ಪ್ರಧಾನ ಮಂತ್ರಿಯವರ ಕಛೇರಿ

ಏಕತಾ ಪ್ರತಿಮೆಗೆ ತಡೆರಹಿತ ರೈಲು ಸಂಪರ್ಕ ಒದಗಿಸುವ ಎಂಟು ರೈಲುಗಳಿಗೆ ಹಸಿರು ನಿಶಾನೆ ತೋರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ಭಾಷಣ

Posted On: 17 JAN 2021 1:48PM by PIB Bengaluru

ನಮಸ್ಕಾರ!

“ಏಕ ಭಾರತ್- ಶ್ರೇಷ್ಟ ಭಾರತ್”ನ ಅತ್ಯಂತ ಸುಂದರ ದೃಶ್ಯ ಇಲ್ಲಿ ಕಾಣುತ್ತಿದೆ. ಇಂದು, ಈ ಕಾರ್ಯಕ್ರಮದ ವ್ಯಾಪ್ತಿ ಬಹಳ ದೊಡ್ಡದು ಮತ್ತು ಚಾರಿತ್ರಿಕವಾದುದು.

ಗುಜರಾತಿನ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ ಜೀ, ಗುಜರಾತಿನ ಮುಖ್ಯಮಂತ್ರಿಗಳಾದ ಶ್ರೀ ವಿಜಯ್ ರೂಪಾನೀ ಜೀ ಅವರು ಕೇವಾಡಿಯಾದಿಂದ ಹಾಜರಾಗಿದ್ದಾರೆ, ಪ್ರತಾಪನಗರದಿಂದ ಹಾಜರಾಗಿರುವ ಗುಜರಾತ್ ವಿಧಾನಸಭೆಯ ಸ್ಪೀಕರ್ ರಾಜೇಂದ್ರ ತ್ರಿವೇದೀಜೀ, ಅಹ್ಮದಾಬಾದಿನಲ್ಲಿರುವ ಗುಜರಾತಿನ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಪೀಯೂಷ್ ಗೋಯಲ್ ಜೀ, ವಿದೇಶಿ ವ್ಯವಹಾರಗಳ ಸಚಿವ ಎಸ್. ಜೈಶಂಕರ ಜೀ,  ಡಾ. ಹರ್ಷ ವರ್ಧನ ಜೀ ಮತ್ತು ದಿಲ್ಲಿ ಮುಖ್ಯಮಂತ್ರಿ ಭಾಯಿ ಅರವಿಂದ ಕೇಜ್ರಿವಾಲ್ ಅವರು ಈ ಕಾರ್ಯಕ್ರಮಕ್ಕೆ ದಿಲ್ಲಿಯಿಂದ ಸೇರಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಜೀ ಅವರು ಮಧ್ಯಪ್ರದೇಶದ ರೇವಾದಿಂದ ನಮ್ಮೊಂದಿಗಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಭಾಯಿ ಉದ್ಭವ್ ಠಾಕ್ರೇ ಜೀ ಅವರು ಮುಂಬಯಿಯಿಂದ ಹಾಜರಿದ್ದಾರೆ. ವಾರಾಣಾಸಿಯಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೀ ನಮ್ಮೊಂದಿಗೆ ಸೇರಿದ್ದಾರೆ. ಇವರಲ್ಲದೆ ಗೌರವಾನ್ವಿತ ಸಚಿವರು, ಸಂಸತ್ ಸದಸ್ಯರು, ತಮಿಳುನಾಡು ಸಹಿತ ಇತರ ರಾಜ್ಯ ಸರಕಾರಗಳ ಶಾಸಕರು ಇಂದಿನ ಈ ಬೃಹತ್ ಕಾರ್ಯಕ್ರಮದಲ್ಲಿ ನಮ್ಮೊಂದಿಗಿದ್ದಾರೆ. ಸರ್ದಾರ್ ವಲ್ಲಭ ಭಾಯಿ ಪಟೇಲ್ ಜೀ ಅವರ ವಿಸ್ತರಿತ ಕುಟುಂಬದ ಹಲವಾರು ಸದಸ್ಯರು ಆನಂದದಿಂದ ಸೇರ್ಪಡೆಯಾಗಿದ್ದಾರೆ ಮತು ನಮ್ಮನ್ನು ಆಶೀರ್ವದಿಸಲು ಬಂದಿದ್ದಾರೆ. ಕಲಾ ಕ್ಷೇತ್ರದಿಂದ ಹಲವಾರು ಹಿರಿಯ ಕಲಾವಿದರು, ಕ್ರೀಡಾ ಕ್ಷೇತ್ರದ ಹಲವಾರು ತಾರೆಯರು ಈ ಕಾರ್ಯಕ್ರಮದ ಜೊತೆ ಸಂಪರ್ಕಿಸಲ್ಪಟ್ಟಿದ್ದಾರೆ. ಅವರೊಂದಿಗೆ ನಮ್ಮ ಜನರು ದೇವರಂತೆ, ನಮ್ಮ ಸಹೋದರರು ಮತ್ತು ಸಹೋದರಿಯರು, ಭವ್ಯ ಭಾರತದ ಭವಿಷ್ಯವನ್ನು ಪ್ರತಿನಿಧಿಸುವ ಮಕ್ಕಳು ಅವರೊಂದಿಗಿದ್ದಾರೆ. ನಿಮ್ಮೆಲ್ಲರಿಗೂ ಶುಭಾಶಯಗಳು. 

ರೈಲ್ವೇಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಎಂಬಂತೆ ದೇಶದ ವಿವಿಧ ಮೂಲೆಗಳಿಂದ ಒಂದು ಸ್ಥಳಕ್ಕೆ ಇಷ್ಟೊಂದು ರೈಲುಗಳಿಗೆ ಹಸಿರು ನಿಶಾನೆ ತೋರಲಾಗಿದೆ. ಕೇವಾಡಿಯಾ ಅಂತಹ ಸ್ಥಳ. ವಿಶ್ವದ ಅತ್ಯಂತ ದೊಡ್ಡ ಪ್ರತಿಮೆಯ ಮೂಲಕ ಅದನ್ನು ಗುರುತಿಸಲಾಗುತ್ತಿದೆ.ದೇಶಕ್ಕೆ “ಏಕ ಭಾರತ್, ಶ್ರೇಷ್ಟ ಭಾರತ್” ಮಂತ್ರವನ್ನು ಕೊಟ್ಟ ಸರ್ದಾರ್ ಪಟೇಲ್ ಅವರ ಏಕತಾ ಪ್ರತಿಮೆ ಅದು. ಪಟೇಲರು ದೇಶವನ್ನು ಒಗ್ಗೂಡಿಸಿದವರು. ಇದು ಸರ್ದಾರ್ ಸರೋವರ ಇರುವ ಸ್ಥಳ. ಇಂದಿನ ಕಾರ್ಯಕ್ರಮವು ಭಾರತವು ಒಂದು ಎಂಬುದನ್ನು ಮತ್ತು ಭಾರತೀಯ ರೈಲ್ವೇಯ ದೂರದರ್ಶಿತ್ವವನ್ನು ಹಾಗು ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಚಿಂತನಾಕ್ರಮವನ್ನು ಸಂಕೇತಿಸುತ್ತದೆ. ಮತ್ತು ಈ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳಿಂದ ಬಹಳಷ್ಟು ಮಂದಿ ಸಾರ್ವಜನಿಕ ವ್ಯಕ್ತಿಗಳು ಹಾಜರಿರುವುದು ನನಗೆ ಸಂತೋಷ ತಂದಿದೆ. ನಾನು ನಿಮ್ಮೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. 

ಕೇವಾಡಿಯಾಕ್ಕೆ ಬರಲಿರುವ ಒಂದು ರೈಲು ಪುರಚ್ಚಿ ತಲೈವರ್ ಡಾ. ಎಂ.ಜಿ.ರಾಮಚಂದ್ರನ್ ಕೇಂದ್ರೀಯ ರೈಲ್ವೇ ನಿಲ್ದಾಣದಿಂದ ಹೊರಡುತ್ತದೆ. ಇಂದು ಭಾರತ ರತ್ನ ಎಂ.ಜಿ.ಆರ್. ಅವರ ಜನ್ಮದಿನವಾಗಿರುವುದೂ ಒಂದು ಯೋಗಾಯೋಗದ ಸಂಗತಿ. ಎಂ.ಜಿ.ಆರ್. ಅವರು ಬೆಳ್ಳಿತೆರೆಯಿಂದ ಹಿಡಿದು ರಾಜಕೀಯ ತೆರೆಗಳವರೆಗೆ ಜನತೆಯ ಹೃದಯವನ್ನಾಳಿದವರು. ಅವರ ಬದುಕು ಮತ್ತು ಇಡೀ ರಾಜಕೀಯ ಪ್ರಯಾಣ ಬಡವರಿಗಾಗಿ ಮೀಸಲಾಗಿತ್ತು. ಬಡವರಿಗೆ ಗೌರವಯುತ ಬದುಕನ್ನು ನೀಡಲು ಅವರು ನಿರಂತರ ಶ್ರಮ ವಹಿಸಿದರು. ಇಂದು ನಾವು ಭಾರತ ರತ್ನ ಎಂ.ಜಿ.ಆರ್. ಅವರ ಈ ಆದರ್ಶಗಳನ್ನು ಈಡೇರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಕೆಲವು ವರ್ಷಗಳ ಹಿಂದೆ ದೇಶವು ಚೆನ್ನೈ ಕೇಂದ್ರೀಯ ರೈಲ್ವೇ ನಿಲ್ದಾಣವನ್ನು ಅವರ ಗೌರವಾರ್ಥ ಪುನರ್ನಾಮಕರಣ ಮಾಡಿತು. ನಾನು ಭಾರತರತ್ನ ಎಂ.ಜಿ.ಆರ್. ಅವರಿಗೆ ನಮಿಸುತ್ತೇನೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತೇನೆ.

ಸ್ನೇಹಿತರೇ,

ಇಂದು, ಕೇವಾಡಿಯಾಕ್ಕೆ ದೇಶದ ಬಹುತೇಕ ಎಲ್ಲಾ ಭಾಗಗಳಿಂದ ರೈಲು ಸಂಪರ್ಕ ಒದಗಿಸಲ್ಪಟ್ಟಿರುವುದು ಇಡೀ ದೇಶಕ್ಕೆ ಒಂದು ಹೆಮ್ಮೆಯ ಸಂಗತಿ. ಕೆಲ ಸಮಯದ ಹಿಂದೆ ವಾರಾಣಾಸಿ, ರೇವಾ, ದಾದರ್, ಮತ್ತು ದಿಲ್ಲಿ ಗಳಿಂದ ಕೇವಾಡಿಯಾ ಎಕ್ಸ್ ಪ್ರೆಸ್ ಕೇವಾಡಿಯಾಕ್ಕೆ ಪ್ರಯಾಣ ಆರಂಭ ಮಾಡಿದೆ. ಇದಲ್ಲದೆ ಚೆನ್ನೈಯಿಂದ ಮತ್ತು ಅಹ್ಮದಾಬಾದಿನಿಂದ ಜನ ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳು ಕೇವಾಡಿಯಾಕ್ಕೆ ತೆರಳಿವೆ. ಅದೇ ರೀತಿ ಎಂ.ಇ.ಎಂ.ಯು. ಸೇವೆಯನ್ನು ಕೇವಾಡಿಯಾ ಮತ್ತು ಪ್ರತಾಪನಗರ ನಡುವೆ ಆರಂಭಿಸಲಾಗಿದೆ. ದಾಭೋಯಿ-ಚಾಂದೋಡ್ ರೈಲ್ವೇ ಮಾರ್ಗದ ಅಗಲೀಕರಣ ಮತ್ತು ಚಾಂದೋಡ್ ಹಾಗು ಕೇವಾಡಿಯಾ ನಡುವಣ ನೂತನ ರೈಲ್ವೇ ಮಾರ್ಗ ಈಗ ಕೇವಾಡಿಯಾದ ಅಭಿವೃದ್ಧಿ ಪಥದಲ್ಲಿ ಹೊಸ ಅಧ್ಯಾಯವನ್ನು ತೆರೆಯಲಿದೆ. ಮತ್ತು ಇಂದು, ಈ ರೈಲ್ವೇ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವಂತೆಯೇ ಕೆಲವು ಹಳೆಯ ನೆನಪುಗಳೂ ಮರುಕಳಿಸುತ್ತಿವೆ. ಬರೋಡಾ ಮತ್ತು ದಾಭೋಯಿ ನಡುವೆ ನ್ಯಾರೋ ಗೇಜ್ ರೈಲು ಓಡಾಟ ಮಾಡುತ್ತಿದ್ದುದು ಕೆಲವೇ ಜನರಿಗೆ ತಿಳಿದಿರಬಹುದು. ಈ ರೈಲಿನಲ್ಲಿ ಪ್ರಯಾಣಿಸುವ ಅವಕಾಶ ನನಗೆ ಬಂದಿತ್ತು. ಒಂದು ಸಂದರ್ಭದಲ್ಲಿ  ನಾನು ನರ್ಮದಾ ಮಾತೆಯ ವಿಶೇಷ ಆಕರ್ಷಣೆಗೆ ಒಳಗಾಗಿದ್ದೆ. ಮತ್ತು ನಾನು ಆಗಾಗ ಬರುತ್ತಿದ್ದೆ. ನರ್ಮದಾ ಮಾತೆಯ ತೊಡೆಯ ಮೇಲೆ ನಾನು ಕೆಲವು ಕ್ಷಣಗಳನ್ನು ಕಳೆಯುತ್ತಿದ್ದೆ. ಮತ್ತು ಆಗ ನಾವು ಈ ನ್ಯಾರೋ ಗೇಜ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆವು. ಈ ರೈಲಿನ ವೇಗ ನಮಗೆ ಆನಂದವನ್ನು ಒದಗಿಸುತ್ತಿತ್ತು. ಈ ರೈಲಿನ ವೇಗ ಎಷ್ಟು ನಿಧಾನಗತಿಯದ್ದಾಗಿತ್ತೆಂದರೆ ಯಾರಾದರು ಕೂಡಾ ಅದರಿಂದ ಸುಲಭದಲ್ಲಿ ಜಿಗಿಯಬಹುದಾಗಿತ್ತು. ಮತ್ತು ಕೆಲವೊಮ್ಮೆ ಅದರ ಜೊತೆ ನಡೆದುಕೊಂಡು ಹೋಗಬಹುದಾಗಿತ್ತು. ನಿಮ್ಮ ವೇಗ ಅದಕ್ಕಿಂತ ಹೆಚ್ಚು ಇರುವಂತೆ ಭಾಸವಾಗುತ್ತಿತ್ತು. ನಾನು ಕೂಡ ಇದನ್ನು ಅನುಭವಿಸಿ ಆನಂದಿಸಿದ್ದೆ. ಆದರೆ ಇಂದು ಇದು ಬ್ರಾಡ್ ಗೇಜ್ ಆಗಿ ಪರಿವರ್ತನೆಯಾಗುತ್ತಿದೆ. ಈ ರೈಲು ಸಂಪರ್ಕದ ಅತ್ಯಂತ ದೊಡ್ದ ಪ್ರಯೋಜನ ಎಂದರೆ ಏಕತಾ ಪ್ರತಿಮೆಯನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಇದು ಲಭ್ಯ ಇರುವುದು. ಇದು ಬುಡಕಟ್ಟು ಸಹೋದರರ ಮತ್ತು ಸಹೋದರಿಯರ ಬದುಕನ್ನು ಬದಲಾಯಿಸಲಿದೆ. ಈ ಸಂಪರ್ಕವು ಉದ್ಯೋಗಗಳಿಗೆ ಸಂಬಂಧಿಸಿ ಹೊಸ ಅವಕಾಶವನ್ನು ಸೃಷ್ಟಿಸಲಿದೆ. ಅನುಕೂಲತೆಗಳನ್ನು ಒದಗಿಸುವುದರ ಜೊತೆಗೆ ಸ್ವದ್ಯೋಗಕ್ಕೂ ಅವಕಾಶ ಒದಗಿಸಲಿದೆ.  ರೈಲ್ವೇ ಸಂಪರ್ಕವು ಪ್ರಮುಖ ಧಾರ್ಮಿಕ ಸ್ಥಳಗಳಾದ ಕರ್ನಾಲಿ, ಪೊಇಚಾ ಮತ್ತು ನರ್ಮದಾ ಮಾತೆಯ ದಡದಲ್ಲಿರುವ ಗರುಡೇಶ್ವರಗಳನ್ನು ಬೆಸೆಯಲಿದೆ. ಮತ್ತು ಈ ಇಡೀ ವಲಯವು ಧಾರ್ಮಿಕ, ಭಕ್ತಿಯ ಕಂಪನಗಳನ್ನು ಉಂಟು ಮಾಡುವ ವಲಯ ಎಂಬುದೂ ಅಷ್ಟೇ ದಿಟ. ಈ ಹೊಸ ಅಭಿವೃದ್ಧಿಯೊಂದಿಗೆ ಧಾರ್ಮಿಕ, ಭಕ್ತಿಯ ಕಾರ್ಯಚಟುವಟಿಕೆಗಳಿಗಾಗಿ ಇಲ್ಲಿಗೆ ಬರುವ ಜನತೆಗೆ ಇದು ಬಹಳ ದೊಡ್ಡ ಕೊಡುಗೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದು ಕೇವಾಡಿಯಾವು ಗುಜರಾತಿನ ದುರ್ಗಮ ಪ್ರದೇಶದ ಸಣ್ಣದೊಂದು ತುಣುಕಾಗಿ ಉಳಿದಿಲ್ಲ. ಆದರೆ ಅದು ವಿಶ್ವದ ಅತಿ ದೊಡ್ಡ ಪ್ರವಾಸೀ ತಾಣವಾಗಿ ಉದಯಿಸುತ್ತಿದೆ. ಏಕತಾ ಪ್ರತಿಮೆಯನ್ನು ವೀಕ್ಷಿಸಲು ಬರುತ್ತಿರುವ ಪ್ರವಾಸಿಗರ ಸಂಖ್ಯೆ ಸ್ವಾತಂತ್ರ್ಯದ ಪ್ರತಿಮೆಯನ್ನು ವೀಕ್ಷಿಸಲು ಬರುವ ಪ್ರವಾಸಿಗರ ಸಂಖ್ಯೆಗಿಂತ ಹೆಚ್ಚಾಗಿದೆ. ಇದು ಉದ್ಘಾಟನೆಗೊಂಡಂದಿನಿಂದ ಸುಮಾರು 50 ಲಕ್ಷ ಜನರು ಏಕತಾ ಪ್ರತಿಮೆ ವೀಕ್ಷಿಸಲು ಬಂದಿದ್ದಾರೆ. ಕೊರೊನಾದಿಂದಾಗಿ ತಿಂಗಳುಗಟ್ಟಲೆ ಮುಚ್ಚಲ್ಪಟ್ಟಿದ್ದರೂ ಈಗ ಕೇವಾಡಿಯಾಕ್ಕೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಸಂಪರ್ಕ ಸೌಲಭ್ಯ ಹೆಚ್ಚಿದಂತೆ ಭವಿಷ್ಯದಲ್ಲಿ ದಿನಕ್ಕೆ ಒಂದು ಲಕ್ಷ ಜನರು ಇಲ್ಲಿಗೆ ಬರಲಿದ್ದಾರೆ ಎಂದು ಸಮೀಕ್ಷೆಯೊಂದು ಅಂದಾಜು ಮಾಡಿದೆ.

ಸ್ನೇಹಿತರೇ,

ಯೋಜನಾ ಬದ್ಧ ರೀತಿಯಲ್ಲಿ ಪರಿಸರವನ್ನು ಸಂರಕ್ಷಣೆ ಮಾಡುತ್ತಲೇ ಆರ್ಥಿಕತೆ ಮತ್ತು ಪರಿಸರವನ್ನು ಹೇಗೆ ತ್ವರಿತವಾಗಿ ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ಸಣ್ಣ ಮತ್ತು ಸುಂದರ ಕೇವಾಡಿಯಾ ಒಂದು ದೊಡ್ಡ ಉದಾಹರಣೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಅನೇಕ ಗಣ್ಯರು ಕೇವಾಡಿಯಾಕ್ಕೆ ಹೋಗಿಲ್ಲದಿರಬಹುದು, ಆದರೆ ಕೇವಾಡಿಯಾದ ಅಭಿವೃದ್ಧಿ ಪಥದ ಪ್ರಯಾಣವನ್ನು ಒಮ್ಮೆ ನೀವು ನೋಡಿದರೆ ಈ ಅದ್ಭುತ ಸ್ಥಳದ ಬಗ್ಗೆ ನೀವು ಹೆಮ್ಮೆಪಡುತ್ತೀರಿ ಎಂಬುದು ನನಗೆ ಖಚಿತವಿದೆ.

ಸ್ನೇಹಿತರೇ,

ಕೇವಾಡಿಯಾವನ್ನು ವಿಶ್ವದಲ್ಲಿಯೇ ಅತ್ಯುತ್ತಮ ಕೌಟುಂಬಿಕ  ಪ್ರವಾಸೀ ತಾಣವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಆರಂಭದಲ್ಲಿ ಮಾತನಾಡುವಾಗ ಜನತೆ ಇದೊಂದು ಕನಸು ಎಂದು ಭಾವಿಸಿದ್ದರು. “ಇದು ಸಾಧ್ಯವಾಗದು, ಇದು ಅಸಂಭವ, ಇದಾಗಲು ಹಲವು ದಶಕಗಳು ಬೇಕಾಗಬಹುದು” ಎಂದು ಹೇಳುತ್ತಿದ್ದರು. ಒಳ್ಳೆಯದು, ಅವರು ತಮ್ಮ ಹಿಂದಿನ ಅನುಭವಗಳ ಆಧಾರದ ಮೇಲೆ ಮೌಲ್ಯಯುತವಾದ ವಾದವನ್ನು ಮಂಡಿಸುತ್ತಿದ್ದರು. ಕೇವಾಡಿಯಾಕ್ಕೆ ಹೋಗಲು ಅಗಲವಾದ ರಸ್ತೆಗಳಿರಲಿಲ್ಲ, ಬೀದಿ ದೀಪಗಳಿರಲಿಲ್ಲ, ರೈಲು ಇರಲಿಲ್ಲ. ಪ್ರವಾಸಿಗರಿಗೆ ತಂಗಲು ಉತ್ತಮವಾದ ವ್ಯವಸ್ಥೆಗಳೂ ಇರಲಿಲ್ಲ. ಕೇವಾಡಿಯಾವು ಭಾರತದ ಇತರ ಯಾವುದೇ ಸಣ್ಣ ಹಳ್ಳಿಯಂತೆಯೇ ಇತ್ತು. ಆದರೆ ಕೆಲವೇ ವರ್ಷಗಳಲ್ಲಿ ಕೇವಾಡಿಯಾ ಸಂಪೂರ್ಣವಾಗಿ ಮರುರೂಪಿಸಲ್ಪಟ್ಟಿತು. ಕೇವಾಡಿಯಾ ತಲುಪಲು ವಿಶಾಲವಾದ ರಸ್ತೆಗಳಾದವು. ಪ್ರವಾಸಿಗರಿಗೆ ತಂಗಲು ಪೂರ್ಣವಾದ ಟೆಂಟ್ ನಗರ ರೂಪುಗೊಂಡಿತು. ಅಲ್ಲಿ ಇತರ ಉತ್ತಮ ಸವಲತ್ತುಗಳಿವೆ, ಅಲ್ಲಿ ಉತ್ತಮ ಮೊಬೈಲ್ ಸಂಪರ್ಕ ಇದೆ. ಉತ್ತಮ ಆಸ್ಪತ್ರೆಗಳಿವೆ. ಮತ್ತು ಕೆಲವು ದಿನಗಳ ಹಿಂದೆ ನೀರ ಮೇಲಿನ ವಿಮಾನ ಸೌಕರ್ಯವನ್ನೂ ಒದಗಿಸಲಾಗಿದೆ ಮತ್ತು ಇಂದು ಕೇವಾಡಿಯಾವು ದೇಶದ ಹಲವಾರು ರೈಲು ಮಾರ್ಗಗಳ ಮೂಲಕ ಜೋಡಿಸಲ್ಪಟ್ಟಿದೆ. ನಗರವು ಇಡೀ ಕುಟುಂಬಕ್ಕೆ ಪ್ಯಾಕೇಜ್ ಒದಗಿಸುವಂತೆ ರೂಪುಗೊಂಡಿದೆ. ನೀವು ಕೇವಾಡಿಯಾಕ್ಕೆ ಭೇಟಿ ನೀಡಿದ ಬಳಿಕವಷ್ಟೇ ಏಕತಾ ಪ್ರತಿಮೆಯ ಭವ್ಯತೆಯನ್ನು ಕಲ್ಪಿಸಿಕೊಳ್ಳಬಹುದು, ಸರ್ದಾರ್ ಸರೋವರ ಅಣೆಕಟ್ಟೆಯ ವಿಸ್ತಾರವನ್ನು ಕಲ್ಪಿಸಿಕೊಳ್ಳಬಹುದು. ಈಗ ಅಲ್ಲಿ ನೂರಾರು ಎಕರೆಯಲ್ಲಿ ಹರಡಿರುವ ಸರ್ದಾರ್ ಪಟೇಲ್ ಪ್ರಾಣಿಶಾಸ್ತ್ರ ಉದ್ಯಾನವನ ರೂಪುಗೊಂಡಿದೆ. ಜಂಗಲ್ ಸಫಾರಿ ಇದೆ. ಒಂದೆಡೆ ಆಯುರ್ವೇದವನ್ನಾಧರಿಸಿದ ಕ್ಷೇಮ ಅರಣ್ಯ ಮತ್ತು ಯೋಗ ಇರಲಿದೆ.ಮತ್ತು ಇನ್ನೊಂದೆಡೆ ರಾತ್ರಿ ವೇಳೆ ಹೊಳೆಯುವ ಉದ್ಯಾನವನ ಇರುತ್ತದೆ. ಅಲ್ಲಿ ಹಗಲು ನೋಡಲು ಕ್ಯಾಕ್ಟಸ್ ಉದ್ಯಾನವನ ಮತ್ತು ಚಿಟ್ಟೆಗಳ ಉದ್ಯಾನವನ ಇರುತ್ತದೆ. ಪ್ರವಾಸಿಗರಿಗೆ ಅಲ್ಲಿ ಏಕತಾ ಹಡಗು ವ್ಯವಸ್ಥೆ ಇರುತ್ತದೆ ಮತ್ತು ಯುವಜನತೆಗೆ  ದೋಣಿ ಸಾಹಸ ಕ್ರೀಡೆಗಳೂ ಇರುತ್ತವೆ. ಅಲ್ಲಿ ಪ್ರತಿಯೊಬ್ಬರಿಗೂ ಬಹಳಷ್ಟು ಅವಕಾಶಗಳು ಇರುತ್ತವೆ. ಮಕ್ಕಳಿಗೆ, ಯುವಜನತೆಗೆ, ಹಿರಿಯರಿಗೆ ಎಲ್ಲರಿಗೂ ಅಲ್ಲಿ ಬಹಳಷ್ಟು ನೋಡಲು ಇರುತ್ತದೆ. ಪ್ರವಾಸೋದ್ಯಮ ಹೆಚ್ಚುತ್ತಿರುವುದರಿಂದ ಬುಡಕಟ್ಟು ಯುವಜನತೆಗೆ ಉದ್ಯೋಗ ಲಭಿಸುತ್ತದೆ ಮತ್ತು ಜನತೆಗೆ ಆಧುನಿಕ ಸವಲತ್ತುಗಳು ಸುಲಭದಲ್ಲಿ ದೊರೆಯುತ್ತವೆ. ಯಾರಾದರೂ ಇಲ್ಲಿ ಮ್ಯಾನೇಜರ್ ಆಗಬಹುದು, ಕೆಫೆ ಮಾಲಿಕರಾಗಬಹುದು ಅಥವಾ ಮಾರ್ಗದರ್ಶಿಯಾಗಬಹುದು. ಪ್ರಾಣಿ ಶಾಸ್ತ್ರಕ್ಕೆ ಸಂಬಂಧಿಸಿದ ಪಾರ್ಕಿಗೆ ನಾನು ಹೋದಾಗ ಹಕ್ಕಿಗಳಿಗಾಗಿರುವ ವಿಶೇಷ ಹಕ್ಕಿ ವೀಕ್ಷಣಾ ಗುಮ್ಮಟದಲ್ಲಿ ಸ್ಥಳೀಯ ಮಹಿಳಾ ಮಾರ್ಗದರ್ಶಿ ನನಗೆ ವಿವರವಾಗಿ ಮಾಹಿತಿ ನೀಡಿದ್ದು ನನಗೆ ನೆನಪಿನಲ್ಲಿದೆ. ಇದರ ಜೊತೆಗೆ ಕೇವಾಡಿಯಾದ ಸ್ಥಳೀಯ ಮಹಿಳೆಯರು ವಿಶೇಷ ಏಕತಾ ಮಾಲ್ ನಲ್ಲಿ ತಮ್ಮ ಕರಕುಶಲ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ಪಡೆಯುತ್ತಿದ್ದಾರೆ. ಕೇವಾಡಿಯಾದ ಬುಡಕಟ್ಟು ಗ್ರಾಮಗಳಲ್ಲಿ ಸುಮಾರು 200 ಕ್ಕೂ ಅಧಿಕ ಕೊಠಡಿಗಳನ್ನು ಗುರುತಿಸಿ ಅವುಗಳನ್ನು ಟೂರಿಸ್ಟ್ ಹೋಂ ಸ್ಟೇ ಗಳನ್ನಾಗಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ನನಗೆ ತಿಳಿಸಲಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಕೇವಾಡಿಯಾದಲ್ಲಿ ನಿರ್ಮಾಣವಾಗಿರುವ ರೈಲ್ವೇ ನಿಲ್ದಾಣವು ಪ್ರವಾಸೋದ್ಯಮ ಮತ್ತು ಅನುಕೂಲತೆಗಳನ್ನು ಗಮನದಲ್ಲಿರಿಸಿಕೊಂಡಿದೆ. ಬುಡಕಟ್ಟು ಕಲಾ ಗ್ಯಾಲರಿಯನ್ನು ಮತ್ತು ವೀಕ್ಷಣಾ ಗ್ಯಾಲರಿಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಪ್ರವಾಸಿಗರು ವೀಕ್ಷಣಾ ಗ್ಯಾಲರಿಯಿಂದ ಏಕತಾ ಪ್ರತಿಮೆಯನ್ನು ನೋಡಲು ಸಾಧ್ಯವಾಗಲಿದೆ.

ಸ್ನೇಹಿತರೇ,

ಇಂತಹ ಗುರಿ ಕೇಂದ್ರಿತ ಪ್ರಯತ್ನಗಳು ಭಾರತೀಯ ರೈಲ್ವೇಯ ಬದಲಾಗುತ್ತಿರುವ ಸ್ವರೂಪದ ಬಗ್ಗೆ ಸಾಕ್ಷಿ ಸುಡಿಯುತ್ತವೆ. ಭಾರತೀಯ ರೈಲ್ವೇಯು ಸಾಂಪ್ರದಾಯಿಕ ಪ್ರಯಾಣಿಕ ರೈಲುಗಳ ಮತ್ತು ಸರಕು ಸಾಗಾಟ ರೈಲುಗಳ ಸಂಚಾರದ ಜೊತೆ ನಮ್ಮ ಪ್ರಮುಖ ಪ್ರವಾಸೀ ಮತ್ತು ಧಾರ್ಮಿಕ ಸರ್ಕ್ಯೂಟ್ ಗಳಿಗೆ ಸಂಪರ್ಕ ಒದಗಿಸುವ ಜವಾಬ್ದಾರಿಯನ್ನೂ ನಿಭಾಯಿಸುತ್ತಿದೆ. ಈಗ ಹಲವು ಮಾರ್ಗಗಳಲ್ಲಿ ವಿಸ್ತಾಡೋಮ್ .ಬೋಗಿಗಳ ಅಳವಡಿಕೆಯಿಂದ  ರೈಲ್ವೇ ಪ್ರಯಾಣವನ್ನು ಆಕರ್ಷಕವಾಗಿಸಲಿದೆ. ಅಹ್ಮದಾಬಾದ್ –ಕೇವಾಡಿಯಾ ಜನಶತಾಬ್ದಿ ಎಕ್ಸ್ ಪ್ರೆಸ್  ಬೋಗಿಗಳು ಈ  ಸೌಲಭ್ಯ ಹೊಂದಿರುವ ರೈಲುಗಳಲ್ಲಿ ಒಂದಾಗಲಿವೆ.

ಸ್ನೇಹಿತರೇ,

ಕಳೆದ ಕೆಲವು ವರ್ಷಗಳಲ್ಲಿ ದೇಶದ ರೈಲ್ವೇ ಮೂಲಸೌಕರ್ಯವನ್ನು ಆಧುನೀಕರಣ ಮಾಡಲು ಕೈಗೊಂಡ ಕಾಮಗಾರಿಗಳು ಅಭೂತಪೂರ್ವವಾದವುಗಳು. ಸ್ವಾತಂತ್ರ್ಯಾನಂತರ ನಮ್ಮ ಶಕ್ತಿಯು ಈಗಿರುವ ರೈಲ್ವೇ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಮತ್ತು ದುರಸ್ತಿ ಮಾಡುವಲ್ಲಿ ವ್ಯಯವಾಯಿತು. ಆಗ ಹೊಸ ಚಿಂತನೆ ಮತ್ತು ಹೊಸ ತಂತ್ರಜ್ಞಾನಕ್ಕೆ ಆದ್ಯತೆ ಬಹಳ ಕಡಿಮೆ ಇತ್ತು. ಧೋರಣೆಯನ್ನು ಬದಲಾಯಿಸಲು ಇದು ಅವಶ್ಯವಾಗಿತ್ತು ಮತ್ತು ಅದರಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ದೇಶದ ಇಡೀ ರೈಲ್ವೇ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳು ಜಾರಿಗೆ ಬಂದವು. ಈ ಬದಲಾವಣೆಗಳು ಬಜೆಟನ್ನು ಹೆಚ್ಚಿಸುವುದರಲ್ಲಿ ಅಥವಾ ಕಡಿತ ಮಾಡುವುದಕ್ಕೆ ಮಾತ್ರ ಸೀಮಿತಗೊಳ್ಳದೆ , ಹೊಸ ರೈಲುಗಳ ಘೋಷಣೆಗೆ ಸೀಮಿತಗೊಳ್ಳದೆ ಎಲ್ಲಾ ವಲಯಗಳಲ್ಲೂ ಜಾರಿಗೆ ಬಂದವು. ಈ ಬದಲಾವಣೆಗಳನ್ನು ಏಕಕಾಲದಲ್ಲಿ ಜಾರಿಗೆ ತರಲಾಯಿತು. ಈಗ ಉದಾಹರಣೆಗೆ ಕೇವಾಡಿಯಾವನ್ನು ರೈಲ್ವೇ ಜಾಲದೊಂದಿಗೆ ಬೆಸೆಯುವ ಈ ಯೋಜನೆ. ವೀಡಿಯೋದಲ್ಲಿ ತೋರಿಸಿದಂತೆ ಹವಾಮಾನ ಅಥವಾ ಕೊರೊನಾ ಜಾಗತಿಕ ಸಾಂಕ್ರಾಮಿಕ ಸಹಿತ ಹಲವಾರು ಅಡ್ಡಿ ಆತಂಕಗಳು ನಿರ್ಮಾಣ ಹಂತದಲ್ಲಿ ಎದುರಾಗಿದ್ದವು. ಆದರೆ ಕಾಮಗಾರಿ ದಾಖಲೆ ಅವಧಿಯಲ್ಲಿ ಪೂರ್ಣಗೊಂಡಿತು. ಮತ್ತು ರೈಲ್ವೇಯು ಬಳಸುತ್ತಿದ್ದ ಹೊಸ ನಿರ್ಮಾಣ ತಂತ್ರಜ್ಞಾನ ಈ ನಿಟ್ಟಿನಲ್ಲಿ ಬಹಳಷ್ಟು ಸಹಾಯ ಮಾಡಿತು. ಹಳಿಗಳನ್ನು ಹಾಕುವುದರಿಂದ ಹಿಡಿದು ಸೇತುವೆಗಳ ನಿರ್ಮಾಣದವರೆಗೆ ಹೊಸ ತಂತ್ರಜ್ಞಾನವನ್ನು ಬಳಸಲಾಯಿತು ಮತ್ತು ಸ್ಥಳೀಯವಾಗಿ ಲಭ್ಯವಿರುವ  ಸಂಪನ್ಮೂಲಗಳನ್ನು ಬಳಸಿಕೊಳ್ಳಲಾಯಿತು. ಸಿಗ್ನಲಿಂಗ್ ಕೆಲಸವನ್ನು ತ್ವರಿತಗೊಳಿಸಲು ವರ್ಚುವಲ್ ಮಾದರಿ ಮೂಲಕ ಪರೀಕ್ಷೆಗಳನ್ನು ನಡೆಸಲಾಯಿತು. ಮೊದಲು ಇಂತಹ ಅಡೆತಡೆಗಳಿಂದಾಗಿ ಯೋಜನೆಗಳು ಬಾಕಿಯಾಗುತ್ತಿದ್ದವು.

ಸ್ನೇಹಿತರೇ,

ಸರಕು ಸಾಗಾಣಿಕೆಗಾಗಿಯೇ ಕಾರಿಡಾರ್ ಯೋಜನೆ ನಮ್ಮ ದೇಶದ ಕೆಲಸದ ಸಂಸ್ಕೃತಿಗೆ ಒಂದು ಉದಾಹರಣೆ. ಕೆಲವು ದಿನಗಳ ಹಿಂದೆ ಪೂರ್ವದ ಮತ್ತು ಪಶ್ಚಿಮದ ಬೃಹತ್ ವಲಯಗಳ ಸರಕುಗಳಿಗಾಗಿಯೇ ಇರುವ ಕಾರಿಡಾರುಗಳನ್ನು ಉದ್ಘಾಟಿಸುವ ಅವಕಾಶ ನನಗೆ ದೊರಕಿತ್ತು. ಈ ಯೋಜನೆ ರಾಷ್ಟ್ರಕ್ಕೆ ಬಹಳ ಅವಶ್ಯವಾಗಿತ್ತು, ಮತ್ತು ಅದು 2006 ರಿಂದ 2014ರವರೆಗೆ ಎಂಟು ವರ್ಷಗಳ ಕಾಲ ಕಾಗದ ಪತ್ರಗಳಲ್ಲಿಯೇ ಬಾಕಿಯಾಗಿ ಉಳಿದಿತ್ತು. 2014ರವರೆಗೆ ಒಂದು ಕಿಲೋಮೀಟರ್ ಹಳಿ ಕೂಡಾ ಹಾಕಿರಲಿಲ್ಲ. ಈಗ ಇನ್ನು ಕೆಲವು ತಿಂಗಳಲ್ಲಿ , ಒಟ್ಟು 1100 ಕಿಲೋಮೀಟರ್ ರೈಲ್ವೇ ಮಾರ್ಗ ಪೂರ್ಣಗೊಳ್ಳಲಿದೆ.

ಸ್ನೇಹಿತರೇ,

ದೇಶದಲ್ಲಿ ರೈಲ್ವೇ ಜಾಲದ ಆಧುನೀಕರಣದೊಂದಿಗೆ ಇಂದು ಇದುವರೆಗೆ ರೈಲ್ವೇ ಸಂಪರ್ಕ ಹೊಂದಿರದ ದೇಶದ ಭಾಗಗಳು ರೈಲ್ವೇ ಸಂಪರ್ಕದೊಂದಿಗೆ ಬೆಸೆಯಲ್ಪಡುತ್ತಿವೆ. ಇಂದು ಹಳೆಯ ರೈಲು ಮಾರ್ಗಗಳನ್ನು ಅಗಲಗೊಳಿಸಲಾಗುತ್ತಿದೆ ಮತ್ತು ವಿಧ್ಯುದ್ದೀಕರಿಸಲಾಗುತ್ತಿದೆ. ಹಿಂದೆಂದೂ ಇಲ್ಲದ ವೇಗದಲ್ಲಿ ಈ ಕೆಲಸ ಮಾಡಲಾಗುತ್ತಿದೆ. ಮತ್ತು ರೈಲ್ವೇ ಮಾರ್ಗಗಳು ಹೆಚ್ಚಿನ ವೇಗದ ರೈಲುಗಳ ಸಂಚಾರಕ್ಕೆ ಅನುವಾಗುತ್ತಿವೆ. ಇದರಿಂದಾಗಿ ಇಂದು ದೇಶದಲ್ಲಿ ಸೆಮಿ ಹೈ ಸ್ಪೀಡ್ ರೈಲುಗಳನ್ನು ಓಡಿಸಲು ಸಾಧ್ಯವಾಗುತ್ತಿದೆ. ಮತ್ತು ನಾವು ಹೈಸ್ಪೀಡ್ ಟ್ರ್ಯಾಕ್ ಮತ್ತು ತಂತ್ರಜ್ಞಾನದತ್ತ ದಾಪುಗಾಲಿಡುತ್ತಿದ್ದೇವೆ. ಈ ಕಾರ್ಯಕ್ಕೆ ಬಜೆಟನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ. ಜೊತೆಗೆ ರೈಲ್ವೇಯು ಪರಿಸರ ಸ್ನೇಹಿಯಾಗಿರುವಂತೆಯೂ ನೋಡಿಕೊಳ್ಳಲಾಗುತ್ತಿದೆ. ಕೇವಾಡಿಯಾ ರೈಲು ನಿಲ್ದಾಣವು ಆರಂಭದಿಂದಲೂ ಹಸಿರು ಪ್ರಮಾಣ ಪತ್ರ ಪಡೆದಿರುವ ಭಾರತದ ಮೊದಲ ರೈಲ್ವೇ ನಿಲ್ದಾಣವಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ರೈಲ್ವೇಯ ತ್ವರಿತ ಆಧುನೀಕರಣಕ್ಕೆ ಮುಖ್ಯ ಕಾರಣಗಳಲ್ಲಿ ಒಂದೆಂದರೆ ರೈಲ್ವೇ ತಯಾರಿಕೆ ಮತ್ತು ರೈಲ್ವೇ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯತ್ತ ನಮ್ಮ ಆದ್ಯ ಗಮನ ಕೇಂದ್ರೀಕರಿಸಿರುವುದು. ಈ ನಿಟ್ಟಿನಲ್ಲಿ ಕೆಲವು  ವರ್ಷಗಳಿಂದ ಮಾಡಿಕೊಂಡು ಬಂದಿರುವ ಕೆಲಸ ಈಗ ನಮಗೆ ಗೋಚರವಾಗುತ್ತಿದೆ. ಕಲ್ಪಿಸಿಕೊಳ್ಳಿ,  ನಾವು ಭಾರತದಲ್ಲಿ ಹೆಚ್ಚು ಅಶ್ವ ಶಕ್ತಿಯ ಇಲೆಕ್ಟ್ರಿಕ್ ಲೊಕೋಮೋಟಿವ್ ಗಳನ್ನು ತಯಾರಿಸದೇ ಇರುತ್ತಿದ್ದರೆ ಭಾರತದಲ್ಲಿ ವಿಶ್ವದ ಮೊದಲ ಡಬಲ್ ಸ್ಟೇಕ್ ಕಂಟೈನರ್ ರೈಲು ಓಡಲು ಸಾಧ್ಯವಿತ್ತೇ?. ಇಂದು ಭಾರತದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ರೈಲುಗಳು ಭಾರತೀಯ ರೈಲ್ವೇಯ ಭಾಗವಾಗಿವೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದು ನಾವು ಭಾರತೀಯ ರೈಲ್ವೇಯ ಪರಿವರ್ತನೆಯತ್ತ ಹೆಜ್ಜೆ ಹಾಕುತ್ತಿರುವಾಗ, ಅತ್ಯಂತ ಕೌಶಲ್ಯಯುಕ್ತವಾದ ಮಾನವ ಸಂಪನ್ಮೂಲ ಮತ್ತು ವೃತ್ತಿಪರರು ಕೂಡಾ ಬಹಳ ಮುಖ್ಯ. ಈ ಕಾರಣದಿಂದ ವಡೋದರಾದಲ್ಲಿ ಭಾರತದ ಮೊದಲ ಡೀಮ್ಡ್ ರೈಲ್ವೇ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ರೈಲ್ವೇಗೆ ಇಂತಹ ಉನ್ನತ ಸಂಸ್ಥೆ ಕಟ್ಟಿದ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ. ರೈಲ್ವೇ ಸಾರಿಗೆ, ಬಹು ಶಿಸ್ತೀಯ ಸಂಶೋಧನೆ, ಮತ್ತು ತರಬೇತಿ ಸಹಿತ ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳನ್ನು  ಇಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. 20 ರಾಜ್ಯಗಳ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳು ಭಾರತೀಯ ರೈಲ್ವೇಯ ಇಂದಿನ ಮತ್ತು ಮುಂದಿನ ಭವಿಷ್ಯವನ್ನು ಸುಧಾರಿಸಲು ಇಲ್ಲಿ ತರಬೇತಿಗೊಳ್ಳುತ್ತಿದ್ದಾರೆ. ಇಲ್ಲಿಯ ಅನ್ವೇಷಣೆಗಳು ಮತ್ತು ಸಂಶೋಧನೆಗಳು ಭಾರತೀಯ ರೈಲ್ವೇಯ ಆಧುನೀಕರಣಕ್ಕೆ ಸಹಾಯ ಮಾಡಲಿವೆ. ದೇಶದ ಅಭಿವೃದ್ಧಿಯ ಪಥಕ್ಕೆ ವೇಗ ದೊರಕಿಸಿಕೊಡಲು ಭಾರತೀಯ ರೈಲ್ವೇ ಸಹಾಯ ಮಾಡುತ್ತದೆ ಎಂಬ ಆಶಯದೊಂದಿಗೆ, ನಾನು ಗುಜರಾತ್ ಸಹಿತ ಇಡೀ ದೇಶವನ್ನು ಈ ಹೊಸ ರೈಲ್ವೇ ಸೌಕರ್ಯಗಳಿಗಾಗಿ ಅಭಿನಂದಿಸುತ್ತೇನೆ. ಈ ಏಕತಾ ಪ್ರತಿಮೆಯ ಪುಣ್ಯ-ಪವಿತ್ರ ಸ್ಥಳಕ್ಕೆ ವಿವಿಧ ಭಾಷೆಗಳನ್ನಾಡುವ ಜನರು ಭೇಟಿ ನೀಡಿದಾಗ, ಭಾರತದ ಮೂಲೆ ಮೂಲೆಗಳಿಂದ ವಿವಿಧ ಉಡುಪುಗಳನ್ನು ಧರಿಸಿದ ಜನರು ಇಲ್ಲಿ ಬಂದಾಗ ದೇಶದ ಏಕತೆಯು ಮಿನಿ ಭಾರತದ ರೂಪದಲ್ಲಿ ಇಲ್ಲಿ ಕಾಣ ಸಿಗಲಿದೆ. ಇದು ಸರ್ದಾರ್ ಸಾಹೇಬ್ ಅವರು ದರ್ಶಿಸಿದ “ಏಕ್ ಭಾರತ್, ಶ್ರೇಷ್ಟ ಭಾರತ್” ಆಗಿ ನಮಗೆ ಕಾಣಲಿದೆ. ಇಂದು ಕೇವಾಡಿಯಾಕ್ಕೆ ಬಹಳ ವಿಶೇಷ ದಿನ. ದೇಶದ ಏಕತೆ ಮತ್ತು ಸಮಗ್ರತೆಗೆ ನಿರಂತರವಾಗಿ ನಡೆಸಲಾಗುತ್ತಿರುವ ಪ್ರಯತ್ನಗಳ ಹೊಸ ಅಧ್ಯಾಯ ಇಲ್ಲಿ ಅನಾವರಣವಾಗಿದೆ. ನಾನು ಮತ್ತೊಮ್ಮೆ ಪ್ರತಿಯೊಬ್ಬರನ್ನು ಅಭಿನಂದಿಸುತ್ತೇನೆ. 

ಬಹಳ ಬಹಳ ಧನ್ಯವಾದಗಳು!

***(Release ID: 1690016) Visitor Counter : 43