವರು ಸ್ವಾಗತಿಸಿದ್ದಾರೆ. ಹೆದ್ದಾರಿಗಳ ವಿಸ್ತರಣೆಗೆ ಅನುದಾನ ಹೆಚ್ಚಳ ಮಾಡಿರುವುದರಿಂದ, ದೇಶದಲ್ಲಿ ರಸ್ತೆಗಳ ಜಾಲ ವಿಸ್ತರಿಸಲು ಹೆಚ್ಚಿನ ಒತ್ತು ದೊರೆತಂತಾಗಿದೆ. ಸಚಿವಾಲಯಕ್ಕೆ ಇದು ಸಹಾಯಕವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಸಚಿವರ ಮಾಧ್ಯಮ ಸಂವಾದವನ್ನು https://youtu.be/ZVSNmdPKhs4 ಲಿಂಕ್’ನಲ್ಲಿ ವೀಕ್ಷಿಸಬಹುದು.
***
(Release ID: 1694445)
Visitor Counter : 237