ಪ್ರಧಾನ ಮಂತ್ರಿಯವರ ಕಛೇರಿ

ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಕೊಳವೆ ಮಾರ್ಗ ಲೋಕಾರ್ಪಣೆ: ಪ್ರಧಾನಮಂತ್ರಿ ಭಾಷಣ

Posted On: 05 JAN 2021 2:45PM by PIB Bengaluru

ನಮಸ್ಕಾರ!

ಕೇರಳದ ರಾಜ್ಯಪಾಲರಾದ ಅರೀಫ್ ಮಹಮ್ಮದ್ ಖಾನ್ ಜೀ, ಕರ್ನಾಟಕ ರಾಜ್ಯಪಾಲರಾದ ವಜುಭಾಯಿ ವಾಲಾ ಜೀ, ಕೇರಳ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ ಜೀ, ಕರ್ನಾಟಕ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾಗಿರುವ ಶ್ರೀ ಧರ್ಮೇಂದ್ರ ಪ್ರಧಾನ್ ಜೀ, ಪ್ರಹ್ಲಾದ್ ಜೋಶೀ ಜೀ, ವಿ. ಮುರಳೀಧರನ್ ಜೀ, ಸಂಸತ್ ಸದಸ್ಯರೇ, ಶಾಸಕರೇ, ಸಹೋದರರೇ ಮತು ಸಹೋದರಿಯರೇ,

ಕೊಚ್ಚಿ- ಮಂಗಳೂರು ನಡುವಣ 450 ಕಿಲೋ ಮೀಟರ್ ಉದ್ದದ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸುವುದು ಒಂದು ಗೌರವ. ಇದು ಭಾರತಕ್ಕೆ, ಅದರಲ್ಲೂ ವಿಶೇಷವಾಗಿ ಕೇರಳ ಮತ್ತು ಕರ್ನಾಟಕದ ಜನತೆಗೆ ಒಂದು ಮಹತ್ವದಪ್ರಮುಖ ದಿನ. ಎರಡು ರಾಜ್ಯಗಳು ನೈಸರ್ಗಿಕ ಅನಿಲ ಕೊಳವೆ ಮಾರ್ಗದಿಂದ ಜೋಡಿಸಲ್ಪಟ್ಟಿವೆ. ರಾಜ್ಯಗಳ ಜನತೆಯನ್ನು ನಾನು ಅಭಿನಂದಿಸುತ್ತೇನೆ. ಸ್ವಚ್ಛ ಇಂಧನ ಮೂಲಸೌಕರ್ಯವನ್ನು ಒದಗಿಸಲು ಕ್ರಮಗಳನ್ನು ಕೈಗೊಂಡ ಎಲ್ಲಾ ಭಾಗೀದಾರರಿಗೆ ಅಭಿನಂದನೆಗಳು. ಕೊಳವೆ ಮಾರ್ಗ ಎರಡು ರಾಜ್ಯಗಳ ಆರ್ಥಿಕ ಬೆಳವಣಿಗೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ.

ಸ್ನೇಹಿತರೇ,

ಕೊಚ್ಚಿ-ಮಂಗಳೂರು ಕೊಳವೆ ಮಾರ್ಗ ಎಲ್ಲರೂ ಜೊತೆಗೂಡಿ ಅಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡಿದರೆ ಗುರಿ ಸಾಧನೆ ಅಸಾಧ್ಯವಲ್ಲ ಎಂಬುದಕ್ಕೆ ಒಂದು ದೊಡ್ಡ ಉದಾಹರಣೆ. ಯೋಜನೆಯಲ್ಲಿ ತೊಡಗಿಕೊಂಡಿರುವ ಜನರಿಗೆ ಇಂಜಿನಿಯರಿಂಗ್ ಭಾಗದಲ್ಲಿ ಇದನ್ನು ಪೂರ್ಣಗೊಳಿಸುವುದು ಎಷ್ಟು ಕಷ್ಟ ಎಂಬುದು ಗೊತ್ತಿತ್ತು. ಯೋಜನೆಯಲ್ಲಿ ಇತರ ಕಷ್ಟಗಳೂ ಇದ್ದವು. ಆದರೆ ಕೊಳವೆ ಮಾರ್ಗವನ್ನು ನಮ್ಮ ಕಾರ್ಮಿಕರು, ಇಂಜಿನಿಯರುಗಳು, ರೈತರು ಮತ್ತು ರಾಜ್ಯ ಸರಕಾರಗಳ ಸಹಕಾರದಿಂದ ಪೂರ್ಣಗೊಳಿಸಲಾಗಿದೆ. ಇದು ಬರೇ ಕೊಳವೆ ಮಾರ್ಗ ಆಗಿರಬಹುದು, ಆದರೆ ಇದು ಉಭಯ ರಾಜ್ಯಗಳ ಅಭಿವೃದ್ಧಿಗೆ ವೇಗ ದೊರಕಿಸಿಕೊಡುವಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸಲಿದೆ. ದೇಶವು ಇಂದು ಅನಿಲ ಆಧಾರಿತ ಆರ್ಥಿಕತೆಗೆ ಯಾಕಿಷ್ಟು ಒತ್ತನ್ನು, ಆದ್ಯತೆಯನ್ನು ಕೊಡುತ್ತಿದೆ?.ಒಂದು ದೇಶ ಒಂದು ಅನಿಲ ಗ್ರಿಡ್ ಗೆ ಸಂಬಂಧಿಸಿದ ಕೆಲಸ ಯಾಕಿಷ್ಟು ತ್ವರಿತಗತಿಯಿಂದ ಸಾಗುತ್ತಿದೆ?. ಸ್ವಾವಲಂಬಿ ಭಾರತಕ್ಕೆ ಅನಿಲ ಆಧಾರಿತ ಆರ್ಥಿಕತೆಯ ಕ್ಷಿಪ್ರ ವಿಸ್ತರಣೆ ಯಾಕೆ ಅವಶ್ಯ?. ಒಂದು ಕೊಳವೆ ಮಾರ್ಗದ ಪ್ರಯೋಜನಗಳು ಇವನ್ನು ಸ್ಪಷ್ಟಪಡಿಸಬಲ್ಲವು.

ಮೊದಲನೆಯದಾಗಿ, ಕೊಳವೆ ಮಾರ್ಗವು ಉಭಯ ರಾಜ್ಯಗಳ ಮಿಲಿಯಾಂತರ ಜನತೆಯ ಜೀವನಕ್ಕೆ ಇನ್ನಷ್ಟು ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಬಲ್ಲದು. ಎರಡನೆಯದಾಗಿ ಕೊಳವೆ ಮಾರ್ಗ ಉಭಯ ರಾಜ್ಯಗಳ ಬಡವರ, ಮಧ್ಯಮ ವರ್ಗದವರ ಮತ್ತು ಉದ್ಯಮಿಗಳ ಖರ್ಚನ್ನು ಕಡಿಮೆ ಮಾಡಬಲ್ಲದು. ಮೂರನೇಯದಾಗಿ, ಕೊಳವೆ ಮಾರ್ಗವು ಹಲವು ನಗರಗಳಲ್ಲಿ ನಗರ ಅನಿಲ ವಿತರಣಾ ವ್ಯವಸ್ಥೆಯ ಮಾಧ್ಯಮವಾಗಲಿದೆ. ನಾಲ್ಕನೇಯದಾಗಿ ಹಲವಾರು ನಗರಗಳಲ್ಲಿ ಸಿ.ಎನ್.ಜಿ. ಆಧಾರಿತ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಗೆ ಕೊಳವೆ ಮಾರ್ಗವು ಆಧಾರವಾಗಲಿದೆ. ಐದನೇಯದಾಗಿ ಕೊಳವೆ ಮಾರ್ಗ ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆಗೆ ಇಂಧನ ಪೂರೈಕೆ ಮಾಡಲಿದೆ. ಮತ್ತು ಮೂಲಕ ಕಡಿಮೆ ವೆಚ್ಚದಲ್ಲಿ ಗೊಬ್ಬರ ತಯಾರಿಸಿ ರೈತರಿಗೆ ಸಹಾಯ ಮಾಡಲಿದೆ. ಆರನೇಯದಾಗಿ, ಕೊಳವೆ ಮಾರ್ಗ ಮಂಗಳೂರು ತೈಲ ಶುದ್ದೀಕರಣಾಗಾರ ಮತ್ತು ಪೆಟ್ರೋಕೆಮಿಕಲ್ಸ್ ಗೆ ಸ್ವಚ್ಛ ಇಂಧನ ಒದಗಿಸಲಿದೆ. ಏಳನೇಯದಾಗಿ ಕೊಳವೆ ಮಾರ್ಗವು ಉಭಯ ರಾಜ್ಯಗಳಲ್ಲಿ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಲಿದೆ. ಎಂಟನೆಯದಾಗಿ ಮಾಲಿನ್ಯ ಕಡಿಮೆಯಾಗುವುದರಿಂದ ಪರಿಸರದ ಮೇಲೆ ನೇರ ಪರಿಣಾಮವುಂಟಾಗಲಿದೆ. ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಕಡಿಮೆಯಾಗುತ್ತದೆ, ಇದು ಮಿಲಿಯಾಂತರ ಗಿಡಗಳನ್ನು ನೆಡುವುದಕ್ಕೆ ಸಮವಾಗಿರುತ್ತದೆ.

ಸ್ನೇಹಿತರೇ,

ಒಂಭತ್ತನೆ ಪ್ರಯೋಜನ ಎಂದರೆ ಉತ್ತಮ ಪರಿಸರ. ಇದರಿಂದ ಜನರ ಆರೋಗ್ಯ ಸುಧಾರಿಸುತ್ತದೆ, ರೋಗಗಳ ಚಿಕಿತ್ಸೆಗೆ ಅವರ ಖರ್ಚು ಕಡಿಮೆಯಾಗುತ್ತದೆ. ಹತ್ತನೇಯದ್ದು, ಮಾಲಿನ್ಯ ಕಡಿಮೆ ಇದ್ದಾಗ, ವಾಯು ಕೂಡಾ ಸ್ವಚ್ಛವಾಗಿರುತ್ತದೆ. ನಗರಗಳಲ್ಲಿ ಅನಿಲ ಆಧಾರಿತ ವ್ಯವಸ್ಥೆಗಳಿದ್ದರೆ ಹೆಚ್ಚು ಪ್ರವಾಸಿಗರು ಬರುತ್ತಾರೆ ಮತ್ತು ಪ್ರವಾಸೋದ್ಯಮ ವಲಯಕ್ಕೆ ಲಾಭವಾಗುತ್ತದೆ. ಸ್ನೇಹಿತರೇ ಅಲ್ಲಿ ಕೊಳವೆ ಮಾರ್ಗದಿಂದ  ಎನ್ನೂ ಎರಡು ಪ್ರಮುಖ ಲಾಭಗಳಿವೆ, ಅವುಗಳನ್ನೂ ಚರ್ಚಿಸಬೇಕಾದ ಅಗತ್ಯವಿದೆ. ಕೊಳವೆ ಮಾರ್ಗದ ನಿರ್ಮಾಣದ ವೇಳೆ 1.2 ಮಿಲಿಯನ್ ಮಾನವ ದಿನಗಳ ಉದ್ಯೋಗಾವಕಾಶ ಸೃಷ್ಟಿಯಾಗಿದೆ. ಇದರ ಕಾರ್ಯಾಚರಣೆಯ ಬಳಿಕ ಕೇರಳ ಮತ್ತು ಕರ್ನಾಟಕಗಳಲ್ಲಿ ಉದ್ಯೋಗ ಮತ್ತು ಸ್ವ ಉದ್ಯೋಗದ ಹೊಸ ಪರಿಸರ ವ್ಯವಸ್ಥೆ ಬಹಳ ತ್ವರಿತವಾಗಿ ಅಭಿವೃದ್ಧಿಗೊಳ್ಳಲಿದೆ. ಅದು ರಸಗೊಬ್ಬರವಾಗಿರಲಿ, ಪೆಟ್ರೋಕೆಮಿಕಲ್ ಅಥವಾ ಇಂಧನ ಕೈಗಾರಿಕೆಯಾಗಿರಲಿ, ಪ್ರತೀ ಉದ್ಯಮವೂ ಇದರಿಂದ ಲಾಭ ಪಡೆಯಲಿದೆ ಮತ್ತು ಉದ್ಯೋಗಾವಕಾಶಗಳನ್ನು ನಿರ್ಮಾಣ ಮಾಡಲಿದೆ.

ಸ್ನೇಹಿತರೇ,

ಕೊಳವೆ ಮಾರ್ಗದಿಂದ ಇಡೀ ದೇಶಕ್ಕೆ ಇನ್ನೊಂದು ಪ್ರಮುಖ ಲಾಭವಾಗಲಿದೆ. ಕೊಳವೆ ಮಾರ್ಗವು ತನ್ನ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದಾಗ, ದೇಶವು ಸಾವಿರಾರು ಕೋಟಿ ರೂಪಾಯಿಗಳ ವಿದೇಶಿ ವಿನಿಮಯವನ್ನು ಉಳಿಸಲು ಸಮರ್ಥವಾಗಲಿದೆ. ಪ್ರಯತ್ನಗಳು ಭಾರತವು ಬಹಳ ಗಂಭೀರವಾಗಿ ತೊಡಗಿಕೊಂಡಿರುವ ಸಿ..ಪಿ-21 ಗುರಿಯನ್ನು ತಲುಪಲು ಸಹಾಯ ಮಾಡಲಿವೆ.

ಸ್ನೇಹಿತರೇ,

ಜಗತ್ತಿನಾದ್ಯಂತದಿಂದ ತಜ್ಞರು ಹೇಳುತ್ತಿದ್ದಾರೆ 21 ನೇ ಶತಮಾನದಲ್ಲಿ ಯಾವ ದೇಶವು ಸಂಪರ್ಕ ಮತ್ತು ಸ್ವಚ್ಛ ಇಂಧನಕ್ಕೆ ಹೆಚ್ಚು ಆದ್ಯತೆ ಕೊಡುತ್ತದೆಯೋ ಅದು ಹೊಸ ಎತ್ತರಗಳನ್ನು ಏರುತ್ತದೆ ಎಂಬುದಾಗಿ. ಇಂದು ನಿಮ್ಮೆದುರು ಏನನ್ನು ಕಾಣುತ್ತಿದ್ದೀರೋ, ಅದು ಹೆದ್ದಾರಿ ಸಂಪರ್ಕ, ರೈಲ್ವೇ ಸಂಪರ್ಕ , ಮೆಟ್ರೋ ಸಂಪರ್ಕ, ವಾಯು ಸಂಪರ್ಕ, ಜಲ ಸಂಪರ್ಕ, ಡಿಜಿಟಲ್ ಸಂಪರ್ಕ ಅಥವಾ ಅನಿಲ ಸಂಪರ್ಕ ಇರಲಿ , ಎಲ್ಲಾ ಕ್ಷೇತ್ರಗಳಲ್ಲಿ ಭಾರತದಲ್ಲಿ ಸಾಗುತ್ತಿರುವ ಕೆಲಸ ಹಿಂದೆಂದೂ ಆಗಿರಲಿಲ್ಲ. ಭಾರತೀಯರಾಗಿ, ಇದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ-ನಾವೆಲ್ಲರೂ ಇದನ್ನು ನಮ್ಮ ಕಣ್ಣುಗಳಿಂದ ನೋಡುತ್ತಿದ್ದೇವೆ. ನಾವೆಲ್ಲರೂ ಹೊಸ ಅಭಿವೃದ್ಧಿ ಆಂದೋಲನದ ಭಾಗವಾಗಿದ್ದೇವೆ.

ಸಹೋದರರೇ ಮತ್ತು ಸಹೋದರಿಯರೇ,

ಕಳೆದ ಶತಮಾನದಲ್ಲಿ, ಭಾರತ ಪ್ರಗತಿಯತ್ತ ಸಾಗಿರುವ ವೇಗಕ್ಕೆ  ಅದರದ್ದೇ ಕಾರಣಗಳಿವೆ. ನಾನು ಬಗ್ಗೆ ವಿವರವಾಗಿ ಹೇಳಲು ಹೋಗುವುದಿಲ್ಲ. ಆದರೆ ಒಂದು ಸಂಗತಿಯಂತೂ ಖಚಿತ, ಇಂದಿನ ಯುವ ಭಾರತ, ಸಹನೆರಹಿತ ಭಾರತವಿಶ್ವವನ್ನು ಹಿಂದಿಕ್ಕಿ ಹೋಗಲು ಯತ್ನಿಸುತ್ತಿದೆ, ಅದು ಇನ್ನು ನಿಧಾನಗತಿಯನ್ನು ಸಹಿಸುವುದಿಲ್ಲ. ಆದುದರಿಂದ, ವರ್ಷಗಳಿಂದ ರಾಷ್ಟ್ರವು ವೇಗವನ್ನು, ಪ್ರಮಾಣವನ್ನು ಮತ್ತು ವ್ಯಾಪ್ತಿಯನ್ನು ಹೆಚ್ಚಿಸುತ್ತ ಬಂದಿದೆ.

ಸ್ನೇಹಿತರೇ,

ಭಾರತದ ಹೊಸ ತಲೆಮಾರಿನ ಉತ್ತಮ ಸಂಗತಿ ಎಂದರೆ, ಅದು ವಸ್ತುಸ್ಥಿತಿಯನ್ನಾಧರಿಸಿ ಸಂಗತಿಗಳ ಮೌಲ್ಯಮಾಪನ ಮಾಡುತ್ತದೆ. ಮತ್ತು ಅದು ಅದರ ಯಶಸ್ಸು ಹಾಗು ವೈಫಲ್ಯಗಳನ್ನು ತುಲನಾತ್ಮಕವಾಗಿ ವಿಶ್ಲೇಷಣೆ ಮಾಡುತ್ತದೆ. ಅದು ತರ್ಕ ಮತ್ತು ವಸ್ತುಸ್ಥಿತಿಯನ್ನು ಆಧರಿಸಿ ಪ್ರತಿಯೊಂದು ಸಂಗತಿಯನ್ನೂ ಅಂಗೀಕರಿಸುತ್ತದೆ. ಭಾರತದ ಅನಿಲ ಆಧಾರಿತ ಆರ್ಥಿಕತೆಗೆ ಸಂಬಂಧಿಸಿ ಕೈಗೊಳ್ಳಲಾಗಿರುವ ಕೆಲಸಗಳಿಗೆ ಹಲವು ವಾದಗಳು ಮತ್ತು ವಸ್ತುಸ್ಥಿತಿಗಳು ಬಹಳ ಮುಖ್ಯ.

ಸ್ನೇಹಿತರೇ,

ನಮ್ಮ ದೇಶದ ಮೊದಲ ಆಂತಾರಾಜ್ಯ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು 1987ರಲ್ಲಿ ಆರಂಭಿಸಲಾಯಿತು. ಬಳಿಕ ಭಾರತವು 15,000 ಕಿಲೋ ಮೀಟರ್ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು 2014 ವೇಳೆಗೆ ನಿರ್ಮಾಣ ಮಾಡಿದೆ. ಅಂದರೆ 27 ವರ್ಷಗಳಲ್ಲಿ. ಇಂದು ದೇಶಾದ್ಯಂತ ಪೂರ್ವ-ಪಶ್ಚಿಮ-ಉತ್ತರ-ದಕ್ಷಿಣ ಭಾಗಗಳಲ್ಲಿ 16,000 ಕಿಲೋ ಮೀಟರ್ ಹೊಸ ಅನಿಲ ಕೊಳವೆ ಮಾರ್ಗವನ್ನು ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ 4-6 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. 27 ವರ್ಷಗಳಲ್ಲಿ ಆಗದೇ ಇರುವುದಕ್ಕಿಂತ ಹೆಚ್ಚು ಕೆಲಸವನ್ನು ಮಾಡಲು ನಾವು ಉದ್ದೇಶಿಸಿದ್ದೇವೆ ಎಂದರೆ ನೀವು ಕಲ್ಪಿಸಿಕೊಳ್ಳಿ ಮತ್ತು ಅದೂ ಅದರ ಅರ್ಧದಷ್ಟು ಕಾಲಾವಧಿಯಲ್ಲಿ.

ಸ್ನೇಹಿತರೇ,

ಅದೇ ರೀತಿ ಅಲ್ಲಿ ಸಿ.ಎನ್.ಜಿ. ಸ್ಟೇಶನುಗಳ ಉದಾಹರಣೆ ಇದೆ. ನಮ್ಮ ದೇಶದಲ್ಲಿ ಮೊದಲ ಸಿ.ಎನ್.ಜಿ. ಸ್ಟೇಶನ್ ಆರಂಭವಾದುದು 1992ರಲ್ಲಿ. ಮುಂದಿನ 22 ವರ್ಷಗಳಲ್ಲಿ ಅಂದರೆ 2014 ರವರೆಗೆ ನಮ್ಮ ದೇಶದಲ್ಲಿದ್ದ ಸಿ.ಎನ್.ಜಿ.ಸ್ಟೇಶನುಗಳ ಸಂಖ್ಯೆ 900 ನ್ನು ದಾಟಿರಲಿಲ್ಲ. ಕಳೆದ ಆರು ವರ್ಷಗಳಲ್ಲಿ ಸುಮಾರು 1500 ಹೊಸ ಸಿ.ಎನ್.ಜಿ.ಸ್ಟೇಷನುಗಳನ್ನು ಸ್ಥಾಪಿಸಲಾಗಿದೆ. ಈಗ, ಸರಕಾರವು ದೇಶಾದ್ಯಂತ ಸಿ.ಎನ್.ಜಿ. ಸ್ಟೇಷನ್ ಗಳ ಸಂಖ್ಯೆಯನ್ನು 10,000 ಕ್ಕೇರಿಸುವ ಗುರಿ ನಿಗದಿ ಮಾಡಿ ಕಾರ್ಯಪ್ರವೃತ್ತವಾಗಿದೆ. ಈಗ ಕಾರ್ಯಾರಂಭ ಮಾಡಿರುವ ಕೊಳವೆ ಮಾರ್ಗ ಕೇರಳ ಮತ್ತು ಕರ್ನಾಟಕದ ಹಲವು ನಗರಗಳಲ್ಲಿ 700 ಸಿ.ಎನ್.ಜಿ. ಸ್ಟೇಷನುಗಳನ್ನು ತೆರೆಯಲು ಸಹಾಯ ಮಾಡಲಿದೆ.

ಸ್ನೇಹಿತರೇ,

ಇನ್ನೊಂದು ಆಸಕ್ತಿಯ ಅಂಕಿ ಅಂಶವೆಂದರೆ ಪಿ.ಎನ್.ಜಿ. ಸಂಪರ್ಕಗಳದ್ದು, ಕೊಳವೆಯಲ್ಲಿ ಬರುವ ಅನಿಲವನ್ನು ಅಡುಗೆ ಮನೆಗಳಿಗೆ ಪೂರೈಸಲಾಗುತ್ತದೆ. 2014ರವರೆಗೆ ನಮ್ಮ ದೇಶದಲ್ಲಿ ಬರೇ 2.5 ಮಿಲಿಯನ್ ಪಿ.ಎನ್.ಜಿ. ಸಂಪರ್ಕಗಳಿದ್ದವು. ಇಂದು ದೇಶದಲ್ಲಿಯ 7.2 ಮಿಲಿಯನ್ ಮನೆಗಳಿಗೆ ಕೊಳವೆ ಮೂಲಕ ಅನಿಲ ಲಭ್ಯವಿದೆ. ಕೊಚ್ಚಿ-ಬೆಂಗಳೂರು ಕೊಳವೆ ಮಾರ್ಗದಿಂದ 2.1 ಮಿಲಿಯನ್ನಿಗೂ ಅಧಿಕ ಜನರು ಪಿ.ಎನ್.ಜಿ. ಸೌಲಭ್ಯವನ್ನು ಪಡೆಯಲು ಸಾಧ್ಯವಾಗಲಿದೆ. ಸಹೋದರರೇ ಮತ್ತು ಸಹೋದರಿಯರೇ ಭಾರತದಲ್ಲಿ ಬಹಳ ಧೀರ್ಘಾವಧಿಯವರೆಗೆ ಎಲ್.ಪಿ.ಜಿ. ವ್ಯಾಪ್ತಿ ಎಷ್ಟು ಇತ್ತು ಎಂಬುದು ನಮಗೆಲ್ಲರಿಗೂ ತಿಳಿದಿದೆ. ದೇಶದಲ್ಲಿ 2014ರವರೆಗೆ 14 ಕೋಟಿ ಎಲ್.ಪಿ.ಜಿ. ಸಂಪರ್ಕಗಳು ಇದ್ದವು. ಮತ್ತು ಕಳೆದ ಆರು ವರ್ಷಗಳಲ್ಲಿ ಅಷ್ಟೇ ಸಂಖ್ಯೆಯ ಹೊಸ ಸಂಪರ್ಕಗಳನ್ನು ಒದಗಿಸಲಾಗಿದೆ. ಉಜ್ವಲ ಯೋಜನಾದಂತಹ ಯೋಜನೆಗಳ ಮೂಲಕ ದೇಶದ 8 ಕೋಟಿಗೂ ಅಧಿಕ ಬಡ ಕುಟುಂಬಗಳು ಅಡುಗೆ ಅನಿಲವನ್ನು ಪಡೆಯುತ್ತಿವೆ. ಮತ್ತು ದೇಶಾದ್ಯಂತ ಎಲ್.ಪಿ.ಜಿ. ಮೂಲಸೌಕರ್ಯವನ್ನು ಬಲಪಡಿಸಲಾಗಿದೆ. ಸ್ನೇಹಿತರೇ, ಕೊರೊನಾ ಅವಧಿಯಲ್ಲಿ ದೇಶದಲ್ಲಿ ಅಡುಗೆ ಅನಿಲ ಕೊರತೆಯಾಗದಿರುವುದಕ್ಕೆ ಇದು ಮೂಲ ಕಾರಣ. ನಾವು 12 ಕೋಟಿ ಉಚಿತ ಸಿಲಿಂಡರುಗಳನ್ನು ಬಡವರಲ್ಲಿ ಬಡವರಿಗೆ ಕಠಿಣ ಸಮಯದಲ್ಲಿಯೂ ಒದಗಿಸಲು ಸಮರ್ಥರಾಗಿದ್ದೇವೆ.

ಸ್ನೇಹಿತರೇ,

ಸರಕಾರದ ತ್ವರಿತಗತಿಯ ಕ್ರಮಗಳು ಮತ್ತೊಂದು ರೀತಿಯ ಪರಿಣಾಮವನ್ನು ಬೀರಿವೆ.ಅವುಗಳ ಬಗ್ಗೆ  ಹೆಚ್ಚು ಚರ್ಚೆ ನಡೆಯುತ್ತಿಲ್ಲ. ನೆನಪಿಸಿಕೊಳ್ಳಿ, ಸೀಮೆ ಎಣ್ಣೆಗಾಗಿ ಅಲ್ಲಿ ಬಹಳ ದೊಡ್ಡ ಸರತಿ ಸಾಲುಗಳಿರುತ್ತಿದ್ದವು. ರಾಜ್ಯ ಸರಕಾರಗಳು ಸೀಮೆ ಎಣ್ಣೆಯ ಕೋಟಾವನ್ನು ಹೆಚ್ಚಿಸುವಂತೆ ಭಾರತ ಸರಕಾರಕ್ಕೆ ಪತ್ರ ಬರೆಯುತ್ತಿದ್ದವು. ಸೀಮೆ ಎಣ್ಣೆ ಪೂರೈಕೆಗೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸದಾ ಉದ್ವಿಗ್ನ ಸ್ಥಿತಿ ಇರುತ್ತಿತ್ತು. ಇಂದು ಅಡುಗೆ ಮನೆಗಳಿಗೆ ಅಡುಗೆ ಅನಿಲ ಸುಲಭದಲ್ಲಿ ಲಭ್ಯವಾಗುತ್ತಿರುವಾಗ, ಸೀಮೆ ಎಣ್ಣೆ ಕೊರತೆ ಕೂಡಾ ಇಳಿಮುಖವಾಗಿದೆ. ಇಂದು ದೇಶದ ಹಲವು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ತಮ್ಮನ್ನು ತಾವು ಸೀಮೆ ಎಣ್ಣೆ ಮುಕ್ತ ಎಂದು ಘೋಷಿಸಿಕೊಂಡಿವೆ.

ಸ್ನೇಹಿತರೇ,

ನಮ್ಮ ಸರಕಾರ ಇಂಧನ ಯೋಜನೆಗಳಿಗೆ ಸಂಬಂಧಿಸಿ ಸಮಗ್ರ ಧೋರಣೆಯಲ್ಲಿ ನಂಬಿಕೆ ಇರಿಸಿದೆ. ನಮ್ಮ ಇಂಧನ ಕಾರ್ಯಪಟ್ಟಿ ಎಲ್ಲವನ್ನೂ ಒಳಗೊಂಡಿರುವಂತಹದು. 2014 ರಿಂದ, ನಾವು ತೈಲ ಮತ್ತು ಅನಿಲ ವಲಯದಲ್ಲಿ ವಿವಿಧ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ಸುಧಾರಣೆಗಳಲ್ಲಿ ಶೋಧನೆ ಮತ್ತು ಉತ್ಪಾದನೆ, ನೈಸರ್ಗಿಕ ಅನಿಲ, ಮಾರುಕಟ್ಟೆ ಮತ್ತು ವಿತರಣೆಗಳು ಸೇರಿವೆ. ನಾವುಒಂದು ದೇಶ ಒಂದು ಅನಿಲ ಗ್ರಿಡ್ಸಾಧಿಸಲು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ನಾವು ಅನಿಲ ಆಧಾರಿತ ಆರ್ಥಿಕತೆಗೆ ವರ್ಗಾವಣೆಗೊಳ್ಳಲು ಇಚ್ಛಿಸುತ್ತೇವೆ. ನೈಸರ್ಗಿಕ ಅನಿಲ ಬಳಕೆ ಹಲವಾರು ಪರಿಸರ ಸಂಬಂಧಿ ಪ್ರಯೋಜನಗಳನ್ನು ಒಳಗೊಂಡಿದೆ. ಭಾರತದ ಇಂಧನ ಬಾಸ್ಕೆಟಿನಲ್ಲಿ ನೈಸರ್ಗಿಕ ಅನಿಲದ ಪಾಲನ್ನು 6 ಶೇಖಡಾದಿಂದ 15 ಶೇಖಡಾಕ್ಕೆ ಹೆಚ್ಚಿಸಲು ನೀತಿ ಉಪಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿದೆ. ದಶಕವೊಂದರಲ್ಲಿಯೇ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಹೂಡಿಕೆ ಮಾಡಲಾಗುತ್ತಿದೆ. ಗೈಲ್ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಕೊಳವೆ ಮಾರ್ಗದ ಲೋಕಾರ್ಪಣೆ ಒಂದು ದೇಶ ಒಂದು ಅನಿಲ ಗ್ರಿಡ್ ನಿಟ್ಟಿನಲ್ಲಿಯ ಯಾನದ ಒಂದು ಭಾಗ. ಉತ್ತಮ ಭವಿಷ್ಯಕ್ಕೆ ಸ್ವಚ್ಛ ಇಂಧನ ಬಹಳ ಮುಖ್ಯ. ಕೊಳವೆ ಮಾರ್ಗವು ಸ್ವಚ್ಛ ಇಂಧನ ಲಭ್ಯತೆಯನ್ನು ಸುಧಾರಿಸಲು ನೆರವಾಗಲಿದೆ. ನಮ್ಮ ಸರಕಾರ ಇತರ ವಲಯಗಳಲ್ಲಿಯೂ ಹಲವಾರು ಕ್ರಮಗಳನ್ನು ಅನುಷ್ಟಾನಿಸುತ್ತಿದೆ. ಉದಾಹರಣೆಗೆ ಸ್ವಚ್ಛ ಭಾರತ್ ಆಂದೋಲನ, ಎಲ್..ಡಿ. ಬಲ್ಬುಗಳ ಹೆಚ್ಚಳಕ್ಕೆ ಕ್ರಮ, ವಿದ್ಯುತ್ ಪೂರೈಕೆ ಗಳನ್ನು ನೋಡಿ.

ಸ್ನೇಹಿತರೇ,

ನಾವು ದೇಶವನ್ನು ಭವಿಷ್ಯದ ಆವಶ್ಯಕತೆ, ಭವಿಷ್ಯದ ಇಂಧನ ಆವಶ್ಯಕತೆಗಳಿಗೆ ಇಂದಿನಿಂದಲೇ ಸಿದ್ದವಾಗಿರುವಂತೆ ರೂಪಿಸುವ ಕೆಲಸದಲ್ಲಿ ನಿರತರಾಗಿದ್ದೇವೆ. ಆದುದರಿಂದ ಒಂದೆಡೆ ದೇಶವು ನೈಸರ್ಗಿಕ ಅನಿಲದ ಮೇಲೆ ಗಮನ ಕೇಂದ್ರೀಕರಿಸಿದೆ, ಇನ್ನೊಂದೆಡೆ ದೇಶವು ಇಂಧನ ಸಂಪನ್ಮೂಲಗಳನ್ನು ವೈವಿಧ್ಯಮಯಗೊಳಿಸುತ್ತಿದೆ. ಇತ್ತೀಚೆಗೆ ವಿಶ್ವದ ಅತ್ಯಂತ ದೊಡ್ಡ ಮರುನವೀಕೃತ ಇಂಧನ ಸ್ಥಾವರದ ಕೆಲಸ ಗುಜರಾತಿನಲ್ಲಿ ಆರಂಭವಾಗಿದೆ. ಅದೇ ರೀತಿ, ಇಂದು ದೇಶದಲ್ಲಿ ಜೈವಿಕ ಇಂಧನಗಳ ನಿಟ್ಟಿನಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಕೆಲಸ ಸಾಗಿದೆ. ಕಬ್ಬು ಅಥವಾ ಇತರ ಕೃಷಿ ಉತ್ಪನ್ನಗಳ ಮೂಲಕ ಎಥೆನಾಲ್ ಉತ್ಪಾದನೆಯನ್ನು ಗಂಭೀರವಾಗಿ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ಹತ್ತು ವರ್ಷಗಳಲ್ಲಿ , ಪೆಟ್ರೋಲಿನಲ್ಲಿ ಎಥೆನಾಲ್ ಮಿಶ್ರಣ 20 ಶೇಖಡಾದಷ್ಟಿರಬೇಕು ಎಂದು ಗುರಿ ನಿಗದಿ ಮಾಡಲಾಗಿದೆ. ಇದು ಮಾತ್ರವಲ್ಲ ವಿದ್ಯುತ್ ಕ್ಷೇತ್ರದಲ್ಲಿಯೂ , ಅದಕ್ಕೆ ಸಂಬಂಧಿಸಿದ ಮೂಲಸೌಕರ್ಯಕ್ಕೆ ಬಹಳ ಪ್ರೋತ್ಸಾಹ ನೀಡಲಾಗುತ್ತಿದೆ. ನಮ್ಮ ಸರಕಾರವು ಪ್ರತಿಯೊಬ್ಬ ದೇಶವಾಸಿಗೂ ಸಾಕಷ್ಟು ಪ್ರಮಾಣದಲ್ಲಿ , ಕಡಿಮೆ ದರದಲ್ಲಿ, ಮಾಲಿನ್ಯ ರಹಿತ ವಿದ್ಯುತ್ತನ್ನು ಒದಗಿಸಲು ಪೂರ್ಣ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ದೇಶದ ಸಮತೂಕದ ಮತ್ತು ತ್ವರಿತ ಗತಿಯ ಅಭಿವೃದ್ಧಿಯು ನಮ್ಮ ಕರಾವಳಿ ವಲಯದ ಅಭಿವೃದ್ಧಿಯಲ್ಲಿ ಪ್ರತಿಫಲನಗೊಂಡಿದೆ. ಕೇರಳ, ಕರ್ನಾಟಕ ಅಥವಾ ದಕ್ಷಿಣ ಭಾರತದಲ್ಲಿ  ಸಾಗರಾಭಿಮುಖವಾಗಿರುವ ಯಾವುದೇ ರಾಜ್ಯದಲ್ಲಿ, ನೀಲಿ ಆರ್ಥಿಕತೆಯನ್ನು ಅಭಿವೃದ್ಧಿ ಮಾಡಲು ಸಮಗ್ರ ಯೋಜನೆಯನ್ನು ರೂಪಿಸಲಾಗುತ್ತಿದೆ. ನೀಲಿ ಆರ್ಥಿಕತೆಯು ಸ್ವಾವಲಂಬಿ ಭಾರತದ ಪ್ರಮುಖ ದೊಡ್ಡ ಮೂಲವಾಗಿರಲಿದೆ. ನಮ್ಮ ಬಂದರುಗಳು ಮತ್ತು ಕರಾವಳಿ ರಸ್ತೆಗಳು ಇತರ ಸಂಪರ್ಕ ವ್ಯವಸ್ಥೆ ಜೊತೆ ಸಂಪರ್ಕಿಸಲ್ಪಡುತ್ತಿವೆ. ನಾವು ಬಹುಮಾದರಿ ಸಂಪರ್ಕ ವ್ಯವಸ್ಥೆಯತ್ತ ಗಮನ ಕೇಂದ್ರೀಕರಿಸಿದ್ದೇವೆ. ನಮ್ಮ ಕರಾವಳಿ ವಲಯವು ಜೀವಿಸಲು ಅನುಕೂಲಕರ ವಾತಾವರಣ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿ ಒಂದು ಮಾದರಿಯಾಗುತ್ತಿದೆ. ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣವಾಗಿಸುವ ನಿಟ್ಟಿನಲ್ಲಿಯೂ ಯೋಜನೆಗಳು ಜಾರಿಯಾಗಲಿವೆ.

ಸಹೋದರರೇ ಮತ್ತು ಸಹೋದರಿಯರೇ,

ಜನಸಂಖ್ಯೆಯಲ್ಲಿ ನಮ್ಮ ರೈತರು ಮತ್ತು ಮೀನುಗಾರರು ಬಹು ಸಂಖ್ಯೆಯಲ್ಲಿದ್ದಾರೆ. ಎಲ್ಲಾ ಸಹೋದ್ಯೋಗಿಗಳು ಸಾಗರ ಸಂಪತ್ತನ್ನು ಅವಲಂಬಿಸಿರುವುದು ಮಾತ್ರವಲ್ಲ, ಅದರ ಬಲು ದೊಡ್ಡ ರಕ್ಷಕರೂ ಆಗಿದ್ದಾರೆ. ಆದುದರಿಂದ ಇಡೀ ಕರಾವಳಿ ವಲಯದ ಪರಿಸರ ವ್ಯವಸ್ಥೆಯ ಭದ್ರತೆ ಮತ್ತು ಸಮೃದ್ಧಿ ಬಹಳ ಮುಖ್ಯ. ಕಳೆದ ಹಲವಾರು ವರ್ಷಗಳಿಂದ, ಹಲವಾರು ಅರ್ಥಪೂರ್ಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೀನುಗಾರರಿಗೆ ಆಳ ಸಮುದ್ರ ಮೀನುಗಾರಿಕೆಗೆ ಸಂಬಂಧಿಸಿದ ಸಹಾಯವಾಗಲೀ, ಅಥವಾ ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ರಚನೆಯಾಗಿರಲಿ ಅಥವಾ ಮೀನುಗಾರಿಕೆಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುವವರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಒದಗಿಸಲು ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವುದಿರಲಿ-ಇವೆಲ್ಲಾ ಮೀನುಗಾರರಿಗೆ ಸಹಾಯ ಮಾಡುವ ಕಾರ್ಯಕ್ರಮಗಳಾಗಿವೆ ಮತ್ತು ಅವುಗಳಿಂದ ಮೀನುಗಾರರಿಗೆ ನೆರವು ಲಭಿಸಿದೆ. ಕೆಲವು ತಿಂಗಳುಗಳ ಹಿಂದೆ ದೇಶದಲ್ಲಿ 20,000 ಕೋ.ರೂ.ಗಳ ಮತ್ಸ್ಯ ಸಂಪದ ಯೋಜನಾವನ್ನು ಆರಂಭಿಸಲಾಗಿದೆ. ಇದರಿಂದ ಕೇರಳ ಮತ್ತು ಕರ್ನಾಟಕದ ಲಕ್ಷಾಂತರ ಮೀನುಗಾರರಿಗೆ ನೇರವಾಗಿ ಲಾಭವಾಗಲಿದೆ. ಇಂದು, ನಾವು ಮೀನುಗಾರಿಕೆ ಸಂಬಂಧಿ ರಫ್ತು ನಿಟ್ಟಿನಲ್ಲಿ ಹಾಗು ಭಾರತವನ್ನು ಗುಣಮಟ್ಟದ ಸಂಸ್ಕರಿತ ಮತ್ಸ್ಯಖಾದ್ಯ ತಾಣವನ್ನಾಗಿಸುವ ನಿಟ್ಟಿನಲ್ಲಿ ತ್ವರಿತಗತಿಯಿಂದ ಮುನ್ನಡೆಯುತ್ತಿದ್ದೇವೆ. ಸಮುದ್ರ ಕಳೆಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಹೆಚ್ಚುತ್ತಿದೆ ಮತ್ತು ಅದನ್ನು ಪೂರೈಸುವಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸಬಲ್ಲದು. ಸಮುದ್ರ ಕಳೆ ಕೃಷಿಗೆ ರೈತರಿಗೆ ಹೆಚ್ಚು ಪ್ರೋತ್ಸಾಹಧನ ಸಿಕ್ಕಿದಂತೆ, ನಾವು ನಿಟ್ಟಿನಲ್ಲಿಯೂ ಬಹಳ ವೇಗವಾಗಿ ಮುನ್ನಡೆಯುತ್ತೇವೆ.

ನಾವು ಒಗ್ಗೂಡಿ ಕೆಲಸ ಮಾಡಿದರೆ, ಅರ್ಪಣಾ ಭಾವದಿಂದ ದುಡಿದರೆ, ಆಗ ಮಾತ್ರ ನಾವು ಪ್ರತಿಯೊಂದು ರಾಷ್ಟ್ರೀಯ ಗುರಿಯನ್ನು ತ್ವರಿತವಾಗಿ ಸಾಧಿಸಲು ಸಾಧ್ಯವಾಗಬಹುದು. ಮತ್ತೊಮ್ಮೆ ನಾನು ಕೇರಳದ ಮತ್ತು ಕರ್ನಾಟಕದ ಎಲ್ಲಾ ನಾಗರಿಕರಿಗೆ, ಕೊಚ್ಚಿ-ಮಂಗಳೂರು ಅನಿಲ ಕೊಳವೆ ಮಾರ್ಗದ ಕಾರ್ಯದಲ್ಲಿ ತೊಡಗಿಕೊಂಡ ಎಲ್ಲಾ ಗಣ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಧನ್ಯವಾದಗಳು!

***



(Release ID: 1686711) Visitor Counter : 195